ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ ತುಳಿತಕ್ಕೆ ಕುಗ್ಗದ ಇಂಡಿಯಾ ಟುಡೆ

By Staff
|
Google Oneindia Kannada News

Modi No. 1 CM inspite of NDTVಪ್ರಬಲವಾದ ಕೆಲವು ಮಾಧ್ಯಮ ವೇದಿಕೆಗಳಿಗೆ ಅವರನ್ನು ಹಿಮ್ಮೆಟ್ಟಿಸುವುದೇ ಒಂದು ಅಜೆಂಡಾ ಆಗುತ್ತದೆ. ಆ ಮನುಷ್ಯನನ್ನು ಹೇಗಾದರೂ ಮಾಡಿ ಚುನಾವಣೆಯಲ್ಲಿ ಮಟ್ಟಹಾಕಲು ಅಸ್ತ್ರಗಳನ್ನು ಛೂ ಬಿಡುತ್ತಾರೆ. ಟಿವಿ ವಾಹಿನಿಗಳಲ್ಲಿ ಅವರ ವಿರುದ್ಧ ನುರಿತ ಪತ್ರಕರ್ತರು ಏಕಪ್ರಕಾರವಾಗಿ ವಿಷಕಾರುತ್ತಾರೆ. ಇಷ್ಟೆಲ್ಲ ಎದುರಾಳಿಗಳು ಮತ್ತು ನಾನಾ ಬಗೆಯ ಪ್ರತೀಕೂಲ ವಾತಾವರಣದ ರಣಕಹಳೆಗಳ ನಡುವೆಯೂ ಆ ಮನುಷ್ಯ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಾನೆ, ರಾಷ್ಟ್ರದ ಅತ್ಯುತ್ತಮ ಮುಖ್ಯಮಂತ್ರಿ ಎಂತಲೂ ಕರೆಸಿಕೊಳ್ಳುತ್ತಾನೆ. ಇದೆಲ್ಲ ಹೇಗಾಗುತ್ತದೆ ? ನಿಮಗೆ ಆಶ್ಚರ್ಯವಾಗುವುದಿಲ್ಲವಾ?

ಪ್ರತಾಪ್ ಸಿಂಹ

ಅದೇನು ಸಾಮಾನ್ಯ ಪತ್ರಿಕೆಯಲ್ಲ. ಮೂವತ್ಮೂರು ವಸಂತಗಳನ್ನು ಪೂರೈಸಿರುವ ಅದು ತೀರಾ ಇತ್ತೀಚಿನವರೆಗೂ Most Respected ಮ್ಯಾಗಝಿನ್ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿತ್ತು. ಅಷ್ಟೇ ಅಲ್ಲ, ಇಂಗ್ಲಿಷ್ ಅಲ್ಲದೆ ತಮಿಳು, ಹಿಂದಿಯಲ್ಲೂ ಪ್ರಕಟವಾಗುವ 'ಇಂಡಿಯಾ ಟುಡೆ" ದೇಶದಲ್ಲಿಯೇ ಅತಿ ಹೆಚ್ಚು ಪ್ರಸಾರವುಳ್ಳ ವಾರಪತ್ರಿಕೆ. ಅದು ವರ್ಷಕ್ಕೊಮ್ಮೆ, ಕೆಲವೊಮ್ಮೆ ವರ್ಷದಲ್ಲಿ ಎರಡು ಬಾರಿ ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸುತ್ತದೆ. ಆ ಸಮೀಕ್ಷೆಯ ವೇಳೆ ದೇಶದ ವಿವಿಧ ರಾಜ್ಯಗಳಿಗೆ ಹೋಗಿ ಆಯ್ದ ಕೆಲವು ವ್ಯಕ್ತಿಗಳಿಗೆ ಅವರವರ ರಾಜ್ಯದ ಮುಖ್ಯಮಂತ್ರಿಯ ಸಾಧನೆಯ ಬಗ್ಗೆ ಅಭಿಪ್ರಾಯ ಕೇಳುತ್ತದೆ. ಆನಂತರ ಅನ್ಯ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ನಿಮಗೇನನಿಸುತ್ತದೆ ಎಂದು ರೇಟ್ ಮಾಡುವಂತೆ ಹೇಳುತ್ತದೆ.

