• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಜೆಗಣ್ಣಿನ ಕಣ್ಣೀರಿಗೆಲ್ಲಿದೆ ಕೊನೆ?

By Staff
|

ಸಂಜೆಗಣ್ಣಿನ ಕಣ್ಣೀರಿಗೆಲ್ಲಿದೆ ಕೊನೆ?
ದಶರಥ ಮಹಾರಾಜ ಪುತ್ರವಿಯೋಗದಿಂದ ಪರಿತಪಿಸಲು ಅವನಿಗಿದ್ದ ಶಾಪವೇ ಕಾರಣವಂತೆ. ಅಂದು ಒಬ್ಬನೇ ದಶರಥನಿದ್ದರೆ ಇಂದು ಪ್ರತಿ ಮನೆಯಲ್ಲೂ ಶಾಪಗ್ರಸ್ತ ದಶರಥರು! ಈ ಬೇಸರದ ನಡುವೆಯೂ ಒಂದು ಸಂತೋಷದ ಸಂಗತಿಯೇನೆಂದರೆ, ಈ ರೀತಿ ಮಕ್ಕಳಿಂದ ದೂರವಿರುವ ಹಿರಿಯರೆಲ್ಲ ವ್ಯಥೆಯಲ್ಲೇ ಮುಳುಗಿಹೋಗಿಲ್ಲ!

K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

venivas@hotmail.com

ಆಕೆಯದೊಂದು ಸಂತೃಪ್ತ ಸಂಸಾರ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸ್ವಂತ ಮನೆ, ಕೈತುಂಬಾ ಸಂಪಾದಿಸುವ ಗಂಡ, ಬುದ್ಧಿವಂತರಾದ ಇಬ್ಬರು ಪುಟ್ಟ ಮಕ್ಕಳು. ಬಂದುಹೋಗುವ ಅತಿಥಿಗಳು, ನೆಂಟರಿಷ್ಟರಿಂದ ತುಂಬಿ ತುಳುಕುವ ಮನೆ. ಯಾವುದೋ ನೆಪದಿಂದ ನಡೆಯುತ್ತಲೇ ಇರುವ ಸಮಾರಂಭಗಳು, ಹಬ್ಬ, ಹರಿದಿನಗಳು. ಒಟ್ಟಿನಲ್ಲಿ ಆಕೆಯದು ಚಲನಚಿತ್ರದಲ್ಲಿ ನಟಿ ಪಂಢರಿಬಾಯಿಯವರನ್ನು ಹೋಲುವ ಸಂತೃಪ್ತ ಗೃಹಿಣಿಯ ಪಾತ್ರ.

ಆದರೆ ಈ ಸುಖ ಸಂಸಾರದ ಚಿತ್ರ ಶಾಶ್ವತವಾಗಿ ಉಳಿಯಲಿಲ್ಲ. ಪುಟ್ಟ ಮಕ್ಕಳು ಬೆಳೆದು ದೊಡ್ಡವರಾದರು. ಬುದ್ಧಿವಂತ ಮಕ್ಕಳೆಂದ ಮೇಲೆ ಅವರು ಭಾರತದಲ್ಲಿ ಎಲ್ಲಿ ತಾನೇ ಉಳಿಯುತ್ತಾರೆ? ಈಗ ಒಬ್ಬನದು ಅಮೆರಿಕಾ ದೇಶವಾದರೆ ಮತ್ತೊಬ್ಬನಿಗೆ ಇನ್ನಾವುದೋ ಕಂಡು ಕೇಳರಿಯದ ಪರದೇಶದ ವಾಸ. ನಿವೃತ್ತಿಯ ಅಂಚಿಗೆ ಬಂದಿದ್ದ ಗಂಡ ಕೂಡ ಒಂದು ಸಂಜೆ ಹೃದಯಾಘಾತದಿಂದ ಅವರನ್ನು ಅಗಲಿದರು. ಆಕೆಯ ಸುತ್ತ ಕಲರವ ಮೂಡಿಸುತ್ತಿದ್ದ ಸುಂದರ ಜಗತ್ತು ಒಮ್ಮೆಲೇ ಸ್ಥಬ್ದವಾಯಿತು. ಹಣದ ಕೊರತೆ ಮೊದಲೇ ಇರಲಿಲ್ಲ. ಈಗಂತೂ ಉನ್ನತ ಉದ್ಯೋಗಗಳಲ್ಲಿರುವ ಮಕ್ಕಳೂ ದೊಡ್ಡ ಮೊತ್ತವನ್ನೇ ಕಳಿಸುತ್ತಾರೆ. ಅದನ್ನು ತೆಗೆದುಕೊಂಡು ಆಕೆಗೇನಾಗಬೇಕಾಗಿದೆ? ದೊಡ್ಡ ಬಂಗಲೆಯ ನಡುವೆ ಆಗೀಗ ಮೊಳಗುವ ದೂರವಾಣಿಯ ಕರೆಗೆ ಕಾಯುತ್ತಾ ಕೂಡುವ ಆಕೆಯ ಒಂಟಿತನವನ್ನು ಆ ಹಣ ಎಂದೆಂದಿಗೂ ನೀಗಿಸಲಾರದು.

