• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನಲ್ಲಿ ನಡೆದ ಆಕಾಶವಾಣಿ ಸಂಗೀತ ಸಮ್ಮೇಳನ-2004

By Staff
|
S.K. Harihareshwara, Mysore ಶಿಕಾರಿಪುರ ಕೆ. ಹರಿಹರೇಶ್ವರ,

ಸರಸ್ವತೀಪುರಂ, ಮೈಸೂರು

Vidushi Vijayalakshmi Subramaniyamನಿನ್ನೆ, ಅಕ್ಟೋಬರ್‌ 09, ಶನಿವಾರ ಸಂಜೆ 6:00 ರ ವೇಳೆಗೆ ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣ ತುಂಬಿತ್ತು. ಸ್ವಾತಂತ್ರ್ಯಪೂರ್ವದಲ್ಲೇ ಈ ಪ್ರಸಾರ ಮಾಧ್ಯಮಕ್ಕೆ ‘ಆಕಾಶವಾಣಿ’ ಎಂಬ ಹೆಸರನ್ನ ಮೊಟ್ಟ ಮೊದಲು ಕೊಟ್ಟ ಮೈಸೂರು ನಗರದ ‘ಆಕಾಶವಾಣಿ’ ಕೇಂದ್ರವು ತಾನು ನಡೆಸುತ್ತಿದ್ದ ಸಂಗೀತ ಸಮ್ಮೇಳನದ ಚಿನ್ನದ ಹಬ್ಬದ ಅಂಗವಾಗಿ ಸಂಗೀತ ಸಮ್ಮೇಳನ-2004ವನ್ನು ಇಲ್ಲಿ ಆಯೋಜಿಸಿತ್ತು. ಆಹ್ವಾನಿತನಾಗಿ ನಾನು ನಾಗಲಕ್ಷ್ಮಿಯಾಂದಿಗೆ ಅಲ್ಲಿಗೆ ಹೋಗಿದ್ದೆ.

ಕಾರ್ಯಕ್ರಮದ ಮೊದಲಿಗೆ ಕರ್ನಾಟಕದ ಜಾನಪದ ಸಂಗೀತಪ್ರಕಾರವೊಂದಕ್ಕೆ ಮೈಸೂರಿನ ಆಕಾಶವಾಣಿ ಆದ್ಯತೆ ಕೊಟ್ಟದ್ದು ಗಮನಾರ್ಹವಾಗಿತ್ತು. ‘ಕರಡಿ ಮಜಲು’ ಎನ್ನುವುದು ಉತ್ತರ ಕರ್ನಾಟಕದ ಒಂದು ಜನಪ್ರಿಯ ಜಾನಪದ ಕಲೆ. ಇದನ್ನು ಗುಂಪುಗುಂಪಾಗಿ ಏಳು ಅಥವಾ ಎಂಟು ಜನರ ಸಮೂಹದಲ್ಲಿ ಪ್ರದರ್ಶಿಸುತ್ತಾರೆ. ಜಿಂಕೆ ಅಥವಾ ಮೇಕೆಯ ಚರ್ಮದಿಂದ ಮಾಡಿದ ‘ಕರಡೆ’ ಎಂಬ ಡೋಲು ಮಾದರಿಯ ಚರ್ಮವಾದ್ಯ ಇದರಲ್ಲಿ ಮುಖ್ಯವಾದ ಅಂಗ. ಇದರಿಂದ ಬಂತು ‘ಕರಡೆಯ ಮಜಲು, ಕರಡಿಯ ಮಜಲು, ಕರಡಿ ಮಜಲು’ ಎಂಬ ಪದಸಮುಚ್ಚಯ. ಗೋಣಿಕೋಲು ಎಂಬ ಹೆಸರಿನ ಎರಡು ಕೋಲುಗಳಿಂದ ಈ ಕರಡೆಯ ಮೇಲೆ ಬಡಿದಾಗ ಬರುವ ವಿಶಿಷ್ಟ ನಾದ ಮತ್ತು ತಾಳಕ್ಕೆ ತಕ್ಕಹಾಗೆ ನುಡಿಸುವ ಸನಾದಿಯ ವಾದನ- ಈ ಕರಡಿ ಮಜಲುವಿನ ಹೆಚ್ಚುಗಾರಿಕೆ.

‘ಕರಡೆ’ ಕನ್ನಡನಾಡಿನ ಒಂದು ಪ್ರಾಚೀನ ವಾದ್ಯವಿಶೇಷ. ವೈಯಾಕರಣಿ ಕೇಶಿರಾಜನ ಶಬ್ದಮಣಿದರ್ಪಣ(63/75) ದಲ್ಲಿ ‘ಶ್ರುತಿ ಕಷ್ಟಂ ಬರೆ ಸಂಧಿಮಾಡಲಾಗದು, ಕರಡೆಯ ಗರ್ಗಟದ ದನಿವೊಲ್‌’- ಎಂಬ ಪ್ರಯೋಗವಿದೆ. ‘ಗರ್ಗರ’ವೆಂಬುದೂ ಒಂದು ವಾದ್ಯವಿಶೇಷವೇ. ಕವಿ ರನ್ನನು ‘ಗಳಿಗೆ(=ಘಟವಾದ್ಯ)ಗೆ ಕರಡೆಯ, ತಾಳದ, ಪರವ(=ಭೇರಿಗೆ)ದ, ಮದ್ದಳೆಯ, ಮಿಕ್ಕ(=ಇನ್ನುಳಿದ) ವಾದ್ಯಮುಂ(ವಾದ್ಯವಿಶೇಷಗಳು) ಒಳವೇ(=ಬೇಕಾಗಿವೆಯೇನು)?’’ ಎಂದು ತನ್ನ ಗದಾಯುದ್ಧ(6:49)ರಲ್ಲಿ ಕೇಳುತ್ತಾನೆ. ಹರಿಹರನ ‘ಗಿರಿಜಾ ಕಲ್ಯಾಣ’ದಲ್ಲಿ (3: 6ಂ), ವಿರೂಪಾಕ್ಷಪಂಡಿತನ ‘ಚನ್ನಬಸವ ಪುರಾಣ’(5: 7)ದಲ್ಲಿ ‘ಕರಡೆ’ಯ ಪ್ರಸ್ತಾಪ ಬರುತ್ತದೆ. ಕೆಲವರ ಪ್ರಕಾರ ಪಂಚಮಹಾವಾದ್ಯಗಳಲ್ಲಿ ‘ಕರಡೆ’ಯೂ ಒಂದು. ಮದುವೆ ಮುಂಜಿಗಳಲ್ಲಿ , ಧಾರ್ಮಿಕ ಸಮಾರಂಭಗಳಲ್ಲಿ , ಮಂಗಳ ವಾದ್ಯದ ರೂಪದಲ್ಲಿ ಕರಡಿ ಮಜಲನ್ನ ಉತ್ತರಕರ್ನಾಟಕದಲ್ಲಿ ಅವಶ್ಯ ನುಡಿಸುತ್ತಾರೆ.

ಚಿಕ್ಕನರಗುಂದದ ಒಂದು ತಂಡ ಈ ‘ಕರಡೆ ಮಜಲು’ವಿಗೆ ಹೆಸರಾದುದು. ಈ ತಂಡವೇ ಮೈಸೂರಿನ ಸಂಗೀತ ಸಮ್ಮೇಳನದಲ್ಲಿ , ಸಾಂಪ್ರದಾಯಿಕ ಸ್ವಾಗತದ ನಂತರ, ಮೊದಲ ಕಾರ್ಯಕ್ರಮವಾಗಿ ಚತುರಶ್ರಜಾತಿಯ ವಿವಿಧ ಪ್ರಕಾರಗಳಲ್ಲಿ ತಮ್ಮ ವಾದ್ಯನಾದದ ಸೊಬಗನ್ನು ಪ್ರದರ್ಶಿಸಿದ್ದು. ಗಂಗಪ್ಪ ಎಫ್‌ ಹಳಕಟ್ಟಿ ಅವರ ನೇತೃತ್ವದಲ್ಲಿ ಬಸಪ್ಪ ಕಲಹಾಳ್‌, ಶಿವಪ್ಪ ಎಂ. ಹಳಕಟ್ಟಿ, ಶಿವಪ್ಪ ಎಫ್‌ ಹಳಕಟ್ಟಿ, ರಂಗಪ್ಪ ಭಜಂತ್ರಿ, ಗಂಗಪ್ಪ ಭಜಂತ್ರಿ, ಸಿದ್ದಪ್ಪ ಗೊಬ್ಬರಗುಂಪಿ ಮತ್ತು ಸೋಮಪ್ಪ ಕಲಹಾಳ್‌ ರವರು ಈ ತಂಡದಲ್ಲಿದ್ದರು.

ಇದಾದ ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ವಿದುಷಿ ವಿಜಯಲಕ್ಷಿ ್ಮ ಸುಬ್ರಹ್ಮಣಿಯಂ ಅವರ ಅಮೋಘ ಹಾಡುಗಾರಿಕೆಯಲ್ಲಿ ನಡೆಯಿತು. ಪಕ್ಕವಾದ್ಯದಲ್ಲಿ ಹೈದರಾಬಾದಿನ ಬಿ. ಎಸ್‌. ನಾರಾಯಣನ್‌ (ಪಿಟೀಲು), ಚೆನ್ನೈನ ತಿರುವಾವೂರು ವೈದ್ಯನಾಥನ್‌ (ಮೃದಂಗ), ಚೆನ್ನೈನ ಮಡಿಪಾಕ್ಕಂ ಎ. ಮುರಳಿ (ಘಟಂ) ಮತ್ತು ನಿಲಯದ ಆಕಾಶವಾಣಿ ಕಲಾವಿದರ ತಂಬೂರಿಯ ಶೃತಿಯಾಂದಿಗೆ ಈ ಸಂಗೀತ ಕಛೇರಿ ನಡೆಯಿತು.

