• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಳೆಂಥ ಅಪ್ಸರೆಯೇ ಆಗಿರಲಿ ವೇಶ್ಯೆಯರಿಗೆ ಗೌರವ ಸಿಗೋದಿಲ್ಲ!

By Staff
|
ಪಾಪದ ಹೂವು ನಳಿನಿ ಬದುಕು ನೆನೆದು ಸಂಕಟವಾಯಿತು. ವೇಶ್ಯೆಯರ ಬಗ್ಗೆ ವೇಶ್ಯೆಯರೇ ಹೋರಾಡಬೇಕು. ಎಂಥ ಫಜೀತಿ ನೋಡಿ, ಇನ್ನು ಮುಂದೆ ವೇಶ್ಯೆಯರನ್ನು ಗೌರವದಿಂದ ಕಾಣೋಣ ಎಂದರೆ ನೀವು ನನ್ನ ಬಗ್ಗೆ ತಪ್ಪು ಭಾವಿಸಬಹುದು.
  • ವಿಶ್ವೇಶ್ವರ ಭಟ್

ಅದ್ಯಾರದೇ ಬದುಕಾಗಿರಬಹುದು, ಅದು ಬದುಕಲಾರದಷ್ಟು ಅಸಹ್ಯವಾಗಿರುವುದಿಲ್ಲ. ಅಸಹ್ಯ ಪಡುವಷ್ಟು ದುರ್ಭರ, ಪಡಪೋಶಿ ಅಥವಾ ನಿಕೃಷ್ಟವಾಗಿರುವುದಿಲ್ಲ. ಎಲ್ಲರಿಂದಲೂ ತಿರಸ್ಕೃತರಾಗಿ, ಲೋಕನಿಂದನೆಗೊಳಗಾದವರಂತೆ ತಲೆತಗ್ಗಿಸಿಕೊಂಡು, ಮುಖ ಮುಚ್ಚಿಕೊಂಡರೂ ಬಾಳಲಾರದಷ್ಟು ದರವೇಶಿಯಾಗಿರುವುದಿಲ್ಲ. ಅಷ್ಟಕ್ಕೂ ಯಾರ ಬದುಕೂ ಬೇವರ್ಸಿ ಅಲ್ಲ. ಅವರವರ ನೆಲೆಯಲ್ಲಿ ಪ್ರತಿಯೊಬ್ಬರಿಗೂ ಬದುಕೆಂಬುದು ಮಾನ, ಮರ್ಯಾದೆ, ಗೌರವ, ಸ್ವಾಭಿಮಾನದ ಸಂಚಯವೇ. ಎಂಥ ದಟ್ಟ ದರಿದ್ರವೇ ಇರಲಿ, ಪರಮಪಾಪಿಯೇ ಇರಲಿ, ಭಯಾನಕ ಲೋಕಕಂಟಕನೇ ಇರಲಿ, ಅವನೂ ಸಹ ಈ ಸಮಾಜದಿಂದ ಚೂರುಪಾರು ಮರ್ಯಾದೆ, ಗೌರವ ಬಯಸುತ್ತಾನೆ. ಅಷ್ಟಕ್ಕೂ ಅವನ ಅಸ್ತಿತ್ವ ಅಂಥದ್ದನ್ನು ಪಡೆಯುವ ಪ್ರಯತ್ನದಲ್ಲಿಯೇ ಸಾರ್ಥಕ್ಯ ಕಂಡುಕೊಳ್ಳುತ್ತಿರುತ್ತದೆ.

