• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Rahu, Ketu Transition To Taurus On Sep 23: ದ್ವಾದಶ ರಾಶಿಗಳ ಮೇಲೆ ರಾಹು, ಕೇತು ಪ್ರಭಾವ ಏನು?

By ಶಂಕರ್ ಭಟ್
|

ಈ ವರ್ಷದ ಸೆಪ್ಟೆಂಬರ್ 23ನೇ ತಾರೀಕು ರಾಹು- ಕೇತು ಗ್ರಹಗಳು ರಾಶಿ ಬದಲಾವಣೆ ಮಾಡಲಿವೆ. ಈ ಎರಡೂ ಗ್ರಹಗಳನ್ನು ಜ್ಯೋತಿಷ್ಯದಲ್ಲಿ ಸಮ ಸಪ್ತಕಗಳು ಎನ್ನಲಾಗುತ್ತದೆ. ಏಕೆಂದರೆ ಯಾವಾಗಲೂ ಏಳು ಮನೆಗಳ ಅಂತರ ಈ ಎರಡು ಗ್ರಹಗಳ ಮಧ್ಯೆ ಇರುತ್ತದೆ. ಆದ್ದರಿಂದ ಹೀಗೆ ಕರೆಯಲಾಗುತ್ತದೆ. ಇಷ್ಟು ಸಮಯ ಮಿಥುನ ರಾಶಿಯಲ್ಲಿ ಇದ್ದ ರಾಹು ವೃಷಭಕ್ಕೆ ಹಾಗೂ ಧನು ರಾಶಿಯಲ್ಲಿ ಇದ್ದ ಕೇತು ವೃಶ್ಚಿಕಕ್ಕೆ ಪ್ರವೇಶ ಆಗುತ್ತವೆ.

ಈ ಎರಡೂ ಗ್ರಹಗಳಿಗೆ ವೃಷಭ- ವೃಶ್ಚಿಕ ರಾಶಿಯ ಇಪ್ಪತ್ತು ಡಿಗ್ರಿ ಉಚ್ಚ ಸ್ಥಾನ. ಅಂದರೆ ಆ ಸ್ಥಾನಗಳಲ್ಲಿ ಇವುಗಳ ಪ್ರಭಾವ ಹೆಚ್ಚು. ಈ ವರ್ಷದ ಸೆಪ್ಟೆಂಬರ್ ರಾಶಿ ಬದಲಾವಣೆ ಮಾಡಿದಲ್ಲಿ 2022ರ ಮಾರ್ಚ್ ತಿಂಗಳ ತನಕ ಈ ಮನೆಯಲ್ಲೇ, ಅರ್ಥಾತ್ ಈ ರಾಶಿಯಲ್ಲೇ ಸಂಚಾರ ಇರುತ್ತದೆ.

ಹಣ ಉಳಿಯದಿರಲು ಕಾರಣ ಏನು? ಪರಿಹಾರ ಕಾಣೋದು ಹೇಗೆ?

ಶನಿ ಗ್ರಹದ ನಂತರ ಒಂದೇ ರಾಶಿಯಲ್ಲಿ ಅತಿ ಹೆಚ್ಚು ಸಮಯ ಇರುವ ಗ್ರಹಗಳು ರಾಹು- ಕೇತು. ಶನಿ ಗ್ರಹ ಒಂದು ರಾಶಿಯಲ್ಲಿ ಎರಡೂವರೆ ವರ್ಷ (ಮೂವತ್ತು ತಿಂಗಳು) ಇದ್ದಲ್ಲಿ, ರಾಹು- ಕೇತು ಒಂದು ರಾಶಿಯಲ್ಲಿ ಹದಿನೆಂಟು ತಿಂಗಳು ಒಂದೇ ಇರುತ್ತವೆ. ಆದ್ದರಿಂದ ರಾಹು- ಕೇತುಗಳನ್ನು ಛಾಯಾಗ್ರಹಗಳು ಎಂದೇ ಕರೆದರೂ ಅವುಗಳ ಪ್ರಭಾವ ಇದ್ದೇ ಇರುತ್ತದೆ.

ಸೆಪ್ಟೆಂಬರ್ 23ನೇ ತಾರೀಕು ಆಗುವ ಬದಲಾವಣೆಯ ಪ್ರಭಾವ 38 ದಿನಗಳ ಮುಂಚಿನಿಂದಲೇ ದ್ವಾದಶ ರಾಶಿಗಳ ಮೇಲೆ ಶುರುವಾಗುತ್ತದೆ. ಜತೆಗೆ ಜಾತಕದಲ್ಲಿ ರಾಹು- ಕೇತು ಎಲ್ಲಿ ಸ್ಥಿತವಾಗಿವೆ ಹಾಗೂ ಸದ್ಯಕ್ಕೆ ನಡೆಯುತ್ತಿರುವ ದಶೆ ಯಾವುದು ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ಇನ್ನು ರಾಹು- ಕೇತುಗಳ ಬದಲಾವಣೆಯ ಶುಭಾಶುಭ ಫಲಗಳು ಆಗಸ್ಟ್ ತಿಂಗಳಿನಿಂದಲೇ ಅನುಭವಕ್ಕೆ ಬರುತ್ತವೆ. ಇದಕ್ಕೆ ಅಗತ್ಯ ಸಿದ್ಧತೆ- ಎಚ್ಚರಿಕೆ ಇರಲಿ ಎಂಬ ಕಾರಣಕ್ಕೆ ನೀವಿದನ್ನು ಓದುತ್ತಿದ್ದೀರಿ.

