ಪಕ್ಕದೂರು ಜಯಮ್ಮನ ಐದು ಅಭ್ಯರ್ಥಿಗಳು ಕಣದಲ್ಲಿ
ಚೆನ್ನೈ, ಏ 13: ಕಾವೇರಿ ವಿಚಾರದಲ್ಲಿ ಸರಕಾರವನ್ನು ಮತ್ತು ಕರ್ನಾಟಕದ ಜನತೆಯನ್ನು ಇನ್ನಿಲ್ಲದಂತೆ ಕಾಡಿ ತಂಜಾವೂರು ರೈತರಿಂದ ಅಭಿನಂದನೆ ಸ್ವೀಕರಿಸಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಡಿಎಂಕೆ ಪಕ್ಷದ ಐದು ಮಂದಿ ಅಭ್ಯರ್ಥಿಗಳು ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಚೆನ್ನೈನಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಯಲಲಿತಾ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಐದು ಮಂದಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ತಮಿಳು ಭಾಷಿಗರು ಹೆಚ್ಚಾಗಿರುವ ಪ್ರದೇಶದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಪ್ರಮುಖ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ.
ನಮ್ಮ ಅಭ್ಯರ್ಥಿಗಳು ಅಸೆಂಬ್ಲಿಗೆ ಆಯ್ಕೆಯಾದರೆ ಕರ್ನಾಟಕದಲ್ಲಿ ತಮಿಳರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಲ್ಲಿ ಹೋರಾಟ ನಡೆಸಬಹುದು. ಕಾಟಾಚಾರಕ್ಕೆ ಈ ಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತಿಲ್ಲ ಎಂದು ಸೆಲ್ವಿ ಜಯಲಲಿತಾ ಹೇಳಿದ್ದಾರೆ.
ಈ ಹಿಂದೆ 1994ರ ಚುನಾವಣೆಯಲ್ಲಿ ಬೆಂಗಳೂರು ಗಾಂಧಿನಗರ ಕ್ಷೇತ್ರದಲ್ಲಿ ಬಿ ಮುನಿಯಪ್ಪ ಗೆದ್ದಿದ್ದರೆ ಮೂವರು ಠೇವಣಿ ಕಳೆದುಕೊಂಡಿದ್ದರು, 1999ರಲ್ಲಿ ಕೆಜಿಎಫ್ ಕ್ಷೇತ್ರದಿಂದ ಎಂ ಭಕ್ತವತ್ಸಲಂ ಗೆದ್ದಿದ್ದರೆ 12 ಮಂದಿ ಠೇವಣಿ ಕಳೆದುಕೊಂಡಿದ್ದರು. 2004 ರಲ್ಲಿ ಸ್ಪರ್ಧಿಸಿದ್ದ ಇಬ್ಬರೂ, 2008 ರಲ್ಲಿ ಸ್ಪರ್ಧಿಸಿದ್ದ 7 ಮಂದಿ ಪರಾಭಗೊಂಡಿದ್ದರು.

ಎಐಡಿಎಂಕೆ ಅಭ್ಯರ್ಥಿಗಳು ಯಾವ ಜಿಲ್ಲೆಯಲ್ಲಿ ಕಣದಲ್ಲಿ
ಬೆಂಗಳೂರು ನಗರ ವ್ಯಾಪ್ತಿಯ ಎರಡು, ಮೈಸೂರು, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಯ ತಲಾ ಒಂದು ಕ್ಷೇತ್ರಗಳಲ್ಲಿ ಎಐಡಿಎಂಕೆ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ಎಐಡಿಎಂಕೆ ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲಿ
ರಾಜಾಜಿನಗರ - ಕೆ ಮುನಿಸ್ವಾಮಿ: ಗಾಂಧಿನಗರ - ಪುಗಳೇಂದಿ : ನರಸಿಂಹರಾಜ - ರವೀಂದ್ರ ಕುಮಾರ್: ಕೆಜಿಎಫ್ - ಎಂ ಅನ್ಬು ಮತ್ತು ಹನೂರು - ಎಂ ರವಿ

ಎಐಡಿಎಂಕೆ ಅಭ್ಯರ್ಥಿಗಳು ಕಣದಲ್ಲಿ
ಈ ಹಿಂದೆ ಪಕ್ಷ ಗಾಂಧಿನಗರ, ಚಿಕ್ಕಪೇಟೆ, ಶಿವಾಜಿನಗರ, ಚಾಮರಾಜಪೇಟೆ, ವರ್ತೂರು, ಶಾಂತಿನಗರ, ರಾಜಾಜಿನಗರ, ಶಿವಮೊಗ್ಗ, ಕೆಜಿಎಫ್ ಸೇರಿದಂತೆ ಒಟ್ಟು ಹದಿನೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೆವು.

ಎಐಡಿಎಂಕೆ ಅಭ್ಯರ್ಥಿಗಳು ಕಣದಲ್ಲಿ
ಆದರೆ ಬದಲಾದ ಸನ್ನಿವೇಶದಲ್ಲಿ ಐದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ತಮಿಳುನಾಡು ಸಿಎಂ ಜಯಲಲಿತಾ ಅವರನ್ನು ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ಬರಲು ಕೋರಿದ್ದೇವೆ ಎಂದು ರಾಜ್ಯ ಎಐಡಿಎಂಕೆ ಕಾರ್ಯದರ್ಶಿ ಹೇಳಿದ್ದಾರೆ.

ಕೆಟಿಕೆ ಅಭ್ಯರ್ಥಿಗಳೂ ಕಣದಲ್ಲಿ
ಕರ್ನಾಟಕ ತಮಿಳರ ಕಚ್ಚಿ ಪಕ್ಷದ ಅಭ್ಯರ್ಥಿಗಳೂ ಕಣಕ್ಕಿಳಿಯಲಿದ್ದಾರೆ. ಇಪ್ಪತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಅಂತಿಮ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆಮಾಡಲಿದ್ದೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ್ದಾರೆ.












Click it and Unblock the Notifications