ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕೆರೆಗಳು ಮಾತಾಡುತ್ತಿವೆ! ಕೇಳಿಸಿಕೊಳ್ಳಿ..

By Staff
|
Google Oneindia Kannada News

ಊರು ಬೆಳೆಯಬೇಕು ಅಂದರೆ ಕಾಡು ಕಣ್ಮರೆಯಾಗಬೇಕು, ಕೆರೆ ಕರಗಬೇಕು, ಬೆಟ್ಟ ಕಡಿಯಬೇಕು, ನದಿ ಬರಿದಾಗಬೇಕು. ಅಭಿವೃದ್ಧಿ(?) ಹಿಂದೆ ಓಡುತ್ತಿರುವ ನಮಗೆ ನಮ್ಮೂರಿನ ಕೆರೆ ಏನಾಗಿದೆ ಎಂದು ನೋಡುವಷ್ಟು ತಾಳ್ಮೆ ಇಲ್ಲ. 'ಕೆರೆ ಕರಗಿದರೆ ನಮಗೇನೂ, ಅಲ್ಲಿ ನಮಗೊಂದು 30X40ರ ಸೈಟ್ ಸಿಗುತ್ತಾ?'ಅನ್ನುವಲ್ಲಿಗೆ ನಮ್ಮ ಸ್ವಾರ್ಥ ಬಂದು ನಿಲ್ಲುತ್ತದೆ. ಏನೋ ಇಂದು ಕೆರೆ ಮಾಯ, ನಾಳೆ?

  • ಎಸ್ಕೆ. ಶಾಮಸುಂದರ

ಬೆಂಗಳೂರು ಕೆರೆಗಳು ಮಾತಾಡುತ್ತಿವೆ! ಕೇಳಿಸಿಕೊಳ್ಳಿ.. ಬೆಂಗಳೂರಿನಲ್ಲಿ ಔಷಧಿಗೋಸ್ಕರ ಉಳಿದಿರುವ ದೊಡ್ಡಕೆರೆಗಳಲ್ಲಿ ಹಲಸೂರು ಕೆರೆಯೂ ಒಂದು. ಕೆರೆ ಸುತ್ತಲೂ ಮನೆ, ಮಠ, ಮಸೀದಿ, ಹೋಟೆಲು ಸಿನಿಮಾಮಂದಿರ, ಮಳಿಗೆ ಮುಂಗಟ್ಟು, ಹಾದಿ ಬೀದಿ ಸಂದಿಗೊಂದಿಗಳಿಂದ ಪೊಂ ಪೊಂ ಮಾಲಿನ್ಯವನ್ನು ಮೌನದಲ್ಲಿ ಕೇಳಿಸಿಕೊಳ್ಳುತ್ತಾ ಶಾಂತವಾಗಿ ಮಲಗಿರುವ ಕೆರೆಯಿದು. ಮಕ್ಕಳನ್ನು ಒಂದು ರಜಾದಿನ ಕೆರೆ ಬಳಿಗೆ ಕರೆದೊಯ್ದು ದೋಣಿವಿಹಾರ ಮಾಡಿಸಿ ಐಸ್ ಕ್ರೀಂ ಸವಿದು ಬರುವ ಕುಟುಂಬಗಳಿಗೆ ಯಾರೋ ಹೇಳಿ ಮಾಡಿಸಿಟ್ಟ ಜಾಗ.

ಸುಂದರ ಮೈಕಟ್ಟು ಮತ್ತು ಗಾಂಭೀರ್ಯವನ್ನು ಮೈಗೂಡಿಸಿಕೊಂಡಿರುವ ಈ ಕೆರೆ ಆಗಾಗ ಮಲಿನವಾಗುತ್ತಿರುತ್ತದೆ. ಮುಖ್ಯವಾಗಿ ಜೊಂಡು ಹಿಡಿಯುವುದು ಈ ಕೆರೆಗೆ ಒಂದು ಶಾಪವೇ ಇರಬೇಕು. ಹಲಸೂರು ಕೆರೆ ಕೊಳೆಯಾಗಿದೆ, ನೀರು ಮಲಿನವಾಗಿದೆ, ಮೀನುಗಳು ಸತ್ತಿವೆ ಎನ್ನುವ ಸುದ್ದಿಗಳು ಪದೇಪದೇ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ನಿಮಿಷ ತಡಮಾಡದೆ ಕಾರ್ಪೋರೇಷನ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೇಲ್ಮೈ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುವುದುಂಟು ! ಆದರೆ ಕೊನೆಗೂ ಅದು ಸ್ವಚ್ಛವಾಗುವುದು ಎಂಇಜಿ (Madras Engineering Group) ಕಾಲಾಳುಗಳು ನೀರಿಗಿಳಿದಾಗಲೇ.

