ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದ ಹುಚ್ಚಿನೊಂದಿಗೆ ಕನಸುಗಳ ಜತೆ ನಡೆದವ ಮಾತ್ರ ಅಂಬಾನಿಯಾಗಬಲ್ಲ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಪತ್ರಕರ್ತರು ಯಾರನ್ನಾದರೂ ಟೀಕಿಸಿದರೆ ಯಾರೂ ತಪ್ಪು ತಿಳಿದುಕೊಳ್ಳುವುದಿಲ್ಲ. ಭೇಷ್‌ ಚೆನ್ನಾಗಿ ಬರೆದಿದ್ದಾನೆಂದು ಅಂದು ಕೊಳ್ಳುತ್ತಾರೆ. ತಪ್ಪು ತಿಳಿಯುವುದು ಹೊಗಳಿದಾಗ. ಯಾವತ್ತೂ ಹೊಗಳಿಕೆ ಸುತ್ತ ಸಣ್ಣ ಸಂಶಯ ಹುಟ್ಟಿ ಕೊಳ್ಳು ತ್ತದೆ. ಅದರಲ್ಲೂ ಅಧಿಕಾರದಲ್ಲಿದ್ದವರನ್ನು ಹೊಗಳಿದರೆ ಮುಗೀತು. ಏನೇನೋ ಯೋಚನೆಗಳ(ಕೆಟ್ಟದ್ದು) ಮೊಟ್ಟೆಗಳು ಕಾವು ಪಡೆದು ಕತೆಗಳಾಗಿ ಹುಟ್ಟಿ, ರೆಕ್ಕೆ ಪುಕ್ಕ ಪಡೆದು ಹಾರಾಡು ತ್ತವೆ. ಅದೇ ಟೀಕೆ ಮಾಡಿದಾಗ ಈ ಯಾವ ಪ್ರಶ್ನೆಗಳೂ ಸುಳಿಯುವುದಿಲ್ಲ. ಇವೆಲ್ಲವುಗಳ ನಡುವೆಯೂ ಒಂದು ಹೊಗಳಿಕೆಗೆ ನಿಮ್ಮನ್ನು ಈಡು ಮಾಡಿದರೆ ನೀವು ತಪ್ಪು ತಿಳಿಯಲಿಕ್ಕಿಲ್ಲ. ಕಾರಣ ಹೊಗಳಲಿರುವ ವ್ಯಕ್ತಿ ಈಗ ಅಧಿಕಾರದಲ್ಲಿ ಇಲ್ಲ. ಅದಕ್ಕಿಂತ ಮುಖ್ಯವಾಗಿ ಅವರು ಇಂದು ನಮ್ಮೊಂದಿಗಿಲ್ಲ. ಅವರು ಸತ್ತು ಮೂರು ವರ್ಷಗಳಾದವು. ಈ ಹೊಗಳಿಕೆ ಸಲ್ಲುವುದು ಧೀರೂಬಾಯಿ ಅಂಬಾನಿಗೆ.