ಆದರೆ ಆ ಪುಸ್ತಕ ಓದಿ ಕೆಳಗಿಟ್ಟಾಗ ಯಾರೋ ಈ ಎಲ್ಲ ನಂಬಿಕೆಗಳನ್ನು ಹಿಡಿದು ಅಲುಗಾಡಿಸಿದಂತೆನಿಸಿತು. ಆ ಪುಸ್ತಕದ ಹೆಸರು ವೇಶ್ಯೆಯ ಆತ್ಮಕಥೆ (The Autobiography of Sex Worker) ಬರೆದವಳು ನಳಿನಿ ಜಮೀಲಾ. ಈ ಜಗತ್ತಿನಲ್ಲಿ ಯಾರೂ ಸಹ ತನ್ನನ್ನು ವೇಶ್ಯೆ ಎಂದು ಹೇಳಿಕೊಳ್ಳುವ ಧೈರ್ಯ ತೋರಲಿಕ್ಕಿಲ್ಲ, ಅವಳು ವೇಶ್ಯೆಯೇ ಆಗಿದ್ದರೂ. ಆದರೆ ನಳಿನಿ ಜಮೀಲಾ ತನ್ನನ್ನು ವೇಶ್ಯೆ ಎಂದು ಕರೆದುಕೊಂಡಿದ್ದಾಳೆ, ಅಷ್ಟೇ ಅಲ್ಲ, ತನ್ನ ಬದುಕನ್ನು ಬಿಚ್ಚಿಟ್ಟಿದ್ದಾಳೆ. ಪ್ರಾಯಶಃ ವೃತ್ತಿಗೌರವವಿಲ್ಲದ ಏಕಮಾತ್ರ ದಂಧೆ ಎಂದರೆ ವೇಶ್ಯಾವೃತ್ತಿಯೊಂದೇ ಎಂದು ಹೇಳುತ್ತಾಳೆ. ವೇಶ್ಯೆಯಾದವಳು ಅದೆಷ್ಟೇ ಹಣ ಸಂಪಾದಿಸಲಿ, ಆಸ್ತಿ ಮಾಡಲಿ, ಆದರೆ ಅವಳೆಂದೂ ತನ್ನ ವೃತ್ತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲ. ತಾನು ಇಷ್ಟೆಲ್ಲ ಸಂಪಾದಿಸಿದ್ದು ತನ್ನ ದೇಹ ಮಾರಿಕೊಂಡು ಎಂದು ಹೇಳಲು ಸಾಧ್ಯವೇ ಇಲ್ಲ. ಸಮಾಜದ ಹೆಬ್ಬಾಗಿಲಲ್ಲಿ ನಿಂತು ತಾನೊಬ್ಬ ಮರ್ಯಾದಸ್ಥ ಸೂಳೆ ಎಂದು ಎದೆತಟ್ಟಿ ಹೇಳಲು, ಅಭಿಮಾನಪಡಲು ಸಾಧ್ಯವೇ ಇಲ್ಲ. ಎಲ್ಲರಿಗೂ ಅವರವರ ವೃತ್ತಿಯಲ್ಲಿ ಒಂದು ಸ್ಥಾನಮಾನ, recognition, ಬಹುಮಾನ, ಪ್ರಶಸ್ತಿ ಅಂತಿರುತ್ತದೆ. ಆದರೆ ವೇಶ್ಯಾವೃತ್ತಿಯಲ್ಲಿ ಇಂಥ ಯಾವ ಮರ್ಯಾದೆಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಒಮ್ಮೆ ವೇಶ್ಯೆಯಾದವಳು ಯಾವಜ್ಜೀವ ವೇಶ್ಯೆಯೇ. ಅವಳಿಗೆ ಆ 'ಪಟ್ಟ"ದಿಂದ ಹೊರಬರಲು ಸಾಧ್ಯವೇ ಇಲ್ಲ.

ಅವಳು ನಿತ್ಯಕಳಂಕಿತೆ, ಸದಾ ಲೋಕನಿಂದಿತೆ. ಸಮಾಜದ ಕಣ್ಣಲ್ಲಿ ಮಹಾ ಪಾಪಿ. ಏಳೇಳು ಜನ್ಮ ದಾಟಿದರೂ ಈ ಕಳಂಕದಿಂದ ಮೋಕ್ಷವಿಲ್ಲ. 'ಜಾರಿಣಿಯ ಮಕ್ಕಳು" ಎಂಬ ಮೂದಲಿಕೆ ಅವರ ಮಕ್ಕಳನ್ನೂ ಬಿಡುವುದಿಲ್ಲ. ವೇಶ್ಯಾಗೃಹದ ನಾಲ್ಕು ಗೋಡೆಯ ಕತ್ತಲುಕೋಣೆಯ ಹೊರತಾಗಿ ಮತ್ತೆಲ್ಲೂ ಆಕೆ ಸಲ್ಲುವುದಿಲ್ಲ. ತನ್ನನ್ನು ಬಯಸಿ ಬರುವ ಕಾಮಪಿಪಾಸುಗಳಿಗೆ ದೇಹಸುಖ ನೀಡಿ ತಾನು ಮಾತ್ರ ಅಸಹ್ಯ, ಬೇಸರದಲ್ಲಿ ಕಾಲ ಕಳೆಯುವ, ಅನಂತರ ಅನಿವಾರ್ಯವಾಗಿ ಅದನ್ನೇ ಬದುಕಾಗಿಸಿಕೊಳ್ಳುವ, ಅದನ್ನೇ ಬದುಕಾಗಿಸಿಕೊಂಡ ಕರ್ಮಕ್ಕೆ ವೇಶ್ಯೆಯಾಗಿಯೇ, ರೋಗಿಷ್ಠೆಯಾಗಿಯೇ ಸಾಯುವ ಈ ಹೆಣ್ಣುಜೀವಗಳ ಯಾತನಾಮಯ ಜೀವನಕ್ಕಿಂತ ದುರಂತ ಮತ್ತೊಂದಿಲ್ಲ.

ಈ ಸಮಾಜದಲ್ಲಿ ವೇಶ್ಯೆಯೆಂದರೆ ಕಜ್ಜಿನಾಯಿ! ಪ್ರಾಯಶಃ ಯಾವ ವೃತ್ತಿಯೂ ಇದರಷ್ಟು ನಿಕೃಷ್ಟವಾಗಿರಲಿಕ್ಕಿಲ್ಲ. ಹಾಗಾದರೆ ವೇಶ್ಯೆಯರಿಗೆ ಈ ಸಮಾಜದಲ್ಲಿ ಯಾವ ಮರ್ಯಾದೆಯಿದೆ? ನಾವು ಅವಳನ್ನು ಒಬ್ಬ ಮನುಷ್ಯಳಂತೆ ನಡೆಸಿಕೊಳ್ಳುತ್ತಿದ್ದೇವಾ? ಅವಳನ್ನು ಅಷ್ಟೊಂದು ನಿಕೃಷ್ಟವಾಗಿ ಕಾಣುವಷ್ಟು ಅವಳು ನಿಕೃಷ್ಟಳಾ? ಒಂದು ಹೆಣ್ಣಾಗಿ ಅವಳನ್ನು ಗೌರವದಿಂದ ನೋಡಲು ಸಾಧ್ಯವೇ ಇಲ್ಲವಾ? ಈ 'ನಿತ್ಯಸುಮಂಗಲಿ" ಅಸಹನೀಯವಾಗಿಯೇ ಸಾಯಬೇಕಾ? ವೇಶ್ಯೆ ಜಾಗದಲ್ಲಿ ನಿಂತು ಯೋಚಿಸಿ ಗೊತ್ತಾದೀತು. ಅದೂ ಬೇಡ, ಯಾರಾದರೂ ನಿಮ್ಮನ್ನು ಸೂಳೆ ಎಂದು ಜರೆಯಲಿ, ನಿಮ್ಮ ಪಿತ್ತನೆತ್ತಿಗೇರುತ್ತದೆ. ಸೂಳೆಮಗ ಎಂದು ಬೈಸಿಕೊಂಡವರು ಯಾರಾದರೂ ಸುಮ್ಮನೆ ಹೋಗುತ್ತಾರಾ? 'ಲೆಕ್ಕ ಚುಕ್ತಾ" ಮಾಡಿಯೇ ಹೋಗುತ್ತಾರೆ. ಅಂದರೆ ನಮ್ಮ ಜನರಿಗೆ ಸುಖಿಸಲಿಕ್ಕೆ ಸೂಳೆಯರು ಬೇಕು. ಆದರೆ ಒಬ್ಬ ಮಹಿಳೆಯಾಗಿ ಅವಳು ಬೇಡವೇ ಬೇಡ.

ರಾತ್ರಿ ಮಂಚಕ್ಕೇರಲು ಅವಳು ಬೇಕು. ಆದರೆ ನಾಲ್ಕು ಮಂದಿ ಮುಂದೆ ಆಕೆಯ ನೆರಳು ಸೋಂಕಿದರೂ ಸುಟ್ಟು ಭಸ್ಮವಾಗಬಹುದೆಂದು ದೂರ ಓಡುತ್ತಾರೆ. ಒಬ್ಬ ವ್ಯಕ್ತಿಯಾಗಿ, ಮನುಷ್ಯಳಾಗಿ ಅವಳು ಅಷ್ಟೊಂದು ನಿಂದಿತೆಯಾ?

