• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕವಯಿತ್ರಿ ಲತಾ ರಾಜಶೇಖರ್ ಅವರ 'ಯೇಸು ಮಹಾದರ್ಶನ'

By Staff
|

/column/hari/2008/0704-latha-rajashekhar-yesu-mahadarshan.htmlಹೊಸಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯ ಕೃಷಿ ಮಾಡುತ್ತಿರುವ ಕವಯಿತ್ರಿ ಮೈಸೂರಿನ ಡಾ| ಲತಾ ರಾಜಶೇಖರ್ ಅವರ ಎರಡನೇ ಮಹಾಕಾವ್ಯ 'ಯೇಸು ಮಹಾದರ್ಶನ' ಇತ್ತೀಚೆಗೆ ಲೋಕಾರ್ಪಣೆಗೊಂಡಿತು. ಲತಾ ಅವರು 'ಬುದ್ಧ ಮಹಾದರ್ಶನ' ಎಂಬ ಮಹಾಕಾವ್ಯವನ್ನೂ ರಚಿಸಿದ್ದಾರೆ. ಈ ಮಹಾಕಾವ್ಯದ ಕುರಿತು ಹರಿಹರೇಶ್ವರ ಅವರಿಂದ ಪರಿಚಯ ಮತ್ತು ವಿಮರ್ಶಾ ಲೇಖನ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ಕನ್ನಡದಲ್ಲಿ ಮಹಾಕಾವ್ಯಗಳ ಪ್ರಯೋಗ ಇನ್ನೇನು ಮುಗಿದು ಹೋಯಿತೇನೋ ಎನ್ನುವ ಕೊರಗು ಕೆಲವರನ್ನ ಬಾಧಿಸುತ್ತಿತ್ತು; ಅದು ಈಗಿಲ್ಲ. ನವೋದಯ, ನವ್ಯ, ನವ್ಯೋತ್ತರ, ಪ್ರಗತಿಶೀಲ, ದಲಿತ, ಬಂಡಾಯ-ಯುಗಗಳನ್ನ ದಾಟಿ, ದಾಪುಗಾಲು ಹಾಕಿ ಸಾಗುತ್ತಿರುವ ಹೊಸಗನ್ನಡ ಸಾಹಿತ್ಯ ಕೆಲವಾರು ಮಹಾಕಾವ್ಯಪ್ರಕಾರದ ಕೃತಿಗಳನ್ನೂ ಸೃಜಿಸಿದೆ. ಅವುಗಳಲ್ಲಿ, ಬುದ್ಧನನ್ನು ಕುರಿತ ತಮ್ಮ ಬಹುಮಾನ್ಯ ಬುದ್ಧ ಮಹಾದರ್ಶನ' ಮಹಾಕಾವ್ಯವೊಂದನ್ನ ಈಗಾಗಲೇ ಕನ್ನಡಕ್ಕಿತ್ತ ಮೈಸೂರಿನ ಡಾ| ಲತಾ ರಾಜಶೇಖರ್ ಅವರ ಎರಡನೆಯ ದೊಡ್ದ ಕನಸು ನನಸಾಯಿತು: ಯೇಸು ಮಹಾದರ್ಶನ' ಮೊನ್ನೆ ಲೋಕಾರ್ಪಣೆಗೊಂಡಿತು.

ಸುಮಾರು ಒಂಬೈನೂರು ಪುಟಗಳ ಈ ಬೃಹತ್ ಕೃತಿಯಲ್ಲಿ ಓದುಗ ಸಹೃದಯರು ನಿರೀಕ್ಷಿಸುವುದಾದರೂ ಏನನ್ನು? ಇ೦ಥದೊಂದು ಅಸಾಧಾರಣ ಸಾಹಿತ್ಯಯಾತ್ರೆಯಲ್ಲಿ ಕವಯಿತ್ರಿ ತನ್ನ ಯೋಚನೆ, ಆಲೋಚನೆ, ಭಾವನೆ, ದರ್ಶನಗಳನ್ನ ಹೇಗೆ ಮೈಗೂಡಿಸಿಕೊ೦ಡಿದ್ದಾರೆ? ಹಾಗೆ ತನ್ನದಾಗಿಸಿಕೊಂಡ ಕಾಣ್ಕೆಗಳನ್ನ ತನ್ನ ಕಲ್ಪನೆ ಮತ್ತು ಪ್ರತಿಭೆಗಳ ಮೂಲಕ ಯಾವ ವಿಶಿಷ್ಟ ರೀತಿಯಲ್ಲಿ ಪರಿಷ್ಕಾರ ಮಾಡಿದ್ದಾರೆ? ಅವನ್ನು ಹೇಗೆ ಅಭಿವ್ಯಕ್ತಿಸುತ್ತಾರೆ, ನಮಗೆ ಹೇಗೆ ಮನಗಾಣಿಸುತ್ತಾರೆ- ಎಂದಲ್ಲವೇ? ಕವಿಯ ಮನೋಧರ್ಮ, ಆಳವಾದ ಅಧ್ಯಯನ, ಪರಿಪಾಕ- ಸಾಹಿತ್ಯಕೃತಿಗೆ ಬಹು ಮುಖ್ಯವಾದವು. ಹೌದು, ಕವಿ ಇಲ್ಲಿ ಗೆದ್ದಿದ್ದಾರೆ. ಮೊಟ್ಟ ಮೊದಲು ಏನಿತ್ತು? ಋಗ್ವೇದದ ನಾಸದೀಯ ಸೂಕ್ತವೂ ಇದನ್ನೇ ಚರ್ಚಿಸುತ್ತದೆ. ಮೊಟ್ಟ ಮೊದಲು ಇದ್ದದ್ದು ವಾಕ್- ಲೋಗೋಸ್. ಅದು ದೇವರ ಬಳಿ ಇತ್ತು. ಅದೇ ದೇವರಾಗಿತ್ತು. ಆ ವಾಕ್‌ನಿಂದಲೇ ಮಿಕ್ಕುದೆಲ್ಲವೂ ಸೃಷ್ಟಿಸಲ್ಪಟ್ಟಿತು''-ಎನ್ನುತ್ತಾನೆ ಜಾನ್. ದೇವೀಂ ವಾಚಂ ಅಜನಯನ್ತ ದೇವಾ: - ಎಂದ ವೈದಿಕ ಋಷಿ. ಯೇಸು ಮಹಾದರ್ಶನದ ಕವಯಿತ್ರಿ ತಮ್ಮ ಕಾವ್ಯವನ್ನು ಪ್ರ್ರಾರಂಭಿಸುತ್ತಾರೆ: ಅನಂತಶೂನ್ಯದ ಅಚ್ಚರಿಯ ಪ್ರಾಂಗಣದಲ್ಲಿ ಅರಳಿದ ಶ್ರೀವಾಣಿ, ಚಿದ್ಭವಚಿತ್ತದ ಶಬ್ದಮಾಧುರ್ಯ'-ಅಂತ. ಈ ಶಬ್ದಮಾಧುರ್ಯದ ಶ್ರೀದೀಪ್ತಿಯಿಂದ ಈ ಮಹಾಕಾವ್ಯದ ಕಥಾಭಾಗವು ಮೊದಲುಗೊಳ್ಳುತ್ತದೆ. ಇದನ್ನೇ ಲೋಗೋಸ್' ಎಂದು ಕೊನೆಯ ಸುವಾತೆ೯ಕಾರ ದಾಖಲಿಸಿರುವುದು. ಇದನ್ನೇ ಪರಮೇ ವ್ಯೋಮನ್' ವ್ಯಾಪ್ತಿಯ ವಾಕ್‌ನ ವೈಖರಿಗಳನ್ನು ಋಷಿ ಬಣ್ಣಿಸಿರುವುದು.

ಮುಂದಿನ ಪರ್ವಗಳ ಶೀರ್ಷಿಕೆಗಳನ್ನೇ ಸಿಂಹಾವಲೋಕಿಸೋಣ: ಸದವತರಣ, ಸುಬಾಲ್ಯಾವರಣ, ಸತ್ಯಸಾಕ್ಷಾತ್ಕಾರ, ಸಂಕಷ್ಟ ನಿವಾರಣ, ಸದ್ಬೋಧನಾ, ಸಂಕ್ರಮಣ, ಸಂವೇದನಾ, ಸ್ವರ್ಗಾರೋಹಣ- ಇವು ಈ ದರ್ಶನಕಾವ್ಯದ ವಿವಿಧ ಸರ್ಗಗಳ ಅರ್ಥಪೂರ್ಣ ಶೀರ್ಷಿಕೆಗಳು. ಮಹಾಕಾವ್ಯದ ಈ ವಿವಿಧ ಸರ್ಗಗಳ ಸಂಧಿಗಳಿಗೆ ಕವಿ ಕೊಟ್ಟಿರುವ ಶೀರ್ಷಿಕೆಗಳೂ ಸಹ ಚೇತೋಹಾರಿಯಾಗಿವೆ. ಒಂದೆರಡನ್ನು ನೋಡೋಣ:

ಬಗೆಯ ಮರುಧರೆಯಲ್ಲಿ ಸವಿಜಲದ ಸೆಲೆಯು; ಸಿರಿ ಬೆಳೆಯ ಗರಿ ಮೂಡಿದಂತೆ ಬೆಂಗಾಡಿಗೆ; ಬಾಂದಳದಿ ಬೇರು ನೆಲದಾಳದಿ ಹೂ, ಚಿಗುರು; ದಿನದೀಪ ಆರುತಿರೆ ಕಾಲದೆಣ್ಣೆಯು ತೀರಿ; ದಿವದ ಕೊರಳ ಹಾರದ ಒಂದು ಹರಳು ನಾನು; ಬೆಳಕು ಬಂದಂತೆ ಕತ್ತಲೆಯ ಕಲ್ಲ್ ಅರಗೆ; ಕತ್ತಲ ಕೀಟದಂತ್ ಇದ್ದ ಎನ್ನನು ಬೆಳಕ ಹಕ್ಕಿಯಾಗಿಸಿರೆ; ಮರಳಲ್ಲಿ ಬರೆದ ಚಿತ್ರದಂತಲ್ಲ, ಸತ್ಯವೆಂಬುದು; ಎರಚದಿರಿ ಲೌಕಿಕದ ಕೆಸರನ್ನು ಈ ಪವಿತ್ರ ತಾಣದಲಿ; ಸತ್ಯವೆಂದರೆ ಅರಿವು ಸತ್ಯವೆಂದರೆ ಬೆಳಕು- ಈ ಸೋಪಾನಗಳನ್ನೇರುತ್ತ, ಒಂದಾದಮೇಲೊಂದರಂತೆ ಸಮತಲದ ಹಲವು ಹೆದ್ದಾರಿಗಳಲ್ಲಿ ಸಂಚರಿಸುತ್ತ, ಮತ್ತೆ ಮೇಲೆ ಹತ್ತುತ್ತ, ಈ ಕಾವ್ಯಸಾರ್ಥ ಸಾಗುತ್ತದೆ. ಮುಂದುವರಿದು, ಮುಗಿಲು ತೆರೆದು, ಅರಿಲು ಚುಕ್ಕೆಗಳು ಹೊಳೆದು, ಭುವಿಯ ಹೊತ್ತ ಮಿಂಚು ಸೆಳೆದು, ಬನವೆಲ್ಲ ಹಾಡ ಹಿಡಿದು, ಆಗಸವು ರೆಕ್ಕೆ ತೆರೆದು, ಹಾರಿ ಹೋಗುವ' ಕವಿಯ ಅಲೌಕಿಕ ಜ್ಞಾನಪ್ರಕಾಶನದಲ್ಲಿ ಕೃತಿ ಕೊನೆಗೊಳ್ಳುತ್ತದೆ.

ಬೈಬಲ್ಲಿನಲ್ಲಿ ಎರಡು ಪ್ರಧಾನ ಭಾಗಗಳಿವೆ: ಹಳೆಯ ಒಡಂಬಡಿಕೆ (ಓಲ್ಡ್ ಟೆಸ್ಟಮೆಂಟ್) ಮತ್ತು ಹೊಸ ಒಡಂಬಡಿಕೆ (ನ್ಯೂ ಟೆಸ್ಟಮೆಂಟ್). ಹಳೆಯ ಒಡಂಬಡಿಕೆಯ ಬಹುಚರ್ಚಿತ ಮನೋಜ್ಞ ಕೀರ್ತನೆಗಳ ಸಂಕಲನ ಭಾಗ ಸಾಮ್ಸ್'. ಹೊಸ ಒಡಂಬಡಿಕೆಯ ಬಹುಜನಪ್ರಿಯ ಭಾಗವೆಂದರೆ ಸುವಾರ್ತೆಗಳು: ಸಂತರುಗಳಾದ ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಮತ್ತು ಜಾನ್ ಬರೆದವು. ಈ ಎಲ್ಲವನ್ನೊಳಗೊಂಡ ಬೈಬಲ್ ಮತ್ತು ಅದಕ್ಕೆ ಸಂಬಂಧಪಟ್ಟ ಭಾಷ್ಯ, ವಾರ್ತಿಕ, ಕಾರಿಕೆ, ಟಿಪ್ಪಣಿಗಳ ಆಳವಾದ ಅಧ್ಯಯನದ ಫಲಶ್ರುತಿ ಈ ಮಹಾಕಾವ್ಯ. ಬೈಬಲ್‌ನಲ್ಲಿ ನಾವೀಗ ಕಾಣುವ ಘಟನೆಗಳ ಮೂಲ ಆಕರ ವಸ್ತು, ಬಲು ಹಿಂದೆ ಯಾವುದೋ ಕಾಲಮಾನದಲ್ಲಿ ದೂರದಲ್ಲೆಲ್ಲೋ ಜರುಗಿದವುಗಳು. ಅವನ್ನ ಕಂಡರಿಸಿದವರು, ಕೇಳಿ ಬಲ್ಲವರು ಅವುಗಳನ್ನ, ದಾಖಲಿಸಿದರು. ಆದರೆ, ಆ ದಾಖಲೆಗಳು ತಮ್ಮ ತಮ್ಮ ತಾತ್ವಿಕ ಸಾಮರ್ಥ್ಯಕ್ಕನುಗುಣವಾಗಿ, ದೇಶ ಕಾಲ ಉದ್ದೇಶ ದೃಷ್ಟಿ ಪೂರೈಕೆ-ಗನುಸಾರವಾಗಿ ಇವೆಯೆಂದು ಸಂಶೋಧಕ ವಿದ್ವಾಂಸರ ಅಭಿಪ್ರಾಯ. ಇಲ್ಲಿವೆ: ಕೆಲವು ಕಥಾನಕಗಳು, ಆಖ್ಯಾಯಿಕೆ, ಪರಿಕಥೆ, ಖಂಡಕತೆ, ಸಾಮತಿ, ದೃಷ್ಟಾಂತ-ಗಳು. ಇವಲ್ಲದೆ, ಕೆಲವು ನೇರನುಡಿಗಳು, ಸೂತ್ರಪ್ರಾಯ ಉಕ್ತಿ, ಸಂಕೇತ ಪ್ರತಿಮಾತ್ಮಕ ಬೆಳಕ ಕಿರಣಗಳು, ಆಲಂಕಾರಿಕ ಶಬ್ದಚಿತ್ರ-ಗಳೂ ಇವೆ.