ನಿಮ್ಮಲ್ಲಿ ಎಷ್ಟು ಜನ ಮುಂಬೈನಲ್ಲಿರುವ ಧೀರೂಬಾಯಿ ಅಂಬಾನಿ ನಾಲೆಡ್ಜ್‌ ಸಿಟಿಯನ್ನು ನೋಡಿದ್ದೀರೋ ಗೊತ್ತಿಲ್ಲ. ಜೀವನದಲ್ಲೊಮ್ಮೆ ನೋಡಲೇ ಬೇಕಾದ ತಾಣವಿದು. ಅಮೆರಿಕದ ನಾಸಾ(ಬಾಹ್ಯಾಕಾಶ ಕೇಂದ್ರ)ವನ್ನು ನೋಡಿದ್ದರೆ ಇದನ್ನು ನೋಡುವ ಅಗತ್ಯವಿಲ್ಲ. ಅಂದರೆ ನಾಸಾ ಕ್ಯಾಂಪಸ್ಸನ್ನು ನೆನಪಿಸುವಂಥ ಒಂದು ತಂತ್ರಜ್ಞಾನ ನಗರ ನವಿಮುಂಬೈಯ ನೂರೈವತ್ತು ಎಕರೆ ವಿಶಾಲ ಪ್ರದೇಶದಲ್ಲಿ ತಲೆಯೆತ್ತಿ ನಿಂತಿ ದೆ. ಇಡೀ ದೇಶ ಹೆಮ್ಮೆ ಪಡುವಂಥ, ಅಭಿಮಾನದಿಂದ ಬೀಗುವಂಥ ಕೆಲಸಗಳು ಧೀರೂಬಾಯಿ ಅಂಬಾನಿ ನಾಲೆಡ್ಜ್‌ ಸಿಟಿ’ಯಲ್ಲಿ ನಡೆಯು ತ್ತಿವೆ. ನಾನು ಮೊನ್ನೆ ಈ ಸಿಟಿಯಲ್ಲೊಂದು ಕಿರು ಸುತ್ತು ಹಾಕಿದಾಗ ಅನುಭವಕ್ಕೆ ದಕ್ಕಿದ್ದು ಧೀರೂಬಾಯಿ ಅಂಬಾನಿಯ ಕನಸು, ದೂರದೃಷ್ಟಿ, ಭಾರತದ ತಂತ್ರಜ್ಞಾನ ಸ್ಫೋಟ.

Dheerubhai Ambaniಭಾರತ ಬಡ ದೇಶ ಎಂದು ನಾವು ಪಲ್ಲವಿ ಹಾಕಿಯೇ ಅಡಿಯಿಟ್ಟರೂ ನಮ್ಮ ದೇಶದಲ್ಲಿ ಶ್ರೀಮಂತರಿಗೇನೂ ಕೊರತೆಯಿಲ್ಲ. ಮಗಳ ಮದುವೆ ಗೆಂದು ಐದುನೂರು ಕೋಟಿ ರೂಪಾಯಿ ಖರ್ಚು ಮಾಡುವ ಲಕ್ಷ್ಮೀ ಮಿತ್ತಲ್‌ನಂಥವರಿದ್ದಾರೆ. ಮೊಮ್ಮಗ ಹುಟ್ಟಿದ ಸಂಭ್ರಮ ಆಚರಿಸಲು ನೂರು ಕೋಟಿ ರೂ. ಖರ್ಚು ಮಾಡಿದ ಮಾಣಿಕ್‌ಚಂದ್‌ಗಳಿದ್ದಾರೆ. ಮಗನ ಮದುವೆಗೆ ದೇಶದ ಗಣ್ಯಾತಿಗಣ್ಯರನ್ನು ಕರೆದು ಇನ್ನೂರು ಕೋಟಿ ರೂ. ಧಾಮ್‌ಧೂಮ್‌ ಮಾಡುವ ಸುಬ್ರತೋ ರಾಯ್‌ ಸಹಾರಾಗಳಿದ್ದಾರೆ. ದತ್ತು ಮಗನ ಮದುವೆಗೆ ದೇಶಕ್ಕೆ ದೇಶವೇ ನಾಚುವಂ ತೆ ಅದ್ದೂರಿ ಸಂಭ್ರಮಗೈದ ಜಯಲಲಿತಾಗಳಿದ್ದಾರೆ. ಮಗಳ ಹನಿಮೂನ್‌ಗೆಂದು ಐವತ್ತು ಕೋಟಿ ರೂ. ತೆಗೆದಿರಿಸುವ ಫಾರೂಕ್‌ ಅಬ್ದುಲ್ಲಾ ಗಳಿದ್ದಾರೆ. ಮಗನ ಎಂಗೇಜ್‌ಮೆಂಟ್‌ಗೆ, ಮೊಮ್ಮಗನ ಉಪನಯನಕ್ಕೆ, ಮಗಳ ಸೀಮಂತಕ್ಕೆ ಮೈನೆರೆದಿದ್ದಕ್ಕೆ ಕೋಟಿ ರೂ.ಚೆಲ್ಲುವ ಧನಿಕರು ಬೆಂಗಳೂರಿನ ಬೀದಿ ಬೀದಿಗೆ ಸಿಗುತ್ತಾರೆ. ನಿಮ್ಮೂರಿನಲ್ಲೂ ಸಿಗಬಹುದು ಬಿಡಿ. ಆದರೆ ನಾಲೆಡ್ಜ್‌ ಸಿಟಿಯಂಥ ಸಿಟಿಯನ್ನು ಕಟ್ಟುವವರು ನೂರು ಕೋಟಿಗೆ ಒಬ್ಬರೇ ಸಿಗುತ್ತಾರೆ. ಹಾಗೂ ಅವರನ್ನು ಧೀರೂಬಾಯಿ ಅಂಬಾನಿ ಎಂದು ಕರೆಯುತ್ತಾರೆ.

ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿರುವ ಚೋರವಾಡ ಪುಟ್ಟ ಹಳ್ಳಿ. ಸಾವಿರ ಜನಸಂಖ್ಯೆಯಿರುವ ಹಳ್ಳಿ. ಹೀರಾಚಂದ್‌ ಅಂಬಾನಿ ಈ ಊರಿಗಿರುವ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಪಕ! ತಂದೆಗೆ ಬರುತ್ತಿದ್ದ ಸಂಬಳ 18ರೂ. ಆ ಹಣದಲ್ಲಿ 6ಮಂದಿಯ ಸಂಸಾರ ಸಾಗಬೇಕು. ಎರಡು ಕೋಣೆಗಳಿರುವ ಪುಟ್ಟ ತಡಕಲು ಮನೆ ಮಕ್ಕಳನ್ನು ಸಲಹುವುದರಲ್ಲೇ ತಾಯಿ ಜಮುನಾಬೆನ್‌ ಜೀವನ ಸವೆದು ಹೋಯಿತು. ಈ ತಂದೆ-ತಾಯಿಗಳಿಗೆ, ಇದೇ ಪುಟ್ಟ ಮನೆಯಲ್ಲಿ ಹುಟ್ಟಿದವನೇ ಅಂಬಾನಿ. ಮುಂದೊಂದು ದಿನ ಈ ಮನುಷ್ಯ ಈ ದೇಶದ ಅತಿದೊಡ್ಡ ಕಂಪನಿಯ ಯಜಮಾನನಾಗುತ್ತಾನೆಂದು ಯಾರೂ ಊಹಿಸಿರಲಿಲ್ಲ. ಅಂಬಾನಿ ತಂದೆ ಹೀರಾ ಚಂದ್‌ ಮಗನಿಗೆ ಯಾವತ್ತೂ ಹೇಳುತ್ತಿದ್ದನಂತೆ-‘ನಾನು ನನ್ನ ಜೀವನದಲ್ಲಿ ಒಳ್ಳೆಯ ಶಿಕ್ಷಕನಾಗಿದ್ದೆ. ಅದನ್ನು ಬಿಟ್ಟರೆ ಮತ್ತೇನೂ ಆಗಲಿಲ್ಲ. ಅದಕ್ಕಿಂತ ದೊಡ್ಡದಾಗಿ ನನಗೆ ಬೆಳೆಯಲು ಆಗಲಿಲ್ಲ. ಕಾರಣ ನಾನು ದೊಡ್ಡದಾಗಿ ಬೆಳೆಯಬೇಕೆಂದು ಆಸೆಪಡಲಿಲ್ಲ. ಆದರೆ ನೀನು ಹಾಗೆ ಆಗಬೇಡ. ದೊಡ್ಡ ಕನಸು ಕಾಣು. ಕನಸನ್ನು ನನಸಾಗಿಸು’

Knowledge City in Mumbaiತಂದೆಯ ಈ ಮಾತುಗಳೇ ಧೀರೂಬಾಯಿ ಜೀವನಗತಿಯನ್ನು ಬದಲಿಸಿರಬೇಕು. ನಾಲೆಡ್ಜ್‌ ಸಿಟಿಯನ್ನು ಪ್ರವೇಶಿಸುತ್ತಿರುವಾಗ ನಿಮಗೊಂದು ಘೋಷಣೆ ಕಾಣುತ್ತದೆ - Having small aims is a crime! ಸಣ್ಣಪುಟ್ಟ ಗುರಿಯನ್ನಿಟ್ಟುಕೊಳ್ಳುವುದು ಆಪರಾಧ. ಪ್ರಾಯಶಃ ಧೀರೂ ಭಾಯಿಯ ಈ ನುಡಿಯ ಫಲಶ್ರುತಿಯಾಗಿ ನಾಲೆಡ್ಜ್‌ ಸಿಟಿ ಎದ್ದು ನಿಂತಿದೆ. ಧೀರೂಬಾಯಿ ಬದುಕಿದ್ದಾಗಲೇ ನಾಲೆಡ್ಜ್‌ ಸಿಟಿಯ ಕನಸು ಸಾಕಾ ರಗೊಳಿಸಿದ್ದರು. ಮಾಹಿತಿ ತಂತ್ರಜ್ಞಾನ ರಂಗದಲ್ಲಿ ?ಭಾರತವನ್ನು ವಿಶ್ವ ಭೂಪಟದಲ್ಲಿ ಎತ್ತರಕ್ಕೆ ನಿಲ್ಲಿಸಬೇಕೆಂಬ ಸಂಕಲ್ಪದಿಂದ ಕೇವಲ ಮೂರು ವರ್ಷಗಳಲ್ಲಿ ಈ ನಗರದ ಯೋಜನೆ ಜಾರಿಗೆ ಬಂತು. ಧೀರೂಭಾಯಿ ಹೇಳುತ್ತಿದ್ದ ಮಾತಿನಂತೆ- Meeting the deadlines is not good enough, beating the deadlines is my expectation. ಕೇವಲ ಹದಿನೆಂಟು ತಿಂಗಳಲ್ಲಿ 24ಕೋಟಿ ರೂ. ವೆಚ್ಚದಲ್ಲಿ ಎದ್ದು ನಿಂತಿದೆ.‘ದೊಡ್ಡದಾಗಿ ಯೋಚಿಸಿ, ಯೋಚನೆಯೆಂಬುದು ಯಾರದೋ ಒಬ್ಬರ ಸ್ವತ್ತಲ್ಲ’ ಎಂಬ ಧೀರೂಭಾಯಿ ಜೀವನ ದರ್ಶನ ಈ ನಗರದಲ್ಲಿ ಅನಾವರಣಗೊಂಡಿದೆ.

ಹೇಗಂತೀರಾ?

ಈ ನಗರದಲ್ಲಿ ರಿಲಯನ್ಸ್‌ ಇನ್ಫೋಕಾಮ್‌, ಇಂಟರ್‌ನೆಟ್‌, ಡಾಟಾ ಸೆಂಟರ್‌, ಅಪ್ಲಿಕೇಶನ್‌ಡೆವಲಪ್‌ ಮೆಂಟ್‌ ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಸಂಪರ್ಕ ಜಾಲ ಕೇಂದ್ರಗಳಿವೆ. ದಿನದ ಯಾವುದೇ ಸಮಯದಲ್ಲಿ 10 ಸಾವಿರ ಎಂಜಿನಿಯರ್‌ಗಳು ಕೆಲಸ ಮಾಡುತ್ತಾರೆ. ವಿಶ್ವದ ಯಾವುದೇ ದೇಶದಲ್ಲಿ ಇಲ್ಲದ ಸಂಶೋಧನಾ ಪ್ರಯೋಗ ಕೇಂದ್ರ ವಿದೆ. 14ಕಟ್ಟಡಗಳ 22ಲಕ್ಷ ಚದರ ಅಡಿ ಜಾಗದಲ್ಲಿ ಈ ಎಲ್ಲ ಚಟುವಟಿ ಕೆಗಳು ಹರಡಿಕೊಂಡಿವೆ.

ನಿಮಗೆ ಗೊತ್ತಿರಬಹುದು ಭಾರತೀಯ ರೈಲು ಇಲ್ಲಿಯತನಕ ಓಡಿ ಬರಲು ಸುಮಾರು 150 ವರ್ಷಗಳು ಬೇಕಾಯಿತು. ದೇಶದ ಶೇ. 45ರಷ್ಟು ಭಾಗ ಮಾತ್ರ ರೈಲು ಸಂಪರ್ಕ ಹೊಂದಿದೆ. ರೈಲನ್ನು ನೋಡಿರದ ಎಷ್ಟೋ ಜಿಲ್ಲಾ ಕೇಂದ್ರ ಗಳಿ ವೆ. 14ಕಟ್ಟಡಗಳ 22ಲಕ್ಷ ಚದರ ಅಡಿ ಜಾಗ ದಲ್ಲಿ ಈ ಎಲ್ಲ ಚಟುವಟಿಗಳು ಹರಡಿಕೊಂಡಿವೆ.

ಈಗಿರುವ 72 ಸಾವಿರ ಕಿಮಿ ಉದ್ದದ ರೈಲು ಹಳಿಗಳನ್ನು ನಿರ್ಮಿಸಲು ನಮಗೆ ಇಷ್ಟು ವರ್ಷಗಳು(150ವರ್ಷ) ಬೇಕಾಯಿತು. ರೈಲ್ವೆಗಂತಲೇ ಒಂದು ಪ್ರತ್ಯೇಕ ಬಜೆಟ್‌ ಇದೆ. ಸಾವಿರಾರು ಕೋಟಿ ರೂ. ಗಾತ್ರದ್ದು. ಸಾವಿರಾರು ಅಧಿಕಾರಿಗಳಿದ್ದಾರೆ. ಒಂದೊಂದು ವಲಯದ ಬಜೆಟ್‌ ಒಂದು ರಾಜ್ಯ ಸರಕಾರದ ಬಜೆಟ್‌ಗಿಂತ ದೊಡ್ಡದು. ಅಷ್ಟಾಗಿಯೂ ರೈಲ್ವೆಯಲ್ಲಿ ನಾವು ಸಾಧಿಸಿದ್ದು ಇಷ್ಟೇ. ಅದೇ ರಿಲಯನ್ಸ್‌ ಇನ್ಫೋ ಕಾಂ ಸಾಧನೆ ನೋಡಿ. ಮೂರು ವರ್ಷಗಳಲ್ಲಿ 90 ಸಾವಿರ ಕಿಮಿ ಆಫ್ಟಿಕ್‌ ಫೈಬರ್‌ ಕೇಬಲ್‌ಗಳನ್ನು ನೆಲದೊಳಗೆ ನೆಟ್ಟಿದ್ದಾರೆ. ದೇಶದ 1200 ಪಟ್ಟಣ, ನಗರಗಳಲ್ಲಿ ಈ ಕೇಬಲ್‌ ಹಾದುಹೋಗುತ್ತದೆ. ರಾಷ್ಟ್ರದ ಶೇ.90ರಷ್ಟು ಜನಸಂಖ್ಯೆಗೆ ಈ ಕೇಬಲ್‌ ಸಂಪರ್ಕ ಕಲ್ಪಿಸುತ್ತದೆ. ಜಪಾನ್‌ದಿಂದ ಅಮೆರಿಕದವರೆಗೆ ಸಮುದ್ರದಲ್ಲಿ ಹಾಕಲಾಗಿರುವ ಆಪ್ಟಿಕ್‌ ಫೈಬರ್‌ ಕೇಬಲ್‌ ಸಂಪರ್ಕ ವಾಹಿನಿಯ ಪ್ರಮುಖ ಪಾಲನ್ನು ರಿಲಯನ್ಸ್‌ ಹೊಂದಿದೆ. ಒಂದು ಸರಕಾರ ಮಾತ್ರ ಮಾಡಬಹುದಾದ ಆದರೆ ಸರಕಾರದಿಂದಲೂ ಸಾಧ್ಯವಾಗದಂಥ ಸಾಧನೆಯನ್ನು ನಾಲೆಡ್ಜ್‌ ಸಿಟಿಯಲ್ಲಿ ಕಾಣಬಹುದು. ಇದರಿಂದ ಟೆಲಿಕಾನ್ಫೆರೆನ್ಸಿಂಗ್‌,ಇ-ಮೆಡಿಸಿನ್‌, ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಸಂಪರ್ಕ, ಕಾಲ್‌ ಸೆಂಟ ರ್‌, ಮೊಬೈಲ್‌ ಸಂಪರ್ಕ ಹೀಗೆ ನೂರಾರು ವೈವಿಧ್ಯಮಯ, ಸೋಜಿಗದಾಯಕ ಹೊಸ ಹೊಸ ಸೇವೆಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ. ರಿಲಯನ್ಸ್‌ ಮೊಬೈಲ್‌ ಫೋನನ್ನೇ ತೆಗೆದುಕೊಳ್ಳಿ. ಒಂದು ಪುಟ್ಟ ಫೋನಿನಲ್ಲಿ ಟಿವಿ ನೋಡಬಹುದು, ಇ-ಮೇಲ್‌ ಚೆಕ್‌ ಮಾಡಬಹುದು. ಆಟ ಆಡಬಹುದು, ಹಾಡು ಕೇಳಬಹುದು, ಹಣ ತೆಗೆಯಬಹುದು, ಚಿತ್ರ ಸಂದೇಶಗಳನ್ನು ಕಳಿಸಬಹುದು...ಅಷ್ಟೇ ಅಲ್ಲ ಮಾತನಾಡ ಬಹುದು! ಅಮೆರಿಕ, ಇಂಗ್ಲೆಂಡ್‌ನಲ್ಲಿ ಕೂಡ ಮೊಬೈಲ್‌ ಫೋನಿನಲ್ಲಿ ಇಷ್ಟೆಲ್ಲ ಫೀಚರ್‌ಗಳಿಲ್ಲ. ಹೆಂಡತಿ, ಗರ್ಲ್‌ಫ್ರೆಂಡ್‌ ಇಲ್ಲದೇ ಒಂದು ದಿನವನ್ನಾದರೂ ಕಳೆಯಬಹುದು. ಆದರೆ ರಿಲಯನ್ಸ್‌ ಮೊಬೈಲ್‌ ಇಲ್ಲದೇ ಒಂದು ದಿನ ಸಹ ಕಳೆಯಲು ಅಸಾಧ್ಯ. ಅಷ್ಟೊಂದು ಬಗೆಯ ಸೇವೆಗಳು ಅದರಲ್ಲಿ ಲಭ್ಯ. ಮುಂದೊಂದು ದಿನ ಬರಬಹುದು. ನಿಮಗೆ ಅನಿಸಿದ್ದೆಲ್ಲ ವನ್ನೂ ಮೊಬೈಲ್‌ ಫೋನ್‌ ಮಾಡಬಹುದು. ಉದಾಹರಣೆಗೆ ಕಚೇರಿಯಾಳಗಿರುವ ನಿಮಗೆ ಮನೆಯಲ್ಲಿನ ವಾಷಿಂಗ್‌ ಮಶೀನಿನಿಂದ ಬಟ್ಟೆ ತೊಳೆಯಬೇಕೆಂಬ ಯೋಚನೆ ಬಂತು ಎಂದಿ ಟ್ಟುಕೊಳ್ಳಿ. ಮೊಬೈಲ್‌ ಫೋನಿನಲ್ಲಿರುವ ಸೆನ್ಸರ್‌ ನಿಮ್ಮ ಈ ಯೋಚನೆಯನ್ನು ಅದರಷ್ಟಕ್ಕೇ ಗ್ರಹಿಸಿ ಮನೆಯಲ್ಲಿನ ವಾಷಿಂಗ್‌ ಮಶೀನಿಗೆ ಸೂಚಿಸುತ್ತದೆ. ಕಚೇರಿಯಲ್ಲಿ ಕುಳಿತು