ಹಾಗಂತ ಕೇಳುತ್ತಾಳೆ ನಳಿನಿ ಜಮೀಲಾ.

ಪ್ರಶ್ನೆಗಳಿಗೆಲ್ಲ ಸಮಾಜದ ಮುಂದೆ ಉತ್ತರವಿಲ್ಲ. ವೇಶ್ಯೆಯರ ಮೇಲೆ ಅನುಕಂಪ ಬಂತು ಅಂತ ಇಟ್ಟುಕೊಳ್ಳಿ. ಆದರೆ ಯಾರೂ ಮನೆಯೊಳಗೆ ತಂದು ಇಟ್ಟುಕೊಳ್ಳುವುದಿಲ್ಲ. ಅಂಥ ಉಪಕಾರ ಬೇಡ ಬಿಡಿ, ಭಿಕ್ಷೆ ಹಾಕಿದ ಹಾಗೆ ನಾಲ್ಕಾಣೆಯನ್ನಾದರೂ ಎಸೆಯಬಾರದಾ? ಅದೂ ಮಾಡುವುದಿಲ್ಲ. ತುತ್ತು ಅನ್ನವನ್ನಾದರೂ ಕೈಗಿಟ್ಟಾರಾ? ಅದೂ ಇಲ್ಲ. ಸೂಳೆಗೆ ಹಣಕೊಟ್ಟ, ಬಟ್ಟೆಕೊಟ್ಟ, ಅನ್ನ ಹಾಕಿದ ಅಂದ್ರೆ ಅವನನ್ನು ಈ ಸಮಾಜ ಹೇಗೆ ನೋಡಬಹುದೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಸೂಳೆಯರಿಗೆ ಈ ಸಮಾಜದಲ್ಲಿ ಯಾರೂ ಕಿರುಬೆರಳಲ್ಲೂ ಸಹಾಯ ಮಾಡಲಾರರು, ನೆಲೆ ಕೊಡಲಾರರು. ಕೊನೆಯುಸಿರೆಳೆಯುವಾಗ ತೊಟ್ಟು ನೀರೂ ಗಂಟಲಿಗೆ ಸುರಿಯಲಾರರು. ಸೂಳೆಯಾಗುವುದು, ಸೂಳೆಯ ಮಗನಾಗಿ ಹುಟ್ಟುವುದು ಮಹಾಪಾಪ. ಅವರಂಥ ನತದೃಷ್ಟರು ಈ ಭೂಮಿಯ ಮೇಲೆ ಯಾರೂ ಇಲ್ಲ.

ನಳಿನಿ ಜಮೀಲಾ ಕಟ್ಟೆಯೊಡೆದ ಕಣ್ಣೀರಿಗೆ ಬೊಗಸೆ ಒಡ್ಡುತ್ತಾಳೆ. ಕೇರಳದ ತ್ರಿಚೂರಿನ ನಳಿನಿಯದೊಂದು ದುರಂತಮಯ, ಹತಭಾಗ್ಯದ ಬದುಕು. ಅದ್ಯಾವ ಗಳಿಗೆಯಲ್ಲಿ ಆ ಭಗವಂತ ಅವಳ ಹಣೆಬರಹ ಬರೆದನೋ ಏನೋ? ಬಾಲ್ಯದಿಂದಲೇ ತೊಡಕುಗಳು ಕಾಲಿಗೆ ಸುತ್ತಿಕೊಳ್ಳಲಾರಂಭಿಸಿದವು. ಆರಂಭದಿಂದಲೇ ಬಳುವಳಿಯಾಗಿ ಬಂದ ಬಡತನ. ಶಾಲೆಗೂ ಹೋಗಲಾರದಂಥ ಸ್ಥಿತಿ. ಬೇರೆಯವರ ಮನೆಯಲ್ಲಿ ದುಡಿದು ಜೀವನ ಸಾಗಿಸಬೇಕಾದ ಅನಿವಾರ್ಯತೆ. ಆ ಹಣವನ್ನೂ ಕಿತ್ತು ಸಾರಾಯಿ ಕುಡಿದು ಹಿಂಸಿಸುವ ಅಪ್ಪ. ಮದುವೆಯಾಗಿ ಗಂಡನ ಮನೆ ಸೇರಿದರೆ ಸಾಕು ಎಂದು ಯೋಚಿಸುತ್ತಿರುವಾಗಲೇ ಗಂಟುಬಿದ್ದವ ಮಹಾಕುಡುಕ ಗಂಡ. ಅಪ್ಪನ ಅಪರಾವತಾರ. ದುಡಿದು ತಂದು ಗಂಡನಿಗೆ ಕುಡಿಸಬೇಕು. ಇಲ್ಲದಿದ್ದರೆ ಮನೆಯೆಲ್ಲ ರಂಪ, ಹೊಡೆದಾಟ. ಕೊನೆಗೆ ಕುಡಿದು ಕುಡಿದೇ ಸತ್ತುಹೋದ.

