• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರಸಿಂಗರಾಯನ ಭಾಗ್ಯಕ್ಕೆ ಬಿದ್ದ ಅಮೃತಘಳಿಗೆ ಸರ್ಪ ಮಿಲನ ದರ್ಶನ

|

ಕರಿಕಲ್ಲು ಗುಡ್ಡದಲ್ಲಿ ದನಗಳು ಮೇಯುತ್ತಿದ್ದವು. ನರಸಿಂಗರಾಯ ರಾತ್ರಿ ಓದಿದ ಅ.ನ.ಕೃ. ಅವರ ನಟಸಾರ್ವಭೌಮ ಕಾದಂಬರಿಯ ರಾಜಾ- ನೀಲರ ಸಂಬಂಧ ಎಲ್ಲಿಗೆ ನಿಲುಕಿದ್ದು ಎಂದು ಎಂದು ಯೋಚಿಸುತ್ತಿರುವಾಗ ಬೆನ್ನ ಹಿಂದೆ ಎರಡು ಸ್ತರದ ಸುಖದ ಸುಯಿಲ ಧ್ವನಿ ಕಿವಿಗೆ ತಾಕಿತು. ಯಾರೋ ರತಿನಿರತರಿರಬೇಕು ಎಂದು ಊಹಿಸಿ, ಆಲಿಸಿದ.

ಅದು ಮನುಷ್ಯರದೆನಿಸಲಿಲ್ಲ. ಕುತೂಹಲಿಯಾದ. ಎದ್ದು ಅತ್ತ ಕಳ್ಳ ಹೆಜ್ಜೆ ಹಾಕಿದ. ಅಲ್ಲಿನ ದೃಶ್ಯ ಎದೆಯನ್ನ ಝಲ್ಲೆನಿಸಿತು. ಭಯ ಕಣ್ಣಿಗೆ ಹರಿಯಿತು. ಕಣ್ಣು ಕೊಂಚ ಮಸುಕಾಯಿತು. ಕಾಲು ಹಿಂದೆ ಸರಿಯಿತು. ಮಾರುದ್ದಕ್ಕೂ ಕೊಂಚ ಹೆಚ್ಚಿನ ಎರಡು ಹಾವುಗಳು ಎಣೆಯಾಡುತ್ತಿದ್ದವು.

ನಾಗರವೋ ಇನ್ನಾವುದೋ ಎಂದು ತಿಳಿಯಲಿಲ್ಲ. ಹಾವುಗಳು ಎಣೆಯಾಡುವುದನ್ನು ನೋಡಬಾರದಂತೆ. ಆ ಸ್ಥಿತಿಯಲ್ಲಿ ಅವು ಅತೀವ ರೋಷದಲ್ಲಿರುವುವಂತೆ. ಕಂಡರೆ ಅಟ್ಟಿಬಂದು ಕಚ್ಚದೆ ಬಿಡುವುದಿಲ್ಲವಂತೆ ಎಂದು ಕೇಳಿದ್ದ ಮಾತುಗಳು ನೆನಪಾಗಿ ನಡುಗಿದ. ಅಟ್ಟಿ ಬರುವವೇ ಎಂದು ಹಿಂದಿರುಗಿ ನೋಡುತ್ತ ಓಡಿದ.

ಕೊಂಚ ದೂರ ಹೋದ ಮೇಲೆ ನಿಂತು ನೋಡಿದ. ಅವು ಎಣೆಯಾಡುತ್ತ ಹೊರಳಿ ಹೊರಳಿ ಎರಡು ಪೊದೆಗಳ ನಡುವಿನ ಬಯಲಿಗೆ ಬಂದಿದ್ದವು. ಎರಡು ಹಗ್ಗಗಳನ್ನು ಹೊಸೆದಂತೆ ತಕ್ಕೆ ಹಾಕಿಕೊಂಡು, ಸರಿ ಸುಮಾರು ಬಾಲದ ಮೇಲೆ ನಿಂತು ಪ್ರಣಯ ದೃಷ್ಟಿಯುದ್ಧದಲ್ಲಿ ನಿರತವಾಗಿದ್ದವು.

ನರಸಿಂಗರಾಯ ಭಯವನ್ನು ಮೆಟ್ಟಿ ಅವಕ್ಕೆ ಹತ್ತಿರದ ಪೊದೆ ಮರೆಯಲ್ಲಿ ನಿಂತ. ಅವು ಪರಿಸರದಲ್ಲಿ ತಮ್ಮ ಹೊರತು ಯಾವ ಕ್ರಿಯೆಯೂ ನಡೆಯುತ್ತಿಲ್ಲವೆಂಬಂತೆ ಪ್ರಣಯ ಕೇಳಿಯಲ್ಲಿ ಮೈ ಮರೆತಿದ್ದವು. ತೆಕ್ಕೆ ಬಿಟ್ಟ ಕೂಡಲೇ ಒಂದು ಸರ್ರನೆ ಅವನು ನಿಂತ ಪೊದೆಯತ್ತ ನುಗ್ಗುತು. ನರಸಿಂಗರಾಯ ಇನ್ನು ತನ್ನ ಗತಿ ಮುಗಿಯಿತು ಎಂದು ನಡುಗಿದ. ಓಡಲು ಕಾಲೇಳಲಿಲ್ಲ. ಅದರ ಹಿಂದೆಯೇ ಇನ್ನೊಂದು ನುಗ್ಗಿ ಬಂತು. ಅವನ ಕಣ್ಣು ಕತ್ತಲಿಟ್ಟಿತು. ಇದ್ದ ಪ್ರಜ್ಞೆಯಲ್ಲೇ ಕುಸಿಯದೆ ನಿಂತ.

ಹಿಂದಿನಿಂದ ಬಂದ ಹಾವು ಮುಂದಿನದರ ಪಕ್ಕದಲ್ಲಿಯೇ ಹರಿದು ಅದಕ್ಕೆ ತೆಕ್ಕೆ ಹಾಕಿತು. ನರಸಿಂಗರಾಯನ ಮೈಗೇರಿದ್ದ ಭಯದ ಜೋಮು ಇಳಿಯಿತು.

ತೆಕ್ಕೆ ಬಿಡಿಸಿಕೊಂಡು ಬಂದುದು ಹೆಣ್ಣು, ಅಟ್ಟಿ ಬಂದುದು ಗಂಡು ಎಂದು ಅವು ಮರು ತೆಕ್ಕೆಗೆ ಬಿದ್ದು ರತಿಕೇಳಿ ನಡೆಸುವಾಗ ನರಸಿಂಗರಾಯನಿಗೆ ತಿಳಿಯಿತು. ಕಾಮ ಮದದಲ್ಲಿ ಕ್ರೀಡಿಸುವಾಗ ಹಾವುಗಳಿಗೆ ಬೇರೇ ಯಾವುದೂ ಕಾಣಿಸದು ಎಂದು ಅರ್ಥವಾಗಿ ಅವನಲ್ಲಿ ಧೈರ್ಯ ತುಂಬಿಕೊಂಡಿತು. ಆದರೂ ಮೈಯೆಲ್ಲಾ ಕಣ್ಣಾಗಿ ಸರ್ಪ ಪ್ರಣಯವನ್ನು ನೋಡತೊಡಗಿದ.

ಹಾವುಗಳೂ ರತಿಯಲ್ಲಿರುವಾಗ ಮಾನವರಂತೆ ಸರಸವಾಡುತ್ತವೆ. ಅಪ್ಪುಗೆಯಿಂದ ಬಿಡಿಸಿಕೊಳ್ಳುವುದು, ಮತ್ತೆ ಅಪ್ಪುವುದು, ಓಡುವುದು, ಅಟ್ಟುವುದು, ಕೂಡುವುದು ಎಲ್ಲ ಆಟವೂ ಹಾಗೆಯೇ. ಹಾವುಗಳೂ ಮುತ್ತಿನಾಟವಾಡುವದನ್ನು ಸುಖದಿಂದ ನೋಡಿದ. ಅವು ಸಲ್ಲಾಪದ ಮಾತನಾಡುತ್ತಿವೆಯೇ ಎಂದು ಅನ್ನಿಸುವ ಭಂಗಿಯಲ್ಲಿದ್ದ ಅವನ್ನು ನೋಡಿದ. ಅವುಗಳ ಭಾಷೆ ಬಂದಿದ್ದರೆ...... ಅನ್ನಿಸಿ ನಿರಾಸೆಗೆ ಒಳಗಾದ.

ಅವುಗಳ ಸಂಭೋಗದ ವಿವಿಧ ಭಂಗಿಗಳನ್ನು ನೋಡುತ್ತಿದ್ದಾಗ ವಾತ್ಸ್ಯಾಯನ ತನ್ನ ಕಾಮಸೂತ್ರದಲ್ಲಿ ವರ್ಣಿಸಿದ್ದ ಕೆಲವು ಭಂಗಿಗಳು ನೆನಪಾದವು. ಮನ್ಮಥನು ತನ್ನ ಸುಮಬಾಣಗಳನ್ನು ಸರ್ಪಗಳ ಮೇಲೂ ಪ್ರಯೋಗಿಸುವನೇ ಅಂದುಕೊಂಡ ನರಸಿಂಗರಾಯ, ಅನೂಹ್ಯ ಸುಖದ ಮಧುರ ಲೋಕವನ್ನು ವೀಕ್ಷಿಸುತ್ತಿರುವ ಅನುಭೂತಿಗೆ ಒಳಗಾದ. 'ಸಂಭೋಗಾನಂದವು ಬ್ರಹ್ಮಾನಂದದ ಕೆಳಗಿನ ಮೆಟ್ಟಿಲು' ಎಂದು ಎಲ್ಲಿಯೋ ಓದಿದನ್ನು ಸರ್ಪಗಳು ನಿಜವೆಂಬಂತೆ ತೋರಿಸುತ್ತಿದ್ದವು.

ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಸರ್ಪ ಪ್ರಣಯದಾಟವನ್ನು ವೀಕ್ಷಿಸಿದ. ಇದು ತನ್ನ ಭಾಗ್ಯಕ್ಕೆ ಬಿದ್ದ ಅಮೃತಘಳಿಗೆ ಎಂದುಕೊಳ್ಳುವಾಗ, ಪು.ತಿ.ನ. ಅವರ 'ಹೃದಯ ಮಿಲನ' ಪದ್ಯ ನೆನಪಿಗೆ ಬಂದಿತು. 'ಹೃದಯ ಹೃದಯ ಮಿಳಿತವಾಗೆ/ ಮಧುರವಹುದು ಚೇತನ/ ಮಧುರೇಕ್ಷಣ ಮಧುರ ವಾಣಿ/ ಮಧುರ ಸ್ಮಿತ ನೂತನ' ಎಂದು ಗುನುಗಿದ.

English summary
Here is the short story of Narsingaraya. He excited by seeing snake romance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X