• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಂಬಿಕೆಗಳ ಸುತ್ತ ಶಾಲಾ ದಿನಗಳ ಮಧುರ ನೆನಪುಗಳು

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಶಾಲಾ ದಿನಗಳ ನೆನಪುಗಳೇ ಹಾಗೆ. ಸಾಗರದಲ್ಲಿ ದೊರಕೋ ಮುತ್ತುಗಳಂತೆ. ತೆಗೆದಷ್ಟೂ ಸಿಗುತ್ತಲೇ ಇರುತ್ತವೆಯೇ ಹೊರತು ಖಾಲಿಯಾಯ್ತು ಅನ್ನೋ ಮಾತೇ ಇಲ್ಲ!

ಇಂದಿನ ನೆನಪುಗಳಾದರೂ ಎಂಥದ್ದು? ಚಿಕ್ಕಪುಟ್ಟ ನಂಬಿಕೆಗಳ ಸುತ್ತ. ಸರಿ, ಈ ನಂಬಿಕೆಗಳು ಅಂತ ಹೇಳಿದ್ದನ್ನ ನಂಬಬಹುದೋ ಅಥವಾ ಮೂಢನಂಬಿಕೆಗಳೋ? ನಂಬಬಹುದೋ ಇಲ್ಲವೋ ಪ್ರಶ್ನೆ ಬೇರೆ ಆದರೆ ಅಂದಿನ ಮುಗ್ದ ಮನಸುಗಳು ಇಂಥಾ ನಂಬಿಕೆಗಳಿಗೆ ವಿಶೇಷ ಸ್ಥಾನ ನೀಡಿದ್ದವು ಎಂಬುದಷ್ಟೇ ನಾವು ನೋಡಬೇಕಾದ್ದು.

ನಿಮಗೆ ಗೊತ್ತಾ? ಕಚ್ಚುವುದರಿಂದ ಆಗುವ ಲಾಭಗಳು ಅಷ್ಟಿಷ್ಟಲ್ಲ!

ಪುಸ್ತಕದ ಮೊದಲ ಹಾಳೆ ದೇವರಿಗೆ ಅಂತ ಬಿಡ್ತಾ ಇದ್ವಿ. ಯಾಕೆ ಏನು ಅಂತ ನಿಖರವಾಗಿ ಗೊತ್ತಿಲ್ಲ. ಬಹುಶ: ಆ ಮೊದಲ ಪೇಜಿನಲ್ಲಿ ನಮ್ಮ ಹೆಸರು, ತರಗತಿ, ಯಾವ ಸಬ್ಜೆಕ್ಟ್ ಇತ್ಯಾದಿ ವಿಚಾರಕ್ಕೆ ಅಂತ ಇರಬೇಕೇನೋ... ಎಲ್ಲರ ಬಳಿಯಲ್ಲೂ ಲೇಖಕ್ ಪುಸ್ತಕವೇ ಇರೋದ್ರಿಂದ ಇಂದೊಂಥರಾ ವಾಲಿ-ಸುಗ್ರೀವ ಕೇಸ್ ಇದ್ದಂಗೆ. ಅಲ್ಲಾ, ಪುಸ್ತಕದ ಮೇಲೆ ಲೇಬಲ್ ಇರುತ್ತಲ್ಲಾ? ಮತ್ತೆ ಯಾಕೆ ಈ redundant ಮಾಹಿತಿ? ಅಂದಿರಾ? ಒಳ್ಳೇ ಜೋಕ್! ಲಕ್ಷಣವಾಗಿ ಹಾಕಿರೋ ಬ್ರೌನ್ ಬೈಂಡ್, ಅಬ್ಬಬ್ಬಾ ಅಂದ್ರೆ ಒಂದು ತಿಂಗಳು ಚೆನ್ನಾಗಿರುತ್ತೆ ಆಮೇಲೆ? ಹಾಗಾಗಿ ಮೊದಲ ಪೇಜ್ ಅನ್ನು ದೇವರಿಗೆ ಅಂತ ಬಿಟ್ಟು ನಮ್ಮ ವಿಷಯ ಬರ್ಕೋತೀವಿ ಅನ್ನಿಸುತ್ತೆ.

ಇನ್ನು ಪುಸ್ತಕದ ಹಾಳೆಗಳ ಮಧ್ಯೆ ತುಳಸಿ ಎಲೆ, ನವಿಲುಗರಿ ಹೀಗೇ ಏನೋ ಒಂದು ಇರುತ್ತಿತ್ತು. ಪ್ರತಿ ಪುಸ್ತಕದಲ್ಲಿ ಅಲ್ಲದಿದ್ದರೂ ಕನಿಷ್ಠ ಒಂದು ಪುಸ್ತಕದಲ್ಲಿ ಖಂಡಿತ. ನಮ್ಮ ಶಾಲೆಯ ಆವರಣದಲ್ಲಿ ಲಿಂಗದ ಹೂವಿನ ಮರ ಇತ್ತು. ಈ ಮರದ / ಹೂವಿನ ಹೆಸರು ಸರಿಯಾಗಿ ಗೊತ್ತಿಲ್ಲ. ಆದರೆ ಹಾಗೆಯೇ ಎಲ್ಲರೂ ಹೇಳುತ್ತಿದ್ದುದರಿಂದ ಇಲ್ಲೂ ಅದೇ ಬಳಕೆ ಮಾಡುತ್ತಿದ್ದೇನೆ. ಆ ಹೂವು ತುಂಬಾ ಸುಂದರವಾಗಿರುತ್ತಿತ್ತು. ಹಾಳೆಗಳ ಮಧ್ಯೆ ಅದರ ದಳಗಳೂ ಇಟ್ಟುಕೊಳ್ಳುತ್ತಿದ್ದರು ಕೆಲವು ಹೆಂಗಳು.

ಯಾವ ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಿದೆವು ಎಂದರೆ, ನಾವು ಯಾವ ಸಬ್ಜೆಕ್ಟ್'ನಲ್ಲಿ ಸ್ವಲ್ಪ ವೀಕ್ ಆಗಿರುತ್ತೇವೋ ಅದರಲ್ಲಿ. ಸ್ವಲ್ಪ ಎಲ್ಲಾ ಸಬ್ಜೆಕ್ಟ್'ಗಳನ್ನೂ ಅಷ್ಟಕ್ಕಷ್ಟೇ ಅನ್ನೋ ನನ್ನಂಥವರ ವಿಚಾರಕ್ಕೆ ಆಮೇಲೆ ಬರೋಣ.

ನಿಮ್ಮೆಲ್ಲರ ಜೀವನದ ಕಥಾಸರಮಾಲೆ 'ಸತ್ಯಮೇವ ಜಯತೆ'

ಪರೀಕ್ಷೆ ಸಮಯದಲ್ಲಿ ನಂಬಿಕೆಗಳು ಇನ್ನೂ ಹೆಚ್ಚು ಸೇಲ್ ಆಗುತ್ತೆ. ಮಿಡ್ ಟರ್ಮ್ ಅಥವಾ ವಾರ್ಷಿಕ ಪರೀಕ್ಷೆಗೆ ಒಂದು ತಿಂಗಳು ಇದೆ ಎನ್ನುವಾಗಲೇ ತಲೆಗೂದಲ ಕ್ಷೌರ ಆಗಿರಬೇಕು. ಅದಾಗಿ ಪರೀಕ್ಷೆ ಮುಗಿಯೋವರೆಗೂ ಜಪ್ಪಯ್ಯ ಅಂದ್ರೂ ಕೂದಲಿಗೆ ಕತ್ತರಿ ಬೀಳೋ ಹಾಗಿಲ್ಲ. ಇಲ್ಲಿ ನಂಬಿಕೆ ಏನಪ್ಪಾ ಅಂದ್ರೆ, ಕೂದಲನ್ನು ಕತ್ತರಿಸಿದಾಗ ಓದಿದ್ದೆಲ್ಲಾ ಬಿದ್ದು ಹೋಗುತ್ತೆ ಅಂತ. ಹೆಣ್ಣುಮಕ್ಕಳಿಗೆ ಜಡೆ ಇದ್ದುದರಿಂದ ಮತ್ತು ಅವರು ಅದಕ್ಕೆ ಕತ್ತರಿ ಹಾಕದೆ ಇರೋದ್ರಿಂದಲೇ ಯಾವಾಗಲೂ ಅವರೇ ಮುಂದು ಅನ್ನೋ ನಂಬಿಕೆಯೂ ಇತ್ತು ಬಿಡಿ.

