• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಲ್ಲುವುದು ಬಂದೂಕೋ, ಮನುಷ್ಯನೋ??

By Staff
|

"ಪ್ರಾಣವನ್ನಾದರೂ ತೆತ್ತು ಇತರರನ್ನು ಹಿಂಸೆಯಿಂದ ರಕ್ಷಿಸಿ" ಎನ್ನುತ್ತ ಗುಂಡಿಗೆ ಗಾಂಧಿ ಬಲಿಯಾಗಿ ಅರವತ್ತು ವರ್ಷಗಳಾಗುತ್ತ ಬಂತು. ಆದರೇನು, ಯಾರ ಸಂದೇಶವೂ ಮನುಷ್ಯರ ಕಿವಿಗೆ ಬಿದ್ದಂತೆ ಕಾಣುವುದಿಲ್ಲ. ಎಲ್ಲ ಮತದವರೂ ತಮ್ಮ ತಮ್ಮ ಮತ ಶಾಂತಿಪ್ರಿಯ ಎಂದು ಹೇಳಿದರೂ ಧರ್ಮಕ್ಕಾಗಿ ಕ್ರೌರ್ಯ ನಡೆಯುತ್ತಲೇ ಇದೆ. ಆಯುಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವರಲ್ಲಿ ಅನೇಕರು ಧರ್ಮಶ್ರದ್ಧೆಯುಳ್ಳವರೇ. ಪ್ರಪಂಚದಲ್ಲಿ ನಡೆಯುವ ಹಿಂಸೆಗೆ ಮತ್ಯಾರೋ ಕಾರಣರು, ನಾವಲ್ಲ, ಎಂಬುದು ಎಲ್ಲ ಜನಗಳ ನಂಬಿಕೆಯಾಗಿದೆ.

  • ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

Violence and Peaceಇತ್ತೀಚೆಗೆ ಎಲ್ಲೆಲ್ಲೋ ಇದ್ದಕ್ಕಿದ್ದಂತೆ ನಡೆದುಹೋಗುವ ಭಯಾನಕ ವಿಧ್ವಂಸಕ ಕೃತ್ಯಗಳ ಸುದ್ದಿ ಹೆಚ್ಚಾಗುತ್ತಿದೆ. ಚರ್ಚಿನಲ್ಲಿ ಪ್ರಾರ್ಥಿಸಿ ಹಿಂದಿರುಗುತ್ತಿರುವವರನ್ನು ಯಾರೋ ಗುಂಡಿಕ್ಕಿದ್ದು, ಯಾವುದೋ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಗುಂಡಿಕ್ಕಿ ಯಾರೋ ಯಾರನ್ನೋ ಕೊಂದದ್ದು, ಹೀಗೇ ಸುದ್ದಿ ಇನ್ನೂ ಹಸಿಯಾಗೇ ಇದೆ. ಹದಿಹರಯದ ತರುಣನೊಬ್ಬ ಓಮಹಾ ಪ್ರಾಂತ್ಯದ ಒಂದು ಶಾಪಿಂಗ್ ಮಾಲಿನಲ್ಲಿ ಬಂದೂಕು ಹಿಡಿದು ನುಗ್ಗಿದ. ಎದುರಿಗೆ ಬಂದ ಏಳೆಂಟು ಜೀವಗಳಿಗೆ ಅನಿರೀಕ್ಷಿತ ಕೊನೆಯನ್ನುಂಟುಮಾಡಿದ. ತನ್ನ ಜೀವವನ್ನೂ ಕೊನೆಗಾಣಿಸಿಕೊಂಡ. ತನ್ನ ಮನೆಮಂದಿಗೆ, ಸ್ನೇಹಿತರಿಗೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯಾಗಿಬಿಟ್ಟ.

ಕೆಲವು ತಿಂಗಳ ಹಿಂದೆ ವರ್ಜೀನ್ಯಾ ಟೆಕ್ಕಿನಲ್ಲಿ ಇಂಥದೇ ಒಂದು ಘಟನೆ ನಡೆಯಿತು. ಕೆಲ ವರ್ಷಗಳ ಹಿಂದೆ ಒಂದು ಪ್ರೌಢಶಾಲೆಯ ಒಳಾಂಗಣದಲ್ಲಿ ಮತ್ತೊಂದು ಗುಂಡಿನ ಮಳೆ ನಡೆದಿತ್ತು. ಅದಕ್ಕೂ ಮುನ್ನ ಟೆಕ್ಸಾಸಿನ ವಿವಿನಿಲಯದಲ್ಲಿ, ಒಬ್ಬ ಯುವಕ ಕಟ್ಟಡವೊಂದರ ಮಹಡಿಯನ್ನೇರಿ ಹತ್ತಾರು ಬಡಪಾಯಿಗಳ ಜೀವ ತೆಗೆದಿದ್ದ. ಹೀಗೇ ನೋಡುತ್ತ ಹೋದರೆ ಈ ರೀತಿ ಹಲವಾರು ಜೀವಗಳನ್ನು ತೆಗೆದುಕೊಂಡು ತನ್ನನ್ನು ತಾನೇ ಕೊಂದುಕೊಳ್ಳುವ ಅಥವಾ ಗುಂಡಿನ ಕಾಳಗದಲ್ಲಿ ಪೋಲೀಸರ ಗುಂಡಿಗೆ ಬಲಿಯಾಗುವ ಸುದ್ದಿ ಓದಿದಾಗ, ಆಕ್ಷಣದಲ್ಲಿ ಮನಸ್ಸು ಒಂದಿಷ್ಟು ತಲ್ಲಣಗೊಂಡರೂ ಇದು ಸರ್ವೇಸಾಧಾರಣ ಎನ್ನುವಷ್ಟರಮಟ್ಟಿಗೆ ಮತ್ತೆ ಮತ್ತೆ ನಡೆಯುತ್ತಿದೆ. ಇಂಥ ಹತ್ಯಾಕಾಂಡಗಳು ಇತರ ದೇಶಗಳಿಗಿಂತ ಅಮೇರಿಕದಲ್ಲಿ ಹೆಚ್ಚು ನಡೆಯುತ್ತಿವೆ.

ಏನಿದೆ ಇದರ ಹಿಂದೆ? ಮನಶಾಸ್ತ್ರಜ್ಞರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇದ್ದಾರೆ. ಸಮಾಜಶಾಸ್ತ್ರಜ್ಞರೂ ಚಿಂತಿಸಿದ್ದಾರೆ. ಹಲವು ಕಾರಣಗಳನ್ನು ಎಲ್ಲರೂ ಚರ್ಚಿಸಿ ತಮ್ಮವೇ ಆದ ತೀರ್ಮಾನಕ್ಕೆ ಬಂದಿದ್ದಾರೆ. ಮೊದಲನೆಯದಾಗಿ, ಇಂಥಾ ಕೃತ್ಯಕ್ಕೆ ಕಾರಣರಾದವರು ಪ್ರೀತಿಯಿಂದ ವಂಚಿತರು ಎಂಬುದೊಂದು ವಾದ. ಇನ್ನು ಕೆಲವರು ಮುರಿದಮನೆಯಿಂದ ಬಂದವರು, ಅವರಿಗೆ ತಂದೆ-ತಾಯಿ ಅಥವಾ ಗುರುಗಳ ಮಾರ್ಗದರ್ಶನವಿಲ್ಲದೇ ಸಮಾಜಘಾತುಕರಾಗಿ ಇಂಥ ಹೇಯಕೃತ್ಯಗಳನ್ನು ಮಾಡುತ್ತಾರೆ ಎಂಬುದು ಮತ್ತೊಂದು ವಾದ. ಒಳ್ಳೆಯ ಮನೆತನದಿಂದ ಬಂದವರಲ್ಲೂ ಹಲವರು, ಸಾಕಷ್ಟು ಪ್ರೀತಿ ಮತ್ತು ಬೇಕಾದಷ್ಟು ಲಾಲನೆ ಪಾಲನೆ ಸಿಕ್ಕಿದ್ದರೂ ಯಾವುದೋ ಗುಪ್ತ ಅತೃಪ್ತಿಯ ಕಾರಣದಿಂದ ಹಿಂಸಾಚಾರಕ್ಕಿಳಿಯುತ್ತಾರೆ.

ಇನ್ನೂ ಕೆಲವರು ಕೇವಲ ಇತರರ ಗಮನ ಸೆಳೆಯಲು ಇಂಥಾ ಹಿಂಸೆಗೆ ಇಳಿಯುತ್ತಾರೆ. ಯಾವುದೋ ಕೀಳರಿಮೆ, ಸುಪ್ತದ್ವೇಷ ಮತ್ತು ತಮ್ಮನ್ನು ಇತರರು ನೆನಪಿನಲ್ಲಿಡಲಿ ಎಂಬ ಬಯಕೆಯಿಂದ ಮಾಡಬಾರದ್ದನ್ನು ಮಾಡಿ ಗದ್ದಲವುಂಟುಮಾಡಿ ಕಣ್ಮರೆಯಾಗುತ್ತಾರೆ. ಇಂಥವರಲ್ಲಿ ಕೆಲವರು ಇತರರಿಂದ ಹಿಂಸೆಗೆ ಒಳಗಾದವರು ಅಥವಾ ಒಳಗಾದೆವೆಂದು ಬಗೆದವರಾಗಿರುತ್ತಾರೆ. ತಾವೂ ಜಗತ್ತಿನ ಗಣನೆಗೆ ಬರಬೇಕು ಮತ್ತು ಬರಬಲ್ಲೆವು ಎಂದು ಸಾಧಿಸಲು, ಒಂದು ಹದಿನೈದು ನಿಮಿಷಗಳ ಪ್ರಸಿದ್ಧಿಗಾಗಿ --"ಐ ವಾಂಟ್ ಟು ಗೋ ಔಟ್ ಇನ್ ಸ್ಟೈಲ್" ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. ಸುತ್ತಲ ಶಾಂತಿಯನ್ನು ಕದಡಿ ಸುದ್ದಿಮಾಡಿ ಕಣ್ಮುಚ್ಚುತ್ತಾರೆ. ಇವರಲ್ಲಿ ಯಾರೂ ಕೇವಲ ತಾವು ಮುಳುಗುವುದರಿಂದಲೇ ತೃಪ್ತರಾಗುವುದಿಲ್ಲ, ಇತರರನ್ನೂ ಮುಳುಗಿಸಿಯೇ ತಮ್ಮ ಅಂತ್ಯವನ್ನು ತಂದುಕೊಳ್ಳುತ್ತಾರೆ. ಸಾಧಾರಣವಾಗಿ, ಏಕಾಂಗಿಗಳೂ, ಕಡುಮೌನಿಗಳೂ, ಸಂಘಜೀವನವನ್ನು ತಿರಸ್ಕರಿಸುವವರೂ ಅವನತಮನಸ್ಕರೂ (ಡಿಪ್ರೆಷನ್ ನಿಂದ ನರಳುವವರು) ಆಗಿರುತ್ತಾರೆ, ತಮ್ಮ ಎಲ್ಲಾ ತೊಂದರೆಗಳಿಗೆ ಇನ್ಯಾರೋ ಕಾರಣವೆಂದು ಧೃಡವಾಗಿ ನಂಬಿರುತ್ತಾರೆ. ಇವರನ್ನೆಲ್ಲ ಒಂದಿಲ್ಲ ಒಂದು ಮಾನಸಿಕ ರೋಗದಿಂದ ಬಳಲುವವರ ಗುಂಪಿಗೆ ಸೇರಿಸಿಬಿಡುವುದಕ್ಕಿಂತ ಹೆಚ್ಚಾಗಿ ಮತ್ಯಾವ ಪರಿಹಾರವನ್ನೂ ಸಮಾಜ ಕಂಡುಕೊಂಡಿಲ್ಲವೆಂದೇ ಹೇಳಬೇಕು.

ಇತರರನ್ನು ಹಿಂಸೆಗೆ ಗುರಿಪಡಿಸುವ ಜನರಲ್ಲಿ ಮತ್ತೊಂದು ಗುಂಪಿದೆ. ಯಾವುದೋ ಧಾರ್ಮಿಕ ಅಥವಾ ಸೈದ್ಧಾಂತಿಕ ನಂಬಿಕೆಗಳ ಹಿನ್ನೆಲೆಯಲ್ಲಿ ತಮ್ಮ ನಂಬಿಕೆಗೆ ವಿರುದ್ಧವಾದವರನ್ನು ನಿರ್ನಾಮಗೊಳಿಸುತ್ತೇವೆಂಬ ಆಕಾಂಕ್ಷೆಯಿಂದಲೋ ಅಥವಾ ಭ್ರಮೆಯಿಂದಲೋ, ಅಂತೂ ತಮ್ಮ ಜೀವವನ್ನು ತಾವೇ ಕೊನೆಗಾಣಿಸುವಷ್ಟು ತೀವ್ರವಾದ ಮನಸ್ಥೈರ್ಯವುಳ್ಳವರಾಗಿ, ತಮ್ಮ ದೇಹವನ್ನೇ ಸ್ಫೋಟಗೊಳಿಸುವಮೂಲಕ ಇನ್ನಷ್ಟು ಜನರನ್ನು ಆಹುತಿ ತೆಗೆದುಕೊಳ್ಳುವ ಭಯಂಕರ ವಿಧಾನವನ್ನು ಅನುಸರಿಸಲು ಇವರು ಹಿಂಜರಿಯುವುದಿಲ್ಲ. ಅಂಥವರನ್ನು ಧರ್ಮಾಂಧರು, ಉಗ್ರರು ಇತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ಶತ್ರುಸೈನ್ಯದ ಪಾಳಯಕ್ಕೆ ಏಕಾಂಗಿಯಾಗಿ ನುಗ್ಗಿ ರಣಧೀರನಾಗಿ ಮೆರೆದು ನೂರಾರು ಯೋಧರನ್ನು ತುಂಡರಿಸಿ ಕೊಂದು ತನ್ನ ತಾಯ್ನಾಡಿಗಾಗಿ ಆತ್ಮಾರ್ಪಣೆ ಮಾಡಿಕೊಂಡವನ ಕತೆ ದೇಶಪ್ರೇಮದ ಕತೆಯಾಗುತ್ತದೆ. ಅಂಥವರನ್ನು ಮಹಾತ್ಯಾಗಿ ಎಂದೂ ಮಹಾವೀರನೆಂದೂ ನೆನೆಸಿಕೊಳ್ಳುತ್ತೇವೆ.

ಅಬಾರ್ಷನ್ ಕ್ಲಿನಿಕ್ಕಿನ ಮುಂದೆ ಬಾಂಬ್ ಸ್ಫೋಟಿಸುವವನು ಸಹ ಇನ್ನೂ ಹುಟ್ಟದ ಜೀವಗಳ ಮೇಲಿನ ಪ್ರೀತಿಯಿಂದಲೇ ಬೆಳೆದು ನಿಂತಿರುವ ಜೀವಗಳ ಮೇಲೆ ಹಿಂಸೆಗಿಳಿದಿರುತ್ತಾನೆ. ಹಾಗೆ ನೋಡಿದರೆ, ಮೇಲಿನ ಉದಾಹರಣೆಗಳಲ್ಲಿ ಎಲ್ಲರೂ ಮಾಡುವುದು ಹಿಂಸೆಯೇ ಅಲ್ಲವೇ? ಪೋಲೀಸರು ಗುಂಡು ಹಾರಿಸಿ ಕೊಂದರೆ ಅದು ಕರ್ತವ್ಯಪಾಲನೆ ಆಗುತ್ತದೆ. ಸೈನಿಕ ಬಾಂಬ್ ಎಸೆದರೆ ಅದು ದೇಶದ ರಕ್ಷಣೆಗಾಗಿ ಮಾಡಿದ ಶೌರ್ಯದ ದ್ಯೋತಕವಾಗುತ್ತದೆ. ದಾರಿತಪ್ಪಿದ ಯುವಕ/ಯುವತಿ ಸಿಡಿಸುವ ಬಾಂಬು, ಹಾರಿಸುವ ಗುಂಡು ಹಿಂಸೆಯ ಗುಂಪಿಗೆ ಸೇರುತ್ತವೆ. ರಾಜಕಾರಣಿಗಳ ತಪ್ಪು ಲೆಕ್ಕಾಚಾರದ ಪರಿಣಾಮವಾಗಿ ಯುದ್ಧ ನಡೆದರೆ, ಅಂಥ ಯುದ್ಧದಲ್ಲಿ ಸಹಸ್ರಾರು ಜನ ಸತ್ತರೆ ಅದನ್ನು ಚಾರಿತ್ರಿಕ ಅಗತ್ಯವೆಂದುಕೊಂಡು ಸುಮ್ಮನಾಗುತ್ತೇವೆ.

ಪ್ರಪಂಚದಲ್ಲಿ ಯಾರೂ ಯಾರಮೇಲೂ ಹಿಂಸೆ ಮತ್ತು ಕ್ರೌರ್ಯಗಳನ್ನು ತೋರಿಸದೇ ಇರಲು ಸಾಧ್ಯವೇ ಇಲ್ಲವೇ? ಕೆಟ್ಟದಾಗಿ ವರ್ತಿಸುವ ಮನುಷ್ಯನನ್ನು ಪ್ರಾಣಿಗಳಿಗೆ ಹೋಲಿಸಿ ನಾವು ಪ್ರಾಣಿಗಳಿಗೆ ಅವಮಾನ ಮಾಡುತ್ತೇವಲ್ಲ, ಪ್ರಾಣಿಗಳು ಮನುಷ್ಯರಷ್ಟು ಕ್ರೌರ್ಯವನ್ನು ಎಂದಿಗೂ ಪ್ರದರ್ಶಿಸುವುದಿಲ್ಲ ಎಂಬುದು ಪ್ರಾಣಿಗಳನ್ನು ಅಭ್ಯಾಸಮಾಡಿದವರೆಲ್ಲರ ಅನುಭವ. ನಿಜ, ಹಿಂಸೆಯೇ ಇಲ್ಲದಂತೆ ಮನುಷ್ಯ ಬದುಕಲಾರ. ಆದರೆ, ಒಬ್ಬ ಮತ್ತೊಬ್ಬನ ಮೇಲೆ ಆಯುಧಸಹಿತ ಆಕ್ರಮಣ ನಡೆಸಲು ನಮ್ಮ ವ್ಯವಸ್ಥೆಯೇ ಅವಕಾಶಮಾಡಿಕೊಟ್ಟಿದೆಯಲ್ಲ? ಆತ್ಮರಕ್ಷಣೆಯ ಹೆಸರಿನಲ್ಲಿ ಅಥವಾ, ತಮ್ಮಷ್ಟಕೆ ತಾವು ಬದುಕಿರುವ ಪ್ರಾಣಿಗಳನ್ನು ಕೇವಲ ಮನರಂಜನೆಗಾಗಿ ಬೇಟೆಮಾಡಿ ಖುಷಿ ಪಡುವ ಸ್ವಾತಂತ್ರ್ಯಕ್ಕಾಗಿ ಮನುಷ್ಯ ಬಂದೂಕುಗಳನ್ನು ತನ್ನಬಳಿ ಇಟ್ಟುಕೊಳ್ಳುವುದು ತನ್ನ ಹಕ್ಕು ಎಂದು ಸಾರಿದ್ದಾನೆ. ಈ ಹಕ್ಕಿನ ಚಟ ಅಮೇರಿಕದಲ್ಲಿರುವಷ್ಟು ಇನ್ನೆಲ್ಲೂ ಇದ್ದಂತಿಲ್ಲ.

