ಈ ನಮಸ್ಕಾರ ಸಂಸ್ಕೃತಿಗೆ ನಮಸ್ತೆ ! ನಮಸ್ತೆ !!
![]() | ಕೆ. ತ್ರಿವೇಣಿ ಶ್ರೀನಿವಾಸರಾವ್, ಇಲಿನಾಯ್, ಅಮೆರಿಕಾ ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ [email protected] |
ನೀವು ಮೊತ್ತ ಮೊದಲು ಪತ್ರಲೇಖನವನ್ನು ಪ್ರಾರಂಭಿಸಿದ್ದು ನೆನಪಿದೆಯೇ? ಪತ್ರ ಬರೆಯುತ್ತಿರುವುದು ನಮಗಿಂತ ಹಿರಿಯರಿಗಾಗಿದ್ದರೆ, ಅವರಿಗೆ ಅನೇಕ ನಮಸ್ಕಾರಗಳು, ಕಿರಿಯರಿಗೆ ಅನಂತ ಅಶೀರ್ವಾದಗಳು. ತಂದೆ ತಾಯಿಗಳಿಗೆ ತೀರ್ಥರೂಪ, ಮಾತೃಶ್ರೀ ಎಂಬ ಸಂಭೋಧನೆಯಾದರೆ, ಉಳಿದೆಲ್ಲಾ ಹಿರಿಯರು ಪತ್ರದಲ್ಲಿ ತಂದೆ, ತಾಯಿ, ಗುರುಗಳಿಗೆ ಸಮಾನರೇ. ಪತ್ರ ತೆರೆದು, ಅದನ್ನು ಪೂರ್ತಿ ಓದುವ ಮೊದಲೇ, ಓದುತ್ತಿರುವವರ ಮನಸ್ಸನ್ನು, ಆತ್ಮೀಯ ಭಾವನೆಯಾಂದು ಹಿತವಾಗಿ ಆವರಿಸಿಕೊಂಡರೆ ಅದಕ್ಕೆ ಕಾರಣ ಈ ನಮಸ್ಕಾರ! ‘ನಮಸ್ಕಾರ ಸಭ್ಯ ಜನರ ಮಾತು-ಕಥೆಯ ಮುನ್ನುಡಿ’ ಎಂದು ಹಿರಿಯರೊಬ್ಬರು(ಬಹುಶ: ಪಂಜೆ ಮಂಗೇಶರಾಯರ) ಹೇಳಿರುವ ಮಾತು ಅದೆಷ್ಟು ಅರ್ಥಭರಿತ!
ಕೆಲವು ದಿನಗಳ ಹಿಂದೆ ನನಗೆ ಹೀಗಾಯಿತು. ಬಹಳ ಜನರಿದ್ದ ಆ ಸ್ಥಳದಲ್ಲಿ ನಾನು ಒಬ್ಬಳು ಅಮೆರಿಕನ್ ಹೆಂಗಸಿನ ಪಾದವನ್ನು ತಿಳಿಯದೆ ತುಳಿದುಬಿಟ್ಟೆ. ಕೂಡಲೇ ಕ್ಷಮಿಸಿ ಎಂದು ಹೇಳಿದ್ದು ಮಾತ್ರವಲ್ಲದೆ, ಮುಂದಿನ ಕ್ಷಣದಲ್ಲಿಯೇ ಆಕೆಯನ್ನು ಮುಟ್ಟಿ ನನ್ನ ಕಣ್ಣಿಗೆ ಒತ್ತಿಕೊಂಡುಬಿಟ್ಟಿದ್ದೆ. ಆ ಸ್ನೇಹಮಯಿ, ನಾನು ಅವಳ ಕಾಲು ಮೆಟ್ಟಿದ್ದನ್ನು, ಮೈ ಮುಟ್ಟಿದ್ದನ್ನು ದೊಡ್ಡ ಅಪರಾಧ ಎಂದೇನೂ ಭಾವಿಸಲಿಲ್ಲ. ಬದಲಿಗೆ ಅವಳ ಮನಸ್ಸಿನಲ್ಲಿ ಒಂದು ಹೊಸ ಪ್ರಶ್ನೆ ಮೂಡಿತ್ತು. ನಾನು ‘ಸಾರಿ’ ಹೇಳಿ, ಆಕೆಯನ್ನು ಕಣ್ಣಿಗೆ ಒತ್ತಿಕೊಂಡಿದ್ದು ಏಕೆ? ಆಕೆಗೆ ನಾನು ಹೇಳಿದ್ದು ಇದು -‘ನಮ್ಮಿಂದ ಯಾರಿಗಾದರೂ ಅರಿತೋ, ಅರಿಯದೆಯೋ ಅಪಮಾನವಾಗಿದ್ದರೆ, ಅವರಿಗೆ ನಮಸ್ಕರಿಸಿ, ಕ್ಷಮೆ ಯಾಚಿಸುವ ನಮ್ಮ ರೀತಿ ಇದೇ. ಇದು ನಮ್ಮ ದೇಶದವರ ಮೈಗಂಟಿಕೊಂಡು ಬಂದ ಸಂಸ್ಕೃತಿ’. ಆಗ, ಆಕೆಯ ಮುಖದಲ್ಲಿ ಮೂಡಿದ ಮೆಚ್ಚಿಗೆಯ ಭಾವನೆಯನ್ನು ನಾನಿಲ್ಲಿ ಪದಗಳಲ್ಲಿ ಹಿಡಿದಿಡಲಾರೆ! ಆಮೇಲೆ ಆಕೆ ಕಣ್ಣಿಂದ ಮರೆಯಾದರೂ, ನಮಸ್ಕಾರದ ಕುರಿತ ಚಿಂತನೆ ನನ್ನನ್ನು ಬಿಡಲಿಲ್ಲ.
ಬೆಳ್ಳನೆ ಬೆಳಕು ಹರಿದೊಡನೆ, ‘ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶಂ ಕ್ಷಮಸ್ವಮೆ’ ಎಂದು , ಎಳ್ಳು, ಜೀರಿಗೆ ಬೆಳೆಯುವ ಭೂತಾಯಿಗೆ ನಮಸ್ಕರಿಸುವುದರೊಂದಿಗೆ ಆರಂಭವಾಗುವ ನಮ್ಮ ದಿನಚರಿಯ ಉದ್ದಕ್ಕೂ ಅದೆಷ್ಟು ನಮಸ್ಕಾರ, ನಮಸ್ತೆಗಳು ಹಾದು ಹೋಗಿರುತ್ತವೋ? ಲೆಕ್ಕ ಇಡುವವರಾದರೂ ಯಾರು? ‘ನಮಸ್ಕಾರ’ಎಂಬ ಈ ಪದದೊಡನೆ, ಒಂದು ಸಿಹಿಯಾದ ನೆನಪು ನನ್ನನ್ನು ಆವರಿಸುವುದುಂಟು.
ನಾನು, ನನ್ನ ಅಣ್ಣ ಇಬ್ಬರೂ ಆಗ ಬಹಳ ಚಿಕ್ಕವರು. ನಮ್ಮ ತಂದೆಯಾಡನೆ ಪೇಟೆ ಬೀದಿಯಲ್ಲಿ ತಿರುಗಾಡಲು ಹೊರಟರೆ, ಅವರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ನಮ್ಮ ಅಭ್ಯಾಸ. ದಾರಿಯಲ್ಲಿ ಎದುರಾದ ಪರಿಚಿತರು ತಂದೆಯವರಿಗೆ ನಮಸ್ಕಾರ ಹೇಳಿದಾಗ, ಅವರಿಗೆ ತಿರುಗಿ ವಂದಿಸಬೇಕಾದ ಅನಿವಾರ್ಯತೆ. ಪ್ರತಿ ಬಾರಿಯೂ ನಮ್ಮ ಕೈಗಳನ್ನು ಬಿಡಿಸಿಕೊಂಡು ಮತ್ತೆ, ಮತ್ತೆ ಹಿಡಿದು ಕೊಳ್ಳುತ್ತಿದ್ದರು. ಈ ಕ್ರಿಯೆ-ಪ್ರತಿಕ್ರಿಯೆಗಳು ಮನೆ ಸೇರುವವರೆಗೂ ನಡೆದೇ ಇರುತ್ತಿತ್ತು. ನಮ್ಮ ಊರು ಆಗ ಈಗಿನಷ್ಟು ಬೆಳೆದಿರಲಿಲ್ಲ. ಸೀಮಿತ ಜನಸಂಖ್ಯೆ ಇದ್ದ ಊರಿನಲ್ಲಿ ಎಲ್ಲರಿಗೂ ಎಲ್ಲರೂ ಚಿರಪರಿಚಿತರೇ, ಎಲ್ಲರ ಮನೆ ವಿಷಯಗಳು ಎಲ್ಲರಿಗೂ ಕರತಲಾಮಲಕ, ಯಾವ ಮುಖವೂ ಯಾರಿಗೂ ಹೊಸದಲ್ಲ, ಹಾಗಾಗಿ ಹಾದಿಯುದ್ದಕ್ಕೂ ವಂದನೆ....ವಂದನೆ....ಸಾವಿರ ವಂದನೆ!
