ಭಾರೀ ಕುತೂಹಲಕ್ಕೆಡೆ ಮಾಡಿಕೊಟ್ಟ ಬಿಎಸ್ವೈ ತಂತ್ರಗಾರಿಕೆ
ಬೆಂಗಳೂರು, ಏ 23: ಹುಟ್ಟು ಹೋರಾಟಗಾರ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಯಡಿಯೂರಪ್ಪನವರ ಈ ನಡೆ ಹಲವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಜೆಪಿ ಮತ ವಿಭಜಿಸುವುದೇ ತನ್ನ ಪ್ರಮುಖ ಅದ್ಯತೆಯಂತೆ ರಾಜಕೀಯ ನಡೆ ಇಡುತ್ತಿರುವ ಯಡಿಯೂರಪ್ಪನವರ ಈ ನಿರ್ಧಾರದ ಹಿಂದೆ ಇನ್ಯಾವ ರಾಜಕೀಯ ತಂತ್ರಗಾರಿಕೆ ಅಡಗಿದೆಯೋ ಎಂದು ಬಿಜೆಪಿ ಮುಖಂಡರು ತಲೆಕೆಡಿಸಿಕೊಳ್ಳದೇ ಇರಲಾರರು.
ಕೆಲವೊಂದು ಕ್ಷೇತ್ರಗಳಲ್ಲಿ ಕೆಜೆಪಿಗೆ ಸೂಕ್ತ ಅಭ್ಯರ್ಥಿಯ ಕೊರತೆ ಕಂಡಿರಬಹುದು, ಕೆಲವೊಂದು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಕಣದಿಂದ ಹಿಂದಕ್ಕೆ ಸರಿದಿರಬಹುದು.ಆದರೆ ಕೆಲವು ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿ ತನ್ನ ಅಭ್ಯರ್ಥಿಯನ್ನು ಯಡಿಯೂರಪ್ಪ ಕಣಕ್ಕಿಳಿಸಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿರುವುದಂತು ನಿಜ.
ಪ್ರಸಕ್ತ ಕೆಜೆಪಿಗೆ ಸ್ವಲ್ಪ ಮಟ್ಟಿನ ರಾಜಕೀಯ ನೆಲೆ ಇದೆಯೆಂದರೆ ಅದು ಉತ್ತರ ಕರ್ನಾಟಕ ಭಾಗದಲ್ಲಿ. ಆ ಭಾಗದ ಕೆಲವು ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಗಳು ಕಣದಲ್ಲಿಲ್ಲ.
ಒಂದು ಕಾಲದ ತನ್ನ ಕಟ್ಟಾ ಅನುಯಾಯಿಗಳ ವಿರುದ್ದ ಯಡಿಯೂರಪ್ಪ ಮೃದು ಧೋರಣೆ ತಾಳಿದ್ದಾರೆಯೇ? ಅಥವಾ ಚುನಾವಣೆಯ ನಂತರ ಇನ್ನೇನಾದರೂ ತಂತ್ರಗಾರಿಕೆ ಅಡಗಿದೆಯೋ ಅನ್ನೋದು interesting...

ಮುಧೋಳ್
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಹಿಂದೆ ಮುಂದೆ ಇರುತ್ತಿದ್ದವರು ಗೋವಿಂದ ಕಾರಜೋಳ. ಬಿಎಸ್ವೈ ಬಿಜೆಪಿ ಬಿಡುವ ಸಮಯದಲ್ಲಿ ಅವರ ಜೊತೆಗೆ ಕಾರಜೋಳ ಕಾಣಿಸಿಕೊಳ್ಳದಿದ್ದರೂ ಯಡಿಯೂರಪ್ಪನವರ ಈ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬೀಳಗಿ
ಬಿಜೆಪಿಯಲ್ಲಿರುವ ಮತ್ತು ಇಂದಿಗೂ ಯಡಿಯೂರಪ್ಪನವರೇ ನನ್ನ ನಾಯಕರು ಎಂದು ಹೇಳಿಕೊಳ್ಳುತ್ತಿರುವವರು ಮುರುಗೇಶ್ ನಿರಾಣಿ. ಕೊನೇ ಕ್ಷಣದಲ್ಲಿ ಬಿಜೆಪಿ ತೊರೆಯದಿರಲು ನಿರ್ಧರಿಸಿರುವ ನಿರಾಣಿ ವಿರುದ್ದ ಬಿಎಸ್ವೈ ಅಭ್ಯರ್ಥಿಯನ್ನು ನಿಲ್ಲಿಸುವ ಗೋಜಿಗೇ ಹೋಗಿಲ್ಲ.