ವಿಜಯಲಕ್ಷ್ಮಿ ಸುಬ್ರಹ್ಮಣ್ಯಂ ಅವರು ತಮ್ಮ ಐದನೇ ವಯಸ್ಸಿನಿಂದಲೇ ಸಂಗೀತಾಭ್ಯಾಸಕ್ಕೆ ತೊಡಗಿದರು. ಸಂಗೀತದ ವಾತಾವರಣದ ಮನೆತನದಲ್ಲಿ ಬೆಳೆದವರು. ಟಿ.ಆರ್‌. ಸುಬ್ರಹ್ಮಣ್ಯಂ, ವಿ. ಆರ್‌. ಕೃಷ್ಣನ್‌, ಎಸ್‌. ರಾಜನ್‌ ಮುಂತಾದವರ ಶಿಷ್ಯವೃತ್ತಿಯಲ್ಲಿ ತೊಡಗಿದ್ದವರು. ಗಂಧರ್ವ ಮಹಾವಿದ್ಯಾಲಯದ ಸಂಗೀತಾಲಂಕಾರ ಮತ್ತು ದೆಹಲಿ ವಿಶ್ವವಿದ್ಯಾಲಯದ ಸಂಗೀತ ಶಿರೋಮಣಿ ಪದವೀಧರರು. ಅರ್ಥಶಾಸ್ತ್ರದಲ್ಲೂ ಸ್ನಾತಕೋತ್ತರ ಪದವಿಯನ್ನ ಗಳಿಸಿದವರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಅಧಿಕಾರಿಯಾಗಿದ್ದವರು. ಚೆನ್ನೈನ ಪುರಂದರದಾಸ ಆರಾಧನಾಮಹೋತ್ಸವ(1997)ದ ‘ಗಾನಸೇವಾರತ್ನಂ’ ಮತ್ತು ಆಂಧ್ರ ಸಾಮಾಜಿಕ ಸಾಂಸ್ಕೃತಿಕ ಸಂಘ(2000)ದ ‘ಸಂಗೀತ ಶಿಖಾಮಣಿ’ ಪ್ರಶಸ್ತಿ ಪುರಸ್ಕೃತರು. ವಿಶ್ವಪರ್ಯಟನೆ ಮಾಡಿ ಕರ್ನಾಟಕಸಂಗೀತದ ಕಂಪನ್ನು ಎಲ್ಲೆಡೆ ಹರಡಿದವರು. ಜುಲೈ 2004ರಲ್ಲಿ ಮೆಲ್ಬೋರ್ನ್‌, ಆಸ್ಟ್ರೇಲಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಂಗೀತಶಾಸ್ತ್ರ ವಿಚಾರಸಂಕಿರಣದಲ್ಲಿ ‘ರಾಗ ಮತ್ತು ತಾಳ- ಒಂದು ಸೇತುವೆ’ ಪ್ರಬಂಧವನ್ನು ಅಲ್ಲಿ ನೆರೆದಿದ್ದ ಅಂತಾರಾಷ್ಟ್ರೀಯ ಸಂಗೀತ ವಿದ್ವತ್‌ ಮಂಡಳಿಯ ಮುಂದೆ ಮಂಡಿಸಿ ಪ್ರಶಂಸೆ ಗಳಿಸಿದವರು. (ವಿವರಗಳಿಗೆ ಈ ಜಾಲತಾಣಕ್ಕೆ ಭೇಟಿ ಕೊಡಿ: www.vijayalakshmysubramaniam.com)

