ಕೊರೊನಾ ಕಾಲದಲ್ಲಿ ಅದ್ಧೂರಿ ಮದುವೆಗೆ ಹೊರಟ 'ಕಾಮನ್ ಮ್ಯಾನ್' ಬಸವರಾಜ ಬೊಮ್ಮಾಯಿ!
ಬೆಂಗಳೂರು, ಆ. 24: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆತಂಕವಿದೆ. ಹೀಗಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಆ ಎರಡೂ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡಿ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ ಜಿಲ್ಲೆಗಳ ಜಿಲ್ಲಾಡಳಿತಳಿಗೆ ಖಡಕ್ ಆದೇಶ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಜನರು ಒಂದೆಡೆ ಸೇರುವಂತಾಗಬಾರದು ಎಂಬ ಸೂಚನೆಯನ್ನೂ ಸಿಎಂ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ವಿಪತ್ತು ನಿರ್ವಹಣಾ ಅಧಿನಿಯಮ 2005ರ ಪ್ರಕರಣ 24ರ ಸಬ್ ಸೆಕ್ಷನ್ (1) ಪ್ರಕಾರ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಹೀಗಾಗಿ ಯಾರೇ ಈ ಮಾರ್ಗಸೂಚಿ ಉಲ್ಲಂಘನೆ ಮಾಡಿದರೂ ಕಾನೂನು ಕ್ರಮ ಎದುರಿಸಲೇಬೇಕು. ಆದರೆ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಎಂಬುದು ಅಧಿಕಾರವಿದ್ದರಿಗೆ ಅನ್ವಯಿಸುವುದಿಲ್ಲ ಎಂಬಂತಾಗಿದೆ. ಅದಕ್ಕೆ ಕೇಂದ್ರ ಸಚಿವರುಗಳು ಮಾಡುತ್ತಿರುವ ಜನಾಶೀರ್ವಾದ ಯಾತ್ರೆ ಪ್ರಮುಖ ಕಾರಣ.

ಕೊರೊನಾ ಮಾರ್ಗಸೂಚಿ ಉಲ್ಲಂಘಸುತ್ತಿರುವವರು!
ಕೊರೊನಾ ಕಾಲದ ಕಾನೂನು ಕಾಮನ್ ಮ್ಯಾನ್‌ಗಳಿಗೆ ಒಂದು, ಜನಪ್ರತಿಧಿಗಳಿಗೆ ಮತ್ತೊಂದು ರೀತಿ ಆದಂತಾಗಿದೆ. ಕೇಂದ್ರದ ನಾಲ್ವರು ಸಚಿವರು ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಆರಂಭಿಸಿದ್ದಾರೆ. ಅವರೆಲ್ಲರೂ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಜನಾಶೀರ್ವಾದ ಯಾತ್ರೆ ಮೂಲಕ ಬಿಜೆಪಿ ನಾಯಕರು ಜನರನ್ನು ಸಾವಿನ ದವಡೆಗೆ ದೂಡುತ್ತಿದ್ದಾರೆ. ಕಾನೂನು ಉಲ್ಲಂಘಿಸುತ್ತಿರುವ ಕೇಂದ್ರ ಸಚಿವರ ಮೇಲೆ, ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನವನ್ನೂ ಸೆಳೆದಿದ್ದಾರೆ. ಕೊನೆಗೆ ಸಿಎಂ ಬೊಮ್ಮಾಯಿ ಅವರಾದರೂ ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವುದನ್ನು ತಡೆಯುತ್ತಾರೆ ಎಂಬ ಭರವಸೆಯನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದರು. ಆದರೆ ಸಿಎಂ ಬೊಮ್ಮಾಯಿ ಮಾಡುತ್ತಿರುವುದೇನು?

ನಾನು "ಸಿಎಂ' ಅಂದರೆ ಕಾಮನ್ ಮ್ಯಾನ್ ಎಂದಿದ್ದ ಬೊಮ್ಮಾಯಿ!
ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು 'ಸಿಎಂ' ಅಂದರೆ 'ಕಾಮನ್ ಮ್ಯಾನ್' ಎಂದಿದ್ದರು. ಅವರ ಆ ಹೇಳಿಕೆ ಅಲ್ಲಿದ್ದ ಮಕ್ಕಳ ಮೇಲೆ ಬಹಳಷ್ಟು ಪರಿಣಾಮ ಬೀರುವಂತಿತ್ತು. ಜೊತೆಗೆ ಅವರು ಹೇಳಿದ್ದನ್ನು ಸಣ್ಣ ವಿಡಿಯೋ ಮಾಡಿ ಬಿಟ್ಟಿದ್ದರು. ಅದು ಕೂಡ ತೀವ್ರ ವೈರಲ್ ಆಗಿತ್ತು!
ಆದರೆ ತಾವು ಹೇಳಿದಂತೆ 'ಕಾಮನ್ ಮ್ಯಾನ್' ಅಲ್ಲ 'ಛೀಫ್ ಮಿನಿಸ್ಟರ್' ಎಂಬುದನ್ನು ತಮ್ಮ ನಡೆಯಿಂದಲೇ ತೋರಿಸಲು ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅದ್ಧೂರಿ ಮದುವೆಗೆ ಸಿಎಂ (ಕಾಮನ್ ಮ್ಯಾನ್ ಅಲ್ಲ) ಬಸವರಾಜ ಬೊಮ್ಮಾಯಿ ಇಂದು (ಮಂಗಳವಾರ) ಸಂಜೆ ತೆರಳುತ್ತಿದ್ದಾರೆ. ಇದು ನಿಜವಾದ 'ಕಾಮನ್ ಮ್ಯಾನ್'ಗಳಿಗೆ ಕೋಪ ತರಿಸಿದೆ. ಈ ರಾಜಕಾರಣಿಗಳು ಹೇಳುವುದೊಂದು ಮಾಡುವುದು ಮತ್ತೊಂದು ಎಂದು ಹಾವೇರಿಯ ಬಸವರಾಜ ಬಿಸ್ನಳ್ಳಿ ಆರೋಪಿಸಿದ್ದಾರೆ. ಅಷ್ಟಕ್ಕೂ ಸಿಎಂ ಹೋಗುತ್ತಿರುವುದು ಯಾರ ಮದುವೆಗೆ?

ಅದ್ಧೂರಿ ಮದುವೆಗೆ 'ಕಾಮನ್ ಮ್ಯಾನ್' ಸಿಎಂ ಬೊಮ್ಮಾಯಿ!
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುತ್ತಿದ್ದಾರೆ. ಅವರೇ ಹೊರಡಿಸಿರುವ ಆದೇಶದಂತೆ ಈ ಕೊರೊನಾ ಕಾಲದಲ್ಲಿ ನಡೆಯುವ ಮದುವೆಗಳಲ್ಲಿ ಕೇವಲ 100 ಜನರು ಮಾತ್ರ ಭಾಗವಹಿಸಲು ಅನುಮತಿಯಿದೆ. ಮದುವೆಯಲ್ಲಿ ಭಾಗವಹಿಸುವವರ ಆಧಾರ್ ಕಾರ್ಡ್ ಅಥವಾ ಇನ್ಯಾವುದೆ ಗುರುತಿನ ಪತ್ರದ ಝರಾಕ್ಸ್ ಪ್ರತಿಯನ್ನು, ಮೊದಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕೊಟ್ಟು ಅನುಮತಿ ಪಡೆಯಬೇಕು. ಹಾಗೆ ಅನುಮತಿ ಪಡೆದುಕೊಂಡವರು ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶವಿದೆ. ಜೊತೆಗೆ ಯಾವುದೇ ಸಂದರ್ಭದಲ್ಲಾದರೂ ಬಿ.ಬಿ.ಎಂ.ಪಿ. ಮಾರ್ಷಲ್‌ಗಳು ಅಥವಾ ಕೊರೊನಾ ತುರ್ತು ಕರ್ತವ್ಯದಲ್ಲಿನ ಅಧಿಕಾರಿಗಳು ಕೋವಿಡ್ ಮಾರ್ಗಸೂಚಿ ಪಾಲನೆ ಆಗುತ್ತಿದೆಯಾ? ಎಂಬುದನ್ನು ತಪಾಸಣೆ ಮಾಡಬಹುದು ಎಂದಿದೆ.
