ಮಕರ ಸಂಕ್ರಾಂತಿ 2026: ವೃಷಭ ರಾಶಿಗೆ ಭಾಗ್ಯೋದಯದ ಸ್ಪಷ್ಟ ಸೂಚನೆ
ವೃಷಭ ರಾಶಿಗೆ ಮಕರ ಸಂಕ್ರಾಂತಿ ಫಲ: ಜನವರಿ 14ರಂದು ಮಕರ ಸಂಕ್ರಾಂತಿ ಸಂಭವಿಸುವುದರೊಂದಿಗೆ ರವಿ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರವಿ ಕರ್ಮ, ಆತ್ಮಬಲ, ಗೌರವ ಮತ್ತು ಪಿತೃಬಲದ ಪ್ರಮುಖ ಕಾರಕ. ಈ ಸಂಚಾರವು ಪ್ರತಿಯೊಂದು ರಾಶಿಯ ಮೇಲೂ ವಿಭಿನ್ನ ಪರಿಣಾಮ ಬೀರುತ್ತದೆ. ವೃಷಭ ರಾಶಿಯ ದೃಷ್ಟಿಯಲ್ಲಿ ಈ ಮಕರ ಸಂಕ್ರಾಂತಿ ಬಹಳ ಮಹತ್ವದ್ದಾಗಿದೆ. (ಬರಹ: ಪಂಡಿತ್ ವಿಠ್ಠಲ್ ಭಟ್)
ವೃಷಭ ರಾಶಿಗೆ ರವಿ ಚತುರ್ಥಾಧಿಪತಿ ಆಗಿದ್ದು, ಈ ಸಂಚಾರದಲ್ಲಿ ನವಮ ಭಾವ (ಭಾಗ್ಯಸ್ಥಾನ) ದಲ್ಲಿ ಸ್ಥಿತನಾಗುತ್ತಾನೆ. ಚತುರ್ಥ ಭಾವವು ಮನೆ, ತಾಯಿ, ಆಂತರಿಕ ಸುಖ ಮತ್ತು ಸ್ಥಿರತೆಯನ್ನು ಸೂಚಿಸಿದರೆ, ನವಮ ಭಾವವು ಭಾಗ್ಯ, ಧರ್ಮ, ಪಿತೃ ಮತ್ತು ಗುರುಕೃಪೆಯ ಸೂಚಕ. ಈ ಎರಡರ ಸಂಯೋಗದಿಂದ ವೃಷಭ ರಾಶಿಯವರಿಗೆ ಭಾಗ್ಯೋದಯದ ಸ್ಪಷ್ಟ ಸೂಚನೆ ದೊರೆಯುತ್ತದೆ.

ಭಾಗ್ಯೋದಯ ಮತ್ತು ದೈವ ಸಹಾಯ
ಚತುರ್ಥಾಧಿಪತಿ ರವಿಯು ಭಾಗ್ಯಭಾವದಲ್ಲಿ ಸ್ಥಿತನಾಗಿರುವುದರಿಂದ ವೃಷಭ ರಾಶಿಯವರಿಗೆ ದೈವಬಲ ಚೆನ್ನಾಗಿರುತ್ತದೆ. ಹಿಂದೆ ಆರಂಭಿಸಿದ್ದ ಕಾರ್ಯಗಳು ನಿಧಾನವಾಗಿ ಸರಿದೂಗುವ ಸಾಧ್ಯತೆ ಇದೆ. ಅಚಾನಕ್ ಶುಭ ಸುದ್ದಿಗಳು, ಹೊಸ ಅವಕಾಶಗಳು ಹಾಗೂ ನಿರೀಕ್ಷೆಗಿಂತ ಉತ್ತಮ ಫಲಗಳು ದೊರೆಯಬಹುದು.
'ಭಾಗ್ಯಸ್ಥೇ ಭಾನೌ ಜಾತಸ್ಯ | ದೈವಂ ಜಾಗರ್ತಿ ಸರ್ವದಾ' ರವಿಯು ಭಾಗ್ಯಭಾವದಲ್ಲಿ ಇದ್ದರೆ ಆ ವ್ಯಕ್ತಿಗೆ ದೈವ ಸದಾ ಸಹಕಾರ ನೀಡುತ್ತದೆ ಎಂದು ಅರ್ಥ.
