Get Updates
Get notified of breaking news, exclusive insights, and must-see stories!

ಕುಮಾರಸ್ವಾಮಿ ಆ ಮಾತಲ್ಲಿ ಸತ್ಯವಿದೆ, ವ್ಯಂಗ್ಯವಿದೆ, ಜಾಣತನವೂ ಇದೆ

Recommended Video

      ನಾನು ಕಾಂಗ್ರೆಸ್ ಮುಲಾಜಿನಲ್ಲಿದೀನಿ ಎಂಬ ಎಚ್ ಡಿ ಕೆ ಹೇಳಿಕೆಯ ಮರ್ಮವೇನು? | Oneindia Kannada

      ಕುಮಾರಸ್ವಾಮಿಯವರು ಉದ್ದೇಶಪೂರ್ವಕವಾಗಿಯೇ ಆ ಮಾತು ಆಡಿದರೋ ಅಥವಾ 'ಸಾಂದರ್ಭಿಕ ಶಿಶು' ಆಗಿರುವ ಅವರಿಂದ ಈಗಿನ ಸಂದರ್ಭವೇ ಆ ಮಾತನ್ನು ಆಡಿಸಿತೋ, ಅವರಿಗಿರುವ ಅಸಹಾಯಕ ಸ್ಥಿತಿಯೇ ಆ ಮಾತನ್ನು ಹೊರಹಾಕಿತೋ?

      ಅಂತೂ, "ನಾನು ರಾಜ್ಯದ ಆರೂವರೆ ಕೋಟಿ ಜನರ ಮುಲಾಜಿನಲ್ಲಿಲ್ಲ, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ. ಸಾಲ ಮನ್ನಾದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನನಗೆ ಒಂದು ವಾರದ ಕಾಲಾವಕಾಶ ನೀಡಿ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಬಿದ್ದಿರುವ ನುಡಿ ಭಾರೀ ಕೋಲಾಹಲವೆಬ್ಬಿಸಿದೆ.

      ಅವರ ಈ ಮಾತಿನಲ್ಲಿ ಸತ್ಯವೂ ಇದೆ, ಸುಳ್ಳೂ ಇದೆ, ವ್ಯಂಗ್ಯವೂ ಇದೆ, ತಪ್ಪಿಸಿಕೊಳ್ಳುವ ಜಾಣತನವೂ ಇದೆ, ಪರಿಸ್ಥಿತಿಯನ್ನು ನಿಭಾಯಿಸಲಾಗದ ಹತಾಶೆಯೂ ಇದೆ, ಕೊಟ್ಟ ಮಾತನ್ನು ನಿಭಾಯಿಸಬೇಕಾದ ಒತ್ತಡವೂ ಇದೆ. ಒಟ್ಟಿನಲ್ಲಿ ರಾಜಕೀಯ ದಾಳವಾಗಿ ಅವರನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿರುವುದಂತೂ ಸುಳ್ಳಲ್ಲ.

      ಕುಮಾರಸ್ವಾಮಿಯವರು ಮತ್ತು ಅವರ ತಂದೆಯವರಾದ ದೇವೇಗೌಡ ಅವರು ಎಲ್ಲವನ್ನೂ ಕೂಲಂಕಷವಾಗಿ ವಿಚಾರ ಮಾಡದೆ, ಸಮಾಲೋಚನೆ ನಡೆಸದೆ, ಏಕಾಏಕಿ ತೀರ್ಮಾನ ತೆಗೆದುಕೊಳ್ಳುವಂಥವರು ಅಲ್ಲ. ಈ ಕಾರಣದಿಂದಾಗಿಯೇ, ಕುಮಾರಸ್ವಾಮಿ ಅವರು ಆಡುವ ಪ್ರತಿಯೊಂದು ಮಾತನ್ನೂ ಅತ್ಯಂತ ತೂಕದಿಂದ ಆಡಬೇಕಾಗಿದೆ.

      "ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ" ಎಂಬ ಮಾತಿದೆಯಲ್ಲ ಇದರಲ್ಲಿ ಎಷ್ಟೊಂದು ಅರ್ಥವಿದೆ, ಆದರೆ ಅದೇ ಅನರ್ಥಕ್ಕೂ ಕಾರಣವಾಗಿದೆ. ಸಂದರ್ಭದ ಶಿಶುವಾಗಿರುವ ಕುಮಾರಸ್ವಾಮಿಯವರು ಕೇವಲ 36 ಶಾಸಕರನ್ನು ಇಟ್ಟುಕೊಂಡು, ಒಬ್ಬರಿಗಿಂತ ಒಬ್ಬರು ಇರುವ ಕಾಂಗ್ರೆಸ್ ಪಕ್ಷವನ್ನೂ ನಿಭಾಯಿಸಿಕೊಂಡು ಸರಕಾರ ನಡೆಸಬೇಕಾದ ಪರಿಸ್ಥಿತಿಯಿದೆಯಲ್ಲ, ಅದನ್ನು ಅರ್ಥ ಮಾಡಿಕೊಂಡರೆ ಅವರ ಮೇಲಿನ ಮಾತಿನಲ್ಲಿ ಸಾಕಷ್ಟು ಸತ್ಯಾಂಶವಿರುವುದು ಗೊತ್ತಾಗುತ್ತದೆ.

      ಜೆಡಿಎಸ್-ಕಾಂಗ್ರೆಸ್ ನಡುವೆ ಸಾಮರಸ್ಯವೇ ಇಲ್ಲ

      ಜೆಡಿಎಸ್-ಕಾಂಗ್ರೆಸ್ ನಡುವೆ ಸಾಮರಸ್ಯವೇ ಇಲ್ಲ

      ಯಾವುದೇ ಸಂಕಷ್ಟ ಬಂದಾಗ ವೆಂಕಟರಮಣನಿರಲಿ, ಯಾವುದೇ ಕಾಂಗ್ರೆಸ್ ಸಚಿವರೂ ಕುಮಾರಸ್ವಾಮಿಯವರ ಸಹಾಯಕ್ಕೆ ಬರಲಿಕ್ಕಿಲ್ಲ, ಸಲಹೆಯನ್ನೂ ನೀಡಲಿಕ್ಕಿಲ್ಲ. ಇದನ್ನು ನಾವು ನೀಲಮಣಿ ರಾಜು ಮತ್ತು ಮಮತಾ ಬ್ಯಾನರ್ಜಿ ಜಟಾಪಟಿ ಪ್ರಕರಣದಲ್ಲಿ ನೋಡಿದ್ದೇವೆ. ಇನ್ನು ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಸಾಮರಸ್ಯ ಕಂಡುಬಂದಿಲ್ಲ. ಒಗ್ಗಟ್ಟಿನಿಂದ ಹೋರಾಡಬೇಕಾದವರು ದಾಯಾದಿಯಂತೆ ಕಾಳಗಕ್ಕೆ ನಿಂತಿದ್ದಾರೆ. ಮೈತ್ರಿ ಏನಿದ್ದರೂ ವಿಧಾನಸೌಧದಲ್ಲಿ ಮಾತ್ರ, ಅದರಿಂದ ಹೊರಗಡೆ ಅಲ್ಲ ಎಂದು ದೇವೇಗೌಡರು ಹೇಳಿರುವುದು ಮಾರ್ಮಿಕವಾಗಿದೆ.

