ಬಿಟಿಎಂ ಲೇಔಟ್ ಅಭ್ಯರ್ಥಿ ರವಿರೆಡ್ಡಿ ಸಂದರ್ಶನ

ಒನ್ಇಂಡಿಯಾ ಜೊತೆ ಅವರು ನಡೆಸಿದ ಮಾತುಕತೆಯಲ್ಲಿ, ತಾವು ಚುನಾವಣೆಗೆ ನಿಂತಿದ್ದೇಕೆ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜನರನ್ನು ಸೆಳೆಯಲು ಏನೇನು ಕಾರ್ಯಕ್ರಮ ಹಾಕಿಕೊಂಡಿದ್ದಾರೆ, ಪ್ರಚಾರ ಕಾರ್ಯವನ್ನು ಹೇಗೆ ಕೈಗೊಂಡಿದ್ದಾರೆ ಎಂಬ ಕುರಿತು ವಿಸ್ತೃತವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಸ್ವಚ್ಛ ಆಡಳಿತ ಕೊಡುವ, ಭ್ರಷ್ಟಾಚಾರವನ್ನು ವಿರೋಧಿಸುವ ಅಭ್ಯರ್ಥಿಯನ್ನು ಪ್ರಜ್ಞಾವಂತ ಮತದಾರರು ಈ ಬಾರಿ ಖಂಡಿತ ಕೈಬಿಡುವುದಿಲ್ಲ ಎಂಬುದು ರವಿ ಕೃಷ್ಣಾರೆಡ್ಡಿ ಅವರ ದೃಢವಾದ ನಂಬಿಕೆ. ಸಂದರ್ಶನದ ವಿವರಗಳು ಇಲ್ಲಿವೆ.
ಪ್ರಶ್ನೆ : ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಫೂರ್ತಿ ಏನು?
ಉತ್ತರ : ಕಳೆದ ಒಂದು ದಶಕದಲ್ಲಿ ಕರ್ನಾಟಕ ಅತಿ ಕೆಟ್ಟ ರಾಜಕೀಯ ಪರಿಸ್ಥಿತಿಯನ್ನು ಕಂಡಿದೆ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ಅಧಃಪತನವಾಗಿದೆ. ಈ ಕೊಳಕು ರಾಜಕೀಯ ಸಂಸ್ಕೃತಿಯನ್ನು, ಅನೀತಿಯುಕ್ತ ರಾಜಕಾರಣವನ್ನು ನಾವೆಲ್ಲ ಸೇರಿ ಬದಲಾಯಿಸಬೇಕಿದೆ. ಇಲ್ಲದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವವಾಗಲಿ, ಶಾಂತಿ ಮತ್ತು ಘನತೆಯುಕ್ತ ಜೀವನವಾಗಲಿ ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಪರಿಕಲ್ಪನೆ ಇರುವ, ನ್ಯಾಯಾನ್ಯಾಯ ವಿವೇಚನೆ ಇರುವ ಯೋಗ್ಯರು ರಾಜಕೀಯ ಕ್ಷೇತ್ರಕ್ಕೆ ಬಂದು ಇಲ್ಲಿ ಒಂದು ಮೌಲ್ಯಾಧಾರಿತ ರಾಜಕೀಯ ಪರ್ಯಾಯ ನೀಡಬೇಕಿದೆ. ನಮ್ಮ ಇಂದಿನ ಬಹುತೇಕ ರಾಜಕಾರಣಿಗಳು ರಿಯಲ್ ಎಸ್ಟೇಟ್ ಮತ್ತು ಗಣಿ ಮಾಫಿಯಾದವರು, ಅನೈತಿಕ ಮಾರ್ಗಗಳಿಂದ ಮತ್ತು ಅಧಿಕಾರ ದುರುಪಯೋಗದಿಂದ ಹಣ ಮಾಡಿದ ಭ್ರಷ್ಟ ರಾಜಕಾರಣಿಗಳು, ಮತ್ತು ಅವರ ಕುಟುಂಬದವರೇ ಆಗಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಕಲ್ಪನೆಯಾಗಲಿ, ಜನರ ಕಲ್ಯಾಣದ ಕಾಳಜಿಗಳಾಗಲಿ ಇಲ್ಲ. ವಿದ್ಯಾವಂತ, ಯೋಗ್ಯ, ತಿಳಿವಳಿಕಸ್ಥ, ಸ್ವಚ್ಛ ಮತ್ತು ನೀತಿವಂತ ಸಮಾಜ ಬಯಸುವ ಜನ ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬಂದು ನಾಯಕತ್ವ ನೀಡಲು ಮುಂದಾದರೆ ಮಾತ್ರ ನಮ್ಮ ಈಗಿನ ಭ್ರಷ್ಟ ರಾಜಕೀಯ ವ್ಯವಸ್ಥೆ ಬದಲಾಗುತ್ತದೆ.