ಮೇಷ

ಮೇಷ

ಈ ಅವಧಿಯಲ್ಲಿ ನಿಮ್ಮ ವೃತ್ತಿ- ಉದ್ಯೋಗ ಬದುಕಿನ ಮೇಲೆ, ಹಣಕಾಸು, ಮಾತಿನ ಮೇಲೆ ಪ್ರಭಾವ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಕೂಡ ನಿರೀಕ್ಷೆ ಮಾಡಬಹುದು. ಕೆಲವರಿಗೆ ವೇತನ ಹೆಚ್ಚಳ, ಕೆಲಸದ ಒತ್ತಡ ಒಟ್ಟೊಟ್ಟಿಗೆ ಶುರು ಆಗುತ್ತದೆ. ರಾಹುವಿನಿಂದ ಹಣಕಾಸಿನ ಅನುಕೂಲ ಇದ್ದರೂ ಕೇತುವಿನ ಕಾರಣಕ್ಕೆ ಸವಾಲುಗಳು ಇರಲಿವೆ. ದೊಡ್ಡ ಹಣಕಾಸಿನ ವ್ಯವಹಾರಗಳನ್ನು ನಡೆಸುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆಯೂ ಅಷ್ಟೇ ಅಗತ್ಯ. ಈ ಸಂದರ್ಭದಲ್ಲಿ ಶತ್ರುಗಳ ಕಾಟ ಹೆಚ್ಚಾಗಲಿದೆ. ಹೊಸದಾಗಿ ಔಷಧೋಪಚಾರ ಆರಂಭಿಸಬೇಕಿದ್ದಲ್ಲಿ ಒಂದಕ್ಕೆ ಎರಡು ಬಾರಿ ಪರೀಕ್ಷಿಸಿ, ಮುಂದುವರಿಯಬೇಕು. ಕುಟುಂಬದಲ್ಲಿ ಅಸಮಾಧಾನಗಳು ಇರುತ್ತವೆ. ಮನೆಯ ಹಿರಿಯರ ಆರೋಗ್ಯ ಕಾಳಜಿ ತೆಗೆದುಕೊಳ್ಳಿ. ಮನೆ ನಿರ್ಮಾಣ ಅಥವಾ ನವೀಕರಣ ಆರಂಭಿಸಬಹುದು. ಮಾನಸಿಕ ಒತ್ತಡ ಇರಲಿದೆ. ಜಗಳ- ಕಲಹಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ. ಹಿರಿಯರ ಸೇವೆ, ದಾನ- ಧರ್ಮಗಳಿಂದ ನಕಾರಾತ್ಮಕ ಪ್ರಭಾವ ಕಡಿಮೆ ಆಗುತ್ತದೆ.

ವೃಷಭ

ವೃಷಭ

ನಿಮ್ಮ ರಾಶಿಯಲ್ಲೇ ರಾಹುವಿನ ಸಂಚಾರ ಆಗುತ್ತದೆ. ವೈಯಕ್ತಿಕ ಬದುಕು, ಆರೋಗ್ಯ, ಸಂಪತ್ತು ಮತ್ತು ನಿಮ್ಮ ಸಂಕಲ್ಪಶಕ್ತಿಗೆ ಸಂಬಂಧಿಸಿದಂತೆ ಮುಖ್ಯ ಕಾಲ ಇದು. ವಿವಿಧ ಬಗೆಯ ಸವಾಲುಗಳನ್ನು ಎದುರುಗೊಳ್ಳಲಿದ್ದೀರಿ. ವೈಯಕ್ತಿಕ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ವರ್ಚಸ್ಸು, ಸಂಬಂಧದಲ್ಲಿ ಎಚ್ಚರಿಕೆ ಅಗತ್ಯ. ಇತರರಿಗೆ ಸುಲಭವಾಗಿ ಸಿಗಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಬಗ್ಗೆ ಸಲುಗೆ ಬೆಳೆಯುತ್ತದೆ. ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಅವರ ನಡವಳಿಕೆ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕು. ಅನಿರೀಕ್ಷಿತ ರೀತಿಯಲ್ಲಿ ಕುಸಿತಗಳನ್ನು ಕಾಣುವಂತಾಗುತ್ತದೆ. ಸಂಬಂಧಿಕರ ಮಧ್ಯೆ ಮನಸ್ತಾಪ, ಕಲಹ ಹಾಗೂ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಮಾಡಿಕೊಂಡ ವ್ಯವಹಾರ ಒಪ್ಪಂದಗಳು ಸರಾಗವಾಗಿ ಮುಂದುವರಿಯುವುದು ಕಷ್ಟವಾಗಲಿದೆ. ಯಾರನ್ನೂ ಕುರುಡಾಗಿ ನಂಬಬೇಡಿ. ಅದರಲ್ಲೂ ಅದೇ ಮೊದಲ ಬಾರಿಗೆ ಎಂಬಂತೆ ಭೇಟಿ ಆಗುವವರ ಬಗ್ಗೆ ಎಚ್ಚರಿಕೆಯಿಂದ ಇರಿ. ದೂರ ಪ್ರಯಾಣದ ಯೋಗ ಇದೆ. ಮಾಧ್ಯಮಗಳಲ್ಲಿ, ಜಾಹೀರಾತು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿದೇಶ ಪ್ರಯಾಣ ಯೋಗ ಇದೆ.

