ರೋಚಕ ಕಥೆ : ರೌಡಿ ಶೀಟರ್‌ನಿಂದ ಯೋಗ ಪಂಟರ್

Posted By: ಪ್ರಸಾದ ನಾಯಿಕ
Subscribe to Oneindia Kannada

ಮಂಡ್ಯ ಜಿಲ್ಲೆಯ ಅರೆಕೆರೆ ಗ್ರಾಮದಿಂದ, ಓದನ್ನು ಅರ್ಧಕ್ಕೇ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದ ಆ ಚಿಗುರುಮೀಸೆಯ ಯುವಕನ ಮೇಲೆ ಪೊಲೀಸರು ಕಳ್ಳತನ, ಹತ್ಯೆಗೆ ಯತ್ನದ ಕೇಸು ಜಡಿದಿದ್ದರು. ಕಂಬಿಯ ಹಿಂದಿನ ಜೀವನ ಆತನ ಬದುಕನ್ನೇ ಜಬಡಿ ಹಾಕಿತ್ತು. ವಿಪರೀತ ಕ್ಷೋಭೆಗೊಂಡಿದ್ದ ಹೆತ್ತ ತಂದೆ ತಾಯಿಗಳಿಗೆ ಆತ ಮುಖ ತೋರಿಸದಂತಾಗಿದ್ದ.

ಕಳ್ಳತನ ಮಾಡಬೇಕೆಂದೇನೂ ಆತ ಬೆಂಗಳೂರು ನಗರಿಗೆ ಬಂದಿರಲಿಲ್ಲ. ಅಸಹಾಯಕ ಪರಿಸ್ಥಿತಿ, ಕ್ರಿಮಿನಲ್ ಮನಸ್ಸುಗಳು ಆತನನ್ನು ಕಾನೂನು ವಿರೋಧಿ ಕೃತ್ಯಕ್ಕೆ ತಳ್ಳಿದ್ದವು. ವಿಹ್ವಲಗೊಂಡಿದ್ದ ಆತನ ಮುಂದಿದ್ದುದು ಕೇವಲ ಶೂನ್ಯಭಾವ ಮಾತ್ರ. ಆದರೆ, ಆರ್ಟ್ ಆಫ್ ಲಿವಿಂಗ್‌ನಿಂದ ನಡೆಸಲಾದ ಪರಿವರ್ತನಾ ಶಿಬಿರ, ಕತ್ತಲಲ್ಲಿ ಅವಿತುಕೊಂಡಿದ್ದ ಆತನ ಬದುಕಿನಲ್ಲಿ ಆಶಾಕಿರಣವನ್ನು ಚೆಲ್ಲಿತ್ತು.

ಲಾಕಪ್ಪಿನಲ್ಲಿ ಪೊಲೀಸರ ಲಾಠಿಯ ರುಚಿ ತಿಂದಿದ್ದ, ರೌಟಿ ಶೀಟರ್ ಪಟ್ಟಿ ಅಂಟಿಸಿಕೊಂಡಿದ್ದ ಮೂವತ್ತೊಂದು ವರ್ಷದ ಪ್ರವೀಣ ಇಂದು ಸಾವಿರಾರು ಪೊಲೀಸ್ ಅಧಿಕಾರಿಗಳಿಗೆ, ಆಟೋ ಚಾಲಕರಿಗೆ, ಕೈದಿಗಳಿಗೆ ಯೋಗ, ಧ್ಯಾನ ಕಲಿಸುವ ಪ್ರಾವೀಣ್ಯತೆ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲ, ಬತ್ತಿಹೋಗಿರುವ ನದಿಯ ಪುನರುತ್ಥಾನದ ಹರಿಕಾರರಾಗಿದ್ದಾರೆ. ರೌಡಿ ಶೀಟರ್‌ನಿಂದ ಯೋಗ ಪಂಟರ್ ಆಗಿದ್ದು ಹೇಗೆ? ರೋಚಕ ಕಥೆ ಇಲ್ಲಿದೆ.

Success story of a criminal : From Social Outcast to Social Worker

2001ರಲ್ಲಿ ಬೆಂಗಳೂರೆಂಬ ಮಾಯಾನಗರಿಗೆ ಪ್ರವೀಣ ಬಂದಿಳಿದಾಗ ಆತನ ಮುಂದಿದ್ದುದು ಒಂದೇ ಧ್ಯೇಯ, ಚೆನ್ನಾಗಿ ದುಡಿದು ತನ್ನ ಕಾಲ ಮೇಲೆ ನಿಲ್ಲಬೇಕು. ಡಿಟರ್ಜೆಂಟ್ ಫ್ಯಾಕ್ಟರಿಯಲ್ಲಿ ಸುಪರ್ವೈಸರಾಗಿ, ಎಚ್ಎಎಲ್ ನಲ್ಲಿ ವಿಜಿಲನ್ಸ್ ವಿಭಾಗದಲ್ಲಿ ದುಡಿಯುತ್ತಿದ್ದಾಗ ಅಷ್ಟಿಷ್ಟು ಕಾಸು ಅಡ್ಡಾಡುತ್ತಿತ್ತು. ಇಬ್ಬರು ಗೆಳೆಯರೊಂದಿನ ಸ್ನೇಹ ಬದುಕಿನ ಓಟದ ದಿಕ್ಕನ್ನೇ ಬದಲಿಸಿತ್ತು. ಒಬ್ಬ ಮನೆ ಮಾಲಿಕನ ಮಗ, ಮತ್ತೊಬ್ಬ ಪೊಲೀಸ್ ಕಾನ್‌ಸ್ಟೇಬಲ್ ಮಗ.

ಚಿಗುರು ಮೀಸೆಯ ವಯಸು, ಕಣ್ತುಂಬ ನೂರಾರು ಕನಸು, ಮನಸ್ಸು ಬಯಸುತ್ತಿತ್ತು ಸೊಗಸು. ಅಂದುಕೊಂಡಿದ್ದೆಲ್ಲ ಸಿಗಬೇಕು, ಕಂಡಿದ್ದೆಲ್ಲ ಕೊಂಡು ಐಷಾರಾಮಿ ಬದುಕು ಬದುಕಬೇಕು. ಇಷ್ಟೆಲ್ಲ ಬೇಕುಗಳಿದ್ದಾಗ ಕೈಯಲ್ಲಿ ಕಾಂಚಾಣವೂ ಬೇಕು ತಾನೆ? ಸ್ನೇಹಿತರಿಬ್ಬರು ಸ್ಕೆಚ್ ಹಾಕಿದ್ದರು. ಅದೇ ರಾಬರಿ. ಮನಸ್ಸು ಗಾಬರಿಯಾದರೂ ಅಂಗೈ ತುರಿಸಲು ಪ್ರಾರಂಭಿಸಿದಾಗ ಪ್ರವೀಣ ಸ್ನೇಹಿತರು ಹೆಣೆದ ಬಲೆಗೆ ಬಿದ್ದಿದ್ದ. ಈ ದಂಧೆ ಎಷ್ಟು ದಿನ ನಡೆದೀತು? ತಪ್ಪಿಸಿಕೊಳ್ಳುವ ಚಾಕಚಕ್ಯತೆ ಗೊತ್ತಿಲ್ಲದ ಪ್ರವೀಣ ಅನಾಯಾಸವಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

"ಮೂರು ತಿಂಗಳು ಜೈಲಿನಲ್ಲಿ ಕಳೆದೆ. ಇನ್ನೆಂದೂ ಊರಿಗೆ ಮರಳಿ ಓದು ಮುಂದುವರಿಸಬಾರದೆಂದು ನಿರ್ಧರಿಸಿದ್ದೆ. ನಾನು ಬೆಂಗಳೂರಿಗೆ ಬಂದಾಗ ತಾಯಿಗೆ ಹುಷಾರಿರಲಿಲ್ಲ. ನಾನು ಇಂಥ ಅನಾಹುತ ಮಾಡಿಕೊಂಡು ಜೈಲು ಸೇರಿದ್ದೇನೆಂದು ತಿಳಿದಾಗ ಅಮ್ಮ ಮತ್ತಷ್ಟು ಘಾಸಿಯಾಗಿದ್ದಳು. ಆದರೆ ತಾಯಿಕರುಳು ಕೇಳಬೇಕಲ್ಲ? ಬೆಂಗಳೂರಿಗೆ ಧಾವಿಸಿ ಬಂದು ಜಾಮೀನು ಕೊಡಿಸಿದ್ದರು" ಎಂದು ನಿಟ್ಟುಸಿರು ಬಿಡುತ್ತಾರೆ ಪ್ರವೀಣ.

ಚಂಚಲ ಮನಸ್ಸು ಕೆಟ್ಟ ಕೆಲಸಕ್ಕೆ ಪ್ರೇರೇಪಿಸುತ್ತಿತ್ತು. ಪರಿಣಾಮವಾಗಿ ರೌಡಿ ಶೀಟರ್ ಎಂಬ ಹಣೆಪಟ್ಟಿ ಅಂಟಿಕೊಂಡಿತು. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಹಲವಾರು ಕೇಸುಗಳನ್ನು ಜಡಿಯಲಾಗಿತ್ತು. 2006ರವರೆಗೆ ಜೈಲಿನಲ್ಲಿ ರಾಗಿ ಬೀಸಿದ್ದೇ ಬೀಸಿದ್ದು. ಬದುಕು ಇನ್ನು ಇಷ್ಟೇ ಅಂತ ಅಂದುಕೊಳ್ಳುವಾಗ, ಜೈಲಿನಲ್ಲಿ ನಡೆದ ಮತ್ತೊಂದು ಘಟನೆ ಬದುಕಿಗೆ ಊಹಿಸಲಾಗದ ತಿರುವು ನೀಡಿತ್ತು.

"ಅಂದು ಡಿಸಿಪಿಯಾಗಿದ್ದ ಅಲೋಕ್ ಕುಮಾರ್ ಕೈದಿಗಳ ಮನಪರಿವರ್ತನೆಗೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ಆರ್ಟ್ ಆಫ್ ಲಿವಿಂಗ್‌ನ ನಾಗರಾಜ್ ಗಂಗೊಳ್ಳಿ ಎಂಬುವವರನ್ನು ಕರೆಸಿ ಕೈದಿಗಳಿಗೆ ಯೋಗ, ಧ್ಯಾನದ ತರಗತಿಗಳನ್ನು ಆಯೋಜಿಸಿದ್ದರು. ಆ ಕಾರ್ಯಕ್ರಮಕ್ಕೆ ನಾನು ಕೂಡ ಆಯ್ಕೆಯಾಗಿದ್ದೆ. ಪೊಲೀಸರು ಬಂದು ತರಗತಿಗೆ ಕರೆದುಕೊಂಡು ಹೋಗುವಾಗ ಒಂಥರ ಮುಜುಗರವಾಗುತ್ತಿತ್ತು" ಎಂದು ಪ್ರವೀಣ್ ತಮ್ಮ ಅನುಭವದ ಸುರುಳಿ ಬಿಚ್ಚಿಟ್ಟರು.

"ನಾಗರಾಜ್ ಅವರು ಭಾರೀ ಮೃದು ಸ್ವಭಾವ ಮನುಷ್ಯ. ಎಂತೆಂಥ ಟಫ್ ಕಾಪ್‌ಗಳಿಂದಲೇ ಸಾಧ್ಯವಾಗದ್ದನ್ನು ಇವರೇನು ಮಾಡುತ್ತಾರೆ ಎಂಬ ಉಡಾಫೆ ನನ್ನಲ್ಲಿ ಮನೆ ಮಾಡಿತ್ತು. ವಸ್ತುಶಃ ನನ್ನಲ್ಲೇ ಆತ್ಮವಿಶ್ವಾಸವಿರಲಿಲ್ಲ. ಆದರೆ, ಅವರ ಮಾತುಗಳು, ಕೈದಿಗಳನ್ನು ಅವರು ನಡೆಸಿಕೊಳ್ಳುವ ರೀತಿ, ನಮ್ಮನ್ನು ತಿದ್ದಲು ಅವರು ಬಳಸುತ್ತಿದ್ದ ತಂತ್ರಗಾರಿಕೆ ವಿಶಿಷ್ಟವಾಗಿತ್ತು. 'ಕೈದಿಗಳು ಹುಟ್ಟಾ ಅಪರಾಧಿಗಳಲ್ಲ' ಎಂಬ ಅವರ ಮಾತು ನನ್ನನ್ನು ಸೇರಿ ಹಲವರ ಹೃದಯ ತಟ್ಟಿತ್ತು." [ಅಬ್ದುಲ್ ಕಲಾಂನಷ್ಟೇ ಬುದ್ದಿವಂತ ರೈತ ಕೃಷ್ಣಪ್ಪ]

Success story of a criminal : From Social Outcast to Social Worker

ನಾಗರಾಜ್ ಮತ್ತು ಪ್ರವೀಣ್ ಅವರ ಬಂಧ ಅಲ್ಲಿಗೇ ಮುಗಿಯಲಿಲ್ಲ. ತಾವು ನಂಬಿದ ಜನರನ್ನು ನಾಗರಾಜ್ ಕೈಬಿಡಲಿಲ್ಲ. ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿದರು. ಕಡಿದಾದ ಶಿಲ್ಪವನ್ನು ನವಿರಾಗಿ ಕೆತ್ತಿ ಒಂದು ಉತ್ತಮ ಮೂರ್ತಿಯನ್ನಾಗಿ ಮಾಡಿದರು. ಇದೇ ಚಟುವಟಿಕೆಗಳು ಪ್ರವೀಣ್ ಅವರನ್ನು ಕರ್ನಾಟಕದ ಹಳ್ಳಿಹಳ್ಳಿಗೆ ಸಾಗುವಂತೆ ಮಾಡಿತು.

ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ, ನಕ್ಸಲೀಯರ ಅಡಗುತಾಣವಾಗಿದ್ದ ಶೃಂಗೇರಿ ಬಳಿಯ ಚಿಗ್ಗ ಗ್ರಾಮದಲ್ಲಿ ಹಳ್ಳಿಗರಿಗಾಗಿ ಸೇತುವೆ ಕಟ್ಟುವುದು, ಚಿಕ್ಕಮಗಳೂರು ಜಿಲ್ಲೆಯ ಲಕ್ಷ್ಮೀಪುರದಲ್ಲಿ ಬತ್ತಿಹೋದ ಕೆರೆಯ ಹೂಳೆತ್ತಿ ಪುನರುಜ್ಜೀವನ ಕಾರ್ಯ, ಬಾಗಲಕೋಟೆ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದು ಪ್ರವೀಣ್ ಅವರ ಬದಲಾದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು. ಬೆಂಗಳೂರಿನಲ್ಲಿ ಕೂಡ ಅವರು ಸ್ಲಂ ಮಕ್ಕಳಿಗಾಗಿ ಕ್ರೀಡಾ ಕ್ಲಬ್ ನಿರ್ಮಾಣದಲ್ಲಿ ತೊಡಗಿಕೊಂಡರು. [ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]

"ಈ ಅಭಿವೃದ್ಧಿ ಕಾರ್ಯಕ್ಕಾಗಿ ಗ್ರಾಮಸ್ಥರ ಮನವೊಲಿಸುವುದು, ಅವರನ್ನು ಅದರಲ್ಲಿ ತೊಡಗಿಸುವುದು ಭಾರೀ ಸವಾಲಿನ ಕೆಲಸವಾಗಿತ್ತು. ಲಕ್ಷ್ಮೀಪುರದ ಕೆರೆ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿದಾಗ ಕೆಲವರು, 'ಇದನ್ನೆಲ್ಲ ನಿಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿದ್ದೀರಿ' ಎಂದು ನಿಂದಿಸಿದರು. ಆದರೆ, ಕ್ರಮೇಣ ಹಳ್ಳಿಗರಲ್ಲಿ ನಂಬಿಕೆ ಬಂದಿತು. ಅವರೇ ಹಲವಾರು ಯೋಜನೆಗಳಲ್ಲಿ ಕೈಜೋಡಿಸಿ ಯಶಸ್ವಿಗೊಳಿಸಿದರು" ಎಂದು ವಿವರಿಸುವಾಗ ಪ್ರವೀಣ್ ಅವರ ಮುಖದಲ್ಲಿ ಸಾರ್ಥಕ್ಯದ ಭಾವ.

ಈ ಕೆಲಸಗಳನ್ನೆಲ್ಲ ಅವರು ನಿರ್ವಾರ್ಥದಿಂದ ಮಾಡುತ್ತಿದ್ದಾರೆ. ನದಿ ಪುನರುಜ್ಜೀವನ ಕಾರ್ಯದಲ್ಲಿ ಸಾಕಷ್ಟು ಪರಿಣತಿ ಸಾಧಿಸಿರುವ ಅವರು, ಎಲ್ಲ ಕೆಲಸಗಳನ್ನು ವೈಜ್ಞಾನಿಕವಾಗಿ ಚಿಂತಿಸಿ ಮಾಡುವಷ್ಟು ನುರಿತರಾಗಿದ್ದಾರೆ. ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆಯನ್ನು ಮದುವೆಯಾಗಿರುವ ಪ್ರವೀಣ್ ಮಗನ ಜೊತೆ ಬೆಂಗಳೂರಿನಲ್ಲಿ ಸುಖಸಂಸಾರ ಹೂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Success story of a criminal : From Social Outcast to Social Worker. This is inspiring story of 31 year old Praveen, who was able to give up a life of crime, because he was received without the stigma attached to criminals and given an opportunity to thrive. Now he has been training police officers to come out of stress and teaching yoga.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