• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಡಪ್ಯೂನ್ ಮಗ ಪಂಚತಾರಾ ಹೋಟೆಲ್ ಕಟ್ಟಿದ!

By * ವಿಶ್ವೇಶ್ವರ ಭಟ್
|
ಜೀವನದಲ್ಲಿ ಕೆಲವರನ್ನು ಭೇಟಿ ಮಾಡಲೇಬೇಕೆಂದು ಅಂದುಕೊಂಡಿರುತ್ತೇವೆ. ಆದರೆ ಆಗುವುದಿಲ್ಲ.ನಾನಂತೂ ನನ್ನ ಜೀವನದಲ್ಲಿ ಹೋಟೆಲ್ ಉದ್ಯಮದ ಇಬ್ಬರು ದಿಗ್ಗಜರನ್ನು ಭೇಟಿಯಾಗಬೇಕೆಂದಿದ್ದೆ. ಮೊದಲನೆಯವರು ಒಬೇರಾಯ್ ಹೋಟೆಲ್‌ನ ಮಾಲೀಕ ರಾವ್‌ಬಹಾದೂರ್ ಮೋಹನ್ ಸಿಂಗ್ ಒಬೇರಾಯ್ ಹಾಗೂ ಎರಡನೆಯವರು ನೀವು.' ಹಾಗೆಂದು ಹಸ್ತ ಚಾಚಿದೆ. ಅವರು ಎರಡೂ ಕೈಗಳಿಂದ ಬರಸೆಳೆದು ಬರಮಾಡಿಕೊಂಡರು. ಆ ಆತ್ಮೀಯ ಸ್ವಾಗತದ ಅಪ್ಪುಗೆಯಲ್ಲಿಯೇ ಅವರು ಮನಗೆದ್ದಿದ್ದರು. ಮುಂದಿನ ಮೂರು ತಾಸು ನನ್ನದಾಗಿರಲಿಲ್ಲ. ನೆನಪಿನ ಹೂಜಿ ಮಾತ್ರ ಕ್ಷಣಕ್ಷಣಕ್ಕೂ ಭರ್ತಿಯಾಗುತ್ತಿತ್ತು.

ಅಂದು ಕಾಮನ್‌ಫ್ರೆಂಡ್ ಮೂಲಕ ಲೀಲಾ ಹೋಟೆಲ್‌ನ ಮಾಲೀಕರಾದ ಕ್ಯಾಪ್ಟನ್ ಸಿ.ಪಿ. ಕೃಷ್ಣನ್ ನಾಯರ್ ಅವರೇ ಸಂಪರ್ಕಿಸಿದಾಗ ಒಂದು ಕ್ಷಣ ನಂಬಲಾಗಲಿಲ್ಲ. ಬಿಡುವಿದ್ದರೆ ಮಧ್ಯಾಹ್ನ ಇಬ್ಬರೇ ಕುಳಿತು ಊಟ ಮಾಡೋಣ' ಎಂದು ಹೇಳಿದಾಗ, ಆ ಆಮಂತ್ರಣವನ್ನು ಒಪ್ಪಿಕೊಳ್ಳದೇ ಇರಲು ಆಗಲಿಲ್ಲ. ಕಾರಣ ಅವರನ್ನೊಮ್ಮೆ ಜೀವನದಲ್ಲಿ ಭೇಟಿಯಾಗಬೇಕೆಂದಿದ್ದೆ. ಆ ಕ್ಷಣ ಅಯಾಚಿತವಾಗಿ ಬಂದಿತ್ತು. ಒಬೇರಾಯ್ ಹೋಟೆಲ್‌ನ ಮಾಲೀಕರನ್ನು ಭೇಟಿ ಮಾಡಬೇಕೆಂದು ಆಸೆಪಟ್ಟಿದ್ದೇಕೆ ಎಂದು ಕೇಳಬಹುದು. ಅವರು ಶ್ರೀಮಂತರು, ಪಂಚತಾರಾ ಹೋಟೆಲ್‌ನ ಮಾಲೀಕರು ಎಂಬ ಕಾರಣಕ್ಕಲ್ಲ. ಮನಸ್ಸು ಮಾಡಿದರೆ ಒಬ್ಬ ಸಾಮಾನ್ಯವ್ಯಕ್ತಿ ಜೀವನದಲ್ಲಿ ಏನೆಲ್ಲ, ಎಷ್ಟೆಲ್ಲ ಸಾಧಿಸಬಹುದೆಂಬುದನ್ನು ಈ ಜನ್ಮದಲ್ಲಿಯೇ ತೋರಿಸಿಕೊಟ್ಟವರನ್ನು ಕಣ್ಣಾರೆ ನೋಡಿ ಒಂದಷ್ಟು ಉತ್ತಮ ಸಂಗತಿಗಳಿಗೆ ಒಡ್ಡಿಕೊಳ್ಳಬೇಕೆಂಬ ಕಾರಣಕ್ಕೆ ಸುಮಾರು ಹದಿನೇಳು ವರ್ಷಗಳ ಕೆಳಗೆ ಒಂದು ಪುಸ್ತಕ ಓದಿದ್ದೆ. ಅದರ ಹೆಸರು Dare to Dream. ಕನಸು ಕಾಣಲು ಧೈರ್ಯ ಬೇಕು ಎಂಬರ್ಥದ ಶೀರ್ಷಿಕೆ ಓದಿ ಪುಸ್ತಕವನ್ನು ಕೈಗೆತ್ತಿಕೊಂಡರೆ ಅದು ರಾವ್‌ಬಹಾದೂರ್ ಮೋಹನ್ ಸಿಂಗ್ ಒಬೇರಾಯ್ ಜೀವನ ಚರಿತ್ರೆ. ಅದನ್ನು ಓದಿ ಮುಗಿಸಿದಾಗ ಆ ಒಬೇರಾಯ್‌ನನ್ನು ಭೇಟಿ ಮಾಡಬೇಕೆಂದು ಅನಿಸಿತ್ತು. ಅಂಥ ಅವಕಾಶ ಬೆಂಗಳೂರಿನಲ್ಲಿ ಒಬೇರಾಯ್ ಹೋಟೆಲ್‌ನ ಉದ್ಘಾಟನೆಯ ಸಂದರ್ಭದಲ್ಲಿ ಸಿಕ್ಕಿತ್ತು.

