• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ತ ಮೇಲೆ ಶೀಲದ ಸತ್ವಪರೀಕ್ಷೆ ಸರಿಯೇ?

By Staff
|

ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ.

ಅಂಕಣಕಾರ : ಪ್ರತಾಪ್ ಸಿಂಹ

Uma Khurana, Padmapriya, Arushiಬಹುಶಃ ನೀವು ಮರೆತೇ ಬಿಟ್ಟಿರಬಹುದು ಉಮಾ ಖುರಾನಾ ಅವರನ್ನ.

ಆಕೆ ದಿಲ್ಲಿಯ ದರ್ಯಾಗಂಜ್‌ನಲ್ಲಿರುವ ಸರಕಾರಿ ಶಾಲೆಯಾದ ಸರ್ವೋದಯ ಕನ್ಯಾ ವಿದ್ಯಾಲಯ"ದಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದರು. ಇತ್ತ 2007, ಆಗಸ್ಟ್ 30ರಂದು ದಿಲ್ಲಿಯ ಸ್ಥಳೀಯ ಖಾಸಗಿ ಹಿಂದಿ ಚಾನೆಲ್ಲಾದ Live India"ದಲ್ಲಿ ಇದ್ದಕ್ಕಿದ್ದಂತೆಯೇ Sting operation" ಪ್ರಸಾರವಾಗ ತೊಡಗಿತು. ರಶ್ಮಿ ಖನ್ನಾ ಎಂಬಾಕೆ ತೆರೆಯ ಮೇಲೆ ಕಾಣಿಸಿಕೊಂಡಳು. ಆಕೆ ಸರ್ವೋದಯ ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿ ಎಂದು ಒಕ್ಕಣೆ ಕೊಟ್ಟರು. ಅಶ್ಲೀಲ ಚಿತ್ರ, ವಿಡಿಯೋ ಚಿತ್ರಣಗಳನ್ನು ತೋರಿಸಿದರು. ಗಣಿತ ಶಿಕ್ಷಕಿಯಾದ ಉಮಾ ಖುರಾನಾ ಸರ್ವೋದಯ ಶಾಲೆಯ ವಿದ್ಯಾರ್ಥಿನಿಯರನ್ನು ಮಾಂಸ ದಂಧೆ'ಗೆ ದೂಡುತ್ತಿದ್ದಾರೆ, ಪ್ರಚೋದಿಸುತ್ತಿದ್ದಾರೆ ಎಂದು ಪದೇ ಪದೆ ಪ್ರಸಾರ ಮಾಡಲಾಯಿತು. ಅದನ್ನು ನೋಡಿದ್ದೇ ತಡ ಆ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರ ಕೋಪ ನೆತ್ತಿಗೇರಿತು. ಎಲ್ಲಿ ತಮ್ಮ ಮಕ್ಕಳನ್ನೂ ವೇಶ್ಯಾವಾಟಿಕೆಗೆ ದೂಡಲಾಗಿದೆಯೋ ಎಂಬ ಆತಂಕವೂ ಕಾಡತೊಡಗಿತು. ಹೀಗೆ ಕೋಪ, ಆತಂಕಗಳೊಂದಿಗೆ ಶಾಲೆಗೆ ನುಗ್ಗಿದ ಪೋಷಕರು ಉಮಾ ಖುರಾನಾ ಅವರನ್ನು ಹಿಡಿದು ಎಳೆದಾಡತೊಡಗಿದರು. ಆಕೆ ಧರಿಸಿದ್ದ ಉಡುಪಿನ ಮೇಲ್ಭಾಗ ಸಂಪೂರ್ಣವಾಗಿ ಹರಿದು ಅರೆನಗ್ನಗೊಂಡರೂ ಅಮಾನುಷವಾಗಿ ಥಳಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಟಿವಿ ಚಾನೆಲ್‌ಗಳು ಉಮಾ ಖುರಾನಾಗೆ ಹಿಗ್ಗಾಮುಗ್ಗ ಥಳಿಸುವುದನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದವು. Porn racket, Porn