ನೀವು ನೋಡಬೇಕೆಂದಿರುವ ಕ್ರಿಕೆಟ್‌ ಪಂದ್ಯವನ್ನು ರೆಕಾರ್ಡ್‌ ಮಾಡಿಕೊಳ್ಳು ವಂತೆ ಟಿವಿಗೆ ಸೂಚಿಸ ಬಹುದು. ಈ ನಿಟ್ಟಿನಲ್ಲಿ ನಾಲೆಡ್ಜ್‌ ಸಿಟಿಯಲ್ಲಿ ಸಂಶೋಧನೆಯಾಗಳಾಗುತ್ತಿವೆ. ಟಿವಿ ಸೆಟ್‌ವೊಂದಿ ದ್ದರೆ ಸಾಕು ಅದರಲ್ಲಿ ಕಂಪ್ಯೂಟರ್‌, ಇಂಟರ್‌ನೆಟ್‌,ರೇಡಿಯೋ, ಎಂಪಿ3, ಡಿವಿಡಿ, ಟೇಪ್‌ಕಾರ್ಡರ್‌, ಟೆಲಿಬ್ಯಾಂಕಿಂಗ್‌, ವಿಡಿಯೋ ಕಾನ್ಫೆರೆನ್ಸಿಂಗ್‌, ವಿಡಿಯೋ ಶೂಟಿಂಗ್‌ ಎಲ್ಲವೂ ಸಾಧ್ಯ. ಈ ಸೇವೆ ಎಲ್ಲರಿಗೂ ದಕ್ಕುವ ದಿನಗಳು ದೂರವಿಲ್ಲ. ನಾಲೆಡ್ಜ್‌ ಸಿಟಿ ಈ ಎಲ್ಲ ಮಾಹಿತಿಗಳ ಕೇಂದ್ರವಾಗಿದೆ. ರಿಲಿಯನ್ಸ್‌ ಮೊಬೈಲ್‌ ಕೈಯಲ್ಲಿದ್ದರೆ ಏನೆಲ್ಲ ಚಮತ್ಕಾರ ಮಾಡಬಹುದೋ ಅವೆಲ್ಲವೂ ಸಾಧ್ಯವಾಗುತ್ತಿದ್ದರೆ ನಾಲೆಡ್ಜ್‌ ಸಿಟಿಯಲ್ಲಿ ಕ್ಷಣ ಕ್ಷಣಕ್ಕೆ ಘಟಿಸುತ್ತಿರುವ ಸಂಶೋಧನೆಯ ಫಲವೇ ಕಾರಣ. ಅಮೆರಿಕ, ಇಂಗ್ಲೆಂಡ್‌ನಂಥ ದೇಶಗಳಿಗೆ ಮಾತ್ರ ಇಂಟರ್‌ನೆಟ್‌ ಡಾಟಾ ಸೆಂಟರ್‌ ಹೊಂದುವುದು ಸಾಧ್ಯವಿತ್ತು. ನಾಲೆಡ್ಜ್‌ ಸಿಟಿಯಲ್ಲಿ ಈಗ ಅದಕ್ಕೂ ಅವಕಾಶವಿದೆ. ನಿಮ್ಮೆಲ್ಲ ಮಾಹಿತಿ ದಾಸ್ತಾನನ್ನು ಅಲ್ಲಿ ಜೋಪಾನವಾಗಿ ಇಡಬಹುದು. ಮನರಂಜನೆಗೆ ಡಿಸ್ನಿವರ್ಲ್ಡ್‌ ಹೇಗೋ, ರಕ್ಷಣೆಗೆ ಪಂಟಗಾನ್‌ ಹೇಗೋ, ಬಾಹ್ಯಾಕಾಶಕ್ಕೆ ನಾಸಾ ಹೇಗೋ ಮಾಹಿತಿ ತಂತ್ರಜ್ಞಾನಕ್ಕೆ ನಾಲೆಡ್ಜ್‌ ಸಿಟಿ! ಇಂಥ ಒಂದು ತಾಣ ಭಾರತದಲ್ಲಿದೆಯೆಂಬು ದೇ ಗರ್ವದ ವಿಷಯ. ಹಾಗೆ ಈ ದೇಶದ ಬುದ್ಧಿವಂತ ತಲೆಗಳು ಇಲ್ಲಿ ಕೂಡಿ ಕೆಲಸ ಮಾಡುತ್ತಿರುವದೂ. ಮನಸ್ಸು