ಮಿಥುನ

ಮಿಥುನ

ನಿಮ್ಮ ಭಾವನಾತ್ಮಕ ಸಂಗತಿಗಳು ಹೆಚ್ಚು ಪ್ರಾಮುಖ್ಯ ಪಡೆಯುತ್ತವೆ. ಎಲ್ಲದರಲ್ಲೂ ತಪ್ಪನ್ನೇ ಹುಡುಕುವಂತಾಗುತ್ತದೆ. ಹೆಚ್ಚು ಆಕ್ರಮಣಕಾರಿ ಧೋರಣೆ ಕಂಡುಬರುತ್ತದೆ. ಈ ಕಾರಣಕ್ಕೆ ಜಗಳಗಂಟರು ಎಂಬ ಪಟ್ಟ ಕಟ್ಟಲಾಗುತ್ತದೆ. ಹಗಲುಗನಸು ಜಾಸ್ತಿ ಕಾಣುತ್ತೀರಿ. ಏಕಾಗ್ರತೆಯಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೆ ಹೆಚ್ಚು ಸಮಯ ವ್ಯರ್ಥ ಮಾಡಲಿದ್ದೀರಿ. ಹಿರಿಯರು, ಅನುಭವಿಗಳು ನೀಡುವ ಸಲಹೆ- ಸೂಚನೆಗಳನ್ನು ಕೇಳಿಸಿಕೊಂಡು, ಪಾಲಿಸಿ. ಈಗಾಗಲೇ ಕಾನೂನು ವ್ಯಾಜ್ಯಗಳು ಇದ್ದಲ್ಲಿ ಸಮಸ್ಯೆ ಉಲ್ಬಣಿಸಬಹುದು ಅಥವಾ ಕೋರ್ಟ್ ಮೆಟ್ಟಿಲೇರುವಂತಾಗುತ್ತದೆ. ದುರ್ಜನರ ಸ್ನೇಹದಿಂದ ದೂರ ಇರಬೇಕು. ಆರೋಗ್ಯ ವಿಚಾರವಾಗಿ ಸಂಕೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಕೆಲವು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡಲಿದ್ದೀರಿ. ಕುಟುಂಬದಲ್ಲಿ ಕೆಲ ಶುಭ ಕಾರ್ಯಗಳು ನಡೆಯಲಿವೆ. ಮನೆಯ ಯಜಮಾನಿಕೆ ವಹಿಸಿಕೊಳ್ಳುತ್ತೀರಿ. ಉದ್ಯೋಗ ಸ್ಥಳದಲ್ಲಿ ಕೆಲವು ಪ್ರಾಜೆಕ್ಟ್ ಗಳಲ್ಲಿ ಮೇಲಧಿಕಾರಿಗಳ ಜತೆ ವಾಗ್ವಾದ ನಡೆಸುತ್ತೀರಿ. ಸಹೋದ್ಯೋಗಿಗಳ ಜತೆಗೂ ಜಗಳ ಮಾಡಿಕೊಳ್ಳುತ್ತೀರಿ. ಉದ್ಯೋಗದಲ್ಲಿ ಸ್ಥಾನ- ಸ್ಥಳ ಬದಲಾವಣೆ ಇದೆ. ನೀವು ಖರ್ಚು ಮಾಡುವ ಪ್ರತಿ ರುಪಾಯಿ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ವೃಥಾ ಖರ್ಚು, ನಷ್ಟ ಇದೆ.

ಕರ್ಕಾಟಕ

ಕರ್ಕಾಟಕ

ದೀರ್ಘಾವಧಿ ಗುರಿ ಇಟ್ಟುಕೊಂಡು, ಹಾಕಿಕೊಂಡಿದ್ದ ಪ್ರಾಜೆಕ್ಟ್ ಗಳು ಫಲ ನೀಡಲು ಆರಂಭಿಸುತ್ತವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ ಇದೆ. ವಿದೇಶಗಳಲ್ಲಿ ಇರುವವರು, ಕಾರ್ಯ ನಿರ್ವಹಿಸುವವರ ಜತೆಗೆ ನಿರಂತರ ಸಂಪರ್ಕ, ಸಂವಹನ ಇರುತ್ತದೆ. ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನ ಹಲವು ಯೋಜನೆಗಳನ್ನು ರೂಪಿಸುತ್ತೀರಿ ಮತ್ತು ಅನುಷ್ಠಾನಗೊಳಿಸುತ್ತೀರಿ. ಹೊಸ ತಂಡಕ್ಕೆ ಸೇರ್ಪಡೆ ಆಗುವ ಯೋಗ ಇದೆ. ಯಶಸ್ಸಿಗಾಗಿ ಟೀಮ್ ವರ್ಕ್ ಬಹಳ ಮುಖ್ಯವಾಗಲಿದೆ. ಈ ಅವಧಿಯಲ್ಲಿ ದೂರ ಹಾಗೂ ಕಿರು ಪ್ರಯಾಣಗಳನ್ನು ಹೆಚ್ಚೆಚ್ಚು ಮಾಡಲಿದ್ದೀರಿ. ಮಾಧ್ಯಮ ಕ್ಷೇತ್ರದಲ್ಲಿ ಇರುವವರು, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಇರುವವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಪ್ರಾಜೆಕ್ಟ್ ಗಳ ಮೇಲೆ ವಿದೇಶ ಪ್ರವಾಸಕ್ಕೆ ತೆರಳುವ ಯೋಗ ಇದೆ. ಆದರೆ ಬಂಧುಗಳು, ಸ್ನೇಹಿತರ ಜತೆಗೆ ವಿವಿಧ ವಿಷಯಗಳಿಗಾಗಿ ಕಲಹ- ಮನಸ್ತಾಪ ಏರ್ಪಡಲಿದೆ. ಸಂಬಂಧಿಕರು, ಸ್ನೇಹಿತರ ಅಗಲಿಕೆ ಕೂಡ ಆಗಬಹುದು. ಮನೆಯಲ್ಲಿ ವಿವಾಹ ವಯಸ್ಕ ಮಕ್ಕಳ ಮದುವೆ, ಈಗಾಗಲೇ ಮದುವೆ ಆಗಿದ್ದಲ್ಲಿ ಸಂತಾನದಂಥ ಶುಭ ಕಾರ್ಯ, ಬೆಳವಣಿಗೆ ಆಗಲಿದೆ. ಆದರೆ ಯಾವುದೇ ಹೊಸ ಪ್ರಾಜೆಕ್ಟ್ ಕೈಗೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಪ್ರೀತಿಯಲ್ಲಿ ಇರುವವರಿಗೆ ಸಂಗಾತಿ ಜತೆಗೆ ಮೊದಲಿನ ನಿಕಟತೆಯಿಂದ ಇರುವುದಕ್ಕೆ ಆಗುವುದಿಲ್ಲ. ಏಕಕಾಲಕ್ಕೆ ಹಲವರ ಬಗ್ಗೆ ಪ್ರೀತಿ ಮೂಡಲಿದೆ. ಇದರಿಂದ ಗೊಂದಲ ಆಗಲಿದೆ.

