ಉಪಚುನಾವಣೆ: ಇಂದಿನಿಂದ ದೀದಿ ಪ್ರಚಾರ, ಅಭ್ಯರ್ಥಿ ಕಣಕ್ಕಿಳಿಸದ ಕಾಂಗ್ರೆಸ್
ಕೋಲ್ಕತ್ತಾ, ಸೆಪ್ಟೆಂಬರ್ 08: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸ್ವಕ್ಷೇತ್ರ ಭವಾನಿಪುರದಲ್ಲಿ ಉಪಚುನಾವಣೆಯ ಹಿನ್ನೆಲೆ ಪ್ರಚಾರ ಕಾರ್ಯ ಬುಧವಾರದಿಂದ ಆರಂಭ ಮಾಡಲಿದ್ದಾರೆ. ಭವಾನಿಪುರದ ಭಾಗವಾದ ದಕ್ಷಿಣ ಕೋಲ್ಕತ್ತಾದ ಚೇಟ್ಲಾ ಪ್ರದೇಶದಲ್ಲಿ ತನ್ನ ಪ್ರಚಾರ ಕಾರ್ಯವನ್ನು ಮಮತಾ ಬ್ಯಾನರ್ಜಿ ಆರಂಭಿಸಲಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಗೆಲುವಿಗೆ ಬೆಂಬಲವೆಂಬಂತೆ ತಮ್ಮ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರದಲ್ಲಿ ಸ್ಪರ್ಧಿಸಿರಲಿಲ್ಲ. ಬದಲಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಬಳಿಕ ಮಮತಾ ಬ್ಯಾನರ್ಜಿ ಮೇ 5ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ.ಈ ಹಿನ್ನೆಲೆಯಿಂದಾಗಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್‌ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಿಗದಿಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಇಂದಿನಿಂದ ಪ್ರಚಾರ ಕಾರ್ಯ ಪ್ರಾರಂಭ ಮಾಡಲಿದ್ದಾರೆ.
ಇನ್ನು ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದರೂ ಕೂಡಾ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕ ಬಹುಮತ ಪಡೆದು ಪಶ್ಚಿಮ ಬಂಗಾಳ ರಾಜ್ಯವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿದೆ. ಈ ಕಾರಣದಿಂದಾಗಿ ಮಮತಾ ಬ್ಯಾನರ್ಜಿಯನ್ನೇ ಮುಖ್ಯಮಂತ್ರಿಯಾಗಿ ಟಿಎಂಸಿ ಪಕ್ಷ ಆಯ್ಕೆ ಮಾಡಿತ್ತು. ಈ ಹಿನ್ನೆಲೆ ಮಮತಾ ಬ್ಯಾನರ್ಜಿಗೆ ಶಾಸಕರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿದೆ. ಈ ಕಾರಣದಿಂದಾಗಿ ತಮ್ಮ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದಾರೆ.

ವಾರ್ಡ್ ಮಟ್ಟದಲ್ಲಿ ಜವಾಬ್ದಾರಿ ಹಂಚಿಕೆ ಮಾಡಿದ ಟಿಎಂಸಿ
ಪಶ್ಚಿಮ ಬಂಗಾಳದಲ್ಲಿ ಭವಾನಿಪುರ ಮಾತ್ರವಲ್ಲದೇ ಇನ್ನೂ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಮುರ್ಷಿದಾಬಾದ್‌ನ ಜಂಗೀಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಜಾಕಿರ್ ಹುಸೇನ್, ಸಮ್‌ಸೇರ್‌ಗಂಜ್ ಕ್ಷೇತ್ರದಿಂದ ಅಮಿರುಲ್ ಇಸ್ಲಾಂ ಕಣಕ್ಕೆ ಇಳಿಸಲಾಗಿದೆ. ಈ ಎರಡೂ ಕ್ಷೇತ್ರಗಳ ಶಾಸಕರು ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಉಪಚುನಾವಣೆ ನಡೆಯುತ್ತಿದೆ. ಈ ಮೂರು ಕ್ಷೇತ್ರಗಳ ಪ್ರಚಾರ ಕಾರ್ಯಕ್ಕಾಗಿ ವಾರ್ಡ್ ಮಟ್ಟದ ಜವಾಬ್ದಾರಿಯನ್ನು ತೃಣಮೂಲ ಕಾಂಗ್ರೆಸ್ ಹಂಚಿಕೆ ಮಾಡಿದೆ. ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಸಚಿವರುಗಳು ಹಾಗೂ ತೃಣಮೂಲ ಕಾಂಗ್ರೆಸ್‌ನ ಶಾಸಕರುಗಳಿಗೆ ಈ ವಾರ್ಡ್ ಮಟ್ಟದ ಜಬಾಬ್ದಾರಿಯನ್ನು ಟಿಎಂಸಿ ಹಂಚಿಕೆ ಮಾಡಿದೆ. ರಾಜ್ಯ ಸಾರಿಗೆ ಸಚಿವ ಫಿರ್ಹಾದ್ ಹಕೀಮ್, ಪಂಚಾಯತ್ ಮಂತ್ರಿ ಸುಬ್ರತಾ ಮುಖರ್ಜಿ, ಬ್ಯಾನರ್ಜಿಯ ಸಹೋದರ ಕಾರ್ತಿಕ್ ಬ್ಯಾನರ್ಜಿ ಮತ್ತು ರಾಜ್ಯ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಪ್ರಚಾರದ ಜವಾಬ್ದಾರಿ ಹೊತ್ತಿರುವವರ ಪೈಕಿ ನಾಲ್ವರು ಆಗಿದ್ದಾರೆ. ಇನ್ನು ಈ ಉಪ ಚುನಾವಣೆಯ ಹಿನ್ನೆಲೆಯಲ್ಲಿ ತನ್ನ ಸ್ವಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ವರದಿಗಳು ಹೇಳಿದೆ.

