ಕ್ಷೇತ್ರ ಪರಿಚಯ: ಕುಂದಾಪುರದಲ್ಲಿ ಈ ಬಾರಿಯೂ ಹಾಲಾಡಿ ನಾಗಾಲೋಟ?
ಸುಂದರವಾದ ಕುಂದಗನ್ನಡ ಭಾಷೆಯನ್ನು ಕುಂದಾಪುರದಲ್ಲಿ ಕಾಣಬಹುದಾಗಿದೆ. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಸಾಲಿಗ್ರಾಮದ ಗುರುನರಸಿಂಹ ಹಾಗೂ ಆಂಜನೇಯ ದೇವಾಲಯಗಳು ಇಲ್ಲಿವೆ.
ಸುಂದರ ಕಡಲನ್ನು ಹೊಂದಿರುವ ತಾಲೂಕು ಕುಂದಾಪುರ. ತ್ರಾಸಿ ಕಡಲ ತೀರ, ಮರವಂತೆ ಬೀಚ್, ಗಂಗೊಳ್ಳಿಯ ಹಿನ್ನೀರು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆ. ಕುಂದಾಪುರ ಮತ್ತು ಇಲ್ಲಿನ ಬಸ್ರೂರು ಅನಾದಿ ರಾಜರ ಕಾಲದಿಂದಲೂ ವ್ಯಾಪಾರಿ ಕೇಂದ್ರವಾಗಿ ಜನಪ್ರಿಯವಾಗಿತ್ತು. ಕುಂದಾಪುರ ಸ್ವಲ್ಪ ಮಟ್ಟಿಗೆ ನಕ್ಸಲ್ ಪೀಡಿತ ತಾಲೂಕೂ ಹೌದು.
ಕುಂದಾಪುರ ರಾಜಕೀಯ ಇತಿಹಾಸವನ್ನು ನೋಡಿದರೆ ಇಲ್ಲಿ 1983, 85, 89, 1994ರಲ್ಲಿ ಕಾಂಗ್ರೆಸಿನ ಕೆ. ಪ್ರತಾಪ್ ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಹೀಗೆ ನಾಲ್ಕು ಬಾರಿ ಗೆದ್ದಿದ್ದ ಪ್ರತಾಪ್ ಚಂದ್ರ ಶೆಟ್ಟಿಗೆ 1999ರಲ್ಲಿ ಕಣಕ್ಕಿಳಿದ ಮೊದಲ ಚುನಾವಣೆಯಲ್ಲೇ ಸೋಲುಣಿಸಿದವರು ಕೆಲವೇ ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ.

1999ರಲ್ಲಿ 1 ಸಾವಿರ ಮತಗಳಿಂದ ಪ್ರತಾಪ್ ಚಂದ್ರ ಶೆಟ್ಟಿಗೆ ಸೋಲುಣಿಸಿದ ಹಾಲಾಡಿ, 2004ರಲ್ಲಿ ಗೆಲುವಿನ ಅಂತರವನ್ನು 20 ಸಾವಿರಕ್ಕೆ ವಿಸ್ತರಿಸಿಕೊಂಡರು. 2008ರಲ್ಲಿ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದ ಪ್ರಭಾವಿ ರಾಜಕಾರಣ ಕೆ. ಜಯಪ್ರಕಾಶ್ ಹೆಗ್ಡೆಯನ್ನೇ 25 ಸಾವಿರ ಮತಗಳಿಂದ ಮಣ್ಣುಮುಕ್ಕಿಸಿದರು ಹಾಲಾಡಿ.
ಹೀಗೆ ಮೂರು ಬಾರಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ 2012ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಕೊನೆಗೆ ಕೊನೆಯ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಹೀಗಾಗಿ ಸಚಿವ ಸ್ಥಾನ ನೀಡದ್ದಕ್ಕೆ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನೇ ತೊರೆದಿದ್ದರು.
ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನಗಳು ನಡೆದಿತ್ತು. ಆದರೆ, ಪ್ರಯತ್ನಗಳಷ್ಟೂ ನೆಲಕಚ್ಚಿ ಹಾಲಾಡಿ ಕೇಸರಿ ಪಾಳಯ ತೊರೆದಿದ್ದರು.
ಮುಂದೆ 2013ರ ವಿಧಾನಸಭೆ ಚುನಾವಣೆಗೆ ಸ್ವತಂತ್ರವಾಗಿ ಕಣಕ್ಕಿಳಿದು 89 ಸಾವಿರ ಮತಗಳನ್ನು ಪಡೆದು 40 ಸಾವಿರ ಮತಗಳ ಅಂತರದಿಂದ ಹಾಲಾಡಿ ಭಾರೀ ಜಯ ದಾಖಲಿಸಿದ್ದರು. ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದು ಹಾಲಾಡಿ ವೈಯಕ್ತಿಕ ವರ್ಚಸ್ಸಿಗೆ ಕನ್ನಡಿ ಹಿಡಿದಂತಿತ್ತು.
ಸದ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿಯೂ ಅವರು ಗಳಿಸಿದ ಭರ್ಜರಿ ಗೆಲುವು ನೋಡಿದರೆ, ಜತೆಗೆ ಇದೀಗ ಬಿಜೆಪಿಗೂ ಬಂದಿರುವುದರಿಂದ ಅವರು ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.
ಕಾಂಗ್ರೆಸ್ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ತಡೆಯೊಡ್ಡುತ್ತಾ ನೋಡಬೇಕಷ್ಟೆ.











Click it and Unblock the Notifications