ಸಿಂಹ

ಸಿಂಹ

ಸಮಾಜದಲ್ಲಿನ ನಿಮ್ಮ ವರ್ಚಸ್ಸು ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಭಾವ ಇರುತ್ತದೆ. ಉದ್ಯೋಗದಲ್ಲಿ ಬೆಳವಣಿಗೆ ಆಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡಲಿದೆ. ಈ ಸಂದರ್ಭದಲ್ಲಿ ಆಕ್ರಮಣಕಾರಿ ಹೆಜ್ಜೆಗಳನ್ನು ಇಡಲಿದ್ದೀರಿ. ಇದರಿಂದಾಗಿ ಏಕಕಾಲಕ್ಕೆ ಹಲವು ಅವಕಾಶಗಳು ನಿಮಗೆ ದೊರೆಯಲಿವೆ. ಆದರೆ ಆಯ್ಕೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮೇಲಧಿಕಾರಿಗಳ ಜತೆಗಿನ ನಿಮ್ಮ ನಡವಳಿಕೆಯಿಂದ ಅಸಮಾಧನ ಏರ್ಪಡಬಹುದು. ಈ ಅವಧಿಯಲ್ಲಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಏಳ್ಗೆ ಇದೆ. ನಿಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ಆದರೆ ಮನೆಯ ಹಿರಿಯರ ಜತೆಗೆ ನಿಮ್ಮ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಕಲಹ, ಜಗಳ ಹಾಗೂ ಮನಸ್ತಾಪಗಳು ಕಾಣಿಸಿಕೊಳ್ಳಬಹುದು. ಹಣಕಾಸು ವಿಚಾರದಲ್ಲಿ ಮಹತ್ತರ ಬದಲಾವಣೆ ಇದೆ. ಖರ್ಚು ಹೆಚ್ಚಾಗಿ, ಒತ್ತಡ ಬೀಳಲಿದೆ. ಹಣ ಬರುತ್ತದೆ ಹಾಗೂ ಅದೇ ರೀತಿ ಖರ್ಚು ಆಗಲಿದೆ. ಉಳಿತಾಯ ಆಗುವುದಿಲ್ಲ. ಈ ಸಂದರ್ಭದಲ್ಲಿ ಸಾಲ ಹೆಚ್ಚಾಗಬಹುದು, ಎಚ್ಚರಿಕೆಯಿಂದ ಇರಬೇಕು. ಆಹಾರ ಪಥ್ಯ, ದೈನಂದಿನ ವ್ಯಾಯಾಮಗಳನ್ನು ಕಡ್ಡಾಯವಾಗಿ ಪಾಲಿಸಿ. ಮಧುಮೇಹ, ಜೀರ್ಣಾಂಗದ ಸಮಸ್ಯೆ ಉಲ್ಬಣಿಸಬಹುದು. ಅಧ್ಯಾತ್ಮ ಚಿಂತನೆ ಕಡೆಗೆ ಮನಸ್ಸು ವಾಲುತ್ತದೆ. ತಕ್ಷಣ ಹಣ ಮಾಡುವ ದಂಧೆಗಳಿಂದ ದೂರ ಇರಿ.

