ಐ ಮಿಸ್ ಬೆಕ್ಕಿನ ಮರೀಸ್!
ಸಾಕು ಮರಿಗಳೇ ಹಾಗೆ. ಮನೆಮಂದಿಗಿಂತ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ಮಕ್ಕಳಿಗಿಂತ ಹೆಚ್ಚು ಮುದ್ದಿಸಬೇಕು. ಎಲ್ಲೇ ಹೊಂಟರೂ ಜೊತೆಯಲ್ಲಿ ಕರೆದುಕೊಂಡೇ ಹೋಗಬೇಕು. ಒಂದೇ ಒಂದು ಏಟು ಕೂಡ ಹೊಡೆಯಬಾರದು. ಅವುಗಳೊಂದಿಗನ ಒಡನಾಟ ಯಾವುದೇ ಸಂಬಂಧವನ್ನು ಮೀರಿದ್ದು. ಸಾಕು ಪ್ರಾಣಿಗಳೊಂದಿಗಿನ ಭಾವನಾತ್ಮಕ ಸಂಬಂಧ ಪದಗಳಲ್ಲಿ ವರ್ಣಿಸುವುದು ಖಂಡಿತ ಸಾಧ್ಯವಿಲ್ಲ.
ಅಂಕಣಕಾರ : ಶ್ರೀನಿಧಿ ಡಿ.ಎಸ್.
ನಾನು ಆಗ ಐದನೇ ತರಗತಿಯಲ್ಲಿದ್ದೆ. ಸಂಜೆ ಅಮ್ಮ ಮಾಡಿಕೊಟ್ಟ ಕಾಫಿ ಕುಡಿಯುತ್ತ ಕೂತ ಹೊತ್ತಿಗೆ ಮಿಯಾವ್ ' ಅನ್ನುವ ಶಬ್ದ ಹಿತ್ತಲಲ್ಲಿ ಕೇಳಿತು. ಕಾಫಿ ಲೋಟ ಹಿಡಿದು ಹೊರಬಂದು ನೋಡಿದರೆ, ಒಂದು ಇಷ್ಟೇ ಇಷ್ಟು ಉದ್ದದ ಬಿಳೀ ಬೆಕ್ಕಿನ ಮರಿ ಅಲ್ಲಿ ಕೂತು ರಾಗ ಹಾಡುತ್ತಿತ್ತು. ಯಾರೋ ತಂದು ನಮ್ಮ ಕಾಂಪೌಂಡಲ್ಲಿ ಅ ಮರಿಯನ್ನ ಬಿಟ್ಟು ಹೋಗಿದ್ದರು ಅನ್ನಿಸುತ್ತದೆ. ನನ್ನ ಮನಸ್ಸನ್ನ ಒಂದೇ ಸಲಕ್ಕೆ ಸೆಳೆದಿತ್ತು ಅ ಬೆಣ್ಣೆ ಮುದ್ದೆ ಮರಿ. ಅಮ್ಮನ ಬಲವಾದ ಪ್ರತಿಭಟನೆಯ ಮಧ್ಯೆಯೂ, ನಾನು ಮತ್ತು ನನ್ನ ತಂಗಿ ಯದ್ವಾ ತದ್ವಾ ಗಲಾಟೆ ಮಾಡಿದ ಪರಿಣಾಮವಾಗಿ ಅ ಮರಿ, ನಮ್ಮ ಮನೆಯ ಸದಸ್ಯನಾಯಿತು. ಬೆಕ್ಕಿನ ಮರಿಗಳ ಜೊತೆಗಿನ ನಮ್ಮ ಒಡನಾಟ ಆರಂಭವಾಗಿದ್ದು ಹೀಗೆ.
