• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಡಿಎಸ್ ಎಂಬ ಫ್ಯಾಮಿಲಿ ಟ್ರಸ್ಟ್ ಬದಲು ಪರ್ಯಾಯ ಶಕ್ತಿ ಇದ್ದಿದ್ದರೇ..

By Staff
|

ಹಾಳು ಮುಖದ ಕಾಂಗ್ರೆಸ್ಸಿಗರು, ಕೌರವ ಮುಖದ ಯಡಿಯೂರಪ್ಪ ಗ್ಯಾಂಗು, ಆಧುನಿಕ ಬಕಾಸುರರ ಕೈಲಿರುವ ಜೆಡಿಎಸ್ ಗಿಂತಲೂ ಬೇರೆಯಾದ, ಜನಪರ ಕಾಳಜಿಯುಳ್ಳ ಪಕ್ಷವೊಂದು ನಾಡಿಗೆ ಬೇಕಲ್ಲವಾ?

  • ರವಿ ಬೆಳಗೆರೆ

ಕರ್ನಾಟಕಕ್ಕೆ ಮೂರನೇ ರಾಜಕೀಯ ಶಕ್ತಿಯೊಂದರ ಅಗತ್ಯವಿದೆ! ಹಾಗಂತ ನಿಮಗನ್ನಿಸುತ್ತಿಲ್ಲವೇ? ಹೊಸ ಥಿಂಕಿಂಗ್ ಇಲ್ಲದ ಕಾಂಗ್ರೆಸ್, ತೊಣಚಿ ಹೊಕ್ಕವರಂತಾಡುತ್ತಿರುವ ಬಿಜೆಪಿ ನಾಯಕರನ್ನು ನೋಡಿದರೆ ನಿಜಕ್ಕೂ ಕರ್ನಾಟಕಕ್ಕೆ ಮೂರನೇ ರಾಜಕೀಯ ಶಕ್ತಿಯೊಂದರ ಅಗತ್ಯವಿದೆ ಅನಿಸುತ್ತದೆ.

ತೃತೀಯ ರಂಗದಂತೆ ಜನತಾದಳ ಇತ್ತು. ಅದು ಐಸ್ ಕ್ಯಾಂಡಿಯಂತೆ ಅದಾಗಲೇ ಕರಗುತ್ತಾ, ಕರುಗುತ್ತಾ ದೇವು ಫ್ಯಾಮಿಲಿಯ ಪರ್ಸನಲ್ ಟ್ರಸ್ಟ್ ಥರಾ ಆಗ್ಹೋಗಿರುವುದರಿಂದ, ಅದರ ಬಗ್ಗೆ ನೆಚ್ಚಿಗೆ ಏನಿಲ್ಲ. ಅಷ್ಟಾದರೂ ಆ ಪಾರ್ಟಿಯಲ್ಲಿ ಒಂದಿಷ್ಟು ಜನ ಉಳಿದುಕೊಂಡಿದ್ದಾರಾದರೂ ಅವರಾಗಲೇ ಮಾನಸಿಕವಾಗಿ ಸತ್ತು ಬಹಳ ಕಾಲವೇ ಆಗಿ ಹೋಗಿರುವುದರಿಂದ ಜೆಡಿಎಸ್ ನಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ನಮ್ಮದೇ ತಪ್ಪು.

ಇದು ಮೂರನೇ ಫೋರ್ಸ್ ಅಂತ ಕಳೆದ ಚುನಾವಣೆಯಲ್ಲಿ ಜನ ದೇವೇಗೌಡರ ಪಾರ್ಟಿಗೆ ಓಟು ಕೊಟ್ಟರಲ್ಲ; ಅವರೆಲ್ಲ ಬರೀ ದೇವೇಗೌಡರ ಮುಖ ನೋಡಿ ಬೆಂಬಲ ಕೊಟ್ಟವರಲ್ಲ. ಅದರ ಮುಂಚೂಣಿಯಲ್ಲಿ ಸಿದ್ರಾಮಯ್ಯ, ಸಿಂಧ್ಯಾ, ಇಬ್ರಾಹಿಮ್ಮು, ಪ್ರಕಾಶ್ ಥರದ ನಾಯಕರದೊಂದು ದಂಡಿತ್ತು. ನೋಡಿದ ಜನರಿಗೂ ಬಿಡಪ್ಪಾ, ಇದು ಪಾಂಡವರ ಪಾರ್ಟಿ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಪಾರ್ಟಿ ಅಂತ ಅನ್ನಿಸಿತ್ತು.