ಹೊಸಬರನ್ನು ಭೇಟಿಯಾದಾಗ ಅವರನ್ನು ವಂದಿಸುವ, ಸ್ವಾಗತಿಸುವ ನಡವಳಿಕೆ ಪ್ರಪಂಚದೆಲ್ಲೆಡೆ ಇದ್ದರೂ, ವಿಧಾನಗಳು ಮಾತ್ರ ಭಿನ್ನವಾಗಿವೆ. ಐರೋಪ್ಯ ದೇಶಗಳಲ್ಲಿ ಔಪಚಾರಿಕವಾಗಿ ಆಲಿಂಗಿಸಿಕೊಳ್ಳುವುದು, ಕೈ ಕುಲುಕುವುದು, ಕೆನ್ನೆಗೆ ಮುತ್ತಿಡುವಂತಹ ಪದ್ಧತಿಗಳಿದ್ದರೆ, ಕೆಲವು ಮುಸ್ಲಿಂ ದೇಶಗಳಲ್ಲಿ ತಲೆಯನ್ನು ಸ್ವಲ್ಪ ಮಾತ್ರ ಬಾಗಿಸಿ, ದೃಷ್ಟಿಯನ್ನು ನೆಲದತ್ತ ಹೊರಳಿಸಿ ನಿಲ್ಲುವುದು ರೂಢಿಯಲ್ಲಿದೆ. ಮತ್ತೆ ಕೆಲವು ದೇಶಗಳಲ್ಲಿ ಪರಸ್ಪರರ ಉಸಿರನ್ನು ಆಘ್ರಾಣಿಸುವ ಅಪಾಯಕಾರೀ ಪದ್ಧತಿಗಳೂ ಇವೆಯಂತೆ.
‘ನಾವಿಬ್ಬರೂ ಇಂದಿನಿಂದ ಒಂದು, ಒಂದೇ ಉಸಿರಂತೆ ಇನ್ನು ನಾನೂ ನೀನೂ’ ಎಂಬ ಸ್ನೇಹ ಭಾವನೆಯನ್ನು, ಈ ಅತಿರೇಕದ ವಿಧಾನದ ಮೂಲಕ ತೋರ್ಪಡಿಸುವ ರೂಢಿ ಬೆಳೆದು ಬಂದಿರಬಹುದಾ! ಜಪಾನ್, ಚೀನಾ.... ಮುಂತಾದ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಕರಗಳಿಂದ ವಂದಿಸುವ ಆಚರಣೆ ಇದೆ. ಆದರೆ ಇದು ಕೆಲವು ಸಂದರ್ಭ, ವ್ಯಕ್ತಿಗಳಿಗೆ ಅನುಗುಣವಾಗಿ ಬೇರೆ ಬೇರೆ ರೂಪವನ್ನು ಪಡೆದುಕೊಳ್ಳುತ್ತದೆ. ಆದರೆ ನಮ್ಮ ದೇಶದಲ್ಲಿ ಮಾತ್ರ, ಯಾವುದೇ ವ್ಯಕ್ತಿಗಳನ್ನು ಭೇಟಿ ಮಾಡಿದಾಗ, ಎರಡೂ ಕೈಗಳನ್ನು ಜೋಡಿಸಿ, ‘ನಮಸ್ತೆ’ ಎಂದು ವಂದಿಸುವ ದೃಶ್ಯ ಸರ್ವೇಸಾಮಾನ್ಯ. ಭಾರತೀಯ ವಿಮಾನಗಳಲ್ಲಿ ಪ್ರಯಾಣಿಸುವ ಯಾತ್ರಿಕರನ್ನು ‘ನಮಸ್ತೆ’ ಎಂದು ಹೃತ್ಪೂರ್ವಕವಾಗಿ ಸ್ವಾಗತಿಸುವ ಗಗನಸಖಿಯರು, ತಮ್ಮ ಕಿರುನಗೆಯ ಜೊತೆಗೆ ಭಾರತೀಯ ಸಂಸ್ಕೃತಿಯ ಕಂಪನ್ನು ವಿಶ್ವದಾದ್ಯಂತ ಹರಡುತ್ತಿದ್ದಾರೆ.
‘ನಮಸ್ತೆ’ ಎಂದು ವಂದಿಸುವ ಈ ವಿಧಾನ, ಪಾಶ್ಚಾತ್ಯರ ಹಸ್ತಲಾಘವ, ಆಲಿಂಗನ, ಮುತ್ತಿಟ್ಟು ಅಭಿವಂದಿಸುವುದಕ್ಕಿಂತಲೂ ಭಿನ್ನವಾಗಿದೆ ಎಂದು ನನಗನ್ನಿಸಿತು. ಏಕೆಂದರೆ ಆ ಮೂಲಕ ಪ್ರೀತಿ, ಆತ್ಮೀಯತೆಗಳನ್ನು ಬಿಂಬಿಸಬಹುದೇ ಹೊರತು, ವ್ಯಕ್ತಿಯ ಬಗೆಗಿನ ಗೌರವಾದರಗಳನ್ನು ನಮ್ಮ ನಮಸ್ತೆ, ನಮಸ್ಕಾರದಷ್ಟು ಅದು ಸಮರ್ಥವಾಗಿ ಅಭಿವ್ಯಕ್ತಿಸುವುದಿಲ್ಲ. ನಮಸ್ತೆ ಎನ್ನುವುದು ಸಂಸ್ಕೃತದ ನಮ: - ಬಾಗು ಮತ್ತು ತೇ - ನಿನಗೆ ಎಂಬ ಎರಡು ಪದದಿಂದ ಬಂದಿದೆ. ‘ನಿನಗೆ ವಂದನೆ’’ - ಎನ್ನುವುದು ನಮಸ್ತೆ ಪದದ ಒಟ್ಟಾರೆ ಅರ್ಥ. ಸಕಲ ಜೀವಾತ್ಮರಲ್ಲೂ ದೇವರು ನೆಲೆಸಿದ್ದಾನೆ ಎಂಬ ನಮ್ಮ ಅಚಲವಾದ ನಂಬಿಕೆಯೇ, ನಮಸ್ಕರಿಸುವ ಈ ಸಂಪ್ರದಾಯ ಬೆಳೆದು ಬರಲು ಕಾರಣ. ನಾವು ಮಾಡುವ ನಮಸ್ಕಾರ ಜೀವಾತ್ಮನಲ್ಲಿರುವ ಪರಮಾತ್ಮನಿಗೆ ಎನ್ನುವ ಅನುಸಂಧಾನ ಇಲ್ಲಿ ಅಡಕವಾಗಿದೆ. ‘ನಾನು ದೇವರಿಗಲ್ಲದೆ ಇನ್ನಾವ ಮನುಷ್ಯನಿಗೂ ತಲೆಬಾಗುವುದಿಲ್ಲ’ ಎಂಬ ಹೆಮ್ಮೆಯ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇತರರಿಗೆ ನಮಿಸುವುದು, ಬಿಡುವುದು ಅವರವರ ವೈಯುಕ್ತಿಕ ನಿಲುವು. ಆದರೆ ನನ್ನ ಅಭಿಪ್ರಾಯದಲ್ಲಿ, ನಮಗಿಂತ ಹಿರಿಯರಾದವರ ಎದುರು -ವಿದ್ಯೆ, ವಯಸ್ಸು, ಗುಣದಲ್ಲಿ -------ವಿನಯಪೂರ್ವಕವಾಗಿ ತಲೆಬಾಗುವುದಕ್ಕೆ ಯಾವ ಅಭ್ಯಂತರವೂ ಇರಬೇಕಾಗಿಲ್ಲ. ನಮ್ಮ ಜೊತೆಗೇ ಇರುವ ಒಬ್ಬ ಸಹಜೀವಿಯನ್ನು ಗೌರವಿಸಲು ಹಿಂದೇಟು ಹಾಕುವ ನಮಗೆ, ಕಣ್ಣಿಗೆ ಕಾಣದ ಭಗವಂತನನ್ನು ವಂದಿಸುವ ಅರ್ಹತೆಯಾದರೂ ಅದು ಹೇಗೆ ಬರಲು ಸಾಧ್ಯ?
ಸರಳವಾಗಿ ಕೈಗಳನ್ನು ಜೋಡಿಸುವ ನಮಸ್ಕಾರಗಳಲ್ಲದೆ. ನಮಸ್ಕಾರದಲ್ಲಿ ಇನ್ನೂ ಅನೇಕ ವಿಧಗಳಿವೆ. ಸಾಷ್ಟಾಂಗ, ದೀರ್ಘ ದಂಡ ನಮಸ್ಕಾರಗಳಿವೆ. ಸಾಮಾನ್ಯವಾಗಿ ಈ ನಮಸ್ಕಾರಗಳು ನಾವು ಬಹಳ ಗೌರವಿಸುವ ಗುರು-ಹಿರಿಯರಿಗೆ ಬಿಟ್ಟರೆ, ದೇವರಿಗೆ ಮಾತ್ರ ಸಲ್ಲುವಂಥದು. ತೀರ್ಥಕ್ಷೇತ್ರಗಳಲ್ಲಿ ಹೆಜ್ಜೆ ನಮಸ್ಕಾರ, ಉರುಳು ನಮಸ್ಕಾರಗಳಂತಹ ದೇಹದಂಡನೆಯಾಗುವಂತಹ ಸೇವೆಗಳನ್ನು ಭಕ್ತರು ಕೈಗೊಳ್ಳುವುದುಂಟು. ಮಂತ್ರಾಲಯದಲ್ಲಿ ಭಕ್ತರೊಬ್ಬರು, ಅಷ್ಟು ದೊಡ್ಡ ಪ್ರಾಕಾರವನ್ನು ಮಂಡಿಯಿಂದ ತೆವಳುತ್ತಾ, ನಡುನಡುವೆ ನಮಸ್ಕಾರ ಮಾಡುತ್ತಿದ್ದುದ್ದನ್ನು ನೋಡಿ ಬೆರಗಾಗಿದ್ದೆ. ಪರಮಾತ್ಮನಲ್ಲಿ ‘ನೀನೇ ಅನಾಥ ಬಂಧು’ ಎನ್ನುವ ಸಂಪೂರ್ಣ ಶರಣಾಗತ ಮನೋಭಾವ ಮೂಡದ ಹೊರತು, ಅಂತಹ ಕಠಿಣ ಸೇವೆಗಳನ್ನು ಮಾಡುವುದು ಯಾರಿಂದಲೂ ಸಾಧ್ಯವಿಲ್ಲವೇನೋ. ಶುಭ ಸುಪ್ರಭಾತ ಕಾಲದ ಸೂರ್ಯ ನಮಸ್ಕಾರಗಳ ಬಗ್ಗೆ ಹೇಳುವುದೇನಿದೆ? ಅದು ಎಷ್ಟೋ ಜನರ ಜೀವನದ ಅವಿಭಾಜ್ಯ ಅಂಗ!
