ದಟ್ಸ್‌ಕನ್ನಡ ಡಾಟ್ ಕಾಂಗೆ ಪತ್ರಕರ್ತರು ಬೇಕಾಗಿದ್ದಾರೆ
ದಟ್ಸ್‌ಕನ್ನಡ ಅಂತರ್ ಜಾಲತಾಣದಲ್ಲಿ ಉಪಸಂಪಾದಕರ ಹುದ್ದೆ ಖಾಲಿ ಇದೆ. ವೆಬ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಕನಸು, ಆಸಕ್ತಿ ಮತ್ತು ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೃತ್ತಿ ಮತ್ತು ಹವ್ಯಾಸ ಹದವಾಗಿ ಬೆರೆತ ಈ ನೌಕರಿಗೆ ಅತ್ಯಗತ್ಯವಾಗಿ ಬೇಕಾದ ಸಿದ್ಧತೆ ಹಾಗೂ ಅರ್ಹತೆ ಹೊಂದಿರುವವರು ಈ ಕೂಡಲೆ ಕೆಳಕಂಡ ಈಮೇಲ್ ವಿಳಾಸಕ್ಕೆ ಬರೆದುಕೊಳ್ಳಬೇಕು.
ಜನ್ಮ ಸ್ಥಳ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಅನುಭವ, ನ್ಯಾಷನಾಲಿಟಿ, ಮೇಲೋ ಫೀಮೇಲೋ ಮುಂತಾದ ವಿವರಗಳು ನಮ್ಮ ಕಚೇರಿಯ ಮಾನವ ಸಂಪನ್ಮೂಲ ಇಲಾಖೆಗೆ ಒದಗಿಸಬೇಕಾಗುತ್ತದೆ. ಆದರೆ, ದಟ್ಸ್ ಕನ್ನಡ ಸಂಪಾದಕೀಯ ವಿಭಾಗದ ನಿರೀಕ್ಷೆಗಳು ಬೇರೆಯೇ ಆಗಿದ್ದು ಅವು ಈ ಕೆಳಕಂಡಂತಿವೆ :
Nose for News, ಅಂತಾರಲ್ಲ ಅದು ಕಡ್ಡಾಯ.ನಮ್ಮ ಸುತ್ತ ಮುತ್ತಲಿನ ಆಗುಹೋಗುಗಳನ್ನು, ಸುದ್ದಿ, ಮನರಂಜನೆ, ಮಾಹಿತಿ, ಕನ್ನಡನಾಡಿನ ಸಾಮಾಜಿಕ ವಿಷಯ ವಿವೇಚನೆಗಳನ್ನು ಬಿಂಬಿಸುವ ಸಾಮಗ್ರಿಗಳನ್ನು ಶೋಧಿಸಿ, ಆರಿಸಿ, ಸೋಸಿದನಂತರ ಕನ್ನಡದಲ್ಲಿ ಸರಳವಾಗಿ, ಲೀಲಾಜಾಲವಾಗಿ, ನಿರುದ್ವಿಗ್ನವಾಗಿ ಬರೆಯಲು ಬರಬೇಕು.
ಭಾರತ, ಕರ್ನಾಟಕ ಮತ್ತು ಮುಖ್ಯವಾಗಿ ಕನ್ನಡ ವಿಶ್ವದ ಚಿತ್ರ ವಿಚಿತ್ರಗಳನ್ನು ಅಕ್ಷರಗಳಲ್ಲಿ ಬಿಡಿಸುವ ಶ್ರದ್ಧೆ ಹಾಗೂ ಕೌಶಲ್ಯ ಇರಬೇಕು. ಮಾಧ್ಯಮದಲ್ಲಿ ಹರಿದಾಡುವ ಇಂಗ್ಲಿಷ್ ನೀರು ಕುಡಿದಿರತಕ್ಕದ್ದು. ಯಾವುದೇ ಸಂಗತಿಯನ್ನು ಕನ್ನಡದಲ್ಲಿ ನಿರರ್ಗಳವಾಗಿ ಬರೆಯುವುದರ ಮೂಲಕ ಅರ್ಥ ವಿಸ್ತಾರ ಮಾಡುವ ಜಾಣ್ಮೆ ಗೊತ್ತಿರಬೇಕು. ಅಂಥ ಕಲಾವಿದರು ಮಾತ್ರ ಈ ಕೆಲಸಕ್ಕೆ ಪ್ರಯತ್ನಿಸಬಹುದು.
ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಇರಬೇಕು ಎಂಬ ನಿಯಮ ನಿಮಗೆ ಗೊಂದಲ ಉಂಟುಮಾಡದಿರಲಿ. ಕನ್ನಡ ಕೀಲಿಮಣೆಯ ಮೇಲೆ ಪ್ರಭುತ್ವ, ಕನ್ನಡ ಫಾಂಟುಗಳ ಬಗೆಗೆ ಸ್ವಲ್ಪ ಮಾಹಿತಿ, ಕುಳಿತಲ್ಲೆ ಜಗತ್ತು ಸುತ್ತಿಬರುವ ಚಾರಣ ವಿದ್ಯೆ(ಅದನ್ನು ಷಣ್ಮುಖ ಪ್ರಜ್ಞೆ ಎನ್ನುತ್ತಾರೆ), ಇಷ್ಟು ಕೂಡ ಗೊತ್ತಿಲ್ಲದಿದ್ದರೆ ಈ ಕೆಲಸ ನಿಮಗಲ್ಲ.
