• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷ್ಣ ನಂ.1, ಇದಕೆ ಸಂಶಯವಿಲ್ಲ !

By Staff
|
ಕೃಷ್ಣ ನಂ.1, ಇದಕೆ ಸಂಶಯವಿಲ್ಲ ! Sampige marada hasirele naduve...

*ಎಸ್ಕೆ. ಶಾಮಸುಂದರ

More movement on the ground and less rhetoric in the air is always inspiring to see.

-Anonymous

ರೈತರ ಸ್ವಾಭಿಮಾನದ ಪ್ರತೀಕವಾಗಿ ಕಾಣಿಸಿಕೊಂಡ ಮಂಡ್ಯದ ಜಿ.ಮಾದೇಗೌಡ, ಭಯೋತ್ಪಾದಕನಾಗಿ ಕರ್ನಾಟಕದ ಜನಜೀವನವನ್ನು ಹಿಂಡಿದ ವೀರಪ್ಪನ್‌, ದಿಟ್ಟ ಹಾಗೂ ಪ್ರಾಮಾಣಿಕತೆಯ ಪ್ರತಿರೂಪವಾಗಿ ಕಾಣಿಸಿಕೊಂಡ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌, ದೋಷಮಯ ವ್ಯವಸ್ಥೆಗೆ ಬಲಿಯಾದ ನಾಗಪ್ಪ- ಉಹ್ಞುಂ, ಇವರಾರ್ಯೂ ಅಲ್ಲ . 2002 ನೇ ಇಸವಿಯ ದಟ್ಸ್‌ಕನ್ನಡ.ಕಾಂನ ವರ್ಷದ ವ್ಯಕ್ತಿ - ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ !

ಕೃಷ್ಣ ಅವರ ಪ್ರಾಮಾಣಿಕತೆ, ಸಿಕ್ಕುಗಳನ್ನು ಬಿಡಿಸುವಲ್ಲಿನ ಅವರ ರಾಜತಾಂತ್ರಿಕ ಚಾಣಾಕ್ಷತೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ಅಗ್ರಪಟ್ಟ ಉಳಿಸಿಕೊಟ್ಟ ನಾಯಕತ್ವದ ನಿಪುಣತೆ, ಎಲ್ಲಕ್ಕಿಂಥ ಮಿಗಿಲಾಗಿ ಕೃಷ್ಣ ಅವರ ಸಜ್ಜನಿಕೆ ಹಾಗೂ ಸರಳ ಮಾತು ದಟ್ಸ್‌ಕನ್ನಡ ಓದುಗರಿಗೆ ಇಷ್ಟವಾಗಿದೆ. ಅದಕ್ಕಿಂತ ಮಿಗಿಲಾಗಿ ಅವರು ಹೈಕಮಾಂಡ್‌ ಇಂದಿರಾ ಗಾಂಧೀ ಹೇಳಿದ ಕಿವಿಮಾತನ್ನು ಅಕ್ಷರಶಃ ಪಾಲಿಸಿದ್ದಾರೆ. Talk Less, Work More ! ಆ ಕಾರಣದಿಂದಲೇ ಕೃಷ್ಣ ಮೊದಲಿಗರಾದರು; ವರ್ಷದ ವ್ಯಕ್ತಿ ಪಟ್ಟ ಗಿಟ್ಟಿಸಿದರು.

ಹಾಗೆ ನೋಡಿದರೆ, ‘ವರ್ಷದ ವ್ಯಕ್ತಿ’ಯಾಗಿ ಕೃಷ್ಣ ಅವರಿಗೆ ಓಟು ನೀಡುವುದು ಸುಲಭ ; ಸಮರ್ಥಿಸಿಕೊಳ್ಳುವುದು ಕಷ್ಟ ಕಷ್ಟ . ಯಾವೊಬ್ಬ ಮುಖ್ಯಮಂತ್ರಿಯೂ ಅನುಭವಿಸದಷ್ಟು ಘಾಸಿಗಳನ್ನು 2002 ನೇ ಇಸವಿಯಲ್ಲಿ ಕೃಷ್ಣ ಅನುಭವಿಸಿದರು. ಒಂದೆಡೆ ಕಾವೇರಿ ನೀರಿನ ರಂಪು ರಾಮಾಯಣ, ಇನ್ನೊಂದೆಡೆ ಮಾಜಿ ಸಚಿವ ಎಚ್‌.ನಾಗಪ್ಪನವರ ಅಪಹರಣ ಹಾಗೂ ಹತ್ಯೆಯ ಮೂಲಕ ಮರುಕಳಿಸಿದ ನರಹಂತಕ ವೀರಪ್ಪನ್‌ ಅಟ್ಟಹಾಸ, ಮತ್ತೊಂದೆಡೆ ಪರಿಸ್ಥಿತಿಯ ಲಾಭ ಪಡೆಯಲು ಆಲಮಟ್ಟಿ ನೀರಿಗೆ ಬಿಂದಿಗೆ ಹಿಡಿದು ಕುಂತ ಆಂಧ್ರದ ಚಾಲಾಕಿ ಬಾಬು- ಕೃಷ್ಣ ನಲುಗಲಿಕ್ಕೆ ಇನ್ನೇನು ಬೇಕು.