ಆ ಮರಿಗೆ ಏನು ಹೆಸರಿಟ್ಟಿದ್ದೆವೋ, ನೆನಪಿಲ್ಲ. ಅದರೆ ಆ ಮರಿ ನಮ್ಮನ್ನಂತೂ ಬಲುವಾಗಿ ಹಚ್ಚಿಕೊಂಡಿತ್ತು, ಮತ್ತು ನಾವು ಅದನ್ನ. ನಾನು ಮತ್ತು ತಂಗಿ ಎಲ್ಲೇ ಹೋದರೂ, ಪುಟು ಪುಟು ಹೆಜ್ಜೆ ಹಾಕುತ್ತ, ನಮ್ಮ ಹಿಂದೆಯೇ ಬರುತ್ತಿತ್ತು. ನಮ್ಮ ಜೊತೆ ಜೋಕಾಲಿಯಲ್ಲಿ ಕೂತು ತೂಗಿಸಿಕೊಳ್ಳುತ್ತಿತ್ತು. ನಮ್ಮ ಬಚ್ಚಲ ಹಂಡೆ ಪಕ್ಕದಲ್ಲಿ ಅಪ್ಪ ಗೋಣೀತಾಟು ಹಾಸಿ, ಅದಕ್ಕೆ ಮಲಗೋಕೆ ಜಾಗ ಮಾಡಿದ್ದರು. ಒಂದು ಬೆಳಗಿನ ಜಾವ ಎದ್ದು ನೋಡಿದರೆ, ಹಂಡೆಯ ಕೆಳಗಿಟ್ಟಿದ್ದ ಬಕೇಟಿನಲ್ಲಿದ್ದ ನೀರಿಗೆ ಬಿದ್ದು, ಮೇಲೆ ಬರಲಾರದೇ.... ಆವತ್ತು ನಾನು ಸಿಕ್ಕಾಪಟ್ಟೆ ಅತ್ತುಬಿಟ್ಟಿದ್ದೆ. ಆಮೇಲೆ ಬೆಕ್ಕಿನ ಮರಿಗಳ ತುಂಟಾಟ ನಮ್ಮ ಮನೇಲಿ ನೋಡೋಕೆ ಐದಾರು ವರ್ಷ ಕಾಯಬೇಕಾಯಿತು, ಬಾಡಿಗೆ ಮನೆಗಳ ಋಣ ತೀರಿ, ಸ್ವಂತ ಮನೆಗೆ ಬರುವವರೆಗೆ.
ನಮ್ಮ ಹೊಸ ಮನೆಗೆ ಬಂದು ನಾಲ್ಕೆಂಟು ತಿಂಗಳು ಕಳೆದಿದ್ದವು. ನಾನಾಗ ಹತ್ತನೇ ಕ್ಲಾಸು. ಅದೇ ಹಳೆಯ ಮರಿಯ ಹಾಗಿನ ಪುಟ್ಟ ಮರಿಯೊಂದರ ಅಗಮನವಾಯಿತು ಒಂದು ಸಂಜೆ. ಆ ಮರಿಯನ್ನು ನೋಡಿದ್ದೇ ತಡ, ಮತ್ತೆ ನನ್ನ ಮತ್ತು ತಂಗಿಯ ವರಾತ, ನಾವು ಸಾಕೋಣ ಈ ಮರಿಯನ್ನ ಅಂತ. ನಾವು ಚಿಲ್ಟಾರಿಗಳಾಗಿದ್ದಾಲೇ ಬಿಟ್ಟಿಲ್ಲವಂತೆ, ಇನ್ನು ಈಗ ಬಿಟ್ಟೇವೆ? ಮರಿ ನಮ್ಮದಾಯಿತು. ಯಾವುದೋ ಮನೆಯ ಮರಿಯನ್ನ ಅದರ ವಾರಸುದಾರರು ಹುಡುಕಿಕೊಂಡು ಬಂದರೂ ಅಮ್ಮ ನಮ್ಮ ಪರ ನಿಂತು, ಅವರನ್ನ ಕನ್ವಿನ್ಸು ಮಾಡಿ ಕಳಿಸಿದರು. ಅದರೆ ನನ್ನಮ್ಮಂಗೋ, ಈ ಬೆಕ್ಕಿನ ಜಾತಿ ಕಂಡರಾಗುವುದಿಲ್ಲ. ನಾವುಗಳು ಈ ಬೆಕ್ಕಿನ ಮರಿಯನ್ನು ಹಿಡಿದು ಮುದ್ದಾಡುತ್ತಿದ್ದರೆ, ಬೆಕ್ಕಿನ ಕೂದಲು ಹೊಟ್ಟೆಗೆ ಹೋದರೆ ಸತ್ತೇ ಹೋಗುತ್ತಾರಂತೆ, ಮದುವೆಯಾದವರಿಗೆ ಮಕ್ಕಳಾಗುವುದಿಲ್ಲವಂತೆ ಎಂದೆಲ್ಲ ಹೆದರಿಸುವುದೋ, ಬೈಯುವುದೋ ಖಾಯಂ. ಆದರೆ ಕೇಳೋರು ಯಾರು?