ಪಿತೃಕೃಪೆ ಮತ್ತು ಧಾರ್ಮಿಕ ಪ್ರಗತಿ
ನವಮ ಭಾವವು ಪಿತೃ, ಧರ್ಮ ಮತ್ತು ಪುಣ್ಯಕರ್ಮಗಳ ಸೂಚಕ. ಈ ಸಂಚಾರದಲ್ಲಿ ವೃಷಭ ರಾಶಿಯವರಿಗೆ ಪಿತೃಕೃಪೆ ವಿಶೇಷವಾಗಿ ದೊರೆಯುವ ಸೂಚನೆ ಇದೆ. ಪಿತೃ ಸಂಬಂಧಿತ ಅಡಚಣೆಗಳು, ಮನಸ್ತಾಪಗಳು ಅಥವಾ ವಿಳಂಬಗಳು ಕಡಿಮೆಯಾಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳು, ದಾನ, ಪೂಜೆ, ವ್ರತಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. 'ನವಮೇ ಸೂರ್ಯೇ ಪಿತೃಕೃಪಾ | ಧರ್ಮೇ ಚ ರುಚಿರುಚ್ಯತೇ' ಎನ್ನುವುದು ಶಾಸ್ತ್ರವಾಕ್ಯ.
ಶಿಕ್ಷಣದಲ್ಲಿ ಏಳಿಗೆ
ರವಿಯು ಜ್ಞಾನ ಮತ್ತು ಆತ್ಮತೇಜಸ್ಸಿನ ಕಾರಕ. ನವಮ ಭಾವದಲ್ಲಿ ರವಿ ಇರುವುದರಿಂದ ವೃಷಭ ರಾಶಿಯವರಿಗೆ ವಿದ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆಗೆ ಇದು ಉತ್ತಮ ಕಾಲ. ವಿದ್ಯಾರ್ಥಿಗಳು, ಶಿಕ್ಷಕರು, ಜ್ಯೋತಿಷ್ಯರು, ಕಾನೂನು ಹಾಗೂ ಸಲಹಾ ಕ್ಷೇತ್ರದಲ್ಲಿರುವವರಿಗೆ ವಿಶೇಷ ಅನುಕೂಲ ಲಭಿಸುತ್ತದೆ. ಗುರುಕೃಪೆಯಿಂದ ನಿರ್ಣಯ ಶಕ್ತಿ ಬಲಗೊಳ್ಳುತ್ತದೆ. 'ಭಾಗ್ಯಾತ್ ವಿದ್ಯಾವಿವೃದ್ಧಿಃ ಸ್ಯಾತ್' ಎಂದು ಶಾಸ್ತ್ರವಾಕ್ಯ.
ಮನೆ, ವಾಹನ, ತಾಯಿಗೆ ಸಂಬಂಧಿಸಿದ ಶುಭ ಸೂಚನೆ
ರವಿಯು ವೃಷಭ ರಾಶಿಗೆ ಚತುರ್ಥಾಧಿಪತಿ ಆದ ಕಾರಣ ಮನೆ, ವಾಹನ ಮತ್ತು ತಾಯಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಸಂಚಾರವು ಶುಭ ಸೂಚನೆಗಳನ್ನು ನೀಡುತ್ತದೆ. ಮನೆ ಖರೀದಿ, ವಾಹನ ಬದಲಾವಣೆ ಅಥವಾ ಆಸ್ತಿ ಸಂಬಂಧಿತ ನಿರ್ಣಯಗಳಿಗೆ ಇದು ಅನುಕೂಲಕರ ಕಾಲ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಇದೆ.'ತುರ್ಥೇಶೇ ಶುಭಸ್ಥಾನೇ | ಗೃಹ-ವಾಹನ-ಸೌಖ್ಯಂ" ಎಂದು ಶಾಸ್ತ್ರವಾಕ್ಯ.