ಸುಶ್ರಾವ್ಯವಾಗಿ ನಾಲ್ಕು ಕೃತಿಗಳನ್ನ ಇವರು ಸಮ್ಮೇಳನದಲ್ಲಿ ಹಾಡಿದರು. ಬೇಗಡೆಯಲ್ಲಿ ‘‘ವಲ್ಲಭನಾಯಕ ದಾಸೋ ಭವಾಮಿ’’ ಮನಮೋಹಕವಾಗಿತ್ತು. ತ್ಯಾಗರಾಜರ ಮತ್ತು ಮುತ್ತು(ದ್ದು)ಸ್ವಾಮಿ ದೀಕ್ಷಿತರ, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್‌ ಅವರ ರಚನೆಗಳು ಮಿಂಚಿದವು. ಕೊನೆಯಲ್ಲಿನ ಕೋಟೇಶ್ವರ ಅಯ್ಯರ್‌ ಅವರದ್ದೂ ‘‘ನಾದಸುಖ’’ ತಂದಿತು. ಸಂಸ್ಕೃತ, ತೆಲುಗು ಮತ್ತು ತಮಿಳು ರಚನೆಗಳನ್ನು ಅವರು ಆರಿಸಿಕೊಂಡಿದ್ದರೂ, ಒಂದಾದರೂ ಕನ್ನಡದ ಹಾಡನ್ನು ಹಾಡಲಿಲ್ಲವಲ್ಲಾ- ಎಂಬ ಕೊರತೆ ಮಾತ್ರ ಬಹಳ ಜನ ಶ್ರೋತೃಗಳ ಮನಸ್ಸಿನಲ್ಲಿ ಮೂಡದೇ ಇರಲಿಲ್ಲ. ಕಾರ್ಯಕ್ರಮ ಮುಗಿದ ನಂತರ, ಕಲಾವಿದೆ ವಿಜಯಲಕ್ಷ್ಮಿಯವರನ್ನು ನೇಪಥ್ಯದ ಬಣ್ಣದ ಮನೆಯಲ್ಲಿ ನಾನು ಭೇಟಿಯಾದೆ; ಅವರ ಅಮೋಘಕಚೇರಿಗಾಗಿ ಅಭಿನಂದಿಸುತ್ತಾ, ‘‘ಇಷ್ಟು ಸುಮಧುರವಾಗಿ ಹಾಡಿದ ನೀವು, ಇಲ್ಲಿ ಕನ್ನಡದ ಗಂಡುಮೆಟ್ಟಾದ ಮೈಸೂರಿನ ಸಭೆಯಲ್ಲಿ, ಕನ್ನಡದ ಒಂದಾದರೂ ಹಾಡನ್ನು ಹಾಡುವಿರೆಂದು ನಿರೀಕ್ಷಿಸಿದ್ದೆ; ನಿರಾಶನಾದೆ’’- ಎಂದೆ.

ಕಲಾವಿದರು ಯಾವ ಯಾವ ಹಾಡನ್ನು ಎಷ್ಟು ಎಷ್ಟು ಹೊತ್ತು ಹಾಡಬೇಕು; ತನಿ, ಆವರ್ತನ, ಪಲ್ಲವಿ, ಅನುಪಲ್ಲವಿ, ಆಲಾಪನೆಗಳೆಲ್ಲಾ ಎಷ್ಟೆಷ್ಟು ನಿಮಿಷದ ಅವಧಿಯಲ್ಲಿಯೇ ಮುಗಿಸಬೇಕು- ಎಂಬುದೆಲ್ಲವನ್ನೂ ಕಲಾವಿದರಲ್ಲ, ಬೇರೆ ಯಾರೋ ದೂರದ ದೆಹಲಿಯಲ್ಲಿ ಕುಳಿತ ಅಧಿಕಾರಿಗಳು ನಿರ್ಧರಿಸುತ್ತಾರಂತೆ, ಇದು ನಿಜವೆ? ‘ನಿಗದಿತವಾದ ಇಷ್ಟು ಕಾಲದ ಅವಧಿಯಲ್ಲಿ ಒಂದು ಸಂಗೀತ ಕಾರ್ಯಕ್ರಮ ಮುಗಿಯ(ಸ)ಬೇಕು’ ಎಂಬುದರ ವ್ಯವಸ್ಥಿತ ಏರ್ಪಾಡಿಗಾಗಿ ಈ ಅಂಶಗಳು ಅವಶ್ಯಕವಾಗಿದ್ದರೂ, ಸಂಗೀತಕ್ಕೆ ಭಾಷೆ ಅಷ್ಟು ಮುಖ್ಯವಲ್ಲ ಎಂಬುದೂ ಒಪ್ಪುವ ಮಾತಾದರೂ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೋಪಾದಿಯ ಕೇಂದ್ರದಲ್ಲಿ ನಡೆವ ಸಂಗೀತಸಮ್ಮೇಳನದಲ್ಲಿ ವಿಜಯಲಕ್ಷ್ಮಿ ಸುಬ್ರಹ್ಮಣಿಯಂ ಅವರಂತಹ ಸುಪ್ರಸಿದ್ಧ ವಿದುಷಿ ಹಾಡುತ್ತಿದ್ದಾಗ, ‘ಕನ್ನಡದ ಕೃತಿ’ಯಾಂದಾದರೂ ಅಲ್ಲಿ ಇದ್ದಿರಲೇ ಬೇಕೆಂಬ ಅರಿವು ಆಕಾಶವಾಣಿಯ ಆ ದೆಹಲಿಯ ಮಹಾನಿರ್ದೇಶಾಲಯದ ಮುಖ್ಯ ಅಧಿಕಾರಿಗಳಿಗೆ ಆಗಲಿಲ್ಲವೇ? ಇದು ನಮ್ಮ ದೌರ್ಭಾಗ್ಯ!

