ಕರ್ನಾಟಕದಲ್ಲಿ ಈಗ ಎಲ್ಲೆಡೆ ಬೆಟ್ಟಿಂಗ್ ಭರಾಟೆ

Heavy betting is on Karnataka Election 2013 candidates
ಬೆಂಗಳೂರು, ಮೇ 7: ವಿಧಾನಸಭೆ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಮುಂದುವರೆದಿದೆ. ಮಾಧ್ಯಮಗಳ ಎಕ್ಸಿಟ್ ಪೋಲ್ ಫಲಿತಾಂಶ ಒಂದೆಡೆಯಾದರೆ, ರಾಜ್ಯದ ವಿವಿಧೆಡೆ ಬೆಟ್ಟಿಂಗ್ ಭರಾಟೆ ಆರಂಭವಾಗಿದೆ.

ವಿಧಾನಸಭಾ ಚುನಾವಣೆ ಫಲಿತಾಂಶದ ಮೇಲೆ ದೊಡ್ಡ ಮಟ್ಟದ ಬೆಟ್ಟಿಂಗ್ ದಂಧೆ ಆರಂಭವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರುವ ಸಾಧ್ಯತೆಗಳಿವೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿರುವುದು, ಬೆಟ್ಟಿಂಗ್ ಭರಾಟೆ ಹೆಚ್ಚಲು ಕಾರಣವಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿಗಳ ಮೇಲೆ ದೊಡ್ಡ ಮೊತ್ತದ ಬೆಟ್ಟಿಂಗ್ ನಡೆಯುತ್ತಿದ್ದು, ಅದೇ ರೀತಿಯಲ್ಲಿ ರಾಜಕೀಯ ಘಟಾನುಘಟಿ ಮುಖಂಡರುಗಳು ಸ್ಪರ್ಧಿಸಿರುವ ಕ್ಷೇತ್ರಗಳ ಫಲಿತಾಂಶದ ಮೇಲೆಯೂ ಅವರ ಬೆಂಬಲಿಗರು ಹಾಗೂ ಸಾರ್ವಜನಿಕರು ಬಾಜಿ ಕಟ್ಟುತ್ತಿದ್ದಾರೆ.

ಲಕ್ಷ ಲಕ್ಷ ನಗದು ಹಣ, ಗಡಿಯಾರ, ಉಂಗುರ, ಚಿನ್ನದ ಸರ, ದ್ವಿಚಕ್ರ ವಾಹನ, ಕಾರು, ಜಮೀನು, ಸಾಕು ಪ್ರಾಣಿಗಳನ್ನು ಪಣಕ್ಕಿಟ್ಟು ಜನ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

ಅಭ್ಯರ್ಥಿಗಳ ಗೆಲುವಿನ ಮೇಲೆ ಒಂದಕ್ಕೆ 5 ರಷ್ಟು ಬೆಟ್ಟಿಂಗ್ ಕಟ್ಟಲಾಗಿದೆಯಂತೆ. ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸಲಾಗುತ್ತಿರುವ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್, ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಎಸ್ ಎಂ ಕೃಷ್ಣ ಅವರ ಮೇಲೆಯೂ ಬಾಜಿ ಕಟ್ಟಲಾಗಿದೆ.

ಉಳಿದಂತೆ ಪ್ರಮುಖ ಕ್ಷೇತ್ರಗಳಾದ ವರುಣಾ ಕ್ಷೇತ್ರದ ಸಿದ್ದರಾಮಯ್ಯ ಹಾಗೂ ಕೆಜೆಪಿ ಅಭ್ಯರ್ಥಿ ಕಾ.ಪು.ಸಿದ್ದಲಿಂಗಸ್ವಾಮಿ ಅವರ ಪೈಕಿ ಯಾರು ಗೆಲ್ಲಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸ್ಪರ್ಧಿಸಿರುವ ರಾಮನಗರ, ಅನಿತಾ ಕುಮಾರಸ್ವಾಮಿ- ಚನ್ನಪಟ್ಟಣ, ಯಡಿಯೂರಪ್ಪ -ಶಿಕಾರಿಪುರ, ಈಶ್ವರಪ್ಪ-ಶಿವಮೊಗ್ಗ, ಜಗದೀಶ್ ಶೆಟ್ಟರ್ ಸ್ಪರ್ಧೆಯಲ್ಲಿರುವ ಹುಬ್ಬಳ್ಳಿ, ಪರಮೇಶ್ವರ್-ಕೊರಟಗೆರೆ, ಶೋಭಾ ಕರಂದ್ಲಾಜೆ ಸ್ಪರ್ಧಾ ಕಣದಲ್ಲಿರುವ ರಾಜಾಜಿನಗರ ಕ್ಷೇತ್ರ, ಸಿಟಿ ರವಿ-ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಬೆಟ್ಟಿಂಗ್ ನಡೆದಿದೆ.

