ಕನ್ನಡ ಖೈದಿಗಳಿಗೆ ಉತ್ತರ ಭಾರತೀಯ ತಿನಿಸುಗಳು!
ಮೊನ್ನಿ ದಿನಾ ಬೆಂಗಳೂರಾಗಿರೋ ಪರಪ್ಪನ ಅಗ್ರಹಾರದ ದೊಡ್ದ ಸೆರಮನಿಯಾಗಿಂದ ಒಂದು ಮಸ್ತ್ ಸುದ್ದಿ ಹೊರಗ್ ಬಂದದಾ... ಉತ್ತರ ಭಾರತದ ಒಂದೈವತ್ ಮಂದಿ ಖೈದಿಗಳು ಕರ್ನಾಟಕದ ಹೈ ಕೋರ್ಟಿನಾಗೊಂದು ಮನವಿ ಸಲ್ಲಿಸ್ಯಾರ.
ನಮಗಾ ಇಲ್ಲಿ ಊಟ ಹಿಡ್ಸೋಣಿಲ್ಲ, ನಮಗ ಇಲ್ಲಿ ಬಚ್ಚಲು ಹಿಡ್ಸೋಣಿಲ್ಲ, ಇಲ್ಲಿ ಮಂದಿ ಭಾಷಾ ನಮಗ ತಿಳಿಯೋಣಿಲ್ಲ, ಅವರ ಕೂಡಾ ನಮಗ ಇರಕ ಅಗೋಣಿಲ್ಲ ... ನಮಗಾ ಅನುಕೂಲ ಮಾಡಿಕೊಡ್ರಲಾ ಅಂತ ನ್ಯಾಯಾಲಯದ ಮೊರಿ ಹೊಕ್ಕಾರಾ!
ಈಗೇನು ಮಾಡಬೇಕಪಾ?
ಈಗರಾ ಏನ್ ಮಾಡಬೇಕೈತಿ ಗೊತ್ತನು? ಪರಪ್ಪನ ಅಗ್ರಹಾರದಾಗ ಬೇರೆ ಬೇರೆ ಭಾಷಾ ಮಾತಾಡೂ ಭಾಳಾ ಮಂದಿ ಬರ್ತಿರ್ತಾರ. ಅವ್ರೆಲ್ಲ ಮೊದಲು ಹಿಂದಿ ಭಾಷ್ಯಾಗ್ ಮಾತಾಡೋದ್ ಕಲೀಬೇಕಾಗದ. ಅದಕ್ಕ ಕೈದಿಗಳು ಜೈಲು ಶಿಕ್ಷಾ ಅನುಭವ್ಸೋ ಮೊದ್ಲು ಹಿಂದಿ ಪಾಠ ಕಲೀಲೆ ಬೇಕಾ. ಬೇಕಾದ್ರ ಅದ್ನು ನೀವು ಶಿಕ್ಷಾದ ಒಂದು ಭಾಗ ಅಂದ್ಕೊಳ್ರಲಾ ಅನ್ನೂ ಆದೇಶ ಹೊರಡಸ್ ಬೇಕಾಗದ...
ನಮ್ ಕನ್ನಡ ಮಂದಿ ಮುದ್ದಿ, ರೊಟ್ಟಿ ಜೈಲಿನ ಹೊರಗ ಹ್ಯಾಗೂ ರಗಡ್ ತಿಂದಿರ್ತಾರಾ. ಅದಕ್ಕಾ ಅವುರಗ ಉತ್ತರ ಭಾರತೀಯ ಅಡಿಗಿ ಉಣ್ಣೂ ಶಿಕ್ಷೆ ಕೊಡಬೇಕ್ರಿಪಾ. ಬಾಯಾಗ್ ಬೆರಳಿಟ್ರ ಕಚ್ಚೂದಿಲ್ಲ ಅನ್ನೂ ಕನ್ನಡ ಮಂದಿ ಸಾಸಿವಿ ಎಣ್ಣೀ ಒಳಗ ಮಾಡಿದ್ ಪರೋಟ ತಿನ್ನೋದಿಲ್ಲಾ ಅಂತಾರೇನು? ಇಡೀ ಜೈಲದಾಗ ಭಾವೈಕ್ಯತಿ ಉಳೀಬೇಕ ಅಂದ್ರ ಒಳಗಿರೂ ಎಲ್ಲಾ ವೈವಿಧ್ಯತೆ ಅಳಿಸೋದ ಛಲೋ ಐತಿ. ಜೈಲಾಗ ಹಿಂದಿ ಮಾತಾಡೋ ಮಂದೀಗಾ ತುಸಾ ಶಿಕ್ಷಾದಾಗ ರಿಯಾಯ್ತಿ ಕೊಡಬೇಕು ಅಂತಲೂ ಶಿಫಾರಸ್ಸು ಮಾಡಬೇಕ್ರಿಪಾ.
ದಿನಾ ಹಿಂದಿ ಪತ್ರಿಕಾ ಓದೂದ ಕಡ್ಡಾಯ ಮಾಡಬೇಕ್ರಿಪಾ. ಒಟ್ನಾಗ ಜೈಲು ಶಿಕ್ಷಿ ಮುಗ್ಸಿ ಹೊರಗ್ ಬರೋ ಹೊತ್ತಿಗ ಕನ್ನಡದವ ಚಲೋ ಹಿಂದಿ ಪಂಡಿತ ಆಗಬೇಕ್ರಿಪಾ. ಯಾಕಂದ್ರಾ ಆಗ ಅಂವ ಇಡೀ ಭಾರತದ ಯಾವ ಜೈಲಾಗ್ ಬೇಕಾರ ಬಾಳಬಲ್ಲ ನೋಡ್ರಿ.
ಅಂದಹಾಂಗ ಸೆರಮನಿಯಾಗಿನ ಕಂಬೀನ ಒಂದು ಎರಡೂ ಎಣಿಸೋದು ಬಿಟ್ಟು ಏಕ್, ದೋ ಅನ್ನೂದು ಕೇಳಾಕ್ ಹತ್ತೈತೋ ಇಲ್ಲೋ ಗುರುಗಳಾ!
(ಸ್ನೇಹಸೇತು : ಏನ್ ಗುರು?)












Click it and Unblock the Notifications