ಟಿಎಂಸಿ ಎದುರು ಅಭ್ಯರ್ಥಿ ಕಣಕ್ಕೆ ಇಳಿಸದ ಕಾಂಗ್ರೆಸ್
ಭವಾನಿಪುರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ದವಾಗಿ ಅಭ್ಯರ್ಥಿಯನ್ನು ಇಳಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಈಗ ಯೂಟರ್ನ್ ಹೊಡೆದಿದೆ. "ಪಕ್ಷವು ತೃಣಮೂಲ ಕಾಂಗ್ರೆಸ್‌ನ ಎದುರು ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ," ಎಂದು ಕಾಂಗ್ರೆಸ್ ಹೇಳಿಕೊಂಡಿದೆ. "ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆದೇಶದಂತೆ ನಾವು ತೃಣಮೂಲ ಕಾಂಗ್ರೆಸ್‌ನ ವಿರುದ್ದವಾಗಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ, ಹಾಗೆಯೇ ಮಮತಾ ವಿರುದ್ದ ಯಾವುದೇ ಪ್ರಚಾರವನ್ನು ಮಾಡುವುದಿಲ್ಲ," ಎಂದು ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಯೂಟರ್ನ್ ಹೊಡೆದ ಕಾಂಗ್ರೆಸ್
ಕಾಂಗ್ರೆಸ್ ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಎದುರು ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವ ಸಾಧ್ಯತೆ ಇದೆ ಎಂಬ ವರದಿಗಳು ಆಗಿದ್ದವು. ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸೋಮವಾರ, "ಭವಾನಿಪುರದಲ್ಲಿ ನಾವು ಮಮತಾ ಬ್ಯಾನರ್ಜಿ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಈ ನಿರ್ಧಾರಕ್ಕೆ ಹಲವು ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ," ಎಂದು ಹೇಳಿದ್ದರು. ಆದರೆ ಮಂಗಳವಾರ ಯೂಟರ್ನ್ ಹೊಡೆದಿರುವ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, "ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆದೇಶದಂತೆ ನಾವು ತೃಣಮೂಲ ಕಾಂಗ್ರೆಸ್‌ನ ವಿರುದ್ದವಾಗಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ," ಎಂದು ತಿಳಿಸಿದ್ದಾರೆ.

ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ ಎಂದ ಸಿಪಿಐಎಂ
ಕಾಂಗ್ರೆಸ್‌ನ ಈ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಪಿಐಎಂ ನಾಯಕ ಸುಜನ್ ಚಕ್ರವರ್ತಿ, "ನಾವು ಟಿಎಂಸಿ ಹಾಗೂ ಬಿಜೆಪಿ ವಿರುದ್ದವಾಗಿ ನಮ್ಮ ಅಭ್ಯರ್ಥಿಯನ್ನು ಮೂರು ಕ್ಷೇತ್ರಗಳಲ್ಲೂ ಕಣಕ್ಕೆ ಇಳಿಸುತ್ತೇವೆ. ಜನರಿಗೆ ಬದಲಾವಣೆಯ ಅಗತ್ಯವಿದೆ. ಆದರೆ ನಾವು ಕಾಂಗ್ರೆಸ್ ತನ್ನ ನಿರ್ಧಾರವನ್ನು ಬದಲಾವಣೆ ಮಾಡಿಕೊಳ್ಳುವಂತೆ ನಾವು ಹೇಳಲು ಸಾಧ್ಯವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications