ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನದ ಘಟ್ಟಗಳು ನಾಲಕ್ಕೋ, ಮೂರೋ ಅಥವಾ ಎರಡೇಯೋ?

By Staff
|
Google Oneindia Kannada News

ಮನುಷ್ಯ ಸುಮಾರು ನೂರುವರ್ಷ ಬಾಳಿದ್ದೇ ಆದರೆ, ಪ್ರತಿ ಹಂತಕ್ಕೂ ಇಪ್ಪತ್ತೈದು ಇಪ್ಪತ್ತೈದು ವರ್ಷಗಳೆಂದು ಇಟ್ಟುಕೊಳ್ಳಬಹುದು. ಆದರೆ ಈ ಜಾಗತೀಕರಣದ ದಿನಗಳಲ್ಲಿ ಆ ಅವಕಾಶ ವಿರಳರಲ್ಲಿ ವಿರಳರಿಗೆ ಮಾತ್ರ ಲಭ್ಯ. ಹೀಗಾಗಿ ಜೀವನದ ಘಟ್ಟಗಳನ್ನು ಮತ್ತೊಂದು ಕೋನದಲ್ಲಿ ಗುರ್ತಿಸುವ ಪ್ರಯತ್ನ ನಡೆಯಬೇಕಿದೆ.

  • ಮೈ.ಶ್ರೀ.ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

Life Cycle epitomized ನಮ್ಮ ಸನಾತನಧರ್ಮದ ಪ್ರಕಾರ ಮನುಷ್ಯನ ಜೀವನದಲ್ಲಿ ನಾಲ್ಕು ಘಟ್ಟಗಳಿರುತ್ತವೆ. ಮೊದಲನೆಯದು ವಿದ್ಯಾರ್ಥಿ ದೆಸೆ, ಅಥವಾ ಬ್ರಹ್ಮಚರ್ಯಾಶ್ರಮ. ಇದು ಶಿಸ್ತು ಕಲಿಯುವ ಕಾಲ. ವಿದ್ಯೆ ಕಲಿತು ಜೀವನೋಪಾಯಕ್ಕೆ ಒಂದು ಮಾರ್ಗವನ್ನು ಕಂಡುಕೊಳ್ಳುವ ಮೊದಲ ಪಾದ. ಎರಡನೆಯದು ಗೃಹಸ್ಥಾಶ್ರಮ. ಉತ್ತಮಕುಲದ (ಇದರ ಅರ್ಥ ಉತ್ತಮ ಗುಣದ ಎಂದು ನನ್ನ ಕಲ್ಪನೆ) ಹೆಣ್ಣಿನ ಕೈಹಿಡಿದು ಸಂಸಾರ ಸುಖಗಳನ್ನು ಅನುಭವಿಸಿ ಮಕ್ಕಳನ್ನು ಬೆಳೆಸಿ ಮುಂದಕ್ಕೆ ತರುವ ಪ್ರಮುಖ ಘಟ್ಟವಿದು. ಮೂರನೆಯದು ವಾನಪ್ರಸ್ಥ. ಕಾಡಿನೆಡೆಗೆ ಹೊರಡುವುದು ಎಂದರ್ಥ, ಅಂದರೆ ಊರಿನ ನೂಕುನುಗ್ಗಲು, ಗಲಾಟೆ, ಜಂಜಾಟ ಹಾಗು ರಾಜಕೀಯಗಳನ್ನೂ ಮತ್ತಿತರ ತಾಪತ್ರಯಗಳನ್ನೂ ಹಿಂದೆಬಿಟ್ಟು ನಾಗರೀಕತೆಯಿಂದ ಹೊರಗೆ ಹಣ್ಣು ಹಂಪಲು ಗೆಡ್ಡೆ ಗೆಣೆಸುಗಳಿಂದಲೇ ತೃಪ್ತರಾಗಿದ್ದು ಜಪತಪಗಳಲ್ಲಿ ಕಾಲ ಕಳೆಯುವುದು.

ಇದ್ದಕ್ಕಿದ್ದಂತೆ ಎಲ್ಲವನ್ನೂ ಬಿಟ್ಟುಬಿಡುವುದು ದುಸ್ಸಾಧ್ಯವಾದ್ದರಿಂದ ಹೀಗೊಂದು ಹಲವು ವರ್ಷಗಳು ನಿಧಾನವಾಗಿ ಮುಂದಿನ ಮತ್ತು ಕೊನೆಯ ಘಟ್ಟಕ್ಕೆ ಪರಿವರ್ತನೆಗೊಳ್ಳುವ ಕಾಲ ಇದು. ಗಳಿಸಿದ್ದನ್ನೆಲ್ಲ ಒಂದೊಂದೊದನ್ನಾಗಿ ಕಳಚಿಕೊಳ್ಳಲು ಬೇಕಾದ ಮನೋದಾರ್ಢ್ಯವನ್ನು ಬೆಳೆಸಿಕೊಂಡು ವೈರಾಗ್ಯದೆಡೆಗೆ ನಡೆಯಲು ಈ ಘಟ್ಟ ಅತ್ಯಗತ್ಯ. ನಾಲ್ಕನೆಯ ಮತ್ತು ಕೊನೆಯ ಘಟ್ಟ ಸಂನ್ಯಾಸ. ಕಾವಿ ಬಟ್ಟೆ ತೊಟ್ಟು ಮನೆಮಂದಿಯನ್ನೆಲ್ಲ ತೊರೆದುಬಿಡುವುದು ಜೀವನದ ಈ ಕೊನೆಯ ಹಂತದಲ್ಲೆ.

ಸಂನ್ಯಾಸ ಎಲ್ಲರಿಗೂ ಸಾಧ್ಯವಿಲ್ಲ. ಅಪರೂಪಕ್ಕೆ ಹಲವು ಮಹಾನುಭಾವರು ಎರಡನೆಯ ಮತ್ತು ಮೂರನೆಯ ಘಟ್ಟಗಳನ್ನು ತಲುಪುವ ಮೊದಲೇ ನಾಲ್ಕನೆಯದಕ್ಕೆ ಹಾರಿ ಬಾಲ-ಸಂನ್ಯಾಸಿಗಳಾಗುತ್ತಾರೆ. ಇನ್ನು ಕೆಲವರು ಮನಸ್ಸು ಪಕ್ವವಾಗುವ ಮೊದಲೇ ಜೀವನದಲ್ಲಿ ಜಿಗುಪ್ಸೆ ತಾಳಿ ಅಥವಾ ಮತ್ತಾರದೋ ಬಲಾತ್ಕಾರದಿಂದ ಅಥವಾ ತಿಳಿವಳಿಕೆಯಿಲ್ಲದೇ ಸಂನ್ಯಾಸಿಗಳಾಗಿ ಫಜೀತಿಪಡುತ್ತಾರೆ. ಅವರಲ್ಲಿ ಕೆಲವರು ಪ್ರಾಮಾಣಿಕರು ತಾವು ಮಾಡಿದ ತಪ್ಪನ್ನು ಮನಗಂಡು ಸನ್ಯಾಸವನ್ನು ತೊರೆದು ಸಂಸಾರಿಗಳಾಗಿರುವ ದೃಷ್ಟಾಂತಗಳು ಸಾಕಷ್ಟಿವೆ.

ಆದರೆ, ಮತ್ತೆ ಕೆಲವರು ಕಪಟಸಂನ್ಯಾಸವನ್ನು ಮುಂದುವರೆಸುತ್ತಾ ತಮಗೂ ತಮ್ಮಮೇಲೆ ನೆಂಬಿಕೆ ಇಟ್ಟಿರುವ ಇತರರಿಗೂ ಮೋಸಮಾಡಿಕೊಂಡು ಕಾಲಹಾಕುತ್ತಾರೆ. ಅಂಥವರಲ್ಲಿ ಕೆಲವರು ಸಿಕ್ಕಿಹಾಕಿಕೊಂಡು ಗುಲ್ಲೆಬ್ಬಿಸುತ್ತಾರೆ. ಒಟ್ಟಿನಲ್ಲಿ ಇಂದಿನ ಕಾಲದಲ್ಲಿ ಸರಾಸರಿ ಜನರಿಗೆ ಮೂರನೆಯ ಘಟ್ಟದಲ್ಲೇ ಮುಕ್ತಾಯ. ಮೂರು ಮತ್ತು ನಾಲ್ಕನೆಯ ಹಂತಗಳಲ್ಲಿ ಎಲ್ಲ ಆಸೆಗಳನ್ನು ತೊರೆಯಲು ಯತ್ನಿಸುತ್ತ, ಅಂಟಿಕೊಳ್ಳುವ ಸ್ವಭಾವದಿಂದ ಬಿಡುಗಡೆಹೊಂದುತ್ತ, ಆಧ್ಯಾತ್ಮದಲ್ಲಿ ತೊಡಗುತ್ತ, ಕೊಟ್ಟಕೊನೆಗೆ "ಸರ್ವಸಂಗಪರಿತ್ಯಾಗಿ"ಗಳಾಗಲು ಯತ್ನಿಸಬೇಕೆಂಬುದು ಆಶ್ರಮಧರ್ಮದ ಮೂಲ ಉದ್ದೇಶ. ಹಲವರು ಸಾಧಿಸುತ್ತಾರೆ, ಅನೇಕರು ಸಾಧಿಸಿಸುವುದಿಲ್ಲ ಎಂಬ ಮಾತು ಬೇರೆ.