ನನ್ನ ತಂಗಿ ಆ ಮರಿಗೆ ಚಿನ್ನು ಅಂತ ಹೆಸರಿಟ್ಟಿದ್ದಳು. ನಮ್ಮ ಮನೆಗೆ ಚಿನ್ನು ಬಂದು ಹೋದ ಮೇಲೆ ಸುಮಾರು 10-15 ಬೆಕ್ಕಿನ ಮರಿಗಳು ಬಂದಿವೆಯೋನೋ. ಹಳ್ಳಿ ಮನೆಯಾಗಿದ್ದಕ್ಕೆ, ಯಾವ ಮರಿಗಳೂ 8-10 ತಿಂಗಳಿಗಿಂತ ಹೆಚ್ಚು ಬದುಕುವುದಿಲ್ಲ. ಒಂದೆರಡು ಬೆಕ್ಕುಗಳು ಮಾತ್ರ 2 ವರ್ಷ ಇದ್ದಿದ್ದು ನಮ್ಮ ಮನೆಯ ಮಟ್ಟಿಗೆ ರೆಕಾರ್ಡು. ಗುಮ್ಮ ಹೊಡೆದೋ(?), ನಾಯಿ ಬಾಯಿಗೆ ಸಿಕ್ಕೋ, ಹಾವು ಹಿಡಿಯಲು ಹೋಗಿಯೋ ಹೀಗೆ ಯಾವುದಾದರೂ ಅವಘಡಕ್ಕೆ ಸಿಕ್ಕಿ ಬೆಕ್ಕುಗಳು ಸಾಯುತ್ತವೆ. ಕೂಡಲೇ ಮತ್ತೊಂದು ಹೊಸ ಬೆಕ್ಕಿನ ಮರಿಗೆ ಹುಡುಕಾಟ ಅರಂಭವಾಗುತ್ತದೆ.
ನಮ್ಮ ಬೆಕ್ಕಿನ ಮರಿಗಳನ್ನು ಸಾಕುವ ಹುಚ್ಚು ಯಾವ ಅತಿರೇಕಕ್ಕೆ ಹೋಗಿತ್ತು ಎಂದರೆ, ಒಂದಿಷ್ಟು ತಿಂಗಳು ನಮ್ಮ ಮನೆಯಲ್ಲಿ 7-8 ಬೆಕ್ಕಿನ ಮರಿಗಳು ಒಟ್ಟೊಟ್ಟಿಗೇ ಇದ್ದವು. ಅಕ್ಕ ಪಕ್ಕದ ಮನೆಗಳಲ್ಲಿ ಎಲ್ಲಾದರೂ ಬೆಕ್ಕು ಮರಿಗಳನ್ನ ಹಾಕಿದ್ದರೆ, ಯಾರಾದರೂ ಮರಿಯೊಂದನ್ನ ಅವಚಿಕೊಂಡು ಬಂದು, ಮಾಸ್ಟ್ರೇ, ಒಂದು ಬೆಕ್ಕಿನ ಮರಿ ಉಂಟು ಬೇಕಾ'' ಅಂತ ಅಪ್ಪನನ್ನು ಕೇಳಿದ್ದೂ ಇತ್ತು.
