‌ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ

ಹೊಂಗೆ ಮರದಡಿ ಕುಳಿತ ನರಸಿಂಗರಾಯನ ದೇಹ, ಮನಸ್ಸಿಗೆ ಬಳಲಿಕೆ ಆವರಿಸಿತ್ತು. ದಣಿವಿಗೆ ಎಳನೀರು ಕುಡಿಯೋಣ ಅನ್ನಿಸಿತು. ಈ ಸ್ಥಿತಿಯಲ್ಲಿ ಮರವೇರುವುದು ಆಗದಾಗಿತ್ತು. ಮರದ ಬುಡದಲ್ಲಿರಿಸಿದ್ದ ದೋಟಿಯನ್ನು ಕೈಗೆತ್ತಿಕೊಂಡ. ಅಷ್ಟು ಎತ್ತರಕ್ಕೆ ದೋಟಿ ಎತ್ತುವುದು ಕಷ್ಟವೆನಿಸಿತು.

ಪ್ರಯಾಸದಿಂದ ಎರಡು ಕಾಯಿ ಕೆಡವಿ ನಿಟ್ಟುಸಿರಿಟ್ಟ. ಎಳನೀರು ಕುಡಿದ ಮೇಲೆ ದೇಹ- ಮನಸ್ಸಿಗೆ ಶಕ್ತಿ ಬಂದಿತು. ಕಾಯಿ ಒಡೆದು ತನಗಿಷ್ಟವಾದ ಗಂಜಿಕೊಬ್ಬರಿ ತಿನ್ನುವ ತಾಳ್ಮೆ ಇರಲಿಲ್ಲ. ಹೊಂಗೆ ಮರದಡಿಗೆ ಬಂದು ಮಲಗಿದ. ಕಣ್ಣ ತುಂಬ ಮಾತಂಗಿಯ ಮೌನಸೌಂದರ್ಯ ರೂಪ. ಮನೆಗೆ ಹೋದಾಗ ಮದುವೆಯ ಮಾತು ತೆಗೆಯಲು ನಿಶ್ಚಯಿಸಿದ. ಹಾಗೆಯೇ ಒಂದು ಕೋಳಿನಿದ್ದೆ ಮಾಡಿ ಎದ್ದ.

ಮಾತಂಗಿಗೊಂದು ಪದ್ಯ ಕೊಡಬೇಕೆಂದು ಚಿಂತಿಸಿದ. ಅವನಿಗನ್ನಿಸಿತು: ಬ್ರಹ್ಮನಿಗೆ ಅಮಾವಾಸ್ಯೆಯ ರಜೆ ಸಿಕ್ಕಿ, ಹೊತ್ತು ಹೋಗದೆ ತನ್ನ ಕಿರುಬೆರಲಿನ ಮೊನಚು ಬೆಳ್ಳಿಯುಗುರಿನಿಂದ ಕತ್ತಲ ಮೈ ಕೆರೆಯುತ್ತಿದ್ದಾಗ, ಆ ರೇಖೆಗಳಲ್ಲಿ ಆಕೃತಿಯೊಂದು ಕಂಡು ಒಗ್ಗೂಡಿಸಿ, ಅದರ ಓರೆಕೋರೆಗಳನ್ನು ತಿದ್ದಿದಾಗ ಮೂಡಿದ ಆಕೃತಿಯಲ್ಲಿ ಅಕ್ಕರೆ ಹುಟ್ಟಿ ಜೀವ ತುಂಬಿದಾಗ ಹುಟ್ಟಿದ ನಾರಿರೂಪವೇ ಮಾತಂಗಿ. ಅದು ಭೂಲೋಕದ ಜೀವಿಯಾಗಲೆಂದು ಶಿಶುವಾಗಿಸಿ ಲಚ್ಮಿಯ ಬಸುರಿನಲ್ಲಿಟ್ಟ ಎಂಬ ಲಹರಿ ಹುಟ್ಟಿ ಬಂದಿತು.

Romantic Story In Kannada: Matangi Marriage Fixed, She Left Narasingaraya Home

ಅವಳು ಲಚ್ಮಿ ಹಡೆದ ಅಮಾಸೆಕನ್ನೆ ಎಂದು ಭಾವ ಹೇಳಿದಾಗ ಖುಷಿಗೊಂಡ. ಪದ್ಯಕ್ಕೆ 'ಅಮಾಸೆಕನ್ನೆ' ಹೆಸರು ಅನುರೂಪವಾದುದು ಎಂದನಿಸಿತು. ಆದರೆ ಪ್ರಯತ್ನಿಸುದಷ್ಟೂ ಆ ಲಹರಿ ಪದ್ಯವಾಗಿ ಕಟ್ಟಿಕೊಂಡು ಬರಲಿಲ್ಲ. ಬೇಸರಪಟ್ಟುಕೊಂಡ. ಮಾತಂಗಿ ನಕ್ಕಾಗ ಮುಖ ಹೇಗಿರುತಿತ್ತು? ಅವನೊಳಗೆ ಪ್ರಶ್ನೆ ಉತ್ತರಕ್ಕಾಗಿ ಹುಡುಕಿತು. ಕಂಡಾಗಿನಿಂದ ಅವಳು ನಕ್ಕಿರಲಿಲ್ಲ. ಕಣ್ಣು ಮುಚ್ಚಿ ಕಲ್ಪಿಸಿಕೊಂಡ. ಕೃಷ್ಣಪಕ್ಷದ ಚೌತಿಯಂದು ಬಾನಿನಲ್ಲಿ ಬೆಳದಿಂಗಳು ಹರಡಿದಂತೆ ಅನ್ನಿಸಿತು. ಅಲ್ಲಿಂದಾಚೆಗೆ ಕಲ್ಪನೆ ಸಾಗಲಿಲ್ಲ.

ಶಶಿರೇಖಾ ಪರಿಣಯ ನಾಟಕದ ಅಭಿಮನ್ಯು ಪಾತ್ರಕ್ಕೆ ತಾನೇ ಬರೆದ ಹಾಡಿನ 'ಅತ್ತೆಮನೆಯಂಗಳದ ಪಾರಿಜಾತದ ಮೊಗ್ಗ ಇರುಳು ಅರಳಿಸುವ ಹಾಗೆ ನಗುವೊಮ್ಮೆ ರನ್ನೆ..'' ಎಂದು ಹೇಳಿ ನಗಿಸಿ ನೋಡಬೇಕಿತ್ತು ಎಂದು ಅನ್ನಿಸಿದಾಗ, ಹೇಗೆ ಸಾಧ್ಯವಿತ್ತು ಚಿತ್ತ ವಿಕಾರದಲ್ಲಿದ್ದಾಗ ಅನ್ನಿಸಿತು.

ಮನೆಗೆ ಹೋದಾಗ ಅವಳು ನಗುವಂತೆ ಮಾಡಿ ನೋಡಬೇಕೆಂದುಕೊಂಡ. ಆಗಲೇ ಅವಳ ದನಿ ಹೇಗಿದ್ದೀತು? ಅಷ್ಟು ಸುಂದರಿಯ ಧ್ವನಿಯೂ ಇಂಪೇ ಇಲ್ಲದಿದ್ದೀತೆ ಅನಿಸಿತು. ನಗಿಸಿ ಸಂಭ್ರಮಿಸುವ, ನುಡಿಸಿ ಆನಂದಿಸುವ ಕೆಲಸ ಮಾಡುವ ಅವಕಾಶವ ಯಾವುದೆಂದು ಆಲೋಚಿಸತೊಡಗಿದ.

ಅವಳಿಗೆ ಪ್ರೇಮ ಪತ್ರ ಬರೆದು ಕೊಡಬೇಕೆನಿಸಿತು. ಅದನ್ನು ರಾತ್ರಿ ಬರೆಯಲು ನಿಶ್ಚಯಿಸಿ ಮನೆಯತ್ತ ಹೊರಟಾಗ ಸಣ್ಣಗೆ ಕತ್ತಲು ಇಳಿಯ ತೊಡಗಿತ್ತು. ಇಂದೂ ಮಾತಂಗಿ ಕನಸಿಗೆ ಬರುವಳೆ ಎಂದು ಮನಸ್ಸಿಗೆ ಕೇಳಿದ. ಗಗನದಲ್ಲಿ ಬೆಳ್ಳಕ್ಕಿಗಳು ಸಾಲು ಹಿಡಿದು ಹಾರುತ್ತಿದ್ದವು.

'ಮಧ್ಯಾಹ್ನ ಊಟದ ಹೊತ್ತಾಗಿದ್ದಾಗ ಎಲ್ಲಿ ಹೋಗಿಬಿಟ್ಟೆ ಮಾರಾಯ' ಎಂದು ಅಮ್ಮ ಬೇಸರಿಸಿ ಕೇಳಿದಳು. ಹೊಲದಲ್ಲಿ ಕೆಲಸವಿತ್ತು ಅಂದ. ಕೈಕಾಲು ತೊಳೆದು ಬಾ, ಕಾಫಿ ಕೊಡುವೆ ಅಂದು ಅವಳು ಅಡುಗೆ ಮನೆಗೆ ಹೋದಳು. ನರಸಿಂಗರಾಯ ಮಾತಂಗಿಗಾಗಿ ಕಣ್ಣಲ್ಲೇ ಹುಡುಕಾಡಿದ. ಕೊಟ್ಟಿಗೆಯತ್ತ ನೋಡಿದ. ದನಗಳಷ್ಟೇ ಕಂಡವು.

ಎರಡು ಕಾಫಿ ಲೋಟ ಹಿಡಿದು ಬಂದ ಅಮ್ಮ, ಒಂದನ್ನು ಅವನಿಗೆ ಕೊಟ್ಟು ಜಗುಲಿಯ ಮೇಲೆ ಕುಳಿತಳು. ಅಂತೂ ನರಸಿಂಗ, ನಿನ್ನ ಅಪ್ಪಯ್ಯ, ಮೋಟಪ್ಪ, ಬೀರಪ್ಪ ಸೇರಿ ಲಚ್ಚಿಗೆ ಮೈದನನ ಕೈಯಿಂದ ಐದು ಸಾವಿರ ಕೊಡಿಸಿದರು. ಮಾತಂಗಿಯ ಮದುವೆಗೆ ಇನ್ನು ಹದಿನೈದು ದಿನವಿದೆಯಂತೆ. ನಾನು ಒಂದು ಹತ್ತು ಸೇರು ಅಕ್ಕಿ ಕೊಟ್ಟೆ. ಮದುವೆಗೆ ನಿನ್ನನ್ನೂ ಕರೆದುಕೊಂಡು ಬಂದು ತಲೆಯ ಮೇಲೆ ನಾಲ್ಕು ಅಕ್ಕಿಕಾಳು ಹಾಕಬೇಕೆಂದು ಕೇಳಿಕೊಂಡಳು. ಈ ಹೊತ್ತಿಗೆ ಊರಾಚೆಯ ಚೆನ್ನಪ್ಪನ ಗುಂಡುತೋಪು ದಾಟಿದ್ದಾರು ಎಂದು ಹೇಳಿದಳು.

ಕಾಫಿ ಆರಿ ತಣ್ಣಗಾಗಿತ್ತು. ಬಿಸಿ ಮಾಡಿ ತರುತ್ತೇನೆ ಕೊಡು ಎಂದು ಇಸಿದುಕೊಂಡು ಹೋದಳು. ನರಸಿಂಗರಾಯನ ಎದೆಯ ಕತ್ತಲಲ್ಲಿ ಕಪ್ಪು ಸುಂದರಿ ಮಾತಂಗಿ ಕತ್ತಲಾಗಿ ಕರಗಿ ಹೋದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+