in School"ಎಂಬ ಶೀರ್ಷಿಕೆಗಳೊಂದಿಗೆ ರಾಷ್ಟ್ರೀಯ ಚಾನೆಲ್‌ಗಳೂ ಕೂಡ ಉಮಾ ಖುರಾನಾ ಅವರನ್ನು ಥಳಿಸುತ್ತಿರುವುದನ್ನು, ಬಟ್ಟೆ ಚಿಂದಿಯಾಗುವಂತೆ ಹೊಡೆಸಿಕೊಳ್ಳುತ್ತಿರುವುದನ್ನು ಪ್ರಸಾರ ಮಾಡತೊಡಗಿದವು. TV sting shows school teacher in 'porn racket" ಎಂದು ಮರುದಿನ ಪತ್ರಿಕೆಗಳೂ ಬರೆದವು. ಅದರಲ್ಲೂ ಹಿಂದೂಸ್ಥಾನ್ ಟೈಮ್ಸ್' ಪತ್ರಿಕೆಯಂತೂ Who is Uma Khurana?" ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂಬ ಸ್ಟಿಂಗ್ ಆಪರೇಶನ್‌ನ ಬೆನ್ನಲ್ಲೇ ಸರ್ವೋದಯ ಕನ್ಯಾ ವಿದ್ಯಾಲಯದ ಗಣಿತ ಶಿಕ್ಷಕಿಯನ್ನು ಕೋಪೋದ್ರಿಕ್ತ ಪೋಷಕರು ಚೆನ್ನಾಗಿ ಥಳಿಸಿದ್ದಾರೆ. ಖುರಾನಾ ಅವರ ಹಿಂದಿನ ದಾಖಲೆಗಳನ್ನು ತೆಗೆದು ನೋಡಿದರೆ ಇಂತಹ ಕಪ್ಪುಚುಕ್ಕೆಗಳು ಕಾಣ ಸಿಗುತ್ತವೆ. ವಿವೇಕ್ ವಿಹಾರ್ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ಸಂದರ್ಭದಲ್ಲೂ ಖುರಾನಾ ಅವರನ್ನು ಒಮ್ಮೆ ಸಸ್ಪೆಂಡ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಬಿಟ್ಟು ವಿವಾದಕ್ಕೆ ಸಿಲುಕಿದ್ದರು" ಎಂದು ಬರೆಯಿತು. ಈ ಮಧ್ಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯಾವುದೇ ಆಧಾರಗಳಿಲ್ಲದ್ದರೂ ಎಫ್‌ಐಆರ್ ದಾಖಲಿಸಿದರು. ಅನೈತಿಕ ಚಟುವಟಿಕೆ ತಡೆ ಕಾಯಿದೆ"ಯಡಿ ಬಂಧಿಸಿದರು. ಶೀಲಾ ದಿಕ್ಷೀತ್ ಅವರ ಸರಕಾರವೂ ಶೀಲದ ವಿಷಯದಲ್ಲಿ ಭಾರೀ ಸಂವೇದನೆ ತೋರಿತು! ಮೊದಲಿಗೆ ಉಮಾ ಖುರಾನಾ ಅವರನ್ನು ಸಸ್ಪೆಂಡ್ ಮಾಡಿದ ದಿಲ್ಲಿ ಸರಕಾರ, ಮಾಧ್ಯಮಗಳ ಅಬ್ಬರದ ಪ್ರಚಾರದಿಂದ ಉತ್ತೇಜನಗೊಂಡು ಆಕೆಯನ್ನು ಕೆಲಸದಿಂದಲೂ ಕಿತ್ತುಹಾಕಿ ಬಿಟ್ಟಿತು. ಶಿಕ್ಷಕಿಯೇ ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆ ದೂಡುತ್ತಿದ್ದಾಳೆ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ, ಬೆತ್ತಲೆ ಚಿತ್ರ ತೆಗೆದು ಬೆದರಿಸುತ್ತಿದ್ದಾಳೆ ಅಂದರೆ ಯಾರು ತಾನೇ ರೊಚ್ಚಿಗೇಳುವುದಿಲ್ಲ? ಆದರೆ ವಾಸ್ತವದಲ್ಲಿ ನಡೆದಿದ್ದೇನು?

