ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಮದ್ದು :ಹೂವುಗಳ ರಾಣಿ ಗುಲಾಬಿ

By Staff
|
Google Oneindia Kannada News


ಮನೆಯಂಗಳದಲ್ಲಿ ಔಷಧಿವನಪುಸ್ತಕದ ಉಪಯುಕ್ತ ಮಾಹಿತಿಗಳು ಇಲ್ಲಿವೆ.ಗುಲಾಬಿಯ ಔಷಧೀಯ ಗುಣಗಳನ್ನು ಈ ವಾರ ಅರಿಯೋಣ.



Home Medicine : Rose ಗುಲಾಬಿ ಅಂದರೆ ಹೂವುಗಳಲ್ಲಿ ರಾಣಿ. ಇದರ ಪರ್ಶಿಯನ್ ಹೆಸರು ‘ಗುಲಾಬ್’, ಇದು ಕನ್ನಡದಲ್ಲಿ ಗುಲಾಬಿಯಾಯಿತು. ಸಂಸ್ಕೃತದಲ್ಲಿ ಈ ಹೂವಿನ ಹೆಸರು ‘ಶತಪರ್ಣಿ’, ‘ತರುಣಿ’ ಎಂದಿದೆ.

ಜಗತ್ತಿನ ಅತ್ಯಂತ ಪುರಾತನ ಗುಲಾಬಿ ಜರ್ಮನಿಯಲ್ಲಿ ದೊರೆಯಿತಂತೆ. ಅದಕ್ಕೆ ಸಾವಿರ ವರ್ಷ ಆಗಿರಬಹುದು. ಅಮೇರಿಕಾದ ಕೊಲೆರೊಡೊದಲ್ಲಿ ದೊರಕಿದ (‘ಫಾಸಿಲ್’)ಪಳೆಯುಳಿಕೆಯ ಪ್ರಕಾರ ಗುಲಾಬಿ ನಾಲ್ಕು ಕೋಟಿ ವರ್ಷಗಳ ಹಿಂದಿನದೆಂದು ವಿಜ್ಞಾನಿಗಳು ಹೇಳುತ್ತಾರೆ. ಮಾನವನ ಉಗಮಕ್ಕಿಂತ ಗುಲಾಬಿ ಪುರಾತನ.

ಕಮಲೋಧ್ಭವನಾದ ಬ್ರಹ್ಮನು ಕಮಲವೇ ಶ್ರೇಷ್ಠ ಹೂವೆಂದು ಬಣ್ಣಿಸುತ್ತಿರುವಾಗ ವಿಷ್ಣು ಅವನನ್ನು ವೈಕುಂಠಕ್ಕೆ ಕರೆದೊಯ್ದು ಶತಪರ್ಣಿಯನ್ನು (ಬಿಳಿಯ ಗುಲಾಬಿಯ ಪೊದೆಯನ್ನು) ತೋರಿಸಿದನಂತೆ. ನಂತರ ಗುಲಾಬಿ ಶ್ರೇಷ್ಠ ಹೂವೆಂದು ಬ್ರಹ್ಮ ಒಪ್ಪಿದನಂತೆ. ಗ್ರೀಕರ ಪ್ರೇಮದೇವತೆ ವೀನಸ್(ರತಿ) ತನ್ನ ಪ್ರಿಯಕರ ಅಡೋನಿಸ್(ಕಾಮ)ನನ್ನು ಭೇಟಿಯಾಗಲು ಆತುರದಿಂದ ಹೋಗುವಾಗ ಕಾಲಿಗೆ ಮುಳ್ಳು ಚುಚ್ಚಿದಾಗ ಸೋರಿದ ರಕ್ತದಿಂದ ಗುಲಾಬಿ ಕೆಂಪುವರ್ಣಕ್ಕೆ ತಿರುಗಿತಂತೆ. ಗ್ರೀಕ್ ವೀರ ಅಕಿಲ್ಲೇಸನ ಗುರಾಣಿಯ ಮೇಲೆ ಗುಲಾಬಿಯನ್ನು ಕೆತ್ತಿರುವದರ ವರ್ಣನೆ ಆದಿಕವಿ ಹೋಮರ್ ಬಣ್ಣಿಸಿದ್ದಾನೆ.