ಮಾಡಿದರೆ ಅಂಥ ಕಟ್ಟೆಚ್ಚರ. ಅಂಬಾನಿಯ ಇತರ ತರಲೆಗಳೇನೇ ಇರಬಹುದು. ಮುಕೇಶ್‌-ಅನಿಲ್‌ ತಿಕ್ಕಾಟ ಏನೇ ಇರಬಹುದು. ರಾಜಕಾರಣಿಗಳೊಂದಿಗಿನ ಅವರ ವ್ಯವಹಾರ ಹತ್ತಾರು ಇದ್ದೀತು. ಪಕ್ಕಾ ವ್ಯಾವಾರಿಕ ದೃಷ್ಟಿಯಿಂದಲೇ ಇದನ್ನು ಆರಂಭಿಸಿರಬಹುದು. ಆದರೆ ನಾಲೆಡ್ಜ್‌ ಸಿಟಿ ಇದೆಯಲ್ಲ ಈ ದೇಶಕ್ಕೆ ಅಂಬಾನಿ ಕೊಟ್ಟ ಮಹಾ ಕೊಡುಗೆ! ಇದರಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಸಿಕ್ಕಿದೆ. ವಿದೇಶದಿಂದಲೂ ಕೆಲಸ ಹರಿದು ಬರುವಂತಾಗಿದೆ. ದೇಶದ ಬಗ್ಗೆ ಎಂಥವನಿಗೂ ಅಭಿಮಾನ ಮೂಡುವಂಥ ಒಂದಷ್ಟು ಕೆಲಸಗಳು ಅಲ್ಲಿ ನಡೆಯುತ್ತಿವೆ. ಭಾರತ ಮಾಹಿತಿ ತಂತ್ರಜ್ಞಾನದ ಮೂಗುದಾಣ ಹಿಡಿದು ಕುಳಿತು ಕೊಳ್ಳುವಂತಾದರೆ ಅದು ಅಂಬಾನಿ ಕೈಯಲ್ಲೇ ಇರುತ್ತದೆ ಹಾಗೂ ನಾಲೆಡ್ಜ್‌ ಸಿಟಿಯಲ್ಲೇ ಆಗುತ್ತದೆ.

ಮುಂಬೈ ಚೌಪಾಟಿಯ ಕಿನಾರೆಯಲ್ಲಿ ಎಲ್ಲರಂತೆ ಬೇಲ್‌ಪುರಿ ತಿಂದುಕೊಂಡು ಸಾಮಾನ್ಯ ಜೀವನ ಸಾಗಿಸುತ್ತಿದ್ದ ಅಂಬಾನಿ ಅಂಬಾರಿಯೇರಿ ಕುಳಿತಿದ್ದರೆ ಅದಕ್ಕೆ ಅವನ ದೂರದೃಷ್ಟಿಯೇ ಕಾರಣ. ‘ನಿಮಗೆ ಹಣ ಮಾಡುವ ಹಂಬಲವಿದ್ದರೆ, ಬೇರೆಯವರು ಆಹ್ವಾನಪತ್ರ ಕೊಡಬೇಕೆಂ ದು ನಿರೀಕ್ಷಿಸಬೇಡಿ’ ಎನ್ನುತ್ತಿದ್ದ ಅಂಬಾನಿ ಹಣ ಮಾಡುತ್ತಲೇ ಅಳಿಸಲಾಗದ ಹೆಜ್ಜೆಯನ್ನೂ ಮೂಡಿಸಿಹೋದ.

ಹಣದ ಹುಚ್ಚು ಹಚ್ಚಿಸಿಕೊಂಡವ ಕನಸುಗಾರನೂ ಆಗಿದ್ದರೆ ಮಾತ್ರ ಅಂಬಾನಿಯಾಗುತ್ತಾನೆ ಅಷ್ಟೆ .

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X