ಸ್ಟಿಂಗ್ ಆಪರೇಶನ್' ಹಾಗೂ ಹಲ್ಲೆ ಪ್ರಕರಣ ನಡೆದು ಐದು ದಿನ ಕಳೆದರೂ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ, ಕಿರುಕುಳ ನೀಡಿದ್ದಾರೆ ಎಂದು ಯಾವ ವಿದ್ಯಾರ್ಥಿನಿಯೂ ಉಮಾ ಖುರಾನಾ ವಿರುದ್ಧ ದೂರು ನೀಡಲಿಲ್ಲ! ಪೋಷಕರ ಆರೋಪದ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ನೆಪ ಹೇಳಲಾರಂಭಿಸಿದ ಪೊಲೀಸರು ನುಣುಚಿಕೊಳ್ಳಲು ಯತ್ನಿಸಲಾರಂಭಿಸಿದರು. ಅಷ್ಟಕ್ಕೂ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಲು ಯಾವ ಸಾಕ್ಷ್ಯಾಧಾರಗಳೂ ಇರಲಿಲ್ಲ. ಪ್ರಕರಣ ಕೋರ್ಟ್ ಮುಂದೆ ಬಂತು, ಸಾಕ್ಷ್ಯ ಒದಗಿಸುವಂತೆ ಪೊಲೀಸರು ಲೈವ್ ಇಂಡಿಯಾ" ಚಾನೆಲ್ಲನ್ನೇ ಬೆನ್ನುಹತ್ತಬೇಕಾಯಿತು. ಆಗ ನೋಡಿ ಸತ್ಯ ಹೊರಬಿತ್ತು. ಉಮಾ ಖುರಾನಾ ಹಾಗೂ ವೀರೇಂದ್ರ ಅರೋರಾ ಎಂಬವರ ನಡುವೆ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿ, ಜಗಳಕ್ಕೆ ಕಾರಣವಾಗಿತ್ತು. ಆಕೆಯ ಮಾನ ಕಳೆಯಲು ಮುಂದಾದ ಅರೋರಾ, ಲೈವ್ ಇಂಡಿಯಾ'ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಧೀರ್ ಚೌಧುರಿ ಜತೆ ಸೇರಿ ಯೋಜನೆಯೊಂದನ್ನು ರೂಪಿಸಿದರು. ಅದೇ ಸ್ಟಿಂಗ್ ಆಪರೇಶನ್. ಹಿಂದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ರಶ್ಮಿ ಖನ್ನಾ ಎಂಬಾಕೆ ವಿದ್ಯಾರ್ಥಿನಿಯ ವೇಷ ತಳೆದರು. ಬಲಿಪಶುವಿನಂತೆ ಕ್ಯಾಮೆರಾ ಮುಂದೆ ನಟನೆ ಮಾಡಿದರು. ಚಾನೆಲ್‌ನ ವರದಿಗಾರ ಪ್ರಕಾಶ್ ಸಿಂಗ್ ಸುದ್ದಿ ಸೃಷ್ಟಿಸಿ, ಸ್ಟಿಂಗ್ ಆಪರೇಶನ್' ಹೆಸರಿನಲ್ಲಿ ಅಶ್ಲೀಲ ಚಿತ್ರ, ಚಿತ್ರಣಗಳೊಂದಿಗೆ ವರದಿ ಮಾಡಿದರು. ಆದರೆ 2007, ಸೆಪ್ಟೆಂಬರ್ 13ರಂದು ಪ್ರಕರಣದ ವಿಚಾರಣೆ ನಡೆಸಿ, ವಾದ-ಪ್ರತಿವಾದ ಆಲಿಸಿದ ವಿಭಾಗೀಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂ.ಕೆ. ಶರ್ಮಾ ಹಾಗೂ ಸಂಜೀವ್ ಖನ್ನಾಗೆ ಪಿತೂರಿಯ ಅರಿವಾಯಿತು. ಉಮಾ ಖುರಾನಾ ಅವರನ್ನು ದೋಷಮುಕ್ತರೆಂದು ಘೋಷಿಸಿ ಬಿಡುಗಡೆಗೊಳಿಸಿದರು. ಅಷ್ಟೇ ಅಲ್ಲ, ವರದಿಗಾರ ಪ್ರಕಾಶ್ ಸಿಂಗ್ ಹಾಗೂ ರಶ್ಮಿ ಖನ್ನಾ ಅವರನ್ನು ಬಂಧಿಸುವಂತೆ ಆದೇಶ ನೀಡಿದರು. ಲೈವ್ ಇಂಡಿಯಾ' ಚಾನೆಲ್ಲನ್ನೇ ಮುಚ್ಚಿಹಾಕಿಸಿದರು. ಆದರೆ ಅಷ್ಟರೊಳಗೆ ಉಮಾ ಖುರಾರಾ ಮರ್ಯಾದೆ ಬೀದಿ ಪಾಲಾಗಿತ್ತು. ಅಂದು ಸ್ಟಿಂಗ್ ಆಪರೇಶನ್ ಪ್ರಸಾರವಾದಾಗ ಇಡೀ ದೇಶವೇ ದಿಗ್ಭ್ರಮೆಗೊಂಡಿತ್ತು, ರಾಷ್ಟ್ರವೇ ರೊಚ್ಚಿಗೆದ್ದಿತ್ತು. ನಾವೆಲ್ಲರೂ ನೈತಿಕಪ್ರಜ್ಞೆ ಅದಾಗತಾನೇ ಜಾಗೃತಗೊಂಡಂತೆ Moral high ground" ಏರಿ ಬೋಧನೆಗಿಳಿದು ಬಿಟ್ಟಿದ್ದೆವು.

