Ranya Rao: ಸಿನಿಮಾ ನಟನ ಜೊತೆ ರನ್ಯಾ ರಾವ್ 26 ಬಾರಿ ದುಬೈ ಪ್ರವಾಸ; ತನಿಖೆಯಲ್ಲಿ ಮತ್ತಷ್ಟು ರೋಚಕ ಮಾಹಿತಿ
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಸಂಗತಿ ಬಹಿರಂಗವಾಗುತ್ತಿದೆ. ಸೋಮವಾರ ಅವರು ಪತಿ ಜತಿನ್ ಹುಕ್ಕೇರಿಯಿಂದ ಮದುವೆಯಾದ ಒಂದೇ ತಿಂಗಳಿನಲ್ಲಿ ಬೇರ್ಪಟ್ಟಿರುವ ಸಂಗತಿ ಬಯಲಿಗೆ ಬಂದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟನ ಜೊತೆ ಸಾಕಷ್ಟು ಬಾರಿ ದುಬೈಗೆ ಪ್ರಯಾಣ ಮಾಡಿರುವ ಸಂಗತಿ ತಿಳಿದುಬಂದಿದೆ.
ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ, ಪ್ರಕರಣದ ಎರಡನೇ ಆರೋಪಿ ತೆಲುಗು ನಟ ತರುಣ್ ರಾಜು ಬುಕ್ ಮಾಡಿದ ಟಿಕೆಟ್‌ನಲ್ಲಿ ದುಬೈನಿಂದ ಹೈದರಾಬಾದ್‌ಗೆ ಪ್ರಯಾಣಿಸಿದ್ದಾರೆ ಎನ್ನುವ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ.

ರನ್ಯಾ ರಾವ್ ತರುಣ್ ಖಾತೆಗೆ ಹಣ ವರ್ಹಾವಣೆ ಮಾಡಿದ್ದು ಅದೇ ಹಣವನ್ನು ಬಳಸಿ ಟಿಕೆಟ್ ಖರೀದಿ ಮಾಡಲಾಗಿದೆ. ತನಿಖಾಧಿಕಾರಿಗಳು ಹಣದ ವರ್ಗಾವಣೆ, ಟಿಕೆಟ್ ಬುಕಿಂಗ್ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ. ತರುಣ್ ದುಬೈನಲ್ಲಿ ರನ್ಯಾ ರಾವ್‌ಗೆ ಚಿನ್ನವನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕಳ್ಳ ಸಾಗಾಣೆ ಪ್ರಕರಣದಲ್ಲಿ ತರುಣ್ ಭಾಗಿಯಾಗಿರುವ ಬಗ್ಗೆ ಅನುಮಾನಗಳು ಹೆಚ್ಚಾಗಿದೆ.
26 ಬಾರಿ ತರುಣ್ ಜೊತೆ ಪ್ರವಾಸ
2023 ಮತ್ತು ಮಾರ್ಚ್ 2025 ರ ನಡುವೆ ರನ್ಯಾ ರಾವ್ 52 ಬಾರಿ ದುಬೈಗೆ ಹೋಗಿ ಬಂದಿದ್ದು, ಇದರಲ್ಲಿ 26 ಬಾರಿ ನಟ ತರುಣ್ ಜೊತೆ ದುಬೈಗೆ ಪ್ರಯಾಣ ಮಾಡಿರುವುದು ಬಯಲಿಗೆ ಬಂದಿದೆ. ತನಿಖೆ ನಡೆಸಲು ಅಧಿಕಾರಿಗಳು ತರುಣ್ ವಿರುದ್ಧ ಲುಕ್‌ಔಟ್ ನೋಟಿಸ್ ಕೊಟ್ಟಿದ್ದರು. ಆದರೆ, ಮಾರ್ಚ್ 8ರಂದು ತರುಣ್ ದೇಶದಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅದು ವಿಫಲವಾದ ಬಳಿಕ ಅವರು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿ ಆತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧನಕ್ಕೆ ಕಾರಣ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ.
ಬಂಧನದ ನಂತರ ಅಧಿಕಾರಿಗಳು ತರುಣ್ ಸಹೋದರಿಗೆ ಮಾಹಿತಿ ನೀಡಿದ್ದಾರೆ. ಕಾನೂನು ಪ್ರಕಾರವೇ ಬಂಧನ ಮಾಡಿ, ವಿಚಾರಣೆಯನ್ನು ಮುಂದುವರೆಸಿದ್ದಾರೆ. ತರುಣ್ ಅಮೆರಿಕದ ಪೌರತ್ವ ಹೊಂದಿರುವ ವಿಚಾರ ಕೂಡ ಅಧಿಕಾರಿಗಳಿಗೆ ತನಿಖೆಯ ವೇಳೆ ತಿಳಿದುಬಂದಿದೆ. ಇದರಿಂದ ಅವರ ಚಟುವಟಿಕೆ ಮೇಲೆ ಮತ್ತಷ್ಟು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ.
ತಾನು ಜಿನೀವಾಗೆ ಪ್ರಯಾಣಿಸುತ್ತಿದ್ದೆ ಎಂದು ತರುಣ್ ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಹೈದರಾಬಾದ್‌ಗೆ ಬಳಿಕ ಬೆಂಗಳೂರಿಗೆ ಹೋಗಿದ್ದು ತನಿಖೆಯಲ್ಲಿ ತಿಳಿದುಬಂದಿದ್ದು, ಜಿನೀವಾಗೆ ಹೋಗಲು ಈ ರೀತಿ ಮಾರ್ಗ ಬದಲಾವಣೆ ಮಾಡುವ ಅಗತ್ಯವೇನಿದೆ ಎನ್ನುವುದು ಅಧಿಕಾರಿಗಳ ಪ್ರಶ್ನೆಯಾಗಿದೆ. ಇದು ತರುಣ್ ದೇಶದಿಂದ ಪಲಾಯನ ಮಾಡಲು ಮಾಡಿರುವ ಪ್ರಯತ್ನ ಎಂದು ಅಧಿಕಾರಿಗಳು ವಾದಿಸಿದ್ದಾರೆ.
ದುಬೈನಲ್ಲಿ ತರುಣ್ ಯಾವ ರೀತಿಯ ವ್ಯವಹಾರ ಹೊಂದಿದ್ದರು ಎನ್ನುವುದನ್ನು ಮತ್ತಷ್ಟು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈನಲ್ಲಿ ಚಿನ್ನ ಖರೀದಿ ಮಾಡಲು ಹಣ ಪಾವತಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ, ಕಳ್ಳ ಸಾಗಾಣೆ ಜಾಲಕ್ಕೆ ಅಂತರರಾಷ್ಟ್ರೀಯ ಸಂಪರ್ಕಗಳಿರುವ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ.












Click it and Unblock the Notifications