ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಂಪಾಸ್ ಬಾಣಸಿಗನ ಬವಣೆಗಳು

By Staff
|
Google Oneindia Kannada News

Cooking is an art of living
ಇದು ಲೇಖನವಲ್ಲ. ನೌಕರಿ ಗುಳುಂ ಆಗಿಬಿಟ್ಟರೆ, ಅಡುಗೆ ಭಟ್ಟನ ಕೆಲಸಕ್ಕೆ ಈಗಲೇ ಹಾಕಿರುವ ಬ್ಲಾಗ್ ಅಪ್ಲಿಕೇಷನ್!

ಭಾಗಶಃ ಎಲ್ಲಾ ಗಂಡಸರು ಒಮ್ಮೆ ಯಾದರು ಅಡುಗೆ ಮನೆಗೆ ನುಗ್ಗಿ ನಳ ಮಹಾರಾಜನ ತರ ಪೋಸ್ ಕೊಟ್ಟು ಅಡುಗೆ ಮಾಡಿರ್ತಾರೆ. (ನುಗ್ಗದೆ ಇದ್ದವರು ಇರಬಹುದು, ನಾನು ಕಂಡಿಲ್ಲ) ಇರಲಿ ನಾನಂತೂ ಇ ಪಾಕ ಗೃಹಕ್ಕೆ ಕಾಲೇಜು ದಿನಗಳಲ್ಲೇ ಕಾಲಿರಿಸಿದ್ದೆ. ಆದರೆ ಅದು ನಮ್ಮ ಮನೇಲಿ ಅಲ್ಲ ಅನ್ನೋದು ಅಷ್ಟೇ ವ್ಯತ್ಯಾಸ. ನಾನು ಅಡುಗೆ ಭಟ್ಟರ ಗ್ಯಾಂಗ್ ಕಾಲೇಜು ದಿನಗಳಲ್ಲಿ ಸೇರಿದ್ದೆ. .!! ತೀರ ಉಪ್ಪು ಕಾರ ಹಾಕೋ ಲೆವೆಲ್ ನಲ್ಲಿ ಕೆಲಸ ಮಾಡ್ತಾ ಇರಲಿಲ್ಲ ವಾದರೂ ತರಕಾರಿ ಹೆಚ್ಚೋದು, ಬಡಿಸೋದು ನಮ್ಮ ಕೆಲಸ. ಅಲ್ಲಿ ಸಿಗೋ ದುಡ್ಡು ಪಾಕೆಟ್ ಮನಿ.

ಒಮ್ಮೆ ಹೀಗೆ ಒಂದು ಗೃಹ ಪ್ರವೇಶ ಕಾರ್ಯ ಕ್ರಮಕ್ಕೆ ಹೋಗಬೇಕಾಯಿತು. ಗೃಹ ಪ್ರವೇಶ ಅದರಲ್ಲೂ ಮಲೆನಾಡಿನಲ್ಲಿ ಅಂದರೆ ಮುಗಿತು. ಅಡುಗೆ ಮಾಡೋರಿಗೆ ಸರಿಯಾದ ಜಾಗ ಇರೋಲ್ಲ, ಸಾಕಷ್ಟು ಸಂದರ್ಬ ದಲ್ಲಿ ಮನೆ ಕೆಲಸ ಕೂಡ ಪೂರ ಮುಗಿದಿರೋಲ್ಲ. ಆದರು ಅದರಲ್ಲೇ ರಾತ್ರೆ ಪೂರ ಹೋಮ ಹವನಾದಿ ಗಳು ನಡಿಬೇಕು ಹಾಗು ಅದೇ ಮನೆಯ ಹಿತ್ತಿಲಲ್ಲಿ ನಾವು ಅಡುಗೆ ಮಾಡಬೇಕು. ಸರಿ ಅವತ್ತು ಇದ್ದವರು 3 ಜನ, ಸುಮಾರು 150 ಜನಕ್ಕೆ ಮರುದಿನ ಊಟವಿತ್ತು. ಮೂವರಲ್ಲಿ ಒಬ್ಬ ನಾನು, "ಮೈನ್ ಭಟ್ಟರು", ಮತ್ತೊಬ್ಬ ಅವರ ಅವರ ಅಣ್ಣನ ಮಗ ರಘು. ರಘು ಶಿವಮೊಗ್ಗೆ ಯಲ್ಲಿ ಅಡುಗೆ ಕೆಲಸ ಮಾಡ್ತಾ ಇದ್ದ. ನಾವುಗಳು ಸಂಜೆ ನಾಲ್ಕಕ್ಕೆ ಕೆಲಸ ಶುರು ಮಾಡಿದೆವು. ಭಟ್ಟರು ಸಾರಿನ ಪುಡಿ, ಸಾಂಬಾರ್ ಪುಡಿ, ಪುಳಿಯೋಗರೆ ಗೆ ಹುರಿತಾ ಇದ್ದರು. ನಾನು ಅದನ್ನ ಒಂದು ಕೆಟ್ಟ mixer ನಲ್ಲಿ ಪುಡಿ ಮಾಡ್ತಾ ಇದ್ದೆ. (ಸಾಮನ್ಯ ವಾಗಿ ಅಡುಗೆ ಭಟ್ಟರಿಗೆ ಒಳ್ಳೆ ಮಿಕ್ಸರ್ ಕೊಡೋಲ್ಲ, ಬೇಕಾಬಿಟ್ಟಿ ತುಂಬಿ ಕೆಡಿಸ್ತಾರೆ ಅಂತ. ) ಭಟ್ಟರು ತರಾ ತುರಿ ಯಲ್ಲಿ ಹುರಿದು, ರಘು ಗೆ ನಾಳಿನ ಅಡುಗೆ ಗಳ ಬಗ್ಗೆ ವಿವರಿಸಿ ಬಾದುಶ ಮಾಡಲು ಹಿಟ್ಟು ಕಲೆಸಿ ದರು. ಆಮೇಲೆ ನಂಗೆ ಸುಮಾರು 250 ಬಾದುಶ ಮಾಡಲು, ಹಾಗು ರಘು ಗೆ ಸಿಹಿ ಬೂಂದಿ ಕಾಲು ಮಾಡಲು ಹೇಳುತ್ತಾ ಹೊರಡಲು ಅನುವಾದರು. ನಾವು ಮುಖ ಮುಖ ನೋಡುವ ಹೊತ್ತಿಗೆ, ಅವರು ಸ್ನಾನ ದ ಮನೆಗೆ ಹೋಗಿಬಿಟ್ಟಿದ್ದರು. ಆಮೇಲೆ ತಿಳಿಯಿತು... ಗೃಹ ಪ್ರವೇಶದ ಪುರೋಹಿತರು ಕೂಡ ಅವರೇ ಅಂತ. ಭಾಗಶಃ buy one get one free ಅಂತ ಘೋಷಣೆ ಮಾಡಿದ್ರೋ ಏನೋ..

ನಾನು ಅಂದು ಕೊಂಡೆ ರಘು ದೊಡ್ಡ ಅಡುಗೆ ಭಟ್ಟ, ಅವನಿಗೆ ಎಲ್ಲಾ ಬರುತ್ತೆ, ಸಧ್ಯಕ್ಕೆ ಅವನೇ ನನ್ನ ಟೀಂ ಲೀಡರ್ ಅಂತ. ನನ್ನ ಮುಂದೆ ಸುಮಾರು 250ಬಾದುಶ ಕರಿಯಲಿಕ್ಕೆ ಇತ್ತು. ನಾನು ಕಷ್ಟ ಪಟ್ಟು ಸೌದೆ ಒಲೆಲಿ ಎಣ್ಣೆ ಕಾಯಿಸಿ, ಅ ಹೊಗೆಗೆ ಕಣ್ಣು ಕೆಂಪಾಗಿಸಿ ಕೊಂಡು ಕಾರ್ಯೋನ್ಮುಕ ನಾದೆ. ರಘು ತರಕಾರಿ ಹೆಚ್ಚಲನುವಾದ. ಸುಮಾರು ರಾತ್ರೆ 12 ರ ಹೊತ್ತಿಗೆ ನಮ್ಮ ಕೆಲಸಗಳು ಮುಗಿಯಿತು. ಇನ್ನು ಬೂಂದಿ ಕಾಳು ಮಾಡೋದು ಒಂದೇ ಬಾಕಿ ಇತ್ತು. ರಘು ಗೆ ಅದನ್ನು ಮಾಡಲು ಹೇಳಿದೆ, ಎಣ್ಣೆ ಬಿಸಿ ಇರೋದ್ರಿಂದ 10 ನಿಮ್ಷ ದಲ್ಲಿ ಕೆಲಸ ಮುಗಿಸಿ ಮಲಗ ಬಹುದು ಅಂತ. ರಘು ಗೆ ಒಮ್ಮೆಲೇ ಆಶ್ಚರ್ಯ, ನೀನೆ ಮಾಡು, ನಾನು ಯಾವತ್ತು ಬೂಂದಿ ಕಾಳು ಇರಲಿ, ಹಪ್ಪಳ ಕೂಡ ಕರಿದು ಗೊತ್ತಿಲ್ಲ ಅಂದ. ಅವನ ಕಣ್ಣಿಗೆ ನಾನು ನಳ ಮಹಾರಾಜನೋ, ಭೀಮನೂ.. ಏನೋ. ಅ ಸಮಯ ಹೆಂಗಿತ್ತು ಅಂದರೆ ಅನಕ್ಷರಸ್ತರು IAS ಬರೀಲಿಕ್ಕೆ ಹೋದಂಗೆ ಇತ್ತು. ನಮ್ಮ ಸಮಸ್ಯೆ ಬೂಂದಿ ಕಾಳು ಮಾತ್ರ ಆಗಿರಲಿಲ್ಲ, ನಾಳೆ 150 ಜನಕ್ಕೆ ಹೇಗೆ ಅಡುಗೆ ಮಾಡೋದು, ಎಷ್ಟು ಅನ್ನ, ಸಂಬಾರ ಮಾಡಬೇಕು? ಇಬ್ಬರ ಸ್ಥಿತಿ ಕರೆಂಟ್ ಹೊಡೆದ ಕಾಗೆ ತರ ಆಗಿತ್ತು.

ಭಟ್ಟರು ರಘು ಗೆ ಎಲ್ಲ ಅಡುಗೆ ಮಾಡೋಕೆ ಬರುತ್ತೆ ಅಂತ ತಿಳಿದಿದ್ದರು ಅನ್ಸುತ್ತೆ. ಅದೂ ಅಲ್ಲದೆ ಅವನು ಇದ್ದಿದ್ದು ಶಿವಮೊಗ್ಗ ದಂತ ಪೇಟೆ ಲಿ, ಅವರು ಅವನ ಬಗ್ಗೆ ಹಾಗೆ ತಿಳಿದಿದ್ದು ತಪ್ಪೇನು ಇರಲಿಲ್ಲ. ಸರಿ ಇಬ್ಬರು ಸೇರಿ ಬೂಂದಿ ಮಾಡಲು ಹಿಟ್ಟು ಕಲೆಸಿ, ಕರಿಯಲು ಶುರು ಮಾಡಿದೆವು. ಆದರೆ ಮೊದಲ ಹೆಜ್ಜೆ ನೆ ತಪ್ಪು. ನಮಗೆ ಅದನ್ನ ಹೆಂಗೆ ಮಾಡೋದು ಗೊತ್ತಿಲ್ಲ. (ಬೂ೦ದಿಕಾಳಿಗೆ ಸ್ವಲ್ಪ ದೊಡ್ಡ ಬೂಂದಿ ಬೇಕು, ಲಾಡಿನ ಉಂಡೆ ಮಾಡಲು ಚಿಕ್ಕ ಕಾಳುಗಳು ಬೇಕು) ಕರಿದೆವು.. ಅದು ಪೂರ ಚಿಕ್ಕ ಚಿಕ್ಕ ಕಾಳುಗಳು ಆಗಿತ್ತು. ಅದನ್ನ ಬಡಿಸಲು ಸಾಧ್ಯವೇ ಇರಲಿಲ್ಲ. ನಾಳೆಗೆ ಸಿಹಿ ಬೂಂದಿ ಬೇಕೇ ಬೇಕು. ಸಮಯ ಬೇರೆ ಮೀರುತ್ತಾ ಇತ್ತು. ರಘು ಒಂದು ಬೀಡಿ ಹಚ್ಚಿ ಕೂತ. ಸ್ವಲ್ಪ ಹೊತ್ತಿನ ನಂತರ ನಾವು ಲಾಡಿನ ಉಂಡೆ ಮಾಡೋಣ ಎಂದ. ಬೀಡೀಲಿ ಐಡಿಯಾ ಗಳನ್ನೂ ಹಿಡಿಯೋ ಅಂಟೆನಾ ಏನಾದ್ರು ಇತ್ತ ಅಂತ. ಅಂತು ಮಧ್ಯ ರಾತ್ರೆ ಸಕ್ಕರೆ ಪಾಕ ಮಾಡಲು ಕುಳಿತೆವು. ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿದೆವು. ದುರದೃಷ್ಟಕ್ಕೆ ಪಾಕ ನೀರಾಗಿತ್ತು, ಉಂಡೆ ಮಾಡುವ ಹಾಗೆ ಇರಲಿಲ್ಲ. ಅಷ್ಟು ಕಡಲೆ ಹಿಟ್ಟು, ಸಕ್ಕರೆ.. ಎಲ್ಲಾ ವೇಸ್ಟ್ ಆಗುತ್ತಲ್ಲ ಅಂತ ಬೇಜಾರು... ರಘು ಮತ್ತೆ ಒಂದು ಬೀಡಿ ಗೆ ಮೊರೆ ಹೋದ.

ಬೀಡಿ ಇಂದ ಐಡಿಯಾ ಬೇಗನೆ ಅವನಿಗೆ ಬಂತು, ಸ್ವಲ್ಪ ಏರಿದ ಪಾಕ ಮಾಡಿ ಹಾಕಿದರೆ ಸರಿ ಆಗುತ್ತೆ ಅಂದ. ಕೈಯಲ್ಲಿ ಬೀಡಿ ಇಟ್ಟುಕೊಂಡು ಪಾಕ ಮಾಡೋಕೆ ಶುರು ಮಾಡಿದ, . ನಾನು ಅವನ ಬೀಡಿ ಯಾರಿಗೂ ಗೊತ್ತಾಗದೆ ಇರಲಿ ಅಂತ ಹಿತ್ತಿಲನ್ನ ಹೊಗೆ ಮಾಡಿ ಬಿಟ್ಟೆ. (ಇದ್ದಕ್ಕಿದ್ದಂತೆ ಅಡುಗೆ ಮನೆ ಇಂದ ಹೊಗೆ ಬರ್ತಾ ಇದೆ ಅಂದ್ರೆ, ಏನೋ ಕಿತಾ ಪತಿ ನಡೀತಾ ಇದೆ ಅಂತ ಅರ್ಥ.. ). ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿ ದೇವು. ಸ್ವಲ್ಪ ಅದೃಷ್ಟ ಅನ್ಸುತ್ತೆ, ಉಂಡೆ ಮಾಡಲು ಬಂತು. ಒಂದಷ್ಟು ದೊಡ್ಡ , ಒಂದಷ್ಟು ಚಿಕ್ಕ.. ಅನನುಬವಿ ಗಳು. ಅಂತು 150 ಲಾಡು ಕಟ್ಟಿ ಮಲಗಲು ತಯಾರಾದೆವು.

ಆದರೆ ನಿದ್ದೆ ಎಲ್ಲಿಂದ ಬಂದೀತು? ಮಾರನೆಯ ದಿನಕ್ಕೆ ಎಲ್ಲಾ ತಯಾರು ಮಾಡಬೇಕು, ಅದೇ ಯೋಚನೆ. ಕಣ್ಣು ಮುಚ್ಚಿದರೆ ಹೊಗೆಯ ಪ್ರಭಾವ, ಸಿಕ್ಕಾಪಟ್ಟೆ ಉರಿ. ಅಂತು ಬೆಳಿಗ್ಗೆ 5 ಕೆ ಎದ್ದು ಸ್ನಾನ ಮಾಡಿ ಹಾಲು ಕಾಯಿಸಿ, 2 ಕಪ್ ಕಾಫಿ ಕುಡಿದು ಕೆಲಸ ಶುರು ಮಾಡಿದೆವು. ಬೀಳೆ ಬೇಯಲು, ತರಕಾರಿ ಬೇಯಿಸಲು ಹಾಕಿದೆವು. ಎಷ್ಟು ಸಾರು, ಸಾಂಬಾರು, ಪಾಯಸ ಬೇಕು ಅಂತ ಗೊತ್ತಿಲ್ಲ. ಸುಮ್ಮನೆ ಒಂದು ಅಂದಾಜಿಗೆ ಹಾಕಿದೆವು. ಸಾರು ಮುಂತಾದವು ಟ್ರಯಲ್ ಅಂದ ಎರರ್ ಮೆಥಡ್. ಸ್ವಲ್ಪ ಕುಡಿದು ನೋಡೋದು, ಉಪ್ಪು ಕಡಿಮೆ ಇದ್ರೆ ಉಪ್ಪು ಸೇರಿಸೋದು, ಮತ್ತೆ ಟೇಸ್ಟ್ ಮಾಡೋದು. ಹೀಗೆ ನಡೀತು. ಅಂತು 12 ರ ಸುಮಾರಿಗೆ ಎಲ್ಲಾ ಕೆಲಸ ಮುಗೀತು. ಸ್ವಲ್ಪ ಹೊತ್ತಲ್ಲಿ ಊಟದ ಕಾರ್ಯಕ್ರಮ ಶುರು ಆಯಿತು. ಮಲೆನಾಡಲ್ಲಿ ಬಡಿಸಲಿಕ್ಕೆ ವಾಲಂಟೀರ್ ಗಳು ತುಂಬಾ ಇರೋದ್ರಿಂದ ಅವರೇ ಬಡಿಸ್ತಾರೆ. ನಮ್ಮದೇನಿದ್ದರೂ ಅಡುಗೆ ಮಾತ್ರ. ಸ್ವಲ್ಪ ಜನರ ಊಟ ಆಗ್ತಾ ಇದ್ದ ಹಾಗೆ ಸಾಂಬಾರು ಖಾಲಿ!! ಆಲೂಗಡ್ಡೆ ಬೀನ್ಸ್ ಹುಳಿ ಮುಗಿದೇ ಹೋಯಿತು. ಟೊಮೇಟೊ ಸಾರು ಮಾತ್ರ ಸಿಕ್ಕಾಪಟ್ಟೆ ಇದೆ. ಏನು ಮಾಡೋದು?

ರಘು ಮತ್ತೆ ಬೀಡಿಗೆ ಶರಣಾದ. 2 ನಿಮಿಷ ದ ನಂತರ ಒಂದು ಬರೋಬ್ಬರಿ ಐಡಿಯಾ ಜೊತೆ ಬಂದ. ಜಾಸ್ತಿ ಇದ್ದ ತೊಂಡೆ ಕಾಯಿ ಪಲ್ಯ, ಟೊಮೇಟೊ ಸಾರು ಎರಡು ಮಿಕ್ಸ್!!! ಇನ್ಸ್ಟಂಟ್ ಸಾಂಬಾರು ರೆಡಿ!! ಒಂದು ಸಮಸ್ಯೆ ಮುಗೀತು ಅಂದ್ರೆ ಮತ್ತೊಂದು, ಪಾಯಸ ಖಾಲಿ, ಏನು ಮಾಡೋದು, ರಘು ಗೆ ಬೀಡಿ ಲೂ ಐಡಿಯಾ ಖಾಲಿ. 5 ನಿಮಿಷ ದಲ್ಲಿ ಪಾಯಸ ಬೇಕು. ನಂಗೆ ತಲೆ ಕೆಡುತ್ತಾ ಇತ್ತು. ಅನ್ನ ಬಸಿದಿದ್ದ , ಗಂಜಿ ತೆಗೆದು ಶಾವಿಗೆ ಪಾಯಸಕ್ಕೆ ಹಾಕಿದೆ, ಅರ್ದ ಲೀಟರ್ ಹಾಲು, ಒಂದು ಕೆಜಿ ಸಕ್ಕರೆ ಹಾಕಿದೆ. ರಘು ಒಂದಿಷ್ಟು ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ ಎಲ್ಲಾ ಹಾಕಿ ಸುವಾಸನೆ ಮಾಡಿಬಿಟ್ಟ. ಎರಡೇ ನಿಮಿಷ ದಲ್ಲಿ ಘಮ ಘಮ ಪಾಯಸ ರೆಡಿ!!

ಅಂತು ಕೊನೆಗೆ ಊಟದ ಕಾರ್ಯ ಕ್ರಮ ಮುಗಿತು. ನಮಗೆ ಭಟ್ಟರು ಎಲ್ಲಿ ಬಂದು ಉಗಿತಾರೋ ಅನ್ನೋ ಭಯ. ರಘು ಗೆ ಚಿಕ್ಕಪ್ಪ ನ ಕಂಡು ಸ್ವಲ್ಪ ಹೆದರಿಕೆ. ಭಟ್ಟರ ಬಳಿ ದುಡ್ಡನ್ನ ಇನ್ನೊಮ್ಮೆ ತಗೋಬಹುದು ಅಂತ ಮನೆಗೆ ಹೊರಟು ಬಿಟ್ಟೆ. ರಘು ನು ಅರ್ಜೆಂಟ್ ಅಂತ ಶಿವಮೊಗ್ಗೆ ಗೆ ಹೊರಟ. ಸುಮಾರು 15-20 ದಿನ ಆದ ಮೇಲೆ ಸಂತೇಲಿ ಸಿಕ್ಕ ಭಟ್ಟರು ಅವತ್ತು ಹಂಗೆ ಓದಿ ಬಿಟ್ಯಲ್ಲೋ ಶಾಸ್ತ್ರೀ, ತಗೋ ಅಂತ 200 ರುಪಾಯಿ ಕೊಟ್ಟರು. ಭಾಗಶ್ಯಃ ಅವತ್ತು ನಮ್ ಅಡುಗೆ ತಿಂದು ಯಾರ ಆರೋಗ್ಯ ನು ಕೆಟ್ಟಿರಲಿಲ್ಲ ಅನ್ಸುತ್ತೆ.

ಇ ಪ್ರಸಂಗ ಆದಮೇಲೆ ನಾನು ಯಾವತ್ತು ಪ್ರಯೋಗ ಮಾಡಲಿಕ್ಕೆ ಹೋಗಲಿಲ್ಲ. ಇತ್ತೀಚಿಗೆ ಮಾಡೋ ಸಣ್ಣ ಪುಟ್ಟ ಪ್ರಯೋಗ ಗಳು ನಂ ರೂಂ ಮೆಟ್ ವರುಣ ನ ಮೇಲೆ ಮಾತ್ರ!. ಪಾಪ ಅವನು ನಾನು ಎಂತ ಕರಾಬು ಅಡುಗೆ ಮಾಡಿದ್ರು ನಂಗೆ ಗೊತ್ತಾಗೋ ಹಾಗೆ ಬೈದು ಕೊಳ್ಳಲ್ಲ.ಇಷ್ಟೆಲ್ಲಾ ವಿಷ್ಯ ಯಾಕೆ ನೆನಪಿಗೆ ಬಂತು ಅಂದ್ರೆ, ರೆಸೆಶನ್!! ಕೈಯಲ್ಲಿ ಇರೋ ಕೆಲಸ ಹೋದ್ರೆ ವಾಪಾಸ್ ಕೈಯಲ್ಲಿ ಸೌಟು ಹಿಡಿಯೋ ಪ್ಲಾನ್ ಇದೆ!! ನಿಮ್ಮಗಳ ಮನೇಲಿ ಏನಾದ್ರು ಕಾರ್ಯಕ್ರಮ ಇದ್ದರೆ ದಯವಿಟ್ಟು ಅಡುಗೆ ಕಂಟ್ರಾಕ್ಟ್ ನ ನಂಗೆ ಕೊಡಬೇಕಾಗಿ ವಿನಂತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X