ಕಾರ್ಯಕ್ರಮದ ಕೊನೆಯ ಭಾಗವಾಗಿ ನಾಗಸ್ವರವಾದನ ಕಛೇರಿ ಇತ್ತು. ವಿ. ಸತ್ಯನಾರಾಯಣ ಅವರ ನಾಗಸ್ವರಕ್ಕೆ ಎ. ಕೃಷ್ಣಮೂರ್ತಿಗಳ ಸಹವಾದನ ಮತ್ತು ತಿರುವಾಲಪುತ್ತೂರು ಕಲಿಯಮೂರ್ತಿಯವರ ವಿಶೇಷ ಡೋಲು ಜೊತೆಗಿತ್ತು. ಸತ್ಯನಾರಾಯಣ ಅವರು ದೇಶದ ಪ್ರಮುಖ ನಾಗಸ್ವರವಾದನ ವಿದ್ವಾಂಸರುಗಳಲ್ಲಿ ಒಬ್ಬರು. ಚಿನ್ನ ವೀರಯ್ಯಗಾರು, ಅದ್ದಪಳ್ಳಿ ಭಾಸ್ಕರರಾವ್‌, ಒಂಗೋಳೆ ರಂಗಯ್ಯ ಮತ್ತು ನಟರಾಜನ್‌ ಅವರ ಬಳಿಯೂ ವಿಶೇಷ ಅಧ್ಯಯನ ಮಾಡಿದ್ದವರು. ಮೈಸೂರು ವಾಸುದೇವಾಚಾರ್ಯರ ಕೃತಿಯನ್ನ ಇವರು ಪ್ರಾರಂಭದಲ್ಲೇ ನುಡಿಸಿದಾಗ ಶ್ರೋತೃಗಳಿಗೆ ತುಂಬಾ ಖುಷಿಯಾಯಿತು. ಸಿಂಧುಭೈರವಿಯಲ್ಲಿ ಪುರಂದರದಾಸರ ಕೃತಿಯಾಂದನ್ನು ಹೋಲುವ ಕೃತಿಯಾಂದನ್ನು ನುಡಿಸಿದಾಗ ಸಂತೋಷ ಇಮ್ಮಡಿಸಿತು.

***

ಆಕಾಶವಾಣಿಯ ಸಂಗೀತ ಸಮ್ಮೇಳನಕ್ಕೆ ಈಗ ಚಿನ್ನದ ಹಬ್ಬ. 1954 ರ ಅಕ್ಟೋಬರ್‌ 23 ರಿಂದ 27 ರ ವರೆಗೆ 5 ದಿನಗಳ ಕಾಲ ನವದೆಹಲಿಯ ‘ಸಪು ಭವನ’ದಲ್ಲಿ ಮೊದಲ ಸಂಗೀತ ಸಮ್ಮೇಳನ ಉದ್ಘಾಟನೆಯಾಯಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌ರವರೇ ಇದನ್ನು ಉದ್ಘಾಟಿಸಿದರು. ಅದೇ ಕಾಲದಲ್ಲಿ ಚೆನ್ನೈ (ಆಗ ಮದ್ರಾಸ್‌)ನಲ್ಲಿ ಅಲ್ಲಿನ ರಾಜ್ಯಪಾಲರಾಗಿದ್ದ ಶ್ರೀ ಪ್ರಕಾಶ ಅವರು ಆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೆಹಲಿಯಲ್ಲಿ ಉಸ್ತಾದ್‌ ಅಲ್ಲಾವುದ್ದೀನ್‌ ಖಾನ್‌ ಅವರ ಸರೋದ್‌ ವಾದನ, ಪಂಡಿತ ಕಂಟೇಮಹಾರಾಜ್‌ ಅವರ ತಬಲದೊಂದಿಗೆ ಇದ್ದುದು ವಿಶೇಷ ಆಕರ್ಷಣೆಯಾಗಿತ್ತು. ಅಲ್ಲಿ ಮುಷ್ತಾಖ್‌ ಹುಸೇನ್‌ ಖಾನ್‌, ಗಂಗೂಬಾಯಿ ಹಾನಗಲ್‌, ವಿ. ಜಿ. ಜೋಗ್‌, ಅಲಿ ಅಕ್ಬರ್‌ ಖಾನ್‌, ಪನ್ನಲಾಲ್‌ ಘೋಷ್‌, ವಿಲಾಯತ್‌ ಹುಸೇನ್‌ ಖಾನ್‌, ಗಜಾನಂದರಾವ್‌ ಜೋಷಿ, ಡಿ. ವಿ. ಪಲುಸ್ಕರ್‌, ದಾಗರ್‌ ಸೋದರರು, ಬಿಸ್ಮಿಲ್ಲಾ ಖಾನ್‌, ಹೀರಾಬಾಯಿ ಬರೋಡೆಕರ್‌, ಸರಸ್ವತಿ ರಾಣೆ- ಮುಂತಾದ ಸಂಗೀತ ಕ್ಷೇತ್ರದ ಘಟನುಘಟಿಗಳು ಪಾಲ್ಗೊಂಡಿದ್ದರು.

