Salt Vastu Tips: ಕೇವಲ 5 ನಿಮಿಷಗಳಲ್ಲಿ ಮನೆಯ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ವಾಸ್ತು ಉಪಾಯ
ಮನೆ ಎನ್ನುವುದು ಕೇವಲ ಇಟ್ಟಿಗೆ ಮತ್ತು ಗೋಡೆಗಳಿಂದ ನಿರ್ಮಿತವಾದ ಸ್ಥಳ ಮಾತ್ರವಲ್ಲ. ವಾಸ್ತು ಶಾಸ್ತ್ರದ ಪ್ರಕಾರ ನಮಗೆ ಮನೆ ಕೂಡ ನಮ್ಮ ದೇಹದಂತೆಯೇ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳನ್ನು ತನ್ನೊಳಗೆ ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಮನೆಯೊಳಗಿನ ಆರ್ಥಿಕ ಒತ್ತಡ, ಜಗಳ, ಆತಂಕ ಅಥವಾ ಅಶಾಂತಿ ಹೆಚ್ಚಾದಾಗ ಅದರ ಪರಿಣಾಮ ಮನೆಯ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ವಾಸ್ತು ಶಾಸ್ತ್ರದಲ್ಲಿ ಉಪ್ಪಿಗೆ (Salt) ಒಂದು ವಿಶೇಷವಾದ ಮಹತ್ವವನ್ನು ನೀಡಲಾಗುತ್ತದೆ. ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಮತ್ತು ವಾತಾವರಣವನ್ನು ಶುದ್ಧಗೊಳಿಸುವ ಗುಣವನ್ನು ಕೂಡ ಹೊಂದಿದೆ ಎಂಬ ನಂಬಿಕೆ ಇದೆ. ಮನೆಯ ಶಕ್ತಿಯನ್ನು ಶುದ್ಧಗೊಳಿಸಲು ಉಪ್ಪನ್ನು ಬಳಸುವ ಕೆಲವು ಸರಳ ವಿಧಾನಗಳು ಇಲ್ಲಿವೆ.

ಮನೆಯ ಮೂಲೆಗಳಲ್ಲಿ ಉಪ್ಪಿನ ಬಟ್ಟಲು ಇಡಿ
ಪ್ರತಿ ಕೊಠಡಿಯ ನಾಲ್ಕು ಮೂಲೆಗಳಲ್ಲಿ ಸಣ್ಣ ಪಾತ್ರೆಯಲ್ಲಿ ಕಲ್ಲು ಉಪ್ಪು ಅಥವಾ ಸಮುದ್ರ ಉಪ್ಪನ್ನು ಇಡಬಹುದು. ವಿಶೇಷವಾಗಿ ಮನೆಯಲ್ಲಿನ ವಾತಾವರಣ ನಕಾರಾತ್ಮಕ ಅನಿಸಿದರೆ ಈ ವಿಧಾನ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಉಪ್ಪಿನ ಪಾತ್ರೆ ಇಡುವಾಗ "ಈ ಉಪ್ಪು ಈ ಕೊಠಡಿಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳಲಿ" ಎಂಬ ಸಕಾರಾತ್ಮಕ ಭಾವನೆಯನ್ನು ಮನಸ್ಸಿನಲ್ಲಿ ಕೇಳಿಕೊಂಡು ಇಡಬೇಕು. 24 ಗಂಟೆಗಳ ಬಳಿಕ ಆ ಉಪ್ಪನ್ನು ಹರಿಯುವ ನೀರಿನಲ್ಲಿ ಬಿಡುವುದು ಅಥವಾ ತ್ಯಜಿಸುವುದರಿಂದ ಮನೆಯ ನಕಾರಾತ್ಮಕ ಶಕ್ತಿಯು ಕಡಿಮೆ ಆಗುತ್ತದೆ.
ಉಪ್ಪು ನೀರಿನಿಂದ ಮನೆ ಒರೆಸುವುದು
ನೆಲವನ್ನು ಒರೆಸುವ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ಮನೆ ಸ್ವಚ್ಛಗೊಳಿಸುವುದು ವಾಸ್ತು ಪ್ರಕಾರ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದು ಕೇವಲ ಮನೆಯ ಸ್ವಚ್ಛತೆಯನ್ನು ಮಾತ್ರವಲ್ಲದೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ವಿಶೇಷವಾಗಿ ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ವಿಧಾನ ಅನುಸರಿಸಿದರೆ ಮನೆಯ ವಾತಾವರಣ ಹಗುರ ಮತ್ತು ಶಾಂತವಾಗಿರುತ್ತದೆ ಎಂದು ನಂಬಲಾಗುತ್ತದೆ.
ಹಿಮಾಲಯನ್ ಉಪ್ಪಿನ ದೀಪ ಬಳಕೆ
ಮಲಗುವ ಕೋಣೆ ಅಥವಾ ಕೆಲಸ ಮಾಡುವ ಸ್ಥಳದ ಬಳಿ ಹಿಮಾಲಯನ್ ಉಪ್ಪುನ್ನು ಗಾಜಿನ ಬಟ್ಟಲಿನಲ್ಲಿ ಇಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ಏಕಾಗ್ರತೆ ಸಿಗುತ್ತದೆ ಎಂಬ ನಂಬಿಕೆ ಇದೆ. ಕೆಲವರು ಸಣ್ಣ ಉಪ್ಪಿನ ಪೊಟ್ಟಣವನ್ನು ಕೂಡ ತಮ್ಮ ಹಾಸಿಗೆಯ ಹತ್ತಿರ ಇಡುತ್ತಾರೆ. ವಾಯುವ್ಯ ಮೂಲೆಯಲ್ಲಿ ಹಿಮಾಲಯನ್ ಉಪ್ಪಿನ ಲ್ಯಾಂಪ್ ಅನ್ನು ಬೆಳಗಿಸುವುದರಿಂದ ನಕಾರಾತ್ಮಕ ಕಂಪನಗಳು ಕಡಿಮೆಯಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಗೆ ಸಹಕಾರಿ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.
ಮನೆಯ ಬಾಗಿಲಿನ ಬಳಿ ಉಪ್ಪು ಇಡುವುದು
ಮನೆಯ ಮುಖ್ಯ ಬಾಗಿಲಿನ ಬಳಿ ಕಣ್ಣಿಗೆ ಕಾಣದ ರೀತಿಯಲ್ಲಿ ಸಣ್ಣ ಪಾತ್ರೆಯಲ್ಲಿ ಉಪ್ಪನ್ನು ಇಡಬಹುದು. ಇದು ಮನೆಯೊಳಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.
ಪ್ರತಿ 7ರಿಂದ 10 ದಿನಗಳಿಗೊಮ್ಮೆ ಆ ಉಪ್ಪನ್ನು ಬದಲಾಯಿಸುವುದು ಒಳ್ಳೆಯದು. ಹಳೆಯ ಉಪ್ಪನ್ನು ಹರಿಯುವ ನೀರಿನಲ್ಲಿ ಬಿಡಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿನ ಮಹತ್ವವೇನು?
ವಾಸ್ತು ಶಾಸ್ತ್ರದಲ್ಲಿ ಉಪ್ಪು ಶುದ್ಧೀಕರಣ ಮತ್ತು ಸ್ಥಿರತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಅಡುಗೆ ಮನೆಯಲ್ಲೇ ಸಿಗುವ ಈ ಸಾಮಾನ್ಯ ಪದಾರ್ಥವನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಮನೆಯ ವಾತಾವರಣ ಹೆಚ್ಚು ಶಾಂತ, ಹಗುರ ಮತ್ತು ಸಮತೋಲನದಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ.
ಆದರೆ ಇವೆಲ್ಲವೂ ನಂಬಿಕೆ ಮತ್ತು ವಾಸ್ತು ಪದ್ಧತಿಗಳ ಭಾಗವಾಗಿದ್ದು, ವೈಜ್ಞಾನಿಕ ದೃಢೀಕರಣ ಇರುವುದಿಲ್ಲ ಎಂಬುದನ್ನೂ ಗಮನದಲ್ಲಿಡಬೇಕು.














Click it and Unblock the Notifications