ಬಾಗಲಕೋಟೆ
ಕೆಜೆಪಿ ಈ ಭಾಗದಲ್ಲಿ ಪ್ರಭಾವಿ ಪಕ್ಷವಾಗಿದ್ದರೂ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ದ ಕೆಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ.

ವಿರಾಜಪೇಟೆ
ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಜೊತೆ ಕಾಣಿಸಿಕೊಂಡವರು. ಯಡಿಯೂರಪ್ಪ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕಣ್ನೀರು ಹರಿಸಿ ರಾಜೀನಾಮೆ ಮುಂದಾಗಿದ್ದ
ಕೆ ಜೆ ಬೋಪಯ್ಯ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಬಳ್ಳಾರಿ ನಗರ
ಯಡಿಯೂರಪ್ಪನವರ ಮತ್ತೊಂದು ಆಶ್ಚರ್ಯಕಾರಿ ಹೆಜ್ಜೆ. ರೆಡ್ಡಿಗಳು ಬಿಜೆಪಿಯಿಂದ ದೂರವಾದ ನಂತರ, ಬಿಎಸಾರ್ ಪಕ್ಷದ ಉದಯದ ನಂತರ ಬಿಜೆಪಿ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಗೌಡ.

ದಾವಣಗೆರೆ ಉತ್ತರ
ಯಡಿಯೂರಪ್ಪ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿದ್ದ ಮತ್ತೊಬ್ಬ ಪ್ರಭಾವಿ ಮುಖಂಡ ಎಸ್ ಎ ರವೀಂದ್ರನಾಥ್. ಈ ಕ್ಷೇತ್ರದಲ್ಲೂ ಕೆಜೆಪಿ ಅಭ್ಯರ್ಥಿಗಳಿಲ್ಲ.

ಭದ್ರಾವತಿ
ಕಾಂಗ್ರೆಸ್ ಪಕ್ಷದಿಂದ ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಬಿ ಕೆ ಸಂಗಮೇಶ್ ಅವರನ್ನು ತನ್ನತ್ತ ಸೆಳೆಯಲು ಹರಸಾಹಸ ಪಟ್ಟರು. ಆ ಕ್ಷಣದಲ್ಲಿ ಅದು ಕೈಗೂಡದ ಹಿನ್ನಲೆಯಲ್ಲಿ ಅವರಿಗೆ ಬೆಂಬಲ ಸೂಚಿಸಿ ತನ್ನ ಅಭ್ಯರ್ಥಿಯಿಂದ ನಾಮಪತ್ರ ವಾಪಾಸ್ ಪಡೆದುಕೊಂಡರು.

ಕುಂದಾಪುರ
ಕ್ಷೇತ್ರದಲ್ಲಿ ಒಳ್ಳೆಯ ಕೆಲಸದ ಮೂಲಕ ಹೆಸರು ಪಡೆದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ತನ್ನತ್ತ ಸೆಳೆಯಲು ಕೆಜೆಪಿ ಮತ್ತು ಜೆಡಿಎಸ್ ಇಬ್ಬರೂ ಪ್ರಯತ್ನ ಪಟ್ಟು ವಿಫಲರಾದರು. ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಹಾಲಾಡಿ ವಿರುದ್ದ ಕೆಜೆಪಿ ಮತ್ತು ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ.

ಉಡುಪಿ
ಕ್ಷೇತ್ರದಲ್ಲಿ ಕೆಜೆಪಿಗೆ ಅಭ್ಯರ್ಥಿಯ ಕೊರತೆ ಕಂಡಿರಬಹುದು. ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ ಶೆಟ್ಟಿ.

ಕಾಪು
ಉಡುಪಿ ಕ್ಷೇತ್ರದಂತೆ, ಈ ಕ್ಷೇತ್ರದಲ್ಲೂ ಯಡಿಯೂರಪ್ಪನವರಿಗೆ ಅಭ್ಯರ್ಥಿ ಕೊರತೆ ಕಂಡಿರಬಹುದು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್.

ಶೃಂಗೇರಿ
ಯಡಿಯೂರಪ್ಪ ಆಪ್ತ ಬಣದಲ್ಲಿ ಕಾಣಿಸಿಕೊಂಡಿದ್ದ, ಡಿ ಎನ್ ಜೀವರಾಜ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಮೂಡಿಗೆರೆ
ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಕೆಜೆಪಿಗೆ ಸೂಕ್ತ ಅಭ್ಯುರ್ಥಿಯ ಕೊರತೆ ಕಂಡುಬರುತ್ತಿದ್ದು ಎಂ ಪಿ ಕುಮಾರಸ್ವಾಮಿ ಇಲ್ಲಿ ಬಿಜೆಪಿ ಅಭ್ಯರ್ಥಿ.

ಮಧುಗಿರಿ
ಈ ಕ್ಷೇತ್ರದಲ್ಲಿ ಕೆಜೆಪಿ ಅಷ್ಟೇನೂ ಬಲಿಷ್ಠವಾಗಿಲ್ಲ. ಸುಮಿತ್ರಾದೇವಿ ಇಲ್ಲಿನ ಬಿಜೆಪಿ ಅಭ್ಯರ್ಥಿ.

ಕೆಜಿಎಫ್
ಜೈಲಿಗೆ ಹೋಗುವ ಮುನ್ನ ವೈ ಸಂಪಂಗಿ ಯಡಿಯೂರಪ್ಪ ಆಪ್ತ ಬಣದಲ್ಲಿ ಕಾಣಿಸಿಕೊಂಡವರು. ಅವರ ತಾಯಿ ರಾಮಕ್ಕ ಅಲ್ಲಿನ ಬಿಜೆಪಿ ಅಭ್ಯರ್ಥಿ.

ಯಶವಂತಪುರ
ಕಳೆದ ಬಾರಿಯ ಚುನಾವಣೆಯಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಕೂದಲೆಳೆ ಅಂತರದಿಂದ ಗೆದ್ದಿದ್ದರು. ಈ ಬಾರಿ ಸೂಕ್ತ ಅಭ್ಯರ್ಥಿಯ ಕೊರತೆ ಇದ್ದಂತೆ ಕಾಣಿಸುತ್ತಿದ್ದು ಎಚ್ ಎಲ್ ಕೃಷ್ಣಪ್ಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಮೇಲುಕೋಟೆ, ಕೆ ಆರ್ ಪೇಟೆ, ಶ್ರವಣಬೆಳಗೊಳ, ಹಾಸನ
ಈ ನಾಲ್ಕೂ ಕ್ಷೇತ್ರಗಳಲ್ಲಿ ಕೆಜೆಪಿಗೆ ನೆಲೆಯಿಲ್ಲ. ಹಾಗಾಗಿ ಸ್ಪರ್ಧಿಸುವ ಗೋಜಿಗೆ ಯಡಿಯೂರಪ್ಪ ಹೋಗಿಲ್ಲ. ಬಿ ಎಂ ರವೀಂದ್ರ, ವರದರಾಜೇ ಗೌಡ, ಪಟೇಲ್ ಮಂಜುನಾಥ್
ಮತ್ತು ಎಂ ಬಿ ಗುರುಪ್ರಸಾದ್ ಕ್ರಮವಾಗಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದವರು.












Click it and Unblock the Notifications