ಆದರೆ ದೇವೇಗೌಡ ಮತ್ತವರ ಮಕ್ಕಳು ಅದೆಷ್ಟು ನೀಚತನದಿಂದ ವರ್ತಿಸಿದರು ಎಂದರೆ, ಕೌರವರ ಸಂತಾನಕ್ಕಿಂತ ಕಡೆಯಾಗಿ ವರ್ತಿಸಿದರು. ಮೊದಲು ಪಾತ್ರೆಯಂಗಡಿಯಲ್ಲಿ ತಾಮ್ರದ ಹಂಡೆಯಂತಿದ್ದ ಧರ್ಮಸಿಂಗ್ ಗೆ ಕಲಾಯಿ ಹಾಕಿ ಇಷ್ಟಬಂದಂತೆ ಬಳಸಿಕೊಂಡರು. ಆಮೇಲೆ ಕುಮಾರಸ್ವಾಮಿ ಮತ್ತು ರೇವಣ್ಣ ಜೋಡಿ ಕರ್ನಾಟಕದ ಮೇಲೆ ಮಾಡಿದ್ದು ಅಕ್ಷರಶಃ ಅತ್ಯಾಚಾರವೇ!

ದಾಖಲೆ ತೆಗೆದು ನೋಡಿ, ಕುಮಾರನ ಸರ್ಕಾರದ ಅವಧಿಯಲ್ಲಿ ಅವರಿಗೆ ಬೇಕಾದ ಶಾಸಕರಿಗೆ ಮಾನಾಮನಿಯಾಗಿ ಮೈನಿಂಗ್ ಕಾಂಟ್ರಾಕ್ಟ್, ಡಿನೋಟಿಫಿಕೇಷನ್ ಮಾಡಲ್ಲ ಮಾಡಲ್ಲ ಅಂತ ಹೇಳುತ್ತಲೇ ಸಾವಿರಾರು ಎಕರೆ ಭೂಮಿಯ ಡಿನೋಟಿಫಿಕೇಷನ್ನು, ಅಕ್ರಮ ಲೇಔಟುಗಳ ಸಕ್ರಮ.. ಹೀಗೆ ತೆಗೆದು ನೋಡಿದರೆ ಕುಮಾರನ ಸರ್ಕಾರದ ಅವಧಿಯಲ್ಲಾದಷ್ಟು ಅಕ್ರಮ, ಸೃಜನ ಪಕ್ಷಪಾತ.. ಅಬ್ಬಾ! ಇವರದ್ಯಾವ ಥರ್ಟ್ ಫೋರ್ಸ್?

ಒಂದು ಲೆಕ್ಕದ ಪ್ರಕಾರ ಕುಮಾರನ ಕಡೇ ದಿನಗಳ ಅವಧಿಯಲ್ಲಿ ನಡೆದದ್ದು ಮೂರು ಸಾವಿರ ಕೋಟಿ ರೂಪಾಯಿಗಳ ಸ್ಕಾಂಡಲ್ಲು. ಮರ್ಯಾದೆ ಅಂತಿದ್ದರೆ ಈ ಕಾಂಗ್ರೆಸ್ ಪಕ್ಷದ ಖರ್ಗೆ, ಧರ್ಮಸಿಂಗ್ ಮುಂತಾದ ನಾಯಕರು ಈ ಹಗರಣಗಳ ಹುತ್ತ ಕೆಡವಿ ಹೊರಹಾಕಿಸಬೇಕು. ದಿಲ್ಲಿಯಲ್ಲಿರುವುದು ಅವರೆಲ್ಲರ ಮೇಡಂ ಸೋನಿಯಾ ಅಧೀನದಲ್ಲಿರುವ ಸರ್ಕಾರ. ಅದರ ಮೇಲೆ ಒತ್ತಡ ಹೇರಿ, ಸಮಸ್ತ ಕರ್ನಾಟಕವನ್ನು ದೋಚಿದ ದೇವು, ಕುಮ್ಮಿ, ರೇವು ಎಂಬ ತ್ರಿಮೂರ್ತಿಗಳನ್ನು ಶಾಶ್ವತವಾಗಿ ಗದುಮುವ ಕೆಲಸ ಮಾಡ್ರೀ ಅಂತ ಹೇಳಬೇಕು. ಆದರೆ ಇವರೆಲ್ಲ ದೇವೇಗೌಡರ ಮನೆ ಹೊಸ್ತಿಲಿಗೆ ಹಣೆ ಹಚ್ಚಿಕೊಂಡು 'ನಮ್ಮನ್ನೇ ಸಿಎಂ ಮಾಡೋದಕ್ಕೆ ಸಪೋರ್ಟ್ ಕೊಡ್ರಿ ಸಾರ್' ಅಂತ ಅಂಗಾತ ಮಲಗಿ ಬಿಟ್ಟಿದ್ದಾರೆ.

ಇದನ್ನು ನೋಡುತ್ತಿದ್ದರೆ ಇವರೆಲ್ಲ ಸೇರಿ ಕರ್ನಾಟಕವನ್ನು ಉಳಿಸುತ್ತಾರೋ? ಅಥವಾ ದೇವು ಫ್ಯಾಮಿಲಿ ಟ್ರಸ್ಟ್ ಆಗಿ ಹೋಗಿರುವ ಜೆಡಿಎಸ್ ಗೆ ದಾಸಾನುದಾಸರಾಗುತ್ತಾರೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ. ಇಂಥ ಟೈಮಿನಲ್ಲೇ ಅಲ್ಲವೇ ಮೂರನೇ ಶಕ್ತಿಯೊಂದು ಬೇಕು ಅನ್ನಿಸೋದು? ಹಿಂದೆಲ್ಲ ಎರಡು ಪಾರ್ಟಿ ಇಂದೆ ಚಂದ ಕಣ್ರೀ ಅಂತ ಸೋ ಕಾಲ್ಡ್ ಬಿಜಿನೆಸ್ ಮನ್ ಗಳು, ಸೊಫೆಸ್ಟಿಕೇಟೆಡ್ ಜನರು ಹೇಳುತ್ತಿದ್ದರು. ಆದರೆ ಭಾರತದಂಥ ದೇಶದಲ್ಲಿ, ದೇವೇಗೌಡರು ಮತ್ತವರ ಮಕ್ಕಳಂತಹ ಪರಮ ಕಿರಾತಕರಿರುವ ಕರ್ನಾಟಕದಲ್ಲಿ ಎರಡು ಪಕ್ಷಗಳಲ್ಲ, ನಾಲ್ಕು ಪಕ್ಷಗಳಿದ್ದರೂ ಸಾಲುವುದಿಲ್ಲ.

ದೇಹ ಉಳಿದಿದ್ದರೂ ಮಾನಸಿಕವಾಗಿ ಸತ್ತು ಹೋಗಿರುವ ಜೆಡಿಎಸ್ ಶಾಸಕರ ಪೈಕಿ ಅನೇಕರಿಗೆ ಹೊರಗೆ ಹೋಗುವ ಆಸೆ ಇದ್ದೇ ಇದೆ. ಆದರೆ ಹೋಗಬೇಕು ಅಂದರೆ ಯಥಾ ಪ್ರಕಾರ ಅದೇ ಕಾಂಗ್ರೆಸ್ಸು, ಬಿಜೆಪಿ. ಅದನ್ನು ಬಿಟ್ಟು ಮೂರನೇ ಶಕ್ತಿ ಅಂಥ ಇದ್ದಿದ್ದರೆ, ಆ ಶಕ್ತಿಗೆ ಜನಪರವಾದ ಕಾಳಜಿ ಅಂತ ಇದ್ದರೆ ಆ ಕಡೆ ಹೋಗಬಹುದು. ಆದರೆ ಇದುವರೆಗೂ ಅಂತಹ ಶಕ್ತಿ ಬೆಳೆದು ನಿಂತಿಲ್ಲ.

ಇವತ್ತು ಕರ್ನಾಟಕದ ಪರಿಸ್ಥಿತಿ ಏನಾಗಿದೆ ಎಂದರೆ ಕೆಲ ಜಾತಿಯವರೆಲ್ಲ ಕಾಂಗ್ರೆಸ್ ಕಡೆ, ಬ್ರಾಹ್ಮಣರು, ಲಿಂಗಾಯಿತರು ಬಿಜೆಪಿ ಕಡೆ, ಬಹು ಸಂಖ್ಯೆಯ ಒಕ್ಕಲಿಗರು ಜೆಡಿಎಸ್ ಕಡೆ ಎಂಬ ಭಾವನೆಯಿದೆ. ಆದರೆ ಎಲ್ಲ ಜನರಿಗಾಗಿ ಒಂದು ಪಾರ್ಟಿ ಎಲ್ಲಿದೆ ಅನ್ನುವ ಪ್ರಶ್ನೆಯನ್ನು ಕೇಳಿ ನೋಡಿ ಕೆಕರು ಮಕರಾಗಿ ಹೋಗುತ್ತದೆ.