Old age and mentality of new generationಬೆಂಗಳೂರಿನಲ್ಲಿ ಅಗ ಒಬ್ಬಂಟಿ ವೃದ್ಧರಿರುವ ಮನೆಗಳಲ್ಲಿ ಕೊಲೆ, ದರೋಡೆಗಳು ಬಹಳವಾಗಿ ನಡೆಯುತ್ತಿದ್ದ ಕಾಲ. ಹಿತೈಷಿಗಳ ಸಲಹೆಯ ಮೇರೆಗೆ, ತನ್ನ ಸುರಕ್ಷತೆಯ ದೃಷ್ಟಿಯಿಂದ, ಬಂಗಲೆಯಂತಹ ಮನೆಯನ್ನು ಮಾರಿ, ಇದ್ದ ಬೆಳ್ಳಿ,ಬಂಗಾರಗಳನ್ನೆಲ್ಲಾ ಬ್ಯಾಂಕ್‌ ಲಾಕರಿಗೆ ಸೇರಿಸಿ, ಯಾವುದೋ ಒಂದು ಅಪಾರ್ಟ್‌ಮೆಂಟ್‌ ಸೇರಿಕೊಂಡರು. ಈಗ ಆಕೆಯ ಕಣ್ಣ ತುಂಬೆಲ್ಲಾ ಗತಜೀವನದ ಸವಿನೆನಪುಗಳು ಮಾತ್ರ ತುಂಬಿಕೊಂಡಿವೆ. ಆದರೆ ಭವಿಷ್ಯದ ಬೆಳಕು ಅಲ್ಲಿ ಬತ್ತಿ ಹೋಗಿದೆ!

ಈ ಮೇಲಿನ ಚಿತ್ರಣಕ್ಕೆ ನಿಮ್ಮ ಗೆಳೆಯರ, ಪರಿಚಿತರ, ಬಂಧು ಬಾಂಧವರ ಹೋಲಿಕೆ ಏನಾದರೂ ಕಂಡು ಬಂದಲ್ಲಿ ದಯವಿಟ್ಟು ನನ್ನನ್ನು ಕ್ಷಮಿಸಿ. ಇದೊಂದು ಕಾಲ್ಪನಿಕ ಚಿತ್ರಣ ಮಾತ್ರ. ಇದು ಯಾರೊಬ್ಬರ ಬದುಕಿಗೂ ಸಂಬಂಧಿಸಿಲ್ಲ ಅಥವಾ ಇನ್ನೊಂದು ವಿಧದಲ್ಲಿ ನಮ್ಮೆಲ್ಲರಿಗೂ ಸಂಬಂಧಪಟ್ಟಿದ್ದೇ ಆಗಿದೆ. ಯಾಕೆಂದರೆ ಈ ಪರಿಸ್ಥಿತಿ ಸೃಷ್ಟಿಯಾಗುವಲ್ಲಿ ನಮ್ಮೆಲ್ಲರ ಪಾಲೂ ಇದೆ. ಒಂಟಿತನ ಇಂದು ನಮ್ಮ-ನಿಮ್ಮೆಲ್ಲರ ಮನೆಯ ಹಿರಿಯ ಜೀವಗಳನ್ನು ಕಾಡುತ್ತಿರುವ ಜೀವಂತ ಸಮಸ್ಯೆ.