ಒಂದು ತಿಂಗಳ ಹಿಂದೆ ನೋಯ್ಡಾ ಪೊಲೀಸರು ಮಾಡಿದ್ದೂ ಇದೇ ಕೆಲಸವನ್ನು! ಮನೆ ಕೆಲಸದ ಹೇಮರಾಜ್ ಮಹಡಿ ಮೇಲೆಯೇ ಹೆಣವಾಗಿ ಬಿದ್ದಿದ್ದರೂ ಆರುಷಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ತೀರ್ಪುಕೊಟ್ಟರು. ಸತ್ಯಸಂಗತಿ ಗೊತ್ತಾದ ಕೂಡಲೇ ಪತ್ರಿಕಾಗೋಷ್ಠಿ ಕರೆದ ಪೊಲೀಸರು, ಅಪ್ಪ ಡಾ. ರಾಜೇಶ್ ತಲ್ವಾರ್ ಅವರೇ ಆರುಷಿಯ ಕೊಲೆಗಾರ. ಮನೆಯಲ್ಲಿ ಕೆಲಸಕ್ಕಿದ್ದ ಹೇಮ್‌ರಾಜ್ ಜತೆ ಆರುಷಿ ಅಸಭ್ಯ ಭಂಗಿಯಲ್ಲಿದ್ದಿದ್ದು ಕಣ್ಣಿಗೆ ಬಿದ್ದಿದ್ದೇ ಕೊಲೆಗೆ ಕಾರಣ ಎಂದು ಅನೈತಿಕ' ಸಂಬಂಧದ ಕಥೆ ಕಟ್ಟಿದರು. ಆ 14 ವರ್ಷದ ಹುಡುಗಿ ಭವಿಷ್ಯದ ಬಗ್ಗೆ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳೋ ಗೊತ್ತಿಲ್ಲ, ಆದರೆ ಅಕಾಲಿಕವಾಗಿ ಕೊಲೆಯಾಗಿ ಒಂದು ತಿಂಗಳು ಕಳೆದರೂ ಇಂದಿಗೂ ಚಾರಿತ್ರ್ಯವಧೆಗೆ ಗುರಿಯಾಗುತ್ತಿದ್ದಾಳೆ. ನಿಜವಾಗಿ ನಡೆದಿದ್ದೇನು ಎಂದು ಹೇಳಲು, ತನ್ನನ್ನು ಸಮರ್ಥಿಸಿಕೊಳ್ಳಲು ಆಕೆಯೇ ಇಲ್ಲದಿರುವಾಗ ಶೀಲದ ಮೇಲೆ ಶಂಕೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಜೀವನ ಏನು ಎಂಬುದು ಅರ್ಥವಾಗುವ ಮೊದಲೇ ಅಗಲಿರುವ ಒಬ್ಬ ಹೆಣ್ಣುಮಗಳ ಚಾರಿತ್ರ್ಯದ ಬಗ್ಗೆ ಏಕಿಂಥ ಅನುಮಾನ? ಅಕಸ್ಮಾತ್, ಆರುಷಿ ಅಸಭ್ಯವಾದ ಭಂಗಿಯಲ್ಲಿದ್ದಾಗ ಸಿಕ್ಕಿಬಿದ್ದಿದ್ದರೂ ಬೈದು ಬುದ್ಧಿಹೇಳುವ ಬದಲು, ಅದೊಂದೇ ಕಾರಣಕ್ಕೆ ಹೆತ್ತಮಗಳನ್ನೇ ಕೊಲೆಗೈಯ್ಯುವಷ್ಟು ಅಪ್ಪ ಕಟುನಾಗಿರುತ್ತಾನೆಯೇ? ಹದಿನಾಲ್ಕು ವರ್ಷದ ಹುಡುಗಿ 47 ವರ್ಷದ ಮುದುಕನ ಬಳಿ ಲೈಂಗಿಕ ಸಂಬಂಧ ಬೆಳೆಸಬೇಕಾದ ಅನಿವಾರ್ಯತೆಯಾದರೂ ಏನಿತ್ತು? ಆಕೆಗೆ ಅಷ್ಟೊಂದು ಆಸಕ್ತಿಯಿದ್ದರೆ ಆಕೆಯ ಸಹಪಾಠಿಗಳು, ಹುಡುಗರು ಸಿಗುತ್ತಿದ್ದರಲ್ಲವೆ? ಅಷ್ಟಕ್ಕೂ ಒಂದಿಬ್ಬರು ಸಹಪಾಠಿಗಳ ಜತೆ ಆಕೆ ವಿನಿಮಯ ಮಾಡಿಕೊಂಡಿರುವ ಪ್ರಚೋದಕ ಎಸ್‌ಎಂಎಸ್‌ಗಳನ್ನು ಮಾಧ್ಯಮಗಳೇ ಪ್ರಕಟಿಸಿವೆ. ಅದಿರಲಿ, ಡಾ.ತಲ್ವಾರ್ ಜತೆ ಡಾ. ದುರಾನಿ, ಹೇಮ್‌ರಾಜ್ ಜತೆ ಆರುಷಿಯ ಸಂಬಂಧ ಹೊಂದಿದ್ದರು ಎಂದು ಘೋಷಣೆ ಮಾಡಲು ಪೊಲೀಸರೇನು ಪ್ರತ್ಯಕ್ಷವಾಗಿ ಕಂಡಿದ್ದರೆ? ನಾವೇಕೆ ಎಲ್ಲದರಲ್ಲೂ ಅನೈತಿಕ ಸಂಬಂಧವನ್ನೇ ಹುಡುಕಲು ಪ್ರಯತ್ನಿಸುತ್ತೇವೆ?