ಅಷ್ಟೊತ್ತಿಗೆ ನಳಿನಿಗೆ ಇಬ್ಬರು ಮಕ್ಕಳು. ಆ ಪೈಕಿ ಒಬ್ಬ ಮಗನೂ ತೀರಿಹೋದ. ಮನೆಯಲ್ಲಿ ಅತ್ತೆ ಮಹಾಕಾಳಿ. ದಿನವಿಡಿ ದುಡಿದು ಬಂದರೆ ಎರಡೂವರೆ ರೂಪಾಯಿ ಸಿಗುತ್ತಿತ್ತು. ಆ ಹಣವನ್ನೂ ಕಿತ್ತುಕೊಳ್ಳುತ್ತಿದ್ದ ಅತ್ತೆ ತನ್ನ ಮಕ್ಕಳಿಗೆ ಊಟಕೊಟ್ಟು ನಳಿನಿಯನ್ನು ಉಪವಾಸ ಕೆಡವುತ್ತಿದ್ದಳು. ಮಗಳಿಗೂ ಇದೇ ಗತಿ. ಅವಳನ್ನು ಅನಾಥಾಶ್ರಮಕ್ಕೆ ಸೇರಿಸಲು ಪ್ರಯತ್ನಿಸುತ್ತಿರುವಾಗ ಆಕೆ ಸ್ನೇಹಿತೆ ಒಂದು ಉಪಾಯ ಹೇಳಿಕೊಟ್ಟಳು- “ತ್ರಿಚೂರಿನಲ್ಲಿ ರೋಸಾ ಎಂಬುವವಳಿದ್ದಾಳೆ. ಅವಳಿಗೆ ನಿನ್ನಂಥವರು ಬೇಕು. ದೊಡ್ಡ ದೊಡ್ಡ ಶ್ರೀಮಂತರು ಅವಳ ಮನೆಗೆ ಬರುತ್ತಾರೆ. ನೀನು ಸ್ವಲ್ಪ ದಿನ ಅಲ್ಲಿ ಡ್ಯೂಟಿ ಮಾಡು. ನಿನಗೆ ಕೈತುಂಬಾ ಹಣ ಕೊಡುತ್ತಾಳೆ. ನಿನ್ನ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ." ರೋಸಾಳನ್ನು ಭೇಟಿಯಾಗುವವರೆಗೂ ಸ್ನೇಹಿತೆ ತನ್ನನ್ನು ಶಾಶ್ವತವಾಗಿ ಪಾಪಕೂಪಕ್ಕೆ ತಳ್ಳಬಹುದೆಂದು ನಳಿನಿ ನಿರೀಕ್ಷಿಸಿರಲಿಲ್ಲ.

ಮೊದಲ ದಿನ ರೋಸಾ ನಳಿನಿಯನ್ನು ಕರೆದುಕೊಂಡು ಸರಕಾರಿ ಗೆಸ್ಟ್‌ಹೌಸ್‌ಗೆ ಹೋಗಿ ಬಿಟ್ಟಾಗ ತನ್ನ ಬಾಹುಗಳಲ್ಲಿ ಸ್ವಾಗತಿಸಿದವನು ಪೊಲೀಸ್ ಅಧಿಕಾರಿ. ಅದೇ ರಾತ್ರಿ ಮತ್ತೊಬ್ಬ ಶ್ರೀಮಂತನ ಜತೆ ಮಲಗಬೇಕಾದ ಅನಿವಾರ್ಯತೆ. ವೇಶ್ಯೆ ಸಂಗ ಬಯಸಿಬರುವ ಗಂಡಸರೆಲ್ಲ ಕ್ರೂರಿಗಳಲ್ಲ. ಆದರೆ ಹೆಂಡತಿಗೆ ಮೋಸ ಮಾಡುವವರೇ. ಹಾಗೆ ಮಾಡಿಯೂ ತಮ್ಮ ನಡೆ, ನಿಲುವನ್ನು ಸಮರ್ಥಿಸಿಕೊಳ್ಳುವವರೇ. “ನಾನು ನನ್ನ ಹೆಂಡತಿಗೆ ಯಾವುದಕ್ಕೂ ಕಡಿಮೆ ಮಾಡಿಲ್ಲ. ಅವಳಿಗೆ ಬೇಕಾದುದೆಲ್ಲವನ್ನೂ ಕೊಡುತ್ತೇನೆ. ಹಾಗೇ ನನ್ನ ಸುಖಕ್ಕೆ ಕಡಿಮೆ ಮಾಡಿಕೊಳ್ಳುವುದಿಲ್ಲ" ಎಂದು ಬಹುತೇಕ ಎಲ್ಲ ಗಂಡಸರೂ ಹೇಳುತ್ತಾರೆ.

