ದಿಲ್ಲಿ ಗ್ಯಾಂಗ್ ರೇಪ್ ಶಿಕ್ಷೆಗೆ ಕರ್ನಾಟಕ ವೈದ್ಯನ ಕಾಣಿಕೆ

ಹೌದು ಈ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವಲ್ಲಿ ಧಾರವಾಡದ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜಿನ ದಂತ ವೈದ್ಯಕೀಯ ವಿಧಿವಿಜ್ಞಾನ ತಜ್ಞರೊಬ್ಬರು (Sri Dharmasthala Manjunatheshwara College of Dental Sciences and Hospital) ಸಲ್ಲಿಸಿದ್ದ ವರದಿ ಪ್ರಮುಖ ಪಾತ್ರ ವಹಿಸಿದೆ.
ಡಿಸೆಂಬರ್ 16ರಂದು ಏನಾಗಿತ್ತೆಂದರೆ ಅತ್ಯಾಚಾರಕ್ಕೀಡಾದ ಯುವತಿಯ ದೇಹದಲ್ಲಿ ಕಚ್ಚಿದ ಗಾಯದ ಗುರುತುಗಳು ಇದ್ದವು. ಇವು ಆರೋಪಿಗಳ ಹಲ್ಲುಗಳದ್ದೇ ಗುರುತು ಎಂದು ಸಾಬೀತು ಪಡಿಸಬೇಕಿತ್ತು. ಅದಕ್ಕೆ ದೆಹಲಿ ಪೊಲೀಸರು ಸೀದಾ ಧಾರವಾಡ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜಿನಲ್ಲಿ ಯುವ ದಂತವೈದ್ಯ ಆಶಿತ್ ಆಚಾರ್ಯ ಅವರನ್ನು ಸಂಪರ್ಕಿಸಿದರು.
ಏಕೆಂದರೆ ಭಾರತದಲ್ಲಿ ಇಂತಹ ಪ್ರಕರಣಗಳ ಬಗ್ಗೆ ತಮ್ಮ ವಸ್ತುನಿಷ್ಠ ವರದಿಯಲ್ಲಿ ಸಲ್ಲಿಸಬಹುದಾದ ದಂತ ವೈದ್ಯರು ಕೇವಲ ನಾಲ್ಕು ಮಂದಿ ಇದ್ದಾರೆ. ಡಾ. ಆಶಿತ್ ಇವರಲ್ಲೊಬ್ಬರು. ಆರೋಪಿಗಳ ಹಲ್ಲಿನ ಮಾದರಿ ಕುರಿತು ದೇಶದ ಏಕೈಕ ವಿಶೇಷ ಪ್ರಯೋಗಾಲಯ ಸಹ ಧಾರವಾಡ ಇದೇ ಎಸ್‌ಡಿಎಂ ಕಾಲೇಜು ಆಗಿದೆ.
ಮೂಲತ ದಕ್ಷಿಣ ಕನ್ನಡದ ಪುತ್ತೂರಿನ ಆಶಿತ್ ಆಚಾರ್ಯ, ದಂತ ವೈದ್ಯಕೀಯ ಶಿಕ್ಷಣವನ್ನು ಧಾರವಾಡದ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜಿನಲ್ಲಿ ಮುಗಿಸಿ ಆಸ್ಟ್ರೇಲಿಯಾದಲ್ಲಿ ದಂತ ವೈದ್ಯಕೀಯ ವಿಧಿವಿಜ್ಞಾನ ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ ಅವರು ಧಾರವಾಡ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಬಾಧಿತ ಯುವತಿ ಆಸ್ಪತ್ರೆಗೆ ದಾಖಲಾದ ತಕ್ಷಣ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯವರು ಪ್ರಸ್ತುತ ಧಾರವಾಡ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ ಡಾ. ಆಶಿತ್ ಅವರ ಸಲಹೆ ಕೇಳಿದ್ದರು.
ಸಂತ್ರಸ್ತೆಯ ದೇಹದ ಗಾಯದ ಗುರುತುಗಳ ಕುರಿತು ಹೆಚ್ಚಿನ ಮಾಹಿತಿ ಕೇಳಿದ ಡಾ ಆಶಿತ್, ಛಾಯಾಚಿತ್ರಗಳನ್ನು ತೆಗೆದಿರಿಸುವಂತೆ ಸಲಹೆ ಕೊಟ್ಟಿದ್ದರು. ಜನವರಿ ಮೊದಲ ವಾರದಲ್ಲಿ ಕರೆ ಮಾಡಿದ ದೆಹಲಿ ಪೊಲೀಸರು ತನಿಖೆಗೆ ಸಹಾಯ ಮಾಡುವಂತೆಯೂ ವಿನಂತಿಸಿದ್ದರು.
ದೇಶದ ಏಕೈಕ ವಿಶಿಷ್ಟ ಪ್ರಯೋಗಾಲಯ:
ದೆಹಲಿ ಪೊಲೀಸರು ತಂದ ಫೋಟೋಗಳು ಹಾಗೂ ಆರೋಪಿಗಳ ಹಲ್ಲಿನ ಮಾದರಿ ಕುರಿತು ಧಾರವಾಡದಲ್ಲಿರುವ ದೇಶದ ಏಕೈಕ ವಿಶೇಷ ಪ್ರಯೋಗಾಲಯದಲ್ಲಿ ಅವರು ಕೂಲಂಕಷ ಅಧ್ಯಯನ ನಡೆಸಿದ್ದರು. ಆರೋಪಿಗಳ ಹಲ್ಲಿನ ನಮೂನೆಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಮಾದರಿ ತಯಾರಿಸಿದರು. ಸಂತ್ರಸ್ತೆಯ ದೇಹದ ಮೇಲಿದ್ದ 5 ಗಾಯಗಳ ವಿವರಗಳನ್ನು ಪರಿಶೀಲಿಸಿ ಪರೀಕ್ಷೆ ನಡೆಸಿದ್ದರು.
ಕಂಪ್ಯೂಟರ್ ಮೂಲಕ ಇನ್ನಷ್ಟು ಆಳವಾಗಿ ತಪಾಸಣೆ ನಡೆಸಿದಾಗ ಗಾಯದ ಗುರುತಿನ ಜತೆ ಇಬ್ಬರು ಆರೋಪಿಗಳ ಹಲ್ಲಿನ ನಮೂನೆ ತಾಳೆಯಾಗುವುದು ಪತ್ತೆಯಾಯಿತು. ನಂತರ 6 ದಿನ ವಿವಿಧ ಕೋನದಲ್ಲಿ ತುಲನೆ ಮಾಡಿದ ಡಾ ಆಶಿತ್ ವರದಿ ನೀಡಿದ್ದರು.
ಆಶಿತ್ ವರದಿಯನ್ನಷ್ಟೇ ಸಲ್ಲಿಸಿ ಸುಮ್ಮನಾಗಲಿಲ್ಲ:
ಮೇ ಮೊದಲ ವಾರದಲ್ಲಿ ದಿಲ್ಲಿ ತ್ವರಿತ ನ್ಯಾಯಾಲಯಕ್ಕೆ ತೆರಳಿ, ಪರಿಣತ ಸಾಕ್ಷಿಯಾಗಿ ವಿವರ ನೀಡಿದ್ದ ಡಾ. ಆಶಿತ್ ಅವರನ್ನು ಆರೋಪಿಗಳ ಪರ ವಕೀಲರು ಒಂದೂವರೆ ಗಂಟೆ ಕಾಲ ಪ್ರಶ್ನಿಸಿದ್ದರು. ನ್ಯಾಯಾಧೀಶರೂ ಕೆಲವು ಸಂಶಯಗಳನ್ನು ಪರಿಹರಿಸಿಕೊಂಡಿದ್ದರು. ಅತ್ಯಾಚಾರದಲ್ಲಿ ದಂತ ವೈದ್ಯಕೀಯ ವಿಧಿ ವಿಜ್ಞಾನವನ್ನು ನ್ಯಾಯಾಲಯ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿರುವುದು ದಂತ ವೈದ್ಯಕೀಯ ವಿಜ್ಞಾನಕ್ಕೆ ಸಂದ ಗೌರವವೂ ಆಗಿದೆ.
ದಿಲ್ಲಿ ಪ್ರಕರಣದ ತನಿಖೆಗೆ ಎಸ್‌ಡಿಎಂ ಡೆಂಟಲ್ ಕಾಲೇಜಿನ ಡಾ| ಆಶಿತ್ ಆಚಾರ್ಯ ಅವರ ಶ್ರಮ ಇದೆ ಎಂದು ತಿಳಿದು ಸಂತಸವಾಯಿತು. ಅತ್ಯಾಚಾರ ಪ್ರಕರಣದ ತೀರ್ಪು ಹೊರಬರುವಲ್ಲಿ, ಆರೋಪಿಗಳಿಗೆ ಶಿಕ್ಷೆ ಆಗುವಲ್ಲಿ ನಮ್ಮ ಕಾಲೇಜಿನ ಪಾತ್ರ ಇರುವುದು ಖುಷಿ ಕೊಟ್ಟಿದೆ. ಇದೇ ರೀತಿ ಮುಂದೆಯೂ ನಮ್ಮ ಸಂಸ್ಥೆ ಪೊಲೀಸರಿಗೆ ನೆರವಾಗಲಿ. ಅಪರಾಧಿಗಳಿಗೆ ಶಿಕ್ಷೆಯಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಆಶಿಸಿದ್ದಾರೆ.












Click it and Unblock the Notifications