ಮೊದಮೊದಲು ಅಮ್ಮಹೇಸಿಕೊಂಡರೂ ಆಮೇಲೆ ಬೆಕ್ಕಿನ ಮರಿಗಳು ಅವಳ ಪ್ರೀತಿಯನ್ನೂ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದರು. ಹಿಂದೆಲ್ಲ ಬೆಕ್ಕು ಅವಳ ಕಾಲು ಸವರಿದ್ದರೂ ಸಾಕು, ಹೋಗಿ ಕಾಲು ತೊಳೆದುಕೊಂಡು ಬರುತ್ತಿದ್ದವಳು, ಅಮೇಲಾಮೇಲೆ ಹಾಸಿಗೆಗೇ ದಾಳಿ ಮಾಡಿದರೂ, ಸಣ್ಣಗೆ ಬೈದು ದೂರ ಅಟ್ಟುವುದನ್ನ ಕಲಿತಳು. ಅವುಗಳ ಹಾಲು, ರಸ್ಕುಗಳ ಜವಾಬ್ದಾರಿ ಅಮ್ಮನದೇ. ಬೆಕ್ಕುಗಳ ಬಾಣಂತನ, ಮರಿಗಳ ಚಾಕರಿಯನ್ನು ಅಮ್ಮ ಅತ್ಯಂತ ಪ್ರೀತಿಯಿಂದ ಮಾಡುತ್ತಾಳೆ. ಈ ಮರಿಗಳೂ- ಅವುಗಳ ಅಮ್ಮಂದಿರೂ ಅಷ್ಟೇ ಸೊಗಸಾಗಿ ಅಮ್ಮನ ಬಳಿ ಆರೈಕೆ ಮಾಡಿಸಿಕೊಳ್ಳುತ್ತವೆ. ಇದಲ್ಲದೇ, ನಿತ್ಯ ಹೊತ್ತುಹೊತ್ತಿಗೆ ಸರಿಯಾಗಿ ಅಡುಗೆಮನೆ ಬಾಗಿಲಲ್ಲಿ ನಿಂತು ಕಯ್ಯ ಪಯ್ಯ ಗಲಾಟೆ ಮಾಡಿ ಅಮ್ಮನ ಕೈಯಿಂದ ಬೇಕುಬೇಕಾದ್ದನ್ನು ಹಾಕಿಸಿಕೊಂಡು ತಿನ್ನುವ ರೌಡಿಗಿರಿಯನ್ನ ನಮ್ಮಲ್ಲಿ ಬೆಳೆದ- ಬೆಳೆಯುತ್ತಿರುವ ಎಲ್ಲ ಬೆಕ್ಕಿನ ಮರಿಗಳೂ ಪಾಲಿಸುತ್ತವೆ.
ಇನ್ನು, ಈ ಬೆಕ್ಕಿನ ಮರಿಗಳಿಗೆ ಹೆಸರಿಡುವ ಕೆಲಸ.. ನನ್ನ ತಂಗಿಗೆ ಬೆಕ್ಕುಗಳಿಗೆ ಹೆಸರಿಡೋ ವಿಚಾರದಲ್ಲಿ ಪಿಎಚ್‌ಡಿ ಮಾಡೋ ಎಲ್ಲ ಅರ್ಹತೆಗಳೂ ಇವೆ. ಈ ತನಕ ನಮ್ಮ ಮನೆಯ ಹೊಸಿಲು ತುಳಿದ ಎಲ್ಲ ಮುದ್ದು ಮಾರ್ಜಾಲಗಳಿಗೂ, ನಾಮಕರಣ ಮಾಡಿದವಳು ಅವಳೇ. ತೀರಾ ಯಾವ ಪುರೋಹಿತರುಗಳೂ ಮಕ್ಕಳಿಗೆ ಹೆಸರಿಡಲು ಅಷ್ಟು ಅಲೋಚನೆ ಮಾಡುವುದಿಲ್ಲ ಅಂತ ಕಾಣುತ್ತದೆ. ಚಿನ್ನು, ಮಿನ್ನು, ಟಿಂಗು, ಪಿಂಗು, ಮಿಂಗು, ಹೀಗೆ ತರಹೇವಾರಿ ಹೆಸರುಗಳ ಒಡತಿ ಅವಳು. ಬೇರಾರು ಹೇಳುವ ಹೆಸರುಗಳು ಅವಳಿಗೆ ಸಮಾಧಾನವಾಗುದಿಲ್ಲವಾದ್ದರಿಂದ ನೀನೇ ಎಂತಾರು ಹೆಸ್ರು ಇಡು ಮಾರಾಯ್ತಿ'' ಅಂತ ನಾವುಗಳು ಸುಮ್ಮನಾಗುತ್ತೇವೆ. ಕೆಲ ತಿಂಗಳ ಹಿಂದೆ ಫೋನಲ್ಲೇ ಬೆಕ್ಕಿನ ಮರಿಗಳಿಗೆ ತುಂಟ-ತುಂಟಿ ಅಂತ ಹೆಸರಿಡಿಸಿದ್ದಾಳೆ ಈ ಮಾಹಾರಾಯ್ತಿ!