ಪ್ರ : ಚುನಾವಣೆಗೆ ಹಣ ಅಗತ್ಯವಿರುವುದರಿಂದ ನಿಮ್ಮ ಪ್ರಚಾರ ಹೇಗಿರುತ್ತದೆ?
ಉ : ಚುನಾವಣಾ ಆಯೋಗದ ಪ್ರಕಾರ ಒಬ್ಬ ಎಮ್‍ಎಲ್‍ಎ ಅಭ್ಯರ್ಥಿ ಕೇವಲ 16 ಲಕ್ಷ ರೂಪಾಯಿಯಲ್ಲಿ ತನ್ನ ಚುನಾವಣಾ ಖರ್ಚುಗಳನ್ನು ನಿಭಾಯಿಸಬೇಕು. ಆದರೆ ನಮ್ಮ ಬಹುತೇಕ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕೆಲವು ಪಕ್ಷೇತರ ಅಭ್ಯರ್ಥಿಗಳು ಹತ್ತಾರು ಕೋಟಿಗಳನ್ನು ಕಾನೂನು ಬಾಹಿರವಾಗಿ ಚುನಾವಣೆಗೆ ಖರ್ಚು ಮಾಡುವುದು ನಮಗೆಲ್ಲ ತಿಳಿದಿರುವ ವಿಷಯವೆ. ಅವರು ಈ ಹಣವನ್ನು ತಮ್ಮ ಮತ್ತು ತಮ್ಮ ಪಕ್ಷದ ಪ್ರಚಾರಕ್ಕೆಂದು ಬಳಸುವುದಿಲ್ಲ. ಬದಲಿಗೆ ಓಟು ಕೊಳ್ಳಲೆಂದು ಬಳಸುತ್ತಾರೆ. ಹಣ ನಿಡುವುದು, ಸೀರೆ-ಉಂಗುರ-ಹೆಂಡ ಹಂಚುವುದು, ಬಾಡೂಟ-ಭೋಜನಗಳನ್ನು ಏರ್ಪಡಿಸುವುದು, ಮತದಾರರನ್ನು ದೂರದ ಊರುಗಳಿಗೆ ಮೋಜಿನ ಪ್ರವಾಸ ಕರೆದುಕೊಂಡು ಹೋಗುವುದು, ಇತ್ಯಾದಿ ಅನೈತಿಕ ಆಮಿಷಗಳನ್ನು ಒಡ್ದಲು ಬಳಸುತ್ತಾರೆ. ಇವ್ಯಾವುದನ್ನೂ ಮಾಡದೆ ಕೇವಲ ಚುನಾವಣಾ ಪ್ರಚಾರ ಮಾಡಿದರೆ 16 ಲಕ್ಷ ರೂಪಾಯಿಯಲ್ಲಿಯೇ ಒಬ್ಬ ಅಭ್ಯರ್ಥಿ ಉತ್ತಮ ಪ್ರಚಾರ ಮಾಡಬಹುದು. ನಾನು ನನ್ನ ಚುನಾವಣಾ ಖರ್ಚುಗಳನ್ನು ಜನರ ದೇಣಿಗೆ ಮತ್ತು ಸಹಾಯದಿಂದ ನಡೆಸಲು ತೀರ್ಮಾನಿಸಿದ್ದೇನೆ. ಈಗಾಗಲೆ ಜನ ಹಣ ನೀಡಲು ಮುಂದೆ ಬರುತ್ತಿದ್ದಾರೆ ಮತ್ತು ನಾವು ಪ್ರತಿಯೊಂದು ದೇಣಿಗೆ ಮತ್ತು ಖರ್ಚುಗಳಿಗೆ ಲೆಕ್ಕ ಇಡುತ್ತೇವೆ ಹಾಗೂ ಆ ಎಲ್ಲಾ ವಿವರಗಳನ್ನು ನನ್ನ ವೆಬ್‌ಸೈಟ್‌ನಲ್ಲಿ (www.ravikrishnareddy.com) ಪ್ರಕಟಿಸಲಾಗುತ್ತದೆ. ಇಂತಹ ಪ್ರಯತ್ನದ ಮೂಲಕವೇ ನಾವು ಚುನಾವಣೆಯಲ್ಲಿ ಹಣದ ಪ್ರಾಬಲ್ಯವನ್ನು ನಿಲ್ಲಿಸಲು ಸಾಧ್ಯ ಎಂದು ನಾನು ನಂಬಿದ್ದೇನೆ.