ಮಾನ, ಗೌರವ ಮತ್ತು ಸಮಾಜದಲ್ಲಿ ಪ್ರತಿಷ್ಠೆ
ಭಾಗ್ಯಸ್ಥಾನದಲ್ಲಿರುವ ರವಿ ವೃಷಭ ರಾಶಿಯವರಿಗೆ ಸಮಾಜದಲ್ಲಿ ಗೌರವ ಮತ್ತು ಹಿರಿಯರಿಂದ ಮಾನ್ಯತೆಯನ್ನು ನೀಡುತ್ತಾನೆ. ಕೆಲವರಿಗೆ ಗುರುಸ್ಥಾನ, ಮಾರ್ಗದರ್ಶಕ ಪಾತ್ರ ಅಥವಾ ಸಾರ್ವಜನಿಕ ಜೀವನದಲ್ಲಿ ಪ್ರಭಾವ ಹೆಚ್ಚಾಗಬಹುದು. ಸರ್ಕಾರಿ ಅಥವಾ ಧಾರ್ಮಿಕ ಸಂಸ್ಥೆಗಳ ಸಂಪರ್ಕದಿಂದ ಲಾಭವೂ ದೊರೆಯಬಹುದು. ಸೂರ್ಯೇ ಭಾಗ್ಯಗತೇ ನೃಣಾಂ | ಮಾನ-ಕೀರ್ತಿಃ ಪ್ರವರ್ಧತೇ' ಎಂದು ಶಾಸ್ತ್ರವಾಕ್ಯ.
ವೃಷಭ ರಾಶಿಗೆ ಪರಿಹಾರ ಮಂತ್ರ ಮತ್ತು ಸೂರ್ಯೋಪಾಸನೆ
ಈ ಸಂಚಾರದ ಶುಭ ಫಲಗಳನ್ನು ಹೆಚ್ಚಿಸಲು ಸೂರ್ಯೋಪಾಸನೆ ಬಹಳ ಉಪಯುಕ್ತ. ಪರಿಹಾರ ಮಂತ್ರವಾಗಿ 'ಓಂ ಆದಿತ್ಯಾಯ ನಮಃ' ಎಂದು ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ 11 ಬಾರಿ ಜಪಿಸಬೇಕು. ಸೂರ್ಯೋದಯದ ವೇಳೆಗೆ ತಾಮ್ರ ಪಾತ್ರೆಯಲ್ಲಿ ನೀರು, ಅಕ್ಷತೆ ಮತ್ತು ಕುಂಕುಮ ಹಾಕಿ ಅರ್ಘ್ಯ ನೀಡುವ ಮೂಲಕ ಸೂರ್ಯೋಪಾಸನೆ ಮಾಡಬೇಕು. ಭಾನುವಾರ ಗೋಧಿ, ಬೆಲ್ಲ ಅಥವಾ ಕೆಂಪು ಬಟ್ಟೆ ದಾನ ಶುಭ. ಆದಿತ್ಯ ಹೃದಯ ಸ್ತೋತ್ರ ಪಠಣ ವಿಶೇಷ ಫಲಕಾರಿ
ಒಟ್ಟಾರೆ ಮಕರ ಸಂಕ್ರಾಂತಿ 2026 ವೃಷಭ ರಾಶಿಯವರಿಗೆ ಭಾಗ್ಯೋದಯ, ಪಿತೃಕೃಪೆ, ಧಾರ್ಮಿಕ ಪ್ರಗತಿ, ಗೃಹಸೌಖ್ಯ ಮತ್ತು ಸಮಾಜದಲ್ಲಿ ಗೌರವವನ್ನು ನೀಡುವ ಅತ್ಯಂತ ಶುಭ ಸಂಚಾರವಾಗಿದೆ. ಸರಿಯಾದ ಸೂರ್ಯೋಪಾಸನೆ ಮತ್ತು ಧರ್ಮಾಚರಣೆಯಿಂದ ಈ ಫಲಗಳನ್ನು ಇನ್ನಷ್ಟು ಬಲಪಡಿಸಬಹುದು.












Click it and Unblock the Notifications