ಅಂದ್ರೆ ನಾವು ಓದಿದ್ದೆಲ್ಲಾ ತಲೆಗೂದಲ ಮೇಲೆ ಸಿಕ್ಕಿಕೊಂಡಿರುತ್ತೆ, ಒಳಗೆ ಇಳಿದಿರೋಲ್ಲ ಅಂತಾಯ್ತು ಅಲ್ಲವೇ? ಅದೂ ಸರಿ ಬಿಡಿ, ಹಾಗಿಲ್ಲದೆ ಇದ್ದಿದ್ರೆ, ಒಂದು ವರ್ಷ ಪಾಸ್ ಆಗಿ ಮುಂದಿನ ತರಗತಿಗೆ ಹೋದ ಮೇಲೆ ಹಿಂದಿನ ತರಗತಿಯಲ್ಲಿ ಏನು ಕಲಿತಿದ್ದೆವು ಅಂತ ನೆನಪೇ ಇರುತ್ತಿರಲಿಲ್ಲ. ನನ್ನ ಮಾತು ನಿಮಗೆ ನಂಬಿಕೆ ಬರಲಿಲ್ಲ ಅಂದ್ರೆ, haircut ಮಾಡಿಸಿಕೊಂಡ ದಿನದ ನೆನಪು ಮಾಡಿಕೊಳ್ಳಿ. ಏನೋ ಒಂಥರಾ ಹಗುರು ಆದ ಹಾಗಿರುತ್ತಿತ್ತು! ಏನೋ ಬೆಟ್ಟ ಕೆಳಗೆ ಇಳಿಸಿದ ಹಾಗೆ ಆಗುತ್ತಿತ್ತು. ಅಲ್ಲವೇ? ಹೌದು, ನಾವು ಓದಿದ್ದೆಲ್ಲಾ ಕತ್ತರಿಗೆ ಸಿಕ್ಕಿ ಕೆಳಗೆ ಬಿದ್ದ ಮೇಲೆ ಹಗುರ ಆಗಲೇಬೇಕು ಅಲ್ಲವೇ? ಇನ್ನು ತಲೆಯೊಳಗೆ ಏನೂ ಇರೋಲ್ಲ ನೋಡಿ, ಅದು original factory piece. ಮೂಲತಃ ಖಾಲಿ.

ಮಾಮೂಲಾಗಿ ಅಂದರೆ ಸೊಳ್ಳೆಯ ಕಾಟದಿಂದಾಗಿ ಸೊಳ್ಳೆಯ ಪರದೆಯ ಒಳಗೆ ಕೂತು ಓದುತ್ತಿದ್ದೆವು. ರಾತ್ರಿ ಊಟವಾದ ಆ ಪರದೆಯ ಅಡಿಯೇ ಹಾಸಿಗೆಗಳೂ ಅಲಂಕರಿಸುತ್ತಿದ್ದುದರಿಂದ ಹಾಸಿಗೆಯ ಮೇಲೇ ಕೂತು ಓದು. ಅದೇನೋ ಗೊತ್ತಿಲ್ಲ, ನಾಲ್ಕು ತಟ್ಟೆ ಅನ್ನ ಊಟವಾದ ಮೇಲೆ ಹಾಸಿಗೆಯ ಮೇಲೆ ಕೂತು ಓದೋದು ಮಹಾಕಷ್ಟದ ಕೆಲಸ.