      ಮೈತ್ರಿಕೂಟದ ಸೌಧದಲ್ಲಿ ಬಿರುಕು

      ಮೈತ್ರಿಕೂಟದ ಸೌಧದಲ್ಲಿ ಬಿರುಕು

      ಎಲ್ಲಕ್ಕಿಂತ ಪ್ರಮುಖವಾಗಿ, ಸಂಪುಟ ರಚನೆಯ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಣತಿಯಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎಂಬುದು ಕೂಡ ದೆಹಲಿಗೆ ನೀಡಿದ ಎರಡೇ ಭೇಟಿಯಲ್ಲಿ ಕುಮಾರಸ್ವಾಮಿಯವರಿಗೆ ಮನವರಿಕೆಯಾಗಿದೆ. 'ನಾನು ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ' ಎಂದು ಕುಮಾರಸ್ವಾಮಿಯವರು ಹೇಳಿದ್ದರಲ್ಲಿ ಏನೂ ಅತಿಶಯೋಕ್ತಿಯಿಲ್ಲ. ಪ್ರಮಾಣ ವಚನ ಸ್ವೀಕರಿಸಿ ಇನ್ನೂ ವಾರವೂ ಆಗಿಲ್ಲ, ಅಷ್ಟರಲ್ಲಿಯೇ ಮೈತ್ರಿಕೂಟದ ಸೌಧದಲ್ಲಿ ಬಿರುಕುಗಳು ಕಾಣಲು ಆರಂಭಿಸಿವೆ.

      ಸಾಲಮನ್ನಾ ಶ್ರೇಯಸ್ಸು ಯಾರಿಗೆ ಸೇರಬೇಕು?

      ಸಾಲಮನ್ನಾ ಶ್ರೇಯಸ್ಸು ಯಾರಿಗೆ ಸೇರಬೇಕು?

      ರೈತರ ಸಾಲಮನ್ನಾ ವಿಷಯದಲ್ಲಿ ಕುಮಾರಸ್ವಾಮಿಯವರನ್ನು ಬಿಜೆಪಿ ನಾಯಕರು ಮೂಲೆಗೆ ತಳ್ಳಲು ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ. ಯಶಸ್ವಿಯೋ, ವಿಫಲವೋ ಅಂತೂ ಸಾಲಮನ್ನಾ ಮಾಡಲೇಬೇಕೆಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಒಂದು ವೇಳೆ ಬಿಜೆಪಿಯೇನಾದರೂ ಜೆಡಿಎಸ್ ಜೊತೆ ಸೇರಿ ಸರಕಾರ ರಚಿಸಿದ್ದರೆ, ಏಕಾಏಕಿ ಸಾಲಮನ್ನಾ ಘೋಷಣೆ ಮಾಡಲು ಸಾಧ್ಯವಿತ್ತೆ? ಹಣಕಾಸು ಖಾತೆ ಕೈಗೆ ಬರುವ ಸೂಚನೆಯೇ ಕುಮಾರಸ್ವಾಮಿಯವರಿಗೆ ಕಾಣಿಸುತ್ತಿಲ್ಲ, ಇನ್ನು ಸಾಲಮನ್ನಾ ಹೇಗೆ ಮಾಡಿಯಾರು? ಸಾಲಮನ್ನಾ ಮಾಡಿದರೂ ಕಾಂಗ್ರೆಸ್ ಕೂಡ ಒಪ್ಪಲೇಬೇಕು ಮತ್ತು ಕಾಂಗ್ರೆಸ್ಸಿಗೂ ಕ್ರೆಡಿಟ್ ನೀಡಬೇಕು. ಈ ಶ್ರೇಯಸ್ಸು ಯಾರಿಗೆ ಸೇರಬೇಕು?

      ಸಾಧ್ಯತೆ ಬಾಧ್ಯತೆಗಳ ಬಗ್ಗೆ ಚರ್ಚೆ ಇಲ್ಲ

      ಸಾಧ್ಯತೆ ಬಾಧ್ಯತೆಗಳ ಬಗ್ಗೆ ಚರ್ಚೆ ಇಲ್ಲ

      ಒಂದು ಮೈತ್ರಿಕೂಟದ ಸರಕಾರ ರಚನೆಯಾಗಬೇಕಾದರೆ, ಎರಡೂ ಪಕ್ಷದ ನಾಯಕರೆಲ್ಲ ಒಟ್ಟಾಗಿ ಕುಳಿತು, ಸಾಧ್ಯತೆ ಬಾಧ್ಯತೆಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡಿ, ತಮ್ಮಿಂದ ಐದು ವರ್ಷಗಳ ವರೆಗೆ ಸರಕಾರ ಸುಸೂತ್ರವಾಗಿ ನಡೆಸಲು ಸಾಧ್ಯತೆ ಇದೆ ಎಂದು ಕಂಡುಬಂದ ನಂತರ ಮೈತ್ರಿಯ ಘೋಷಣೆ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಆಗಿದ್ದೇನು? ಸಾಧ್ಯತೆ ಬಾಧ್ಯತೆಗಳ ಬಗ್ಗೆ ಚರ್ಚೆಯೂ ಇಲ್ಲ, ಪಟ್ಟಾಗಿ ಕುಳಿತು ಮಾತುಕತೆಯನ್ನೂ ಆಡಿಲ್ಲ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ರಚನೆಯಾಗಬೇಕು ಎಂದು ಕಾಂಗ್ರೆಸ್ ನಾಯಕರು ಘೋಷಿಸಿದರು, ಇವರು ಅದನ್ನು ಒಪ್ಪಿಯೂಬಿಟ್ಟರು.

      ಆರೂವರೆ ಕೋಟಿ ಜನರ ಪ್ರತಿನಿಧಿ

      ಆರೂವರೆ ಕೋಟಿ ಜನರ ಪ್ರತಿನಿಧಿ

      ಒಂದು ಮಾತಂತೂ ಸತ್ಯ. ಅದೇನೆಂದರೆ, ಈಗವರು ಕೇವಲ 37 ಶಾಸಕರಿರುವ ಜೆಡಿಎಸ್ಸಿನ ರಾಜ್ಯಾಧ್ಯಕ್ಷರಲ್ಲ, ಮೈತ್ರಿಕೂಟ ರಚಿಸಿದ್ದಕ್ಕಾಗಿ 78 ಶಾಸಕರ ಬೆಂಬಲವಿರುವ ಕಾಂಗ್ರೆಸ್ಸಿನ ಮಿತ್ರರೂ ಅಲ್ಲ, ಅವರೀಗ ಆರೂವರೆ ಕೋಟಿ ಕರ್ನಾಟಕದ ಜನತೆಯ ಪ್ರತಿನಿಧಿ. ಇಲ್ಲಿ ಪಕ್ಷವೂ ಇಲ್ಲ, ಮೈತ್ರಿಯೂ ಇಲ್ಲ, ಒಪ್ಪಂದಗಳೂ ಇಲ್ಲ, ರಾಜಕೀಯವಂತೂ ಇಲ್ಲವೇ ಇಲ್ಲ. ಅವರು ಕರ್ನಾಟಕದ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಲ್ಲ. ಅವರು ಒಂದೇ ತಿಂಗಳು ಆಳಲಿ, ಒಂದು ವರ್ಷವೇ ಆಳಲಿ, ಐದು ಸಂವತ್ಸರಗಳನ್ನೇ ಕಾಣಲಿ, ಅವರು ರಾಜ್ಯದ ಚುಕ್ಕಾಣಿ ಹಿಡಿದಿರುವ ಜನನಾಯಕ. ಅವರು ಪ್ರತಿಯೊಂದು ನಿರ್ಣಯವನ್ನೂ ರಾಜ್ಯದ ಜನರ ಹಿತದೃಷ್ಟಿಯಿಂದಲೇ ನೋಡಬೇಕಾಗುತ್ತದೆ.