ಮೊನ್ನೆ ಪ್ರಾಣಕಳೆದುಕೊಂಡ ನಮ್ಮ ರಾಜ್ಯದವರೇ ಆದ ಪದ್ಮಪ್ರಿಯಾ ಎಂಬ ನತದೃಷ್ಟ ಮಹಿಳೆಯ ಚಾರಿತ್ರ್ಯದ ಬಗ್ಗೆ ವರದಿಯಾದ ಕಟ್ಟುಕಥೆಗಳನ್ನು ಓದಿದಾಗ ಅಂತರಾತ್ಮ ಅನ್ನುವುದು ಇದ್ದವರಿಗೆ ಖಂಡಿತ ಅತೀವ ದುಃಖವಾಗಿರುತ್ತದೆ, ಮನಸ್ಸು ಘಾಸಿಗೊಂಡಿರುತ್ತದೆ. ಆಕೆ ಕಾಣೆಯಾಗಿದ್ದಾಳೆ, ಮನೆ ಬಿಟ್ಟು ತೆರಳಿದ್ದಾಳೆ ಎಂದ ಕೂಡಲೇ ನಮ್ಮ ಮನಸ್ಸಿಗೆ ಅನೈತಿಕ ಸಂಬಂಧವೇ ನೆನಪಾಗುವುದೇಕೆ? ನಮ್ಮಲ್ಲಿ ನೈತಿಕತೆ ಅನ್ನುವುದು ಉಳಿದಿಲ್ಲದಿರುವುದೇ ನಾವು ಹಾಗೆ ಯೋಚಿಸಲು ಕಾರಣ ಅಂತ ಅನ್ನಿಸುವುದಿಲ್ಲವೆ? ಒಂದು ಗಂಡು-ಹೆಣ್ಣು ಭಾಗಿಯಾಗಿರುವ ಘಟನೆಗಳು ಸಂಭವಿಸಿದಾಗ ನಮ್ಮ ಮನಸ್ಸೇಕೆ ಅನೈತಿಕ ಸಂಬಂಧದ ಕಡೆಯೇ ಸಾಗುತ್ತದೆ? ನಾವೇಕೆ ಹೆಣ್ಣನ್ನು ಅನುಮಾನದಿಂದಲೇ ನೋಡುತ್ತೇವೆ? ನಮ್ಮ ಕಣ್ಣುಗಳಲ್ಲಿ ಶಂಕೆಯೇ ಏಕೆ ತುಂಬಿ ಬಿಡುತ್ತದೆ? ಅಷ್ಟಕ್ಕೂ ದೈಹಿಕ ಸುಖ ಬೇಕಾಗಿದ್ದರೆ ಎರಡು ಮಕ್ಕಳಿಗೆ ಜನ್ಮಕೊಟ್ಟು, 35 ವರ್ಷ ತುಂಬಿ ಅರ್ಧ ಪ್ರಾಯ ಕಳೆಯುವವವರೆಗೂ ಪದ್ಮಪ್ರಿಯಾ ಕಾಯಬೇಕಾಗಿರಲಿಲ್ಲ. ಮಿಗಿಲಾಗಿ ಆಕೆಗೆ ದೈಹಿಕ ಸುಖವೇ ಮುಖ್ಯವಾಗಿದ್ದರೆ, ಅತುಲ್‌ರಾವ್ ಜತೆ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದರೆ ದಿಲ್ಲಿಗೆ ಪಲಾಯನ ಮಾಡಬೇಕಾದ ಅಗತ್ಯವೇನಿತ್ತು? ಗಂಡ ರಘುಪತಿ ಭಟ್ಟರ ಅನೈತಿಕ ಸಂಬಂಧದಿಂದ ಬೇಸತ್ತು ಆಕೆ ಅಂತಹ ನಿರ್ಧಾರಕ್ಕೆ ಬಂದಿರಬಹುದು. ಅಷ್ಟಕ್ಕೂ ಆಕೆ ನೀತಿಗೆಟ್ಟ ಹೆಣ್ಣಾಗಿದ್ದರೆ ತೆರೆಮರೆಯಲ್ಲಿ ಸುಖಪಡೆದುಕೊಳ್ಳುತ್ತಾ ಗಂಡನ ಅನೈತಿಕತೆಯನ್ನೂ ಸಹಿಸಿಕೊಂಡು ಸಂಬಂಧವನ್ನು ಕಾಪಾಡಿಕೊಳ್ಳಬಹುದಿತ್ತು. ಜಗತ್ತಿನ ಎಲ್ಲ ಗಂಡಾಂತರ, ಸಾಮಾಜಿಕ ಅವಹೇಳನದ ಭಯವನ್ನು ಮೈಮೇಲೆ ಎಳೆದುಕೊಂಡು ದಿಲ್ಲಿಗೆ ಓಡಿ ಹೋಗುವ ಅಗತ್ಯವೇನಿತ್ತು? ವ್ಯವಹಾರ ಚತುರೆಯಾದ ಆಕೆಗೆ ಲೋಕಜ್ಞಾನ ಇಲ್ಲದೇ ಇರುತ್ತಾ? ಇಷ್ಟೆಲ್ಲಾ ಅಪಾಯಗಳಿವೆ ಎಂದು ಗೊತ್ತಿದ್ದೂ ಆಕೆ ದಿಲ್ಲಿಗೆ ತೆರಳಿ ಕಾಲ್‌ಸೆಂಟರ್ ಸೇರಿ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೊರಟ್ಟಿದ್ದಳೆಂದರೆ ಆಕೆಯೊಳಗೆ ಬಲವಾದ ಯಾವುದೋ ನೋವು, ಗಂಡನ ಪ್ರವೃತ್ತಿಯ ಬಗ್ಗೆ ಅಸಹ್ಯ ಭಾವನೆ ಇದ್ದಿರಬಹುದಲ್ಲವೆ? ಇಲ್ಲದೇ ಹೋಗಿದ್ದರೆ ಯಾವ ತಾಯಿ ತಾನೇ ತನ್ನ ದೈಹಿಕ ಸುಖಕ್ಕಾಗಿ ಹೆತ್ತಮಕ್ಕಳನ್ನು ಬಿಟ್ಟು ಹೋಗುತ್ತಾಳೆ? ಅದಿರಲಿ, ವ್ಯಭಿಚಾರವೆಂಬುದು ಏಕೆ ಹೆಣ್ಣಿಗೆ ಮಾತ್ರ ಸಂಬಂಧಪಟ್ಟ ವಿಷಯವಾಗಿ ಬಿಡುತ್ತದೆ? ರಘುಪತಿ ಭಟ್ಟರ ಚಾರಿತ್ಯ್ರವನ್ನೇಕೆ ನಾವು ಸತ್ವಪರೀಕ್ಷೆಗೆ ಒಳಪಡಿಸುತ್ತಿಲ್ಲ? ಅವರೇನು ಶ್ರೀರಾಮಚಂದ್ರನೇ? ನಮ್ಮ ಸಮಾಜ ಸಂವೇದನೆಯನ್ನೇ ಕಳೆದುಕೊಂಡು ಬಿಟ್ಟಿದೆಯೇ?