ಹಲಸೂರು ಕೆರೆ ಎಂಇಜಿ ಪಡೆಯ ನೆರವಿಗಾಗಿ ಮತ್ತೆ ಕಾದು ಕುಳಿತಿದೆಯೋ ಏನೋ? ಕೆರೆ ಗಲೀಜಾಗುವುದಕ್ಕೆ ಈ ಬಾರಿ ಕಾರಣ ಬೆಂಗಳೂರು ಪೂರ್ವ ಭಾಗದ ಗಣೇಶ ಮತ್ತು ಕಾಳಿಕಾಂಬೆಯ ಭಕ್ತರು. ಗಣೇಶ ಮತ್ತು ದುರ್ಗೆಯರ ಪ್ರತಿಮೆಗಳು ಈ ವರ್ಷ ಇಲ್ಲಿ ಎಷ್ಟು ಮುಳುಗಿವೆ ಎಂದರೆ ಕೆರೆಯ ಹೂಳು ಎತ್ತರವಾಗಿದೆ, ನೀರು ಕಪ್ಪಾಗಿದೆ, ಬಣ್ಣಗಳಲ್ಲಿನ ರಾಸಾಯನಿಕ ವಸ್ತುಗಳು ನೀರಮೇಲೆ ತೇಲುತ್ತಾ ವಾಸನೆ ಹರಡುತ್ತಿದೆ. ಈ ಭಾಗದ ಅನೇಕರಿಗೆ ಹಲಸೂರು ಕೆರೆ ಕಸದ ತೊಟ್ಟಿ ಆಗಿರುವುದೇ ಈ ಪರಿಸ್ಥಿತಿಗೆ ಕಾರಣ. ಕೆರೆಯ ಅಂಚಿನಲ್ಲಿ ವಾಸವಾಗಿರುವವರು ವಾಸನೆ ತಡೆಯದೆ ರೇಗಾಡುತ್ತಿದ್ದಾರೆ.

ಲಾಲ್ ಬಾಗ್ ಕೆರೆಗೂ ಹೀಗೇ ಆಗುತ್ತಿತ್ತು. ವಾಕರ್ಸ್ ಗಲಾಟೆ ಮಾಡಿದರು. ಕೆರೆ ಶುದ್ಧಗೊಳಿಸುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ (2000)ನೀಡಿದ ನಂತರ ಶುದ್ಧೀಕರಣಕ್ಕೆ ಚಾಲನೆ ದೊರೆಯಿತು. ಕಳೆದ ಕೆಲವು ವರ್ಷಗಳಿಂದೀಚೆಗೆ ಗಣೇಶನನ್ನು ಮುಳುಗಿಸಲು ಬಿಸಿಸಿ ಆಡಳಿತ ಟ್ಯಾಂಕರ್ ವ್ಯವಸ್ಥೆ ಮಾಡುತ್ತಿರುವುದರಿಂದ ಕೆರೆ ಮಲಿನವಾಗುವುದು ಸ್ವಲ್ಪ ತಪ್ಪಿದೆ. ಆ ಕಡೆ ಯಡಿಯೂರು ಕೆರೆಗೆ ಭರ್ಜರಿ ಬೇಲಿ ಹಾಕಿರುವುದರಿಂದ ಗಣೇಶ ಭಕ್ತರು ಅಲ್ಲಿಗೆ ಲಾಗ ಹಾಕುವುದು ಕಷ್ಟ. ಸ್ಯಾಂಕಿ ಟ್ಯಾಂಕಿಗೆ ಅಂಥ ಬಂದೋಬಸ್ತ್ ಇಲ್ಲದಿದ್ದರೂ ಆ ಭಾಗದ ಜನ ಕೆರೆಗೆ ಸೇವಂತಿಗೆ ಹಾರ ಹಾಕುವುದಿಲ್ಲ. ಹೆಬ್ಬಾಳ ಕೆರೆಗೆ ಹಲಸೂರು ಕೆರೆಯ ಮಾದರಿ ಜೊಂಡುಹಿಡಿಯುವ ಶಾಪವಿದೆ. ಅಲ್ಲಿ ನೀವು ಗಣೇಶನನ್ನಾದರೂ ಮುಳುಗಿಸಬಹುದು ಯಾರನ್ನಾದರೂ ಮುಳುಗಿಸಬಹುದು.