ಇವೇ ನಾಲ್ಕು ಹಂತಗಳನ್ನು ಕಾಳಿದಾಸ "ಶೈಶವ" "ಯೌವನ" "ವಾರ್ಧಿಕ್ಯ" ಮತ್ತು "ಯೋಗ" ಎಂದು ಕರೆದಿದ್ದಾನೆ. ರಘುವಂಶದ ರಾಜರುಗಳ ಗುಣವನ್ನು ವರ್ಣಿಸುತ್ತ, "ಶೈಶವೇ ಅಭ್ಯಸ್ತವಿದ್ಯಾನಾಮ್, ಯೌವನೇ ವಿಷಯೈಷಿಣಾಂ, ವಾರ್ಧಿಕ್ಯೇ ಮುನಿವೃತ್ತೀನಾಮ್, ಯೋಗೇನಾಂತೇ ತನುತ್ಯಜಾಮ್" ಎಂದು ವಿವರಿಸುತ್ತಾನೆ. (ರಘುವಂಶದ ಅರಸುಮಕ್ಕಳು, ಚಿಕ್ಕವಯಸ್ಸಿನಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ, ವಯಸ್ಸಿಗೆ ಬಂದಾದಮೇಲೆ ವಿಷಯಸುಖಗಳನ್ನು ಚೆನ್ನಾಗಿ ಅನುಭವಿಸಿ, ಆಸೆಗಳೆಲ್ಲ ತೀರಿದನಂತರ ಮುನಿಗಳಂತೆ ಇರುವುದನ್ನು ಕಲಿತು, ಕೊನೆಗೆ ಮುಪ್ಪಿನಲ್ಲಿ ಯೋಗಿಗಳಾಗಿ ಪ್ರಾಣತ್ಯಾಗಮಾಡುತ್ತಿದ್ದರು.)

ಮನುಷ್ಯ ಸುಮಾರು ನೂರುವರ್ಷ ಬಾಳಿದ್ದೇ ಆದರೆ, ಪ್ರತಿ ಹಂತಕ್ಕೂ ಇಪ್ಪತ್ತೈದು ಇಪ್ಪತ್ತೈದು ವರ್ಷಗಳೆಂದು ಇಟ್ಟುಕೊಳ್ಳಬಹುದು. ಎಲ್ಲ ಕಾಲಕಾಲಕ್ಕೆ ಸರಿಯಾಗಿ ನಡೆದರೆ, ಮೊದಲ ಇಪ್ಪತ್ತೈದು ವರ್ಷಗಳು ವಿದ್ಯಾರ್ಜನೆ, ಎರಡನೆಯ ಇಪ್ಪತ್ತೈದು ವರ್ಷಗಳು ಗೃಹಸೌಖ್ಯ ಮತ್ತು ಇಹಲೋಕದ ಆಸೆಗಳನ್ನು ಈಡೇರಿಸಿಕೊಳ್ಳುವ ಅವಕಾಶ, ಐವತ್ತು ದಾಟುವ ಹೊತ್ತಿಗೆ ವೈರಾಗ್ಯದೆಡೆಗೆ ಮನಸ್ಸು ತಿರುಗಿ ಎಪ್ಪತ್ತೈದರ ಹೊತ್ತಿಗೆ ಸಂನ್ಯಾಸ ಸ್ವೀಕಾರವಾಗಬೇಕು. ಕೊನೆಯ ಇಪ್ಪತ್ತೈದು ವರ್ಷಗಳಷ್ಟನ್ನು ಏಕಾಂತದಲ್ಲಿ ತಪಸ್ಸಿನಲಿ ಕಳೆದು ದೇಹತ್ಯಾಗಮಾಡಬೇಕು.

ಚತುರ್ವಿಧ ಪುರುಷಾರ್ಥಗಳು : ಇದೇ ರೀತಿ ಸನಾತನ ಧರ್ಮದಲ್ಲಿ ನಾಲಕ್ಕು ಪುರುಷಾರ್ಥಗಳ ಪ್ರಸ್ತಾಪವಿದೆ. ಅವಕ್ಕೂ ಈ ಮೇಲೆ ತಿಳಿಸಿದ ಜೀವನದ ನಾಲ್ಕು ಘಟ್ಟಗಳಿಗೂ ಹತ್ತಿರದ ಸಂಬಂಧವುಂಟು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವೆಂಬ ನಾಲ್ಕು ಪುರುಷಾರ್ಥಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. "ಏನು ಪುರುಷಾರ್ಥ ಸಾಧಿಸಿದಹಾಗಾಯಿತು?" ಎಂಬ "ರೆಟಾರಿಕಲ್ ಕ್ವೆಶ್ಚನ್" ಅನೇಕ ಬಾರಿ ನಮ್ಮ ಕಿವಿಗೆ ಬಿದ್ದಿರುತ್ತದೆ. ಅಂದರೆ ಈ ಪುರುಷಾರ್ಥಗಳು "ಸಾಧಿಸ" ಬೇಕಾದವು. ಮೊದಲನೆಯದು "ಧರ್ಮ," ಇದರ ತಳಪಾಯ ಜೀವನದ ಮೊದಲ ಘಟ್ಟದಲ್ಲೇ ಅಂದರೆ ಬ್ರಹ್ಮಚಾರಿಯಾಗಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಆಗಬೇಕು.

ಹಾಗಾಗದಿದ್ದರೆ ಇಡೀ ಜೀವನ ತೊಂದರೆ ತಪ್ಪಿದ್ದಲ್ಲ. ಗೃಹಸ್ಥಾಶ್ರಮದಲ್ಲಿ ಅರ್ಥ ಮತ್ತು ಕಾಮಗಳಿಗೆ ಪ್ರಾಮುಖ್ಯತೆ. ಕೊನೆಯದು ಮೋಕ್ಷ ಅಂದರೆ ಬಿಡುಗಡೆ. ಸನಾತನ ಧರ್ಮ ಪುರುಷಾರ್ಥಗಳಬಗ್ಗೆ ತುಂಬಾ ಸ್ಪಷ್ಟವಾದ ತಿಳುವಳಿಕೆಯನ್ನು ನೀಡುತ್ತದೆ. "ಅರ್ಥ"ವನ್ನು ಅಂದರೆ ಹಣ ಮತ್ತು ಅದರಿಂದ ದೊರಕಬಹುದಾದ ಭೌತಿಕ ಸುಖ -- "ಮೆಟೀರಿಯಲ್ ಕಂಫರ್ಟ್ಸ್"ಗಳನ್ನು ಧಾರಾಳವಾಗಿ ದುಡಿಯಬಹುದು (ಅವರವರ ಶಕ್ತ್ಯಾನುಸಾರ). "ಕಾಮ"ಕ್ಕೂ ಒಂದು ಮುಖ್ಯವಾದ ಸ್ಥಾನವನ್ನೇ ಒದಗಿಸಿದ್ದಾರೆ.