ಕನ್ಯಾ

ಕನ್ಯಾ

ಉನ್ನತ ವಿದ್ಯಾಭ್ಯಾಸ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ದೂರದೃಷ್ಟಿ, ತತ್ವಗಳು ಕೇಂದ್ರ ವಿಷಯಗಳಾಗಲಿವೆ. ವಿದೇಶ ಪ್ರಯಾಣ, ವಿದೇಶ ವ್ಯವಹಾರಗಳಲ್ಲಿ ಪ್ರಗತಿ ಆಗಲಿದೆ. ಲೇಖಕರಿಗೆ ಮುದ್ರಕರು, ಪ್ರಕಾಶಕರ ಜತೆಗೆ ಭಿನ್ನಾಭಿಪ್ರಾಯ ಎದುರಾಗಬಹುದು. ಇನ್ನು ನಿಮ್ಮ ಮೇಲಿನ ಅಧಿಕಾರಿಗಳ ಜತೆಗೂ ಅಸಮಾಧಾನ ಆಗಬಹುದು. ಯಾವುದೇ ಕಾನೂನು ವ್ಯಾಜ್ಯಗಳ ಗೋಜಿಗೆ ಹೋಗದಿರಿ. ವಿದೇಶ ಪ್ರಯಾಣ ಅಥವಾ ದೂರ ಪ್ರದೇಶಗಳಿಗೆ ತೆರಳುವ ಯೋಗ ಇದೆ. ಎಲ್ಲ ಅಭಿಪ್ರಾಯಗಳಿಗೂ ನಿಮ್ಮದೊಂದು ಆಕ್ಷೇಪ ದಾಖಲಿಸುವ ಮನಸ್ಥಿತಿಯಲ್ಲಿ ಇರುತ್ತೀರಿ. ಆದರೆ ನಿಮ್ಮ ಎಲ್ಲ ಕೆಲಸದಲ್ಲೂ ಹೆಚ್ಚಿನ ಪರಿಶ್ರಮ ಹಾಕುತ್ತೀರಿ. ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಂಬಂಧಿಗಳ ಜತೆಗೆ ಮುಖ್ಯ ವಿಚಾರಗಳನ್ನು ಚರ್ಚಿಸಲಿದ್ದೀರಿ. ಕ್ರಿಯಾತ್ಮಕವಾದ ಸಂಗತಿ ಹಾಗೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ದಾನ- ಧರ್ಮಾದಿ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ಈ ಅವಧಿಯಲ್ಲಿ ಮಾತಿನ ಮೇಲೆ ನಿಗಾ ಇರಲಿ. ಇಲ್ಲದಿದ್ದಲ್ಲಿ ಸಂಬಂಧಿಕರು, ಸ್ನೇಹಿತರ ಜತೆಗೆ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಹೊಸ ವ್ಯಕ್ತಿಗಳ ಪರಿಚಯ ಆದಾಗ ಸಲುಗೆ ಬೇಡ. ಸಟ್ಟಾ ವ್ಯವಹಾರಗಳಿಗೆ ಹೆಚ್ಚಿನ ಸಮಯ, ಹಣವನ್ನು ಮೀಸಲಿಡಬೇಡಿ.

ತುಲಾ

ತುಲಾ

ಭಾವನಾತ್ಮಕ ಸಂಗತಿಗಳು, ದುಡ್ಡಿನ ವಿಚಾರ ಪ್ರಾಮುಖ್ಯ ಪಡೆಯಲಿವೆ. ಎಷ್ಟು ಚರ್ಚೆ ನಡೆಸಿದರೂ ಮುಗಿಯದಂತೆ ಹಣದ ವ್ಯವಹಾರಗಳು ನಿಮ್ಮನ್ನು ಮುತ್ತಿಕೊಳ್ಳಲಿವೆ. ಯಾವುದೂ ಸುಲಭಕ್ಕೆ ಬಗೆಹರಿಯುವುದಿಲ್ಲ. ದಿಢೀರ್ ಖರ್ಚುಗಳು ಕಾಣಿಸಿಕೊಳ್ಳುವ ಎಲ್ಲ ಸಾಧ್ಯತೆ ಇರುವುದರಿಂದ ಖರ್ಚಿನ ಕುರಿತು ನಿಗಾ ಇರಲಿ. ಹಾಗಂತ ಈ ಅವಧಿಯುದ್ದಕ್ಕೂ ಹಾಗೇ ಇರುತ್ತದೆ ಎಂದಲ್ಲ. ಆಗಾಗ ಆದಾಯಕ್ಕೂ ದಾರಿ ಗೋಚರಿಸುತ್ತದೆ. ಸಾಲ ಮರುಪಾವತಿಯನ್ನು ಸರಿಯಾಗಿ ಮಾಡಿ, ಮುಗಿಸಿ. ಬಾಕಿ ಉಳಿಸಿಕೊಂಡಲ್ಲಿ ಮತ್ತೂ ಒತ್ತಡ ಆಗುತ್ತದೆ. ಹೊಸದಾಗಿ ಪಾರ್ಟನರ್ ಷಿಪ್ ವ್ಯವಹಾರ ಶುರು ಮಾಡಬೇಡಿ. ಪದೇ ಪದೇ ಕಾಣಿಸಿಕೊಳ್ಳುವ ಆರ್ಥಿಕ ಸಮಸ್ಯೆಯಿಂದ ಮಾನಸಿಕವಾಗಿ ಹೈರಾಣಾಗಲಿದ್ದೀರಿ. ಹಗರಣಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ವಹಿಸಿದ ಅಧಿಕಾರ ದುರುಪಯೋಗ ಮಾಡಿಕೊಂಡಿರಿ ಎಂಬ ಆರೋಪ ನಿಮ್ಮ ಮೇಲೆ ಬರಬಹುದು. ಕುಟುಂಬದ ಆಸ್ತಿ ಹಂಚಿಕೆ ವಿಚಾರ ಚರ್ಚೆ ಆಗಲಿದೆ. ಕುಟುಂಬದ ಹಿರಿಯ ಸದಸ್ಯರಿಗೆ ನಿಮ್ಮ ಸಹಾಯದ ಅಗತ್ಯ ಕಂಡುಬರುತ್ತದೆ.

ವೃಶ್ಚಿಕ

ವೃಶ್ಚಿಕ

ವೈಯಕ್ತಿಕ ಹಾಗೂ ವೃತ್ತಿಪರ ಸಂಬಂಧದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಸಂಬಂಧದಲ್ಲಿ ಸೂಕ್ಷ್ಮ ಸಂಗತಿಗಳು, ಬೆಳವಣಿಗೆಗಳು ಪ್ರಾಮುಖ್ಯ ಪಡೆಯಲಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವವರು ನಿಮ್ಮ ಕಮೆಂಟ್, ಪೋಸ್ಟ್ ಗಳ ಬಗ್ಗೆ ನಿಗಾ ಇರಲಿ. ಶತ್ರುಗಳ ಸಂಖ್ಯೆ ಅಥವಾ ಈಗಾಗಲೇ ಇರುವ ಶತ್ರುಗಳ ಉಪಟಳ ಹೆಚ್ಚಾಗಲಿದೆ. ದೂರ ಪ್ರಯಾಣ ಹಾಗೂ ಭೇಟಿಗಳು ಹೆಚ್ಚು ಹೆಚ್ಚು ಮಾಡಲಿದ್ದೀರಿ. ವ್ಯವಹಾರಗಳಲ್ಲಿ ಹೊಸ ಅವಕಾಶಗಳು ಸಿಗಲಿವೆ. ಈ ಅವಧಿಯಲ್ಲಿ ಒಂಟಿತನ ನಿಮ್ಮನ್ನು ಕಾಡಲಿದೆ. ಬಿಡುವಿಲ್ಲದಂಥ ಕೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೈವಾಹಿಕ ಜೀವನದ ಕಡೆಗೆ ಗಮನ ನೀಡುವುದು ಕಷ್ಟವಾಗಲಿದೆ. ನಿಮ್ಮ ಆಲೋಚನೆಗಳನ್ನು ಇತರರ ಜತೆ ಹಂಚಿಕೊಳ್ಳಲಿದ್ದೀರಿ. ಆ ಮೂಲಕ ಆಕರ್ಷಣೆಯ ಕೇಂದ್ರವಾಗಲಿದ್ದೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ವಿದೇಶಗಳಿಂದ ಬಹಳ ಮುಖ್ಯವಾದ ವ್ಯಕ್ತಿಗಳನ್ನು ಭೇಟಿ ಆಗಲಿದ್ದೀರಿ. ಉದ್ಯೋಗದ ಸಂವಹನ ಹೆಚ್ಚಾಗಿರುತ್ತದೆ. ಹೊಸ ಹೊಸ ಗುಂಪುಗಳ ಸ್ನೇಹ ದೊರೆಯಲಿದೆ. ದಾನ- ಧರ್ಮಾದಿ ಕಾರ್ಯಗಳನ್ನು ಮಾಡಲಿದ್ದೀರಿ. ದೀರ್ಘಾವಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅವಕಾಶ ದೊರೆಯುತ್ತದೆ. ನಿಮ್ಮ ಕ್ರಿಯೇಟಿವ್ ಆಲೋಚನೆಗಳಿಗೆ ಅವಕಾಶಗಳು ದೊರೆಯಲಿವೆ. ಮನೆಯ ಹಿರಿಯರು ಹೆಚ್ಚಿನ ನಿರೀಕ್ಷೆಯಲ್ಲಿ ಇರುತ್ತಾರೆ. ಅವರ ಜತೆಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಗರ್ಭಿಣಿಯರು ಆರೋಗ್ಯದ ಕಡೆ ಹೆಚ್ಚು ನಿಗಾ ವಹಿಸಿ.

ಧನುಸ್ಸು

ಧನುಸ್ಸು

ಉದ್ಯೋಗ ಹಾಗೂ ಆರೋಗ್ಯದ ಮೇಲೆ ಪರಿಣಾಮ ಇರುತ್ತದೆ. ಕೆಲಸದಲ್ಲೇ ಹೆಚ್ಚು ಸಮಯ ಕಳೆಯಲಿದ್ದೀರಿ. ನಿಮ್ಮ ಸಾಮರ್ಥ್ಯ ಸಾಬೀತು ಮಾಡಿಕೊಳ್ಳಲು ಹೆಚ್ಚಿನ ಶ್ರಮ ಹಾಕುತ್ತೀರಿ. ಆದರೆ ಅಡ್ಡ ದಾರಿ ತುಳಿಯಬೇಡಿ. ಸುಲಭವಾಗಿ ಲಾಭ ಪಡೆಯುವುದು ಹೇಗೆ ಎಂಬ ಕಡೆಗೆ ನಿಮ್ಮ ಮನಸ್ಸು ಹರಿಯುತ್ತಿರುತ್ತದೆ. ಆದ್ದರಿಂದ ಅಂಥ ಭಾವನೆಗಳಿಗೆ ತಲೆ ಬಾಗಬೇಡಿ. ಸ್ಪರ್ಧಾತ್ಮಕ ಸಂಗತಿಗಳು ಎದುರಾಗುತ್ತವೆ. ಸಹೋದ್ಯೋಗಿಗಳ ಜತೆಗೆ ವಾಗ್ವಾದ- ಭಿನ್ನಾಭಿಪ್ರಾಯಗಳು ಎದುರಾಗಲಿದೆ. ಉದ್ಯೋಗ ಬದಲಾವಣೆಗೆ ಮನಸ್ಸು ಮಾಡಬೇಡಿ. ಇದರಿಂದ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಂತೆ ಆಗುತ್ತದೆ. ನಿಮ್ಮ ಅಹಂಕಾರಕ್ಕೆ ಪೆಟ್ಟು ನೀಡುವಂಥ ಘಟನೆಗಳು ಸಂಭವಿಸುತ್ತವೆ. ಆರ್ಥಿಕ ಸಮಸ್ಯೆಗಳು ನೀವಾಗಿಯೇ ಕೆಲವನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ. ಸಾಲ ಕೊಡುವುದು- ನೀಡುವುದು ಇದ್ದೇ ಇರುತ್ತದೆ. ಆದರೆ ಅದನ್ನು ವಿಪರೀತ ಮಾಡಿಕೊಳ್ಳಬೇಡಿ. ಮಾನಸಿಕ- ದೈಹಿಕ ಆರೋಗ್ಯದ ಮೇಲೆ ಪರಿಣಾಮಗಳು ಆಗಲಿವೆ. ಉತ್ತಮ ನಿದ್ದೆ ಮತ್ತು ಆಹಾರ ಪಥ್ಯದ ಕಡೆಗೆ ನಿಗಾ ನೀಡಬೇಕು. ಮಧುಮೇಹದ ಸಮಸ್ಯೆ ಇರುವವರು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಮಯ, ಹಣ, ಗಮನ ಕೊಡಿ. ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಈ ಅವಧಿಯಲ್ಲಿ ನಿಮ್ಮನ್ನು ಕಾಡಬಹುದು. ತಕ್ಷಣದ ಹಣ ಮಾಡುವ ಜೂಜು, ಸಟ್ಟಾ ವ್ಯವಹಾರಗಳಿಂದ ದೂರ ಇರಿ. ಇಡೀ ಅವಧಿಯಲ್ಲಿ ಅಹಂ ನಿಯಂತ್ರಣದಲ್ಲಿರಲಿ. ಇಲ್ಲದಿದ್ದರೆ ವರ್ಚಸ್ಸಿಗೆ ಹಾನಿ ಆಗಬಹುದು.

ಮಕರ

ಮಕರ

ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಹೊಸ ಸಾಹಸಗಳಿಗೆ ಕೈ ಹಾಕಬೇಡಿ. ನಿಮ್ಮ ಕೌಶಲ, ಸಾಮರ್ಥ್ಯವನ್ನು ತೋರಿಸಲು, ಸಾಬೀತು ಪಡಿಸಲು ಅವಕಾಶ ದೊರೆಯಲಿದೆ. ಆದರೆ ಎಲ್ಲವೂ ನಿಮಗೆ ಅನುಕೂಲದ ಸ್ಥಿತಿಯಲ್ಲೇ ಇರುತ್ತದೆ ಎಂದೇನಿಲ್ಲ. ಅಪಾಯದ ವ್ಯಾಪಾರಗಳು ಯಾವುವು ಎಂಬುದನ್ನು ನಿರ್ಧರಿಸಿ, ಅಂಥವುಗಳಿಂದ ದೂರ ಇರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಆ ಬಾಂಧವ್ಯ ಕಾಪಾಡಿಕೊಳ್ಳುವ ಕಡೆಗೆ ಗಮನ ನೀಡಿ. ಸಂಗಾತಿ ಜತೆಗೆ ಆಕ್ರಮಣಕಾರಿಯಾಗಿ ವಾಗ್ವಾದ, ಜಗಳ- ಮನಸ್ತಾಪಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಮಹಿಳೆಯರು ಹೊಟ್ಟೆ ನೋವಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ಆ ಕಡೆ ನಿಗಾ ಕೊಡಿ. ಈಗಾಗಲೇ ಗುಪ್ತಾಂಗ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ಉನ್ನತ ವಿದ್ಯಾಭ್ಯಾಸ ಹಾಗೂ ಕೌಶಲ ಅಭಿವೃದ್ಧಿ ಕಡೆಗೆ ಗಮನ ನೀಡಲಿದ್ದೀರಿ. ದೂರ ಅಥವಾ ವಿದೇಶ ಪ್ರಯಾಣ ಮಾಡುವ ಯೋಗ ಇದೆ. ಬರಹಗಾರರಿಗೆ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಲೇಖನ, ವರದಿಗಳು ಪ್ರಕಟ ಆಗಲಿವೆ. ನಿಮ್ಮ ತಾಂತ್ರಿಕ ಕೌಶಲವನ್ನು ಸಮರ್ಥವಾಗಿ ಬಳಸಿಕೊಳ್ಳಲಿದ್ದೀರಿ. ನಿಮ್ಮೊಳಗೇ ನಿರಂತರವಾಗಿ ಸುಧಾರಣೆ ಮಾಡಿಕೊಳ್ಳಲಿದ್ದೀರಿ.

ಕುಂಭ

ಕುಂಭ

ಕೌಟುಂಬಿಕ ಸಂಗತಿ, ಉದ್ಯೋಗ ಪ್ರಾಮುಖ್ಯ ಪಡೆದುಕೊಳ್ಳಲಿವೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭ ಇದೆ. ವಿದೇಶ ಪ್ರಯಾಣ ಯೋಗ ಇದೆ. ಆಸ್ತಿ ವ್ಯವಹಾರ ನಡೆಸುವವರು ಯಾವುದೇ ವ್ಯಾಜ್ಯ ಆಗದಂತೆ ನೋಡಿಕೊಳ್ಳಿ. ಭೂಮಿ- ಆಸ್ತಿ ವ್ಯವಹಾರ ಮಾಡುತ್ತಿರುವವರು ದಾಖಲೆ- ಪತ್ರಗಳನ್ನು ಒಂದಕ್ಕೆ ಎರಡು ಬಾರಿ ಪರಿಶೀಲಿಸಿ. ಕಾನೂನು ಸಲಹೆಗಳನ್ನು ಪಡೆದುಕೊಳ್ಳಿ. ಮನೆಯ ನವೀಕರಣ ಮಾಡುವ ಯೋಗ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ನೀವು ಅವುಗಳ ನೇತೃತ್ವ ವಹಿಸಲಿದ್ದೀರಿ. ಅಸಮಾಧಾನದ ಮಾತುಗಳನ್ನು ಆಡಬೇಡಿ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ಮನೆಯ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿದ್ದೀರಿ. ನಿಮ್ಮ ಖರ್ಚು- ವೆಚ್ಚದ ಮೇಲೆ ನಿಗಾ ಇರಲಿ. ಇಲ್ಲದಿದ್ದಲ್ಲಿ ಇಡೀ ಅವಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯುದ್ದಕ್ಕೂ ಆರ್ಥಿಕ ವ್ಯವಹಾರಗಳಲ್ಲಿ ಸವಾಲುಗಳು ಎದುರಾಗಲಿವೆ. ಉದ್ಯೋಗ ಸ್ಥಾನದಲ್ಲಿ ಬದಲಾವಣೆಗಾಗಿ ಶ್ರಮ ಹಾಕಲಿದ್ದೀರಿ.

ಮೀನ

ಮೀನ

ವ್ಯಾಪಾರ- ವ್ಯವಹಾರಗಳನ್ನು ನಡೆಸುತ್ತಿರುವವರು ಅದರ ಏಳ್ಗೆಗಾಗಿ ಶ್ರಮ ಹಾಕುತ್ತೀರಿ. ಹಲವು ಅವಕಾಶಗಳು ನಿಮಗೆ ದೊರೆಯಲಿವೆ. ಮಾಧ್ಯಮ- ಸಂವಹನ ಕ್ಷೇತ್ರದಲ್ಲಿ ಇರುವವರಿಗೆ ಹಲವು ಪ್ರಾಜೆಕ್ಟ್ ಗಳು ಬರಲಿವೆ. ಕಿರು ಪ್ರಯಾಣ, ಪ್ರವಾಸಗಳನ್ನು ಕೈಗೊಳ್ಳುವ ಯೋಗಗಳಿವೆ. ಕೆಲವು ಸಂಕೀರ್ಣವಾದ ಯೋಜನೆಗಳನ್ನು ಬಹಳ ಎಚ್ಚರಿಕೆಯಿಂದ ಮಾಡಿ, ಮುಗಿಸಿ. ಉದ್ಯೋಗದಲ್ಲಿ ಗಂಭೀರವಾದ ಚರ್ಚೆಗಳನ್ನು ಮಾಡುವಾಗ ಅನವಶ್ಯಕ ಮಾತುಗಳನ್ನು ಆಡಬೇಡಿ. ಹಾಗೆ ಮಾಡುವುದರಿಂದ ಹೆಚ್ಚು ಕೇಳಿಸಿಕೊಳ್ಳುತ್ತೀರಿ, ಕಡಿಮೆ ಮಾತನಾಡುತ್ತೀರಿ. ಮಾತಿನ ಮೇಲೆ ಹೆಚ್ಚು ನಿಗಾ ವಹಿಸಬೇಕಾದ ಅವಧಿ ಇದು. ಶಿಕ್ಷಕರು, ಕೌನ್ಸೆಲರ್ ಗಳು, ಮಾಧ್ಯಮದವರು, ಬರಹಗಾರರು ಮತ್ತು ಸೇಲ್ಸ್- ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ. ಇದರಿಂದ ಗೊಂದಲಗಳು ಸೃಷ್ಟಿ ಆಗುತ್ತವೆ. ಸಂಬಂಧದಲ್ಲಿ ಅನುಮಾನ, ಮನಸ್ತಾಪಗಳು ಕಾಣಿಸಿಕೊಳ್ಳಲಿದೆ. ನೀವು ಹೇಳಿದಂತೆಯೇ ನಡೆದುಕೊಳ್ಳಬೇಕು ಎಂದು ಸಂಗಾತಿಯನ್ನು ಒತ್ತಾಯಿಸಬೇಡಿ. ಅವರ ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬಿಡಿ. ಯಾವುದೇ ಹೊಸ ಬಿಜಿನೆಸ್ ಶುರು ಮಾಡುವಂತಿದ್ದರೂ ಒಂದಕ್ಕೆ ಸಾವಿರ ಸಲ ಪರೀಕ್ಷೆ ಮಾಡಿ, ಮುಂದುವರಿಯಿರಿ. ಹೊಸದಾಗಿ ವ್ಯವಹಾರ ಶುರು ಮಾಡುವ ಬದಲಿಗೆ ಈಗಾಗಲೇ ಇರುವುದರ ಕಡೆಗೆ ನಿಮ್ಮ ಗಮನ ಇರಲಿ.

English summary
The Rahu is transiting to Taurus and the Ketu is transiting to Scorpio on September 22, 2020 at 8.20 AM. Check out the effects and predictions for all 12 zodiac signs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X