ಹಾಸನ: ಅರಸೀಕೆರೆ, ಶ್ರವಣಬೆಳಗೊಳ, ಹಾಸನ, ಬೇಲೂರು ಕ್ಷೇತ್ರದ ಫಲಿತಾಂಶದ ಮೇಲೆ ಹೆಚ್ಚಿನ ಬೆಟ್ಟಿಂಗ್ ನಡೆದಿದೆ. ಶ್ರವಣಬೆಳಗೊಳದಲ್ಲಿ ಕಾಂಗ್ರೆಸ್ಸಿನ ಸಿ.ಎಚ್ ಪುಟ್ಟೇಗೌಡ vs ಜೆಡಿಎಸ್ ನ ಸಿಎನ್ ಬಾಲಕೃಷ್ಣ ಜಟಾಪಟಿ, ಹಾಸನದಲ್ಲಿ ಜೆಡಿಎಸ್ ನ ಎಚ್ ಎಸ್ ಪ್ರಕಾಶ್ ಹಾಗೂ ಕಾಂಗ್ರೆಸ್ ನ ಎಚ್ ಕೆ ಮಹೇಶ್ ಸ್ಪರ್ಧೆ ಮೇಲೆ ಬೆಟ್ಟಿಂಗ್ ನಡೆದಿದೆ. ಅರಸೀಕೆರೆಯಲ್ಲಿ ಜೆಡಿಎಸ್ ನ ಕೆಎಂ ಶಿವಲಿಂಗೇಗೌಡ ಗೆಲುವಿನ ಬಗ್ಗೆ ಭಾರಿ ಚರ್ಚೆ ಇದೆ.

ಉಳಿದಂತೆ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ನ ಎ. ಮಂಜು, ಬೇಲೂರಿನ ಕಾಂಗ್ರೆಸ್ ಅಭ್ಯರ್ಥಿ ವೈ.ಎನ್ ರುದ್ರೇಗೌಡ, ಸಕಲೇಶಪುರದ ಜೆಡಿಎಸ್ ಅಭ್ಯರ್ಥಿ ಎಚ್ ಕೆ ಕುಮಾರಸ್ವಾಮಿ, ಹೊಳೆನರಸೀಪುರದ ಜೆಡಿಎಸ್ ಅಭ್ಯರ್ಥಿ ಎಚ್ ಡಿ ರೇವಣ್ಣ ಗೆಲುವಿನ ಬಗ್ಗೆ ಬಾಜಿದಾರರಿಗೆ ಸಂಶಯವಿಲ್ಲ.

ಬಂಗಾರಪೇಟೆ: ಇಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇರುವುದು ಕಂಡು ಬಂದಿದ್ದರೂ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರ ಮೇಲೆ ದಾಳಿ ನಡೆದ ನಂತರ ಚಿತ್ರಣ ಬದಲಾಗಿದೆ. ನಿರೀಕ್ಷೆಗಿಂತ ಹೆಚ್ಚು ಮತದಾನ ನಡೆದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್ ಎನ್ ನಾರಾಯಣ ಸ್ವಾಮಿ ಹಾಗೂ ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಎಂ ನಾರಾಯಣ ಸ್ವಾಮಿ ಅವರ ನಡುವೆ ಯಾರು ಗೆಲ್ಲಲಿದ್ದಾರೆ ಎಂಬುದರ ಬಗ್ಗೆ ಬಾಜಿ ಕಟ್ಟಲಾಗಿದೆ.

ಸೋಮವಾರಪೇಟೆ: ನಗರದ ಕ್ಲಬ್, ಹಾಡಿ, ಹೊರ ವಲಯದ ಕಾಲೋನಿಗಳಲ್ಲಿ ಜೂಜು ನಡೆಯುತ್ತಿದೆ. ಅಭ್ಯರ್ಥಿಗಳ ಗೆಲುವಿನ ಜೊತೆಗೆ ಯಾವ ಪಕ್ಷ ಎಷ್ಟು ದುಡ್ಡು ಖರ್ಚು ಮಾಡಿದೆ ಎಂಬುದರ ಬಗ್ಗೆ ಕೂಡಾ ಬೆಟ್ಟಿಂಗ್ ನಡೆದಿದೆ. ರಾಷ್ಟ್ರೀಯ ಪಕ್ಷಕ್ಕೆ 4 ಸೀಟು ಗ್ಯಾರಂಟಿ ಎಂದು ಲಕ್ಷಾಂತರ ದುಡ್ಡು ಕಟ್ಟ್ಟಿರುವ ವರದಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+