ಆಗಾಗ ಭಂಗಿಗಳನ್ನು ಬದಲಿಸಿ ಕೂಡುವ ಪರಿಯಲ್ಲಿ ಕೆಲವೊಮ್ಮೆ ನಿದ್ದೆ ಹತ್ತಿತು ಎಂದರೆ, ಆ ಪುಸ್ತಕವೇ ತಲೆದಿಂಬು ಆಗುತ್ತಿತ್ತು. ಮಧ್ಯದಲ್ಲಿ ಎಚ್ಚರವಾದರೆ ಸರಿ. ಬೆಳಿಗ್ಗೆ ಎಚ್ಚರಿಕೆ ಆಯಿತು ಅಂದರೆ ಮುಗೀತು. ಫುಲ್ ಟೆನ್ಶನ್. ಪುಸ್ತಕವನ್ನು ತಲೆಯ ಕೆಳಗೆ ಇಟ್ಕೊಂಡ್ ಮಲಗಿದರೆ ತಲೆಯ ಒಳಗೆ ಇರೋದೆಲ್ಲಾ ಪುಸ್ತಕಕ್ಕೆ ವಾಪಸ್ ಹೋಗುತ್ತೆ ಅಂತ ಹಿರಿಯರು ಹೆದರಿಸಿದ್ರಲ್ಲಾ ಅದೇ ಭೀತಿ! ಹಾಗೆ ಮಲಗಿದಾಗ ಕೆಳಗಿರುವ ಪುಸ್ತಕದಿಂದ ಮೇಲಿರುವ ತಲೆಯೊಳಗೆ ವಿಷಯ ಏಕೆ ಏರುತ್ತಿರಲಿಲ್ಲ ಅಂತ ಕೇಳ್ತಿರಲಿಲ್ಲ. ಯಾಕೆ ಅಂದ್ರೆ ನಮಗೆ ಗೊತ್ತು. ನ್ಯೂಟನ್ ಹೇಳಿದ್ದಾನಲ್ಲ, ಸೇಬು ಮೇಲಿಂದಾನೇ ಕೆಳಗೆ ಬೀಳೋದು ಅಂತ!

ಭಂಗಿ ಅಂದಾಗ ಈ ವಿಷಯ ನೆನಪಾಯ್ತು ನೋಡಿ. ಒಂದು ಪರೀಕ್ಷೆಗೆ ಯಾವುದೋ ಒಂದು ಜಾಗದಲ್ಲಿ ಒಂದು position'ನಲ್ಲಿ ಕೂತು ಓದಿರುತ್ತೇವೆ ಅಂದುಕೊಳ್ಳಿ. ಮರುದಿನದ ಪರೀಕ್ಷೆ ಸಕತ್ತಾಗಿ ಮಾಡಿದ್ದರೆ ಮರುದಿನದ ತಯಾರಿಗೆ ಅದೇ ಜಾಗ ಆಗಬೇಕು ಮತ್ತು ಅದೇ ಭಂಗಿ ಆಗಬೇಕು. ಇದರ ಉಲ್ಟಾ ಕೇಸ್ ಕೂಡ ಇದೆ. 'ನಿನ್ನೆ ಇಲ್ಲೇ ಕೂತು ಓದಿದ್ದು. ಇವತ್ಯಾಕೋ ಪೇಪರ್ tough ಇತ್ತು. ಹಾಗಾಗಿ, ಇವತ್ತು ಇಲ್ಲಿ ಕೂತ್ಕೊಳ್ಳೋಲ್ಲ, ನಾಳೇನೂ ಪೇಪರ್ tough ಆದರೆ ಕಷ್ಟ.

