• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐದೂವರೆ ಕೋಟಿ ಜನರ ಮುಂದೆ ಪುಣ್ಯಕೋಟಿ ಕಥೆ ಅಡವಿಟ್ಟರಲ್ಲಾ!

By Staff
|

ಬೆಂಗಳೂರಿನಿಂದಲೇ ಹಾಸಿಗೆ, ಟಾಯ್ಲೆಟ್, ಫ್ಯಾನ್‌ಗಳನ್ನು ಕಟ್ಟಿಕೊಂಡು ಗ್ರಾಮವಾಸಕ್ಕೆ ಹೋಗಿ, ಬೆಳಗ್ಗೆ ಎದ್ದ ಕೂಡಲೇ ಎಲ್ಲವನ್ನೂ ಎತ್ತಿಕೊಂಡು ಬರುವ ಕುಮಾರಸ್ವಾಮಿಯವರೆಲ್ಲಿ, ಇಪ್ಪತ್ತಾರು ಕಿ.ಮೀ. ದೂರದಲ್ಲೇ ಆಡಳಿತ ವರ್ಗವನ್ನ ಬಿಟ್ಟು ಏಕಾಂಗಿಯಾಗಿ ಗ್ರಾಮಕ್ಕೆ ತೆರಳಿದ ಶಾಸ್ತ್ರಿಯವರೆಲ್ಲಿ?

  • ಪ್ರತಾಪ್ ಸಿಂಹ

 ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿನೆಹರು ನಂತರ ಯಾರು?

ಅಂಥದ್ದೊಂದು ಪ್ರಶ್ನೆಯನ್ನು ಸ್ವತಃ ನೆಹರು ಅವರೇ ತೇಲಿ ಬಿಟ್ಟಿದ್ದರು. ಭಾರತವನ್ನು ಮುನ್ನಡೆಸುವ ಸಾಮರ್ಥ್ಯ ತನ್ನನ್ನು ಬಿಟ್ಟರೆ ಯಾರಿಗೂ ಇಲ್ಲ ಎಂದೇ ಅವರು ಭಾವಿಸಿದ್ದರು. 1964, ಮೇ 27ರಂದು ಹೃದಯಾಘಾತಕ್ಕೊಳಗಾದ ನೆಹರು, ತೀರಿಕೊಂಡಾಗ ಮತ್ತೆ ಅದೇ ಪ್ರಶ್ನೆ ಎದುರಾಗುತ್ತದೆ.

After Nehru, Who?

ಚಿಂತಿತರಾದ ಕಾಂಗ್ರೆಸ್ ನಾಯಕರು, ಪ್ರಧಾನಿಯಾಗುವ ಅರ್ಹತೆ ತಮ್ಮಲ್ಲಿ ಯಾರಿಗಿದೆ? ಆ ಸ್ಥಾನಕ್ಕೆ ಯಾರು ಸೂಕ್ತ ವ್ಯಕ್ತಿ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಚಿಂತನೆ ನಡೆಸುತ್ತಾರೆ. ನೆಹರು ಅಕಾಲಿಕ ಮರಣವನ್ನಪ್ಪಿರುವಂತಹ ಸಂದಿಗ್ಧ ಸನ್ನಿವೇಶದಲ್ಲಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯವಿರುವುದು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಮಾತ್ರ ಎಂಬ ನಿರ್ಧಾರಕ್ಕೆ ಎಲ್ಲರೂ ಬರುತ್ತಾರೆ. ಹೀಗೆ ಪ್ರಧಾನಿಯಾದ ಶಾಸ್ತ್ರಿಯವರಿಗೆ ಗುಜರಾತ್‌ನ ಆನಂದ್‌ನಿಂದ ಆಹ್ವಾನವೊಂದು ಬರುತ್ತದೆ, ಅಲ್ಲಿನ 'ಅಮೂಲ್ ಮೇವು ದಾಸ್ತಾನು ಕಾರ್ಖಾನೆ'ಯ ಉದ್ಘಾಟನೆ ಮಾಡುವಂತೆ. ಆದರೆ ಆಹ್ವಾನವನ್ನು ಒಪ್ಪಿಕೊಂಡ ಶಾಸ್ತ್ರೀಜಿಯವರು ಅಮೂಲ್'ನ ಶಿಲ್ಪಿ ಡಾ. ವರ್ಗೀಸ್ ಕುರಿಯನ್ ಅವರ ಮುಂದೆ ಪೂರ್ವ ಷರತ್ತೊಂದನ್ನು ಇಡುತ್ತಾರೆ. ಗುಜರಾತ್ ರೈತನೊಬ್ಬನ ಮನೆಯಲ್ಲಿ ಅತಿಥಿಯಾಗಿ ರಾತ್ರಿ ಕಳೆದು ಬೆಳಗ್ಗೆ ಕಾರ್ಖಾನೆಯನ್ನು ಉದ್ಘಾಟಿಸುತ್ತೇನೆ ಎಂದರು.

ಅದೇ ದೇಶದ ಮೊಟ್ಟಮೊದಲ ''ಗ್ರಾಮವಾಸ''!

1964, ಅಕ್ಟೋಬರ್ 30ರ ರಾತ್ರಿ ಅಮೂಲ್‌ನ ಕೇಂದ್ರ ಸ್ಥಾನವಾದ ಆನಂದ್‌ಗೆ ಇನ್ನು 26 ಕಿ.ಮೀಟರ್‌ಗಳಿರುವಾಗ ಪ್ರಧಾನಿಯವರ Convoy(ಬೆಂಗಾವಲು ವಾಹನ) ನಿಲ್ಲುತ್ತದೆ. ಕಾರಿನಿಂದ ಕೆಳಗಿಳಿದ ಶಾಸ್ತ್ರೀಜಿ ಜೀಪನ್ನೇರುತ್ತಾರೆ. Convoy ಆನಂದ್‌ಗೆ ತೆರಳಿದರೆ ಶಾಸ್ತ್ರೀಜಿಯವರ ಜೀಪು ಉಬ್ಬು-ತಗ್ಗುಗಳ ರಸ್ತೆಯಲ್ಲಿ ಅಜರ್‌ಪುರ ಗ್ರಾಮದತ್ತ ಸಾಗುತ್ತದೆ. ಅಲ್ಲಿನ ರೈತನೊಬ್ಬನ ಮನೆಗೆ ಬಂದಿಳಿದ ಶಾಸ್ತ್ರೀಜಿ ರಾತ್ರಿಯಿಡೀ ಗ್ರಾಮಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ. ಇತ್ತ ಮುಂಜಾನೆ ಆಗಮಿಸಿದ ಕುರಿಯನ್ ಒಲ್ಲದ ಮನಸ್ಸಿನ ಶಾಸ್ತ್ರೀಜಿಯವರನ್ನು ಬಲವಂತವಾಗಿ ಕರೆದೊಯ್ದು ಕಾರ್ಖಾನೆಯ ಉದ್ಘಾಟನೆ ಮಾಡಿಸಿದರು. ಆದರೆ ವಾಪಸ್ ತೆರಳುವ ಮೊದಲು ಕುರಿಯನ್ ಅವರನ್ನು ಬಳಿಗೆ ಕರೆದ ಶಾಸ್ತ್ರೀಜಿ, ''ಕುರಿಯನ್ ಬನ್ನಿ ಕುಳಿತುಕೊಳ್ಳಿ. ನಿಮ್ಮೊಡನೆ ಮಾತನಾಡಬೇಕು. ನಿಮ್ಮ ಖೈರಾ ಹಾಲು ಸಹಕಾರ ಒಕ್ಕೂಟ ಒಳ್ಳೆಯ ಕೆಲಸ ಮಾಡುತ್ತಿದೆ. ಆದರೆ ಅಂತಹ ಯಶಸ್ವಿ ಹಾಲು ಒಕ್ಕೂಟಗಳು ಬೇರೆಲ್ಲೂ ಇಲ್ಲವಲ್ಲ, ಏಕೆ? ಒಂದಲ್ಲ, ಅಮೂಲ್‌ನಂತಹ ಹಲವಾರು ಒಕ್ಕೂಟಗಳ ಅಗತ್ಯವಿದೆ'' ಎಂದರು.

ಅದರ ಫಲವೇ ''ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್''!

1965ರಲ್ಲಿ ಸ್ಥಾಪನೆಯಾದ 'ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ'ಗೆ ಶಾಸ್ತ್ರೀಜಿಯವರು ಕುರಿಯನ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದರು. ಇವತ್ತು ದೇಶದ 1,17,575 ಹಳ್ಳಿಗಳು 170 ಹಾಲು ಒಕ್ಕೂಟ ಹಾಗೂ 15 ಹಾಲು ಮಹಾಮಂಡಳಿಗಳ ವ್ಯಾಪ್ತಿಗೆ ಒಳಪಟ್ಟಿವೆ. ಒಟ್ಟು 21.5 ದಶಲಕ್ಷ ಲೀಟರ್ ಹಾಲು ನಿತ್ಯವೂ ಉತ್ಪಾದನೆಯಾಗುತ್ತಿದೆ. ಇವತ್ತು 1 ಕೋಟಿ 24 ಲಕ್ಷ ಕುಟುಂಬಗಳ ಮನೆಯಲ್ಲಿ ದೀಪ ಉರಿಯುತ್ತಿದ್ದರೆ ಅದು ಲಾಲ್ ಬಹದ್ದೂರ್ ಶಾಸ್ತ್ರಿಯವರಿಂದಾಗಿ.

ಅವರ ಏಕೈಕ ಗ್ರಾಮವಾಸವೇ ಎಂತಹ ಬದಲಾವಣೆ ತಂದಿತು ನೋಡಿ?!

ಆದರೆ ಬೆಂಗಳೂರಿನಿಂದಲೇ ಹಾಸಿಗೆ, ಟಾಯ್ಲೆಟ್, ಫ್ಯಾನ್‌ಗಳನ್ನು ಕಟ್ಟಿಕೊಂಡು ಗ್ರಾಮವಾಸಕ್ಕೆ ಹೋಗಿ, ಬೆಳಗ್ಗೆ ಎದ್ದ ಕೂಡಲೇ ಫ್ಯಾನ್ ಬಿಚ್ಚಿಕೊಂಡು, ಹಾಸಿಗೆ ಮಡಿಚಿಕೊಂಡು, ಟಾಯ್ಲೆಟ್ ಎತ್ತಿಕೊಂಡು ಬರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರೆಲ್ಲಿ, ಇಪ್ಪತ್ತಾರು ಕಿ.ಮೀ. ದೂರದಲ್ಲೇ ಆಡಳಿತ ವರ್ಗವನ್ನ, ಭದ್ರತಾ ಸಿಬ್ಬಂದಿಗಳನ್ನ, ಅಂಗರಕ್ಷಕರನ್ನ ಬಿಟ್ಟು ಏಕಾಂಗಿಯಾಗಿ ಗ್ರಾಮಕ್ಕೆ ತೆರಳಿದ ಶಾಸ್ತ್ರಿಯವರೆಲ್ಲಿ? ಅವರು ಒಂದೇ ಒಂದು ರಾತ್ರಿಯನ್ನು ಗ್ರಾಮದಲ್ಲಿ ಕಳೆದ ಕಾರಣ 'ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ' ಜನ್ಮತಳೆದು ಕೋಟ್ಯಂತರ ಬಡ ಜನರಿಗೆ ಅನ್ನ ದುಡಿದುಕೊಳ್ಳುವ ಮಾರ್ಗ ಸೃಷ್ಟಿಯಾಯಿತು, ಅವರ ಮನೆಯಲ್ಲಿ ದೀಪ ಉರಿಯುವಂತಾಯಿತು. ಆದರೆ ಕುಮಾರಸ್ವಾಮಿಯವರ ಗ್ರಾಮವಾಸದಿಂದ ಬಡವರ ಮನೆಯ ಮುದ್ದೆ, ಕೋಳಿ ಸಾರು ಖರ್ಚಾಯಿತೇ ಹೊರತು ಬೇರೇನೂ ಆಗಲಿಲ್ಲ!

ಆದರೂ ''ರಾಜ್ಯದ ಐದೂವರೆ ಕೋಟಿ ಜನರ ಹಿತದೃಷ್ಟಿಯಿಂದ ವಚನಭ್ರಷ್ಟನಾಗಲು ಸಿದ್ಧ'' ಎನ್ನುತ್ತಿರುವ ಕುಮಾರಸ್ವಾಮಿಯವರು ಯಾರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದ್ದಾರೆ? ಅಷ್ಟಕ್ಕೂ ಗೋವಿನ ಹಾಡು ಕೇಳಿ ಬೆಳೆದ ನಾಡಿನಲ್ಲಿ ಹುಟ್ಟಿ ಇಂತಹ ಮಾತನ್ನಾಡಲು ಅವರ ಆತ್ಮಸಾಕ್ಷಿ ಒಪ್ಪಿದ್ದಾದರೂ ಹೇಗೆ?

ಕರ್ನಾಟಕದ ಜನರೇನು ಮೇಕೆಗಳಲ್ಲ. ಅವರಿಗೂ ಗೊತ್ತಿತ್ತು ಇಪ್ಪತ್ತು ತಿಂಗಳ ಹಿಂದೆ ದೇವೇಗೌಡರು ಆಡಿದ್ದು ನಾಟಕ ಅಂತ. ಹಾಗೆ ಗೊತ್ತಿದ್ದರೂ ಅದು ನಾಟಕವಾಗಿರದೇ ನಿಜವೇ ಆಗಿರಲಿ, ಕುಮಾರಸ್ವಾಮಿಯವರು ಅಪ್ಪನ ಮಾತನ್ನು ಧಿಕ್ಕರಿಸಿ ಬಿಜೆಪಿ ಜತೆ ಕೈಜೋಡಿಸಲಿ ಅಂತ ಅಂದುಕೊಳ್ಳುತ್ತಿದ್ದರು. ಅಷ್ಟಕ್ಕೂ, ಧರ್ಮಸಿಂಗ್ ಅವರ ಸಪ್ಪೆ ಮುಖ, ಮಾತುಗಳನ್ನು ಕೇಳಿ ಜನ ಬೇಸತ್ತಿದ್ದರು. ಹೊಸದೇನೋ ಬೇಕು ಅಂತ ಎಲ್ಲರ ಮನಸ್ಸಿನಲ್ಲೂ ಇತ್ತು. ಅದಕ್ಕೆ ತಕ್ಕಂತೆ ಮೊದಲ ಬಾರಿಗೆ ಶಾಸಕರಾಗಿದ್ದರೂ, ಯಾವುದೇ ಅನುಭವವಿಲ್ಲದಿದ್ದರೂ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಪ್ರಾರಂಭದಲ್ಲಿ ಒಬ್ಬ ಒಳ್ಳೆಯ ರಾಜಕಾರಣಿಯಾಗಿ ಹೊರ ಹೊಮ್ಮುವ ಎಲ್ಲ ಲಕ್ಷಣಗಳನ್ನೂ ತೋರಿದರು. ನನಗೆ ಅನುಭವವಿಲ್ಲ, ಆಶೀರ್ವಾದ ಮಾಡಿ ಅಂತ ಕೈಮುಗಿದು ಕೇಳುತ್ತಿದ್ದ ಅವರ ಬಗ್ಗೆ ಜನರೂ ಒಲವು ತೋರಿದರು. ಒಂದೆಡೆ ಮುಖಗಂಟಿಕ್ಕಿಕೊಂಡೇ ಮಾತನಾಡುತ್ತಿದ್ದ, ಪಕ್ಷದ ಶಾಸಕರನ್ನೇ ಅನುಮಾನದಿಂದ ನೋಡುತ್ತಿದ್ದ ಯಡಿಯೂರಪ್ಪನವರಾದರೆ, ಇನ್ನೊಂದೆಡೆ ದಾರಿಯಲ್ಲಿ ನಿಂತು ಎಂಥ ಸಾಮಾನ್ಯನನ್ನೂ ಮಾತನಾಡಿಸುತ್ತಿದ್ದ, ಹೆಣ್ಣುಮಕ್ಕಳು ಕಣ್ಣೀರಿಟ್ಟರೆ ಸ್ಥಳದಲ್ಲೇ ಸ್ಪಂದಿಸುತ್ತಿದ್ದ ಕುಮಾರಸ್ವಾಮಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯವೂ ಮೂಡಿತು. ಅಲ್ಲದೆ ಜನತಾ ದರ್ಶನ, ಗ್ರಾಮ ವಾಸಗಳು ವಸ್ತುಸ್ಥಿತಿಯಲ್ಲಿ ಯಾವ ಬದಲಾವಣೆಯನ್ನು ತರದಿದ್ದರೂ ಮುಖ್ಯಮಂತ್ರಿಯವರ ಘನತೆ, ಪ್ರಸಿದ್ಧಿಯನ್ನು ಹೆಚ್ಚಿಸಿದ್ದನ್ನು ಅಲ್ಲಗಳೆಯಲಾಗದು.

ಆದರೆ ಎಲ್ಲಿಯವರೆಗೂ ದೇವೇಗೌಡರನ್ನು ದೂರವಿಟ್ಟಿದ್ದರೋ ಅಲ್ಲಿಯವರೆಗೂ ಕುಮಾರಸ್ವಾಮಿಯವರು ಸರಿಯಾಗಿಯೇ ಇದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಮಾತನಾಡುತ್ತಿದ್ದ ದೇವೇಗೌಡರು ಯಾವತ್ತು ಕಾಲಿಟ್ಟರೋ ಅವತ್ತೇ ಕುಮಾರಸ್ವಾಮಿ ದಾರಿ ತಪ್ಪಲು ಆರಂಭಿಸಿದರು. ಒಂದು ವೇಳೆ, ದೇವೇಗೌಡರು ತಮ್ಮ ಆಗಾಧ ರಾಜಕೀಯ ಅನುಭವವನ್ನು ಸಕಾರಾತ್ಮಕವಾಗಿ ಮಗನಿಗೆ ಧಾರೆ ಎರೆದು, ದಾರಿ ತೋರಿದ್ದರೆ ಖಂಡಿತ ಕುಮಾರಸ್ವಾಮಿಯವರು ಒಬ್ಬ ಒಳ್ಳೆಯ ರಾಜಕಾರಣಿಯಾಗಿ ಹೊರಹೊಮ್ಮುತ್ತಿದ್ದರು. ಇಪ್ಪತ್ತು ತಿಂಗಳ ನಂತರ ಯಡಿಯೂರಪ್ಪನವರಿಗೆ ಸೌಜನ್ಯದಿಂದ ಅಧಿಕಾರ ಬಿಟ್ಟುಕೊಟ್ಟಿದ್ದರೆ ಜನರ ಮೆಚ್ಚುಗೆ, ಅನುಕಂಪ ಕೂಡ ಸಿಗುತ್ತಿತ್ತು. ಮುಂದೊಂದು ದಿನ ಯಾರ ಹಂಗೂ ಇಲ್ಲದೆ ಮತ್ತೆ ಮುಖ್ಯಮಂತ್ರಿ ಯಾಗಬಹುದಾದ ಸಾಧ್ಯತೆಯೂ ಇರುತ್ತಿತ್ತು.

ಅಪ್ಪನಾದವನು ಮಗನಿಗೆ ಬುದ್ಧಿ ಹೇಳಿ ಸರಿ ದಾರಿಗೆ ತರಲು ಯತ್ನಿಸುತ್ತಾನೆ. ಆದರೆ ದಾರಿ ತಪ್ಪಿಸುವ ಅಪ್ಪ ಬಹುಶಃ ಗೌಡರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಹನ್ನೊಂದು ತಿಂಗಳು ಪ್ರಧಾನಿಯಾಗಿದ್ದ ದೇವೇಗೌಡರು ಇನ್ನಷ್ಟು ಕಾಲ ಅಧಿಕಾರದಲ್ಲಿ ಮುಂದುವರಿಯಬಹುದಿತ್ತು. ಆದರೆ ಕಾಂಗ್ರೆಸ್ಸನ್ನೇ ಒಡೆಯಲು ಪ್ರಯತ್ನಿಸಿದರು. ಬೆಂಬಲ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿಯವರ ವಿರುದ್ಧವೇ ಬಂಡಾಯವೆಬ್ಬಿಸಲು ಪ್ರಯತ್ನಿಸಿ ಕೊನೆಗೆ ಅಧಿಕಾರವನ್ನೇ ಕಳೆದುಕೊಂಡರು. ಮಗ ಕುಮಾರಸ್ವಾಮಿಯವರೂ ಅದೇ ಹಾದಿ ತುಳಿದರು.

ಬೆಂಬಲ ಕೇಳಿ ಕೊಂಡು ಬಿಜೆಪಿ ಬಳಿಗೆ ಬಂದಿದ್ದೇ ಕುಮಾರಸ್ವಾಮಿ. ಆದರೆ ನನ್ನಿಂದಾಗಿ ಬಿಜೆಪಿ ಅಧಿಕಾರದ ರುಚಿಯನ್ನಾದರೂ ಕಂಡಿತು ಎನ್ನುತ್ತಿರುವ ಅವರು, ತಾನು ಮುಖ್ಯಮಂತ್ರಿಯಾಗಿದ್ದೇ ಬಿಜೆಪಿಯಿಂದಾಗಿ ಎಂಬುದನ್ನು ಮರೆತು ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಸುನೀತಾ ವೀರಪ್ಪಗೌಡ, ಅನಿಲ್ ಲಾಡ್, ಬೇಳೂರು ಗೋಪಾಲ ಕೃಷ್ಣ ಅವರಂತಹ ಅತೃಪ್ತ ಬಿಜೆಪಿ ಶಾಸಕರನ್ನು ಜತೆಗೆ ಕರೆದುಕೊಂಡೇ ತಿರುಗುತ್ತಿರುವ ಕುಮಾರಸ್ವಾಮಿ ಬಿಜೆಪಿಯನ್ನು ಒಡೆಯುವುದಕ್ಕೂ ಯತ್ನಿಸಿದ್ದಾರೆ. ಯಡಿಯೂರಪ್ಪನವರ ಜತೆಗೆ ಮುನಿಸಿಕೊಂಡಿದ್ದ ಬಿಜೆಪಿ ಶಾಸಕರಾದ ಜಿ. ಬಸವಣ್ಣೆಪ್ಪ ಮತ್ತು ಬಸವರಾಜು ಮನೆಗೆ ಹೋಗಿ ಅಡುಗೆಕೋಣೆ ರಾಜಕೀಯವನ್ನೂ ಮಾಡಿದರು. ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿಯವರನ್ನು ಹೇಳದೇ ಕೇಳದೆ ಕಿತ್ತುಹಾಕಿ ಬಿಜೆಪಿಯನ್ನು ಅವಮಾನಿಸಿದ ಕುಮಾರಸ್ವಾಮಿ, ಕಳೆದ 20 ತಿಂಗಳಲ್ಲಿ ಬಿಜೆಪಿಯಿಂದಾಗಿ ಪಡಬಾರದ ಕಷ್ಟ ಪಟ್ಟಿದ್ದೇವೆ ಎಂದು ಈಗ ಕಥೆ ಹೇಳುತ್ತಿದ್ದಾರೆ. ಇಪ್ಪತ್ತು ತಿಂಗಳ ಹಿಂದೆ ಧರ್ಮಸಿಂಗ್ ಅವರ ಸರಕಾರವನ್ನು ಬೀಳಿಸುವಾಗಲೂ ಜೆಡಿಎಸ್ ನಾಯಕರು ಕಾಂಗ್ರೆಸ್‌ನಿಂದಾಗಿ ಪಡಬಾರದ ಕಷ್ಟಪಟ್ಟೆವು ಅಂತ ಇದೇ ಕಥೆ ಹೇಳಿದ್ದರು.

ಈ ದೇವೇಗೌಡರು ಮತ್ತು ಅವರ ಪುತ್ರರು ಎಷ್ಟು ಪ್ರಾಮಾಣಿಕರೆಂದರೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಡೆದ ಮರು ಚುನಾವಣೆ ವೇಳೆ ಬಿಜೆಪಿಯ ಬೆಂಬಲ ಪಡೆದುಕೊಂಡು, ಉಳ್ಳಾಲ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಆದರೂ ಬಳ್ಳಾರಿಯ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಒಂದು ವೇಳೆ, ಶ್ರೀರಾಮುಲು ಅವರು ಆಡಿದ ಮಾತುಗಳು ಇವರಿಗೆ ನೋವುಂಟು ಮಾಡುವುದೇ ಆದರೆ, ಡಿ.ಟಿ. ಜಯಕುಮಾರ್, ಇಕ್ಬಾಲ್ ಅನ್ಸಾರಿ, ಮೆರಾಜುದ್ದೀನ್ ಪಟೇಲ್ ಬಾಯಿಗೆ ಬಂದಂತೆ ಮಾತನಾಡುವಾಗ ಯಾಕೆ ಕಡಿವಾಣ ಹಾಕಲಿಲ್ಲ? ಶ್ರೀರಾಮುಲು ಮತ್ತು ರೆಡ್ಡಿ ಸಹೋದರರನ್ನಾದರೂ ನಂಬಬಹುದು. ಅವರು ನೇರವಾಗಿ ಹೋರಾಟಕ್ಕೆ ಬರುತ್ತಾರೆ. ಆದರೆ ಒಳಗಿಂದೊಳಗೇ ಕತ್ತಿ ಮಸೆಯುವವರನ್ನು ನಂಬುವುದು ಹೇಗೆ? ಒಂದು ವೇಳೆ, ಎಂ.ಪಿ. ಪ್ರಕಾಶ್ ಅಥವಾ ಇನ್ಯಾವುದೇ ಜೆಡಿಎಸ್ ನಾಯಕರು ಮುಖ್ಯಮಂತ್ರಿಯಾಗಿದ್ದಿದ್ದರೆ ದೇವೇಗೌಡರು ಇದೇ ಥರಾ ನಾಟಕವಾಡಿ ಸರಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ? ಅದಿರಲಿ, ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿದರೆ ರಕ್ತದೋಕುಳಿ ನಡೆಯುತ್ತದೆ ಎನ್ನುತ್ತಿರುವ ಇವರು ಆರ್‌ಎಸ್‌ಎಸ್ ಅಥವಾ ಭಜರಂಗ ದಳದವರು ದೇಶಕ್ಕೇ ಬಾಂಬಿಟ್ಟ ಒಂದು ಉದಾಹರಣೆಯನ್ನು ತೋರಿಸಲಿ ನೋಡೋಣ?

ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ನಮ್ಮ ಕಷ್ಟ ಕಾರ್ಪಣ್ಯಗಳೆಲ್ಲ ಪರಿಹಾರವಾಗುತ್ತವೆ, ನಮ್ಮ ಕನ್ನಡನಾಡು ಧನ್ಯ ವಾಗುತ್ತದೆ, ಹಾಗಂತ ಯಾರೂ ಹೇಳುತ್ತಲೂ ಇಲ್ಲ, ಭಾವಿಸಿಯೂ ಇಲ್ಲ. ಇದು ವಿಶ್ವಾಸದ ಪ್ರಶ್ನೆ.

ಆದರೂ ಕನ್ನಡ ನಾಡಿನ ಪ್ರೀತಿ-ಗೌರವಗಳಿಗೆ ಪಾತ್ರರಾಗಿರುವ ಸಿದ್ಧಗಂಗಾ ಶ್ರೀಗಳು ಹಾಗೂ ಸುತ್ತೂರು ಶ್ರೀಗಳ ಎದುರು ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡುತ್ತೇನೆಂದು ಸಾರ್ವಜನಿಕವಾಗಿ ಮಾಡಿದ್ದ ವಾಗ್ದಾನವನ್ನೂ ಕುಮಾರಸ್ವಾಮಿಯವರು ಮುರಿಯುತ್ತಾರೆಂದರೆ....!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more