ನಾಲ್ಕು ಸುವಾರ್ತೆಗಳನ್ನೇ ತೆಗೆದುಕೊಳ್ಳಿ: ಕ್ರೈಸ್ತರು ಸಾಂಪ್ರದಾಯಿಕವಾಗಿ ಉಪಯೋಗಿಸುವ ಹೊಸ ಒಡಂಬಡಿಕೆಯಲ್ಲಿ ಇರುವ ಈ ನಾಲ್ಕು ಅಧಿಕೃತ ಸುವಾರ್ತೆಗಳಲ್ಲದೆ, ಇನ್ನೂ ಹಲವಾರು ಸುವಾರ್ತೆಗಳು ಪ್ರಕಟಗೊಂಡಿವೆ. ಆಗಾಗ್ಗೆ ಇನ್ನೂ ಕೆಲವನ್ನ ಸಂಶೋಧಕರು ಪತ್ತೆಹಚ್ಚುತ್ತಿದ್ದಾರೆ. ಅವುಗಳ ಮಾತು ಈಗ ಬೇಡ. ಈ ನಾಲ್ಕು ಸುವಾರ್ತೆಗಳಿಗೆ ಮೂಲ ಆಕರವಾಗಿ ಒಂದು ದಾಖಲೆ (ಡಾಕ್ಯುಮೆಂಟ್) ಯಾವುದೋ ಇದ್ದಿರಬೇಕು- ಹೀಗೆಂದು ಭಾವಿಸಿ, ತಮ್ಮ ಅನುಕೂಲಕ್ಕೋಸ್ಕರ, ಅದನ್ನು ಕ್ಯೂ ಸುವಾರ್ತೆ' ಅಂತ ಕರೆಯುತ್ತಾ ಬೈಬಲ್‌ನ ವಿದ್ವಾಂಸ ಸಂಶೋಧಕರು ಚರ್ಚಿಸುತ್ತಾರೆ. (ಜರ್ಮನ್ ಭಾಷೆಯಲ್ಲಿ ಕ್ವೆಲ್ಲೆ ಎಂದರೆ ಮೂಲ ಆಕರ ಎಂದರ್ಥ ಇದರ ಸಂಕೇತಾಕ್ಷರವೆ ಕ್ಯೂ'). ಈ ನಾಲ್ಕು ಸುವಾರ್ತೆಗಳೂ ಒಂದೇ ರೀತಿಯಲ್ಲಿ ಯೇಸುವಿನ ಜೀವನವನ್ನ ಚಿತ್ರಿಸುವುದಿಲ್ಲ. ಮೊದಲ ಮೂರು ಸುವಾರ್ತೆಗಳು ಒಂದು ಬಗೆಯ ಸಮಾನ ದೃಷ್ಟಿಯ ಸುವಾರ್ತೆಗಳು. ಅಲ್ಲಿ ದೃಷ್ಟಾಂತಗಳಿಗೆ, ಸಾಮಿತಿಗಳಿಗೆ, ಉಪಕತೆಗಳಿಗೇ ಪ್ರಾಧಾನ್ಯ. ಕೊನೆಯ ಸುವಾರ್ತೆಕಾರನಿಗೆ ಈ ಪವಾಡಗಳಿಗಿಂತ, ಕತೆಗಳಿಗಿಂತ ಸಂಕೇತಗಳೇ ಹೆಚ್ಚು ಪ್ರಿಯ. ಜಾನ್ ಸಂಕೇತಪ್ರಿಯ ಇದ್ದಂತೆ ಸಂವಾದಪ್ರಿಯನೂ ಹೌದು. ಅಲ್ಲಿಲ್ಲದ್ದು ಇಲ್ಲಿ, ಇಲ್ಲಿಲ್ಲದ್ದು ಅಲ್ಲಿ ತುಂಬಿವೆ. ನಮಗೆ ಒಂದು ಸಮಗ್ರ ಚಿತ್ರಣ ಬೇಕೆಂದಾಗ ಎಲ್ಲವನ್ನೂ ಕೂಲಂಕಷವಾಗಿ ಅಧ್ಯಯನ ಮಾಡಲೇಬೇಕು.

ನಮ್ಮ ಕವಯಿತ್ರಿ ಏನು ಮಾಡಿದ್ದಾರೆ ಅ೦ದರೆ: ಹೀಗೆ, ಅನುಭಾವ ಪ್ರಕ್ರಿಯೆಗಳಿಂದ ಸಾಂದ್ರವಾದ, ವಿಭಿನ್ನ ಸಂಸ್ಕೃತಿಯಲ್ಲಿ ಎರಕ ಹೊಯ್ದ ಆ ಎಳೆಗಳನ್ನೆಲ್ಲ ಆಯ್ದುಕೊಂಡು, ಅನುಭವಿಸಿ, ಒಂದು ಬಗೆಯ ಪರಕಾಯ ಪ್ರವೇಶ ಮಾಡುವ ಸನ್ನಾಹದಲ್ಲಿ ತೊಡಗಿದರು. ಘಟನೆಗಳು ನಡೆದಿರಬಹುದಾದ ಆಯಾಯ ಸ್ಥಳಗಳನ್ನೇ ಸಂದರ್ಶಿಸಿ, ಅಲ್ಲೆಲ್ಲ ಸುತ್ತಾಡಿ, ಆ ಸನ್ನಿವೇಶಗಳ. ಪಾತ್ರಗಳ ಕಾಣ್ಕೆಯನ್ನ ಯಥಾಮತಿ ಅನುಭವಿಸಿ ಅವನ್ನು ಬರಹಕ್ಕಿಳಿಸಲು ಪ್ರಯತ್ನಿಸಿದ್ದಾರೆ- ಇದು ಕೃತಿಯ ಇನ್ನೊಂದು ಹೆಗ್ಗಳಿಕೆ. ಕಾವ್ಯದ ಆಸ್ವಾದನೆಗೆ ಕಿಂಚಿತ್ತೂ ಬೇಸರ ತರದ ನೇರ ಮಾತುಗಳೂ ಇಲ್ಲಿವೆ. ಉದಾಹರಣೆಗೆ, ಮೌನ ಮಜ್ಜಿಗೆಯಲಿ ನವನೀತ ನಗೆ ತೇಲಿ; ಮಾತನಾಡುತಿರೆ ಮುಗಿಲು ಮುಸ್ಸಂಜೆಯೊಡನೆ; ನಿಶ್ಶಬ್ದವೇ ಬೆಳೆದು ನುಡಿಶಿಖರವಾದಂತೆ; ಬಿಸಿಬೂದಿಯಲಿ ಬಿದ್ದ ಹಾಲು ಹನಿಹನಿಯಂತಾಗಿ; ಮಮತೆ ಮಾತಾಡಿತು ಕಣ್ಣ ಹನಿಹನಿಯಲ್ಲಿ; ಬೀಸಿತ್ತು ಗಾಳಿ ಸುರೆ ಕುಡಿದಂತೆ ಮತ್ತೇರಿ; ಚಿಮ್ಮಿತ್ತು ನುಡಿ ಕಾರಂಜಿ ವದನಗಿರಿಯಲಿ; ಸಿಡಿಲ ಹಕ್ಕಿ ಹಾರಿದಂತೆ ಮುಗಿಲ ಗೂಡಿಂದಾಚೆ ಹೊರಗೆ; ಬಳಲುತಿಹುದು ಈ ಲೋಕ ಪ್ರೀತಿಯ ಕೊರತೆಯಿಂದ; ಕಣ್ಣೀರಿಡುತಿದೆ ಬಾನು, ಒದ್ದೆಯಾಗಿದೆ ನೆಲದ ಕಣ್ಣು- ಇತ್ಯಾದಿ.