ದಟ್ಸ್ ಕನ್ನಡ ಕಚೇರಿಯ ಬೆನ್ನಿಗೆ ಇರುವ ಬಿಟಿಎಂ ಒಡಲಾಳದ ಮಡಿವಾಳ ಕೆರೆಯನ್ನು ಅಭಿವೃದ್ಧಿಪಡಿಸಲು ಬಿಡಿಎ ಮುಂದಾಗಿದ್ದು ನಿಜ. ಆದರೆ ಇಲ್ಲಿ ಆಫ್ರಿಕಾ ಖಂಡವನ್ನು ಮೀರಿಸುವಷ್ಟು ಸೊಳ್ಳೆಗಳ ಕಾಟ ಇರುವುದರಿಂದ ಮತ್ತು ಟ್ರಾಫಿಕ್ ಕಿರಿಕಿರಿಯಿಂದ ಜನ ಈ ಕಡೆ ತಲೆ ಹಾಕಿ ಮಲಗುವುದಿಲ್ಲ. ಕೆರೆಯಂಗಳದಲ್ಲಿ ಕಟ್ಟಡಗಳು, ಫ್ಲ್ಯಾಟುಗಳು ಹೇರಳವಾಗಿ ತಲೆ ಎತ್ತಿರುವುದರಿಂದ ನೀರು ನಿಲ್ಲುವುದಕ್ಕೆ ಕೆರೆಯಲ್ಲಿ ಜಾಗವೇ ಇಲ್ಲ. ಆದಕಾರಣ ಜೋರು ಮಳೆ ಬಂದಾಗ ನೀರು ನಮ್ಮ ಕಾಲು ಬುಡಕ್ಕೆ ಬರುತ್ತದೆ. ಮಳೆ ಕೈಕೊಟ್ಟಾಗ ಮಡಿವಾಳ ಕೆರೆ ಪಾವಗಡವಾಗುತ್ತದೆ, ಮಳೆ ಬಂದರೆ ಭದ್ರಾವತಿಯಾಗುತ್ತದೆ, ಮಳೆ ಸುರಿಯಿತೋ ಅರಬ್ಬಿ ಸಮುದ್ರವಾಗುತ್ತದೆ.

ನಗರಸಭೆಯ ಹಳೆಯ ಕಡತಗಳ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 113 ಕೆರೆಗಳಿದ್ದವೆಂದು ಎನ್.ಲಕ್ಷಣ್ ರಾವ್ ಹೇಳುತ್ತಿದ್ದರು. ಆ ಕೆರೆಗಳ ಪೈಕಿ ಶೇ.90ರಷ್ಟು ಕೆರೆಗಳಾಗಿ ಉಳಿದಿಲ್ಲ. ಅವೆಲ್ಲ ಬಡಾವಣೆಗಳಾಗಿ ಒತ್ತುವರಿಯಾಗಿ ಮನೆ ಕಚೇರಿ ಬಸ್ ಟರ್ಮಿನಲ್ ಆಗಿ ಕಟ್ಟಡಗಳು ತಲೆಯೆತ್ತಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಸಾಕ್ಷಿಯಾದವು. ಹೋಗಲಿ ಬಿಡಿ. ಹೋದದ್ದು ಹೋಯಿತು, ಅಳಿದುಳಿದ ಕೆರೆಗಳ ಜೀರ್ಣೋದ್ಧಾರ ಮತ್ತು ಪಾಲನೆ ಇರಲಿ ಎಂಬ ಉದ್ದೇಶಕ್ಕೆ "ಕೆರೆ ಅಭಿವೃದ್ಧಿ ಪ್ರಾಧಿಕಾರ" ಎನ್ನುವ ಒಂದು ಸಂಸ್ಥೆಯಿದೆ . ಈ ಕೆರೆಯಂಗಳದಲ್ಲಿ ಸ್ವಲ್ಪ ವಿಹರಿಸಿ. http://www.ldakarnataka.co.in/

ಕೆರೆಗಳಿಗೆ ನೀರು ಒಸರುವ ಕ್ಯಾಚ್ಮೆಂಟ್ ಏರಿಯಾ, ಕೆರೆಯ ಅಸಲಿ ವಿಸ್ತೀರ್ಣ,ಹೂಳು ತೆಗೆಯುವುದು, ಕೋಡಿ ಬಿದ್ದಾಗ ನೀರು ಹರಿದು ಹೋಗುವುದಕ್ಕೆ ಕಾಲುವೆ, ಕಾರ್ಖಾನೆ ಮತ್ತಿತರ ಮೂಲಗಳಿಂದ ಹರಿದು ಬರುವ ತ್ಯಾಜ್ಯವಸ್ತುಗಳ ತಡೆ, ಕೆರೆ ಅಭಿವೃದ್ದಿಗೆ ಅನುದಾನ, ಕೆರೆಗಳ ಸೌಂದರ್ಯ, ಮೀನು ಸಾಕಣೆ, ದೋಣಿವಿಹಾರ ಮತ್ತಿತರ ಕೆರೆ ಸಂಬಂಧಿ ವಿಚಾರಗಳ ಉಸ್ತುವಾರಿ ನೋಡಿಕೊಳ್ಳಲು "ಕೆರೆ ಪ್ರಾಧಿಕಾರ"ಕ್ಕೆ ನೀವು ಆಗಾಗ ಪತ್ರ ಬರೆದು ನಿಮ್ಮ ಊರಿನ ಕೆರೆಗಳ ವಿಷಯವಾಗಿ ಮಾಹಿತಿ ಪಡೆಯಬಹುದು. ದೂರು ಕೊಡಬಹುದು. ಅವರ ಇ-ಮೇಲ್ ವಿಳಾಸ ನಿಮ್ಮ ಬಳಿ ಇಟ್ಟುಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X