ಒಂದೆಡೆ ನಳಿನಿ ಬರೆಯುತ್ತಾಳೆ- “ನನಗೆ ಬಹಳ ಬೇಸರವಾಗುವುದೆಂದರೆ ಗಂಡಸರು ನನ್ನ ಮುಂದೆ ತಮ್ಮ ಹೆಂಡತಿಯನ್ನು ನಿಂದಿಸುವುದು. ಒಂದು ರಾತ್ರಿ ಒಬ್ಬ ಗಿರಾಕಿ ಬಂದಿದ್ದ. ನನ್ನೊಂದಿಗೆ ಬಹುಬೇಗ ಆತ್ಮೀಯನಾಗಬೇಕೆಂದು ಹೆಂಡತಿಯನ್ನು ಬೈಯಲಾರಂಭಿಸಿದ. ಆದರೆ ವಸ್ತುಸ್ಥಿತಿಯೇ ಬೇರೆ ಎಂಬುದು ನನಗೆ ತಿಳಿದಿತ್ತು. ತನ್ನ ಹೆಂಡತಿಯೇನಾದರೂ ಈಗಲೇ ಸಾಯ್ತೇನೆ ಅಂದ್ರೆ ಅವಳ ಬಾಯಿಗೆ ಒಂದು ಹನಿ ನೀರನ್ನೂ ಸಹ ಬಿಡಲಾರೆ ಎಂದು ಆತ ಹೇಳಿದ. ಅವನಿಗೊಂದು ಪಾಠ ಕಲಿಸಬೇಕೆಂದು ನಿರ್ಧರಿಸಿದೆ. ಆ ರಾತ್ರಿ ಹನ್ನೊಂದೂವರೆ ಗಂಟೆಯಾಗಿರಬಹುದು. ಕುಡಿಯಲು ಸ್ವಲ್ಪ ರಮ್ ಬೇಕು ಎಂದೆ. ತಕ್ಷಣ ಹೊರಗೆ ಹೋಗಿ, ಹೆಚ್ಚು ಹಣ ಕೊಟ್ಟು ಒಂದು ಬಾಟಲ್ ರಮ್ ತಂದ. ನಾನು ಸ್ವಲ್ಪ ಕುಡಿದಂತೆ ನಟಿಸಿದೆ. ತುಸು ಹೊತ್ತಿನ ಬಳಿಕ ನಶೆ ಏರಿದಂತೆ ವರ್ತಿಸಲಾರಂಭಿಸಿದೆ. ಶುರು ಮಾಡಿದೆ ನೋಡಿ ಅವನನ್ನು ಬೈಯಲು. ನಿನ್ನ ಸೂಳೆಗೆ ಮಧ್ಯರಾತ್ರಿ ಎದ್ದು ಹೋಗಿ ಹೆಚ್ಚು ಹಣ ಕೊಟ್ಟು ಬಾಟಲಿ ರಮ್ ತಂದುಕೊಡುವ ನೀನು, ನಿನ್ನ ಹೆಂಡತಿ ಮರಣಶಯ್ಯೆಯಲ್ಲಿರುವಾಗ ಒಂದು ತೊಟ್ಟು ನೀರನ್ನೂ ಬಾಯಿಗೆ ಬಿಡೊಲ್ಲ ಅಂತೀಯಲ್ಲಾ, ನೀನೂ ಒಬ್ಬ ಮನುಷ್ಯನಾ? ಸೂಳೆ ಮುಂದೆ ಹೆಂಡತಿಯನ್ನು ಬೈಯ್ತಿಯಲ್ಲ, ನಿನಗೆ ಮಹಿಳೆಯರ ಬಗ್ಗೆ ಅದೆಂಥ ಅಗೌರವ ಇರಬಹುದು? ನನಗೆ ತೋರಿಸುವ ಪ್ರೀತಿಯಲ್ಲಿ ಕಾಲು ಭಾಗ ನಿನ್ನ ಹೆಂಡತಿಗೆ ತೋರಿಸಿದ್ದಿದ್ದರೆ, ನೀನು ನನ್ನ ಬಳಿ ಬರುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಎದ್ದು ಹೊರಗೆ ಹೋಗದಿದ್ದರೆ ಪೊಲೀಸರಿಗೆ ಹೇಳಿ ರೇಪ್ ಮಾಡಿದ ಅಂತ ಕಂಪ್ಲೇಂಟು ಕೊಡ್ತೇನೆ ಎಂದು ರೋಪು ಹಾಕಿದೆ. ಓಡಿಹೋದವ ಇನ್ನೊಮ್ಮೆ ಕಾಣಿಸಿಕೊಳ್ಳಲಿಲ್ಲ."

ವೇಶ್ಯೆಯರ ಬಗ್ಗೆ ಒಂದು ಕಲ್ಪನೆಯಿದೆ. ತಮ್ಮ ಸಂಗ ಮಾಡುವವರ ಕುಟುಂಬದ ಸರ್ವನಾಶಕ್ಕೆ ವೇಶ್ಯೆಯರೇ ಕಾರಣ ಎಂದು ಹೇಳುವುದುಂಟು. ನಳಿನಿ ಇದನ್ನು ಒಪ್ಪುವುದಿಲ್ಲ. ಯಾವ ವೇಶ್ಯೆ ತನ್ನ ಗಿರಾಕಿ ಮನೆ ಬಾಗಿಲಿಗೆ ಹೋಗಿ ಆಸ್ತಿ ಕೊಡು ಎಂದು ಒತ್ತಾಯ ಮಾಡುತ್ತಾಳೆ? ಮತ್ತೊಂದು ಹೆಂಗಸಿನ ಕಣ್ಣೀರಲ್ಲಿ ತನ್ನ ಸುಖವನ್ನು ಯಾವ ವೇಶ್ಯೆಯೂ ಬಯಸುವುದಿಲ್ಲ. ಆದರೆ ನಮ್ಮದೂ ಒಂದು ಅನಿವಾರ್ಯ, ಹೊಟ್ಟೆಪಾಡಿನ ಜೀವನ ಎಂಬುದನ್ನು ಮರೆಯಬಾರದು. ಯಾವ ಗಂಡಸೂ ಸಹ 'ಕೆಲಸ"ವಾದ ನಂತರ ನಮ್ಮನ್ನು ಮರ್ಯಾದೆಯಿಂದ ನೋಡುವುದಿಲ್ಲ. ಒಳ ಬರುವಾಗ ನಾವು ವೇಶ್ಯೆಯರೆಂಬುದು ಗಿರಾಕಿಗೆ ಗೊತ್ತಿರುತ್ತದೆ. ಹೊರ ಹೋಗುತ್ತಿದ್ದಂತೆ ಅವರಿಗೆ ಸೂಳೆ ಮನೆಗೆ ಹೋಗಿ ಬಂದ ಅಪರಾಧ ಪ್ರಜ್ಞೆ ಕಾಡುತ್ತದೆ. ನಮ್ಮ ವೃತ್ತಿಗೆ ಯಾವ ಘನತೆಯಿದೆ ಹೇಳಿ ಅಂತ ಕೇಳುತ್ತಾಳೆ ನಳಿನಿ.

"ವೇಶ್ಯಾವೃತ್ತಿಯೆಂಬುದು ಉದ್ಯೋಗವಲ್ಲ. ಅದೊಂದು ಸೇವೆ. ಅದೊಂದು ತ್ಯಾಗ. ಸಮಾಜದಲ್ಲಿ ವೇಶ್ಯೆಯರು ಇಲ್ಲ ಅಂದ್ರೆ ಹೆಣ್ಣು ಮಗಳು ಬೀದಿಯಲ್ಲಿ ಸುರಕ್ಷಿತವಾಗಿ ತಿರುಗಾಡಲಾಗುವುದಿಲ್ಲ. ನಾಗರಿಕ ಸಮಾಜದಲ್ಲಿ ವೇಶ್ಯೆಯರು ಇರಲೇಬೇಕು. ವೇಶ್ಯೆಯರಿಲ್ಲದ ಸಮಾಜವೆಂದರೆ Safety Valve ಮುಚ್ಚಿದ ಪ್ರೆಶರ್ ಕುಕ್ಕರ್ ಇದ್ದ ಹಾಗೆ. ಹೀಗಾಗಿ ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಬೇಕು. Immoral Traffic Act ಅಡಿಯಲ್ಲಿ ನಮ್ಮನ್ನು ಬಂಧಿಸುವ ಬದಲು ವೇಶ್ಯಾವೃತ್ತಿಯನ್ನೇ ಮಹಾಪರಾಧವೆಂದು ಘೋಷಿಸಿ ಅದನ್ನು ರದ್ದು ಪಡಿಸಲಿ, ಆ ಧೈರ್ಯ ಯಾವ ಸರಕಾರಕ್ಕಿದೆ?" ಎಂದು ನಳಿನಿ ಕೇಳುತ್ತಾಳೆ.

ವೇಶ್ಯೆಯರ ಹಕ್ಕಿಗಾಗಿ ಸಂಘಟನೆ ಕಟ್ಟಿಕೊಂಡು ದುಡಿಯುತ್ತಿರುವ ನಳಿನಿ, ಹೆಚ್‌ಐವಿ ಕುರಿತು ಜಾಗೃತಿ ಮೂಡಿಸುತ್ತಾಳೆ. ವೇಶ್ಯೆಯಾದ ಬಗ್ಗೆ ನನಗೆ ಸ್ವಲ್ಪವೂ ಪಶ್ಚಾತ್ತಾಪವಿಲ್ಲವೆನ್ನುವ ಆಕೆ, ವೇಶ್ಯೆಯರ ಶ್ರಮ ಗೌರವಕ್ಕೆ ಮರ್ಯಾದೆ ತಂದು ಕೊಡಲು ಹೋರಾಟ ಮಾಡುತ್ತಿದ್ದಾಳೆ.

ಪುಸ್ತಕದ ಕೊನೆಯಲ್ಲಿ ನಳಿನಿ ಬರೆದ ಮಾತುಗಳು ತೀರಾ ತಮಾಷೆಯೆನಿಸಿತು-“ನಾಲ್ಕು ದೃಷ್ಟಿಯಿಂದ ವೇಶ್ಯೆಯರಾಗುವುದೇ ವಾಸಿ. ಗಂಡನಿಗಾಗಿ ಪ್ರತಿದಿನ ಅಡುಗೆ ಮಾಡಬೇಕಿಲ್ಲ. ಗಂಡನ ಹೊಲಸು ಬಟ್ಟೆಯನ್ನು ತೊಳೆಯಬೇಕಿಲ್ಲ. ಪ್ರತಿಯೊಂದಕ್ಕೂ ಅವನ ಪರ್ಮಿಶನ್ ಕೇಳಬೇಕಿಲ್ಲ ಹಾಗೂ ಅತ್ತೆ ಕಾಟ ಇಲ್ಲ."

ಕೆಲವರು ಕಷ್ಟದಲ್ಲೂ ನಗುವನ್ನೂ ಸೃಷ್ಟಿಸಿಕೊಳ್ಳುತ್ತಾರೆ, ಬೇರೆಯವರಿಗೆ ಹಂಚಲೆಂದು. ಪಾಪದ ಹೂವು ನಳಿನಿ ಬದುಕು ನೆನೆದು ಸಂಕಟವಾಯಿತು.

ವೇಶ್ಯೆಯರ ಬಗ್ಗೆ ವೇಶ್ಯೆಯರೇ ಹೋರಾಡಬೇಕು. ಎಂಥ ಫಜೀತಿ ನೋಡಿ, ಇನ್ನು ಮುಂದೆ ವೇಶ್ಯೆಯರನ್ನು ಗೌರವದಿಂದ ಕಾಣೋಣ ಎಂದರೆ ನೀವು ನನ್ನ ಬಗ್ಗೆ ತಪ್ಪು ಭಾವಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more