      ಕುಮಾರಸ್ವಾಮಿಯವರ ಮಾತು ಒಪ್ಪತಕ್ಕದ್ದಲ್ಲ

      ಕುಮಾರಸ್ವಾಮಿಯವರ ಮಾತು ಒಪ್ಪತಕ್ಕದ್ದಲ್ಲ

      ಹೀಗಿರುವಾಗ, 'ನಾನು ರಾಜ್ಯದ ಆರೂವರೆ ಕೋಟಿ ಜನರ ಮುಲಾಜಿನಲ್ಲಿಲ್ಲ' ಎಂಬ ಮಾತು ಅವರ ಬಾಯಿಯಿಂದ ಬಂದಿದ್ದಾದರೂ ಹೇಗೆ? ಇದು ಒಪ್ಪತಕ್ಕ ಮಾತೆ? ನನ್ನನ್ನೇನು ಸಂಪೂರ್ಣ ಬಹುಮತ ನೀಡಿ ರಾಜ್ಯದ ಜನರು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆಯೆ? ಜನ ನಮ್ಮ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂಬುದು ಅವರ ಮಾತಿನ ಅರ್ಥವಾಗಿದ್ದರೆ ಅವರಿಗೆ ಆರೂವರೆ ಕೋಟಿ ಜನರನ್ನು ಪ್ರತಿನಿಧಿಸಿಯೂ, ಮುಖ್ಯಮಂತ್ರಿಯಾಗುವ ಹಕ್ಕೂ ಇಲ್ಲವೆಂದಾಗುತ್ತದೆ. ಇದೇ ಮಾತನ್ನು ದೇವೇಗೌಡರು ಹೇಳಿರುವುದು ಕೂಡ ದುರಾದೃಷ್ಟದ ಸಂಗತಿ. ಈ ಮಾತನ್ನು ರಾಜ್ಯದ ಯಾವ ಮತದಾರನೂ ಆತ್ಮಸಾಕ್ಷಿಯಿಂದ ಒಪ್ಪುವುದಿಲ್ಲ.

      ಸಾಂದರ್ಭಿಕ ಶಿಶುವಾದರೂ ಜವಾಬ್ದಾರಿಯಿದೆ

      ಸಾಂದರ್ಭಿಕ ಶಿಶುವಾದರೂ ಜವಾಬ್ದಾರಿಯಿದೆ

      ನಾನೇನು ಮುಖ್ಯಮಂತ್ರಿಯಾಗಬೇಕೆಂದೂ ಬಯಸಿದವನಲ್ಲ, ಕಾಂಗ್ರೆಸ್ ನಾಯಕರೇ ನನ್ನ ಮೇಲೆ ರಾಜ್ಯದ ನಾಯಕತ್ವದ ಜವಾಬ್ದಾರಿ ಹೊರಿಸಿದ್ದಾರೆ ಎಂದು ಕೂಡ ಅವರ ಮಾತಿನ ಅರ್ಥವಿರಬಹುದು. ಸಾಂದರ್ಭಿಕ ಶಿಶುವಾಗಿರುವ ಅವರು ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ಇಲ್ಲಸಲ್ಲದ ನೆವಗಳನ್ನು ಕೂಡ ಹೇಳುವಂತಿಲ್ಲ. ಅವರ ಮೇಲೆ ಬೃಹತ್ ಜವಾಬ್ದಾರಿಯಿದೆ ನಿಭಾಯಿಸಬೇಕು ಅಷ್ಟೇ. ಇಲ್ಲದಿದ್ದರೆ, ನನಗೀ ಮೈತ್ರಿ ನಿಭಾಯಿಸುವುದು ಸಾಧ್ಯವಿಲ್ಲ ಎಂದು ವಿರೋಧಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಬೇಕು. ಅವರ ಮಾತಿನಲ್ಲಿ ಎಷ್ಟೇ ಸತ್ಯವಿದ್ದರೂ, ಕಹಿಯಿದ್ದರೂ ವಾಟರ್ ಬರೀಸ್ ಕಾಂಪೌಂಡ್ ನಂತೆ ಆಗಾಗ ಗುಟುಕರಿಸುತ್ತಲೇ ಇರಬೇಕು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+