ಈ ಬೆಕ್ಕಿನ ಮರಿಗಳೆಲ್ಲ, ಅದ್ಯಾವ ಕೆಮೆಸ್ಟ್ರಿಯನ್ನು ಹೊಂದಿವೆಯೋ ಗೊತ್ತಿಲ್ಲ ನನಗೆ. ಪ್ರತಿ ಬೆಕ್ಕಿನ ಮರಿ ಕೂಡ, ನಮ್ಮ ಮನೆಯಲ್ಲಿ ಹಿಂದೆ ಇದ್ದ ಮರಿಯ ಗುಣವನ್ನ ತಾವೂ ಪಡೆದಿರುತ್ತವೆ. ಪ್ಲಾಸ್ಟಿಕ್ ಸದ್ದಿಗೆ ಗಲಾಟೆ ಮಾಡಿ ರಸ್ಕು ಹಾಕಿಸಿಕೊಳ್ಳುವುದು, ಕೊಟ್ಟಿಗೆಗೆ ಹಾಲು ಕರೆವ ಹೊತ್ತಿಗೆ ಬರುವುದು, ಪ್ರತಿ ದಿನ ಬೆಳಗ್ಗೆ ಹೂವಿನ ಬುಟ್ಟಿ ಹಿಡಿದು ಹೊರಟಾಗ ಹೂವು ಕೊಯ್ದು ಮುಗಿಸುವವರೆಗೂ ಹಿಂಬಾಲಿಸುವುದು, ಮನೆ ಹಿಂದಿನ ಗುಡ್ಡಕ್ಕೆ ನಮ್ಮ ಜೊತೆಗೆ ವಾಕಿಂಗ್ ಬರುವುದು.. ಹೀಗೆ..
ನಾನು ಈ ಬೆಂಗಳೂರಿನಲ್ಲೀಗ ಅಪ್ಪ- ಅಮ್ಮಂದಿರ ಜೊತೆಗೆ ಬೆಕ್ಕಿನ ಮರಿಗಳನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸುಮಾರು ಎಂಟು ವರುಷಗಳ ಕಾಲ ಅವುಗಳ ತುಂಟಾಟಗಳನ್ನ ನೋಡಿ ಖುಷಿ ಪಟ್ಟಿದ್ದ ಆನಂದ ಈಗಿಲ್ಲವಾಗಿದೆ. ಮನೆಗೆ ಹೋದಾಗ ಈಗಿರುವ ಎರಡು ಬೆಕ್ಕಿನ ಮರಿಗಳು ಕೈಗೇ ಸಿಗುವುದಿಲ್ಲ. ನಾನು ಅವುಗಳಿಗೆ ಅಪರಿಚಿತ. ಮನೆಗೆ ಬಂದ ಆಗಂತುಕ. ಈ ಮರಿಗಳು ನನ್ನ ಹಾಸಿಗೆಗೆ ಬಂದು ನಿದ್ರಿಸುವುದಿಲ್ಲ, ನಾನು ಹೂ ಕೊಯ್ಯ ಹೊರಟರೆ ನನ್ನನ್ನು ಹಿಂಬಾಲಿಸುವುದಿಲ್ಲ. ನನ್ನನ್ನ ರಸ್ಕು ಹಾಕು ಅಂತ ಪೀಡಿಸುವುದಿಲ್ಲ. ಕೊಟ್ಟಿಗೆಗೆ ಹೋಗಲು ಅಲ್ಲಿ ದನಗಳೇ ಇಲ್ಲ, ಇನ್ನು ಇವುಗಳೆಲ್ಲಿಂದ ಬಂದಾವು?