ಗೂಡುಗಳಲ್ಲಿದ್ದ ಹಕ್ಕಿಗಳೆಲ್ಲ ಹಾರಿ ಹೋಗಿ ಬರಿದಾದ ಪಂಜರವನ್ನು ಕಾವಲು ಕಾಯುತ್ತಿರುವ ಮುದಿ ಜೀವಗಳನ್ನು ಇಂದು ಎಲ್ಲೆಡೆಯಲ್ಲೂ ಕಾಣಬಹುದಾಗಿದೆ. ಸದಾ ತಾಯ್ತಂದೆಗಳ ತೋಳಿಗೆ ಅಂಟಿಕೊಂಡಿರುವ ಮಕ್ಕಳು ಬೆಳೆದಂತೆಲ್ಲಾ ಹಂತಹಂತವಾಗಿ ಹೆತ್ತವರಿಂದ ದೂರವಾಗುವುದು ಬದುಕಿನ ಕಟುವಾಸ್ತವವೇ. ಮುಂದುವರೆದ ದೇಶಗಳಲ್ಲಿ ಮಕ್ಕಳು ತಂದೆತಾಯಿಗಳೊಡನೆ ಜೀವಿಸುವುದು ಅಪರೂಪ. ಆದರೆ ಭಾರತದಂತಹ ದೇಶಕ್ಕೆ ಈ ಪರಿಸ್ಥಿತಿ ಇನ್ನೂ ಹೊಸದು. ಹಾಗಾಗಿ ಮನೆ ಮಕ್ಕಳು ತಮ್ಮಿಂದ ದೂರವಾಗಿದ್ದಾರೆಂಬ ಸಂಗತಿ ತಂದೆತಾಯಿಗಳನ್ನು ದೊಡ್ಡ ಕೊರಗಾಗಿ ಕಾಡುವುದುಂಟು.

ಇದು ತುಂಬ ಹಿಂದಿನ ಮಾತೇನಲ್ಲ. ನಮ್ಮೂರಿನಲ್ಲಿ ಆಗಿದ್ದ ಪರಿಸ್ಥಿತಿ ಏನೆಂದರೆ, ಯಾರಿಗೂ ಉದ್ಯೋಗದ ಉದ್ದೇಶದಿಂದ ಊರು, ಮನೆ,ಬಾಗಿಲುಗಳನ್ನು ತೊರೆದು ದೂರ ಹೋಗುವ ಮನಸ್ಸಿರುತ್ತಿರಲಿಲ್ಲ. ಊರಿನಲ್ಲೇ ಸಿಗುತ್ತಿದ್ದ ಸಣ್ಣ ಪುಟ್ಟ ಕೆಲಸಗಳಲ್ಲಿ ಸಂತೃಪ್ತಿ ಹೊಂದುತ್ತಿದ್ದ ಕಾಲವದು. ಸರಕಾರಿ ಕೆಲಸಗಳಲ್ಲಿದ್ದ ಜನರೂ ಕಡಿಮೆಯೇ. ವಂಶಪಾರಂಪರ್ಯವಾಗಿ ಬಂದಿದ್ದ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದವರೇ ಹೆಚ್ಚು. ಬರುತ್ತಿದ್ದ ಆದಾಯ ಹೆಚ್ಚೇನಿರಲಿಲ್ಲ. ಅದಕ್ಕೆ ತಕ್ಕಂತೆ ಖರ್ಚುಗಳೂ ಕಡಿಮೆ ಇದ್ದವು. ಎಲ್ಲರಿಗೂ ಸಣ್ಣದೋ ಪುಟ್ಟದೋ ಒಟ್ಟಿನಲ್ಲಿ ಒಂದು ಸ್ವಂತ ಮನೆ ಇದ್ದೇ ಇರುತ್ತಿತ್ತು. ಹಾಗಾಗಿ ಇತರ ಖರ್ಚುಗಳಿಗೂ ಅಂತಹ ಭಾರೀ ಹಣದ ಅಗತ್ಯವೇ ಇರಲಿಲ್ಲವೆನ್ನಬಹುದು.

ಅಂದು ಪ್ರತಿ ಮನೆಯೂ ತನ್ನದೇ ಆದ ಒಂದು ಶಿಸ್ತಿಗೆ ಒಳಪಟ್ಟಂತಿರುತ್ತಿತ್ತು. ಮನೆಯ ಹಿರಿಯನಿಗೆ ವಯಸ್ಸು ಹೆಚ್ಚಾದಂತೆ ಅವನ ಜವಾಬ್ಧಾರಿಗಳು ಪ್ರಾಯಕ್ಕೆ ಬಂದ ಮಗನಿಗೆ ವರ್ಗಾವಣೆಯಾಗುತ್ತಿದ್ದವು. ತಂದೆ ತನ್ನ ಮಗನಿಗೆ ಮಾರ್ಗದರ್ಶಕನಾಗಿ ಮುಂದುವರೆಯುತ್ತಿದ್ದ. ತಂದೆಗೆ ತನ್ನ ವೃದ್ಧಾಪ್ಯ ಒಂದು ಹೊರೆಯೆನ್ನಿಸದೆ ಹಿರಿತನ ತಂದುಕೊಡುತ್ತಿತ್ತು. ಊರಿನ ಎಲ್ಲಾ ಒಗ್ಗಟ್ಟಿನ ಕೆಲಸಗಳಲ್ಲಿಯೂ ಯುವಕರದ್ದೇ ಮೇಲುಗೈ. ಬಿಡುವಿನ ವೇಳೆಯಲ್ಲಿ ಯುವಕ ಸಂಘ, ಯುವತಿ ಮಂಡಲಿಗಳನ್ನು ಕಟ್ಟಿಕೊಂಡು, ತಮ್ಮ ಸಣ್ಣಪುಟ್ಟ ಆದರ್ಶಗಳನ್ನು ಸಾಕಾರಗೊಳಿಸುತ್ತಿದ್ದ ಕಾಲ ಒಂದಿತ್ತೆಂದರೆ ಈಗ ನಂಬುವುದೇ ಕಷ್ಟವಾಗುತ್ತಿದೆ. ಗ್ರಾಮದೇವತೆಯ ರಥೋತ್ಸವದಲ್ಲಿ ಕೇಳಿ ಬರುತ್ತಿದ್ದ ಹರಯದ ಹುರುಪಿನ ಕೇಕೆಗೆ, ಊರಿಗೂ ಒಂದು ಹೃದಯವೆಂಬುದಿದ್ದರೆ ಅದು ಸಂತಸದಿಂದ ಕುಪ್ಪಳಿಸರಬೇಕು.