ಕವಿಗಳಿಗೆ ಪ್ರಿಯವಾದ ಹೂವು ಗುಲಾಬಿ. ಪ್ರೀತಿಯನ್ನು ಕೆಂಪು ಗುಲಾಬಿಗೆ ಕವಿಗಳು ಹೋಲಿಸುತ್ತಾರೆ. ಷೇಕ್ಸ್‌ಪಿಯರ್, ಕೀಟ್ಸ್, ಶೆಲ್ಲಿ, ಬ್ಲೇಕ್, ಥಾಮಸ್ ಮೂರ ಗುಲಾಬಿಯನ್ನು ಬಣ್ಣಿಸಿದ್ದಾರೆ. ಟಾಗೋರರು ಬಣ್ಣಿಸಿದ್ದಾರೆ. (ಮಹರ್ಷಿ ಶ್ರಿಅರವಿಂದರ ಪ್ರಸಿದ್ಧ ಕವನ ‘ದಿ ರೋಸ್ ಆಫ್ ಗಾಡ್’ ಬೇಂದ್ರೆ ಕನ್ನಡಿಸಿದ್ದಾರೆ.)

ಗುಲಾಬಿಯ ಅಂದಚೆಂದಕ್ಕೆ ಭೂಲೋಕದಲ್ಲಿ ಮನಸೋಲದವರಿಲ್ಲ. ಗುಲಾಬಿಯ ಜಲ, ಅತ್ತರ್, ಎಣ್ಣೆ, ಗುಲ್ಕಂದ್ ಬಹಳ ಪ್ರಸಿದ್ಧ. ಯುರೋಪಿನ ಗುಲಾಬಿಯನ್ನು ಭಾರತಕ್ಕೆ ತಂದ ಕೀರ್ತಿ ಮೊಗಲರದು. ಬಾಬರ್ ಗುಲಾಬಿಯ ವ್ಯವಸಾಯಕ್ಕೆ ಉತ್ತೇಜನ ನೀಡಿದ್ದನಂತೆ. ಗುಲಾಬಿ ಎಣ್ಣೆಗೆ ಹೊರದೇಶಗಳಲ್ಲಿ (ಅಮೇರಿಕಾ, ಫ್ರಾನ್ಸ್, ಸ್ವಿಟ್ಜರ್‌ಲ್ಯಾಂಡ್, ಮಧ್ಯಯುರೋಪ್ ದೇಶಗಳಲ್ಲಿ) ಹೆಚ್ಚಿನ ಬೇಡಿಕೆ ಇದೆ.

ಗುಲಾಬಿಯು ಅಲಂಕಾರಕ್ಕೆ, ಸೌಂದರ್ಯವರ್ಧನೆಗೆ ಮಹತ್ವದ್ದಾಗಿರುವಂತೆ ಔಷಧೀಯ ಗುಣಗಳಿಂದಾಗಿಯೂ ಮಹತ್ವದ್ದಾಗಿದೆ.

* ಮಲಬದ್ಧತೆಯಿಂದ ಬಳಲುತ್ತಿರುವವರು ಎರಡು ಚಮಚ ಗುಲಾಬಿಹೂವಿನ ರಸಕ್ಕೆ ಒಂದು ಚಮಚೆ ತುಪ್ಪ ಬೆರಸಿ ರಾತ್ರಿ ಮಲಗುವಮುನ್ನ ಸೇವಿಸಿದರೆ ಇದು ಪರಿಣಾಮಕಾರಿಯಾಗಿರುತ್ತದೆ.

* ರಕ್ತಭೇದಿ ಬಾಧೆಗೆ 10 ಗ್ರಾಂ ಗುಲಾಬಿಹೂಗಳನ್ನು ಎರಡು ಗಂಟೆಕಾಲ ನೀರಲ್ಲಿ ನೆನೆಯಿಟ್ಟು, ನುಣ್ಣಗೆ ಅರೆದು, ಅದಕ್ಕೆ ಕಲ್ಲುಸಕ್ಕರೆಪುಡಿ ಬೆರಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ನೆಗಡಿಗೆ ಗುಲಾಬಿಚಹ ಕುಡಿಯಬೇಕು.

* ಬಾಯಿಯ ದುರ್ಗಂಧ ನಿವಾರಣೆಗೆ ಗುಲಾಬಿ(10 ಗ್ರಾಂ), ಕಲ್ಲುಸಕ್ಕರೆ(5 ಗ್ರಾಂ), ಪಚ್ಚಕರ್ಪೂರ(ಸ್ವಲ್ಪ) ಬೆರೆಸಿದ ಮಾತ್ರೆ ತಯಾರಿಸಿ, ಆಗಾಗ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸಿದರೆ ದುರ್ಗಂಧ ತೊಲಗುವದು. ಕೆಮ್ಮಿಗೂ ಇದು ಉಪಶಮನಕಾರಿ.

* ನಿದ್ರಾಹೀನತೆಗೆ ದಿಂಬಿನ ಮೇಲೆ ಗುಲಾಬಿ ಪಕಳೆಗಳನ್ನು ಹರಡಬೇಕು, ಇಲ್ಲವೆ ಗುಲಾಬಿ ಎಣ್ಣೆಯ ಕೆಲ ಹನಿ ಸಿಂಪರಿಸಬೇಕು.

* ರಕ್ತಮೂಲವ್ಯಾಧಿ, ದಾಹ, ಉರಿಮೂತ್ರ, ಗಂಟಲನೋವು, ಅಧಿಕ ರಕ್ತಸ್ರಾವ, ಬಾಯಿಹುಣ್ಣಿಗೆ ಗುಲಾಬಿಹೂವಿನ ಗುಲ್ಕಂದ ಸೇವಿಸಬೇಕು.

* ಗುಲಾಬಿ ಎಣ್ಣೆಯ ಅಭ್ಯಂಗ ಸ್ನಾನದಿಂದ ಚರ್ಮ ಕೋಮಲವಾಗುತ್ತದೆ.

* ಈ ಎಣ್ಣೆಯನ್ನು ಕಣ್ಣಿನ ಸುತ್ತಲೂ ಲೇಪಿಸಿದರೆ ಕಣ್ಣಿನ ಸುತ್ತಲೂ ಇದ್ದ ಕಪ್ಪು ತೊಲಗುತ್ತದೆ.

ಗುಲ್ಕಂದ್(ಗುಲ್ಕನ್) ತಯಾರಿಕಾ ವಿಧಾನ :

ಕಲ್ಲುಸಕ್ಕರೆ ಪುಡಿ ಅರ್ಧ ಭಾಗ, ಜೇನುತುಪ್ಪ ಅರ್ಧಭಾಗ, ಗುಲಾಬಿ ದಳಗಳು ಒಂದು ಭಾಗ ಅಥವಾ ಗುಲಾಬಿ ದಳಗಳು ಒಂದು ಭಾಗ, ಜೇನುತುಪ್ಪ ಒಂದು ಭಾಗ.

ಉತ್ತಮ ಗುಣಮಟ್ಟದ ಗುಲಾಬಿಯ ದಳಗಳನ್ನು ಆಯ್ದು, ಸ್ವಚ್ಛವಾಗಿ ತೊಳೆದು, ಒಣಗಿಸಿ, ಒಂದು ಪಿಂಗಾಣಿ ಜಾಡಿಯಲ್ಲಿ ಕಲ್ಲುಸಕ್ಕರೆ ಜೇನುತುಪ್ಪ ಹಾಕಿ ನಂತರ ಗುಲಾಬಿ ದಳಗಳನ್ನು ಹರಡಬೇಕು. ಮತ್ತೆ ಅದರ ಮೇಲೆ ಕಲ್ಲುಸಕ್ಕರೆ ಪುಡಿ, ಜೇನುತುಪ್ಪ ಹಾಕಿ ಗುಲಾಬಿ ದಳ(ಪಕಳೆ) ಹರಡಬೇಕು. ಈ ರೀತಿ ಹತ್ತು ಪದರುಗಳ ವರೆಗೆ ಹರಡಬೇಕು. ನಂತರ ಜಾಡಿಯನ್ನು ಸ್ವಚ್ಛವಾದ ಬಿಳಿಯ ಬಟ್ಟೆಯಿಂದ (ತೇವಾಂಶ ಒಳಗೆ ಹೋಗದಂತೆ ಗಟ್ಟಿಯಾಗಿ) ಮುಚ್ಚಬೇಕು. ನಂತರ ಆ ಜಾಡಿಯನ್ನು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಬಿಸಿಲಿನಲ್ಲಿ ಇಡಬೇಕು. ಸಂಜೆಯಾದೊಡನೆ ಮನೆಯೊಳಗೆ ಇಡಬೇಕು.

ಮೇಲೆ ಹೇಳಿದಂತೆ 20ದಿನ (ಮೂರು ವಾರ) ಬಿಸಿಲಿನಲ್ಲಿ ಇಡಬೇಕು. ಆಮೇಲೆ ಬಟ್ಟೆ ತೆಗೆಯಬೇಕು. ರುಚಿಕರವಾದ ಗುಲ್ಕಂದ್ ಸಿದ್ಧವಾಗುತ್ತದೆ. ಏಲಕ್ಕಿ ಬೆರೆಸಬಹುದು. ಜೇನುತುಪ್ಪ ಮಾತ್ರ ಬಳಸಿ ತಯಾರಿಸಿದ ಗುಲಕಂದ್ ಅತ್ಯುತ್ತಮ. ಇದನ್ನು ಬಹಳ ಕಾಲ ಇಡಬಹುದು.

ಮುಂದಿನ ವಾರ ತುಳಸಿ ಬಗ್ಗೆ ತಿಳಿಯೋಣ.. ಮತ್ತೆ ಸಿಗೋಣ..

ಪೂರಕ ಓದಿಗೆ-

30X40 ಸೈಟಲ್ಲಿ ಮನೆ, ಅದರ ಸುತ್ತಲೂ ಔಷಧಿವನ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X