ಇಲ್ಲಿ ಬರುವ ಯೇಸುವಿನ ಶೈಶವಜೀವನದ ಚಿತ್ರಣ ಎಷ್ಟು ಸೊಗಸಾಗಿದೆ ನೋಡಿ; ಒ೦ದು ಮಾತೃಹೃದಯ ಮಾತ್ರ ಅ೦ತಹದೊಂದು ಚಿತ್ರಪಟವನ್ನು ಕುಸುರಿಸಬಲ್ಲದೇನೋ ಎನ್ನಿಸುತ್ತದೆ. ಮೇರಿ ತನ್ನ ಮುದ್ದು ಮಗುವಿನ ಬಾಯಿಗಿಡುವ ಸಿಹಿ ತಿನಿಸಿನ ಚಿಕ್ಕ ಚಿಕ್ಕ ಉಂಡೆಗಳ ಜೇನ ಸವಿ ಓದುಗರೂ ಬಹುಕಾಲ ಚಪ್ಪರಿಸುವ೦ತಿದೆ. ಬೆಳೆಯುವ ಸಸಿಯ ಗುಣಗಳನ್ನು ಮೊಳಕೆಯಲ್ಲೇ ಕಾಣಿಸುವ ಕಲೆ ಮನೋಜ್ಞವಾಗಿದೆ. ಹಂಚಿ ಮೆಲ್ಲುವ ಮಗುವಿನ ಪ್ರವೃತ್ತಿ, ಎಳೆಮೊಗ್ಗಿನ ಮೃದುಹೃದಯದ ಸಂವೇದನಾ ಶೀಲತೆಯನ್ನು ಪ್ರತಿಬಿಂಬಿಸುವ ಕವಿಕಲ್ಪನೆಗಳು ಏನಿವೆ- ಅವೂ ಸುಂದರವಾಗಿವೆ. ಬಾಲಕನನ್ನು ಬೀಳ್ಕೊಡುವ ಆರ್ದ್ರ ಸನ್ನಿವೇಶ- ಇವೆಲ್ಲಾ ಒಬ್ಬ ತಾಯಿ ಮಾತ್ರಾ ಸಮರ್ಥವಾಗಿ ಬರೆಯಬಲ್ಲ ಎದೆಯ ಮಿಡಿತಗಳು. ತಾಯಿ ಮೇರಿಯ ರೋದನ, ಸುವಾರ್ತೆಗಳಲ್ಲಿಲ್ಲ; ಇಲ್ಲಿರುವ ಅದು ಸಹಜವಾಗಿ ಮೂಡಿ ಬಂದಿರುವ ಕವಿಮಿಡಿತಗಳಲ್ಲಿ ಒಂದು. ಮಹಾನಿರ್ವಾಣದ ಸಮಯದಲ್ಲಿ ಕವಿ ಹೇಳುವ ಬಣ್ಣನೆ ಸಹ ಹೃದಯ ವಿದ್ರಾವಕವಾಗಿದೆ.

