ನೂರು ಚಿತ್ರಗಳಲ್ಲಿ ಕರ್ನಾಟಕದ ನೀರ ಹಾಡು
ಬೆಂಗಳೂರು, ಫೆ. 26 : ಜಲಧಾರೆ, ಜಲಪಾತಗಳೆಂದರೆ ಜೋಗ, ಅಬ್ಬೆ, ಗಗನಚುಕ್ಕಿ ಭರಚುಕ್ಕಿ ಮುಂತಾದ ಸೌಕರ್ಯಗಳು ತೀರ ಕಡಿಮೆ ಇರುವ ಪ್ರಸಿದ್ಧ ತಾಣಗಳತ್ತ ನಮ್ಮ ಗಮನ ಹರಿಯುವುದು ಸಾಮಾನ್ಯ. ಆದರೆ ರಾಜ್ಯದಲ್ಲಿ, ವಿಶೇಷವಾಗಿ ಪಶ್ಚಿಮಘಟ್ಟಗಳ ಸಾಲಿನಲ್ಲಿ ನಾವು ನೀವು ಕಂಡು ಕೇಳರಿಯದ ಎಷ್ಟೋ ಜಲಪಾತಗಳುಂಟು. ಈ ಅನಾಮಿಕ ನೀರ ಚಿಲುಮೆಗಳು ವನಸುಮಗಳಿಗೆ ನೀರೆರೆಯುವ ವನಧಾರೆಗಳೆ ಹೌದು. ಇವುಗಳನ್ನೆಲ್ಲ ಕಣ್ಣಾರೆ ಕಾಣುವುದಕ್ಕೆ ಒಂದು ಜನ್ಮ ಬೇಕು. ಕೆಲವನ್ನಾದರೂ ನೋಡಬೇಕೆಂದರೆ ಟ್ರೆಕ್ಕಿಂಗ್ ಸಾಹಸಕ್ಕೆ ಶರಣಾಗಲೇಬೇಕು.
ನಮ್ಮ ನಾಡಿನ ನಾನಾ ಭಾಗಗಳಲ್ಲಿ ಧುಮ್ಮಿಕ್ಕುವ ನೂರಾಯೆಂಟು ಜಲಪಾತ, ಶುಚಿಯಾಗಿರುವ ಸಮುದ್ರತೀರ, ಇನ್ನೂ ಒಣಗದ ಕೆರೆ ಚಿತ್ರಗಳನ್ನು ಒಂದೆಡೆ ಕಾಣುವ ಕನಸನ್ನು ಕಂಡದ್ದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ. ಪ್ರವಾಸೋದ್ಯಮನ್ನು ಅಭಿವೃದ್ಧಿಪಡಿಸಬೇಕಾದರೆ ರಾಜ್ಯದ ರಮಣೀಯ ತಾಣಗಳ ಪರಿಚಯ ಹಾಗೂ ಚಿತ್ರದರ್ಶನ, ಮಾರ್ಗದರ್ಶನ ಮಾಡಿಸುವುದು ಅಗತ್ಯ. ಅಂತೆಯೇ, ಅಪರೂಪದಲ್ಲಿ ಮರೆಮಾಚಿಕೊಳ್ಳುವ ಹಾಗೂ ಪ್ರಸಿದ್ಧಿಯಲ್ಲಿ ಕಳೆದುಹೋಗುವ ಕರ್ನಾಟಕದ ನೀರು ನೆಲೆಗಳನ್ನು ಕ್ಯಾಮಾರಾದಲ್ಲಿ ಸೆರೆಹಿಡಿದು ಅವುಗಳ ಬೃಹತ್ ಪ್ರದರ್ಶನ ಏರ್ಪಡಿಸುವ ಒಂದು ಒಳ್ಳೆ ಕೆಲಸವನ್ನು ಇಲಾಖೆ ಕೈಗೆತ್ತಿಕೊಂಡಿತು.
