• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಡಿಗ್ರಿ!

By Staff
|

ಅದು ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಹಂಪಿ, ಧಾರವಾಡ, ಗುಲ್ಬರ್ಗ ಅಥವಾ ಯಾವುದೇ ವಿಶ್ವವಿದ್ಯಾಲಯಗಳಾಗಿರಬಹುದು. ಅವು ಸರಕಾರದ ನಿಯಂತ್ರಣದಲ್ಲಿದ್ದರೂ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡವುವ ಕಾರ್ಯ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದೆ.

ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಡಿಗ್ರಿ!ಒಮ್ಮೆಲೇ ಆಶ್ಚರ್ಯವನ್ನೂ ಪಡಬೇಡಿ, ದಿಗ್ಭ್ರಮೆಗೂ ಒಳಗಾಗಬೇಡಿ.ಮೈಸೂರು ವಿಶ್ವವಿದ್ಯಾಲಯದಲ್ಲಿ 'ಮಹಿಳಾ ದೌರ್ಜನ್ಯ ತಡೆ ಸಮಿತಿ" ಎಂಬ ಒಂದು ಕಮಿಟಿ ಇದೆ. ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಚ. ಸರ್ವಮಂಗಳಾ ಬಾಯಿ ಅವರು ಆ ಸಮಿತಿಯ ಅಧ್ಯಕ್ಷರು. ಲೈಂಗಿಕ ದೌರ್ಜನ್ಯ ಅಥವಾ ಇನ್ನಾವುದೇ ವಿಧದ ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯರು ಈ ಸಮಿತಿಗೆ ದೂರು ನೀಡಬಹುದು. ಸಮಿತಿಯು ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡಿ ತನ್ನ ಮುಂದೆ ವಿಚಾರಣೆಗೆ ಕರೆಸಿಕೊಳ್ಳುತ್ತದೆ. ಒಂದು ವೇಳೆ, ಹಾಜರಾಗದಿದ್ದರೆ ಆ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ಸಮಿತಿ ಹಾಗೂ ವಿಶ್ವವಿದ್ಯಾಲಯಕ್ಕಿದೆ. ಪ್ರಸ್ತುತ ಅಮಾನತ್ತಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮಾಜಿ ಮುಖ್ಯಸ್ಥ ಮಹೇಶ್ಚಂದ್ರ ಗುರು ಅವರ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಈ ಸಮಿತಿಗೆ ದೂರು ನೀಡಿದ್ದರು. ಈ ಬಗ್ಗೆ ಕೂಲಂಕಷ ವಿಚಾರಣೆ, ತನಿಖೆ ನಡೆಸಿದ ಸಮಿತಿ ಇತ್ತೀಚೆಗಷ್ಟೇ ವರದಿ ನೀಡಿದ್ದು, ಮಹೇಶ್ಚಂದ್ರ ಗುರು ಅವರನ್ನು ತಪ್ಪಿತಸ್ಥರೆಂದು ಅದರಲ್ಲಿ ತಿಳಿಸಿದೆ!

ಅಷ್ಟೇ ಅಲ್ಲ, ಮೈಸೂರು ವಿವಿಯ 'ಮಾನವಿಕ ವಿಭಾಗ" ದಲ್ಲಿ 'ಮಹಿಳಾ ಅಧ್ಯಯನ ಕೇಂದ್ರ"ವೊಂದಿದ್ದು ಅದರಲ್ಲಿ 'ಸಹಾಯವಾಣಿ" ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಂದರೆ ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರು ಅಥವಾ ಯಾವುದೇ ಮಹಿಳೆಯರು ಈ ಸಹಾಯವಾಣಿಯ ಸೌಲಭ್ಯ ಪಡೆದುಕೊಳ್ಳಬಹುದು. ಇಲ್ಲಿ ಯಾವುದೇ ರೀತಿಯ ಹಿಂಸೆ, ಕಿರುಕುಳ, ದೌರ್ಜನ್ಯಕ್ಕೊಳಗಾದವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲೂ ವಿದ್ಯಾರ್ಥಿನಿಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಲು ಇಂತಹದ್ದೇ ವ್ಯವಸ್ಥೆಯನ್ನು ರೂಪಿಸಲಾಗಿದೆ.

ನೀವೇ ಹೇಳಿ, ವಿದ್ಯಾದಾನ ಮಾಡುವ ದೇಗುಲಗಳಲ್ಲಿ ಇಂತಹ ಒಂದು ವ್ಯವಸ್ಥೆ ಇದೆಯೆಂದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿರಬಹುದು? ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸ್ನಾತಕೋತ್ತರ ಪದವಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎರಡು ಹಂತಗಳಲ್ಲಿ ನಡೆಯುತ್ತದೆ. ಬಾಹ್ಯ ಮೌಲ್ಯಮಾಪನ (External valuation) ಮತ್ತು ಆಂತರಿಕ ಮೌಲ್ಯಮಾಪನ (Internal valuation). ಆದರೆ ಉತ್ತರ ಪತ್ರಿಕೆ ಗಳನ್ನು ಬಾಹ್ಯ ಮೌಲ್ಯಮಾಪನಕ್ಕೆ ಕಳುಹಿಸುವುದು ವಿಶ್ವ ವಿದ್ಯಾಲಯವಲ್ಲ, ಆಯಾ ವಿಭಾಗದ ಮುಖ್ಯಸ್ಥರು. ಸಮಸ್ಯೆ ಇರುವುದೇ ಇಲ್ಲಿ. ಈ ಮುಖ್ಯಸ್ಥರು ತಮಗಿಷ್ಟ ಬಂದವರಿಗೆ ಉತ್ತರ ಪತ್ರಿಕೆಗಳನ್ನು ಕಳುಹಿಸಬಹುದು. ಸಾಮಾನ್ಯವಾಗಿ ವಿಶ್ವವಿದ್ಯಾಲಯವೊಂದರ ವಿಭಾಗಕ್ಕೆ ಮತ್ತೊಂದು ವಿಶ್ವವಿದ್ಯಾಲಯದಲ್ಲಿರುವ ಅದೇ ವಿಭಾಗದ ನಡುವೆ ಸಂಪರ್ಕ, ಸ್ನೇಹ ಇರುತ್ತದೆ. ಇಂತಹ ಸ್ನೇಹ ಬಾಹ್ಯ ಮೌಲ್ಯಮಾಪನದ ವೇಳೆ ಉಪಯೋಗಕ್ಕೆ ಬರುತ್ತದೆ.

ಉದಾಹರಣೆಗೆ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಅಥವಾ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಧಾರವಾಡ, ಬೆಂಗಳೂರು, ಮೈಸೂರು ಅಥವಾ ಇನ್ನಾವುದೋ ವಿಶ್ವವಿದ್ಯಾಲಯದಲ್ಲಿರುವ ಅದೇ ವಿಭಾಗದ ತಮ್ಮ ಸ್ನೇಹಿತರಿಗೆ ಉತ್ತರ ಪತ್ರಿಕೆಗಳನ್ನು ಕಳುಹಿಸುತ್ತಾರೆ. ಇದೊಂಥರಾ ಕೊಡು-ಕೊಳ್ಳುವ ವ್ಯವಹಾರವಿದ್ದ ಹಾಗೆ. ಇಂತಹ ವಿದ್ಯಾರ್ಥಿಗೆ ಇಂತಿಷ್ಟೇ ಅಂಕ ನೀಡಬೇಕೆಂದು ಮೊದಲೇ ನಿರ್ಧರಿಸಿ ಬಿಡುತ್ತಾರೆ. ಹಾಗಾಗಿ ವಿಭಾಗದ ಮುಖ್ಯಸ್ಥರ ವಿರುದ್ಧ ಧ್ವನಿಯೆತ್ತಿದವರ, ವಿಧೇಯರಾಗಿರದವರ, ಅವಕೃಪೆಗೆ ಒಳಗಾದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲುಹಾಕಿ ಬಿಡುತ್ತಾರೆ. ಒಂದು ವಿಭಾಗದಲ್ಲಿ ಇಂಥವರಿಗೇ ರ್‍ಯಾಂಕ್ ಬರುತ್ತದೆ ಎಂಬುದನ್ನು ಆಕೆ ಅಥವಾ ಆತನ ಸಹಪಾಠಿಗಳು ಮೊದಲೇ ಊಹಿಸಬಹುದು.

ಈ ರ್‍ಯಾಂಕ್ ಹಾಗೂ Internal assessment ರೂಪದಲ್ಲಿ ಪ್ರತಿ ಸಬ್ಜೆಕ್ಟ್‌ಗೆ ನೀಡಲಾಗುವ 20 ಅಂಕಗಳಲ್ಲಿ ಯಾರಿಗೆ ಎಷ್ಟು ಎಂಬುದು ಆಯಾ ವಿಭಾಗದ ಮುಖ್ಯಸ್ಥರಿಗೆ ತೋರುವ ವಿಧೇಯತೆ, 'ಸಹಕಾರ"ದ ಮೇಲೆ ಅವಲಂಬಿಸಿರುತ್ತದೆ. ಅದರಲ್ಲೂ ವಿಭಾಗದ ಮುಖ್ಯಸ್ಥರು, ಇತರ ಪ್ರೊಫೆಸರ್‌ಗಳು ಕಾಮ ಪೀಡಿತರಾಗಿದ್ದರಂತೂ ವಿದ್ಯಾರ್ಥಿನಿಯರ ಶೀಲಕ್ಕೇ ಕುತ್ತು ಬರುತ್ತದೆ. ಇದು ಹುಸಿ ಆರೋಪವಲ್ಲ. ಮಹೇಶ್ಚಂದ್ರ ಗುರುವಿನಂತಹ ವ್ಯಕ್ತಿಗಳು ಪ್ರತಿ ವಿಶ್ವವಿದ್ಯಾಲಯಗಳಲ್ಲೂ ಇದ್ದಾರೆ.

ಇಲ್ಲದೆ ಹೋಗಿದ್ದರೆ ವಿಶ್ವವಿದ್ಯಾಲಯಗಳಂತಹ ಜ್ಞಾನ ದೇಗುಲಗಳಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ, ಸಹಾಯ ವಾಣಿಗಳೇಕೆ ಇರುತ್ತಿದ್ದವು? ಪ್ರತಿ ವಿಶ್ವವಿದ್ಯಾಲಯಗಳಲ್ಲೂ ಪ್ರೊಫೆಸರ್, ರೀಡರ್ ಅಥವಾ ಸಾಮಾನ್ಯ ಉಪನ್ಯಾಸಕರಿರಬಹುದು, ಎಲ್ಲರಿಗೂ ಪ್ರತ್ಯೇಕ ಕೊಠಡಿಗಳನ್ನು ಕೊಟ್ಟಿರುತ್ತಾರೆ. ಅಧ್ಯಯನ, ಪಾಠ ಪೂರ್ವ ತಯಾರಿ ಮುಂತಾದ ಕಾರ್ಯಗಳಿಗೆ ಅನುಕೂಲವಾಗಲಿ ಎಂದು. ಆದರೆ ಅಂತಹ ಕೊಠಡಿಗಳು ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತಿವೆ ಎಂಬುದಕ್ಕಿಂತ ಆ ಕೊಠಡಿಗಳ ಗೋಡೆಗಳಿಗೆ ಎಷ್ಟೋ ವಿದ್ಯಾರ್ಥಿನಿಯರ ಆರ್ತನಾದವಂತೂ ಬಡಿಯುತ್ತಿದೆ. ಇದು ಆರೋಪವಲ್ಲ, ಅಸಹ್ಯ ಹುಟ್ಟಿಸುವ ವಾಸ್ತವ. ಹಾಗಾಗಿಯೇ ಪ್ರತಿಷ್ಠಿತ ವ್ಯಕ್ತಿಯೊಬ್ಬರು 1989-90ರಲ್ಲಿ ಮೈಸೂರು ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾದಾಗ ಸಂಜೆ ಐದೂವರೆ ಗಂಟೆಯಾದ ಕೂಡಲೇ ಕ್ಲಾಸ್ ರೂಮ್ ಹಾಗೂ ಇತರ ಅಧ್ಯಾಪಕರ ಕೊಠಡಿಗಳಿಗೆ ಬೀಗ ಹಾಕಿಸಿ ಕೀಲಿಯನ್ನು ತೆಗೆದುಕೊಂಡು ಹೋಗುತ್ತಿದ್ದರು! ಕಾರಣವೇನೆಂದು ಅರ್ಥವಾಯಿತಲ್ಲವೆ?

ಅನೈತಿಕ ಚಟುವಟಿಕೆಗಳು ಹಿಂದಿನಿಂದಲೂ ನಡೆದುಕೊಂಡು ಬರುತ್ತಿವೆ. ಈಗಲೂ ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪ್ರಾಜೆಕ್ಟ್, ಡಿಸರ್ಟೆಶನ್ ಹೆಸರಿನಲ್ಲಿ ನಡೆಯುತ್ತಿರುವುದು ಇದೇ ಅನ್ಯಾಯ. ಪಿಎಚ್‌ಡಿ ಮತ್ತು ಎಂಫಿಲ್ ಮಾಡುತ್ತಿರುವವರ ಗೋಳಿನ ಬಗ್ಗೆ ಎಷ್ಟು ಹೇಳಿದರೂ ಸಾಲದು. ಡಾಕ್ಟರೇಟ್ ಸಿಗುವವರೆಗೂ ಗೈಡ್‌ನ ಗುಲಾಮರಾಗಿರಬೇಕು, ಎಲ್ಲ ರೀತಿಯಲ್ಲೂ ಸಹಕರಿಸಬೇಕಾಗಬಹುದು.

ಅದು ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಹಂಪಿ, ಧಾರವಾಡ, ಗುಲ್ಬರ್ಗ ಅಥವಾ ಯಾವುದೇ ವಿಶ್ವವಿದ್ಯಾಲಯಗಳಾಗಿರಬಹುದು. ಅವು ಸರಕಾರದ ನಿಯಂತ್ರಣದಲ್ಲಿದ್ದರೂ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡವುವ ಕಾರ್ಯ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಅದರಲ್ಲೂ ಮಂಗಳೂರು ವಿವಿಯ ಪತ್ರಿಕೋದ್ಯಮ, ಇಂಗ್ಲಿಷ್ ಡಿಪಾರ್ಟ್‌ಮೆಂಟ್‌ಗಳಂತೂ ಒಂದಿಬ್ಬರು ಮೂವರನ್ನು ಬಿಟ್ಟರೆ ಯಾರಿಗೂ 55 ಪರ್ಸೆಂಟ್ ಮಾರ್ಕ್ಸ್ ನೀಡುವುದಿಲ್ಲ. ಇನ್ನು, ಉಳಿದ ವಿಭಾಗಗಳಲ್ಲಿ ಪ್ರೊಫೆಸರ್‌ಗಳ ಕೆಂಗಣ್ಣಿಗೆ ಗುರಿಯಾದ ವಿದ್ಯಾರ್ಥಿಗಳಿಗೆ 55 ಪರ್ಸೆಂಟ್‌ಗಿಂತ ಕಡಿಮೆ ಅಂಕ ನಿಶ್ಚಿತ. ಆ ವಿದ್ಯಾರ್ಥಿಗಳು ಹೆಸರಿಗೆ ಸ್ನಾತಕೋತ್ತರ ಪದವೀಧರರಾದರೂ ಅದರಿಂದ ಯಾವ ಉಪಯೋಗವೂ ಇಲ್ಲ.

ಅಂದರೆ 55 ಪರ್ಸೆಂಟ್‌ಗಿಂತ ಕಡಿಮೆ ಅಂಕ ಬಂದವರು 'ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್"(ಎನ್‌ಇಟಿ) ಬರೆಯಲು ಅನರ್ಹರಾಗುತ್ತಾರೆ. ಎನ್‌ಇಟಿ ಬರೆದು ಪಾಸಾಗದಿದ್ದವರಿಗೆ ಕಾಯಂ ಕೆಲಸ ಸಿಗುವುದಿಲ್ಲ. ಅಂದರೆ ವಿಶ್ವವಿದ್ಯಾಲಯಗಳಿಗೆ ನೀವು ಒಮ್ಮೆ ಕಾಲಿಟ್ಟರೆ ಹೊರಬರುವವರೆಗೂ ಹೆದರಿಕೊಂಡು ಗುಲಾಮರಾಗಿರಬೇಕು. ನಿಮಗೆ ನಗು ಬರಬಹುದು, ಹೀಗೂ ಉಂಟೆ ಅಂತ ಆಶ್ಚರ್ಯವೂ ಆಗಬಹುದು. ಒಂದು ಚಂದದ ಹುಡುಗಿ ಜತೆ ಮಾತನಾಡಿದರೂ ಮುನಿಸಿಕೊಂಡು, ನಿಮ್ಮ career ಹಾಳು ಮಾಡುವ ಪ್ರೊಫೆಸರ್‌ಗಳಿದ್ದಾರೆ! ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ(ಪ್ರಿಂಟ್ ಮೀಡಿಯಾ)ವಂತೂ ಇದೇ ವಿಷಯದಲ್ಲಿ ಕುಖ್ಯಾತಿಯನ್ನೂ ಪಡೆದಿದೆ. ಅಷ್ಟಕ್ಕೂ ಪತ್ರಿಕೋದ್ಯಮ ವಿಭಾಗಗಳಲ್ಲಿ 'Dissertation" (ಸಂಶೋಧನಾ ಪ್ರಬಂಧ) ಎಂಬ trap ಇದೆ. ಈ ಡಿಸರ್ಟೇಶನ್‌ಗೆ 100 ಅಂಕಗಳಿರುತ್ತವೆ. ಅದಕ್ಕೊಬ್ಬ ಗೈಡ್ ಇರುತ್ತಾರೆ. ಅಣಕವೆಂದರೆ ವ್ಯರ್ಥ ಕಸರತ್ತುಗಳಾಗಿರುವ ಈ ಡಿಸರ್ಟೇಶನ್‌ನಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭ ಮಾತ್ರ ಶೂನ್ಯ. ಆದರೆ ಡಿಸರ್ಟೇಶನ್ ಪೂರ್ಣಗೊಂಡು, ಗೈಡ್ ಸಹಿ ಬೀಳುವವರೆಗೂ ಎಲ್ಲ ವಿಧದ ಹಿಂಸೆಗೂ ಒಳಗಾಗಬೇಕಾಗುತ್ತದೆ. ಈ trapನಿಂದಾಗಿ ಅದೆಷ್ಟು ಹೆಣ್ಣು ಮಕ್ಕಳು ಶೀಲ ಕಳೆದುಕೊಂಡಿ ದ್ದಾರೋ ಏನೋ?!

ನಿಮಗೆ ರಮ್ಯಾ ವಸಿಷ್ಠ ಎಂಬ ಗಾಯಕಿ ಗೊತ್ತಿರಬಹುದು. ಆಕೆ ಬೆಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಡಾ. ಎಚ್.ಕೆ. ಮರಿಸ್ವಾಮಿ ಆಕೆಯ ಡಿಸರ್ಟೇಶನ್ ಗೈಡ್ ಆಗಿದ್ದರು. ಆದರೆ ಮರಿಸ್ವಾಮಿಯವರ 'ಕಿರುಕುಳ"ವನ್ನು ತಾಳಲಾರದೆ, ಕಿರುಕುಳಕ್ಕೆ ಮಣಿಯದೇ ಆಕೆ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಎ. ಶ್ರೀಧರ್ ಅವರಿಗೆ ದೂರು ನೀಡಿದಾಗ 'ನೀನುಂಟು ನಿನ್ನ ಗೈಡ್ ಉಂಟು" ಅಂದಿದ್ದರು! ಕೊನೆಗೆ ಗೈಡ್ ಬದಲಾಯಿಸಿ ಕೊಡುವಂತೆ ಆಗಿನ ವೈಸ್ ಚಾನ್ಸಲರ್ ತಿಮ್ಮಪ್ಪ ಅವರಿಂದ ಪತ್ರ ತಂದುಕೊಟ್ಟರೆ 'ಗವರ್ನರ್‌ರಿಂದ ಲೆಟರ್ ತಂದರೂ ನೀನಿಂದ ಏನೂ ಮಾಡುವುದಕ್ಕಾಗುವುದಿಲ್ಲ ಅಂತ ಶ್ರೀಧರ್ ಹಾಗೂ ಮರಿಸ್ವಾಮಿ ಇಬ್ಬರೂ ಕೇಕೆ ಹಾಕಿಕೊಂಡು ಹೇಳಿದ್ದರು" ಎನ್ನುತ್ತಾರೆ ರಮ್ಯಾ ವಸಿಷ್ಠ.

ಅಷ್ಟಕ್ಕೂ, ಮರಿಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಲು ಅಂಜಲು ಶ್ರೀಧರ್ ಅವರಿಗೆ ಅಂತಹ ಯಾವ ಭಯವಿತ್ತು?! ಇದೇನೇ ಇರಲಿ, ಕೊನೆಗೆ ಆಗಿನ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿಯವರಿಂದ ಲೆಟರ್ ತಂದರೂ ಉಪಯೋಗವಾಗಲಿಲ್ಲ. ಸಿಟ್ಟಿಗೆದ್ದ ಶಿಕ್ಷಣ ಸಚಿವರು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರನ್ನು ಸಚಿವಾಲಯಕ್ಕೆ ಕರೆಸಿ ಚಾಟಿಯೇಟು ನೀಡಿದ ನಂತರ ಗೈಡನ್ನು ಬದಲಾಯಿಸಿಕೊಟ್ಟರು. ಹೀಗೆ ಎರಡು ವರ್ಷಗಳ ಕಾಲ ಹೋರಾಡಿ ಪದವಿ ಪಡೆಯುವಲ್ಲಿ ರಮ್ಯಾ ಅವರೇನೋ ಯಶಸ್ವಿಯಾದರು, ಆದರೆ ನಿಶಾ ಪಿಳ್ಳೈ ಎಂಬ ಆಕೆಯ ಜೂನಿಯರ್ ಮರಿಸ್ವಾಮಿಯ ಕಾಟ ತಡೆದುಕೊಳ್ಳಲಾರದೆ ವ್ಯಾಸಂಗವನ್ನು ಅರ್ಧಕ್ಕೇ ಬಿಟ್ಟುಹೋದರು. ರಮ್ಯಾ ವಸಿಷ್ಠ ಪ್ರಕರಣದ ಬಗ್ಗೆ ಟಿ.ಎನ್. ಸೀತಾರಾಮ್ ಅವರ ಜನಪ್ರಿಯ 'ಮುಕ್ತ" ಧಾರಾವಾಹಿಯಲ್ಲಿ ಒಂದು ಎಪಿಸೋಡ್ ಕೂಡ ಪ್ರಸಾರವಾಗಿದ್ದನ್ನು ನೆನಪಿಸಿಕೊಳ್ಳಿ.

ಹಾಗಂತ ಎಲ್ಲರೂ ಗುರು, ಸ್ವಾಮಿಗಳಂಥವರೇ ಎಂದಲ್ಲ. ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಸಾಕಷ್ಟು ಅಧ್ಯಾಪಕರಿದ್ದಾರೆ. ಆದರೆ ಕೆಲವು ಕೊಳಕು ಜಂತುಗಳು ಇಡೀ ಶಿಕ್ಷಕ ವೃಂದವೇ ತಲೆತಗ್ಗಿಸುವಂತೆ ಮಾಡುತ್ತಿವೆ. ಹಾಗಾಗಿ ಎಲ್ಲೆಲ್ಲಿ ಪ್ರಾಕ್ಟಿಕಲ್ಸ್, ಇಂಟರ್ನಲ್ಸ್, ಪ್ರಾಜೆಕ್ಟ್, ಡಿಸರ್ಟೇ ಶನ್ ಇದೆಯೋ ಅಲ್ಲೆಲ್ಲ ದೌರ್ಜನ್ಯಗಳಿವೆ. ಪ್ರಾಕ್ಟಿಕಲ್ ಪರೀಕ್ಷೆಯ ಸಂದರ್ಭದಲ್ಲೂ ತಮಗೆ ಬೇಕಾದವರನ್ನೇ ಬಾಹ್ಯ ತಪಾಸಣೆಕಾರರನ್ನಾಗಿ ಕರೆಸಿಕೊಂಡು 'ಮಾರ್ಕ್ಸ್ ಫಿಕ್ಸ್" ಮಾಡುತ್ತಾರೆ! ಕೆಲವೊಮ್ಮೆ ಹೆಚ್ಚು ಅಂಕ ಗಳಿಸಬೇಕೆಂಬ, ರ್‍ಯಾಂಕ್ ಬಂದರೆ ಗೋಲ್ಡ್ ಮೆಡಲ್ ಸಿಗುತ್ತದೆಂಬ ಆಸೆಯಿಂದ ತಾವಾಗಿಯೇ ಹೊಂಡಕ್ಕೆ ಬೀಳುವವರೂ ಇದ್ದಾರೆ.

ಪ್ರತಿಭಟಿಸಿದರೆ ಎಲ್ಲಿ ತಮ್ಮ careerಅನ್ನೇ ಹಾಳು ಮಾಡುತ್ತಾರೋ ಎಂಬ ಭಯದಿಂದ ತಮ್ಮನ್ನು ಅರ್ಪಿಸಿಕೊಳ್ಳುವವರೂ ಇದ್ದಾರೆ. ಹೀಗೆ ವಿದ್ಯಾರ್ಥಿಗಳನ್ನು ದುರುಪಯೋಗಪಡಿಸಿಕೊಳ್ಳುವಂತಹ ಹೊಲಸು ಕಾರ್ಯವನ್ನು ಮಾಡಿದರೂ ಜಾತಿ ಹೆಸರಿನಲ್ಲಿ ರಕ್ಷಣೆ ಪಡೆದುಕೊಳ್ಳುತ್ತಿರುವ, ಜಾತಿಯನ್ನೇ ಗುರಾಣಿಯನ್ನಾಗಿ, ಲೈಸೆನ್ಸ್ ಆಗಿ ಮಾಡಿಕೊಳ್ಳುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಇಂದು ನಮ್ಮ ಎಲ್ಲ ವಿಶ್ವವಿದ್ಯಾಲಯಗಳನ್ನೂ ತಿಪ್ಪೆಗಳನ್ನಾಗಿ ಮಾಡಿರುವುದು ಜಾತಿ ಲಾಬಿ, ದ್ವೇಷಗಳೇ. ಆದರೆ ಬಲಿಪಶುಗಳಾಗುತ್ತಿರುವವರು ಮಾತ್ರ ವಿದ್ಯಾರ್ಥಿಗಳು. ಇಂತಹ ಅನೈತಿಕ ಕೆಲಸಗಳು ಕಣ್ಣೆದುರಿಗೇ ನಡೆಯುತ್ತಿದ್ದರೂ ಸಾಬೀತು ಮಾಡುವುದಕ್ಕಾಗುವುದಿಲ್ಲ.

ಇದರ ವಿರುದ್ಧ ಯಾರಿಗೆ ದೂರು ಕೊಡಬೇಕು? ಇಂತಹ ಅನ್ಯಾಯದ ಹೊರತಾಗಿಯೂ ವಿದ್ಯಾರ್ಥಿಗಳೇಕೆ ಪ್ರತಿಭಟಿಸುತ್ತಿಲ್ಲ? ಅಷ್ಟಕ್ಕೂ, ಉನ್ನತ ಶಿಕ್ಷಣ ಸಚಿವರಾಗಿದ್ದ ಡಿ.ಎಚ್. ಶಂಕರಮೂರ್ತಿ ಮಾಡಿದ್ದೇನು?

More to follow...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more