ಹೌದು, ಬಂದೂಕುಗಳು ಬೇಕು. ಸೈನಿಕರಿಗೆ ಬೇಕು, ಪೋಲೀಸರಿಗೆ ಬೇಕು. ಆತ್ಮರಕ್ಷಣೆಗೂ ಬೇಕೆಂದೇ ಇಟ್ಟುಕೊಳ್ಳೋಣ. ಆದರೆ, ಕ್ಷಣಾರ್ಧದಲ್ಲಿ ಹತ್ತಾರು ಗುಂಡುಗಳನ್ನು ಉಗುಳಬಲ್ಲ ಆಟೋಮ್ಯಾಟಿಕ್ ಮಾರಕಾಸ್ತ್ರಗಳು ಎಲ್ಲರಿಗೂ ಸಿಕ್ಕುವಂತಿರಬೇಕೇ? ಅಂಥ ಆಯುಧಗಳು ಸುಲಭವಾಗಿ ಸಿಕ್ಕುವುದರಿಂದ ತಾನೇ, ಪ್ರೌಢಶಾಲೆಗಳಲ್ಲಿ, ಕಾಲೇಜು ಕ್ಯಾಂಪಸುಗಳಲ್ಲಿ, ಮಾಲುಗಳಲ್ಲಿ ಅನೇಕ ನಿರಪರಾಧಿಗಳು, ನಿಷ್ಪಾಪಿಗಳೂ, ಯಾರ ಗೋಜಿಗೂ ಹೋಗದ ಮುಗ್ಧರು ಆಗಿಂದಾಗ್ಗೆ ತಲೆತಿರುಕರ ಗುಂಡಿಗೆ ಬಲಿಯಾಗುತ್ತಿದ್ದಾರೆ? ರಾಜಕಾರಣಿಗಳನ್ನು ಕೇಳಿದರೆ, "ಬಂದೂಕು ಯಾರನ್ನೂ ಕೊಲ್ಲುವುದಿಲ್ಲ, ಮನುಷ್ಯ ಕೊಲ್ಲುತ್ತಾನೆ" ಎಂದು ನುಣಿಚಿಕೊಳ್ಳುತ್ತಾರೆ. ಆದರೆ, ಬಂದೂಕಗಳಿಲ್ಲದೇ ಮನುಷ್ಯ ಅಷ್ಟು ಸುಲಭವಾಗಿ ಕೊಲ್ಲಲಾರ.

"ಹಿಂಸೆ ಒಳ್ಳೆಯದಲ್ಲ, ಪ್ರಾಣಿವಧೆ ತಪ್ಪು" ಎಂದು ಬೌದ್ಧರು ಸಾರಿದ್ದು, "ಪ್ರಾಣಿಗಳೇ ಏಕೆ, ಕ್ರಿಮಿ-ಕೀಟಗಳನ್ನೂ ಹಿಂಸಿಸಬಾರದು" ಎಂದು ಜೈನ ಮುನಿಗಳು ಸಾರಿದ್ದು ಎರಡೂವರೆ ಸಹಸ್ರವರ್ಷಗಳ ಹಿಂದೆ. "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಒಡ್ಡಿ" ಎಂದು ಕ್ರಿಸ್ತ ಸಾರಿದರೂ ಆತನನ್ನು ಚಿತ್ರಹಿಂಸೆ ಮಾಡಿ ಶಿಲುಬೆಗೇರಿಸಿದ್ದು ಎರಡು ಸಾವಿರ ವರ್ಷಗಳ ಹಿಂದೆ. "ದಯೆಯೇ ಧರ್ಮದ ಮೂಲವಯ್ಯ" ಎಂದು ಬಸವಣ್ಣ ಸಾರಿ ಸಾವಿರ ವರ್ಷಗಳೇ ಕಳೆದಿವೆ. "ಪ್ರಾಣವನ್ನಾದರೂ ತೆತ್ತು ಇತರರನ್ನು ಹಿಂಸೆಯಿಂದ ರಕ್ಷಿಸಿ" ಎನ್ನುತ್ತ ಗುಂಡಿಗೆ ಗಾಂಧಿ ಬಲಿಯಾಗಿ ಅರವತ್ತು ವರ್ಷಗಳಾಗುತ್ತ ಬಂತು. ಆದರೇನು, ಯಾರ ಸಂದೇಶವೂ ಮನುಷ್ಯರ ಕಿವಿಗೆ ಬಿದ್ದಂತೆ ಕಾಣುವುದಿಲ್ಲ. ಎಲ್ಲ ಮತದವರೂ ತಮ್ಮ ತಮ್ಮ ಮತ ಶಾಂತಿಪ್ರಿಯ ಎಂದು ಹೇಳಿದರೂ ಧರ್ಮಕ್ಕಾಗಿ ಕ್ರೌರ್ಯ ನಡೆಯುತ್ತಲೇ ಇದೆ. ಆಯುಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವರಲ್ಲಿ ಅನೇಕರು ಧರ್ಮಶ್ರದ್ಧೆಯುಳ್ಳವರೇ. ಪ್ರಪಂಚದಲ್ಲಿ ನಡೆಯುವ ಹಿಂಸೆಗೆ ಮತ್ಯಾರೋ ಕಾರಣರು, ನಾವಲ್ಲ, ಎಂಬುದು ಎಲ್ಲ ಜನಗಳ ನಂಬಿಕೆಯಾಗಿದೆ.