ಯೇಸುವಿನ ಮೊದಮೊದಲ ಬೋಧನೆಗಳ್ನು ಸವಿನುಡಿಗಳು ಶ್ರೀಸಾಮಾನ್ಯರನ್ನು ಕುರಿತಾಗಿದ್ದವು; ಆ ಕಾರಣಕ್ಕೆ ಸಹಜವಾಗಿಯೇ, ಸರಳಗನ್ನಡದಲ್ಲಿ ಅವನ್ನು ವಾಚ್ಯವಾಗಿ ನಿರೂಪಿಸುತ್ತಾರೆ; ಅಮೇಲಾಮೇಲೆ ಅವು ಬಿಗಿ ಪದಬಂಧಗಳ ಕಟ್ಟಾಗತೊಡಗಿವೆ. ಸಾಂಕೇತಿಕ ಪ್ರತಿಮಾತ್ಮಕವಾಗ ಹೊರಟಿವೆ. ಕಾರಣ ಏನು ಗೊತ್ತೆ? ಇವೆಲ್ಲ ಇರುವುದು ಬುದ್ಧಿಜೀವಿಗಳನ್ನ ಉದ್ದೇಶಿಸಿ, ಅವನ್ನು ಪ್ರವಚಿಸಿದಾಗ ಮಾತ್ರ. ಆಪ್ತ ಶಿಷ್ಯರಿಗೆ ಹೇಳುವ ಮಾತುಗಳಿವು. ನೋಡಿ: ಪ್ರಸನ್ನವೀ ಭೂಮಿ, ಪ್ರಸನ್ನವೀ ಬಾನು.. .. ಪ್ರಸನ್ನವಹುದು ಒಳಹೊರಗೆಲ್ಲವು, ಸುಪ್ರಸನ್ನವಾಗಿರಲು ನಿಮ್ಮ ಪ್ರಜ್ಞೆ ಹೊಲವೇ ಈ ಲೋಕ..../ ಸುಪುತ್ರನವನು ಬಿತ್ತುವನು ಒಳ್ಳೆಯ ಧಾನ್ಯವನು/ ಉತ್ತಮೋತ್ತಮ ಕಾಳುಗಳೇ ದೇವಲೋಕದ ಪ್ರಜೆ/ ಕಳೆಗಳೇ ಆ ಕೇಡಿಗನ ಕಡೆಯ ಜನರು ಇತ್ಯಾದಿ); ಸದ್ಬೋಧನಾ ಸಂಪುಟದುದ್ದಕ್ಕೂ ದೇವಪುತ್ರನ ಉಪದೇಶ ಆದೇಶ ಸೂಕ್ತಿ ತಾತ್ತ್ವಿಕ ಶ್ರೀವಾಣಿಗಳು ಸೂಚ್ಯರ್ಥಕವಾಗಿವೆ; ಧ್ವನಿಪೂರ್ಣವಾಗಿ ಹೊಳೆಯುವ೦ತೆ ನೋಡಿಕೊಂಡಿದ್ದಾರೆ. ಇದು ಔಚಿತ್ಯಪ್ರಜ್ಞೆಯನ್ನು ಕಾಯ್ದುಕೊಂಡಿರುವ ಕವಿಯ ವೈಶಿಷ್ಟ್ಯ. ಇನ್ನೊಂದು ಸನ್ನಿವೇಶವನ್ನು ನೋಡಿ:

ಪಿಲಾತನೆದುರು ವಿಚಾರಣೆಗಾಗಿ ಯೇಸುವನ್ನ ಆಪಾದಿತನನ್ನಾಗಿ ಫರಿಸಾಯರು ತಂದು ನಿಲ್ಲಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಪಿಲಾತ ಕೇಳುತ್ತಾನೆ: ಸತ್ಯ! ಸತ್ಯ!! ಹಾಗಾದರೆ ಏನದು ಆ ಸತ್ಯ?'' ಸುವಾರ್ತೆಕಾರ ಜಾನ್ ಉತ್ತರಕ್ಕೆ ಕಾಯದೆ, ಇಲ್ಲಿಗೇ ಹಠಾತ್ತನೆ ತೆರೆ ಎಳೆದು ಆ ದೃಶ್ಯವನ್ನು ಮುಗಿಸಿಬಿಟ್ಟಿದ್ದಾನೆ. ಆದರೆ, ಯೇಸು ಮಹಾದರ್ಶನದ ಕವಯತ್ರಿ ಇಲ್ಲಿ ಹಾಗೆ ಮಾಡಿಲ್ಲ. ಈ ಸತ್ಯದ ಬಗ್ಗೆ ಮಾತಿನ ಸಂದರ್ಭ ಲ್ಯೂಕ್ 23ರಲ್ಲಿಯಾಗಲೀ, ಮಾರ್ಕ್ 15ರಲ್ಲಿ ಯಾಗಲೀ ಮ್ಯಾಥ್ಯೂ 25ರಲ್ಲಿ ಯಾಗಲೀ ಬಂದಿಲ್ಲವೆಂಬುದನ್ನ ಅವರು ಗಮನಿಸಿದ್ದಾರೆ.

ಜಾನ್‌ನ ಸುವಾರ್ತೆಯಲ್ಲೇ ಸತ್ಯದ ವೈಭವ ಮತ್ತು ಪ್ರಸಾದ ಗುಣ, ನಿಜವನ್ನ ಅರಿತೆಯೆನೆ, ನಿಜ ನಿನ್ನನ್ನು ಮುಕ್ತಗೊಳಿಸೀತು, ಸತ್ಯದ ಆತ್ಮ ಬಂದಾಗ ಅದು ಸತ್ಯದೆಡೆಗೇ ಒಯ್ಯುತ್ತದೆ, ಮತ್ತು ನಾನೇ ಮಾರ್ಗ, ನಾನೇ ಸತ್ಯ- ಇವುಗಳ ಒಳತಿರುಳನ್ನ ಗ್ರಹಿಸಿದ್ದಾರೆ. ಅದನ್ನು ಈಗ ಭಟ್ಟಿಯಿಳಿಸಿ ಯೇಸುವಿನ ಶ್ರೀಮುಖದಿಂದ ಪಿಲಾತನಿಗೆ ಪ್ರತ್ಯುತ್ತರ ಒದಗಿಸುತ್ತಾರೆ; ಯೇಸು ಇಲ್ಲಿ ಹೇಳುತ್ತಾನೆ: ಸತ್ಯವೆಂದರೆ ಅರಿವು, ಸತ್ಯವೆಂದರೆ ಬೆಳಕು; ಕಾರಣವದು ಲೋಕಸೃಷ್ಟಿಗೆ. ಸತ್ಯವೆನೆ ಜೀವ, ಸತ್ಯವೆನೆ ಬಾಳು; ಎನ್ನ ಉಸಿರಾಗಿಹುದು ಸತ್ಯವೆಂಬುದು. ಸತ್ಯವೆಂದರೆ ನನ್ನ ಆತರ್ಯದ ನಿಜದೊರತೆ, ಅಂತೆ ಚಿರಂತನ ದಿವ್ಯ ಗೀತೆ. ಆಕರಗಳ ಸಾರವನ್ನ ಸಂಗ್ರಾಹ್ಯವಾಗಿ ಸಮಯೋಚಿತವಾಗಿ ಹರಿಬಿಡುವ ಇಂತಹ ಕಲಾತ್ಮಕ ಪ್ರಯೋಗಗಳನ್ನ ಕವಯಿತ್ರಿ ತಮ್ಮ ಕಾವ್ಯದುದ್ದಕ್ಕೂ ನಡೆಸಿದ್ದಾರೆ.

ಕಾವ್ಯದಲ್ಲಿ ಅನುಭಾವ ಸಾಹಿತ್ಯದ ಭಾಗ ಬಂದಾಗ, ಅದನ್ನ ವಿವರಿಸ ತೊಡಗಿದಾಗ ಕವಿ ತನ್ನ ಧಾರ್ಮಿಕ ಪೂರ್ವಾಗ್ರಹಗಳ ಸೊ೦ಕು ತಾಗದಂತೆ ಕಾಯ್ದುಕೊಂಡಿದ್ದಾರೆ; ಲೋಕೋದ್ಧಾರಕರ ಜೀವನ ಚರಿತ್ರೆಗಳಲ್ಲಿ ಸಾಮ್ಯಗಳು ಅಪಾರ. ಆದರೆ, ಆ ಬಗೆಯ ಹೋಲಿಕೆಗಳು, ಮಾತುಗಳು ಇಲ್ಲಿಲ್ಲ. ವಿಭಿನ್ನ ಕಾಲಮಾನದಲ್ಲಿ ಪರಿಸರದಲ್ಲಿ ಉದಯಿಸಿದ ದಾರ್ಶನಿಕರನ್ನ ಸಮೀಕರಿಸುವ ಉದ್ದೇಶ ಈ ಕೃತಿಯದ್ದಲ್ಲ. ಕಾವ್ಯದ ಪಾತ್ರ ತಾನು ಬೆಳೆದು ಬಂದ ಪರಿಸರದ ಹಿನ್ನೆಲೆಯಲ್ಲೇ ಆ ಎದುರಿಸಿದ ಸನ್ನಿವೇಶಗಳು, ಅನುಭವಿಸಿದ ರೀತಿ, ಕಾಣ್ಕೆ, ಅರಿವು, ಅಭಿವ್ಯಕ್ತಿ ವಿಧಾನಗಳನ್ನ ಮನೋಜ್ಞವಾಗಿ ದರ್ಶಿಸುತ್ತಾರೆ. ಹಿಂದಿನ ಸಾಹಿತ್ಯಮಾರ್ಗಗಳ ಮೌಲ್ಯಗಳನ್ನ ಮತ್ತೆ ತಮ್ಮ ಕೃತಿಯಲ್ಲಿ ತರ ಹೊರಟಾಗ ಅನಾಯಾಸವಾಗಿ ತಲೆದೋರುವ ಆರ್ಷೇಯತೆ (ಆರ್ಕೇಯಿಸಂ) ಇಲ್ಲಿ ಹಾವಳಿ ಮಾಡಿಲ್ಲ; ಕಾಲವಿರೋಧತೆ (ಅನಕ್ರಾನಿಸಂ) ಎಲ್ಲೂ ನುಸುಳಿಲ್ಲ.

ಒಂದೆರಡು ಕೊರತೆಗಳತ್ತ ಬೊಟ್ಟು ಮಾಡಬಹುದೇನೋ: ಹಳೆಯ ಒಡಂಬಡಿಕೆಯ ಭಾಗಗಳನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟು, ಬೇಗ ಮುಖ್ಯ ಕಥೆಗೆ ನಾಂದಿ ಹಾಡಬೇಕಾಗಿ ಬಂದುದರಿಂದ, ಸುವಾರ್ತೆಗಳ ಕಥಾನಕಕ್ಕೆ ಪೂರಕವಾದ, ಕಾವ್ಯಾಂಶಗಳ ಮೋಡಿಗೆ ಬೆರಗಿಗೆ ಹೆಸರಾದ ಸಾಮ್‌ಗಳ೦ಥ ಆಕರಸಾಮಗ್ರಿಗಳನ್ನು ಕನ್ನಡಿಸುವ ಅವಕಾಶಗಳು ಕೈತಪ್ಪಿಹೋದದ್ದು ಒಂದು ವಿಷಾದ. ವಿದೇಶೀಯ ವ್ಯಕ್ತಿ ಸ್ಥಳನಾಮಗಳನ್ನ ಕನ್ನಡೀಕರಣ ಮಾಡುವಾಗ ಅಲ್ಲಲ್ಲಿ ಶ್ರುತಿದುಷ್ಟತೆ ತಲೆದೋರಿದ ಅನುಮಾನಗಳುಂಟು. (ಉದಾ. ಪುಟ 37ರಲ್ಲಿ ಬರುವ ಶೆಮ್, ಹಾಮ್, ಯೂಫೆತ್-ಗಳು ಇಂಗ್ಲೀಷಿನಲ್ಲಿ ಷೇಮ್, ಹ್ಯಾಮ್ ಮತ್ತು ಜಾಫೆತ್-ಗಳು; ಜೆನಿಸಿಸ್ 5:32). ಹೀಗೆ ಮಾಡುವಾಗ, ಏಕರೂಪತೆಯನ್ನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯೂ ಇಲ್ಲಿದೆ. ಬಹುಶ: ಕವಿ ಆಕರವಾಗಿ ಪರಿಶೀಲಿಸಿದ ಬೈಬಲ್ಲಿನ ಪ್ರಚಲಿತ ಅಧಿಕೃತ ಕನ್ನಡಾನುವಾದಗಳ ಪರಿಷ್ಕಾರವೂ ಈ ದಿಶೆಗಳಲ್ಲಿ ನಡೆಯಬೇಕೇನೋ. ಪೇತ್ರ(ಪೀಟರ್), ಯೂದ (ಜೂಡಸ್), ಬರಬ್ಬ (ಬರಬ್ಬಾಸ್), ಪಿಲಾತ (ಪೈಲೇಟ್), ಯೋಹಾನ (ಜಾನ್) ಮುಂತಾದವರು ತಮ್ಮ ಮೂಲ ಹೆಸರುಗಳಿಗೇ ಹಿಂತಿರುಗಬೇಕೇನೋ. ಇವೆಲ್ಲ ದೊಡ್ದ ದೋಷಗಳೇನಲ್ಲ; ದೊಡ್ದದೊಂದು ಚಿತ್ರಪಟದಲ್ಲಿ ಅಲ್ಲಲ್ಲಿ ತಲೆದೋರಿದ ಚಿಕ್ಕ ಪುಟ್ಟ ಸುಕ್ಕುಗಳು ಮಾತ್ರ.

ಒಟ್ಟಾರೆ, ಕಾವ್ಯದ ಆಲ೦ಕಾರಿಕ ಭಾಷೆಯ ಪ್ರಮುಖ ಲಕ್ಷಣಗಳಿಗೆ ಇಲ್ಲಿ ಇಂಬು ದೊರಕಿದೆ. ಲಯ, ಛಂದಸ್ಸು, ಭಾಷೆಯ ವ್ಯಂಗ್ಯ ಮತ್ತು ಅಲಂಕಾರಗಳ ಬಾಹ್ಯ ಲಕ್ಷಣಗಳಿಂದಲೂ, ರಸ ಧ್ವನಿಗಳ ಆಂತರಿಕ ಲಕ್ಷಣಗಳಿಂದಲೂ ಕಾವ್ಯವನ್ನ ಸಮರ್ಥವಾಗಿ ಸಿಂಗರಿಸಿದ್ದಾರೆ. ಇಲ್ಲಿ ವಸ್ತುನಿಷ್ಠತೆ, ಕಲಾತ್ಮಕತೆ ಮಿಂಚಿದೆ. ಕಾವ್ಯದ ಯಶಸ್ಸಿಗೆ, ಅದರ ರಸಾಭಿವ್ಯಕ್ತಿಗೆ ಪೂರಕವಾಗುವ ಅರ್ಥವ್ಯಕ್ತಿ, ಓಜಸ್ಸು, ಔದಾರ್ಯ, ಕಾಂತಿ, ಪ್ರಸಾದ, ಮಾಧುರ್ಯ (ಶಬ್ದ ಮತ್ತು ಅರ್ಥ), ಮತ್ತು ಶ್ಲೇಷೆ, ಸಮತೆ, ಸಮಾಧಿ, ಸೌಕುಮಾರ್ಯ-ಗಳೆಂಬ ಶಬ್ದ ಮತ್ತು ಅರ್ಥಗುಣಗಳನ್ನ ತನ್ನಲ್ಲಿ ಅಳವಡಿಕೊಳ್ಳುವುದರಲ್ಲಿ ಕಾವ್ಯ ಗುರಿಮುಟ್ಟಿದೆ. ಒಬ್ಬ ಮನುಕುಲೋದ್ಧಾರಕನೊಬ್ಬನ ದರ್ಶನವನ್ನು ಮಾಡಬೇಕೆಂಬ ಕವಯಿತ್ರಿಯೊಬ್ಬರ ಉತ್ಕಟ ಆಕಾ೦ಕ್ಷೆ ಇದೀಗ ಕೈಗೂಡಿದೆ. ಡಾ| ಲತಾ ರಾಜಶೇಖರ್ ಅವರ ಕಾವ್ಯಕೃಷಿ ಇನ್ನೂ ಇತೋಪ್ಯತಿಶಯವಾಗಿ, ಹುಲುಸಾಗಿ ಬೆಳೆದು, ಅವರಿಂದ ಕನ್ನಡ ಸಾಹಿತ್ಯ ಸಮೃದ್ಧವಾಗಲೆಂದು ಮನಸಾರೆ ಹಾರೈಸುತ್ತೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more