ವಾಸ್ತು: ನಂಬಿಕೆನಾ? ಅಥವಾ ವೈಜ್ಞಾನಿಕ ಸತ್ಯನಾ? ತಿಳಿದುಕೊಳ್ಳಿ ನಿಜಾಂಶ
ಭಾರತದಲ್ಲಿ ವಾಸ್ತು ಶಾಸ್ತ್ರವನ್ನು ಕೆಲವರು ನಂಬುತ್ತಾರೆ ಇನ್ನು ಕೆಲವರು ಅದನ್ನು ನಂಬುವುದಿಲ್ಲ, ಇದರ ಬಗ್ಗೆ ಜನರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಇದನ್ನು ಕುರುಡು ನಂಬಿಕೆ ಎಂದು ತಳ್ಳಿಹಾಕಿದರೆ, ಇನ್ನೂ ಕೆಲವರು ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಗೆ ಇದು ತುಂಬಾ ಸಹಾಯಕ ಎಂದು ನಂಬುತ್ತಾರೆ. ಆದರೆ ಈ ವಿಷಯವನ್ನು ಕೇವಲ ನಂಬಿಕೆಯ ದೃಷ್ಟಿಯಿಂದ ಮಾತ್ರ ನೋಡದೇ, ತರ್ಕ ಮತ್ತು ಮನೋವಿಜ್ಞಾನ ದೃಷ್ಟಿಯಿಂದ ವಿಶ್ಲೇಷಿಸಿದರೆ ಕೆಲವು ಮಹತ್ವದ ಅಂಶಗಳು ತಿಳಿದು ಬರುತ್ತವೆ.
ವಾಸ್ತು ಶಾಸ್ತ್ರವು ಮೂಲತಃ ದಿಕ್ಕು, ಗಾಳಿ, ಬೆಳಕು ಮತ್ತು ಭೂಮಿಯ ಕಾಂತೀಯ ಶಕ್ತಿಗಳ ಸಮತೋಲನದ ಮೇಲೆ ಆಧಾರವಾಗಿದೆ. ಪೂರ್ವ ಮತ್ತು ಉತ್ತರ ದಿಕ್ಕಿನಿಂದ ಮನೆಗೆ ನೈಸರ್ಗಿಕ ಬೆಳಕು ಮತ್ತು ಗಾಳಿ ಸರಿಯಾಗಿ ಮನೆಯ ಒಳಗೆ ಬರುವಂತೆ ವಿನ್ಯಾಸ ಮಾಡಿದರೆ ಅದು ನಮಗೆ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತದೆ. ಉತ್ತಮ ಆರೋಗ್ಯ ಹೊಂದಿರುವ ವ್ಯಕ್ತಿ ತನ್ನ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸವನ್ನು ನಿರ್ವವಹಿಸುತ್ತಾನೆ. ಆದ್ದರಿಂದ ಅವನ ಆದಾಯ ಮತ್ತು ಆರ್ಥಿಕ ಸ್ಥಿತಿಯೂ ಸುಧಾರಿಸಬಹುದು ಎಂಬ ನಂಬಿಕೆ ಇದೆ.

ನಮ್ಮ ಮನೆಯ ವಾತಾವರಣ ಮತ್ತು ಮಾನಸಿಕ ಸ್ಥಿತಿಗತಿಗಳ ನಡುವೆ ಕೂಡ ನೇರವಾಗಿ ಸಂಬಂಧವಿರುತ್ತದೆ. ಸ್ವಚ್ಛ, ಬೆಳಕಿನಿಂದ ಕೂಡಿದ ಮತ್ತು ಸಮತೋಲನದ ವಾತಾವರಣ ಹೊಂದಿರುವ ಮನೆಯಲ್ಲಿ ವಾಸಿಸುವವರು ಹೆಚ್ಚು ಶಾಂತಿ ಮತ್ತು ಏಕಾಗ್ರತೆಯನ್ನು ಅನುಭವಿಸುತ್ತಾರೆ. ಇದು ಉದ್ಯೋಗ, ವ್ಯವಹಾರ ಅಥವಾ ಹೂಡಿಕೆಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ವಾಸ್ತು ನೇರವಾಗಿ ಹಣ ತರದೇ ಇದ್ದರೂ, ಸರಿಯಾದ ಮನೋಭಾವ ಮತ್ತು ನಿರ್ಧಾರಗಳಿಗೆ ಕಾರಣವಾಗಿ ಪರೋಕ್ಷವಾಗಿ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.
ವಾಸ್ತು ಪ್ರಕಾರ ಕೆಲವು ದಿಕ್ಕುಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಸ್ವಚ್ಛವಾಗಿ ಇಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಈಶಾನ್ಯ ದಿಕ್ಕಿನಲ್ಲಿ ನೀರಿನ ಮೂಲಗಳನ್ನು ಇಡುವುದು ಸಮೃದ್ಧಿಗೆ ಸಹಕಾರಿ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ ನೈಋತ್ಯ ದಿಕ್ಕನ್ನು ಭಾರವಾಗಿರಿಸುವುದು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಎಂದು ವಾಸ್ತು ಸೂಚಿಸುತ್ತದೆ.
ಇದಲ್ಲದೆ ಆಧುನಿಕ ವಾಸ್ತುಶಿಲ್ಪದ ತತ್ವಗಳೂ ಸಹ ವಾಸ್ತು ಶಾಸ್ತ್ರದ ಕೆಲವು ಅಂಶಗಳೊಂದಿಗೆ ಹೊಂದಾಣಿಕೆ ಆಗುತ್ತದೆ. ಸರಿಯಾದ ಬೆಳಕು, ಸರಿಯಾದ ಗಾಳಿ ಬರುವುದು ಮತ್ತು ವ್ಯವಸ್ಥಿತ ಸ್ಥಳ ವಿನ್ಯಾಸವು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಇವು ವ್ಯಕ್ತಿಯ ಮನೋಭಾವವನ್ನು ಸುಧಾರಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. 'ನಾನು ಉತ್ತಮ ವಾಸ್ತು ಹೊಂದಿದ ಮನೆಯಲ್ಲಿ ವಾಸಿಸುತ್ತಿದ್ದೇನೆ' ಎಂಬ ನಂಬಿಕೆಯೂ ಸಹ ವ್ಯಕ್ತಿಯೊಳಗಿನ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಆದರೆ ಈ ವಾಸ್ತುವನ್ನು ಒಂದು ಮಾಯಾ ಸೂತ್ರವೆಂದು ಭಾವಿಸುವುದು ಸರಿಯಲ್ಲ. ಕೇವಲ ವಾಸ್ತು ನಿಯಮಗಳನ್ನು ಪಾಲಿಸಿದರೆ ಯಾವುದೇ ಪ್ರಯತ್ನವಿಲ್ಲದೆ ಸಂಪತ್ತು ಹರಿದು ಬರುತ್ತದೆ ಎಂಬುದು ತಪ್ಪು ಕಲ್ಪನೆ. ಆರ್ಥಿಕ ಯಶಸ್ಸಿಗೆ ಕಠಿಣ ಪರಿಶ್ರಮ, ಯೋಜನೆ ಮತ್ತು ಸರಿಯಾದ ನಿರ್ಧಾರಗಳು ಅಗತ್ಯ. ವಾಸ್ತು ಇವುಗಳಿಗೆ ಪೂರಕವಾಗುವ ಪರಿಸರವನ್ನು ಸೃಷ್ಟಿಸುವ ಸಾಧನ ಮಾತ್ರ ಆಗಿರುತ್ತದೆ. ಆದ್ದರಿಂದ ವಾಸ್ತುವನ್ನು ನಂಬಿಕೆಯ ಜೊತೆಗೆ ಪ್ರಾಯೋಗಿಕವಾಗಿ ಬಳಸಿದರೆ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.












Click it and Unblock the Notifications