ಈ ಬಾರಿ ನಡೆಸಿದ ಇಂತಹ 14ನೇ ರಾಷ್ಟ್ರ ಮಟ್ಟದ ಸಮೀಕ್ಷೆಯ ವೇಳೆ 19 ರಾಜ್ಯಗಳು ಹಾಗೂ 98 ಲೋಕಸಭೆ ಕ್ಷೇತ್ರಗಳ 12,492 ಮತದಾರರ ಅಭಿಪ್ರಾಯ ಕೇಳಲಾಗಿತ್ತು. ಅದರ ಆಧಾರದ ಮೇಲೆ ಫೆಬ್ರವರಿ 4ರಂದು ಪ್ರಕಟಿಸಿರುವ ಫಲಿತಾಂಶದಲ್ಲಿ ಉತ್ತರಾಖಂಡದ ಬಿಜೆಪಿ ಮುಖ್ಯಮಂತ್ರಿ ಬಿ.ಸಿ. ಖಂಡೂರಿಯವರು ರಾಜ್ಯಮಟ್ಟದಲ್ಲಿ 'ನಂಬರ್-1" ಸ್ಥಾನ ಪಡೆದುಕೊಂಡಿದ್ದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಮಟ್ಟದಲ್ಲಿ 'ನಂಬರ್-1" ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ!

ಇದೇನು ಸಣ್ಣ ಸಾಧನೆಯಲ್ಲ. ಅಷ್ಟಕ್ಕೂ ಆಯಾ ರಾಜ್ಯದ ಮತದಾರರ ಅಭಿಪ್ರಾಯವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದರಿಂದ ರಾಜ್ಯವಾರು ಮಟ್ಟದಲ್ಲಿ 'ನಂಬರ್-1" ಮುಖ್ಯಮಂತ್ರಿ ಎನಿಸಿಕೊಳ್ಳುವುದಕ್ಕೆ ಭಾರೀ ಶ್ರಮಪಡಬೇಕಿಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ 'ನಂಬರ್-1" ಎನಿಸಿಕೊಳ್ಳುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ದೇಶಾದ್ಯಂತ ಇರುವ ದಲಿತರ ಪ್ರಶ್ನಾತೀತ ಅಧಿಪತಿಯಾಗಿರುವ ಮಾಯಾವತಿಯವರನ್ನು ಹಿಂದಕ್ಕೆ ಹಾಕುವುದೆಂದರೆ ಸಣ್ಣ ವಿಷಯವೇ?! ಇಷ್ಟಾಗಿಯೂ ಮೋದಿಯವರು ನಂಬರ್-1 ಆಗಿದ್ದಾರೆ. ಗುಜರಾತ್‌ನ ಶೇ.77ರಷ್ಟು ಮತದಾರರು ಮೋದಿಯವರೇ ಅತ್ಯುತ್ತಮ ಮುಖ್ಯ ಮಂತ್ರಿ ಎಂದು ತೀರ್ಪು ನೀಡಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲದಿದ್ದರೂ ಇತರ ರಾಜ್ಯಗಳಲ್ಲಿರುವ ಹೆಚ್ಚಿನ ಮತದಾರರೂ ಮೋದಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿರುವುದು ನಿಜಕ್ಕೂ ಹುಬ್ಬೇರಿಸುವಂತಿದೆ.

ರಾಜಧಾನಿ ದಿಲ್ಲಿಯಲ್ಲಿ ಶೇ.43ರಷ್ಟು ಮತದಾರರು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಸಾಧನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರೆ ಶೇ.31ರಷ್ಟು ಜನರು ಹೊರಗಿನವರಾದ ಮೋದಿಯವರಿಗೆ ಸೈ ಎಂದಿದ್ದಾರೆ! ಅದರಲ್ಲೂ ದಕ್ಷಿಣದ ಆಂಧ್ರದಲ್ಲಂತೂ “ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್ ಮತದಾರರು ಮೋದಿಯವರ ಅಭಿವೃದ್ಧಿ ಕಾರ್ಯಗಳಿಗೆ ಹಸಿರು ನಿಶಾನೆ ತೋರಿದ್ದಾರೆ" ಎಂದು ಶೇ. 68ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡುಗಳಲ್ಲೂ ಮೋದಿಯವರಿಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಕರ್ನಾಟಕದಲ್ಲೂ ಶೇ.35ರಷ್ಟು ಜನರು ಮೋದಿ ಬೇಕೆಂದಿದ್ದಾರೆ! ದಿ ಅಗ್ಲಿ ಇಂಡಿಯನ್, Hero of hatred, ಸಾವಿನ ವ್ಯಾಪಾರಿ, ಸುಳ್ಳುಗಾರ ಅಂತ ಸದಾ ದೂಷಿಸುವ, ದ್ವೇಷಿಸುವ ಮಾಧ್ಯಮಗಳಿಗೆ ಬೇಸರ ಎಷ್ಟಾಗಿರಬಹುದು ಅಲ್ಲವೆ?

ಇಂತಹ ದ್ವೇಷ ಬಹಿರಂಗವಾಗಿ ವ್ಯಕ್ತವಾಗಿದ್ದೂ ಇದೆ. ಕಳೆದ ಡಿಸೆಂಬರ್ 23ರಂದು ಬೆಳಗ್ಗೆ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು ಆರಂಭಿಸಿದ ಮೊದಲ ಅರ್ಧ ಗಂಟೆಯಲ್ಲಿ ಬಿಜೆಪಿಗೆ ಹಿನ್ನಡೆಯುಂಟಾಗುವ ಸೂಚನೆ ದೊರೆತಾಗ ಮಾಧ್ಯಮಗಳ ಮುಖದಲ್ಲಿ ಒಂಥರಾ ಗೆಲುವಿನ ಮಂದಹಾಸ. ಎನ್‌ಡಿಟೀವಿ, ಸಿಎನ್‌ಎನ್-ಐಬಿಎನ್ ಚಾನೆಲ್‌ಗಳ ಆಂಕರ್‌ಗಳಂತೂ ಸಂಭ್ರಮಿಸಲು ಸನ್ನದ್ಧರಾಗ ತೊಡಗಿದ್ದರು. ಆದರೆ ಗಂಟೆ ಕಳೆಯುವಷ್ಟರಲ್ಲಿ ಮೋದಿಯವರು ಐತಿಹಾಸಿಕ ಜಯದತ್ತ ದಾಪುಗಾಲಿಡುತ್ತಿರುವ ಚಿತ್ರಣ ಸ್ಪಷ್ಟವಾಗುತ್ತಿದ್ದಂತೆ ಮಾಧ್ಯಮಗಳಿಗೆ ಎಷ್ಟು ನಿರಾಸೆಯಾಯಿತೆಂದರೆ “ನರೇಂದ್ರ ಮೋದಿಯವರು ಗುಜರಾತ್ ಚುನಾವಣೆಯಲ್ಲಿ ಗೆಲ್ಲಬಹುದು. ಆದರೇನಂತೆ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಗಲು ವೀಸಾ ಪಡೆದುಕೊಳ್ಳಲು ಅವರಿಂದಾಗದು" ಎಂದೇ ಬಿಟ್ಟರು ಎನ್‌ಡಿಟೀವಿಯ ಸ್ಟಾರ್ ನಿರೂಪಕಿ ಬರ್ಖಾ ದತ್!!

ಅದರಲ್ಲೂ ತೆಹಲ್ಕಾ ಪತ್ರಿಕೆ ಹಾಗೂ ಆಜ್‌ತಕ್ ಟೀವಿಗಳು ಗುಜರಾತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ 2002ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಡೆಸಿದ್ದ 'ಸ್ಟಿಂಗ್ ಆಪರೇಶನ್" ಅನ್ನು ಬಹಿರಂಗಪಡಿಸುವ ಮೂಲಕ ಮೋದಿಯವರನ್ನು ಹಣಿಯಲು ಯತ್ನಿಸಿದ್ದವು. ಅಣಕವೆಂದರೆ ಆಜ್‌ತಕ್ ಟೀವಿಯವರದ್ದೇ ಆದ 'ಇಂಡಿಯಾ ಟುಡೆ"ಯ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರು ದೇಶದ 'ನಂಬರ್-1" ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ!

ಅಷ್ಟಕ್ಕೂ ಮೋದಿಯವರಲ್ಲಿ ಅಂಥದ್ದೇನಿದೆ? ಇಡೀ ದೇಶದಲ್ಲಿಯೇ ಅತಿ ಹೆಚ್ಚು ದೂಷಣೆ, ದ್ವೇಷಕ್ಕೊಳಗಾಗಿರುವ ವ್ಯಕ್ತಿ ಅವರಾಗಿದ್ದರೂ ಜನರೇಕೆ ಮೋದಿಯವರನ್ನು ಇಷ್ಟಪಡುತ್ತಿದ್ದಾರೆ? ಗುಜರಾತ್‌ನ ಜನರು ಅಭಿವೃದ್ಧಿ ಕಾರ್ಯಗಳಿಗಾಗಿ ಇಷ್ಟಪಡುತ್ತಿರುವುದು ಸಹಜ. ಆದರೆ ದೇಶದ ಇತರ ರಾಜ್ಯಗಳಲ್ಲೂ ಮೋದಿಯವರ ಜನಪ್ರಿಯತೆ, ಸ್ವೀಕೃತಿ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಕಳೆದ ಅಕ್ಟೋಬರ್ 12ರಂದು 'ಹಿಂದೂಸ್ತಾನ್ ಟೈಮ್ಸ್" ಪತ್ರಿಕೆ 'ಲೀಡರ್‌ಶಿಪ್ ಸಮಿಟ್" ಎಂಬ ಚರ್ಚಾಕೂಟವನ್ನು ಏರ್ಪಡಿಸಿತ್ತು. ಆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನರೇಂದ್ರ ಮೋದಿಯವರನ್ನು ಎಲ್ಲರ ಸಮ್ಮುಖದಲ್ಲಿ ಸಂದರ್ಶಿಸಲು ಬಂದಿದ್ದು ಮತ್ತಾರೂ ಅಲ್ಲ ಸಿಎನ್‌ಎನ್-ಐಬಿಎನ್ ಚಾನೆಲ್‌ನ ಮುಖ್ಯಸ್ಥ ಹಾಗೂ ಖ್ಯಾತ ಕಾರ್ಯಕ್ರಮ ನಿರೂಪಕ ರಾಜ್‌ದೀಪ್ ಸರ್ದೇಸಾಯಿ! ಹಾಗಾಗಿ ಮೋದಿಯವರ ನೀರಿಳಿಸುವುದು ಖಂಡಿತ ಎಂದೇ ಎಲ್ಲರೂ ಭಾವಿಸಿದರು. ಮೊದಲ ಪ್ರಶ್ನೆ: ಮೋದಿ, ನೀವು ಕಳೆದ 6 ವರ್ಷಗಳಿಂದ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿದ್ದೀರಿ. ಈ 6 ವರ್ಷಗಳಲ್ಲಿ ಬದಲಾಗಿದ್ದು ಗುಜರಾತೋ, ಗುಜರಾತ್‌ನ ಪರಿಸ್ಥಿತಿಯೋ ಅಥವಾ ನೀವೋ? ಎಂದರು ಸರ್ದೇಸಾಯಿ.

“ಬದಲಾಗಿರುವುದು ನೀವು ತೊಟ್ಟಿರುವ ಉಡುಗೆ ಮಾತ್ರ!" ಎಂದ ಮೋದಿಯವರ ಉತ್ತರ ಸಭಾಂಗಣದಲ್ಲಿ ನೆರೆದಿದ್ದ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದ್ದಲ್ಲದೆ ನಗೆಗಡಲಿನಲ್ಲಿ ಮುಳುಗಿಸಿತು. ಏಕೆಂದರೆ ಸದಾ ಹಿಂದೂ ನಾಯಕರನ್ನು ತೆಗಳುವ ರಾಜ್‌ದೀಪ್ ಸರ್ದೇಸಾಯಿ ಅಂದು ಧರಿಸಿದ್ದ ಕುರ್ತಾ ಕೇಸರಿ ಬಣ್ಣದ್ದಾಗಿತ್ತು!! ಪೆಚ್ಚುಪೆಚ್ಚಾಗಿ ತಾನೂ ನಕ್ಕ ಸರ್ದೇಸಾಯಿ ಸಾವರಿಸಿಕೊಂಡು ಎರಡನೇ ಪ್ರಶ್ನೆ ಕೇಳಿದರು-“ಮೋದಿಯವರೇ, ಕಳೆದ 6 ವರ್ಷಗಳಿಂದ ನಾವೂ ನಿಮ್ಮನ್ನು ನಿಂದಿಸುತ್ತಾ ಬಂದಿದ್ದೇವೆ. ವೀರ್ ಸಾಂಘ್ವಿಯವರಂತೂ “Mass Murderer' ಎಂದು ಕರೆದಿದ್ದಾರೆ. ನಮಗೂ ಬೈದೂ ಬೈದು ಸಾಕಾಗಿದೆ. ಇವತ್ತು ಎಲ್ಲವನ್ನೂ Settle ಮಾಡಿಬಿಡೋಣ. ಪ್ರಾಮಾಣಿಕವಾಗಿ ಹೇಳಿ, ಗುಜರಾತ್ ಕೋಮು ಹಿಂಸಾಚಾರದಲ್ಲಿ ಸಾವಿರಾರು ಅಲ್ಪಸಂಖ್ಯಾತರ ಹತ್ಯೆಯಾಯಿತಲ್ಲಾ ಅದರ ಬಗ್ಗೆ ನಿಮಗೆ ಯಾವ ಪಶ್ಚಾತ್ತಾಪ, ವಿಷಾದವೂ ಇಲ್ಲವೆ?".

“ಗೋಧ್ರಾ ಘಟನೆ ಹಾಗೂ ಆನಂತರ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆಯಾಗಿದೆ, ನ್ಯಾಯಾಲಯವಿದೆ. ಇತ್ತ ಚುನಾವಣೆ ಹತ್ತಿರ ಬಂದಿದ್ದು ನಾನು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇನೆ. ಅವರು ಯಾವ ತೀರ್ಪು ನೀಡುತ್ತಾರೋ ಆ ತೀರ್ಪಿಗೆ ನಾನು ಬದ್ಧ" ಎಂದರು ಮೋದಿ. “ಅಂದರೆ ಜನ ಮತ್ತೆ ನಿಮ್ಮನ್ನು ಗೆಲ್ಲಿಸಿದರೆ ನೀವು ಯಾವ ತಪ್ಪನ್ನೂ ಮಾಡಿಲ್ಲ ಎಂದರ್ಥವೆ?" ಎಂದು ಸರ್ದೇಸಾಯಿ ಅಡ್ಡಪ್ರಶ್ನೆ ಹಾಕಿದಾಗ “ಜನರ ತೀರ್ಪನ್ನು ಗೌರವಿಸುವುದೂ ಬಿಡುವುದು ನಿಮಗೆ ಬಿಟ್ಟಿದ್ದು" ಎಂದ ಮೋದಿ ಸರ್ದೇಸಾಯಿಯವರನ್ನೇ ಇಕ್ಕಟ್ಟಿಗೆ ಸಿಲುಕಿಸಿದರು.

ಮೋದಿಯವರ ವೈಶಿಷ್ಟ್ಯವೇ ಅದು. ಅವರ ತತ್ತ್ವ, ಸಿದ್ಧಾಂತ, ಕಾರ್ಯವೈಖರಿಗಳ ಬಗ್ಗೆ ಬೇರೆಯವರಿಗೆ ಅನುಮಾನಗಳಿರಬಹುದು. ಆದರೆ ಮೋದಿಯವರಿಗೆ ಯಾವ ಅನುಮಾನಗಳೂ ಇಲ್ಲ. ಇತ್ತ ಕಾಶ್ಮೀರಕ್ಕೆ ಸೀಮಿತವಾಗಿದ್ದ ಭಯೋತ್ಪಾದನೆ ಕರ್ನಾಟಕದಂತಹ ದೂರದ ರಾಜ್ಯಕ್ಕೂ ವ್ಯಾಪಿಸಿದೆ. ದಿಲ್ಲಿ, ಮುಂಬೈ, ಹೈದರಾಬಾದ್‌ಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ಇಂತಹ ಭಯೋತ್ಪಾದನೆಗೂ ಸಾಮಾಜಿಕ ಕಾರಣವಿದೆ ಎನ್ನುವ ಹಾಗೂ ಭಯೋತ್ಪಾದಕರನ್ನೂ ಅಮಾಯಕರೆನ್ನುವ "Sick"ularವಾದಿಗಳ ಉಪಟಳದಿಂದಾಗಿ ಇಂದು ಸಾಮಾನ್ಯ ಹಿಂದೂಗಳಲ್ಲಿ ಅಭದ್ರತೆಯ ಭಾವನೆ ಮೂಡುತ್ತಿದೆ, ಅವ್ಯಕ್ತ ಕೋಪವೂ ಏರುತ್ತಿದೆ. ಈ ರೀತಿಯ 'Hindu Anger" ಅನ್ನು ಅರ್ಥಮಾಡಿ ಕೊಳ್ಳುವ ಹಾಗೂ ಹಿಂದೂಗಳಿಗೆ ಭದ್ರತೆಯನ್ನು ನೀಡಬಲ್ಲ ಏಕೈಕ ವ್ಯಕ್ತಿಯೆಂದರೆ ನರೇಂದ್ರ ಮೋದಿ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.

ಅಷ್ಟಕ್ಕೂ ಅಪಾಯ ಕಣ್ಣೆದುರಿಗೇ ಇದ್ದರೂ ಭಯೋತ್ಪಾದಕರನ್ನು ಅಮಾಯಕರೆನ್ನುತ್ತಿರುವ 'ಜ್ಞಾನಪೀಠ ನಂಬರ್-6" ಅವರಂತಹ ಸೋಗಲಾಡಿಗಳು ದೇಶಾದ್ಯಂತ ಇದ್ದಾರೆ. ಅವರ ನಿಜಬಣ್ಣವನ್ನು ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ನಮ್ಮ ಜನ. ಹಾಗಾಗಿ ಇಂತಹ ಬೌದ್ಧಿಕ ಭಯೋತ್ಪಾದನೆ ಹಾಗೂ ಉಗ್ರವಾದಿಗಳನ್ನು ಮಟ್ಟಹಾಕಲು ಮೋದಿಯವರಂತಹ ಗಟ್ಟಿ ನಾಯಕರು ಬೇಕು ಎಂಬುದು ಸ್ಪಷ್ಟವಾಗುತ್ತಿದೆ. ಯಾರನ್ನೋ ಮೆಚ್ಚಿಸುವುದಕ್ಕಾಗಿ ಅಥವಾ ಮಾಧ್ಯಮಗಳಿಗೆ ಹೆದರಿ ಕ್ಷಮೆ ಕೇಳಲು, ಅಲ್ಪಸಂಖ್ಯಾತರನ್ನು ಓಲೈಸಲು ಅವರೆಂದೂ ಪ್ರಯತ್ನಿಸಿಲ್ಲ. ಇಂತಹ ದೃಢ ನಿಲುವಿನಿಂದಾಗಿ ಹಿಂದೂಗಳಿಗೆ ಆಪ್ಯಾಯವಾಗುತ್ತಿದ್ದಾರೆ, ಹೃದಯ ಸಾಮ್ರಾಟರಾಗುತ್ತಿದ್ದಾರೆ.

ಒಂದು ಕಾಲದಲ್ಲಿ ಕಟ್ಟಾ ರಾಷ್ಟ್ರವಾದಿ ಎಂದೇ ಖ್ಯಾತರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರಂತಹ ನಾಯಕರೇ “ಡಿಸೆಂಬರ್ 6, ನನ್ನ ಜೀವಮಾನದ ಅತ್ಯಂತ ದುಃಖಕರ ದಿನ" ಎಂದು ಲಿಬರ್‍ಹಾನ್ ಆಯೋಗದ ಮುಂದೆ ಕಣ್ಣೀರು ಸುರಿಸುವ ಹಾಗೂ ದೇಶ ಒಡೆದ ಜಿನ್ನಾ ಅವರೂ ಸೆಕ್ಯೂಲರ್ ಎನ್ನುವ ಮೂಲಕ ಓಲೈಕೆಗೆ ಇಳಿದಿದ್ದರೂ ಮೋದಿಯವರು ಮಾತ್ರ ವಿಷಾದ ವ್ಯಕ್ತಪಡಿಸುವುದಕ್ಕೂ ಸಿದ್ಧರಿಲ್ಲ. ಅಷ್ಟಕ್ಕೂ, ಗುಜರಾತ್ ಹಿಂಸಾಚಾರದ ಬಗ್ಗೆ ಕ್ಷಮೆ ಯಾಚಿಸಲು ಅಲ್ಪಸಂಖ್ಯಾತರು ಗೋಧ್ರಾ ಬಗ್ಗೆ ಕ್ಷಮೆ ಯಾಚಿಸಿದ್ದಾರೆಯೇ?

ಹಾಗಂತ ಮೋದಿಯವರೇನು ಧರ್ಮಾಂಧರಲ್ಲ. ಮಾತು-ಕೃತಿ ಎರಡರಲ್ಲೂ ಪ್ರಗತಿಯ ಹರಿಕಾರ. ಹಾಗಾಗಿ ಗುಜರಾತ್‌ನ ಜನಸಂಖ್ಯೆಯಲ್ಲಿ ಶೇ.0.5ಕ್ಕೂ ಕಡಿಮೆ ಇರುವ ಗಾಣಿಗ ಸಮುದಾಯಕ್ಕೆ ಸೇರಿದ್ದರೂ ಮೋದಿಯವರು ಜಾತಿಯನ್ನು ಮೀರಿ ಬೆಳೆದಿದ್ದಾರೆ. “ತಾನು ಸೋನಿಯಾ ಗಾಂಧಿಯವರಿಗಿಂತ ದೊಡ್ಡ ನಾಯಕಿ" ಎಂದು ಹೇಳಿಕೊಳ್ಳುವ ಹಾಗೂ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಮಾಯಾವತಿಯವರಿಗೆ ಜಾತಿಯೇ ಸ್ವತ್ತಾಗಿದ್ದರೆ, ಶುದ್ಧ ಚಾರಿತ್ರ್ಯ ಹಾಗೂ ಸಾಧನೆಯೇ ಮೋದಿಯವರ ಸಾಮರ್ಥ್ಯ. ಇಡೀ ದೇಶವನ್ನೇ ತಡಕಾಡಿದರೆ ಸಿಗಬಹುದಾದ ಬೆರಳೆಣಿಕೆಯಷ್ಟು Incorruptible politicianಗಳಲ್ಲಿ ಅವರೂ ಒಬ್ಬರು.

ಇಲ್ಲಿ ಒಂದು ಘಟನೆಯನ್ನು ನೆನಪಿಸಿಕೊಳ್ಳುವುದೊಳಿತು. ಗುಜರಾತ್ ಹಿಂಸಾಚಾರದ ನಂತರ 2002ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಮೂರು ವರ್ಷಗಳ ಕಾಲ ಯಾವ ಪತ್ರಕರ್ತನನ್ನೂ ಹತ್ತಿರಕ್ಕೆ ಬಿಟ್ಟುಕೊಂಡಿರಲಿಲ್ಲ. ಕೊನೆಗೂ 2005ರಲ್ಲಿ ಮೋದಿಯವರ ಸಂದರ್ಶನ(Modi-fied) ಮಾಡುವ ಅವಕಾಶ ಪಡೆದುಕೊಂಡ ಎನ್‌ಡಿಟೀವಿಯ ಶ್ರೀನಿವಾಸನ್ ಜೈನ್, ಗುಜರಾತ್ ಹಿಂಸಾಚಾರದ ಬಗ್ಗೆ ಎಷ್ಟೇ ಒತ್ತಾಯಿಸಿದರೂ ಮೋದಿಯವರು ವಿಷಾದ ವ್ಯಕ್ತಪಡಿಸಲು ನಿರಾಕರಿಸಿದರು. ಕೊನೆಗೆ “ಮೋದಿಯವರೇ, ನೀವು ಬದಲಾಗಬೇಕು ಅಂತ ಅನಿಸುವುದಿಲ್ಲವೆ?" ಎಂದ ಶ್ರೀನಿವಾಸನ್ ಜೈನ್ ಕೆಣಕಲು ಯತ್ನಿಸಿದರು. ಆದರೆ “2002ರಲ್ಲಿ ನಡೆದ ಚುನಾವಣೆಗಿಂತ ಮೂರು ತಿಂಗಳ ಮೊದಲೇ ನಿಮ್ಮ ಎನ್‌ಡಿಟೀವಿ ಗುಜರಾತ್‌ನಲ್ಲಿ ಠಿಕಾಣಿ ಹೂಡಿತ್ತು. ನಿಮ್ಮ ಪತ್ರಕರ್ತರನ್ನು ಛೂ ಬಿಟ್ಟು ಮಾಧ್ಯಮಗಳಲ್ಲಿ ದೊಡ್ಡ ಪ್ರಚಾರಾಂದೋಲನವನ್ನೇ ಮಾಡಿದಿರಿ. ಆದರೆ ಫಲಿತಾಂಶವೇನಾಯಿತು? ಜನ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸಿದರು. ನಿಮ್ಮ ಮಾತನ್ನು ನಂಬಲಿಲ್ಲ. ನೀನೇ ಯೋಚನೆ ಮಾಡು, ಬದಲಾಗಬೇಕಾಗಿರುವುದು ನೀನು ಮತ್ತು ಎನ್‌ಡಿಟೀವಿಯೋ ಅಥವಾ ನಾನೋ?" ಎಂದಿದ್ದರು ಮೋದಿ!

ಕಳೆದ 6 ವರ್ಷಗಳಿಂದ ಮೋದಿಯವರನ್ನು ನಿಂದನೆ ಮಾಡುತ್ತಾ ಬಂದಿರುವವರೂ ಬದಲಾಗಬೇಕಾದ ಕಾಲ ಬಹುಶಃ ಬಂದಿದೆ.

(ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X