ಎರಡು ದಿನಕ್ಕೊಮ್ಮೆಯಾದರೂ, ಅಪ್ಪ ಅಥವಾ ಅಮ್ಮ, ಬೆಕ್ಕಿನ ಮರಿಗಳ ಸುದ್ದಿಯನ್ನ ನನ್ನ ಬಳಿ ಪ್ರಸ್ತಾಪಿಸುತ್ತಾರೆ. ತುಂಟ ಹಿಂಗೆ ಮಾಡ್ತು, ತುಂಟಿ ಕಥೆ ಹೀಂಗೆ, ಅಂತ. ಅಮ್ಮ ಅವತ್ತು ಹೇಳುತ್ತಿದ್ದಳು, ಅಪ್ಪ ಅಮ್ಮ ಇಬ್ಬರೂ ಅದೆಲ್ಲಿಗೂ ಹೊರಗೆ ಹೊರಟಿದ್ದರಂತೆ, ಈ ಎರಡು ಬೆಕ್ಕಿನ ಮರಿಗಳಿಗೂ, ಎಲ್ಲೂ ಹೋಗಬೇಡಿ, ಮನೇಲೇ ಇರಿ ಅಂತ ಹೇಳಿ ಹೋಗಿದ್ದರಂತೆ. ಇವರು ಬರುವಾಗ ಮನೆಯ ಪಡಸಾಲೆಯಲ್ಲಿ ಸುಮ್ಮಗೇ ಕುಳಿದ್ದವಂತೆ ಅವೆರಡು ಮರಿಗಳು.ಅಮ್ಮ ತುಂಬ ಭಾವನಾತ್ಮಕವಾಗಿ ಇದನ್ನ ಹೇಳುತ್ತಿದ್ದರೆ ನನಗೇನು ಹೇಳಬೇಕು ಅಂತ ತೋಚಲೇ ಇಲ್ಲ.
ಅಪ್ಪ ಮೊನ್ನೆಯೊಂದಿನ ಫೋನ್ ಮಾಡಿದಾಗ ತುಂಟ' ಮರಿಯ ಬಗ್ಗೆ ಹೇಳುತ್ತಿದ್ದರು, ನಾನು ತೋಟಕ್ಕೆ ನೀರು ಹಾಕಲು ಹೋದರೆ ಪ್ರತಿದಿನ ನನ್ನ ಹಿಂದೇ ಬರುತ್ತದೆ, ಕಟ್ಟಿಗೆ ತರಲು ಹೋದರೆ, ಅಥವಾ ಮತ್ತಿನ್ನು ಯಾವುದಾದರೂ ಕೆಲಸಕ್ಕೆ ಹೋದರೆ ಬೆನ್ನೇ ಬಿಡುವುದಿಲ್ಲ, ಒಂದು ದಿನ ಹಾಲು ತರಲು ಹೋದಾಗ ಡೈರಿಗೂ ಬಂದಿತ್ತು ಈ ತುಂಟ... ಅಪ್ಪ ಮಾತನಾಡುತ್ತಲೇ ಇದ್ದರು..
ನಾನು ಮತ್ತು ತಂಗಿ ಇಬ್ಬರೂ ಮನೆಯಲ್ಲಿಲ್ಲದ ಖಾಲಿತನವನ್ನು ಈ ಬೆಕ್ಕಿನಮರಿಗಳ ಮೂಲಕ ತುಂಬಿಕೊಳ್ಳುವ ಯತ್ನವನ್ನ ಅಪ್ಪ ಅಮ್ಮ ಮಾಡುತ್ತಿದ್ದಾರೆ ಅನ್ನಿಸಿತು ನನಗೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications