• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಪೊರಕೆ ಓಬವ್ವ'ಮಾಡಿದ ಪ್ರಾಣಿಹತ್ಯೆ!

By Staff
|

ಅಂತೂ ಮುಕ್ಕೋಟಿ ದೇವತೆಗಳನ್ನೆಲ್ಲ ನೆನೆದು, ವೀರಗಚ್ಚೆ ಹಾಕಿನಿಂತು, ಹಲ್ದವಡೆಗಳನ್ನು ಕಚ್ಚಿ ಹಿಡಿದು, ಇದ್ದ ಶಕ್ತಿಯನ್ನೆಲ್ಲ ಒಂದುಗೂಡಿಸಿ, ಪೊರಕೆಯನ್ನು ಹಿಡಿದೆತ್ತಿ ಜಿರಳೆಯ ತಲೆಗೆ ಒಂದೇಟು ಹಾಕಿಯೇ ಬಿಟ್ಟೆ. ನನ್ನ ಕಣ್ಣುಗಳು ತನ್ನಷ್ಟಕ್ಕೆ ಮುಚ್ಚಿದ್ದವು. ಹಿಂದೆಂದೂ ಮಾಡಿರದ ಘನಘೋರಕಾರ್ಯ. ಫಲ ಏನಾಗಿದೆಯೊ ನೋಡೋಣವೆಂದು ಕಣ್ತೆರೆದಾಗ...

  • ಅನುಶ್ರೀ, ಮಂಗಳೂರು

ಅನುಶ್ರೀ, ಮಂಗಳೂರುಅದೊಂದು ರಾತ್ರಿ.ಮನೆಯವರೆಲ್ಲ ಆಗಲೇ ನಿದ್ದೆಹೋಗಿ ತಂತಮ್ಮ ಕನಸಿನ ಲೋಕದಲ್ಲಿ ತೇಲುತ್ತಿದ್ದರು. ನಾನು ಮಾತ್ರ ಪುಸ್ತಕ ಹಿಡಿದು ಏನನ್ನೋ ಓದುತ್ತಿದ್ದೆ. ಅಥವಾ ಹಾಳೆಗಳನ್ನು ತಿರುವಿಹಾಕುತ್ತಿದ್ದೆ ಎಂದರೂ ನಡಿಯತ್ತೆ. ಏನೋ ಗುನುಗಿಕೊಳ್ಳುತ್ತಿದ್ದ ಬಾಯಿ ಆ... ಎಂದು ತನ್ನಷ್ಟಕ್ಕೇ ದೊಡ್ಡದಾಗಿ ತೆರೆದುಕೊಂಡಾಗ ಕಣ್ಣುಗಳು ಗೋಡೆಯ ಮೇಲಿನ ಗಡಿಯಾರದತ್ತ ಹೊರಳಿದವು. ಮುಳ್ಳುಗಳೆರಡೂ ಹನ್ನೆರಡರ ಮೇಲೆ ಬಂದು ನಿಂತಿದ್ದವು. ಇನ್ನು ಮಲಗದಿದ್ರೆ ನಾಳೆ ಕ್ಲಾಸ್‌ನಲ್ಲಿ ಬೆಲ್ಲತೂಗಬೇಕಾದೀತು ಎಂದವಳೇ ಮೆಲ್ಲನೆ ಮಲಗಲು ಹೊರಟೆ.

ಅಂದು ಕ್ಲಾಸಲ್ಲಿ ಕಲಿತಿದ್ದ ಕೆಮೆಸ್ಟ್ರಿ ಸೂತ್ರಗಳನ್ನು ಮನನ ಮಾಡುತ್ತಾ, ಹಾಗೇ ನಡೆದುಕೊಂಡು ಹಾಸಿಗೆಯ ಪಕ್ಕ ಬಂದವಳನ್ನು ಮೀಸೆ ತಿರುವುತ್ತಾ ಸ್ವಾಗತಿಸುತ್ತಿತ್ತು ಒಂದು ಜಿರಳೆ! ಅಬ್ಬ! ನನ್ನ ಆಜನ್ಮ ಶತ್ರು. ನನಗೆ ಗುಡ್‌ನೈಟ್ ಹೇಳೋದಕ್ಕೆ ಬಂತೆ? ಅದನ್ನು ನೋಡಿದ ಮೇಲೆ ನನಗೆ ಇನ್ನೆಲ್ಲಿಯ ಗುಡ್‌ನೈಟು? ಕಾಲುಗಳೆರಡೂ ಹಾಗೇ ಹಿಂದಕ್ಕೆ ಸರಿದವು. ಈಗ ಏನಪ್ಪ ಗತಿ? ನೆನಪಿಗೆ ಬಂದ ಎಲ್ಲ ದೇವರುಗಳಿಗೂ ಕಣ್ಮುಚ್ಚಿ ಮನದಲ್ಲೇ ಸಾಷ್ಟಾಂಗ ನಮಸ್ಕಾರ ಮಾಡಿ ಬೇಡಿಕೊಂಡೆ. ಕಣ್ಣು ಬಿಟ್ಟಾಗ... ಏನಾಶ್ಚರ್ಯ! ಜಿರಳೆ ಮಾಯ! ಆಹಾ, ದೇವರು ನಿಜವಾಗ್ಲೂ ಕರುಣಾಮಯಿ ಆಂತಂದುಕೊಳ್ಳುತ್ತಾ ಮುಂದೆ ಹೋದರೆ ಹ್ಹೆ, ಹ್ಹೆ, ನಾನು ಹೋಗಿಲ್ಲ. ಇಲ್ಲೇ ಇದ್ದೇನಲ್ಲ... ಅಂತ ಹಾಸಿಗೆಯ ಮರೆಯಿಂದ ಮತ್ತೆ ಇಣುಕಿತು ಜಿರಳೆ. ಬಹುಶಃ ಗಂಧದಗುಡಿ ಚಿತ್ರದ "ಎಲ್ಲೂ ಹೋಗೊಲ್ಲ... ನಾನು, ಎಲ್ಲೂ ಹೋಗೋಲ್ಲ..." ಅಂತ ಹಾಡು ಹೇಳಿಕೊಂಡಿತ್ತೇನೊ.

ಆಗ ತಕ್ಷಣ ನೆನಪಾದವರು ನನ್ನ ಮಾವ. ಜಿರಳೆಸಂಹಾರ ಅವರಿಗೆ ಅದೆಷ್ಟು ಸಲೀಸಾದ ವಿಚಾರ ಅಂತೀರಿ! ಮನೆಯಲ್ಲಿ, ಯಾರೇ ಆಗಲಿ ಎಲ್ಲೇ ಜಿರಳೆ ಕಂಡರೂ ತಕ್ಷಣ ಅವರನ್ನೇ ಕೂಗುವುದು. ಅವರು ಕೈಯ್ಯಲ್ಲೊಂದು ಪೊರಕೆ ಹಿಡ್ಕೊಂಡು ಬಂದು 'ನನ್ನ ಮುಂದೆ ಮೀಸೆ ತಿರುವಲು ನಿನಗೆಷ್ಟು ಧೈರ್ಯ?' ಎಂದು ಒಂದು ಬಲವಾದ ಏಟು ಹಾಕಿದ್ರೆ, ಜಿರಳೆ ಪಡ್ಚ.

ಈಗ ಅವರನ್ನು ಕರಿಯೋ ಹಾಗಿಲ್ಲ, ಮಲಗಿದಾರಲ್ಲ. ನಿಧಾನಕ್ಕೆ ಮನಸ್ಸು, ಮನೆಯಲ್ಲಿ ಯಾವುದಾದ್ರೂ ಜಿರಳೆಹಿಟ್ಟು (Cockroach Hit) ಇದೆಯೊ ಅಂತ ಹುಡುಕತೊಡಗಿತು. ತಿಂಗಳ ಹಿಂದೆ ಒಂದು ತಂದಿರಬೇಕು. ಎಲ್ಲಿದೆ ಅಂತ ಹುಡುಕುತ್ತಾ ಇದ್ದಾಗ, ಮರಳುಗಾಡಿನಲ್ಲಿ ನಡೆಯುತ್ತಿದ್ದವಳಿಗೆ ಓಯಸಿಸ್ ಸಿಕ್ಕಂತೆ ಒಂದು ಕಡೆ ಸಿಕ್ಕಿತು. ಅದನ್ನು ಕೈಗೆತ್ತಿಕೊಂಡು ನೋಡಿದ್ರೆ, ಅದು ಪೂರ್ತಿ ಖಾಲಿ. ಕೈಗೆ ಸಿಕ್ಕಿದ ಹಿಟ್ಟು ಬಾಯಿಗೆ ಬರ್ಲಿಲ್ಲ! ಇನ್ನೇನು ದಾರಿ?

ಹಾ... ಲಕ್ಷ್ಮಣರೇಖೆ! ಮನೆಯಲ್ಲಿ ಅಮ್ಮ ರಂಗೋಲಿ ಹಾಕುವಷ್ಟೇ ಭಕ್ತಿಯಿಂದ ಲಕ್ಷ್ಮಣರೇಖೆಯನ್ನೂ ಎಳೆಯತ್ತಿದ್ದರು, ಜಿರಳೆಗಾಗಿ. ಅದನ್ನು ದಾಟಿದರೆ ಆ ಜಿರಳೆಗೆ ಮತ್ತೆ ಪರಲೋಕವೇ ಗತಿಯೆಂಬ ನಂಬಿಕೆ. ಹಾಗೆ ನಂಬಿಸುತ್ತಾರೆ ಜಾಹೀರಾತಿನವರು. ಯಾವತ್ತೋ ಒಂದು ದಿನ ತಪ್ಪಿ ನನ್ನ ಬ್ಯಾಗಿನಲ್ಲಿ ಸೇರಿಕೊಂಡಿದ್ದ ಲಕ್ಷ್ಮಣರೇಖೆ ಬಳಪದ ನೆನಪಾಯ್ತು. ಆದರೆ ಅದನ್ನೆಲ್ಲಿಟ್ಟಿದ್ದೇನಪ್ಪಾ ನೆನಪಾಗ್ತಿಲ್ವೇ? ಅಯ್ಯೋ, ಸ್ಕೂಲ್‌ಡೇ ವೇಳೆ 'ಜ್ಞಾಪಕ ಶಕ್ತಿ' ಸ್ಪರ್ಧೆಗೂ ಇಷ್ಟು ಕಷ್ಟಪಟ್ಟಿರಲಿಲ್ಲ. ನನ್ನ ನೆನಪಿನ ಶಕ್ತಿಗೆ ಇದು ದೊಡ್ಡ ಸವಾಲೆನಿಸಿತು. ನಾಲ್ಕು ಸಲ ತಲೆ ಕೆರೆದುಕೊಂಡಾಗ ನೆನಪಾಯ್ತು. ಹೌದು, ಆ ಕಪಾಟಿನಲ್ಲಿಟ್ಟಿದ್ದೇನೆ. ಆದರೆ... ಆ ಕಪಾಟಿನ ಬಳಿ ಹೋಗ್ಬೇಕಾದ್ರೆ ಈ ಜಿರಳೆಯನ್ನು ದಾಟಿಕೊಂಡೇ ಹೋಗ್ಬೇಕು. ಅಯ್ಯೋ ವಿಧಿಯೇ... ಇದು ನನಗೇ ಲಕ್ಷ್ಮಣರೇಖೆ ಆಯ್ತಲ್ಲಾ!!?

ಅಲ್ಲ, ಈ ಜಿರಳೆಯ ತಾಳ್ಮೆ ನೋಡಿ. ಅಷ್ಟು ಹೊತ್ತಿನಿಂದ ಸ್ವಲ್ಪವೂ ಕದಲದೇ ಅಲ್ಲೆ ಇದೆ. ಜೀವ ಇದೆಯಾ ಅಂತ ಅನುಮಾನ ಬಂದು ನಾನು ಮೆಲ್ಲನೆ ಇಣುಕಿ ನೋಡಿದೆ. ನನ್ನ ಇರವನ್ನು ಗಮನಿಸಿದ ಅದು, ಹಲೋ ಎಂದು ಮೀಸೆಯಾಡಿಸುತ್ತ ಮುಸಿಮುಸಿ ನಕ್ಕಂತೆ ಕಂಡಿತು. ಹುಂ, ಜೀವ ಇದೆ, ಇದು ಹೀಗೇ ಮುಂದುವರಿದರೆ ನನಗಿವತ್ತು ಜಾಗರಣೆಯೇ ಗತಿ.

ಇದ್ದಬದ್ದ ಧೈರ್ಯವನ್ನೆಲ್ಲ ಕಲೆಹಾಕಿ ಮನಸ್ಸು ಗಟ್ಟಿ ಮಾಡಿಕೊಂಡು ಒಂದು ನಿರ್ಧಾರಕ್ಕೆ ಬಂದೆ. ಆದದ್ದು ಆಗಲಿ, ಇವತ್ತು ಒಂದು ಭೀಕರ ಕೊಲೆ ಮಾಡಿಯೇ ಬಿಡೋದು. ಮುಂದಿನದ್ದನ್ನು ಆಮೇಲೆ ನೋಡ್ಕೊಳ್ಳೋಣ ಅಂತ ಮೂಲೆಯಲ್ಲಿ ಗೊರಕೆಹೊಡೆಯುತ್ತಿದ್ದ ಪೊರಕೆಯನ್ನು ಹಿಡಿದು ಬಂದೆ.

ಕನ್ನಡನಾಡಿನ ವೀರರಮಣಿ 'ಒನಕೆ ಓಬವ್ವ'ಳ ನೆನಪಾಯ್ತು. ಯಃಕಶ್ಚಿತ್ ಜಿರಳೆಯೊಂದನ್ನು ಹೊಡೆಯಲು ನಾನಿಷ್ಟು ಹೆದರುತ್ತಿದ್ದೇನೆ, ಅವಳು ಅಷ್ಟೊಂದು ಸೈನಿಕರನ್ನು ಅದು ಹೇಗೆ ಕೊಂದಳೋ!? ತಾಯೀ... ನಿನ್ನ ಶಕ್ತಿಯ ನೂರನೇ ಒಂದಷ್ಟನ್ನಾದರೂ ನನ್ನಲ್ಲಿ ತುಂಬಮ್ಮ... ಎಂದು ಬೇಡಿಕೊಳ್ಳುತ್ತ ನನ್ನ ಗುರಿಯತ್ತ ನಡೆದೆ. ಇಲ್ಲಿ ಇನ್ನೊಂದು ಸಮಸ್ಯೆ. ಆ ಜಿರಳೆ ದರಿದ್ರದ್ದು ನೆಲದಲ್ಲಿ ಸ್ವಲ್ಪ ಹರಡಿದ್ದ ನನ್ನ ಹಾಸಿಗೆಯ ಹೊರಹೊದಿಕೆಯ ಮೇಲೆ ಕುಳಿತಿದೆಯಲ್ಲ! ಅಲ್ಲೇ ನಾನದರ ಹತ್ಯೆಮಾಡಿದರೆ ಆ ಬಟ್ಟೆ ರಕ್ತಸಿಕ್ತವಾಗುತ್ತದಲ್ಲ? ಛೀ... ಎಂಥಾ ಹುಚ್ಚು ಯೋಚನೆ! ಜಿರಳೆಗೆ ನಮ್ಮಂತೆ ರಕ್ತ ಇರುತ್ತಾ? ಏನೋ ಒಂದು ಲೋಳೆದ್ರವ ಇರುತ್ತೆ ಅಂತ ಜೀವಶಾಸ್ತ್ರದಲ್ಲಿ ಓದಿದ ನೆನಪು. ಹೀಗೆ ಯೋಚಿಸ್ತಾ ಇರ್ಬೇಕಾದ್ರೆ, ಸ್ತಬ್ಧವಾಗಿದ್ದ ಜಿರಳೆ ಮೆಲ್ಲನೆ ನಡೆಯಲಾರಂಭಿಸಿತು. ಆಹಾ, ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು... ಎಂಬಂತಾಯ್ತು!

ಜಿರಳೆ ಕೊಲ್ಲುವುದರಲ್ಲೂ ಕರಾರುವಾಕ್ಕಾದ ಚಾಣಾಕ್ಷತೆ ಬೇಕೆನ್ನಿ. ಒಂದು ಏಟಿನಲ್ಲಿ ಕೆಲಸ ಮುಗಿಯಿತೋ ಸರಿ, ಇಲ್ಲಾಂದ್ರೆ ಅದು ಮತ್ತೆಂದೂ ಸಿಗದಂತೆ ಓಡಿಹೋಗಿಬಿಡುತ್ತೆ. ಅಲ್ಲದೆ, ಹಾವಿನ ದ್ವೇಷ ಹನ್ನೆರಡು ವರುಷವೆಂಬಂತೆ, ಜಿರಳೆಯ ದ್ವೇಷ ಅದೆಷ್ಟು ಸಮಯವೋ ಗೊತ್ತಿಲ್ಲ!ಎಲ್ಲೇ ಹೋಗಿರಲಿ ಅದು ಮತ್ತೆ ಬಂದೇಬರತ್ತೆ. ಪಾಪಿ.

ಅಂತೂ ಮುಕ್ಕೋಟಿ ದೇವತೆಗಳನ್ನೆಲ್ಲ ನೆನೆದು, ವೀರಗಚ್ಚೆ ಹಾಕಿನಿಂತು, ಹಲ್ದವಡೆಗಳನ್ನು ಕಚ್ಚಿ ಹಿಡಿದು, ಇದ್ದ ಶಕ್ತಿಯನ್ನೆಲ್ಲ ಒಂದುಗೂಡಿಸಿ, ಪೊರಕೆಯನ್ನು ಹಿಡಿದೆತ್ತಿ ಜಿರಳೆಯ ತಲೆಗೆ ಒಂದೇಟು ಹಾಕಿಯೇ ಬಿಟ್ಟೆ. ನನ್ನ ಕಣ್ಣುಗಳು ತನ್ನಷ್ಟಕ್ಕೆ ಮುಚ್ಚಿದ್ದವು. ಹಿಂದೆಂದೂ ಮಾಡಿರದ ಘನಘೋರಕಾರ್ಯ. ಫಲ ಏನಾಗಿದೆಯೊ ನೋಡೋಣವೆಂದು ಕಣ್ತೆರೆದಾಗ, ಸಮಾಧಾನವಾಯ್ತು. ಜಿರಳೆ ಇಹಲೋಕ ತ್ಯಜಿಸಿತ್ತು. ಏನೋ ಒಂದು ಸಾಧಿಸಿದ ಸಂತೋಷ. ಜಿರಳೆಗೋಸ್ಕರ ನಾನು ಪೊರಕೆ‌ಓಬವ್ವಳಾಗಿದ್ದೆ. ಶತ್ರುಗಳನ್ನು ನಾಶ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನಂತೂ ತಂದುಕೊಡಲಿಲ್ಲ. ಕಡೆಯಪಕ್ಷ ನನ್ನ ಮಲಗುವ ಕೋಣೆಯಲ್ಲಿ ಒಂದು ಜಿರಲೆಯನ್ನು ಸಂಹಾರ ಮಾಡಿ ಶತ್ರುಪೀಡೆಯಿಂದ ನಾನೇ ಪಾರಾದನೆಲ್ಲಾ ಎಂಬ ಸಮಾಧಾನದಿಂದ ನಿದ್ದೆಬಂತು!

ಈ ರೀತಿಯ ನಿಮ್ಮ ಸಾಹಸಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X