ಪ್ರ : ಚುನಾವಣೆಯಲ್ಲಿ ನಗರದ ಮತದಾರರಿಗೆ ಆಸಕ್ತಿಯೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಜನರಲ್ಲಿ ಹೇಗೆ ಜಾಗೃತಿ ಬೆಳೆಸುತ್ತೀರಿ ಮತ್ತು ಮತದಾನದಲ್ಲಿ ಭಾಗವಹಿಸುವಂತೆ ಹೇಗೆ ಮಾಡುತ್ತೀರಿ?
ಉ : ಕಳೆದ ಒಂದೆರಡು ದಶಕಗಳಿಂದ ನಗರವಾಸಿ ಮತದಾರರಿಗೆ ಒಳ್ಳೆಯ ಆಯ್ಕೆಗಳೇ ಇರಲಿಲ್ಲ ಮತ್ತು ಇದು ಅವರು ಚುನಾವಣಾ ಪ್ರಕ್ರಿಯೆಯಿಂದ ದೂರ ಸರಿಯಲು ಒಂದು ಕಾರಣವಾಗಿತ್ತು. ಬಿಲ್ಡರ್ಸ್‌ಗಳು, ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳು, ಕಾಂಟ್ರಾಕ್ಟರುಗಳು, ಇಂತಹವರೇ ಪ್ರಮುಖ ರಾಜಕೀಯ ಪಕ್ಷಗಳಿಂದ ಸೀಟು ಕೊಂಡುಕೊಂಡು ಹಣದ ಆಧಾರದ ಮೇಲೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ನಗರಗಳ ಪ್ರಜ್ಞಾವಂತ ಮತದಾರರಿಗೆ ಇಂತಹ ವ್ಯಕ್ತಿಗಳ ಮೇಲೆ ನಂಬಿಕೆಯಾಗಲಿ ಮತ್ತು ಅವರು ಪ್ರತಿನಿಧಿಸಲಿರುವ ಸ್ಥಾನಕ್ಕೆ ಅರ್ಹರೆಂದಾಗಲಿ ಅನಿಸುತ್ತಿರಲಿಲ್ಲ. ಈ ಬಾರಿ ಬೆಂಗಳೂರಿನ ಅನೇಕ ಕಡೆ ನಮ್ಮ ಲೋಕ್‌ಸತ್ತಾ ಪಕ್ಷದಿಂದ ಅರ್ಹ ಮತ್ತು ಸ್ವಚ್ಛ ಅಭ್ಯರ್ಥಿಗಳನ್ನು ನಾವು ಚುನಾವಣೆಗೆ ನಿಲ್ಲಿಸುತ್ತಿದ್ದೇವೆ. ಇದು ಈ ಬಾರಿ ಬೆಂಗಳೂರಿನ ನಿರಾಸಕ್ತ ಮತದಾರರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸುತ್ತಿದ್ದು, ರಾಜ್ಯದ ಅನೈತಿಕ ರಾಜಕಾರಣದಿಂದ ರೋಸತ್ತಿರುವ ಇವರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಮತ ಹಾಕುವ ವಿಶ್ವಾಸ ನಮಗಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications