• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೈ ಎಂಬ ಕಂಠಲಂಗೋಟಿ !

By Staff
|
Srivathsa Joshi *ಶ್ರೀವತ್ಸ ಜೋಶಿ

Tie - To get literally tied-up?ತಲೆ ಬರಹದಲ್ಲಿರುವ ಆ ಆಶ್ಚರ್ಯ ಸೂಚಕ ಚಿಹ್ನೆಯನ್ನೇ ತಲೆಕೆಳಗಾಗಿಸಿದರೆ ಅದೊಂದು ಟೈ ಧರಿಸಿರುವ ಮನುಷ್ಯನ ಸೂಕ್ಷ್ಮಾತಿಸೂಕ್ಷ್ಮ ರೂಪದಂತೆ ಕಾಣುವುದಿಲ್ಲವೆ ? ಟೈ ಎಂಬ ‘ಕಂಠಕೌಪೀನ’ ಅಥವಾ ‘ಕಂಠಲಂಗೋಟಿ’ಯ ಚರಿತ್ರೆ, ಒಂದಿಷ್ಟು ವ್ಯಾಖ್ಯಾನ - ಈ ವಾರದ ಸಾಮಗ್ರಿ.

ಹೆಚ್ಚಾಗಿ ಯುದ್ಧ ಸಾವು ನೋವುಗಳ ನೆನಪನ್ನಷ್ಟೇ ಉಳಿಸಿಹೋಗುತ್ತದೆ. ಆದರೆ ಯುದ್ಧವೊಂದು ಫ್ಯಾಷನ್‌ ಜಗತ್ತಿಗೆ ನೆನಪುಳಿಯುವಂಥದೊಂದನ್ನು ಕೊಟ್ಟಿದೆಯೆಂದರೆ ಆಶ್ಚರ್ಯವಾಗುತ್ತದಲ್ಲವೆ? ಹೌದು, ಇಂದು ಜಗಜನಿತವಾದ, ಪುರುಷ-ಗಾಂಭೀರ್ಯದ ಸಂಕೇತವಾದ ತೊಡುಗೆ ‘ಟೈ’, ಯುರೋಪ್‌ನಲ್ಲಿ 17ನೇ ಶತಮಾನದಲ್ಲಿ ನಡೆದ ಯುದ್ಧವೊಂದರ ಕೊಡುಗೆ!

Croatian warrior wearing red croat1660ರಲ್ಲಿ ಘನಘೋರ ಕದನದ ನಂತರ ಟರ್ಕಿ ದೇಶವನ್ನು ಗೆದ್ದ ಸಾಮಂತ ದೇಶ ಕ್ರೋಯೇಷಿಯಾ ತನ್ನ ಚಕ್ರವರ್ತಿ ‘14ನೇ ಲೂಯಿಸ್‌’ನನ್ನು ಭೇಟಿಯಾಗಿ ವಿಜಯವಾರ್ತೆಯನ್ನೊಪ್ಪಿಸಲು ಸೇನಾ ತುಕಡಿಯಾಂದನ್ನು ಪ್ಯಾರಿಸ್‌ಗೆ ಕಳಿಸಿತು. ಆ ರೆಜಿಮೆಂಟ್‌ನ ಸೈನಿಕರು ಸ್ಕಾರ್ಫ್‌ ಅಥವಾ ಕರವಸ್ತ್ರದಂತಿದ್ದ, ಕಡುಬಣ್ಣದ ರೇಷ್ಮೆ ಬಟ್ಟೆ ತುಂಡನ್ನು ಕುತ್ತಿಗೆಯ ಸುತ್ತ ಕಟ್ಟಿಕೊಂಡಿದ್ದರು. ಸೈನಿಕರ ‘ಗೆಟ್‌ಅಪ್‌’ ಈ ಬಟ್ಟೆ ತುಂಡಿಂದ ಪರಿಣಾಮಕಾರಿಯಾಗಿ ಹೆಚ್ಚುತ್ತದೆಯೆಂದು ಪ್ರಶಂಸಿಸಿದ ಲೂಯಿಸ್‌-14, ಫ್ರಾನ್ಸ್‌ನ ಸೇನೆಗೂ ಈ ವೇಷಭೂಷಣವನ್ನು ಅಳವಡಿಸಿಕೊಳ್ಳುವಂತೆ ಆಜ್ಞಾಪಿಸಿದ. Cravat ಎಂಬ ಫ್ರೆಂಚ್‌ ಪದ (ಮೂಲ Croat -> Croatia)ಹೊಸ ತೊಡುಗೆಯ ಹೆಸರಾಯಿತು.

ಫ್ರಾನ್ಸ್‌ನಿಂದ ಈ ಹೊಸ ಫ್ಯಾಷನ್‌ ಇಂಗ್ಲೆಂಡ್‌ಗೆ ಬರುವುದು ತಡವಾಗಲಿಲ್ಲ. ಚಾಣಾಕ್ಷ ಇಂಗ್ಲಿಷ್‌ ಸೈನಿಕರು ಈ ಕೊರಳಪಟ್ಟಿ ವಸ್ತ್ರವನ್ನೇ ಆದಷ್ಟು ದಪ್ಪವಾಗಿ ಕಟ್ಟಿ, ಕುತ್ತಿಗೆಯನ್ನು ಖಡ್ಗದ ಇರಿತದಿಂದ ರಕ್ಷಿಸಿಕೊಳ್ಳುವುದಕ್ಕೂ ಬಳಸಿಕೊಂಡರು. ಬ್ರಿಟಿಷ್‌ ಸಾಮ್ರಾಜ್ಯದಲ್ಲಿ ಸೈನಿಕರು ಮಾತ್ರವಲ್ಲದೆ ಪೌರರೆಲ್ಲ ಇದನ್ನು ಧರಿಸತೊಡಗಿದರು. ಅದೊಂದು ಪುರುಷ-ಪ್ರತಿಷ್ಠೆಯ ಸಂಕೇತವಾಯ್ತು. Neck-tie ಎಂದು ನಮಗೆಲ್ಲ ಗೊತ್ತಿರುವ ಇಂಗ್ಲಿಷ್‌ ಶಬ್ದ ಬಳಕೆಗೆ ಬಂತು. ಟೈಯ ಬಣ್ಣ, ವಿನ್ಯಾಸ, ಕಟ್ಟಿಕೊಳ್ಳುವ ಶೈಲಿಯಲ್ಲೆಲ್ಲ ನೂರಾರು ನಮೂನೆಗಳು ಶುರುವಾದುವು.

Croatia - The mother country of Tieಬ್ರಿಟಿಷರು ಕಾಲಿಟ್ಟ ಇತರ ದೇಶಗಳಿಗೂ ಪಯಣಿಸಿತು ಟೈ. ಅಮೆರಿಕದಲ್ಲೂ ಟೈ ಫ್ಯಾಷನ್‌ ಆರಂಭವಾಯಿತು. 19ನೇ ಶತಮಾನದ ಹೊತ್ತಿಗೆ ಟೈಗೆ ಒಂದು ಸರಳ ಮತ್ತು ಸಾರ್ವತ್ರಿಕ ಆಕಾರ/ರೂಪ ಸಿಕ್ಕಿತು. 1924ರಲ್ಲಿ ನ್ಯೂಯಾರ್ಕ್‌ನ ಜೆಸ್ಸಿ ಲಾಂಗ್ಸ್‌ಡಾರ್ಫ್‌ ಎಂಬವನೊಬ್ಬ ಟೈಗಾಗಿಯೇ ವಿಶೇಷ ವಸ್ತ್ರವಿನ್ಯಾಸ ಮಾಡಿ, 45 ಡಿಗ್ರಿ ಕೋನದಲ್ಲಿ ಅದನ್ನು ಕತ್ತರಿಸಿ ಮೂರು ತುಂಡುಗಳನ್ನು ಒಟ್ಟು ಸೇರಿಸಿ ಹೊಲಿದು ಒಂದು ಟೈ ನಿರ್ಮಿಸಿದ. ಅಂದಿನ ರಚನೆಯನ್ನು ತನ್ನ ಹೆಸರಲ್ಲಿ ಪೇಟೆಂಟ್‌ ಮಾಡಿದ ಆತ ಟೈಯ ಹೊಸ ವಿನ್ಯಾಸಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕಂಡುಕೊಂಡ. ಇವತ್ತಿಗೂ ಟೈ ಯ ಇದೇ ರೂಪ-ರಚನೆ ಚಾಲ್ತಿಯಲ್ಲಿದೆ !

1960ರ ಸುಮಾರಿಗೆ ಟೈಯಂತಹ ಔಪಚಾರಿಕತೆ (ಫಾರ್ಮಾಲಿಟಿ) ಸಲ್ಲದು ಎಂಬ ಕೂಗು ಕೇಳಿಬರತೊಡಗಿತು, ಆದರೆ ಮತ್ತೆ ಟೈಯ ಗಾಂಭೀರ್ಯಕ್ಕೆ ಮರ್ಯಾದೆ ಸಲ್ಲತೊಡಗಿ ಇಂದಿಗೂ ಮುಂದುವರೆದಿದೆ. ದೂರದರ್ಶನದಲ್ಲಿ ವಾರ್ತೆಗಳನ್ನೋದುವವರು, ಪ್ಯಾನೆಲ್‌ ಡಿಸ್ಕಷನ್‌ಗಳಲ್ಲಿ ಭಾಗವಹಿಸುವವರು, ಉದ್ಯಮಪತಿಗಳು - ಇವರನ್ನೆಲ್ಲ ಟೈ ಇಲ್ಲದೆ ಕಲ್ಪಿಸಿಕೊಳ್ಳುವುದೇ ಅಸಾಧ್ಯವೆನಿಸುವಷ್ಟು ರೂಢಿಯಾಗಿದೆ. ‘A well tied tie is the first serious step in life...’ - ಆಸ್ಕರ್‌ ವೈಲ್ಡ್‌ನ ಈ ಕೊಟೇಷನ್‌ ಟೈಯ ಗತ್ತನ್ನು ಒತ್ತಿಹೇಳುತ್ತದೆ.

Dilbert with Red Tie is synonym of Office humorಟೈಯ ಡಿಸೈನ್‌ ಮೊದಲೆಲ್ಲ ಕಡುಬಣ್ಣದ ಬ್ಯಾಕ್‌ಗ್ರೌಂಡ್‌ನಲ್ಲಿ ಸಣ್ಣ ಸಣ್ಣ ಬಿಳಿ ಚುಕ್ಕಿಗಳು, ಹೂಗಳು, ಪಟ್ಟೆಗಳು ಇತ್ಯಾದಿಯಷ್ಟೇ ಇರುತ್ತಿದ್ದರೆ ಕಾಲಕ್ರಮೇಣ ಹೊಸಹೊಸ ‘ಕಲಾಪ್ರಕಾರ’ಗಳೂ ಟೈಯನ್ನಲಂಕರಿಸಿದುವು. ಕಾರ್ಪೋರೇಟ್‌ ಪ್ರಪಂಚದ ಮಹಾನ್‌ ವಿದೂಷಕ ‘ದಿಲ್‌ಬರ್ಟ್‌’ (ಕಾರ್ಟೂನ್‌ ಕ್ಯಾರೆಕ್ಟರ್‌)ಗೆ ಕೆಂಪುಪಟ್ಟೆ ಟೈಯೇ ವಿಶೇಷ ಕಳೆಯನ್ನು ಕೊಡುವುದು. ದಿಲ್‌ಬರ್ಟ್‌ ಕಾರ್ಟೂನ್‌ಗಳನ್ನೇ ಮೈಯೆಲ್ಲ ತುಂಬಿಕೊಂಡಿರುವ ಟೈಗಳೂ ಇವೆ! ಹಾಗೆಯೇ ಸಪ್ಟೆಂಬರ್‌ 11, 2001ರ ದುರ್ಘಟನೆಯ ನಂತರ ದೇಶಾಭಿಮಾನ ಉಕ್ಕಿಹರಿಯತೊಡಗಿರುವ ಸಂದರ್ಭದಲ್ಲಿ ಕೆಂಪು-ಬಿಳಿ-ನೀಲಿ-ನಕ್ಷತ್ರ-ಪಟ್ಟಿಗಳ ಟೈಗಳಿಗೂ ಬೇಡಿಕೆ ಹೆಚ್ಚಾಗಿದೆ.