ಹೌದಲ್ಲ! ಇಂಥ ಸಂದರ್ಭದಲ್ಲಿ ಹಾಳು ಮುಖದ ಕಾಂಗ್ರೆಸ್ಸಿಗರು, ಕೌರವ ಮುಖದ ಯಡಿಯೂರಪ್ಪ ಗ್ಯಾಂಗು, ಆಧುನಿಕ ಬಕಾಸುರರ ಕೈಲಿರುವ ಜೆಡಿಎಸ್ ಗಿಂತಲೂ ಬೇರೆಯಾದ, ಜನಪರ ಕಾಳಜಿಯುಳ್ಳ ಪಕ್ಷವೊಂದು ನಾಡಿಗೆ ಬೇಕಲ್ಲವಾ?

ನಮ್ಮ ರಾಜಕಾರಣಿಗಳ ಈಗಿನ ಮೆಂಟಾಲಿಟಿ ಹೇಗಿದೆ ಎಂದರೆ ನಮ್ಮ ಪಕ್ಷಕ್ಕೆ ಬಹುಮತ ಸಿಕ್ಕರೆ ಸಾಕು, ನಮ್ಮಿಷ್ಟ ಬಂದಂತೆ ದೋಚಲು ಜನರ ಲೈಸೆನ್ಸ್ ಸಿಕ್ಕಾಂಗಾಯ್ತು ಅನ್ನುತ್ತಾರೆ. ಇದೇ ದೇವು ಫ್ಯಾಮಿಲಿಯ ಅಟ್ಟಹಾಸಕ್ಕೆ ಮೂಲ ಕಾರಣ. ನಡೀಲಿ ಬಿಡ್ರಿ ಚುನಾವಣೆ. ಮತ್ತೆ ನಲವತ್ತೋ, ಐವತ್ತೋ ಸೀಟು ಗೆದ್ದು ಬರ್ತೀವಿ. ಕಾಂಗ್ರೆಸ್ ಇರ್ಲಿ, ಬಿಜೆಪಿ ಇರ್ಲಿ ಪುನಃ ಬಂದು ನಮ್ಮ ಕಾಲೇ ಹಿಡ್ಕೋಬೇಕು ಎಂಬುದು ಆ ಫ್ಯಾಮಿಲಿಯ ಧಾರ್ಷ್ಯ್ಟ.

ಈವತ್ತು ಕಾಂಗ್ರೆಸ್ಗೆ ಹೋಗಿ ಕುಂತಿರುವ ಸಿದ್ರಾಮಯ್ಯ, ದೇವು ಫ್ಯಾಮಿಲಿಯ ಜೀತ ಮಾಡಿ ಮಾಡಿ ಹಣ್ಣಾಗಿರುವ ಪ್ರಕಾಶ್, ಅತಂತ್ರ ಪಿಶಾಚಿಯಾಗಿರುವ ಸಿಎಂ ಇಬ್ರಾಹಿಂ, ರಾಜಕೀಯ ಬದುಕಿನ ಕಡೇ ಇನ್ನಿಂಗ್ಸ್ ಗೆ ಸಜ್ಜಾಗುತ್ತಿರುವ ಬಂಗಾರಪ್ಪ, ಕಾಂಗ್ರೆಸ್ ನಲ್ಲಿ ಕೂತು ಕೊಳೆಯುತ್ತಿರುವ ಶ್ರೀನಿವಾಸ ಪ್ರಸಾದ್ ಹಾಗೂ ಇವರೆಲ್ಲರ ಜೊತೆ ಕರ್ನಾಟಕಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡುವ ಶಕ್ತಿ ಹೊಂದಿರುವ ಹೆಚ್.ಸಿ.ಮಹದೇವಪ್ಪ ಜೆಡಿಎಸ್ನ ಬಾಲಕೃಷ್ಣ, ಜಾರಕಿಹೊಳಿ ಬ್ರದರ್ಸ್ ಹೀಗೆ ಸೇರಿಕೊಂಡು ಕಟ್ಟುತ್ತಾ ಹೋದರೆ ಒಂದು ದೊಡ್ಡ ಟೀಮೇ ಕಣ್ಣ ಮುಂದಿದೆ.

ಅಂತಹ ಜನರೆಲ್ಲ ಒಂದುಗೂಡಿ ಬಿಎಸ್ ಪಿಯಂತಹ ಪಕ್ಷವನ್ನೇ ಆಗಲೀ ಅಥವಾ ಸ್ವಂತ ಶಕ್ತಿಯಿಂದ ಒಂದು ಪಕ್ಷವನ್ನೇ ಆಗಲಿ ಯಾಕೆ ಕಟ್ಟಬಾರದು.

(ಸ್ನೇಹ ಸೇತು : ಹಾಯ್ ಬೆಂಗಳೂರ್!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X