ಸಿ.ವಿ. ರಾಮನ್‌ನಗರ ಕ್ಷೇತ್ರ: ಇಲ್ಲಿ ಬಂಡಾಯದ ಬಾವುಟದ್ದೇ ಹಾರಾಟ
ಬೆಂಗಳೂರು, ಏಪ್ರಿಲ್ 23: ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದ ಕುತೂಹಲ ಕೆರಳಿಸಿರುವ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣ. ಈ ಮಧ್ಯೆ ಜೆಡಿಎಸ್ ಕೂಡ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಮೂಡಿಸಿದೆ.
ಎರಡು ಬಾರಿ ಗೆದ್ದಿರುವ ಬಿಜೆಪಿಯ ಎಸ್. ರಘು ಮತ್ತೊಂದು ಜಯದೊಂದಿಗೆ ಹ್ಯಾಟ್ರಿಕ್ ಬಾರಿಸುವ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ಎಚ್.ಸಿ. ಮಹದೇವಪ್ಪ ಅವರಿಗೆ ಮಣೆ ಹಾಕಿದೆ. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯವೆದ್ದು ಜೆಡಿಎಸ್ ಸೇರ್ಪಡೆಯಾಗಿರುವ ಪಿ. ರಮೇಶ್, ಕಾಂಗ್ರೆಸ್ಅನ್ನು ಸೋಲಿಸುವ ಶಪಥ ಮಾಡಿದ್ದಾರೆ. ಬಿಜೆಪಿಯಲ್ಲಿಯೂ ಬಂಡಾಯದ ನಡೆಗಳು ಪರಿಣಾಮ ಬೀರುವ ಸಾಧ್ಯತೆ ಇದೆ.
ಕ್ಷೇತ್ರದ ಏಳು ಬಿಬಿಎಂಪಿ ವಾರ್ಡ್‌ಗಳ ಪೈಕಿ, ಬಿಜೆಪಿ ಸದಸ್ಯರು ಆಯ್ಕೆಯಾಗಿರುವುದು ಮೂರು ಕ್ಷೇತ್ರಗಳಲ್ಲಿ ಮಾತ್ರ. ಶಾಸಕ ಎಸ್. ರಘು ವಿರುದ್ಧ ಅಸಮಾಧಾನಗೊಂಡಿದ್ದ ಚಂದ್ರಪ್ಪ ರೆಡ್ಡಿ ಪಕ್ಷೇತರರಾಗಿ ಕೋನೇನ ಅಗ್ರಹಾರದಿಂದ ಸ್ಪರ್ಧಿಸಿ ಗೆದ್ದಿದ್ದರು. ಇದು ಬಿಜೆಪಿಗೆ ಹಿನ್ನಡೆಯುಂಟು ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಿಂದ ಸಚಿವ ಎಚ್.ಸಿ. ಮಹದೇವಪ್ಪ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಕ್ಷೇತ್ರದೆಲ್ಲೆಡೆ ಅವರ ಕಟೌಟ್‌ಗಳನ್ನೂ ಹಾಕಿಸಲಾಗಿತ್ತು. ಆದರೆ ಹೈಕಮಾಂಡ್ ಮೇಯರ್ ಸಂಪತ್ ರಾಜ್ ಅವರ ಹೆಸರನ್ನು ಅಂತಿಮಗೊಳಿಸಿದೆ.