ಈ ದಿಕ್ಕಿನಲ್ಲಿ ಇಲಾಖೆ ಮೊದಲ ಮಾಡಿದ ಕೆಲಸವೆಂದರೆ ಕ್ಯಾಮರಾ ಕೈಚಳಕದಲ್ಲಿ ಪಳಗಿದ ಮತ್ತು ಒಳ್ಳೆ ಚಿತ್ರ ಸೆರೆಹಿಡಿಯಲು ಬೇಕಾದ ಶ್ರದ್ಧೆ ಮತ್ತು ಸಾಹಸಕ್ಕೆ ಇಳಿಯುವ ಛಾಯಾಚಿತ್ರಕಾರನ ಆಯ್ಕೆ. ಪ್ರವಾಸೋದ್ಯಮ ಇಲಾಖೆಯವರು ಈ ಜವಾಬ್ದಾರಿಯನ್ನು ನುರಿತ ಛಾಯಾಚಿತ್ರಕಾರ ಕೇಶವ ವಿಟ್ಲ (47) ಅವರಿಗೆ ವಹಿಸಿತು. ತಡಮಾಡದೆ ವಿಟ್ಲ ಅವರು ಕ್ಯಾಮರಾ ಹೆಗಲಿಗೆ ಏರಿಸಿಕೊಂಡು ಕಾಡು ಮೇಡು ಅಲೆಯುತ್ತಾ ಹೊರಟರು. 35 ಜಲಪಾತಗಳು, 15 ಸಮುದ್ರ ತೀರಗಳು, ಹಾಗೂ ಅನೇಕ ಕೆರೆ ಕಟ್ಟೆ ಕಾಲುವೆಗಳ ಚಿತ್ರ ಸೆರೆಹಿಡಿದರು. ಆಯ್ದ ಒಂದು ನೂರು ಛಾಯಾಚಿತ್ರಗಳನ್ನು ನಾವೀಗ ನೋಡಬಹುದು.
2007ರ ಜುಲೈಯಿಂದ ಜನವರಿ 2008ರವರೆಗೆ ಕೇಶವ್ ಅವರು ಮಲೆನಾಡು, ಪಶ್ಚಿಮಘಟ್ಟ, ಕರಾವಳಿ ಪ್ರದೇಶದ ಅನೂಹ್ಯ ಜಾಗಗಳಲ್ಲಿ ಒಬ್ಬಂಟಿಗರಾಗಿ ವಿಸ್ತೃತ ಪ್ರವಾಸ ಮಾಡಿದರು. ಕಾಡಿನಗೂಡುಗಳಲ್ಲಿ ತಂಪನೆರೆಯುತ್ತಿರುವ ಹೆಸರೇ ಕೇಳದ ಜಲಧಾರೆಗಳ ಚಿತ್ರಗಳನ್ನು ಕ್ಲಿಕ್ಕಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದವರಾದ ಕೇಶವ್, ಕನ್ನಡಪ್ರಭ ದಿನಪತ್ರಿಕೆಯಲ್ಲಿ ಛಾಯಾಚಿತ್ರಕಾರರಾಗಿ ಕೆಲಸಮಾಡುತ್ತಿದ್ದಾರೆ. ಬೆಳಗಾದರೆ ರದ್ದಿಯ ಜತೆ ಸಾಯುವ ದೈನಂದಿನ ಸುದ್ದಿ ಚಿತ್ರಗಳ ವೃತ್ತಿಯ ಜತೆಗೆ ಅವರ ಕ್ಯಾಮರಾ ಕಣ್ಣಿಗೆ ಬದುಕಿನ ಅನೇಕ ಸ್ವಾರಸ್ಯ ಸಂಗತಿಗಳು ಕಾಣುತ್ತವೆ. ಅವನ್ನೆಲ್ಲ ಅವರು ಶ್ರದ್ಧೆಯಿಂದ ಸೆರೆಹಿಡಿದು ತಮ್ಮ ವೆಬ್ ಮನೆಯಲ್ಲಿ ಪೇರಿಸಿಡುತ್ತಾರೆ. ತಮ್ಮ ತವರು ಜಿಲ್ಲೆ ದಕ್ಷಿಣಕನ್ನಡದ ನಾನಾ ಮುಖಗಳನ್ನು ಬಿಂಬಿಸುವ ಚಿತ್ರಸಂಪುಟ ಮಾಡುವ ಯೋಜನೆಯೂ ಅವರ ತಲೆಯೊಳಗಿದೆ.
ಕೇಶವ್ ಅವರ ಪ್ರಸ್ತುತ ನೀರು ಚಿತ್ರಗಳ ಪ್ರದರ್ಶನ Karnataka Water Scapes ಬೆಂಗಳೂರಿನಲ್ಲಿ ಏರ್ಪಾಟಾಗಿದೆ. ನಾಳೆ, ಬುಧವಾರ ಫೆ. 27ರಂದು ನಗರದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ತೆರೆದುಕೊಳ್ಳುವ ಈ ಪ್ರದರ್ಶನವನ್ನು ಕ್ರಿಕೆಟ್ಟಿಗ ಅನಿಲ್ ಕುಂಬ್ಳೆ ಉದ್ಘಾಟಿಸಲಿದ್ದಾರೆ. ಪ್ರದರ್ಶನ ಮಾರ್ಚ್ 4ರವರೆಗೆ ಇರುತ್ತದೆ.
ಕೇಶವ ವಿಟ್ಲ ಕ್ಯಾಮೆರಾ ಕಣ್ಣಲ್ಲಿ ಬರೀ ನೀರು












Click it and Unblock the Notifications