ಶ್ರೀರಾಮನ ಬಂಟ ಹನುಮಂತನನ್ನು ನೆನೆದೊಡನೆ ಕಣ್ಮುಂದೆ ಬರುವುದು ಕರಗಳನ್ನು ಜೋಡಿಸಿ, ಕುಳಿತಿರುವ ಅವನ ವಿನೀತ ಭಂಗಿ. ಎರಡೂ ಕೈಗಳನ್ನು ಹೃದಯದ ಸಮೀಪ ಜೋಡಿಸಿ ಹಿಡಿದಿರುವ ಈ ಭಂಗಿಯನ್ನು ‘ಅಂಜಲಿ’ ಎಂದು ಕರೆಯುವುದುಂಟು. ಭರತನಾಟ್ಯ, ಯೋಗಭ್ಯಾಸದಲ್ಲೂ ಈ ಮುದ್ರೆಯ ಬಳಕೆಯಾಗುವುದನ್ನು ಕಾಣಬಹುದು. ಬೊಗಸೆ ಎಂಬ ಅರ್ಥ ಬರುವ, ಈ ಅಂಜಲಿ ಪದದಿಂದ ಕಾವ್ಯಾಂಜಲಿ, ಗೀತಾಂಜಲಿ, ಪುಷ್ಪಾಂಜಲಿ ಎಂಬ ಅನೇಕ ಸುಂದರ ಪದಗಳು ಸೃಷ್ಟಿಯಾಗಿರುವುದಲ್ಲದೆ, ಪ್ರಮುಖ ವ್ಯಕ್ತಿಗಳು ಮೃತರಾದರೆ, ಅವರಿಗೆ ಪತ್ರಿಕೆ, ದೂರದರ್ಶನಗಳ ತುಂಬಾ ಗಣ್ಯರ ಭಾಷ್ಪಾಂಜಲಿ, ಶ್ರದ್ಧಾಂಜಲಿ! ಕನ್ನಡದ ನಟಿಯಾಬ್ಬರು ‘ನಾನೇಕೆ ಅಂಜಲಿ?’ -ಎಂದು ಕೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಈಗ ಚಿತ್ರರಂಗದ ಇತಿಹಾಸದಲ್ಲಿದೆ. ಆದರೆ, ಅಂದು ಅಂಜಬೇಕಾಗಿದ್ದವರು ಖಂಡಿತ ಅವರಲ್ಲ, ಇಂಥದೊಂದು ದಿಟ್ಟ ಪ್ರಶ್ನೆಗೆ ಉತ್ತರ ತಿಳಿಯದೆ ಕಂಗಲಾದ ಬಡಪಾಯಿ ಪ್ರೇಕ್ಷಕರು!
ವಂದನೆಯ ಬಗ್ಗೆ ಇಷ್ಟೆಲ್ಲ ಹೇಳಿದ ನಂತರ ಕೊನೆಗೆ, ಕೊನೆಗೆ ಆ ಪದದ ಬಗ್ಗೆ ವ್ಯಂಗ್ಯ ನೋಟ ಬೀರುತ್ತಿರುವ ಹನಿಗವನದೊಂದಿಗೆ ಲೇಖನವನ್ನು ಮುಗಿಸುತ್ತಿದ್ದೇನೆ. ಒಂದೇ ಬಗೆಯ ಉಚ್ಚಾರಣೆ ಕೊಡುವ ಎರಡು ಪದಗಳಿಂದ, ಹೇಗೆ ವಿಭಿನ್ನ ಅರ್ಥಗಳನ್ನು ಹೊರಡಿಸಬಹುದೆನ್ನುವುದಕ್ಕೆ ಇದೊಂದು ಉದಾಹರಣೆ;
ಜಾತಿ ನಿಂದನೆ
ಮಾಡುವವರಿಗೆ
ವಂದನೆ
ಅವರಿಗೆ ಗೊತ್ತಿರುವುದು
ಒಂದೇನೆ!













Click it and Unblock the Notifications