ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲು
ಬೆಂಗಳೂರು, ಮೇ 02: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಅಭಿಪ್ರಾಯ ಸಂಗ್ರಹ ಮಾಡುವುದು ಸರ್ವೇಸಾಮಾನ್ಯ. ಈ ಸಂದರ್ಭದಲ್ಲಿ ಒನ್ಇಂಡಿಯಾ ತನ್ನ ಫೇಸ್ ಬುಕ್ ಪುಟದಲ್ಲಿ ಫೇಸ್ಬುಕ್ ಲೈವ್ ಪೋಲ್ ನಡೆಸುತ್ತಿದೆ. ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆಸಿದ ಸಮೀಕ್ಷೆ ಫಲಿತಾಂಶ ಇಲ್ಲಿದೆ.
ಮೈಸೂರಿನ ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುರುಬರದ್ದೇ ಮೇಲುಗೈ. ಅಲ್ಲದೆ, ಒಕ್ಕಲಿಗರ ಪ್ರಾಬಲ್ಯವೂ ಇದೆ. ಇಲ್ಲಿ ಜೆಡಿಎಸ್ ನ ಜಿ.ಟಿ. ದೇವೇಗೌಡ ಅವರು ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇದು ಸಿದ್ದರಾಮಯ್ಯ ಅವರ ಹಿಂದಿನ ಕ್ಷೇತ್ರ. ಈ ಬಾರಿಯೂ ಸ್ಪರ್ಧಿಸಲಿರುವ ಕ್ಷೇತ್ರ.
1983ರಿಂದ ಒಟ್ಟಿಗೆ ಇದ್ದ ಸಿದ್ದರಾಮಯ್ಯ ಹಾಗೂ ಜಿ.ಟಿ ದೇವೇಗೌಡರು ಬೇರೆ ಯಾಗಿ 3 ದಶಕಗಳು ಕಳೆದಿವೆ. ಈಗ ಅವರು ಬೇರೆ-ಬೇರೆ ಪಕ್ಷದಲ್ಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖಾಮುಖಿಯಾಗಿ ಚುನಾವಣಾ ಅಖಾಡಕ್ಕಿಳಿದ್ದಾರೆ.

ಸಿದ್ದರಾಮಯ್ಯ ಜೊತೆಗಿನ ಸ್ನೇಹ ಕಡಿದುಕೊಂಡ ಜಿ.ಟಿ.ದೇವೇಗೌಡರು ಬಿಜೆಪಿ ಸೇರಿದರು. ನಂತರ ಜೆಡಿಎಸ್ ಪಕ್ಷಕ್ಕೆ ಸೇರಿದರು. 2013ರ ಚುನಾವಣೆಯಲ್ಲಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ.
ಕ್ಷೇತ್ರದಲ್ಲಿ 2.5 ಲಕ್ಷ ಮತದಾರರಿದ್ದು ಇದರಲ್ಲಿ 70,000 ಒಕ್ಕಲಿಗ ಮತಗಳಿವೆ. ದೇವೇಗೌಡರು ಒಕ್ಕಲಿಗರ ಕಣ್ಮಣಿಯಾಗಿ ಕ್ಷೇತ್ರದಲ್ಲಿ ಮೂಡಿ ಬಂದಿರುವುದು ಸಿಎಂ ಗೆಲುವಿಗೆ ತೊಡರುಗಾಲು ಆಗಬಹುದು ಎನ್ನಲಾಗಿದೆ.
ಫೇಸ್ಬುಕ್ ಲೈವ್ ಮತದಾನ:
ಇದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ನೀಡಲಾಗಿರುತ್ತದೆ. ಉದಾಹರಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ(ಎಮೋಜಿ) ಬಳಸಲಾಗಿದೆ. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು.
ಫಲಿತಾಂಶ: ಸುಮಾರು ಒಂದು ಅಥವಾ ಎರಡು ಗಂಟೆ ಅವಧಿಯ ಚುಟುಕು ಸಮೀಕ್ಷೆ ಇದಾಗಿತ್ತು. ಈ ವೇಳೆಯಲ್ಲಿ 148ಕ್ಕೂ ಅಧಿಕ ಬಾರಿ ಶೇರ್ ಆಗಿದ್ದು, 99 ಸಾವಿರಕ್ಕೂ ಅಧಿಕ ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, 14ಸಾವಿರಕ್ಕೂ ಅಧಿಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಗಮನಿಸಿ ಅಭ್ಯರ್ಥಿಗಳಿಗೆ ನೀಡಿರುವ ಎಮೋಜಿಗಳನ್ನು ಒತ್ತಿದರೆ ಮಾತ್ರ ನಿಮ್ಮ ಮತ ಲೆಕ್ಕಕ್ಕೆ ಸಿಗಲಿದೆ.
ಬಿಜೆಪಿ ಅಭ್ಯರ್ಥಿ ಎಸ್. ಆರ್ ಗೋಪಾಲರಾವ್ ಅವರಿಗೆ 360 ಮತಗಳು ಲಭಿಸಿದ್ದರೆ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರಿಗೆ 680ಮತಗಳು ಸಿಕ್ಕಿವೆ. ಇನ್ನು ಜೆಡಿಎಸ್ ನ ಜಿ.ಟಿ ದೇವೇಗೌಡ ಅವರಿಗೆ 1041 ಮತಗಳು ಸಿಕ್ಕಿದ್ದು, ಜಯಭೇರಿ ಬಾರಿಸಿದ್ದಾರೆ.












Click it and Unblock the Notifications