ಸರ್ಕಾರ ರಚನೆಗೆ ಬಹುಮತ ಇಲ್ಲದಿದ್ದರೇನು, ಆತ್ಮಸಾಕ್ಷಿ ಸಾಕಲ್ಲವೇ?
ಬೆಂಗಳೂರು, ಮೇ 18: ಬಹುಮತ ಸಾಬೀತುಪಡಿಸಿಕೊಳ್ಳಲು ಶಾಸಕರ ಬೆಂಬಲಕ್ಕಿಂತಲೂ ಆತ್ಮಸಾಕ್ಷಿ ಮುಖ್ಯವಾಗಲಿದೆ ಎಮದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆತ್ಮಸಾಕ್ಷಿಗೆ ಅನುಗುಣವಾಗಿ ಮತಹಾಕಲು ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ. ಆತ್ಮಸಾಕ್ಷಿಯಿಂದ ಮತಗಳನ್ನು ಏಕೆ ಗೆಲ್ಲಬಾರದು? ಎಂದು ಅವರು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತು ತಪ್ಪಿದ್ದಾರೆ, ಪಕ್ಷದಿಂದ ಹೊರಹಾಕಿದವರ ಜತೆ ಕುಮಾರಸ್ವಾಮಿ ಮತ್ತೆ ಒಡನಾಟ ಹೊಂದಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಹೀಗಿರುವಾಗ ಈಗ ಅಧಿಕ ಸಂಖ್ಯೆಯ ಬಲ ತೋರಿಸುತ್ತಿರುವ ಕಾರಣಕ್ಕೆ ರಾಜ್ಯಪಾಲರು ಅವರಿಗೆ ಬಹುಮತ ಸಾಬೀತುಪಡಿಸಿಕೊಳ್ಳಲು ಅವಕಾಶ ನೀಡುವ ಅಗತ್ಯವಿಲ್ಲ. ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡುವುದು ಸಹಜ ಕಾನೂನು ಪ್ರಕಾರ ಸರಿಯಾದ ನಿರ್ಧಾರ ರಾಜ್ಯಪಾಲರ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಬಹುಮತ ಸಾಬೀತುಪಡಿಸಿಕೊಳ್ಳಲು ನಮ್ಮ ಬಳಿ ರಹಸ್ಯ ಅಸ್ತ್ರವೇನೂ ಇಲ್ಲ. ಆತ್ಮಸಾಕ್ಷಿಯ ಮತಗಳ ಮೂಲಕ ಗೆಲ್ಲುತ್ತೇವೆ. ಕಾನೂನು ವಿಚಾರಗಳ ಬಗ್ಗೆ ತಜ್ಞರು ನೋಡಿಕೊಳ್ಳುತ್ತಾರೆ ಎಂದರು.
ರಾಜ್ಯ ರಾಜಕಾರಣದ ಭವಿಷ್ಯ ಸುಪ್ರೀಂಕೋರ್ಟ್‌ನಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜನಾದೇಶಕ್ಕೆ ಬಿರುದ್ಧವಾಗಿ ಮೈತ್ರಿ ಮಾಡಿಕೊಂಡಿವೆ.
ಕುಮಾರಸ್ವಾಮಿ ಅವರು ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಅವರು ಈಗ ಕುಮಾರಸ್ವಾಮಿ ಅವರ ಮನೆ ಬಾಗಿಲಿಗೆ ಹೋಗಿ ನಿಂತಿದ್ದಾರೆ ಎಂದು ಲೇವಡಿ ಮಾಡಿದರು.
ಬಹುಮತ ಸಾಬೀತುಪಡಿಸಿಕೊಳ್ಳಲು ಎಂಟು ಶಾಸಕರ ಕೊರತೆ ಎದುರಿಸುತ್ತಿರುವ ಬಿಜೆಪಿ, ಸದ್ಯ ಸುಪ್ರೀಂಕೋರ್ಟ್ ತೀರ್ಪು ಏನಾಗಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದೆ.
ಇತ್ತ ಬಿಜೆಪಿಯ ತೆಕ್ಕೆಗೆ ತಮ್ಮ ಶಾಸಕರು ಜಾರದಂತೆ ನೋಡಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅವರನ್ನು ಹೈದರಾಬಾದ್‌ಗೆ ಕರೆದೊಯ್ದಿದ್ದಾರೆ. ಕೋರ್ಟ್ ತೀರ್ಪು ಹೊರಬಿದ್ದ ನಂತರ ಮತ್ತೆ ದೊಡ್ಡ ಮಟ್ಟದ ರಾಜಕೀಯ ಬೆಳವಣಿಗೆ ಉಂಟಾಗುವ ನಿರೀಕ್ಷೆಯಿದೆ.












Click it and Unblock the Notifications