ಅದೇ ಕಾಲದಲ್ಲಿ, ಇಲ್ಲಿ ಮದರಾಸಿನಲ್ಲಿ ನಡೆದ ಸಮ್ಮೇಳನದಲ್ಲಿ ಎಂ. ಎಸ್‌. ಸುಬ್ಬಲಕ್ಷ್ಮಿ ಅವರ ಕಾರ್ಯಕ್ರಮವಿತ್ತು. ಪಿಟೀಲಿನಲ್ಲಿ ತಿರುವೆಂಗಡ ಸುಂದರೇಶ ಅಯ್ಯರ್‌, ಮೃದಂಗದಲ್ಲಿ ಟಿ. ಕೆ. ಮೂರ್ತಿ ಜೊತೆಗಿದ್ದರು. ಮದರಾಸಿನ ಕಾರ್ಯಕ್ರಮದಲ್ಲಿ ಕುಂಭಕೋಣಂ ರಾಜಮಾಣಿಕಂ ಪಿಳ್ಳೈ, ಕೆ. ಎಸ್‌. ನಾರಾಯಣ ಐಯ್ಯಂಗಾರ್‌, ಕಾರೈಕುಡಿ ಸಾಂಬಶಿವ ಐಯ್ಯರ್‌, ರಂಗನಾಯಕಿ ರಾಜಗೋಪಾಲನ್‌, ಪಲ್ಲಡಂ ಸಂಜೀವನ್‌ ರಾವ್‌, ತಿರಿವೆಂಗಡು ಸುಬ್ರಹ್ಮಣ್ಯ ಪಿಳ್ಳೈ ಮೊದಲಾದ ಆ ದಿನಗಳ ಕರ್ನಾಟಕ ಸಂಗೀತದ ಹೆಸರಾಂತ ವಿದ್ವಾಂಸರು ಆ ಪ್ರಾರಂಭದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಅಂದಿನಿಂದ ಇಂದಿನವರೆಗೆ ಈ ಬಗೆಯ ಸಂಗೀತ ಸಮ್ಮೇಳನಗಳು ಆಕಾಶವಾಣಿಯ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ನಡೆದುಬರುತ್ತಿದೆ. ಪ್ರಸಾರ ಭಾರತಿಯ ಆಕಾಶವಾಣಿ ಪ್ರಕಟಿಸಿರುವ ವಿಶೇಷ ಹೊತ್ತಗೆಯ ಪ್ರಕಾರ, ಹಿಂದೂಸ್ತಾನಿ ಗಾಯನ, ಕರ್ನಾಟಕ ಸಂಗೀತ, ಜಾನಪದ ಸಂಗೀತ ಮತ್ತು ಸುಗಮ ಲಘು ಸಂಗೀತದ ಬಗೆಬಗೆಯ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಕಾಶವಾಣಿ ತನ್ನ ಕೇಂದ್ರಗಳಲ್ಲಿ ಇದೇ ಅಕ್ಟೋಬರ್‌ 09 ಮತ್ತು 10 ರಂದು ಹಮ್ಮಿಕೊಂಡಿತ್ತು. ಇಲ್ಲಿನ ಕಲಾವಿದರು ಅಲ್ಲಿಗೆ, ಅಲ್ಲಿನವರು ಇಲ್ಲಿಗೆ ಬಂದು ಹಾಡುವ, ನುಡಿಸುವ ಯೋಜನೆ ಸ್ತುತ್ಯರ್ಹ. ಹಾಡುಗಾರಿಕೆಯ ಜೊತೆಜೊತೆಗೆ ಶಹನಾಯಿ, ನಾಗಸ್ವರ, ಸಿತಾರ್‌, ಕೊಳಲು, ಮೃದಂಗ, ಘಟ, ತಬಲ, ಡೋಲು, ಸರೋದ್‌, ವೀಣಾ, ಚಿತ್ರ ವೀಣಾ, ವಿಚಿತ್ರ ವೀಣಾ, ರುದ್ರವೀಣಾ, ಗಿಟಾರ್‌, ಸಾರಂಗಿ, ಮೂರ್ಚಿಂಗ್‌, ಮುಂತಾದ ಎಲ್ಲಾ ಬಗೆಯ ವಾದ್ಯ ವಾದನಗಳ ಪ್ರತ್ಯೇಕ ಕಛೇರಿ ಕಾರ್ಯಕ್ರಮಗಳನ್ನು ಆಕಾಶವಾಣಿ ಈ ದಿನಗಳಲ್ಲಿ ನಡೆಸಿದೆ. ರಾತ್ರಿ 10:00 ರಿಂದ 11:00 ಕ್ಕೆ ನವೆಂಬರ್‌ 6, 2004 ರಿಂದ ಪ್ರಾರಂಭಿಸಿ ಫೆಬ್ರವರಿ 01, 2005 ರವರೆಗೆ ಬೇರೆ ಬೇರೆ ದಿನಗಳಲ್ಲಿ ವಿವಿಧ ಕೇಂದ್ರಗಳಿಂದ ಹೀಗೆ ಮೇಲೆ ನಡೆಸಿದ ಕಛೇರಿಗಳನ್ನ ಆಕಾಶವಾಣಿ ಪ್ರಸಾರ ಮಾಡುತ್ತದೆ. ಉಸ್ತಾದ್‌ ಅಲಿ ಅಹಮದ್‌ ಉಸೇನ್‌ ಖಾನ್‌ ಅವರ ಶಹನಾಯಿ ವಾದನದಿಂದ ಹಿಡಿದು ಪಂಡಿತ ಸೂರ್ಯಕಾಂತ್‌ ಕಲಾದ್‌ಕರ್‌ ಅವರ ಸುಂದರಿ ಕಛೇರಿಯಾಂದಿಗೆ ಈ ಪ್ರಸಾರ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

