ಕ್ಷೇತ್ರ ಪರಿಚಯ : ಎತ್ತಿನಹೊಳೆ ನೀರಿಗಾಗಿ ಜನ ಕಾದು ಕುಳಿತಿದ್ದಾರೆ
ಶಾಶ್ವತ ನೀರಾವರಿ ಯೋಜನೆ ಇಲ್ಲದ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ. ಜಿಲ್ಲೆಯಲ್ಲಿ ಒಟ್ಟು 754 ಕೆರೆಗಳಿವೆ. ದೊಡ್ಡ ಬಳ್ಳಾಪುರ ಕ್ಷೇತ್ರದ ಜನರಿಗೆ ಕೆರೆಗಳು ಜೀವಸೆಲೆ.
ದೊಡ್ಡಬಳ್ಳಾಪುರದ ಕೆಲವು ಕೆರೆಗಳಲ್ಲಿ ಮಾತ್ರ ಮಳೆಯ ನೀರು ಸಂಗ್ರಹವಾಗುತ್ತಿದೆ. ಭತ್ತ, ತೆಂಗು ಬೆಳೆಯಿಂದ ಸುಂದರವಾಗಿ ಕಾಣುತ್ತಿದ್ದ ಕ್ಷೇತ್ರದಲ್ಲಿ ಇಂದು ನೀಲಗಿರಿ ಬೆಳೆದು ನಿಂತಿದೆ. ಕೆರೆ ಒತ್ತುವರಿಯಾಗಿ ಅಕ್ರಮ ಮರಳು ಸಾಗಣೆಗೆ ಸಾಕ್ಷಿಯಾಗುತ್ತಿದೆ.
ಅರ್ಕಾವತಿ, ಕಣ್ವ ಮತ್ತು ದಕ್ಷಿಣ ಪಿನಾಕಿನಿ ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿದ್ದವು. ನದಿಗಳ ನೀರನ್ನು ಅವಲಂಬಿಸಿ ಭತ್ತ ಬೆಳೆಯಲಾಗುತ್ತಿತ್ತು. ಈಗ ನದಿಗಳು ಬತ್ತಿ ಹೋಗಿವೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 73 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ.

ಕರಾವಳಿಯಿಂದ ನೇತ್ರಾವತಿ ನೀರು 'ಎತ್ತಿನಹೊಳೆ ಯೋಜನೆ' ಮೂಲಕ ಹರಿದುಬರುತ್ತದೆ ಎಂದು ಜನರು ಕಾದು ಕುಳಿತಿದ್ದಾರೆ. ನಿರುದ್ಯೋಗದ ಸಮಸ್ಯೆ ಇಲ್ಲ, ಬೆಳಗ್ಗೆ ಬ್ಯಾಗು ಹಿಡಿದು ಬೆಂಗಳೂರು ಬಸ್ ಹತ್ತಬಹುದು.
ಜೆಡಿಎಸ್ ನಾಯಕ, ಮಾಜಿ ಸಚಿವ ಚೆನ್ನಿಗಪ್ಪ ಅವರು ತವರು ಕ್ಷೇತ್ರವಿದು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿತ್ತು. ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ, ಬಂಡಾಯ ಅಭ್ಯರ್ಥಿ ಇಬ್ಬರೂ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಚುನಾವಣೆಯಲ್ಲಿ ಸಿ.ಚೆನ್ನಿಗಪ್ಪ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನ ಟಿ.ವೆಂಕಟರಾಮಯ್ಯ ವಿರುದ್ಧ ಸೋಲು ಅನುಭವಿಸಿದ್ದರು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮುನೇಗೌಡ ಅವರು ಸೋತಿದ್ದರು.
ಬಿಜೆಯಪಿಯ ಜೆ.ನರಸಿಂಹ ಸ್ವಾಮಿ ಅವರು ಕಳೆದ ಬಾರಿ ಸೋತಿದ್ದರು. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿ ಮತ್ತು ಜೆಡಿಎಸ್ ಯಾವ ತಂತ್ರವನ್ನು ಮಾಡುತ್ತವೆ? ಎಂದು ಕಾದು ನೋಡಬೇಕು.
ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಪರವಾದ ಅಲೆ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೆಂಕಟರಾಮಯ್ಯ ಬೆಂಬಲಿಗರು ಗೆದ್ದು ಬಂದಿದ್ದಾರೆ. ಜೆಡಿಎಸ್ ಯಾರಿಗೆ ಟಿಕೆಟ್ ನೀಡುತ್ತದೆ? ಎಂಬುದು ಸದ್ಯದ ಕುತೂಹಲ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆ ಇದೆ.
2013ರ ಚುನಾವಣೆಯಲ್ಲಿ ಟಿ.ವೆಂಕಟರಮಣಯ್ಯ 38,877 ಮತಗಳನ್ನು ಪಡೆದಿದ್ದರು. ಬಿಜೆಪಿಯ ಜೆ.ನರಸಿಂಹಸ್ವಾಮಿ 32,753, ಜೆಡಿಎಸ್‌ನ ಸಿ.ಚೆನ್ನಿಗಪ್ಪ 34,628 ಮತಗಳನ್ನು ಪಡೆದಿದ್ದರು.












Click it and Unblock the Notifications