ಅದು ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ರೋನನ್ ಸೇನ್ ಅವರಿಂದ Headless Chickens" ಎಂದು ಕರೆಸಿಕೊಂಡ ಪತ್ರಕರ್ತರಿರಬಹುದು, ರಾಜಶೇಖರ್, ನಿಮ್ಮ ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ, ನಿಮಗೇನನಿಸುತ್ತಿದೆ?!' ಎಂದು ಕೇಳುವ ಟಿವಿ ಆಂಕರ್‌ಗಳಿರಬಹುದು ಅಥವಾ ಅವರು ಬರೆದಿದ್ದನ್ನು ಬಾಯಿ ಚಪ್ಪರಿಸಿಕೊಂಡು ಓದುವ ಹಾಗೂ ಬಾಯಿ ತೆರೆದುಕೊಂಡು ಟಿವಿ ನೋಡುವವರು ಆಗಿರಬಹುದು. ಅವರು ಪದ್ಮಪ್ರಿಯಾ ಅವರ ಚಾರಿತ್ರ್ಯಕ್ಕಿಂತ ಮೊದಲು ತಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಪ್ರಶ್ನಿಸಿಕೊಳ್ಳುವುದು, ತಮ್ಮ ನೈತಿಕತೆಯನ್ನು ಪರಾಮರ್ಶಿಸಿಕೊಳ್ಳುವುದೊಳಿತು. ಇವತ್ತು ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನಮ್ಮ ಕುತೂಹಲಕ್ಕೆ ಇಬ್ಬರು ಮಕ್ಕಳು ಅನಾಥವಾಗಬೇಕಾಗಿ ಬಂದಿದ್ದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇವತ್ತು ವಿಷಯ ತಣ್ಣಗಾಗಿರಬಹುದು. ಮುಂದೊಂದು ದಿನ ಮರೆತಂತೆಯೂ ಭಾಸವಾಗಬಹುದು. ಆದರೆ ನೆನಪುಗಳು ಅಳಿಸಿ ಹೋಗುವುದಿಲ್ಲ. ಆಕೆ ಕಳಂಕಿತ ಹೆಣ್ಣಾಗಿಯೇ ಉಳಿದು ಬಿಡುತ್ತಾಳೆ. ಅಷ್ಟಕ್ಕೂ ತನ್ನನ್ನು ಸಮರ್ಥಿಸಿಕೊಳ್ಳಲು, ನೈಜ ಕಾರಣವನ್ನು ವಿವರಿಸಲು ಆಕೆಯೇ ಇಲ್ಲ. ಆಕೆಯ ಮಕ್ಕಳು ಇಂಥಾಕೆಯ ಮಕ್ಕಳು' ಎಂಬ ಕಳಂಕವನ್ನು ಜೀವನ ಪರ್ಯಂತ ಹೊರಬೇಕಾಗುತ್ತದೆ. ನೀವೇ ಹೇಳಿ, ಸತ್ತು ಚಿತೆಯೇರಿದ ಮೇಲೂ ನಾವೇಕೆ ಶೀಲದ ಸತ್ವಪರೀಕ್ಷೆ ಮಾಡುತ್ತಿದ್ದೇವೆ? ಅವರಿಬ್ಬರ ಮಧ್ಯೆ ಯಾವ ಸಂಬಂಧವಿತ್ತು ಎಂಬುದು ಅವರಿಬ್ಬರಿಗಷ್ಟೇ ಗೊತ್ತು. ಹಾಗಿರುವಾಗ ತಾವೇ ಇಣುಕಿ ನೋಡಿದಂತೆ, ಪ್ರತ್ಯಕ್ಷವಾಗಿ ಕಂಡಂತೆ ಬರೆಯುವುದು ಮತ್ತು ಹಾಗೆ ಬರೆದಿದ್ದನ್ನು ಸತ್ಯವೆಂಬಂತೆ ನಂಬುವುದು ಎಷ್ಟು ಸರಿ? ಪತ್ರಿಕೆಗಳಲ್ಲಿ ಬರೆಯುವವರು, ಬರೆದಿದ್ದನ್ನು ಓದುವ ಓದುಗರೆಲ್ಲರೂ ಸುಶಿಕ್ಷಿತರೇ. ಅನಕ್ಷರಸ್ಥರು ಪತ್ರಿಕೆ ಓದುವುದಿಲ್ಲ. ಸುಶಿಕ್ಷಿತರೇ ಹೀಗೆ ವರ್ತಿಸಿದರೆ ಸಮಾಜದ ಗತಿಯೇನು?

ಅದು ಯಾವುದೇ ವ್ಯಕ್ತಿಯಾಗಿರಲಿ ಆರೋಪ ಸಾಬೀತಾಗುವವರೆಗೂ ನಿರಪರಾಧಿ" ಎಂದು ನಮ್ಮ ಕಾನೂನು ಹೇಳುತ್ತದೆ.

ಆದರೆ ರಘುಪತಿ ಭಟ್ಟರೆ, ನಿಮ್ಮ ಪತ್ನಿ ಪದ್ಮಪ್ರಿಯಾ ಅವರ ಬದುಕು ಮೊಟಕುಗೊಳ್ಳುವುದಕ್ಕೆ ಕಾರಣ ಯಾರು? ನೀವೋ ಅಥವಾ ಅತುಲ್‌ನೋ? ಅತುಲ್ ಕೆಟ್ಟವ್ಯಕ್ತಿಯೇ ಆಗಿರಬಹುದು. ಆದರೆ ನೀವು ಸರಿಯಿದ್ದಿದ್ದರೆ ನಿಮ್ಮ ಹೆಂಡತಿ ಅತುಲ್ ಸಹಾಯ ಕೇಳುವ ಅಗತ್ಯವೇಕೆ ಬರುತ್ತಿತ್ತು? ಯಾವ ಹೆಣ್ಣುತಾನೇ ಸೆಕ್ಸ್‌ಗಾಗಿ ಸಂಬಂಧವನ್ನೇ ಕಡಿದುಕೊಳ್ಳಲು ಮುಂದಾಗುತ್ತಾಳೆ? ಕಾಮತೃಷೆ ತೀರಿಸಿಕೊಳ್ಳುವ ಬಯಕೆ ಆಕೆಗಿದ್ದರೆ ವಿಚ್ಛೇದನೆ ನೀಡುವಂತೆ ನಿಮ್ಮನ್ನು ಅಂಗಲಾಚುತ್ತಿರಲಿಲ್ಲ. ನಿಮಗೆ ಹೆಂಡತಿ ಮೇಲೆ ಪ್ರೀತಿ ಉಳಿದಿಲ್ಲವೆಂದಾಗಿದ್ದರೆ ಸಂಬಂಧದ ಕೊಂಡಿಯೇಕೆ ಬೇಕಿತ್ತು? ಆಕೆಯ ಇಚ್ಛೆಯಂತೆ ಡೈವೋರ್ಸ್ ನೀಡಿದ್ದಿದ್ದರೆ ಕನಿಷ್ಠ ಒಂದು ಹೆಣ್ಣಿನ ಪ್ರಾಣವಾದರೂ ಉಳಿದಿರುತ್ತಿತ್ತಲ್ಲವೆ?

ಏನೇ ಹೇಳಿ, ಕೈಹಿಡಿದವಳನ್ನು ಪ್ರೀತಿಗೆ ಬದಲು ಸಂಬಂಧದಲ್ಲಿ ಕಟ್ಟಿಹಾಕುವ ರಘುಪತಿ ಭಟ್ಟರಂತಹ ಗಂಡಂದಿರಿರುವವರೆಗೂ, ಶಾಸಕರ ಪತ್ನಿಗೇ ರಕ್ಷಣೆ ಇಲ್ಲವೆಂದಾದರೆ ಸಾಮಾನ್ಯರ ಗತಿಯೇನು?' ಎಂದು ಹೇಳಿಕೆ ನೀಡುವ ಬಾಯಿಬಡುಕಿ ಪ್ರಮೀಳಾ ನೇಸರ್ಗಿ, ಖರ್ಗೆಯವರಂತಹ ನಿರ್ಭಾವುಕ ಮನಸ್ಸುಗಳು ಇರುವವರೆಗೂ ಸಮಾಜ ಹೆಣ್ಣಿನ ಶೀಲದ ಸತ್ವಪರೀಕ್ಷೆ ನಡೆಸುವುದನ್ನು ನಿಲ್ಲಿಸುವುದಿಲ್ಲ. ಛೇ.

(ಸ್ನೇಹಸೇತು : ವಿಜಯ ಕರ್ನಾಟಕ)

ಪೂರಕ ಓದಿಗೆ

ಬ್ರೇಕಿಂಗ್ ನ್ಯೂಸ್ ಹಾವಳಿ ಸಾಕಪ್ಪಾ ಸಾಕು

ದಕ್ಷ, ಆದರ್ಶ ಟಿವಿ ಪತ್ರಕರ್ತನ ಸಾವು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more