ಈಚೆಗೆ ರಜೆಗೆಂದು ನಮ್ಮೂರಿಗೆ ಹೋಗಿದ್ದಾಗ ಊರಿನಲ್ಲಿ ಯುವಕರ ಸಂಖ್ಯೆಯೇ ಕಡಿಮೆಯಾಗಿದ್ದಂತೆ ಅನ್ನಿಸಿತು. ಮುಪ್ಪು ಮನುಷ್ಯರಿಗೆ ಬರುವುದು ಸಹಜ. ಆದರೆ ಅಲ್ಲಿಯ ಮನೆಗಳಿಗೇ ಮುಪ್ಪಡರಿದಂತೆ ಭಾಸವಾಯಿತು. ಮಬ್ಬು ಬೆಳಕಿನ ಕೆಳಗೆ ಮಿಂಚಳಿದ ಕಣ್ಣುಗಳ ಹಿರಿಯ ಜೀವಗಳಷ್ಟೇ ಎಲ್ಲೆಡೆ ಕಾಣ ಸಿಕ್ಕಿದವು. ಮಕ್ಕಳ ಸಾಧನೆಯನ್ನು ಹೆಮ್ಮೆಯಿಂದ ಬಣ್ಣಿಸುವ, ಅವರು ಕಳಿಸಿರುವ ಫೋಟೋ ಆಲ್ಬಮುಗಳನ್ನು ಬಂದವರಿಗೆ ತೋರಿಸುವ ಆ ಮುಖಗಳಲ್ಲಿ ಅರಸಿದರೆ ಸಂತೋಷಕ್ಕಿಂತ ವಿಷಾದವೇ ಹೆಚ್ಚಾಗಿ ಕಂಡೀತು. ಬಹಳಷ್ಟು ಮನೆಗಳಲ್ಲಿ ಮಕ್ಕಳೇ ಇರಲಿಲ್ಲ! ಅಂದಿನಂತೆ ಮನೆ ತುಂಬ ಮಕ್ಕಳಿರುತ್ತಿದ್ದ ಕಾಲ ಇದಲ್ಲ. ಇದ್ದ ಒಬ್ಬರೋ ಇಬ್ಬರೋ ಮಕ್ಕಳು ಊರು ತೊರೆದು, ಮನೆ,ಮನಗಳನ್ನು ಮುರಿದು ಹೊರಟು ಹೋಗಿದ್ದಾರೆ!

ಮನೆ, ಮನೆಯ ಜಗುಲಿ, ಹಿತ್ತಲುಗಳಲ್ಲಿ ಭೋರ್ಗರೆಯುತ್ತಿದ್ದ ಯುವಶಕ್ತಿಯನ್ನು ಯಾವನೋ ಕಿಂದರಿಜೋಗಿ ತನ್ನ ಮಾಯದ ಪೀಪಿಯೂದಿ ಸದ್ದಿಲ್ಲದೆ ಕರೆದೊಯ್ದು ಬಿಟ್ಟಿದ್ದ. ಹೆಚ್ಚು ಓದುವ ಆಸೆಯಿದ್ದರೂ ಅನಿವಾರ್ಯ ಕಾರಣಗಳಿಂದ ಓದು ನಿಲ್ಲಿಸಿದವರು, ಯಾವುದೋ ಆದರ್ಶಕ್ಕೆ ಕಟ್ಟುಬಿದ್ದು ಊರಿನಲ್ಲಿಯೇ ನೆಲೆಸಿ, ಎದೆಯಲ್ಲೊಂದು ಅತೃಪ್ತಿಯ ಬೆಟ್ಟ ಹೊತ್ತವರನ್ನು ಬಿಟ್ಟು ಉಳಿದಂತೆ ಊರು ಖಾಲಿ! ಈ ಪರಿಸ್ಥಿತಿ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿಯವರ ‘‘ಕೈಕಾಲಿಲ್ಲದವರೇ ಉಳಿದರು ಬೃಂದಾವನದಿ ಕೊನೆಗೆ’’ ಸಾಲುಗಳನ್ನು ಬೇಡವೆಂದರೂ ನೆನಪು ಮಾಡುವಂತಿತ್ತು.

ಮೊದಲು ಇಂಜಿನಿಯರಿಂಗ್‌ ಪದವೀಧರರೇ ಅಪರೂಪವಾಗಿದ್ದ ಊರಿನಲ್ಲಿ ಈಗ ಕಾಸಿಗೊಂದು ಕೊಸರಿಗೊಂದು. ಬಿ.ಇ ಮಾಡಿದ ಜಗಜಾಣನಿಗೆ ತಕ್ಕ ಕೆಲಸವನ್ನು ಈ ಪುಟ್ಟ ಊರೆಲ್ಲಿ ಹುಡುಕಿ ಕೊಟ್ಟೀತು? ಹಾಗೆಂದು ಎಲ್ಲರೂ ಅಮೆರಿಕಾ, ಇಂಗ್ಲೆಂಡ್‌ ಮುಂತಾದ ಹೊರದೇಶಗಳಲ್ಲೇ ಹೋಗಿ ನೆಲೆಸಿದ್ದಾರೆಂದು ನನ್ನ ಅರ್ಥವಲ್ಲ. ಆದರೆ ನಿಸ್ಸಂಶಯವಾಗಿ ಬೆಂಗಳೂರೆಂಬ ಮಾಯಾ ರಾಕ್ಷಸ ಊರಿನ ಬಹುತೇಕ ಯುವಕ, ಯುವತಿಯರನ್ನು ತನ್ನ ಕಬಂಧ ಬಾಹುಗಳಲ್ಲಿ ಸೇರಿಸಿಕೊಂಡುಬಿಟ್ಟಿದ್ದ. ಊರಿನ ಹುಡುಗಿಗೆ ತಕ್ಕ ವರ ಬೇಕೆಂದರೂ ಅವನು ಬೆಂಗಳೂರಿನಲ್ಲೇ ಸಿಗಬೇಕು, ಓದಿದ ಹುಡುಗನನಿಗೆ ತಕ್ಕ ಕೆಲಸವನ್ನೂ ಬೆಂಗಳೂರೇ ಕೊಡಬೇಕು!

ಇಂತಹ ಪ್ರತಿ ಊರಿನಿಂದಲೂ ಜನ ಬಂದು ತುಂಬಿಕೊಳ್ಳುತ್ತಿರುವ ಬೆಂಗಳೂರಿನ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಸಣ್ಣ ಹಳ್ಳಿ,ಪಟ್ಟಣಗಳಲ್ಲಿದ್ದ ಜನ ನಗರದ ಕಡೆ, ನಗರಗಳಲ್ಲಿರುವ ಯುವಕರಿಗೆ ವಿದೇಶವೇ ಕಡೆ! ‘‘ನನ್ನ ಮಗ ಕೆನಡಾದಿಂದ ಬರುತ್ತಿದ್ದಾನೆ’’, ‘‘ನ್ಯೂಯಾರ್ಕಿನಲ್ಲಿ ತುಂಬಾ ಮಳೆಯಂತೆ, ಅದಕ್ಕೆ ಮೊಮ್ಮಗುವಿಗೆ ಹುಷಾರಿಲ್ಲ’’ ಇಂತಹ ಮಾತುಕಥೆಗಳು ಮನೆಮನೆಯ ಕಿಟಕಿಯಿಂದಲೂ ಕೇಳಿಬರುತ್ತವೆ. ದೂರದೇಶದಲ್ಲಿರುವ ಮಕ್ಕಳನ್ನು ನೆನೆದು, ಇಲ್ಲಿರುವ ಹಿರಿಯ ಜೀವಗಳು ನಿಟ್ಟುಸಿರುಡುವ ದೃಶ್ಯ ಸರ್ವೇಸಾಮಾನ್ಯವಾಗಿದೆ.

ಮುಪ್ಪಿನ ಅಸಹಾಯಕ ಕ್ಷಣಗಳಲ್ಲಾದರೂ ಮಕ್ಕಳು ಜೊತೆಗಿರಬೇಕೆನ್ನುವುದು ಹೆತ್ತವರ ಆಸೆ. ಆದರೆ ಇಂದು ಈ ಆಸೆ ನೆರವೇರುವುದಂತೂ ಸುಲಭವಾಗಿಲ್ಲ. ಮಕ್ಕಳ ಜೊತೆಯಲ್ಲೇ ವಾಸಿಸುವುದು ಇದಕ್ಕೊಂದು ಪರಿಹಾರ. ಆದರೆ, ಬಹಳ ವರ್ಷಗಳಿಂದ ಬಾಳಿ ಬದುಕಿದ ಸ್ಥಳವನ್ನು ಬಿಟ್ಟು ಹೊಸದೊಂದು ಜಾಗಕ್ಕೆ ಹೋಗಿ ಹೊಂದಿಕೊಳ್ಳಲು ನಿರಾಕರಿಸುವವರೇ ಹೆಚ್ಚು. ರಾಮಾಯಣದ ಕಥೆಯೊಂದರ ಪ್ರಕಾರ, ದಶರಥ ಮಹಾರಾಜ ಪುತ್ರವಿಯೋಗದಿಂದ ಪರಿತಪಿಸಲು ಅವನಿಗಿದ್ದ ಶಾಪವೇ ಕಾರಣವಂತೆ. ಅಂದು ಒಬ್ಬನೇ ದಶರಥನಿದ್ದರೆ ಇಂದು ಪ್ರತಿ ಮನೆಯಲ್ಲೂ ಶಾಪಗ್ರಸ್ತ ದಶರಥರು!

