Get Updates
Get notified of breaking news, exclusive insights, and must-see stories!

Ugadi Bhavishya 2022: ಶುಭಕೃತ್ ನಾಮ ಸಂವತ್ಸರ ಯುಗಾದಿಯ ಮೇಷದಿಂದ ಮೀನದ ತನಕ ದ್ವಾದಶ ರಾಶಿ ಫಲ

ಶುಭಕೃತ್ ನಾಮ ಸಂವತ್ಸರ ಏಪ್ರಿಲ್ 2, 2022ರಿಂದ ಆರಂಭವಾಗುತ್ತದೆ. ಪ್ರತಿ ಸಂವತ್ಸರ ಬದಲಾವಣೆಯಲ್ಲೂ ದ್ವಾದಶ ರಾಶಿಗಳ ಫಲ ಏನು? ಆದಾಯ- ವ್ಯಯ, ಆರೋಗ್ಯ- ಅನಾರೋಗ್ಯ, ಶುಭಾಶುಭ ಫಲಗಳ ಚಿಂತನೆಯನ್ನು ಮಾಡಲಾಗುತ್ತದೆ. ಈ ಲೇಖನದಲ್ಲೂ ಅದನ್ನೇ ಮಾಡಲಾಗುತ್ತಿದೆ. ಮೇಷದಿಂದ ಮೀನ ರಾಶಿಯ ತನಕ ಹೊಸ ಸಂವತ್ಸರದಲ್ಲಿ ಗ್ರಹಗಳ ಗೋಚಾರ ಫಲ ಹೇಗಿರಲಿದೆ ಎಂದು ತಿಳಿಸಿಕೊಡಲಾಗುವುದು. ನೆನಪಿಡಿ, ಜನ್ಮ ಜಾತಕವನ್ನೇ ಪರಿಶೀಲಿಸಿ, ಆಯಾ ಕಾಲಕ್ಕೆ ಮಾಡಿಸಬೇಕಾದ ಶಾಂತಿ-ಪುರಸ್ಸರಗಳನ್ನು ಮಾಡಿಸುವುದು, ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಅದರ ಹೊರತುಪಡಿಸಿದಂತೆ ಯುಗಾದಿ ಫಲ ಒಮ್ಮೆ ನೋಡಿಕೊಂಡರೆ ಉತ್ತಮ.

ದೇಶದೆಲ್ಲೆಡೆ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರು ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಮುಂತಾದ ರಾಜ್ಯಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದುಗಳು ಆಚರಿಸುತ್ತಾರೆ. ಇನ್ನು ಹೆಚ್ಚಿಗೆ ಪೀಠಿಕೆಯನ್ನು ಹಾಕದೆ ಶುಭಕೃತ್ ನಾಮ ಸಂವತ್ಸರದ ದ್ವಾದಶ ರಾಶಿಗಳ ಶುಭಾಶುಭ ಫಲಗಳ ಕಡೆಗೆ ಗಮನ ಹರಿಸೋಣ.

ಮೇಷ

ಮೇಷ

ಈ ವರ್ಷ ನಿಮ್ಮ ಆರೋಗ್ಯ ಹಾಗೂ ಖರ್ಚಿನ ಕಡೆಗೆ ಹೆಚ್ಚು ಗಮನ ವಹಿಸಿ. ನಿರೀಕ್ಷೆಯೇ ಮಾಡದಂತೆ ಸಿಕ್ಕಾಪಟ್ಟೆ ಖರ್ಚುಗಳು ಕುತ್ತಿಗೆಗೆ ಅಮರಿಕೊಳ್ಳುತ್ತವೆ. ನಿಮ್ಮದೇ ಅತಿಯಾದ ವಿಶ್ವಾಸದಿಂದ ಸಾಲ ಮಾಡಿಕೊಳ್ಳುತ್ತೀರಿ. ಹಣದ ಹರಿವು ಚೆನ್ನಾಗಿದೆ ಎಂಬ ಕಾರಣಕ್ಕೆ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ. ಮನೆಯಲ್ಲಿ ಸಂಗಾತಿ ಹೇಳುವ ಮಾತಿಗೂ ಬೆಲೆ ಕೊಡಿ. ನಿಮ್ಮ ಏಕಾಂಗಿತನವನ್ನು ಹೋಗಲಾಡಿಸಿಕೊಳ್ಳುವುದಕ್ಕೆ ನೈತಿಕ ಅಲ್ಲದ ಸಂಬಂಧದ ಕಡೆಗೆ ಇಣುಕಬೇಡಿ. ಹಣ ಬಂದಾಗ ಕೂಡಿಡುವುದಕ್ಕೆ ಹೆಚ್ಚಿನ ಲಕ್ಷ್ಯ ಕೊಡುವುದು ಉತ್ತಮ.