ಅಂದರೆ, ಆಸೆಗಳನ್ನು ಈಡೇರಿಸಿಕೊಳ್ಳಲು ಯಾವ ಅಡ್ಡಿಯೂ ಇಲ್ಲ. ಆದರೆ ಅರ್ಥ ಮತ್ತು ಕಾಮ ಇವೆರಡನ್ನೂ ಧರ್ಮಮಾರ್ಗದಿಂದ ಸಂಪಾದಿಸಬೇಕು/ಅನುಭವಿಸಬೇಕು. ಹಾಗೆ ಮಾಡದಿದ್ದರೆ ಕೊನೆಯ ಮತ್ತು ಅತಿ ಮುಖ್ಯವಾದ ಪುರುಷಾರ್ಥ (ಮೋಕ್ಷ) ದಕ್ಕುವುದಿಲ್ಲ. ಒಟ್ಟಿನಲ್ಲಿ ಧರ್ಮಕ್ಕೆ ವಿರುದ್ಧವಲ್ಲದ ಮತ್ತು ನೀತಿ-ನಿಯಮಗಳ ಚೌಕಟ್ಟಿನ ಸೀಮಾರೇಖೆಗಳ ಇತಿಮಿತಿಯಲ್ಲೇ ಅರ್ಥ ಮತ್ತು ಕಾಮಗಳನ್ನು ಪೂರೈಸಿಕೊಂಡರೆ ಮೋಕ್ಷಮಾರ್ಗ ಸುಲಭವಾಗಿ ಲಭ್ಯವಾಗುವುದು ಎಂಬ ಎಚ್ಚರಿಕೆಯನ್ನು ನೀಡುವುದರ ಮೂಲಕ ಇಡೀ ಸಮಾಜದ ಒಳಿತನ್ನು ರಕ್ಷಿಸಿದ್ದಾರೆ.

ನಮ್ಮಲ್ಲನೇಕರು ಜೀವನದ ಮೊದಲ ಘಟ್ಟವನ್ನು ಭಾರತದಲ್ಲಿ ಕಳೆದವರು ಮತ್ತು ಎರಡನೆಯ ಘಟ್ಟವನ್ನು ತಲುಪುವ ಮುನ್ನ ಇಲ್ಲಿಗೆ (ಅಂದರೆ ಅಮೇರಿಕೆಗೆ) ಬಂದವರು. ಎರಡನೆಯ ಘಟ್ಟವಾದ ಗೃಹಸ್ಥಾಶ್ರಮವನ್ನು ಇಲ್ಲಿ ಪ್ರಾರಂಭಿಸಿದವರು. ನಮ್ಮ ತಂದೆತಾಯಿಗಳು ವಾರ್ಧಿಕ್ಯದ ಸಮಯದಲ್ಲಿ ವೈರಾಗ್ಯವನ್ನು ತಳೆದು ವಾನಪ್ರಸ್ಥಾಶ್ರಮಕ್ಕೆ ತೆರಳಿದ್ದನು ನಾವು ಕಂಡಿದ್ದೇವೆ. ಅಂದರೆ ಅವರು ಕಾಡಿಗೆ ಹೋದರೆಂದಲ್ಲ. ಮಕ್ಕಳು ದೊಡ್ಡವರಾದಮೇಲೆ ಮೊಮ್ಮಕ್ಕಳು ಹುಟ್ಟಿದಮೇಲೆ ಸಂಸಾರ ತಾಪತ್ರಯಗಳನ್ನು ಹೆಚ್ಚಾಗಿ ಮನಸ್ಸಿಗೆ ಹಚ್ಚಿಕೊಳ್ಳದೇ ಜಪತಪಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿ ಸುತ್ತಮುತ್ತಲಿನ ಗಡುಬಿಡಿಯ ನಡುವೆಯೂ ಒಂದುರೀತಿಯ ನಿರ್ಲಿಪ್ತತೆಯನ್ನು ಸಾಧಿಸಿದ್ದರೇನೋ ಎನ್ನಿಸುತ್ತದೆ.

ಆದರೆ ನಮ್ಮ ಪರಿಸ್ಥಿತಿ ಹೇಗಿದೆಯೆಂದರೆ, ಮೋಕ್ಷದ ಮಾತು ಹಾಗಿರಲಿ ವಾನಪ್ರಸ್ಥ ಸಹ ಅಸಾಧ್ಯ. ನಮ್ಮ ಹಿಂದಿನ ತಲೆಮಾರಿನ ಅನೇಕ ಪುಣ್ಯವಂತರಂತೆ ನಮ್ಮ ಪೀಳಿಗೆಯವರು ಐವತ್ತೈದಕ್ಕೋ ಐವತ್ತೆಂಟಕ್ಕೋ ಕೆಲಸದಿಂದ ನಿವೃತ್ತಿ ಪಡೆದು ಆರಾಮ ಮಾಡುವುದು ಅಪರೂಪ. "ಅಜರಾಮರವತ್ ಪ್ರಾಜ್ಞೋ ವಿದ್ಯಾಮ್ ಅರ್ಥಂ ಚ ಸಾಧಯೇತ್" (ತಾವು ಮುಪ್ಪಿಲ್ಲದವರು ಮತ್ತು ಸಾವಿಲ್ಲದವರು ಎಂದು ಬಗೆದು ವಿದ್ಯೆ ಮತ್ತು ಹಣವನ್ನು ಗಳಿಸತಕ್ಕದ್ದು) ಎಂಬ ಸುಭಾಷಿತವನ್ನು ನಿಜಮಾಡುತ್ತಿದ್ದಾರೆ. ಆದರೆ ಸುಭಾಷಿತದ ಉತ್ತರಾರ್ಧ ಏನು ಹೇಳುತ್ತದೆ ? "ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್" (ಮೃತ್ಯು ಬಂದು ತಮ್ಮ ಜುಟ್ಟನ್ನು ಹಿಡಿದುಕೊಂಡಿದೆಯೋ ಎಂದು ಬಗೆಯುತ್ತ ಧರ್ಮವನ್ನಾಚರಿಸತಕ್ಕದ್ದು) ಈ ಮಾತಿನತ್ತ ನಮ್ಮ ಗಮನ ಹೋದಂತೆ ಕಾಣುವುದಿಲ್ಲ!

ನಾವು ಅಜರರು, ಅಮರರು, ಎಂದು ಭ್ರಮಿಸುವ ನಮಗೆ ಕೆಲಸದಿಂದ ಮತ್ತು ದುಡಿಮೆಯಿಂದ ಬಿಡುಗಡೆಯೇ ಇಲ್ಲ. ಇನ್ನು ವೈರಾಗ್ಯವೆಲ್ಲಿ, ಗಳಿಸಿದ್ದನ್ನು ಕಳಚಿಕೊಳ್ಳುವ ಅವಕಾಶವೆಲ್ಲಿ? ವರ್ಷಕ್ಕೊಮ್ಮೆಯಾದರೋ ಗ್ಯಾರೇಜನ್ನು ಶುದ್ಧಿಗೊಳಿಸದಿದ್ದಲ್ಲಿ ಕಾರಿಗೆ ಜಾಗ ಇರುವುದಿಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಜೀವನದ ಕೊನೆಯ ಸ್ಪ್ರಿಂಗ್ ಕ್ಲೀನಿಂಗ್ ಮತ್ತು ಗರಾಜ್ ಸೇಲ್ ನಡೆಯುವುದೇ ವಾನಪ್ರಸ್ಥಾಶ್ರಮದಲ್ಲಿ. ಅದನ್ನು ಮಾಡಿದ ಹೊರತು ಕಾಡಿಗೆ ಹೋಗಲು ಬೇಕಾದ ಕಾರನ್ನು ಗರಾಜಿನಿಂದ ಹೊರತೆಗೆಯಲು ಆಗುವುದಿಲ್ಲ. (ಕಾಲಿನಿಂದ ನಡೆದೇ ಹೋಗುವವರಿಗೆ ಕಾರಿನ ಅಗತ್ಯವಿಲ್ಲ ಎನ್ನಬೇಡಿ!)

ಒಂದು ದೇಶ ಬಿಟ್ಟು ಮತ್ತೊಂದು ದೇಶದಲ್ಲಿ ಬಂದು ನೆಲಸಲು ಬೇಕಾದ ಪರಿಶ್ರಮ, ನಮ್ಮ ಜೀವನದ ಒಂದು ದಶಕವನ್ನಾದರೂ ಕಸಿದುಕೊಳ್ಳುತ್ತದೆ. ಹೀಗಾಗಿ ನಮ್ಮ ನಿವೃತ್ತಿ ಮತ್ತು ವಿಶ್ರಾಂತಜೀವನ ಮುಂದೂಡಲ್ಪಡುತ್ತದೆ. ಅದೇಕಾರಣದಿಂದ ನಮ್ಮ ಗೃಹಸ್ಥಾಶ್ರಮದ ಕಾಲವೂ ಹಿಗ್ಗುತ್ತಾ ಹೋಗುತ್ತದೆ. ಮಕ್ಕಳು-ಮರಿಗಳ ಜವಾಬ್ದಾರಿಯೂ ಬೇಗ ಕಳೆಯುವುದಿಲ್ಲ. ಅದಕ್ಕೇ ನಮ್ಮಲ್ಲನೇಕರಿಗೆ ವಾನಪ್ರಸ್ಥದೆಡೆಗೆ ಹೆಜ್ಜೆಹಾಕುವುದು ಸಾಧ್ಯವಾಗದೇ ಹೋಗಬಹುದು. ಇಂಥ ಅಸಹಾಯಕ ಪರಿಸ್ಥಿತಿಯಬಗ್ಗೆ ಚಿಂತಿಸುತ್ತ, ನಮ್ಮ ಇಲ್ಲಿನ ಜೀವನಕ್ಕೆ ಎರಡೇ ಘಟ್ಟಗಳು ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ. ಈ ಮಾತು ಈ ಆಧುನಿಕ ಯುಗದಲ್ಲಿ ಎಲ್ಲ ದೇಶಗಳ ಜನರಿಗೂ ಅನ್ವಯಿಸುತ್ತದೆ.

ಪಾಶ್ಚಿಮಾತ್ಯರ ನಡುವೆ ಬಾಳುತ್ತಿರುವ ನಮಗೆ ಧರ್ಮ ಎಂದರೆ ಎಲ್ಲಿಯ ಧರ್ಮ? ಸನಾತನವೋ ವಿನೂತನವೊ? ಇಲ್ಲಿನ ಧರ್ಮದ ಪ್ರಕಾರ ನಿತ್ಯಯೌವನಶೀಲರಾಗಿರುವುದೇ ಧರ್ಮ. ಇವರಿಗೆ ಅರ್ಥ ಕಾಮಗಳಿಗೆ ಕೊನೆಯಿಲ್ಲ. (ವಯಾಗ್ರ ಇರುವನಕ ಮುಪ್ಪಿಲ್ಲ.) ಇವರಿಗಿರುವುದು ಎರಡೇ ಪುರುಷಾರ್ಥಗಳು! ಧರ್ಮ ಮೋಕ್ಷಗಳ ಗೊಂದಲವಿಲ್ಲ. ಇವರ ಪ್ರಕಾರ ಆಸೆ ಕಳೆದುಕೊಂಡವ ಸತ್ತಹಾಗೆ. ನಾವು ವೈರಾಗ್ಯಶೀಲರಾಗಿ ನಿರ್ಲಿಪ್ತರಾದರೆ ವೃತ್ತಿಜೀವನದಲ್ಲಿ ಎಲ್ಲರೂ ನಮ್ಮ ತಲೆಯಮೇಲೆ ಹೆಜ್ಜೆ ಇಟ್ಟು ಮೇಲೇರುತ್ತಾರೆ.

ಹಾಗೆಂದುಕೊಂಡು, ನಿವೃತ್ತರಾಗೋಣವೆಂದರೆ ಮಾಡಿರುವ ಸಾಲಸೋಲಗಳನ್ನು ತೀರಿಸಲು ದುಡಿಮೆ ಮುಂದುವರೆಸುವುದು ಅನಿವಾರ್ಯವಾಗುತ್ತದೆ. ಒಟ್ಟಿನಲ್ಲಿ ನಾವು ಹೆಣಗುತ್ತಾ ವಾನಪ್ರಸ್ಥವನ್ನು ಮುಂದೂಡುತ್ತೇವೆ, ಅರ್ಥಾತ್, ಕೈಬಿಡುತ್ತೇವೆ. ಈಗ ನೀವೇ ಹೇಳಿ, ಜೀವನದಲ್ಲಿ ನಾಲ್ಕು ಘಟ್ಟಗಳೋ? ಅಥವಾ ಎರಡೇ ಘಟ್ಟಗಳೋ? ಪುರುಷಾರ್ಥಗಳು ನಾಲಕ್ಕೋ ಅಥವಾ ಎರಡೇಯೋ? - ಎಂಬ ಏಕೈಕ ಪ್ರಶ್ನೆಯೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X