ಬಿಸಿಲನ್ನೇ ವರವಾಗಿಸಿಕೊಂಡ ನೀರಿನ ಸಮಸ್ಯೆಯ ಪಾವಗಡ ಕ್ಷೇತ್ರ
ಬಾವಿ ಆಳದಿಂದ ಕೇಳಿಬರುವಂಥ ಧ್ವನಿಯಂಥದ್ದು ಪಾವಗಡ ಕ್ಷೇತ್ರ. ಇದು ಇನ್ನೊಂದು ರೀತಿಯಲ್ಲಿ 'ದ್ವೀಪ'ದಂಥದ್ದು. ಏಕೆಂದರೆ ಸುತ್ತಲೂ ಆಂಧ್ರದ ಪ್ರದೇಶಗಳಿವೆ. ಕರ್ನಾಟಕದಿಂದ ಹೊರಟು ಬಂದು ಮಡಕಶಿರಾ (ಆಂಧ್ರಕ್ಕೆ ಸೇರಿದ್ದು) ದಾಟಿದ ಮೇಲೆ ಪಾವಗಡ ತಲುಪುತ್ತೇವೆ.
ಜಿಲ್ಲಾ ಕೇಂದ್ರವಾದ ತುಮಕೂರಿಗೂ ಪಾವಗಡ ತಾಲೂಕು ದೂರ, ಅಭಿವೃದ್ಧಿಗೂ ಇದೇ ಮಾತು ಅನ್ವಯಿಸುತ್ತದೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸೋಲಾರ್ ಪಾರ್ಕ್ ಯೋಜನೆ ಘೋಷಣೆ ಮಾಡಿದ ಮೇಲೆ ಇಲ್ಲಿನ ರೈತರ ಪಾಲಿಗೆ ಲಾಟರಿ ಹೊಡೆದಂತೆ ಆಗಿದೆ.
ಶುದ್ಧ- ಕುಡಿಯಲು ಯೋಗ್ಯವಾದ ನೀರು ಸಿಗದ ಈ ತಾಲೂಕಿನಲ್ಲಿ ಎರಡ್ಮೂರು ವರ್ಷದಿಂದ ಹಣದ ಓಡಾಟ ಜೋರಾಗಿದೆ. ವೈ.ಎನ್.ಹೊಸಕೋಟೆಯ ಶೇಂಗಾ, ಧರ್ಮಾವರಂ ರೇಷ್ಮೆ ಸೀರೆ ಈ ತಾಲೂಕಿನ ಹೆಗ್ಗುರುತು. ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಇಲ್ಲಿ ಅಸ್ತಿತ್ವ ಇದೆ. ಸದ್ಯಕ್ಕೆ ಇಲ್ಲಿ ಶಾಸಕರಾಗಿರುವವರು ಜೆಡಿಎಸ್ ನ ತಿಮ್ಮರಾಯಪ್ಪ.

ಅದಕ್ಕೂ ಮುನ್ನ ಶಾಸಕರಾಗಿದ್ದವರು ವೆಂಕಟರಮಣಪ್ಪ. ಪರಿಶಿಷ್ಟರ ಮತಗಳು ಇಲ್ಲಿ ಬಹಳ ಮುಖ್ಯ. ಜೆಡಿಎಸ್ ಹಾಗೂ ಕಾಂಗ್ರೆಸ್ ಜಿದ್ದಾಜಿದ್ದಿಯ ಮಧ್ಯೆ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಈ ಕ್ಷೇತ್ರದಲ್ಲಿಕೇಸರಿ ಪಕ್ಷಕ್ಕೆ ಪ್ರಬಲ ಸ್ಪರ್ಧಿ ಸಿಕ್ಕಿದರೂ ಅಷ್ಟರ ಮಟ್ಟಿಗೆ ಸಂತಸದ ವಿಚಾರ.
ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನ ಟಿಕೆಟ್ ಪಡೆದಿರುವವರು ವೆಂಕಟರಮಣಪ್ಪ. ಆದರೆ ಸ್ಥಳೀಯರನ್ನು ಮಾತನಾಡಿಸಿದರೆ ಜೆಡಿಎಸ್ ನ ಹಾಲಿ ಶಾಸಕರಾದ ತಿಮ್ಮರಾಯಪ್ಪ ಬಗ್ಗೆ ಒಳ್ಳೆ ಮಾತನಾಡುತ್ತಾರೆ. ಆದರೆ ಸ್ಪರ್ಧೆ ಎಂಬುದು ಇನ್ನೂ ತೀವ್ರ ಮಟ್ಟದಲ್ಲಿ ಏರದಿದ್ದರೂ ಇಲ್ಲೇನಿದ್ದರೂ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಅಂತಲೇ ಇದೆ. ಇನ್ನು ಬಿಜೆಪಿಯಿಂದ ಬಲರಾಮ್ ಅಖಾಡದಲ್ಲಿದ್ದಾರೆ.
ಪಾವಗಡ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಬರೆದರೆ ಅದೇ ದೊಡ್ಡ ವರದಿ ಆಗುತ್ತದೆ. ಈ ಕ್ಷೇತ್ರದ ಬಗ್ಗೆ ಹೇಳುವುದಾದರೆ ಆಂಧ್ರದೊಂದಿಗಿನ ನಂಟು ಹೆಚ್ಚು. ಕೆಲಸ-ಕಾರ್ಯ, ಆರೋಗ್ಯ, ಹೆಣ್ಣು- ಗಂಡು ಕೊಟ್ಟು ತರುವ ಸಂಬಂಧ ಹೀಗೆ ಆಂದ್ರದ ಜತೆಗೆ ನಂಟು ಹೆಚ್ಚು.












Click it and Unblock the Notifications