ಕ್ಷೇತ್ರ ಪರಿಚಯ: ಯಾರ ಪಾಲಿಗೆ ಒಲಿಯಲಿದೆ ಮಂಗಳೂರು ನಗರ ಉತ್ತರ?
ಈ ಹಿಂದಿನ ಸುರತ್ಕಲ್ ಕ್ಷೇತ್ರವನ್ನು ಪುನರ್ ವಿಂಗಡನೆ ಮಾಡಿ ನಂತರ ಮಂಗಳೂರು ನಗರ ಉತ್ತರ ಕ್ಷೇತ್ರವನ್ನು ರಚನೆ ಮಾಡಲಾಯಿತು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳೂರು ನಗರ ಉತ್ತರವೂ ಒಂದು.
ಸುರತ್ಕಲ್ ಬೀಚ್, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.
ಈ ಹಿಂದೆ ಸುರತ್ಕಲ್ ನಲ್ಲಿ 1985ರಲ್ಲಿ ಕಾಂಗ್ರೆಸ್ ನ ಎನ್.ಎಂ ಅಡ್ಯಂತಾಯ, 1989ರಲ್ಲಿ ಕಾಂಗ್ರೆಸ್ ನ ವಿಜಯ ಕುಮಾರ್ ಶೆಟ್ಟಿ ವಿಜಯ ಸಾಧಿಸಿದ್ದರು. 1994ರಲ್ಲಿ ಇಲ್ಲಿ ಜನಪ್ರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾವ್ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಸುರತ್ಕಲ್ ಬಿಜೆಪಿ ಪಾಲಾಯಿತು.

1999ರಲ್ಲಿ ಕುಂಬ್ಳೆ ಸುಂದರ್ ರಾವ್ ರನ್ನು ಸೋಲಿಸಿ ವಿಜಯ ಕುಮಾರ್ ಶೆಟ್ಟರು ಕಾಂಗ್ರೆಸ್ ತೆಕ್ಕೆಗೆ ಮರಳಿ ಕ್ಷೇತ್ರವನ್ನು ಗೆದ್ದುಕೊಟ್ಟರು. 2004ರಲ್ಲಿ ಇಲ್ಲಿ ಗೆದ್ದವರು ಬಿಜೆಪಿಯ ಕೃಷ್ಣ ಜೆ. ಪಾಲೆಮಾರ್. ಈ ಬಾರಿ ಮತ್ತೆ ವಿಜಯ್ ಕುಮಾರ್ ಶೆಟ್ಟಿ ಸೋಲಬೇಕಾಯಿತು.
2008ರಲ್ಲಿ ಕ್ಷೇತ್ರ ವಿಂಗಡನೆ ಆಗಿ ಮಂಗಳೂರು ನಗರ ಉತ್ತರ ಕ್ಷೇತ್ರವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಜೆ. ಕೃಷ್ಣ ಪಾಲೆಮಾರ್ ಕಾಂಗ್ರೆಸ್ ನ ಮೊಯ್ದೀನ್ ಬಾವಾ ವಿರುದ್ಧ ಗೆಲುವಿನ ನಗೆ ಬೀರಿದರು. ನಂತರ ಪಾಲೆಮಾರ್ ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
2013ರ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಮೊಯ್ದೀನ್ ಬಾವಾ ಯಶಸ್ವಿಯಾಗಿದ್ದರು. 2008ರಲ್ಲಿ 15 ಸಾವಿರ ಮತಗಳಿಂದ ಸೋತಿದ್ದ ಬಾವಾ, ಸತತ ಎರಡು ಬಾರಿ ಗೆದ್ದಿದ್ದ ಕೃಷ್ಣ ಜೆ. ಪಾಲೆಮಾರ್ ರನ್ನು 2013ರಲ್ಲಿ ಸುಮಾರು 5 ಸಾವಿರ ಮತಗಳ ಅಂತರದಿಂದ ಸೋಲಿಸಿದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಿ.ಎ. ಮೊಯ್ದೀನ್ ಬಾವಾ 69,719 ಮತಗಳನ್ನು ಪಡೆದರೆ, ಬಿಜೆಪಿಯಿಂದ ಪಾಲೆಮಾರ್ 64,524 ಮತಗಳನ್ನು ಪಡೆದಿದ್ದರು. ಮೂರನೇ ಸ್ಥಾನವನ್ನು ಎಸ್.ಡಿ.ಪಿ.ಐ ಪಡೆದಿತ್ತು, ಪಕ್ಷದ ಅಭ್ಯರ್ಥಿ ಅಬೂಬಕ್ಕರ್ 3,323 ಮತಗಳನ್ನು ಪಡೆದಿದ್ದರು.
ಸದ್ಯ ಇಲ್ಲಿ ಮೊಯ್ದೀನ್ ಬಾವಾ ಭಾರೀ ಸುದ್ದಿಯಲಿದ್ದಾರೆ. ಇದೇ ಕ್ಷೇತ್ರದಿಂದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಣಕ್ಕಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ. ಇವರು ಯಾರ ಮತಗಳನ್ನು ಕಸಿಯಲಿದ್ದಾರೆ ನೋಡಬೇಕಷ್ಟೆ. ಜತೆಗೆ ಇಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.












Click it and Unblock the Notifications