ಪ್ರೈಮರಿ ತರಗತಿಯಲ್ಲಿ 'Rosie' ಎಂಬ ಕೇರಳ ಮೂಲದ ಟೀಚರ್ ಒಬ್ಬರು ಇದ್ದರು. ಕ್ಲಾಸಿಗೆ ಬಂದು, ಮೂಗಿನ ಮೇಲಿನ ಕನ್ನಡಕ ಕೊಂಚ ಹಿಂದೆ ತಳ್ಳಿದರೂ ಎಂದರೆ ಮುಗೀತು, ಅವರು ಆಚೆ ಹೋಗೋವರೆಗೂ ನನ್ನ ಉಸಿರೇ ಹೊರಗೆ ಬರುತ್ತಿರಲಿಲ್ಲ. ಶಾಲೆಯ ಆವರಣದಲ್ಲಿ ಟೀಚರುಗಳನ್ನು ಹೊತ್ತ ಎಚ್.ಎ.ಎಲ್ ಫ್ಯಾಕ್ಟರಿ ಬಸ್ ನಿಂತಾಗ ನನ್ನ ಮೊದಲ ಕೆಲಸ ಈ ರೋಸೀ ಮಿಸ್ ಯಾವ ಬಣ್ಣದ ಸೀರೆ ಉಟ್ಟು ಬಂದಿದ್ದಾರೆ ಅಂತ. ಕೆಂಪು ಬಣ್ಣದ ಸೀರೆ ಉಟ್ಟಿದ್ದರೆ ಅಲ್ಲಿಗೆ ನನ್ನ ದಿನ ಖತಂ. ಏನೋ ಮೂಕಭಯ ಆವರಿಸಿ ಬಂದು ಆ ದಿನ ಬೇಗ ಮುಗಿಯಲೀ ಅಂತಾನೇ ಮನಸ್ಸು ಬೇಡುತ್ತಿತ್ತು.

ಹೆಂಗಳಿಗೆ ಸಂಬಂಧಪಟ್ಟ ವಿಷಯ ನಾವು ಮಾತನಾಡಿದರೆ ಅದು ತಪ್ಪು ಎಂಬ ನಂಬಿಕೆ ಮೊದಲಿಂದಲೂ ಇತ್ತು. ಮಿಡ್ಲ್ ಸ್ಕೂಲಿನಲ್ಲಿ ಇದ್ದಾಗ ಒಂದು ಪ್ರಸಂಗ ನಡೆಯಿತು. ಇಂದಿನ ಮಿಡ್ಲ್ ಸ್ಕೂಲಿನವರು ಈ ಮಾತು ಕೇಳಿದರೆ 'ನೀವು ಈ ರೇಂಜ್'ಗೆ ದಡ್ಡರಾ?' ಅಂತ ಕೇಳಿಬಿಡ್ತಾರೆ. ಒಬ್ಬ ತರಲೆ ಹುಡುಗ ಇದ್ದ. ನಾವಿಬ್ಬರೂ ಒಂದೇ ಬಸ್ಸಿನಲ್ಲಿ ಶಾಲೆಗೇ ಹೋಗುತ್ತಿದ್ದೆವು. ಒಂದು ದಿನ ಹೀಗೆ ಬಸ್ ಸ್ಟಾಂಡ್'ನಲ್ಲಿ ಬಸ್ಸಿಳಿದು ನಡೆದು ಹೋಗುವಾಗ 'ಒಂದು ಆಟ ಆಡೋಣ' ಅಂದ. ಆಟ ಅಂದ್ರೆ ಇಲ್ಲ ಅಂತ ಯಾರಂತಾರೆ? ಅವನೆಂದ "ನಾನು ಏನು ಪದ ಹೇಳಿದರೂ ಅದಕ್ಕೆ 'ರಿ' ಅಂತ ಸೇರಿಸಿ ನೀನು ಆ ಹೊಸ ಪದ ಹೇಳಬೇಕು" ಅಂದ. ಆಯ್ತು ಅಂದೆ.