ಈ ಬೇಸರದ ನಡುವೆಯೂ ಒಂದು ಸಂತೋಷದ ಸಂಗತಿಯೇನೆಂದರೆ, ಈ ರೀತಿ ಮಕ್ಕಳಿಂದ ದೂರವಿರುವ ಹಿರಿಯರೆಲ್ಲ ವ್ಯಥೆಯಲ್ಲೇ ಮುಳುಗಿಹೋಗಿಲ್ಲ! ಬಹಳಷ್ಟು ಜನರು ಬದಲಾದ ಹೊಸ ಪರಿಸ್ಥಿತಿಗೆ ತಮ್ಮದೇ ಆದ ಪರಿಹಾರ ಕಂಡುಕೊಂಡಿದ್ದಾರೆ. ಕೆಲವರು ಪ್ರವಚನ, ಭಜನೆಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ ಒಂಟಿತನವನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಸೇವಾ ನಿರತ ಸಂಘ, ಸಂಸ್ಥೆಗಳನ್ನು ಸೇರಿಕೊಂಡು ಅನಾಥರಿಗೆ, ಅಶಕ್ತರಿಗೆ ನೆರವಾಗುತ್ತಾ ತಮಲ್ಲಿರುವ ಹಣ,ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಂಪ್ಯೂಟರ್‌ ಬಳಸುವುದನ್ನು ಕಲಿತು ದೂರದಲ್ಲಿರುವ ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ‘‘ಅವರ ಜೀವನ ಅವರಿಗಾದರೆ ನಮ್ಮದು ನಮಗೆ, ಅವರ ಪ್ರಗತಿಗೆ ನಾವೇಕೆ ಅಡ್ಡಿಯಾಗಬೇಕು?’’ ಎಂಬ ಹಿರಿಯರ ಉದಾರ ಮನೋಭಾವ ಮೆಚ್ಚಿಗೆ ಮೂಡಿಸುತ್ತದೆ.

ಅಮ್ಮ ತನ್ನ ಕೊನೆಯ ದಿನಗಳಲ್ಲಿ ತಾನು ಒಂಟಿಯೆಂದು ಅಳುತ್ತಿದ್ದಳು. ಅವಳ ಜೊತೆ ನಾನಿಲ್ಲದಿದ್ದರೂ ಉಳಿದ ಮಕ್ಕಳು ಜೊತೆಗಿದ್ದರು. ಮಕ್ಕಳು, ಮೊಮ್ಮಕ್ಕಳ ಜೊತೆಗಿದ್ದೂ ಅಮ್ಮನನ್ನು ಕಾಡುತ್ತಿದ್ದ ಏಕಾಂಗಿತನವನ್ನೇ ಮಾಪಕವಾಗಿಟ್ಟುಕೊಂಡು, ಯಾರೂ ಜೊತೆಗಿಲ್ಲದ ಹಿರಿಯ ಜೀವಗಳ ಏಕಾಂಗಿತನದ ಆಳವನ್ನು ಅಳೆಯಲು ವ್ಯರ್ಥ ಪ್ರಯತ್ನ ಮಾಡುತ್ತೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more