ಕನ್ನಡ ಸಾಹಿತ್ಯ, ಕರ್ನಾಟಕದ ರಾಜಕೀಯ, ಇ-ಪ್ರಪಂಚ, ಕನ್ನಡ ಚಲನಚಿತ್ರ, ಸಾಮಾನ್ಯ ವಿಜ್ಞಾನ, ರೈತ ಕಾರ್ಮಿಕರ ಜೀವನ, ಮಧ್ಯಮ ವರ್ಗದ ತುಮುಲಗಳು, ಮೇಲ್ವರ್ಗದ ತೆವಲುಗಳು, ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಆರ್‌ಗ್ಯಾನಿಕ್ ಕೆಮಿಸ್ಟ್ರಿ,ಮೆಟಾ ಫಿಸಿಕ್ಸ್ ಅಥವಾ ಉಳಿದ್ಯಾವುದೇ ಸಂಗತಿಗಳ ಬಗೆಗೆ ಅಭ್ಯರ್ಥಿಗಳಿಗೆ ಆಳವಾದ ಜ್ಞಾನ ಮತ್ತು ಅಧ್ಯಯನ ಇಲ್ಲದಿದ್ದರೆ ತೊಂದರೆಯಿಲ್ಲ. ಜ್ಞಾನಪೀಠ ಗಳಿಸಿದ ಸಾಹಿತ್ಯ ಮತ್ತು ಸಾಹಿತಿಗಳನ್ನು ಓದಿಲ್ಲದಿದ್ದರೆ ಅಪರಾಧವಲ್ಲ. ನೂಲು ಗಟ್ಟಿಯಾಗಿರುವ ಸಂತೆ ಹೊತ್ತಿಗೆ ನೀಟಾದ ಮೂರು ಮೊಳ ಸೀರೆ ನೇಯುವ ವಿದ್ಯೆ ನಿಮಗೆ ಕರಗತವಾಗಿದ್ದರೆ ನೀವು ನಮ್ಮ ಜತೆಗಾರರಾಗುವುದಕ್ಕೆ ಲಾಯಕ್ಕು.
ಅಭ್ಯರ್ಥಿಗಳು ಆಕಸ್ಮಾತ್ ಎಡ ಬಲ ಸಿದ್ಧಾಂತಗಳನ್ನು ಓದಿಕೊಂಡಿದ್ದರೆ ಅದು ನಮಗೆ ಗೊತ್ತಾಗಬಾರದು. ಭೈರಪ್ಪ ಮತ್ತು ಅನಂತಮೂರ್ತಿ, ಯಡ್ಯೂರಪ್ಪ ಮತ್ತು ಕುಮಾರಸ್ವಾಮಿ, ದೇವಸ್ಥಾನ , ದರ್ಗ, ಭೂಗತ ಪ್ರಪಂಚ ಮುಂತಾದ ಎಲ್ಲ ಕ್ಷೇತ್ರ ವ್ಯಕ್ತಿಗಳ ಕಾನ್‌ಟ್ಯಾಕ್ಟ್ ಇದ್ದರೆ ಸ್ವಾಗತಾರ್ಹ. ಆದರೆ ಆ ಶಕ್ತಿಗಳೊಂದಿಗೆ ಸಾಸಿವೆಕಾಳಿನಷ್ಟೂ ಕನೆಕ್ಷನ್ ಇರಕೂಡದು. ಶಿವದಾರ, ಜನಿವಾರ, ಕ್ರಾಸ್, ಮತ್ತು ನವಿಲುಗರಿಗಳು ಇದ್ದರೆ ಮನೆಯಲ್ಲಿ ಬಿಟ್ಟುಬಂದು ನಮ್ಮೊಂದಿಗೆ ಸೇರಿಕೊಳ್ಳಬಹುದು.
ನಿಮ್ಮ ಇತ್ತೀಚಿನ ಭಾವಚಿತ್ರ, ಈಗ ನೆಲೆಸಿರುವ ಊರು, ಮೊಬೈಲ್ ಫೋನ್ ನಂಬರ್ರು ಸಮೇತ ಈ ಕೆಳಗೆ ನಮೂದಿಸಿರುವ ಈ-ವಿಳಾಸಕ್ಕೆ ಬರೆಯಿರಿ. (ಅಂಚೆ ಮೂಲಕ, ಸಿಡಿ ಮೂಲಕ, ಆನ್‌ಲೈನ್ ಕಾಮೆಂಟುಗಳ ಮೂಲಕ ರವಾನೆಯಾಗುವ ಬಯೋಡೇಟಗಳನ್ನು ಪರಿಗಣಿಸಲಾಗುವುದಿಲ್ಲ).
ಎಸ್ಕೆ. ಶಾಮಸುಂದರ, ಸಂಪಾದಕ, ದಟ್ಸ್ ಕನ್ನಡ ಡಾಟ್ ಕಾಂ, ಬೆಂಗಳೂರು
[email protected]












Click it and Unblock the Notifications