‘ಫಾದರ್ಸ್‌ ಡೇ’ (ಅಪ್ಪಂದಿರ ದಿನ)ದಂದು ಉಡುಗೊರೆ ಕೊಡಲು ಬಹುತೇಕ ಮಂದಿ ಖರೀದಿಸುವುದು ಟೈಯನ್ನೇ. ಅಮೆರಿಕದಲ್ಲಿ ಒಟ್ಟು ಟೈ ಮಾರಾಟದಲ್ಲಿ 80% ‘ಅಪ್ಪಂದಿರ ದಿನಕ್ಕೆ ಉಡುಗೊರೆ’ಯಾಗಿ ಹೋಗುವ ಟೈಗಳದೇ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

Tie with Dilbert cartoon designಅಮೆರಿಕದಲ್ಲಿ ಪೂರ್ವ ಕರಾವಳಿಯ ಊರುಗಳಲ್ಲಿ ಟೈ ಮತ್ತಿತರ ಫಾರ್ಮಾಲಿಟಿ ಜಾಸ್ತಿ; ಪಶ್ಚಿಮಕ್ಕೆ ಹೋದಂತೆಲ್ಲ ಡ್ರೆಸ್‌ಕೋಡ್‌ ಲಿಬರಲ್‌ ಆಗುತ್ತ ಹೋಗುತ್ತದೆ. ಇದೊಂದು ರೀತಿಯಲ್ಲಿ ಸಹಜವೇ, ಅಮೆರಿಕದ ಬಿಸಿನೆಸ್‌ ಕ್ಯಾಪಿಟಲ್‌ ನ್ಯೂಯಾರ್ಕ್‌ ಇರುವುದು ಪೂರ್ವ ಕರಾವಳಿ. ಹೈಟೆಕ್‌ ಸಿಲಿಕಾನ್‌ ಕಣಿವೆಯಿರುವುದು ಪಶ್ಚಿಮ ಕರಾವಳಿ. ಹೆಚ್ಚಿನ ಕಂಪೆನಿಗಳಲ್ಲಿ ನೋಡಿ - ಬಿಸಿನೆಸ್‌, ಮ್ಯಾನೇಜ್‌ಮೆಂಟ್‌ ಉದ್ಯೋಗಿಗಳೆಲ್ಲ ಸೂಟು-ಬೂಟು-ಟೈ ಧಾರಿಗಳಾಗಿರುವುದನ್ನು ಅಪೇಕ್ಷಿಸಲಾಗುತ್ತದಾದರೆ ಟೆಕ್ನಾಲಜಿ ಡಿಪಾರ್ಟ್‌ಮೆಂಟ್‌ - ಸಾಫ್ಟ್‌ವೇರ್‌ ಗೀಕ್‌ಗಳಿಗೆಲ್ಲ ಜೀನ್ಸ್‌ ಪ್ಯಾಂಟ್‌-ಟೀಷರ್ಟ್‌ ನ ಡ್ರೆಸ್‌ ಕೋಡ್‌ ಇರುತ್ತದೆ! ಆಫೀಸ್‌ ನಿಯಮಾವಳಿಗಾಗಿ ಮಾತ್ರ ಮನಸ್ಸಿಲ್ಲದ ಮನಸ್ಸಿಂದ ಟೈ ಕಟ್ಟಿಕೊಳ್ಳುವವರ ಪಾಡನ್ನು ನೋಡಬೇಕು - ಬೇಸಗೆಯಲ್ಲಂತೂ ‘ಓ ಇದೊಂದು ಟೈ ಯಾಕಾದರೂ ಬೇಕಿತ್ತಪ್ಪಾ...’ ಎಂದು ಬೈಯುತ್ತಲೇ ಟೈಯನ್ನು ಟೈಯುತ್ತಾರೆ!

ಸಾರ್ಸ್‌ ರಕ್ಷಣೆಗೆ ವಿಶೇಷ ಟೈ...

Patriotic tie in USAಅಮೆರಿಕದ ಓಹಾಯಾ ರಾಜ್ಯದ ಕ್ಲೀವ್‌ಲ್ಯಾಂಡ್‌ನಲ್ಲಿ ‘ಜಾನ್‌ ಹಾಗಾ’ ಎನ್ನುವ ರೇಡಿಯಾಲಜಿ ಪ್ರೊಫೆಸರರೊಬ್ಬರು ಮೊನ್ನೆ ಸಾರ್ಸ್‌ ರೋಗಾಣುಗಳು ಸುದ್ದಿಯಲ್ಲಿದ್ದಾಗ ಸಾರ್ಸ್‌ ರಕ್ಷಣೆಗೆಂದೇ ಹೊಸ ರೀತಿಯ ಟೈ ಒಂದನ್ನು ವಿನ್ಯಾಸಗೊಳಿಸಿದ್ದರು. ಹೊರಗಿಂದ ರೇಷ್ಮೆ ಕವಚ, ಒಳಗಿಂದ ವಿಶೇಷ ಏರ್‌-ಫಿಲ್ಟರ್‌ಗಳನ್ನು ಹೊಂದಿರುವ ಈ ಟೈಗೆ ಸಾಕಷ್ಟು ಡಿಮ್ಯಾಂಡು ಸಿಕ್ಕಿತಂತೆ. ತಲಾ 40 ಡಾಲರ್‌ನಂತೆ ಕ್ರಿಮಿ ವಿರೋಧಕ ಟೈಗಳನ್ನು ಮಾರಿದ ಜಾನ್‌ ಹಾಗಾ, ಹಾಗೂ ಹೀಗೂ ಸಾರ್ಸ್‌ನಿಂದಾಗಿ ಶ್ರೀಮಂತನಾದ !

*

ಇಲ್ಲಿಗೆ ಟೈ ಪುರಾಣ ಮುಗಿಸೋಣ. ‘ಕಂಠಲಂಗೋಟಿ’ಯ ಬಗ್ಗೆ ನಿಮ್ಮ ಎರಡು ಮಾತುಗಳು, ಅನಿಸಿಕೆಗಳನ್ನು ತಿಳಿಸುವಿರಾದರೆ ವಿಳಾಸ : srivathsajoshi@yahoo.com

ಟೈಯನ್ನು ಟೈಯುವುದು (ಕಟ್ಟಿಕೊಳ್ಳುವುದು) ಹೇಗೆ ಎಂಬ ವಿವರಗಳು, ಟೈ ಕುರಿತು ಹೆಚ್ಚುವರಿ ಮಾಹಿತಿ - ಬೇಕಿದ್ದರೆ ಈ ಕೆಳಗಿನ ವೆಬ್‌ಸೈಟ್‌ಗಳನ್ನು ನೋಡಿ.

1. ಟೈ ಧರಿಸಲು ಸಚಿತ್ರ ಮಾರ್ಗದರ್ಶಿ (http://www.bizweb.com/tie/)

2. ಟೈ ಇತಿಹಾಸ (http://www.shop-usa.info/TIE_HISTORY/tie_history.html)

3. ಟೈ ಬಗ್ಗೆ ವಿಸ್ತೃತ ಲೇಖನಗಳು (http://www.infoplease.com/spot/tie1.html)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more