"ಆಟೋ" ಅಂದ . . . "ಆಟೋರಿ" ಅಂದೇ. "ಕಾರು" ಅಂದ . . 'ಕಾರುರಿ' ಅಂದೇ . . . 'ಬಸ್ಸು' ಅಂದ . . . 'ಬಸ್ಸುರಿ' ಅಂದೇ . . . ಆಮೇಲೆ ಏನೋ ತಪ್ಪಾಯ್ತು ಎಂದರಿತು ತಣ್ಣಗಾದೆ. ತಕ್ಷಣ ಅವನು "ಅಯ್ಯೋ, ಅಯ್ಯೋ ನೀನು ಬಸುರಿ ಅಂದ್ಯಾ? ನಿಮ್ಮಮ್ಮನಿಗೆ ಹೇಳ್ತೀನಿ ತಡಿ" ಅಂತ ಎರಡು ಗೋಳುಹೊಯ್ದುಕೊಂಡ. ಈ ಪಾಟಿ blackmail ಮಾಡ್ತಾನೆ ಅಂತ ಅವನ ಸ್ನೇಹಾನೇ ಬಿಟ್ಟಿದ್ದೆ.

ಮೇಷ್ಟ್ರಿಗೆ ಶಿಕ್ಷಿಸಲು ಸ್ಕೇಲು ಬೇಕಿದ್ದು, ಆ ಸ್ಕೇಲನ್ನು ನಮ್ಮನ್ನೇ ಕೇಳಿದರೆ ಕೊಡಬಾರದು. ನಾನಂತೂ ಕೊಡ್ತಿರ್ಲಿಲ್ಲ. ಕಾರಣ ಇಷ್ಟೇ, ಯಾರು ಮೇಷ್ಟರ ಕೈಗೆ ಸ್ಕೇಲ್ ಕೊಡ್ತಾರೋ, ಮೊದಲ ಹೊಡೆತ ಸ್ಕೇಲ್ ಕೊಟ್ಟವರಿಗೇ ಬೀಳುತ್ತಂತೆ! ನಿಮಗೂ ಈ ನಂಬಿಕೆ ಇತ್ತಾ?

ಚಿಕ್ಕಪುಟ್ಟ ನಂಬಿಕೆಗಳಲ್ಲೇ ಬೆಳೆದು ದೊಡ್ಡವರಾದ ನಾವು ಆ ನಂಬಿಕೆಗಳ ಮೇಲೆ ಮಹಡಿಯನ್ನೇ ಕಟ್ಟಿಕೊಂಡು ಬದುಕುತ್ತೇವೆ ಎಂದರೆ ಅಚ್ಚರಿಯಿಲ್ಲ. ಏನೇನೋ ನಂಬಿಕೆಗಳು. ಯಾರ ಯಾರ ಮೇಲೋ ನಂಬಿಕೆಗಳು.

ಇಬ್ಬರು ವ್ಯಕ್ತಿಗಳು ಒಂದೇ ವಿಷಯದ ಬಗ್ಗೆ ಒಂದೇ ರೀತಿ ನಂಬಿಕೆ ಹೊಂದಿಲ್ಲದೆ ಇರಬಹುದು. ಅದನ್ನೇ ಆಧಾರವಾಗಿಟ್ಟುಕೊಂಡು ಸ್ನೇಹ ಕಳೆದುಕೊಳ್ಳಬಾರದು. ಮುಂಬರುವ ದಿನಗಳ ರಾಜಕೀಯ ಸ್ಥಿತಿಗತಿಗಳು ದಿನೇದಿನೇ ಅಥವಾ ಕ್ಷಣಕ್ಷಣಕ್ಕೂ ಬದಲಾಗಬಹುದು. ಅವಕ್ಕೆ ಸ್ಪಂದಿಸುವ ದಿಶೆಯಲ್ಲಿ ಮಾತುಗಳು, ಮನಸುಗಳು ವೈಪರೀತ್ಯಕ್ಕೆ ತಿರುಗದೇ ಇರಲಿ.

English summary
Did you have superstition when you were studying in school? Srinath Bhalle from Richmond, USA, recalls the strange beliefs which he had thought were true, so like other friends. Let's go back to school and recall the sweet memories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more