ವೃಷಭ

ವೃಷಭ

ಈ ಸಂವತ್ಸರದಲ್ಲಿ ವಿವಿಧ ರೀತಿಯ ಲಾಭ ಹಾಗೂ ನಷ್ಟಗಳು ಎರಡನ್ನೂ ಏಕಕಾಲಕ್ಕೆ ಕಾಣುವಂತಾಗುತ್ತದೆ. ವಿಲಾಸಿ ವಸ್ತುಗಳನ್ನು ಖರೀದಿಸಲು ಬೇಕಾದ ಹಣಕಾಸಿನ ಹರಿವು ಆಗುತ್ತದೆ. ಆದರೆ ನಿಮ್ಮ ನಿರೀಕ್ಷೆಗೆ ಮೀರಿದ ವಸ್ತುಗಳನ್ನು ಖರೀದಿಸಿ ಸಾಲಗಾರರಾಗುತ್ತೀರಿ. ಶುಭ ಕಾರ್ಯಗಳು ಮನೆಯಲ್ಲಿ ನಡೆಯಲಿವೆ. ಉದ್ಯೋಗ ಸ್ಥಳದಲ್ಲಿ ಮಾಡುವ ಕೆಲಸದ ಕಡೆಗೆ ಲಕ್ಷ್ಯ ಕೊಡಿ. ವೃಥಾ ವಾದ- ವಿವಾದ ಮಾಡಿಕೊಳ್ಳಬೇಡಿ. ಜೂಜು- ಸಟ್ಟಾ ವ್ಯವಹಾರದಲ್ಲಿ ಅಪ್ಪಿ- ತಪ್ಪಿ ದುಡ್ಡು ಬಂದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವುದಕ್ಕೆ ಹೋಗದಿರಿ. ಹಿತಶತ್ರುಗಳ ಬಗ್ಗೆ ಎಚ್ಚರ ಇರಲಿ.

ಮಿಥುನ

ಮಿಥುನ

ನೀವು ನಿರೀಕ್ಷೆ ಮಾಡಿರದಂತೆ ಉದ್ಯೋಗ ಸ್ಥಳದಲ್ಲಿ ಪದೋನ್ನತಿ ಸಿಗುವ ಅವಕಾಶಗಳು ಹೆಚ್ಚಿವೆ. ಭೂಮಿ ಲಾಭ ಇರುವುದರಿಂದ ಸೈಟು- ಜಮೀನು ಖರೀದಿ ಸಾಧ್ಯತೆ, ಮನೆ ನಿರ್ಮಾಣ ಅಥವಾ ಕಟ್ಟಿರುವ ಮನೆಯನ್ನೇ ಖರೀದಿ ಮಾಡುವು ಅವಕಾಶಗಳು ನಿಮ್ಮ ಪಾಲಿಗೆ ಇವೆ. ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ನಿಮ್ಮಲ್ಲಿ ಕೆಲವರಿಗೆ ಈ ಹಿಂದೆ ಮಾಡಿದ ತಪ್ಪಿನ ಫಲವನ್ನು ಈಗ ಅನುಭವಿಸಬೇಕಾಗುತ್ತದೆ. ದೂರ ಪ್ರಯಾಣ ಮಾಡುವಾಗ ನೀವು ಹೋಗುವ ಕೆಲಸ ಆಗುವ ಸಾಧ್ಯತೆ ಇದೆಯೇ ಎಂಬುದನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ.

ಕರ್ಕಾಟಕ

ಕರ್ಕಾಟಕ

ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕ ಈಗ ಪ್ರತಿಫಲ ದೊರೆಯುವ ಸಮಯ ಇದು. ಆದರೆ ನಿಮ್ಮ ಆರೋಗ್ಯದ ಕಡೆ ಜಾಸ್ತಿ ಎಚ್ಚರಿಕೆಯನ್ನು ವಹಿಸಬೇಕು. ಸಂಗಾತಿ ಜತೆ ಯಾವುದೇ ವಿಚಾರ ಗುಟ್ಟು ಮಾಡಲು ಹೋಗದಿರಿ. ಇದರಿಂದ ವೃಥಾ ಮನಸ್ತಾಪ, ಭಿನ್ನಾಭಿಪ್ರಾಯ ಏರ್ಪಡಲಿದೆ. ಈ ಸಂವತ್ಸರದಲ್ಲಿ ವಿದೇಶ ಪ್ರಯಾಣ ಮಾಡುವಂಥ ಯೋಗ ನಿಮ್ಮ ಪಾಲಿಗಿದೆ. ಆದರೆ ಅಂಥ ಅವಕಾಶವನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷಿಸಿಕೊಳ್ಳಿ. ತಾಯಿಯ ಆರೋಗ್ಯದ ಬಗ್ಗೆಯೂ ಹೆಚ್ಚು ಲಕ್ಷ್ಯ ವಹಿಸಬೇಕು. ವಿದ್ಯಾರ್ಥಿಗಳಿಗೆ ಮಿಶ್ರ ಫಲ ಇದೆ.

ಸಿಂಹ

ಸಿಂಹ

ತಂದೆಯಿಂದ ಬಂದಂಥ ಆಸ್ತಿ, ಹೆಸರು, ವ್ಯವಹಾರ ಹಾಳು ಮಾಡಿಕೊಳ್ಳುತ್ತೀರಿ. ಯಾವುದೇ ಸಣ್ಣ- ಪುಟ್ಟ ವಿಚಾರಕ್ಕೂ ಕಾನೂನು ಬಾಹಿರ ದಾರಿಯನ್ನು ಅನುಸರಿಸಬೇಡಿ. ಯಾರ್ಯಾರದೋ ಮಾತನ್ನು ನಂಬಿ, ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಆ ನಂತರದಲ್ಲಿ ದುಃಖ ಪಡಬೇಕಾಗುತ್ತದೆ. ಮುಖ್ಯವಾಗಿ ಪಾರ್ಟನರ್ಶಿಪ್ ವ್ಯವಹಾರಗಳನ್ನು ಮಾಡಬೇಡಿ. ದೇಹದ ತೂಕ, ಮಧುಮೇಹ, ರಕ್ತದೊತ್ತಡ ಇವೆಲ್ಲವುಗಳ ಕಡೆಗೆ ಒಂದು ಕಣ್ಣಿಟ್ಟಿರಿ. ಸೋದರ- ಸೋದರಿಯರ ಜತೆಗೆ ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇಟ್ಟುಕೊಳ್ಳಿ. ಇಲ್ಲದಿದ್ದರೆ ಸಂಬಂಧ ದೂರವಾದೀತು.

ಕನ್ಯಾ

ಕನ್ಯಾ

ವಿವಾಹ ವಯಸ್ಕರಾಗಿದ್ದು, ಅದಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಈ ಸಂವತ್ಸರದಲ್ಲಿ ಸೂಕ್ತವಾದ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಹಣದ ಹರಿವು ಉತ್ತಮಗೊಳ್ಳಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಖರ್ಚು ಮಾಡುವ ಸಾಧ್ಯತೆ ಇದೆ. ಕಜ್ಜಿ, ತುರಿಕೆ ಹಾಗೂ ಗುಪ್ತಾಂಗ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ವಿದೇಶದಲ್ಲೇ ನೆಲೆಸಬೇಕು, ವ್ಯಾಸಂಗ ಮಾಡಬೇಕು ಎಂದು ಬಯಸುತ್ತಿದ್ದಲ್ಲಿ ಆ ಬಯಕೆ ಪೂರೈಸುವಂಥ ಅವಧಿ ಇದು. ಆದರೆ ನಕಾರಾತ್ಮಕ ಆಲೋಚನೆಯನ್ನು ಬಿಟ್ಟು ನೀವು ಪ್ರಯತ್ನಿಸಬೇಕು.

ತುಲಾ

ತುಲಾ

ಏಕಾಏಕಿ ಹಿಡಿದ ಕೆಲಸಗಳೆಲ್ಲ ಮುಂದಕ್ಕೆ ಹೋಗುತ್ತದೆ. ಆರೋಗ್ಯ ಸಮಸ್ಯೆ ಎದುರಾಗಿ ಅದಕ್ಕೆ ಕಾರಣ ಏನು ಎಂಬುದು ಗೊತ್ತಾಗದಂತೆ ಆಗುತ್ತದೆ. ಪುರುಷರಿಗೆ ಸ್ತ್ರೀಯರ ವಿಚಾರದಲ್ಲಿ ಹಾಗೂ ಸ್ತ್ರೀಯರಿಗೆ ಪುರುಷರ ವಿಚಾರದಲ್ಲಿ ಕೆಟ್ಟ ಹೆಸರು ಬರುವಂತಾಗುತ್ತದೆ. ಆ ಕಡೆಗೆ ಎಚ್ಚರವಾಗಿರಬೇಕು. ಪಾಪ ಕರ್ಮಾಸಕ್ತಿಯು ಹೆಚ್ಚಾಗಲಿದ್ದು, ಊಟ- ತಿಂಡಿ ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವರ ಜತೆಗೆ ಮಾತನಾಡುವಾಗ ಗೌರವಯುತವಾಗಿ ಮಾತನಾಡಿ. ಇಲ್ಲದಿದ್ದರೆ ಅವಮಾನಕ್ಕೆ ಗುರಿ ಆಗುತ್ತೀರಿ. ಸಾಧ್ಯವಾದಷ್ಟೂ ಮೌನದಿಂದ ಇರುವುದು ಉತ್ತಮ.

ವೃಶ್ಚಿಕ

ವೃಶ್ಚಿಕ

ಮಾತಿನ ಮೇಲೆ ಹಿಡಿತ ಇರಲಿ, ಮೇಲಧಿಕಾರಿಗಳು, ಸಂಬಂಧಿಕರು, ಸ್ನೇಹಿತರ ಬಗ್ಗೆ ಹಗುರವಾದ ಮಾತುಗಳನ್ನು ಆಡದಿರಿ. ಈ ಸಂವತ್ಸರದಲ್ಲಿ ವಿಲಾಸಿ ಆಸ್ತಿಯನ್ನು ಖರೀದಿಸಬೇಕು ಎಂಬ ಇಚ್ಛೆ ಇರುವವರಿಗೆ ಅದು ಪೂರ್ತಿ ಆಗುತ್ತದೆ. ದುಬಾರಿ ಕಾರು, ವಿಲ್ಲಾ, ಹಲವು ದೇಶಗಳ ಪ್ರಯಾಣ, ಮನೆಯ ನವೀಕರಣ ಇಂಥವನ್ನು ಮಾಡಿಸಲಿದ್ದೀರಿ. ಈ ಹಿಂದೆ ನೀವು ಸಾಲ ಕೊಟ್ಟಿದ್ದಲ್ಲಿ ಅದು ವಾಪಸ್ ಆಗುವ ಸೂಚನೆಗಳಿವೆ. ಮುಖ್ಯವಾಗಿ ಶೋಕಿ ಮಾಡಬೇಡಿ. ಅನಗತ್ಯ ಖರ್ಚುಗಳಾಗದಂತೆ ಎಚ್ಚರಿಕೆಯನ್ನು ವಹಿಸಿ. ಆಸ್ತಿ ಖರೀದಿಸಿ, ಆದರೆ ಅದರ ನವೀಕರಣ, ಸೌಂದರ್ಯ ಹೆಚ್ಚಿಸುವ ಸಲುವಾಗಿ ಸಿಕ್ಕಾಪಟ್ಟೆ ಖರ್ಚು ಮಾಡಬೇಡಿ.

ಧನುಸ್ಸು

ಧನುಸ್ಸು

ಅನಿರೀಕ್ಷಿತವಾಗಿ ಹಣದ ಹರಿವು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ನಿಮಗೆ ಇಷ್ಟು ಸಮಯ ಗೌರವ ನೀಡದಿದ್ದವರು ಸಹ ಮಾನ- ಸಮ್ಮಾನಗಳನ್ನು ಮಾಡಲು ಆರಂಭಿಸುತ್ತಾರೆ. ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಹಾಗೂ ಮಾರ್ಕೆಟಿಂಗ್‌ನಲ್ಲಿ ಇರುವವರಿಗೆ ಗುರಿ ಮುಟ್ಟುವುದಕ್ಕೆ ಅನುಕೂಲ ಆಗುತ್ತದೆ. ಮಕ್ಕಳ ಆರೋಗ್ಯ, ಸಹವಾಸ, ಶಿಕ್ಷಣ, ಭವಿಷ್ಯದ ಬಗ್ಗೆ ಜಾಸ್ತಿ ಲಕ್ಷ್ಯ ಕೊಡಿ. ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂದುಕೊಂಡಿರುವ ಧನು ರಾಶಿಯ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಮಯ ಇದಾಗಿರಲಿದೆ.

ಮಕರ

ಮಕರ

ನಿಮ್ಮ ಮಾತು, ಸಂಸಾರ, ಹಣದ ಹರಿವು ಇವೆಲ್ಲವೂ ಏಕಾಏಕಿ ಅಸ್ತವ್ಯಸ್ತವಾದಂತೆ ಅನಿಸುತ್ತದೆ. ಹೇಳಿಕೊಳ್ಳಲಾಗದಂಥ ಮಾನಸಿಕ ವ್ಯಥೆ ಕಾಡಲಿದೆ. ನೀವಾಗಿಯೇ ಸಾಲದ ಹೊರೆ ಹೊರುವಂತಾಗುತ್ತದೆ. ಶತ್ರುಗಳು ಪ್ರಬಲರಾಗುತ್ತಾರೆ. ಆದರೆ ನಿಮ್ಮ ಚಾಣಾಕ್ಷ ನಡೆಯಿಂದ ಅವುಗಳನ್ನು ದಾಟುತ್ತೀರಿ. ಈ ಸಂವತ್ಸರದಲ್ಲಿ ಉದ್ಯೋಗ ವಿಚಾರಕ್ಕೆ ಹೆಚ್ಚು ಲಕ್ಷ್ಯ ನೀಡಬೇಕು. ವಿವಾಹಕ್ಕೆ ಹೊರತಾದ ಸಂಬಂಧಗಳು, ಮೋಹಕ್ಕೆ ಸಿಲುಕಬೇಡಿ. ನಿಮ್ಮ ಪಾಲಿಗೆ ಸ್ನೇಹ ಅಂತೆನಿಸಿದರೂ ಸಮಾಜದ ಕಣ್ಣಿನಲ್ಲಿ ಅಪರಾಧಿಯಾಗಿ ನಿಲ್ಲಬೇಕಾದೀತು, ಎಚ್ಚರಿಕೆಯಿಂದ ಇರಿ.

ಕುಂಭ

ಕುಂಭ

ಮರೆವಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಯಾರ ಮಾತನ್ನೋ ನಂಬಿ, ಕೆಲಸ ಬಿಡುವುದು, ವಿದೇಶ ಪ್ರಯಾಣಕ್ಕೆ ಹೋಗುವುದು ಸೂಕ್ತವಾದ ನಡೆಯಲ್ಲ. ಆದರೆ ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಸಾಲ ಮಾಡಿಯಾದರೂ ಹೊಸ ವಾಹನ, ಮನೆ, ಸೈಟು ಇಂಥವನ್ನು ಖರೀದಿ ಮಾಡಲಿದ್ದೀರಿ. ಸೋರಿಯಾಸಿಸ್ ಸೇರಿದಂತೆ ಇತರ ಚರ್ಮ ವ್ಯಾಧಿಗಳು ಇರುವಂಥವರು ಬಹಳ ಎಚ್ಚರಿಕೆಯಿಂದ ಇರಬೇಕು. ರೋಗ ಉಲ್ಬಣ ಆಗಬಹುದು. ಸೋದರ- ಸೋದರಿಯರಿಂದ ಕೆಲವು ಅನುಕೂಲಗಳು ನಿಮಗೆ ಒದಗಿ ಬರಬಹುದು.

ಮೀನ

ಮೀನ

ಎಲ್ಲಕ್ಕೂ ಆತುರ ಪಟ್ಟು ನಿರ್ಧಾರ ಮಾಡಬೇಡಿ. ನಾನಾ ಬಗೆಯಲ್ಲಿ ದುಃಖ ಅನುಭವಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇಷ್ಟು ಸಮಯ ನಿಮಗೆ ಗೌರವ ನೀಡುತ್ತಿದ್ದವರು, ಮಾತು ಕೇಳುತ್ತಿದ್ದವರು ಉಲ್ಟಾ ಹೊಡೆಯುವುದಕ್ಕೆ ಶುರು ಮಾಡುತ್ತಾರೆ. ಉದ್ಯೋಗ ಬಿಡುವಂಥ ಅಥವಾ ಆಸಕ್ತಿ ಕಳೆದುಕೊಳ್ಳುವಂತಹ ಸ್ಥಿತಿ ಏರ್ಪಡುತ್ತದೆ. ಮೇಲಧಿಕಾರಿಗಳ ಸಿಟ್ಟಿಗೆ ಗುರಿಯಾಗಿ ಬೇಡದ ಸ್ಥಳಕ್ಕೆ ವರ್ಗಾವಣೆ, ಅಂದುಕೊಂಡ ಪ್ರಮಾಣದಲ್ಲಿ ವೇತನ ಹೆಚ್ಚಳ ಆಗದಿರುವುದು ಮೊದಲಾದ ಫಲಗಳಿವೆ. ಆದರೆ ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಬರಬೇಕಾದ ಹಣ ಬಂದಲ್ಲಿ ಜೋಪಾನವಾಗಿ ಎತ್ತಿಟ್ಟುಕೊಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+