***

ಇಂತಹ ಸಂಗೀತ ಕಛೇರಿಗಳಿಗೆ ಅಭಿಮಾನೀ ಶ್ರೋತೃಗಳು ಹೋಗುವಾಗ ಕೆಲವು ಸಾಮಾನ್ಯ ನಿಯಮಗಳನ್ನ ಪಾಲಿಸಬೇಕಾದದ್ದು ಅವಶ್ಯಕ. ಆಸಕ್ತಿ ಇರುವವರು ಮಾತ್ರ ಹೋಗಿ, ಕುಳಿತು ಆನಂದಿಸಬೇಕಾದ ಕಾರ್ಯಕ್ರಮ ಇದು. ಸಂಗೀತ ಎಲ್ಲರನ್ನೂ ಆಕರ್ಷಿಸಬಹುದಾದರೂ ಈ ಬಗೆಯ ಕಛೇರಿಗಳು ಎಲ್ಲ ಕೇಳುಗರಿಗೂ ಹೇಳಿ ಮಾಡಿಸಿದ್ದಲ್ಲ. ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಈ ನಿಯಮಗಳು ಅನಿವಾರ್ಯ.

ಕಾರ್ಯಕ್ರಮ ಪ್ರಾರಂಭವಾಗುವುದಕ್ಕೆ ಹದಿನೈದು ನಿಮಿಷಗಳಾದರೂ ಮುಂಚೆ ಸಭೆಗೆ ಜನ ಹೋಗಿ ಕುಳಿತುಕೊಂಡಿರಬೇಕು. ಸಂಗೀತದ ಕಾರ್ಯಕ್ರಮಗಳಲ್ಲಿ ಸಭಿಕರು ಹೊತ್ತಾಗಿ ಬರುವುದು, ಓಡಾಡುವುದು, ಆಸನಗಳಿಗೆ ಹುಡುಕಾಡುವುದು, ಅದಕ್ಕಾಗಿ ಪಿಸುಗುಟ್ಟುವುದು- ಹೀಗೆ ಸಭಾಂಗಣದಲ್ಲಿ ಗಲಿಬಿಲಿಯಾದರೆ ಸಂಗೀತಗಾರರಿಗೆ ತೊಂದರೆಯಾಗುತ್ತದೆ. ಸಭಾಂಗಣ ತುಂಬಿದ್ದರೆ ಸಂಗೀತಗಾರರಿಗೆ ಹುಮ್ಮಸ್ಸು ಬರುತ್ತದೆ. ಮುಂದೆ ಕುಳಿತುಕೊಂಡಿರುವವರೂ ಸಹ ತಮ್ಮ ಇರುವಿಕೆಯಿಂದಲೇ ಕಛೇರಿ ನಡೆಸುವವರಿಗೆ ಸ್ಫೂರ್ತಿ ತುಂಬುತ್ತಾರೆ. ‘ಗಣ್ಯ ವ್ಯಕ್ತಿಗಳಿಗೆ, ಮಾಧ್ಯಮದವರಿಗೆ’ ಎಂದು ಮುಂಭಾಗದ ಕೆಲವು ಸಾಲಿನ ಆಸನಗಳನ್ನ ಸಾಮಾನ್ಯವಾಗಿ ಕಾಯ್ದಿರಿಸುತ್ತಾರಲ್ಲಾ , ಅವುಗಳು ಖಾಲಿ ಖಾಲಿಯಾಗಿ ಇದ್ದರಂತೂ ಆಭಾಸವೇ.

ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನ ಇಂತಹ ಸಭೆಗಳಿಗೆ ಕರೆದುಕೊಂಡು ಹೋಗುವುದು ಅಪಾಯಕರ. ಅಂತವರನ್ನ ಕುಳ್ಳಿರಿಸಿಕೊಂಡು ನಾವು ಎಲ್ಲೋ ಮಧ್ಯದಲ್ಲಿದ್ದೆವೆಂದರೆ ತೊಂದರೆ ತಪ್ಪಿದ್ದಲ್ಲ. ಈಗಂತೂ ಹಲವರು ಹೋದಲೆಲ್ಲಾ ತಮ್ಮ ಕೈಯಲ್ಲಿ ಮೊಬೈಲ್‌ (ಸೆಲ್‌) ಫೋನ್‌ ಗಳನ್ನು ಕೊಂಡೊಯ್ಯುತ್ತಾರಲ್ಲಾ, ಇವುಗಳನ್ನ ಕಛೇರಿ ಪ್ರಾರಂಭವಾಗುವುದಕ್ಕೆ ಮುನ್ನ ಆಫ್‌ ಮಾಡಿಬಿಡುವುದು ಅವಶ್ಯಕ. ಕಛೇರಿಯ ಮಧ್ಯದಲ್ಲೇ ಎದ್ದು ಹೋಗುವ ಅನುಮಾನ ಮೊದಲೇ ಇದ್ದರೆ, ಹಿಂಭಾಗದ ಸಾಲುಗಳಲ್ಲಿ ಕುಳಿತುಕೊಳ್ಳುವುದು ಅನುಕೂಲಕರ. ಸಂಗೀತಗಾರರು ತಮ್ಮ ಮನ ರಂಜಿಸಿದಾಗ ಶ್ರೋತೃಗಳು ಪ್ರತಿಕ್ರಿಯಿಸಬೇಕಾದುದು ಕಛೇರಿಯ ಒಂದು ಸಾಮಾನ್ಯ ಧರ್ಮ. ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಗಾಯನ, ಗಜಲ್‌ಗಳ ಶಾಯರಿಗಳ ವಾಚನವಾದಾಗ ಆಗಿಂದಾಗ್ಗೆ ಶ್ರೋತೃಗಳು ಸಮಯೋಚಿತವಾಗಿ ‘ವಾಹ್‌ ವಾಹ್‌’ ಎಂದು ಶಹಭಾಸ್‌ಗಿರಿಯನ್ನ ತೋರಿಸುವ ಸಂಪ್ರದಾಯವಿದೆ. ದಕ್ಷಿಣ ಭಾರತದಲ್ಲಿ ಆಗಾಗ್ಗೆ ಹಾಡಿನ ನಡುವೆಯೂ, ಮುಕ್ತಾಯವಾದಾಗಲೂ ಕರತಾಡನಗಳ ಮೂಲಕ ತಮ್ಮ ಮೆಚ್ಚುಗೆಯನ್ನ ಸೂಚಿಸುವ ಪದ್ಧತಿಯಿದೆ. ಸಭೆಗೆ ಹೋದಾಗ ಸೌಜನ್ಯಕ್ಕಾದರೂ ಬೇರೆಯವರೊಂದಿಗೆ ಸೇರಿಕೊಂಡು ತಮ್ಮ ಮೆಚ್ಚುಗೆಯನ್ನ ಸಮಯೋಚಿತವಾಗಿ ಈ ರೀತಿ ತೋರಿಸಿ ಕಲಾವಿದರನ್ನ ಪ್ರೋತ್ಸಾಹಿಸುವುದು ಶ್ರೋತೃಗಳ ಕರ್ತವ್ಯ.

ಅಮೋಘವಾಗಿ ಒಂದು ಕಾರ್ಯಕ್ರಮವನ್ನ ಕಲಾವಿದರೊಬ್ಬರು ನಡೆಸಿಕೊಟ್ಟನೆಂದರೆ ಆ ಕಾರ್ಯಕ್ರಮ ಮುಗಿದ ನಂತರ ಸಭಿಕರೆಲ್ಲಾ ಎದ್ದುನಿಂತು, ತಮ್ಮ ಕರತಾಡನಗಳ ಮುಖಾಂತರ ತಮ್ಮ ಮೆಚ್ಚುಗೆಯನ್ನ ಸೂಚಿಸುವುದು ಪಾಶ್ಚಾತ್ಯರಲ್ಲಿ ಪ್ರಚಲಿತವಾಗಿರುವ ಒಂದು ಪದ್ಧತಿ. ಈ ‘ಸ್ಟ್ಯಾಂಡಿಗ್‌ ಓವೇಷನ್‌’ ಕ್ರಮವನ್ನ ನಾವೂ ಅಲ್ಲೊಮ್ಮೆ ಇಲ್ಲೊಮ್ಮೆ ಇಲ್ಲಿ ಕಾಣುತ್ತಿದ್ದೇವೆ; ಇದು ಇನ್ನೂ ಹೆಚ್ಚುಹೆಚ್ಚಾಗಿ ಇಂತಹ ಸಂಗೀತ ಸಮ್ಮೇಳನಗಳಲ್ಲಿ ಬಳಕೆಗೆ ಬಂದರೆ ಚೆನ್ನಾಗಿರುತ್ತೆ ಅಲ್ಲವೇ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more