ನಿಮಗೆ ಅಚ್ಚರಿಯೆನಿಸಬಹುದು. ಒಬೇರಾಯ್ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ. ಪ್ಲೇಗ್ ರೋಗ ಕಾಲಿಟ್ಟಾಗ ಊರನ್ನು ಬಿಟ್ಟು ಶಿಮ್ಲಾಕ್ಕೆ ಓಡಿಹೋದ ಅವರು, ಅಲ್ಲಿನ ಸೆಸಿಲ್ ಹೋಟೆಲ್‌ನಲ್ಲಿ ಸಾಮಾನ್ಯ ಮಾಣಿಯಾಗಿ ಕೆಲಸಕ್ಕೆ ಸೇರಿಕೊಂಡರು. ಆಗ ತಾನೇ ಮದುವೆಯಾದ ಹೆಂಡತಿಯನ್ನು ತವರಿಗೆ ಕಳಿಸಿದ್ದರು. ಕಾರಣ ಆಗ ಸಿಗುತ್ತಿದ್ದ ಸಂಬಳ ಇಬ್ಬರ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ದುಡಿದ ಹಣವನ್ನೆಲ್ಲ ಹೆಂಡತಿಗೆ ಕಳಿಸುತ್ತಿದ್ದರು. ತಮ್ಮ ಪರಿಶ್ರಮ, ಶ್ರದ್ಧೆ ಹಾಗೂ ಆಸಕ್ತಿಯಿಂದಾಗಿ ಹೋಟೆಲ್ ಮಾಲೀಕನ ವಿಶ್ವಾಸವನ್ನು ಬಹುಬೇಗ ಗಳಿಸಿದರು. ಎರಡು ವರ್ಷವಾಗುವ ಹೊತ್ತಿಗೆ ವೇಟರ್ ಆಗಿದ್ದ ಒಬೇರಾಯ್ ಮ್ಯಾನೇಜರ್ ಆಗಿದ್ದರು. ಮಾಲೀಕನ ಎಲ್ಲ ಸಂಕಟ, ನೆರವುಗಳಿಗೆ ಹೆಗಲು ಕೊಡುತ್ತಿದ್ದ ಒಬೇರಾಯ್, ಹೋಟೆಲ್ ತಮ್ಮದೇ ಎಂದು ಭಾವಿಸಿ ತೊಡಗಿಸಿಕೊಂಡಿದ್ದರು. ಈ ಸಂಗತಿ ಮಾಲೀಕನಿಗೆ ತುಂಬಾ ತುಂಬಾ ಇಷ್ಟವಾಯಿತು. ಅನಾರೋಗ್ಯದ ಕಾರಣದಿಂದ ಹೋಟೆಲನ್ನು ಮಾರಲು ನಿರ್ಧರಿಸಿದಾಗ, ಅದನ್ನು ಖರೀದಿಸುವ ಅವಕಾಶವನ್ನು ಒಬೇರಾಯ್‌ಗೇ ನೀಡಿದರು. ಹೆಂಡತಿಯ ಒಡವೆ, ಆಭರಣ, ಮನೆ, ಆಸ್ತಿಗಳನ್ನೆಲ್ಲ ಮಾರಾಟ ಮಾಡಿದರೂ ಆ ಹೋಟೆಲ್ ಖರೀದಿಸುವಷ್ಟು ಹಣ ಒಟ್ಟಾಗಲಿಲ್ಲ. ಕೊನೆಗೆ ಒಬೇರಾಯ್‌ನ ನಿಷ್ಠೆ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಕರಗಿ ಸೆಸಿರ್ ಹೋಟೆಲನ್ನು ಅವರಿಗೇ ನೀಡಿದರು. ಯಾವ ಹೋಟೆಲ್‌ಗೆ ಮಾಣಿಯಾಗಿ ಸೇರಿದ್ದರೋ, ಆ ಹೋಟೆಲನ್ನು ಅವರು ಖರೀದಿಸಿದ್ದರು. ಮಾಣಿಯಾಗಿ ಕೆಲಸ ಮಾಡುವಾಗ ಅವರಿಗೊಂದು ಕನಸಿತ್ತಂತೆ. ಅದೇನೆಂದರೆ ಜೀವನದಲ್ಲಿ ನನ್ನ ಹೆಸರಿನಲ್ಲಿ ಹೋಟೆಲ್ ಸ್ಥಾಪಿಸಬೇಕು, ಭಾರತದ ಯಾವುದೇ ಪ್ರಮುಖ ನಗರಗಳಿಗೆ ಹೋದರೂ ಅಲ್ಲಿ ನನ್ನ ಹೋಟೆಲ್ ಇರಬೇಕು, ಆ ಹೋಟೆಲ್ ಪಂಚತಾರಾ ಹೋಟೆಲ್ಲೇ ಆಗಿರಬೇಕು... ಜೀವನದಲ್ಲಿ ಕನಸು ಕಾಣುವುದು ಸುಲಭ. ಆದರೆ ಇಂಥ ಕನಸು ಕಾಣುವುದಿದೆಯಲ್ಲ ಅದಕ್ಕೆ ತುಸು ಧೈರ್ಯ ಇರಬೇಕು. ಪಾತಾಳದಲ್ಲಿ ಕುಳಿತ ಹೆಳವ ಎವರೆಸ್ಟ್ ಏರುವ ಕನಸು ಕಾಣುವುದು ಸುಲಭ. ಆದರೆ ಅದನ್ನು ನನಸಾಗಿಸಲು ಧೈರ್ಯ ಬೇಕು. ಸಾಧಿಸಿ ತೋರಿಸಲು ಎಂಟೆದೆಯ ಛಲ ಬೇಕು.

ಒಬೇರಾಯ್ ಅಂಥ ಕನಸು ಕಂಡು ಬೆಚ್ಚಗಿನ ಚಾದರ ಹೊದ್ದು ಮಲಗಲಿಲ್ಲ. ಆದರೆ ಸಾಧಿಸಿ ತೋರಿಸಿದರು. ಭಾರತದ ಎಲ್ಲ ಪ್ರಮುಖ ನಗರಗಳಲ್ಲೂ ಪಂಚತಾರಾ ಹೋಟೆಲ್ ಸ್ಥಾಪಿಸಿದರು. ಹೊರದೇಶಗಳಲ್ಲೂ ಒಬೇರಾಯ್ ಹೋಟೆಲ್ ಕಟ್ಟಿದರು. ಒಬೇರಾಯ್ ಎಂಬುದು ಪಂಚತಾರಾ ಹೋಟೆಲ್‌ಗೆ ಅನ್ವರ್ಥಪದವಾಯಿತು. ಇಂದು ಐವತ್ತಕ್ಕೂ ಹೆಚ್ಚು ಹೋಟೆಲ್ ಹೊಂದಿರುವ ಒಬೇರಾಯ್ ಗ್ರೂಪ್ ವಿಶ್ವ ಹೋಟೆಲ್ ಉದ್ಯಮದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇವೆಲ್ಲ ಸಾಧ್ಯವಾಗಿದ್ದು ಅದೇ ಒಬೇರಾಯ್ ಎಂಬ ಮಾಣಿಯಿಂದ! ವೇಟರ್ ಎಂದು ಅಂದು ಮೂಗು ಮುರಿಯುತ್ತಿದ್ದವರೆಲ್ಲ ಇಂದು ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಿದ ಮಹಾಪುರುಷ ಎಂದು ಒಬೇರಾಯ್ ಅವರನ್ನು ಕೊಂಡಾಡುತ್ತಾರೆ.

ಇಂಥ ಸಾಧಕನನ್ನು ಭೇಟಿಮಾಡಲು ಯಾರು ತಾನೇ ಇಷ್ಟಪಡುವುದಿಲ್ಲ? ಅಂಥದೇ ಬಯಕೆಯನ್ನು ನಾನು ಕ್ಯಾಪ್ಟನ್ ಕೃಷ್ಣನ್ ನಾಯರ್ ಬಗೆಗೂ ಹೊಂದಿದ್ದೆ. ಕಾರಣ ಅವರದೂ Dare to Dream ಕತೆಯೇ. ಹೆಳವ ಹಾರಲು ಹೊರಟ ಗಾಥೆಯೇ. ಸಾಮಾನ್ಯವಾಗಿ ಯಾರೇ ಆಗಲಿ, ಐವತ್ತು ದಾಟಿದ ಬಳಿಕ ಹೊಸ ಸಾಹಸಕ್ಕೆ ಮುಂದಾಗುವುದಿಲ್ಲ. ಯಾಕೋ ಮೊದಲಿದ್ದಂಥ ಧೈರ್ಯ ಈಗಿಲ್ಲ ಎಂದು ಮುದುಡಿ ಕುಳಿತುಕೊಳ್ಳುತ್ತಾರೆ. ಈ ವಯಸ್ಸಿನಲ್ಲಿ ಯಾಕೆ ರಿಸ್ಕ್ ಎಂದು ಅಲ್ಲಿ ತನಕ ಗಳಿಸಿದ್ದನ್ನು manageಮಾಡಿಕೊಂಡು ಹೋದರೆ ಸಾಕು ಎಂಬ ಯೋಚನಾಧಾಟಿಗೆ ತಮ್ಮನ್ನು ಟ್ಯೂನ್ ಮಾಡಿಕೊಳ್ಳುತ್ತಾರೆ. ಈ ಇಳಿವಯಸ್ಸಿನಲ್ಲಿ ಎಲ್ಲವನ್ನೂ ಮೈಮೇಲೆ ಎಳೆದುಕೊಂಡರೆ ನಿಭಾಯಿಸುವುದು ಕಷ್ಟ ಎಂದು ತೆಪ್ಪಗಾಗುತ್ತಾರೆ, ಅಂಥ ಮನಸ್ಥಿತಿಗೆ ತಮ್ಮನ್ನು ನಂಬಿಸಿಕೊಳ್ಳುತ್ತಾರೆ. ಇಂಥವರೇನಾದರೂ ಅರವತ್ತಕ್ಕೆ ಕಾಲಿಟ್ಟರೆ ಮುಗಿದೇಹೋಯಿತು, ರಿಟೈರ್ ಆಗಿ ರಾಮ ಶಿವ ಎಂದು ಹೇಳಲಾರಂಭಿಸುತ್ತಾರೆ. ಅರವತ್ತರ ನಂತರ ಅವರೆಂಥವರೇ ಆದರೂ ಹೊಸ ಸಾಹಸಕ್ಕೆ ಮುನ್ನುಗ್ಗುವುದಿಲ್ಲ. ಯಾರೂ ಸಹ ಅವರಿಂದ ಅಂಥದನ್ನು ನಿರೀಕ್ಷಿಸುವುದೂ ಇಲ್ಲ. ಬಹುತೇಕ ಮಂದಿಗೆ ಅರವತ್ತರ ಅನಂತರ ಜೀವನ ಮುಗಿದ ಹಾಗೆ, ಬದುಕಿದ್ದರೂ. ಅರವತ್ತರ ನಂತರ ಮೊಮ್ಮಕ್ಕಳನ್ನು ಆಡಿಸಿಕೊಂಡು, ಟಿವಿ ನೋಡಿಕೊಂಡು ಮನೆಯಲ್ಲಿ ಬಿದ್ದಿರುವುದೇ ದೈನಂದಿನ ದಿನಚರಿ.

ಕ್ಯಾಪ್ಟನ್ ಕೃಷ್ಣನ್ ನಾಯರ್ ಸಾಧನೆ ಯಾಕೆ ಮಹತ್ವದ್ದೆನಿಸುತ್ತದೆ ಅಂದ್ರೆ ಅವರು ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದಾಗ ಅವರಿಗೆ ಅರವತ್ತೈದು ವರ್ಷ ವಯಸ್ಸು. ಬೇರೆಯವರು ರಿಟೈರ್ ಆಗುವ ಹೊತ್ತಿಗೆ ನಾಯರ್ ಹೊಸ ಜೀವನಕ್ಕೆ ಬದುಕಿನ ಮಗ್ಗುಲನ್ನು ಬದಲಿಸಿದ್ದರು. ಹೊಸ ಸಾಹಸಕ್ಕೆ ಅಣಿಯಾಗಿದ್ದರು. ಅವರಿಗೆ ಅಂಥ ಅನಿವಾರ್ಯತೆಯೇನೂ ಇರಲಿಲ್ಲ. ಆರಾಮಾಗಿ ನಿವೃತ್ತಿಯನ್ನು ಕಳೆಯಬಹುದಿತ್ತು. ಆದರೆ ಅವರ ಜಾಯಮಾನವಿದೆಯಲ್ಲ, ಅದು ಕುಳಿತುಕೊಳ್ಳಲು ಬಿಡುವಂಥದ್ದಲ್ಲ. ಪದೇಪದೆ ಹೊಸಹೊಸ ಅನುಭವಗಳಿಗೆ ಡಿಕ್ಕಿ ಹೊಡೆಯುತ್ತಿರಬೇಕು. ಬದುಕು ಕುಳಿತಲ್ಲಿ ಕುಂತಿರಬಾರದು. ತಿರುಗಿದಲ್ಲೇ ತಿರುಗುತ್ತಿರಬಾರದು. ಏನಾದರೂ ಹೊಸತು ಮಾಡುತ್ತಿರಬೇಕು. ಈ ಹುಚ್ಚು ತುಡಿತವೇ ಅವರನ್ನು ಸಾಧನೆಯ ಪಥದಲ್ಲಿ ಮೈಲಿಗಲ್ಲುಗಳಾಗಿ ನಿಲ್ಲುವಂತೆ ಮಾಡಿದೆ. ಇಡೀ ದೇಶವೇ ಹೆಮ್ಮೆಪಡುವಂಥ ಅದ್ಭುತವೆನಿಸುವ ಹೋಟೆಲ್‌ಗಳನ್ನು ಕಟ್ಟಿರುವ ನಾಯರ್ ಅವರೇ ಹೇಳುವಂತೆ ಅವು ಹೋಟೆಲ್ ಗಳಲ್ಲ, monumentಗಳು, ರಾಷ್ಟ್ರೀಯ ಸ್ಮಾರಕಗಳು.

ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲನ್ನು ನೋಡಬೇಕು. ಮೈಸೂರಿನ ಅರಮನೆಯಂತಿದೆ ಥೇಟಾನುಥೇಟು. ಅಲ್ಲಿನ ಒಳಾಂಗಣಗಳಂತೂ ಅರಮನೆಯದೇ ಪಡಿಯಚ್ಚು. ಅದಕ್ಕೆ ನಾಯರ್ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ. ಹತ್ತು ವರ್ಷದ ಬಾಲಕನಿದ್ದಾಗ ಕೇರಳದ ಕಣ್ಣಾನೂರಿನಿಂದ ಅವರು ಮೈಸೂರು ದಸರಾ ನೋಡಲೆಂದು ನಾಲ್ಕೈದು ದಿನ ಚಕ್ಕಡಿಗಾಡಿಯಲ್ಲಿ ಪ್ರಯಾಣ ಮಾಡಿ ಬಂದಿದ್ದರಂತೆ. ಮೈಸೂರಿನ ಅರಮನೆ ಕಂಡು ಪುಳಕಿತರಾಗಿದ್ದರಂತೆ. ಮೈಸೂರಿನ ನೆನಪಾದಾಗಲೆಲ್ಲ ಅರಮನೆಯೂ ನೆನಪಾಗುತ್ತಿತ್ತಂತೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಾಯರ್‌ರನ್ನು ಮೈಸೂರು ದಸರಾ ಉತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಮಂತ್ರಿಸಿದ್ದರಂತೆ. ಅರಮನೆಯೊಳಗೆ ತಿರುಗಾಡುವಾಗ ಹೆಗಡೆಯವರು, ನಾಯರ್, ನೀವ್ಯಾಕೆ ಈ ಅರಮನೆ ಮಾದರಿಯಲ್ಲಿ ಹೋಟೆಲ್ ಕಟ್ಟಬಾರದು?' ಎಂದು ಕೇಳಿದರಂತೆ. ಕಟ್ಟಿದರೆ ಅರಮನೆಯಂಥ ಹೋಟೆಲನ್ನೇ ಕಟ್ಟಬೇಕು ಎಂದು ಅಲ್ಲಿಯೇ ನಿರ್ಧರಿಸಿದರಂತೆ. ಅದಾಗಿ ಹನ್ನೆರಡು ವರ್ಷಗಳ ಬಳಿಕ ಅವರು ತಮ್ಮ ಕನಸಿನ ಅರಮನೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಿದ್ದು.

ನಾನೂರು ಐವತ್ತು ಕೋಟಿ ರೂ. ವೆಚ್ಚದಲ್ಲಿ ಏಳೂವರೆ ಎಕರೆ ವಿಸ್ತೀರ್ಣದಲ್ಲಿ ಕಟ್ಟಿರುವ ಈ ಹೋಟೆಲ್ ಜಗತ್ತಿನ 50 ವೈಭವೋಪೇತ ಹೋಟೆಲ್ ಗಳ ಪೈಕಿ ಒಂದು ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಈ ಹೋಟೆಲ್‌ಗೆ ಭೇಟಿ ನೀಡಿದ ಖ್ಯಾತ ಆರ್ಕಿಟೆಕ್ಟ್ ಲಾರಿ ಬೇಕರ್ ಹೇಳಿದ್ದೇನು ಗೊತ್ತಾ? ನಾನು ಮೂರು ದಿನಗಳಲ್ಲಿ ಈ ಹೋಟೆಲ್‌ನ ಪ್ರತಿ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನನಗೆ ಯಾವುದೇ ದೋಷ ಹುಡುಕಲು ಸಾಧ್ಯವಾಗಿಲ್ಲ. ಕ್ಯಾಪ್ಟನ್ ನಾಯರ್ ಸದಾ ಸೂಟು, ಬೂಟು ಧರಿಸಿ ಒಪ್ಪ ಓರಣವಾಗಿರುವಂತೆ ಅವರ ಹೋಟೆಲ್ ಕೂಡ ಅಷ್ಟೇ ಗರಿಗರಿಯಾಗಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಉಳಿದುಕೊಳ್ಳುವುದೆಂದರೆ ಹೋಟೆಲ್‌ನಲ್ಲಿ ಕಾಲ ಕಳೆದಂತೆ ಅಲ್ಲ, ಅದೊಂದು ಜೀವಮಾನದ ಮಧುರ ಕ್ಷಣಗಳ ನಿರಂತರ ನೆನಪು.' ಇದು ಕೇವಲ ಅವರದ್ದೊಂದೇ ಅನಿಸಿಕೆ ಅಲ್ಲ. ಅಲ್ಲಿ ಉಳಿದವರೆಲ್ಲರ ಅನುಭವವೂ ಹೌದು. ತಮ್ಮ ಹೋಟೆಲ್ ಬಗ್ಗೆ ನಾಯರ್ ಅಂದು ಹೇಳುತ್ತಿದ್ದರು- ನಾನು ಎಲ್ಲವರಂಥಲ್ಲ. ನಾನು ಉಳಿದವರಿಗಿಂತ ಸಂಪೂರ್ಣ ಡಿಫರೆಂಟ್. ನಾನು ಏನೇ ಮಾಡಿದರೂ ಡಿಫರೆಂಟ್ ಆಗಿಯೇ ಮಾಡುತ್ತೇನೆ. ನಾನು ಯಾರನ್ನೂ ಅನುಕರಿಸುವುದಿಲ್ಲ. ನನ್ನನ್ನು ಯಾರೂ ಅನುಕರಿಸಬಾರದು. ಇದನ್ನು ನನ್ನ ಎಲ್ಲ ಹೋಟೆಲ್‌ನ ಕಟ್ಟಡಗಳಲ್ಲಿ ಗುರುತಿಸಬಹುದು. Innovation, perfection ಹಾಗೂ style ನನ್ನ ಧ್ಯೇಯವಾಕ್ಯ. ನಾನು ಈ ಮೂರು ಸಂಗತಿಗಳನ್ನು ಬಲವಾಗಿ ನಂಬುತ್ತೇನೆ. ನನ್ನ ಹೋಟೆಲ್‌ನಲ್ಲಿಓಡಾಡುವಾಗ ಹೆಜ್ಜೆಹೆಜ್ಜೆಗೂ ನೀವು ಇದನ್ನು ಅನುಭವಿಸುತ್ತೀರಿ. ನಿಮಗೆ ಜೀವಮಾನದ ಅನುಭವವನ್ನು ಕಟ್ಟಿಕೊಡುವುದು ನನ್ನ ಪರಮಗುರಿ. ಅದಿಲ್ಲದಿದ್ದರೆ ನಾನು ಹೇಗೆ ಭಿನ್ನವಾಗುತ್ತೇನೆ? ಜನರಿಗೆ ಲಕ್ಷುರಿ ಜತೆಗೆ uniqueness ಬೇಕು. ಅದು ನನ್ನ ಹೋಟೆಲ್‌ನಲ್ಲಿದೆ. ಜಗತ್ತಿನ ಯಾವುದೇ ಗಣ್ಯವ್ಯಕ್ತಿಯ ಹೆಸರನ್ನು ಹೇಳಿ, ಅವರು ಅಮೆರಿಕ ಅಧ್ಯಕ್ಷರಾಗಿರಬಹುದು, ಬಿಲ್‌ಗೇಟ್ಸ್ ಇರಬಹುದು, ಹಾಲಿವುಡ್ ನಟ, ನಟಿಯಿರಬಹುದು, ಶ್ರೀಮಂತ ಉದ್ಯಮಿಗಳಿರಬಹುದು, ರಾಜಕಾರಣಿಗಳಿರಬಹುದು, ಪ್ರಭಾವಿಗಳಿರಬಹುದು, ಅವರ್‍ಯಾರೇ ಆಗಿರಬಹುದು ಅವರೆಲ್ಲ ನನ್ನ ಹೋಟೆಲ್‌ನಲ್ಲಿ ಗೆಸ್ಟ್ ಆಗಿ ಉಳಿದವರೇ. ಯಾರು ಉಳಿದಿಲ್ಲ ಕೇಳಿ."

ಶ್ರೀಮಂತರು ಮಾತ್ರ ಪಂಚತಾರಾ ಹೋಟೆಲ್‌ಗಳನ್ನು ಕಟ್ಟಬಲ್ಲರು, ಅದು ನಮ್ಮಿಂದ ಆಗದ ಕೆಲಸ, ಜೀವನದಲ್ಲಿ ಮನೆಕಟ್ಟಿ ಮಗಳ ಮದುವೆ ಮಾಡಿದರೆ ಸಾಕು ಎಂದೆಲ್ಲ ನಾವು ಯೋಚಿಸುತ್ತೇವೆ. ಅದಕ್ಕಿಂತ ಹೆಚ್ಚಾಗಿ ಅವೆಲ್ಲ ನನ್ನಿಂದ ಸಾಧ್ಯ ಎಂದು ಭಾವಿಸುವ ಬದಲು, ಮೊದಲ ಹೊಡೆತದಲ್ಲಿಯೇ ಅವೆಲ್ಲ ನನ್ನಿಂದ ಈ ಜನ್ಮದಲ್ಲಿ ಸಾಧ್ಯವಿಲ್ಲವೆಂಬ ತಥಾಕಥಿತ ನಿರ್ಧಾರಕ್ಕೆ ಬಂದುಬಿಡುತ್ತೇವೆ. ಹೀಗಾಗಿ ಆ ದಿಸೆಯಲ್ಲಿ ನಾವು ಪ್ರಯತ್ನವನ್ನೇ ಮಾಡುವುದಿಲ್ಲ. ಹೀಗಾಗಿ ಬಹುತೇಕ ಮಂದಿ ಅಂಥ ಸಾಧ್ಯವೆನಿಸುವ ಸಾಧನೆಗಳಿಂದ ದೂರವೇ ಉಳಿಯುತ್ತಾರೆ.

ನಾಯರ್ ವಿಷಯದಲ್ಲೂ ಹೀಗೇ ಆಗಬಹುದಿತ್ತು. ಯಾಕೆಂದರೆ ಅವರ ಬಾಲ್ಯದ ದಟ್ಟ ದರಿದ್ರ ಕತೆಗಳನ್ನು ಕೇಳಿದರೆ, ಫೈವ್‌ಸ್ಟಾರ್ ಹೋಟೆಲ್ ಕಟ್ಟಿದ್ದಲ್ಲ, ಕಟ್ಟುತ್ತೇನೆ ಎಂದು ಹೇಳಿದ್ದರೆ ಅದೇ ದೊಡ್ಡ ಜೋಕ್ ಆಗುತ್ತಿತ್ತು. ಮನೆಯಲ್ಲಿ ಶ್ರೀಮಂತವಾಗಿದ್ದುದು ಬಡತನ ಮಾತ್ರ. ತಂದೆ ಕಂದಾಯ ಇಲಾಖೆಯಲ್ಲಿ ಪ್ಯೂನ್ ಆಗಿ ಕೆಲಸಕ್ಕಿದ್ದರು. ತಿಂಗಳಿಗೆ ಎರಡು ಕೈಗಳಿಂದ ಎಷ್ಟು ಬಾರಿ ಎಣಿಸಿದರೂ ಸಿಗುತ್ತಿದ್ದುದು ಏಳು ರೂ. ಪಗಾರ. ಆ ಹಣದಲ್ಲಿಯೇ ಇಡೀ ಸಂಸಾರ ಸಾಗಬೇಕಿತ್ತು. ತಾಯಿ ಕೂಲಿ ಮಾಡಿದರೂ ಒಂದು ಹೊತ್ತಿನ ಊಟಕ್ಕೂ ತತ್ವಾರ. ಜತೆಗೆ ಆ ದಿನಗಳಲ್ಲಿ ಕೇರಳದ ಕಣ್ಣಾನೂರಿನಲ್ಲಿ ಜಾರಿಯಲ್ಲಿದ್ದ ಜಾತಿಪದ್ಧತಿ. ಮೇಲ್ವರ್ಗದವರು ಕೆಳವರ್ಗದವರನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಕೆಲಕಡೆ ಕೂಲಿ ಕೆಲಸಕ್ಕೂ ಆಸ್ಪದ ನೀಡುತ್ತಿರಲಿಲ್ಲ. ಜೀತದಾಳುಗಳಿಗಿಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದರು. ನಾಯರ್ ತಂದೆ ಕಚೇರಿ ಕೆಲಸ ಮುಗಿಸಿ ಊರಿನ ಜಮೀನ್ದಾರನ ಮನೆಯಲ್ಲಿ ಕೂಲಿ ಕೆಲಸಕ್ಕೆ ಹೋದರೆ ಅಲ್ಲಿಯೂ ಅಸ್ಪೃಶ್ಯತೆಯ ಭೂತ ಪೀಡಿಸುತ್ತಿತ್ತು. ಇಂಥ ದಯನೀಯ ಪರಿಸರದಲ್ಲಿ, ಅಪಮಾನ, ನೋವುಗಳನ್ನು ಕಂಕುಳಲ್ಲಿ ಬಚ್ಚಿಟ್ಟುಕೊಂಡು ಬದುಕಬೇಕಾದ ಸ್ಥಿತಿ. ಊಟಕ್ಕೆ ಗತಿ ಇಲ್ಲದ ಮನೆಯಲ್ಲಿ ಮಕ್ಕಳ ಶಾಲೆ, ವಿದ್ಯಾಭ್ಯಾಸ ಹೇಗೆ ನಡೆದೀತು? ಆದರೆ ನಾಯರ್ ಅವರ ತಂದೆ ಕಷ್ಟಪಟ್ಟು ಮಕ್ಕಳನ್ನು ಸಾಕಿದರು. ತಾವು ಉಪವಾಸಬಿದ್ದು ಮಕ್ಕಳ ಬದುಕಿಗೆ ಆಶ್ರಯವಾದರು.

ಮನೆಯಲ್ಲಿ ಬಡತನವಿರಬಹುದು, ಆದರೆ ಬಡತನ ಕಲಿಸುವ ಪಾಠವನ್ನು ಶ್ರೀಮಂತಿಕೆಯೂ ಕಲಿಸುವುದಿಲ್ಲ. ಆ ಮಾತಿಗೆ ನಾಯರ್ ಸಾಕ್ಷಿ. ಶಾಲಾದಿನಗಳಲ್ಲಿಯೇ ಬಹಳ ಲವಲವಿಕೆಯಿಂದ, ಸದಾ ಕ್ರಿಯಾಶೀಲರಾಗಿರುತ್ತಿದ್ದ ನಾಯರ್ ಸ್ವಾಭಾವಿಕವಾಗಿ ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ಒಮ್ಮೆ ಅವರು ಓದುತ್ತಿದ್ದ ಶಾಲೆಗೆ ಕನ್ಣಾನೂರಿನ ಮಹಾರಾಜರು ಭೇಟಿ ನೀಡಿದ್ದರು. ಮಹಾರಾಜರ ಕುರಿತು ನಾಯರ್ ಸ್ಥಳದಲ್ಲಿಯೇ ಕವಿತೆ ಬರೆದು ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಬಾಲಕನ ಪ್ರತಿಭೆಗೆ ಮಾರುಹೋದ ಮಹಾರಾಜ, ನಾಯರ್ ಅವರ ಹೈಸ್ಕೂಲು ವಿದ್ಯಾಭ್ಯಾಸದವರೆಗಿನ ಎಲ್ಲ ಖರ್ಚುಗಳನ್ನು ತಾವೇ ಭರಿಸಿಕೊಳ್ಳುವುದಾಗಿ ಘೋಷಿಸಿದರು. ಇಲ್ಲದಿದ್ದರೆ ನಾಯರ್ ವಿದ್ಯಾಭ್ಯಾಸ ಮುಗಿಸುವುದು ಕಷ್ಟವೇ ಇತ್ತು. ಹೈಸ್ಕೂಲ್ ನಂತರ ವಿದ್ಯಾಭ್ಯಾಸಕ್ಕೆ ಮದರಾಸಿಗೆ ಹೋದಾಗಲೂ ನಾಯರ್‌ಗೆ ಪುನಃ ಹಣಕಾಸಿನ ಸಮಸ್ಯೆ ಎದುರಾಯಿತು. ಆಗ ಹಳೆಯ ಪರಿಚಯ ಹೇಳಿಕೊಂಡು ಪುನಃ ಮಹಾರಾಜನ ಬಳಿ ಹೋದಾಗ ಅವರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ, ನಾಯರ್ ಪ್ರತಿಭೆಗೆ ನೀರೆರೆಯಲು ತಮ್ಮ ಕೈಯಲ್ಲಿದ್ದ ವಜ್ರದ ಉಂಗುರವನ್ನೇ ಕೊಟ್ಟರು. ಆಗಿನ ಕಾಲದಲ್ಲಿ ಅದಕ್ಕೆ ಮೂರು ಸಾವಿರ ರೂ. ಅದನ್ನು ಮಾರಿದಾಗ ಬಂದ ಹಣದಲ್ಲಿ ಹೇಗೋ ಕಾಲೇಜು ಶಿಕ್ಷಣ ಮುಗಿಸಿದರು. ಅವು ಸ್ವಾತಂತ್ರ್ಯ ಹೋರಾಟದ ದಿನಗಳು. ಸುಭಾಶ್‌ಚಂದ್ರ ಬೋಸ್‌ರ ಕ್ರಾಂತಿಕಾರಿ ಜೀವನದಿಂದ ತೀವ್ರ ಪ್ರಭಾವಿತರಾದ ನಾಯರ್, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಕೆಲ ಕಾಲ ಜೈಲುವಾಸವನ್ನು ಸಹ ಅನುಭವಿ ಸಿದರು. ಅನಂತರ ಸುಭಾಶ್‌ಚಂದ್ರ ಬೋಸ್‌ರ ಗುಂಗಿನಲ್ಲಿಯೇ ಸೇನೆಯನ್ನು ಸೇರಿದರು. ಅವರ ಹೆಸರಿನ ಆರಂಭದಲ್ಲಿರುವ 'ಕ್ಯಾಪ್ಟನ್' ತಗುಲಿಕೊಂಡಿದ್ದು ಹಾಗೆ.

ನಾಯರ್ ಅವರದ್ದು ಚಿಮ್ಮುಪ್ರತಿಭೆ. ಸದಾ ಹೊಸ ಸವಾಲಿನ ಕುಣಿಕೆಗೆ ಬದುಕನ್ನು ಸಿಕ್ಕಿಸಿಕೊಂಡು ಅಲ್ಲೊಂದು ಪವಾಡವೆಂಬ ಸಾಧನೆ ಮೆರೆಯುವುದು ಅವರ ಹವ್ಯಾಸವೇನೋ. ಹಿಡಿದಕೆಲಸ ಸಾಧಿಸಿದ ಬಳಿಕ ಅವರು ಹೆಚ್ಚು ಹೊತ್ತು ಅಲ್ಲಿರುವುದಿಲ್ಲ. ಪುನಃ ಮತ್ತೊಂದು ಸವಾಲಿನ ದಾರಿಯಲ್ಲಿ ನೊಗಕ್ಕೆ ಹೆಗಲು ಕೊಟ್ಟಿರುತ್ತಾರೆ. ಕೈಮಗ್ಗ ಉದ್ಯಮ ಆರಂಭಿಸಿದರು. ಬಟ್ಟೆಗಳನ್ನು ಕಡಿಮೆ ಬೆಲೆಗೆ ಮಾರಿದರು. ಅದನ್ನೇ ವಿದೇಶಗಳಿಗೆ ರಫ್ತು ಮಾಡಿದರು. ಅಲ್ಲಿನ ಬಟ್ಟೆಗಳ ಜತೆ ಪೈಪೋಟಿಗೆ ನಿಂತರು. ಕೈಸುಟ್ಟುಕೊಂಡರು. ಜಗ್ಗಲಿಲ್ಲ ಆಸಾಮಿ. ಯಶಸ್ಸು ಮುಗುಳ್ನಗುವ ತನಕ ಬಿಡಲಿಲ್ಲ. 1957ರಲ್ಲಿ ಪಶ್ಚಿಮ ಜರ್ಮನಿಗೆ ಕೆಲಸದ ನಿಮಿತ್ತ ನಾಯರ್ ಹೋಗಿದ್ದರು. ಆ ಸಂದರ್ಭದಲ್ಲಿ ಫ್ರಾಂಕ್‌ಫರ್ಟ್, ಮ್ಯೂನಿಚ್, ಹ್ಯಾಂಬರ್ಗ್ ಮುಂತಾದ ಊರುಗಳಿಗೂ ಭೇಟಿ ನೀಡಿದ್ದರು. ಅಲ್ಲಿನ ಹೋಟೆಲ್‌ಗಳಲ್ಲಿ ಉಳಿದುಕೊಂಡಾಗ ತಾನೂ ಏಕೆ ಇಂಥ ಹೋಟೆಲ್ ಕಟ್ಟಬಾರದೆಂದು ಅನಿಸಿತು. ಅಲ್ಲಿಂದಲೇ ಮನಸ್ಸು ಹೊಸ ಯೋಚನೆಗಳ ಎಸಳುಗಳನ್ನು ಆಯ್ದುಕೊಂಡು ಬತ್ತಿಕಟ್ಟಲಾರಂಭಿಸಿತ್ತು. ಹಾಗೆಂದು ಕೈಯಲ್ಲಿ ಅಷ್ಟೊಂದು ಹಣವಿರಲಿಲ್ಲ. ಆದರೆ ತಮ್ಮ ಕನಸಿಗೆ ಕಾವು ಕೊಡುತ್ತಲೇ ಇದ್ದರು. ಒಂದಲ್ಲ, ಎರಡಲ್ಲ, ಸುಮಾರು ಮೂವತ್ತು ವರ್ಷ ಕಾವು ಕೊಟ್ಟರು.

1986ರಲ್ಲಿ ಮುಂಬೈಯಲ್ಲಿ ಜರ್ಮನಿಯ ಕೆಂಪೆನ್‌ಸ್ಕಿ ಗ್ರುಪ್ ಸಹಯೋಗದೊಂದಿಗೆ ಲೀಲಾ ಕೆಂಪೆನ್‌ಸ್ಕಿ ಹೋಟೆಲ್ ಆರಂಭಿಸಿದರು. ಆಗ ನಾಯರ್‌ಗೆ ಅರವತ್ತರ ಮೇಲೆ ಐದು ವರ್ಷಗಳಾಗಿದ್ದವು. ಈ ಹೋಟೆಲನ್ನು ಅವರು ಎಷ್ಟೊಂದು ಕಳಕಳಿ, ಕಕ್ಕುಲಾತಿಯಿಂದ ಕಟ್ಟಿದ್ದಾರೆಂದರೆ ಮುಂಬೈಗೆ ಬಂದಗಣ್ಯಾತಿಗಣ್ಯರೆಲ್ಲ ಅಲ್ಲಿ ಉಳಿದಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಸಾಧನೆಗೆ ಮೀಸಲಾದ ಎಲ್ಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳೆಲ್ಲ ಅದಕ್ಕೆ ಲಭಿಸಿವೆ. ಅದಾಗಿ ಹತ್ತು ವರ್ಷಗಳಲ್ಲಿ ಲೀಲಾ ಬೀಚ್ ರೆಸಾರ್ಟ್' ತಲೆಯೆತ್ತಿತು. ಗೋವಾದ ಸಮುದ್ರ ಕಿನಾರೆಗೇ ಹೊಂದಿಕೊಂಡಿರುವ ಈ ಹೋಟೆಲ್‌ನಲ್ಲಿ ಉಳಿಯುವುದು ಜೀವಮಾನದ ಅನುಭವಗಳಲ್ಲೊಂದು. ಫೋರ್ಬ್ಸ್' ಮ್ಯಾಗಜಿನ್ ಈ ಹೋಟೆಲನ್ನು ಜಗತ್ತಿನ ಅತ್ಯುತ್ತಮ ಹತ್ತು ಬೀಚ್ ರಿಸಾರ್ಟ್‌ಗಳಲ್ಲೊಂದು ಎಂಬ ಅಭಿದಾನ ನೀಡಿದೆ. ಅನಂತರ ನಾಯರ್ ಬೆಂಗಳೂರು, ಕಣ್ಣೂರು, ಕೋವಲಮ್ ನಲ್ಲೂ ಪಂಚತಾರಾ ಹೋಟೆಲ್ ಸ್ಥಾಪಿಸಿದರು. ಬೆಂಗಳೂರಿನ ಲೀಲಾಪ್ಯಾಲೇಸ್‌ಗೆ ಜಗತ್ತಿನ ಎಂಟು ಅತ್ಯುತ್ತಮ ಬಿಜಿನೆಸ್ ಹೋಟೆಲ್‌ಗಳಲ್ಲೊಂದು ಎಂಬ ಅಗ್ಗಳಿಕೆಯಿದೆ.

ಈ ಎಂಭತ್ತಾರರ ವಯಸ್ಸಿನಲ್ಲೂ ಸದಾ ಉತ್ಸಾಹಕ್ಕೆ ಚಿಗುರು ಮೂಡಿಸಿಕೊಂಡವರಂತೆ ಲಕಲಕ ಎಂದು ಕ್ರಿಯಾಶೀಲರಾಗಿರುವ ನಾಯರ್ ದಿನಕ್ಕೆ ಕೇವಲ ಹದಿನಾಲ್ಕು ತಾಸು ಕೆಲಸ ಮಾಡುತ್ತಾರೆ. ಊರೂರು ಸುತ್ತುತ್ತಾರೆ. ಹೊಸದಿಲ್ಲಿ, ಆಗ್ರಾ, ರಾಜಸ್ಥಾನ, ಚೆನ್ನೈ, ಹೈದರಾಬಾದ್‌ನಲ್ಲಿ ಹೋಟೆಲ್ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಅವರ ಹೋಟೆಲ್‌ಗಳದ್ದೇ ಲೀಲಾ'ಜಾಲ! ಅಂಥ ಶ್ರೀಮಂತಿಕೆಯಿದ್ದರೂ ಸದಾ ನಗು, ಹಾಸ್ಯ, ಸ್ನೇಹಪರತೆಯನ್ನು ಧಾರಾಳವಾಗಿ ಮೊಗೆದುಕೊಡುವ ನಾಯರ್ (chairman@theleela.com) ಹೋಟೆಲ್ ಉದ್ಯಮದ ಕ್ಯಾಪ್ಟನ್ ಆಗಿ ಬೆಳೆದ ಪರಿ ಅದ್ಭುತವೇ ಸರಿ. ಪತ್ನಿಯ ಹೆಸರಿನಲ್ಲಿ ಆರಂಭಿಸಿದ ಹೋಟೆಲ್ ಸಮೂಹ ಇಂದು ಏರಿದ ಎತ್ತರಕ್ಕೆ ಯಾವ 'ಲೀಲೆ' ಎನ್ನಬೇಕೋ ತಿಳಿಯುತ್ತಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more