Darshan Case: ಎಸಿಪಿ ಚಂದನ್‌ರಂತಹ ನಿಷ್ಠಾವಂತ ಅಧಿಕಾರಿಗಳ ಕೆಲಸಕ್ಕೆ ಬೆಲೆ ಇಲ್ಲವಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ರ ಫೋಟೊ ಮತ್ತು ವಿಡಿಯೋ ವೈರಲ್ ಆಗುತ್ತಿದ್ದು ಜೈಲು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಜೈಲಿನಲ್ಲಿದ್ದರೂ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಕಾಫಿ ಕುಡಿಯುತ್ತಾ ಸಿಗರೇಟ್ ಸೇದುತ್ತಿರುವ ಫೋಟೊ ಸದ್ಯ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಫೋಟೊ ವೈರಲ್ ಆದ ಬೆನ್ನಲ್ಲೇ ದರ್ಶನ್ ಜೈಲಿನಿಂದಲೇ ಆಪ್ತನ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ದೃಶ್ಯಗಳು ಕೂಡ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ದರ್ಶನ್ ಇರುವ ಸೆಲ್ ಐಷಾರಾಮಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸದ್ಯ ದರ್ಶನ್ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ದಕ್ಷ ಅಧಿಕಾರಿಗಳ ಶ್ರಮಕ್ಕೆ ಬೆಲೆ ಎಲ್ಲಿದೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ಪೊಲೀಸರಿಗು ಒಂದು ಕ್ಷಣ ಶಾಕ್ ಆಗಿತ್ತು. ಆದರೆ ಎಸಿಪಿ ಚಂದನ್‌ರಂತಹ ದಕ್ಷ ಅಧಿಕಾರಿಗಳು ಪ್ರಕರಣದ ಜವಾಬ್ದಾರಿ ವಹಿಸಿಕೊಂಡು, ಸಾಕ್ಷಿಗಳನ್ನು ಖಚಿತಪಡಿಸಿಕೊಂಡ ಬಳಿಕವೇ ದರ್ಶನ್‌ರನ್ನು ಮೈಸೂರಿನಲ್ಲಿ ಬಂಧಿಸಿದ್ದರು. ದರ್ಶನ್‌ರನ್ನು ಬಂಧಿಸದಂತೆ ತಡೆಯಲು ರಾಜಕೀಯ ಒತ್ತಡವಿದ್ದರೂ ಪೊಲೀಸರು ಮಾತ್ರ ಅದಕ್ಕೆ ಕೇರ್ ಮಾಡದೆ ಕರ್ತವ್ಯ ಪಾಲನೆ ಮಾಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಎಸಿಪಿ ಚಂದನ್ ವಿರುದ್ದ ದರ್ಶನ್ ಅಭಿಮಾನಿಗಳು ಸಿಟ್ಟಾದರೂ, ಪೊಲೀಸರು ಮಾತ್ರ ಅದಕ್ಕೆ ತಲೆ ಕೆಡಿಸಿಕೊಳ್ಳದೆ, ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಕೊಡಿಸಲು ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುವ ಹೊತ್ತಿನಲ್ಲೇ ಈ ಫೊಟೊ ಮತ್ತು ವಿಡಿಯೋ ವೈರಲ್ ಆಗಿದ್ದು, ಬಡವರಿಗೆ ನ್ಯಾಯ ಸಿಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಉಳ್ಳವರಿಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನು ಈ ದೇಶದಲ್ಲಿದೆಯಾ, ದುಡ್ಡು, ಪ್ರಭಾವ ಇದ್ದವರಿಗೆ ಜೈಲಿನಲ್ಲಿ ಏನು ಬೇಕಾದರೂ ಸಿಕ್ಕುತ್ತಾ? ಹೀಗಾದರೆ ಅಪರಾಧ ಮಾಡಿದವರಿಗೆ ಜೈಲಿಗೆ ಹಾಕಿ ಏನು ಪ್ರಯೋಜನ ಎಂದೆಲ್ಲಾ ಜನ ಪ್ರಶ್ನೆ ಮಾಡುತ್ತಿದ್ದಾರೆ.
ಮುಖ್ಯವಾಗಿ ಈ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಬಂಧಿಸಿದ್ದ ಮತ್ತು ತನಿಖೆ ಮಾಡುತ್ತಿರುವ ನಿಷ್ಠಾವಂತ ಅಧಿಕಾರಿಗಳಿಗೆ ಅವಮಾನ ಮಾಡಿದಂತಾಗಿದೆ. ಕೊಲೆ ಆರೋಪಿಗೆ ಈ ರೀತಿ ರಾಜಾತಿಥ್ಯ ನೀಡುವುದು ನಿಷ್ಠಾವಂತ ಅಧಿಕಾರಿಗಳ ಮನಸ್ಸಿಗೆ ಘಾಸಿ ಮಾಡಿದೆ.
ಈಗ ಇದೇ ಫೋಟೊ ಮತ್ತು ವಿಡಿಯೋವನ್ನು ಮುಂದಿಟ್ಟುಕೊಂಡು ಪೊಲೀಸರು ದರ್ಶನ್‌ಗೆ ಜಾಮೀನು ಕೊಡದಂತೆ ವಾದಿಸುವ ಸಾಧ್ಯತೆ ಕೂಡ ಇದೆ.












Click it and Unblock the Notifications