ಸ್ಪರ್ಧೆಯೆಂಬಂತೆ ಪ್ರತಿಯಾಬ್ಬರೂ ಕೃಷ್ಣ ಅವರನ್ನು ತೆಗಳಿದರು. ಬಯ್ಯದವರೇ ಪಾಪಿಗಳು. ತವರು ಜಿಲ್ಲೆ ಮಂಡ್ಯದ ರೈತರೇ ಮುನಿದು ನಿಂತರು. ವಿಪಕ್ಷಗಳಿಗಂತೂ ಟೀಕಿಸುವುದೇ ನಿತ್ಯಕರ್ಮವಾಯಿತು! ಸುಪ್ರಿಂಕೋರ್ಟ್‌ ಕೂಡ ಕೃಷ್ಣ ಅವರನ್ನು ಉಗಿದು ಉಪ್ಪಿನಕಾಯಿ ಹಾಕಿತು. ಇದೇ ಹೊತ್ತಿನಲ್ಲಿ ಮಳೆ ಬೇರೆ ಕೈ ಕೊಡಬೇಕಾ ? ರಾಹುಕೇತುಗಳಂತೆ ಬರ ಹಾಗೂ ಪಕ್ಷದಲ್ಲಿನ ಭಿನ್ನಮತ ಕಾಡಬೇಕಾ ?

ಇಷ್ಟೆಲ್ಲಾ ಅಷ್ಟ ಕಷ್ಟಗಳಿಗೆ ಗುರಿಯಾಗಿಯೂ ಕೃಷ್ಣ ಜನರ ಮೆಚ್ಚುಗೆ ಉಳಿಸಿಕೊಂಡಿದ್ದಾರೆ. ‘ದಟ್ಸ್‌ಕನ್ನಡ ವರ್ಷದ ವ್ಯಕ್ತಿ’ಯಾಗಿ ಆಯ್ಕೆಯಾಗಿದ್ದಾರೆ. ಕೃಷ್ಣ ಜನಾನುರಾಗಿ ಅನ್ನುವುದಕ್ಕೆ ಇನ್ನೆಂಥ ಸಾಕ್ಷ್ಯಬೇಕು!

ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿರುವಲ್ಲಿ ಕೃಷ್ಣ ಅವರ ಸಾಧನೆ/ಪ್ಲಸ್‌ಪಾಯಿಂಟ್‌ಗಳನ್ನು ಮೂರು ಮತ್ತೊಂದು ಎನ್ನುವಂತೆ ಪಟ್ಟಿ ಮಾಡುವುದಾದರೆ-

  1. ಪ್ರಾಮಾಣಿಕತೆ, ದಕ್ಷತೆ ಹಾಗೂ ಸಜ್ಜನಿಕೆ
  2. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಚಕ್ರ
  3. ನೊಂದ ಜೀವಿ, ಹಾಗೂ
  4. ಕೃಷ್ಣ ಅವರಿಗೆ ಪರ್ಯಾಯ ಇಲ್ಲದಿರುವುದು.
ಮುಖ್ಯಮಂತ್ರಿ ಕೃಷ್ಣ ವಿರುದ್ಧ ಏನೆಲ್ಲಾ ಟೀಕೆಗಳನ್ನು ಮಾಡಬಹುದಾದರೂ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವುದು ಕಷ್ಟ . ಮೊದಲ ದಿನದಿಂದಲೂ ಆಡಳಿತದಲ್ಲಿ ಪಾರದರ್ಶಕತೆ ಉಳಸಿಕೊಂಡು ಬಂದಿರುವ ಕೃಷ್ಣ ಅವರ ಮೇಲೆ ಈವರೆಗೂ ಒಂದೇ ಒಂದು ಹಗರಣದ ಗೂಬೆಯಿಲ್ಲ ಅನ್ನುವುದು ಗಮನಾರ್ಹ. ಇದೇ ಅವಧಿಯಲ್ಲಿ ಕೃಷ್ಣ ಅವರ ಆಡಳಿತ ದಕ್ಷತೆಯಿಂದಲೂ ಕೂಡಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಸಮಗ್ರ ಭೂದಾಖಲೆಗಳನ್ನು ‘ಭೂಮಿ’ ಯೋಜನೆಯಡಿ ಕಂಪ್ಯೂಟರೀಕರಣಗೊಳಿಸಿದ ಕೀರ್ತಿ ಕೃಷ್ಣ ಸರ್ಕಾರದ್ದು . ಭಾರತದ ಸಿಲಿಕಾನ್‌ ವ್ಯಾಲಿ ಅನ್ನುವ ಪಟ್ಟವ ಕಾದುಕೊಂಡು ಬಂದಿರುವ ಬೆಂಗಳೂರು- 2002 ರಲ್ಲಿಯೂ ವಿಶ್ವದ ಗಣ್ಯರ ಸೆಳೆಯುವ ಚುಂಬಕ ಶಕ್ತಿಯಾಗಿ ಮುಂದುವರಿದುದರಲ್ಲಿ ಕೃಷ್ಣ ಅವರ ಪಾತ್ರ ಗಣನೀಯ. ವಾರ್ಷಿಕ ತಂತ್ರಜ್ಞಾನ ಷೋಕೇಸ್‌ಗಳಾದ ಬೆಂಗಳೂರು ಐಟಿ.ಕಾಂ, ಬಯೋ.ಕಾಂ ಹಾಗೂ ಮೈಸೂರು ಐಟಿ.ಕಾಂ ಮೇಳಗಳನ್ನು ಇಲ್ಲಿ ಸ್ಮರಿಸಬೇಕು. ಬಹುತೇಕ ಪೂರ್ಣಗೊಂಡ ರಾಜ್ಯದ ನೀರಾವರಿ ಯೋಜನೆಗಳು, ವಿದ್ಯುತ್‌ ಕಾಮಗಾರಿಗಳಿಗೆ ಚಾಲನೆ, ರೈತ ಕಾಯಕ ಕೆರೆ ಯೋಜನೆಯ ಅನುಷ್ಠಾನ- ಇವೆಲ್ಲ ಕೃಷ್ಣ ಅವರ ದಕ್ಷತೆಗೆ ಕನ್ನಡಿ. ಅವರ ಸಜ್ಜನಿಕೆಯ ಬಗ್ಗೆ ಏನು ಹೇಳುವುದೂ ಬೇಡ. ಗರಿ ಕೆಡದ ಬಟ್ಟೆಯಷ್ಟೇ ನಡವಳಿಕೆಯೂ ನೇರ. ಹಿಂದೆ ಬಂದರು ಒದೆಯರು, ಮುಂದೆ ಬಂದರೆ ಹಾಯರು- ಬೇಕಿದ್ದರೆ ಎಚ್ಕೆ.ಪಾಟೀಲ್‌ ಅವರನ್ನೇ ಕೇಳಿ!

2002 ನೇ ಇಸವಿಯ ಲೋಕಾಯುಕ್ತದ ವರ್ಷ. ಲೋಕಾಯುಕ್ತದ ವೆಂಕಟಾಚಲ ರಾಜ್ಯಾದ್ಯಂತ ದಾಳಿ ಕೈಗೊಂಡು ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದರು. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಿಗಳು ಲಂಚ ತೆಗೆದುಕೊಳ್ಳಲು ಹೆದರಿದರು. ಹಲ್ಲಿಲ್ಲದ ಸಂಸ್ಥೆ ಎನ್ನುವ ಅಪವಾದದಿಂದ ಲೋಕಾಯುಕ್ತ ಮುಕ್ತವಾಯಿತು. ಈ ಕೀರ್ತಿ ವೆಂಕಟಾಚಲ ಅವರದೇ ಆದರೂ, ಲೋಕಾಯುಕ್ತ ದ ಕಾರ್ಯಗಳನ್ನು ಬೆಂಬಲಿಸಿದ ಕೀರ್ತಿಗೆ ಕೃಷ್ಣ ಭಾಜನರು. ಆದರೆ, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲು ಸಚಿವ ಸಂಪುಟ ನಿರಾಕರಿಸಿದ ಕುರಿತು ಜನತೆಗೊಂದು ಸಣ್ಣ ಅತೃಪ್ತಿಯಿದೆ.

ಕಾವೇರಿ ಹಾಗೂ ವೀರಪ್ಪನ್‌ ಪ್ರಕರಣದಲ್ಲಿ ಕೃಷ್ಣ ಅವರು ಅನುಭವಿಸಿದ ಸಂದಿಗ್ಧಗಳು ರಾಜಕೀಯವಾಗಿ ಅವರ ವರ್ಚಸ್ಸನ್ನು ಕುಗ್ಗಿಸಿದ್ದರೂ, ಶಿಕ್ಷಿತ ವರ್ಗದಲ್ಲಿ ಕೃಷ್ಣ ಅನುಕಂಪಕ್ಕೆ ಪಾತ್ರರಾಗಿದ್ದಾರೆ.

ಕೊನೆಯದಾಗಿ-

ವರ್ಷದ ವ್ಯಕ್ತಿ ಪಟ್ಟಕ್ಕೆ ಕೃಷ್ಣ ಅವರಿಗೆ ಪರ್ಯಾಯವಾದರೂ ಯಾರಿದ್ದಾರೆ ? ಸ್ಥಳೀಯ ರಾಜಕೀಯವನ್ನು ರಾಷ್ಟ್ರೀಯ ರಾಜಕಾರಣವನ್ನಾಗಿ ಬಿಂಬಿಸುತ್ತಿರುವ ದೇವೇಗೌಡ, ಆಸ್ಪತ್ರೆ ಮನೆ ನಡುವೆ ದಿನ ಕಳೆಯುತ್ತಿರುವ ಹೆಗಡೆ, ಪರಿಸ್ಥಿತಿಯ ಮೂಸೆಯಲ್ಲಿ ಉದಿಸಿ ದಳಗಳ ಬೆಸೆಯಲು ಹೆಣಗುತ್ತಿರುವ ಬೊಮ್ಮಾಯಿ, ಬೊಂಬಡಾ ಹೊಡೆಯುತ್ತಿದ್ದರೂ ಜನರ ಗಮನ ಸೆಳೆಯಲಾಗದ ಬಿಜೆಪಿ ಪಟಾಲಂ- ಇವರಲ್ಲಿ ಕೃಷ್ಣ ಅವರಿಗೆ ಯಾರು ಹೋಲಿಕೆಯಾದಾರು! ಇನ್ನು ಮಾದೇಗೌಡ ಅವರದು ಒಂದು ಪ್ರದೇಶದ ಸೀಮಿತ ಜನಪ್ರಿಯತೆ. ದಿನಕರ್‌ ಸುದ್ದಿಮನೆಯ ಶೂರರು. ನಾಗಪ್ಪ ಇತಿಹಾಸವಾದರು, ಹೀಗಾಗಿ- ಕೃಷ್ಣ ನಂ. 1, ಅನ್ಯಥಾ ಶರಣಂ ನಾಸ್ತಿ !

**

ಮಾಧ್ಯಮದ ಪಂಡಿತರು ಚಿಂತಿಸುವುದಕ್ಕೂ ಮತ್ತು ಜನ ಸಾಮಾನ್ಯರ ನಿರೀಕ್ಷೆ ನಿಲುವುಗಳಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಕೆಲವು ನಂಬಿಕೆಗಳು ಆಗಾಗ ಕಳಚಿ ಬೀಳುತ್ತವೆ ಎನ್ನುವುದು ಈ ಸ್ಫರ್ಧೆಯಿಂದ ಸಾಬೀತಾಯಿತು. ಸಂಪಾದಕರ ಆಯ್ಕೆಯಾಗಿ ಐದು ಹೆಸರುಗಳನ್ನು ಸೂಚಿಸಿದ್ದೆ . ಈ ಐದೂ ಜನಕ್ಕೂ ಮತಗಳು ಬಿದ್ದಿವೆ. ಆರಂಭದಲ್ಲಿ ನಾಗಪ್ಪ ಅವರ ಸಾವಿನ ನೋವು, ಆಕ್ರೋಶ ಹಸಿಹಸಿಯಾಗಿದ್ದರಿಂದ ಓದುಗರು ಅವರಿಗೆ ಮತ ಹಾಕಿದರು. ವೀರಪ್ಪನ್‌ ಪ್ರೆೃಜ್‌ ಕ್ಯಾಚ್‌ ಪುಸ್ತಕದ ಜನಪ್ರಿಯತೆಯ ಬಿಸಿಯಲ್ಲಿ ಇದೇ ಆರಂಭ ಶೂರತ್ವ ಸಿ. ದಿನಕರ್‌ಗೂ ವ್ಯಕ್ತವಾಯಿತು. ಇವರಿಬ್ಬರ ಮಧ್ಯೆ ಮತಗಳನ್ನು ಕದಿಯುತ್ತಿದ್ದ ಮಾದೇಗೌಡರ ಆರ್ಭಟ ಕಾವೇರಿ ವಿವಾದದ ಥರ ಕ್ರಮೇಣ ತಣ್ಣಗಾಯಿತು. ಕೊನೆಗೆ ಆದದ್ದೇನೆಂದರೆ, ರಾಜ್‌ಕುಮಾರ್‌ ಮತ್ತು ವಜ್ರಮುನಿ ಕ್ಲೈಮ್ಯಾಕ್ಸ್‌ನಲ್ಲಿ ಭೇಟಿಯಾದರು !!

ಸಂಪಾದಕರ ಆಯ್ಕೆ ವಿಭಾಗದಲ್ಲಿ ಕಡೆಯ ಐದು ದಿನಗಲ್ಲಿ ಕೃಷ್ಣ ಮತ್ತು ವೀರಪ್ಪನ್‌ ನಡುವೆ ಜಿದ್ದಾಜಿದ್ದಿ ಹೋರಾಟವೇ ನಡೆಯಿತು. ಅಂತಿಮವಾಗಿ ಮತದಾರರು ಕೃಷ್ಣ ಅವರಿಗೆ ಶೇ. 47 ಮತಗಳನ್ನು ಒಪ್ಪಿಸಿದರೆ, ವೀರಪ್ಪನ್‌ ಶೇ. ಮೂರು ಮತಗಳ ಅಂತರದಿಂದ ಸೋಲು ಒಪ್ಪಿಕೊಂಡ.

ಸಂಪಾದಕನಾಗಿ ನನ್ನ ಆಯ್ಕೆಯೂ ( ಕೃಷ್ಣ ) ಮತದಾರರ ಪರವಾಗಿಯೇ ಇದೆ. ಅಥವಾ ಮತದಾರರು ನನ್ನಂತೆಯೇ ಚಿಂತಿಸಿದ್ದಾರೆ! ಕೃಷ್ಣ ಗೆದ್ದಿದ್ದಾರೆ !

ಆದರೆ, Peoples choice ವಿಭಾಗದಲ್ಲಿ ಚಿತ್ರ ಉಲ್ಟಾ ಆಯಿತು !!

*

ಸಂಪಾದಕರ ಆಯ್ಕೆ ವಿಭಾಗದಲ್ಲಿ ಮತ ಚಲಾಯಿಸುವವರು ತಮ್ಮ ಆಯ್ಕೆಗೆ ಸಮರ್ಥನೆಯನ್ನೂ ಸಲ್ಲಿಸುವುದು ಕಡ್ಡಾಯವಾಗಿತ್ತು. ಸ್ಫರ್ಧೆಯಲ್ಲಿ ವಿಜೇತರಾದ ಕೃಷ್ಣ ಅವರ ಪರವಾಗಿ ಅತ್ಯುತ್ತಮ ಸಮರ್ಥನೆ ಬರೆದು ಬಹುಮಾನಿತರಾದ ಜಯಶ್ರೀ ಅವರ ಸಮರ್ಥನೆಯನ್ನು ಪ್ರಕಟಿಸಲಾಗಿದೆ. ಇಲ್ಲಿ ಕ್ಲಿಕ್ಕಿಸಿ

Thank you for choosing Thatskannada.com

shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more