ಸಮಸ್ಯೆಗಳಿಗೆ ಕೊರತೆಯಿಲ್ಲ:
ಕುಡಿಯುವ ನೀರಿನ ಸಮಸ್ಯೆ, ಕಸ ನಿರ್ವಹಣೆ ಸಮಸ್ಯೆ, ಸಂಚಾರ ದಟ್ಟಣೆ ಇಲ್ಲಿ ತೀವ್ರವಾಗಿದೆ. ನಮ್ಮ ಮೆಟ್ರೊ ಕಾಮಗಾರಿ ಮುಗಿದಿದ್ದರೂ ಹಳೆ ಮದ್ರಾಸ್ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿಯೇ ಇದೆ. ಪ್ರತಿ ಬಾರಿ ಮಳೆ ಬಂದಾಗಲೂ ಕೋನೇನ ಅಗ್ರಹಾರ, ನ್ಯೂ ತಿಪ್ಪಸಂದ್ರ ಮುಂತಾದ ವಾರ್ಡ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗುವುದರಿಂದ ಜನರು ತೊಂದರೆ ಅನುಭವಿಸುವುದು ಮಾಮೂಲಿಯಾಗಿದೆ. ವಿವಿಧೆಡೆ ಮೂಲಸೌಕರ್ಯದ ಕೊರತೆ ತೀವ್ರವಾಗಿದೆ. ಮಲ್ಲೇಶಪಾಳ್ಯ ರಸ್ತೆ ವಿಸ್ತರಣೆ ಸೇರಿದಂತೆ ವಿವಿಧ ರಸ್ತೆಗಳು ಡಾಂಬರ್ ಮತ್ತು ಕಾಂಕ್ರೀಟ್ ಕಂಡಿವೆ.
ಸಿ.ವಿ. ರಾಮನ್‌ನಗರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಸರಿಸಮನಾಗಿ ತೆಲುಗು ಮತ್ತು ತಮಿಳು ಭಾಷಿಕರೂ ಇದ್ದಾರೆ. ಇದು ಅಪಾರ್ಟ್‌ಮೆಂಟ್‌ಗಳ ಕ್ಷೇತ್ರ. ಐಟಿ ಮತ್ತು ಬಿಟಿ ವಲಯದ ಹೆಚ್ಚಿನ ಉದ್ಯೋಗಿಗಳು ಇಲ್ಲಿ ನೆಲೆಸಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜನಸಂಖ್ಯೆ 1 ಲಕ್ಷಕ್ಕೂ ಅಧಿಕವಿದೆ. ಸುಮಾರು 35 ಸಾವಿರ ಲಿಂಗಾಯತ ಮತಗಳಿವೆ.
ವಾರ್ಡ್‌ಗಳು: ಬೆನ್ನಿಗಾನಹಳ್ಳಿ, ಸಿವಿ ರಾಮನ್‌ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳ ನಗರ, ಕೋನೇನ ಅಗ್ರಹಾರ ಮತ್ತು ಜೀವನ್‌ಬಿಮಾ ನಗರ ಈ ಕ್ಷೇತ್ರದಲ್ಲಿನ ಏಳು ವಾರ್ಡ್‌ಗಳು.
ಹಾಲಿ ಶಾಸಕ: ಎಸ್. ರಘು (ಬಿಜೆಪಿ), ಸೋತ ಅಭ್ಯರ್ಥಿ ಪಿ. ರಮೇಶ್ (ಕಾಂಗ್ರೆಸ್)
ಈ ಬಾರಿ ಅಭ್ಯರ್ಥಿಗಳು: ಎಸ್. ರಘು (ಬಿಜೆಪಿ), ಸಂಪತ್ ರಾಜ್ (ಕಾಂಗ್ರೆಸ್), ಪಿ. ರಮೇಶ್ (ಜೆಡಿಎಸ್), ಮೋಹನ ದಾಸರಿ (ಎಎಪಿ)
2013ರ ಚುನಾವಣೆಯಲ್ಲಿ: ಬಿಜೆಪಿಗೆ ದೊರೆತ ಮತಗಳು 53,364. ಕಾಂಗ್ರೆಸ್ ದೊರೆತ ಮತಗಳು 44,945.
ಕ್ಷೇತ್ರದಲ್ಲಿರುವ ಒಟ್ಟು ಮತದಾರರು: 2,60, 559. ಪುರುಷರು: 1.37 ಲಕ್ಷ, ಮಹಿಳೆಯರು: 1.22 ಲಕ್ಷ.












Click it and Unblock the Notifications