ಸಿಎಂ ಭಾಗವಹಿಸಲಿರುವ ಮದುವೆ ಹಮ್ಮಿಕೊಂಡವರು ಕೂಡ ಕೋವಿಡ್ ಮಾರ್ಗಸೂಚಿಯನ್ನೂ ಅನುಸರಿಸುತ್ತಿರಬಹುದು. ಆದರೆ ಸ್ವತಃ ಸಿಎಂ ಬೊಮ್ಮಾಯಿ ಅವರೇ ಆ ಮದುವೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಈ ಎಲ್ಲವನ್ನೂ ಪರೀಕ್ಷೆ ಮಾಡುವ ಧೈರ್ಯ ಯಾವ ಅಧಿಕಾರಿಗೆ ಇದೆ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಜನರಲ್ಲಿ ಗೊಂದಲ ಮೂಡಿಸಿದ ಸಿಎಂ ಬೊಮ್ಮಾಯಿ ನಡೆ!
ಜೊತೆಗೆ ಮದುವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಬ್ಬರೇ ಹೀಗುವುದು ಅಸಾಧ್ಯ. ಮುಖ್ಯಮಂತ್ರಿ ಹುದ್ದೆಗಿರುವ ಪ್ರೊಟೊಕಾಲ್ ಪ್ರಕಾರ ಮೊದಲು ಭದ್ರತಾ ತಪಾಸಣೆ ನಡೆಯಬೇಕು. ಆಮೇಲೆ ಅಲ್ಲಿಗೇ ಸಂಬಂಧಿಸಿದ ಭದ್ರತಾ ಅಧಿಕಾರಿ ಭೇಟಿ ಕೊಡಬೇಕು. ಮುಖ್ಯಮಂತ್ರಿಗಳು ತಾವೋಬ್ಬರೆ ಎಲ್ಲಿಯೂ ಹೋಗುವಂತಿಲ್ಲ. ಒಬ್ಬ ಎಸ್‌ಪಿ ಸಮಾನಾಂತರ ಹುದ್ದೆಯ ಅಧಿಕಾರಿ, ಎಂಟು ಅಥವಾ ಹತ್ತು ಗನ್‌ಮ್ಯಾನ್‌ಗಳು, ಜೊತೆಗೆ ಅವರ ಕಾನ್ವೆ, ಹೀಗೆ ಹಚ್ಚಿನ ಸಿಬ್ಬಂದಿ ಮುಖ್ಯಮಂತ್ರಿಗಳೊಂದಿಗೆ ಇರಬೇಕಾಗುತ್ತದೆ.
ಹೀಗಾಗಿ ಕೋವಿಡ್ ಮಾರ್ಗಸೂಚಿಯಂತೆ ಮದುವೆಯಲ್ಲಿ ಭಾಗವಹಿಸಲು ಇವರೆಲ್ಲರೂ ಮೊದಲೇ ತಮ್ಮ ಆಧಾರ್ ಕಾರ್ಡ್, ಅಥವಾ ಇನ್ಯಾವುದೆ ಗುರುತಿನ ಪತ್ರ ಕೊಟ್ಟು ಅನುಮತಿ ಪಡೆದಿದ್ದಾರಾ? ಅಥವಾ ಹುದ್ದೆಗೆ ತಕ್ಕಂತೆ ಕೋವಿಡ್ ಮಾರ್ಗಸೂಚಿ ಅನ್ವಯವಾಗುವುದು ಬದಲಾಗುತ್ತದೆಯಾ? ಎಂಬ ಗೊಂದಲದಲ್ಲಿ ರಾಜ್ಯದ ಜನತೆಯಿದ್ದಾರೆ!












Click it and Unblock the Notifications