ಎಲ್ಲಾ ಧರ್ಮಗಳ ಸಾರವನ್ನು ಒಂದೆಡೆ ಸೇರಿಸಿ ಒಂದು ಸರ್ವರೋಗನಿವಾರಕಮಂತ್ರವನ್ನು ತಯಾರಿಸಿ ಎಲ್ಲರಿಗೂ ಕುಡಿಸಿಬಿಟ್ಟರೆ? ಯಾರೂ ಪ್ರೀತಿಯಿಂದ ವಂಚಿಸಲ್ಪಡದಂತೆ ನೋಡಿಕೊಳ್ಳುವ ಒಂದು ಸೂತ್ರವನ್ನು ಕಂಡುಹಿಡಿದುಬಿಟ್ಟರೆ? ಮುರಿದ ಮನೆಗಳೇ ಇಲ್ಲದಂತೆ ನೋಡಿಕೊಂಡುಬಿಟ್ಟರೆ? ದೇಶ-ದೇಶಗಳ ನಡುವೆ ದ್ವೇಷವೇ ಇಲ್ಲದಂತೆ ಮಾಡುವ ಒಂದು ತಂತ್ರ ಮನುಷ್ಯನಿಗೆ ದೊರಕಿಬಿಟ್ಟರೆ? ಅವೆಲ್ಲ ಕನಸಿನಲ್ಲಿ ಮಾತ್ರ ಸಾಧ್ಯ, ನೆನಸಿನಲ್ಲಿ ಸುಲಭದ ಮಾತಲ್ಲ. ಆದರೆ, ಏ.ಕೆ 47ನಂಥ ಮಾರಕಾಸ್ತ್ರ ಎಲ್ಲರಿಗೂ ಏಕೆ? ಮಾರಕ ಅಸ್ತ್ರಗಳು ಎಲ್ಲರಿಗೂ ಸುಲಭವಾಗಿ ಸಿಕ್ಕದಿರುವಂತೆ ಮಾಡುವುದು ಅಂಥಾ ಕಷ್ಟದ ಕೆಲಸವೇನಲ್ಲ. ಆ ಬಗ್ಗೆ ರಾಜಕಾರಣಿಗಳು ಮತ್ತು ಜನಸಾಮಾನ್ಯರು ಒಂದಿಷ್ಟು ಕಾಳಜಿ ವಹಿಸುವರೇ ಎಂಬ ಪ್ರಶ್ನೆಯೊಂದಿಗೆ ವಿರಮಿಸುವೆ ಮುಂದಿನ ಕಂತಿನ ವರೆಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more